‘ಉರಿಯ ಪೇಟೆಯಲಿ ಪತಂಗ ಮಾರಾಟ’ ಕವನ ಸಂಕಲನದ ಮೂಲಕ ಕನ್ನಡ ಕಾವ್ಯಲೋಕದಲ್ಲಿ ಗುರುತಿಸಿಕೊಂಡ ಕವಿ ರಾಮಕೃಷ್ಣ ಸುಗತ. ಅವರ ‘ಕರ್ಮ ಸುಮ್ಮನೆ ಬಿಡಲ್ಲ’ ಕತೆ ನಿಮ್ಮ ಓದಿಗಾಗಿ
ಎಷ್ಟೋ ಹೊತ್ತಿನಿಂದ ಅವರು ಹಾಗೆಯೇ ಮೌನವಾಗಿ ಜಲಾಶಯದ ಮುಂದೆ ಕುಳಿತಿದ್ದರು. ಬಿಡುಗಡೆಗಾಗಿ ದಡಕ್ಕೆ ಬಡಿಯುತ್ತಿದ್ದಾಗಲೂ ಅಲೆಗಳು ಶಾಂತವಾಗಿಯೇ ಇದ್ದವು. ಅವು ಶಾಂತವಾಗಿಯೇ ಇರುತ್ತವೆ. ಮನುಷ್ಯನೇ ಅವುಗಳ ಸರಹದ್ದಿನಲ್ಲಿ ಸುಳಿದಾಡಿ ಸುನಾಮಿಯೋ ಭೂಕಂಪವೋ ಆದಾಗ ದೇವರಿಗೆ ಮೊರೆಯಿಡುತ್ತಾ ನಿಂತುಬಿಡುತ್ತಾನೆ. ಬಹುಶಃ ಪ್ರಕೃತಿಯೂ ತನ್ನ ಮೇಲಿನ ದಾಳಿಗೆ ದೇವರಿಗೆ ಮೊರೆಯಿಟ್ಟೇ ಈ ಪ್ರತಿದಾಳಿಯನ್ನು ನಡೆಸಿರಬಹುದೆಂಬುದನ್ನು ನಾವು ದೇವರನ್ನು ನಂಬುವುದಾದರೆ ಅರಗಿಸಿಕೊಳ್ಳಬೇಕಾಗುತ್ತದೆ.
ಹೌದಲ್ಲವೇ? ಕರ್ಮ ಸುಮ್ಮನೆ ಬಿಡಲಾರದು ಅನ್ನುವುದು ಎಷ್ಟು ಸತ್ಯವಲ್ಲವೇ ಎಂದು ಅನ್ನಿಸಿಬಿಟ್ಟಿತು ಪಳೆಯಯ್ಯರಿಗೆ. ಆದರೆ ಅದು ಯಾರ ಕರ್ಮ? ತಪ್ಪು ಮಾಡಿದವನ ಹೆಸರು ಮನುಷ್ಯ ಆಗಿರಬಹುದು, ಆದರೆ ಶಿಕ್ಷೆ ಎಲ್ಲಾ ಮನುಷ್ಯರಿಗೆ ತಲುಪಬೇಕೆನ್ನುವುದು ಯಾವ ಸಿದ್ದಾಂತ? ಸುನಾಮಿಗೆ ಭೂಕಂಪಕ್ಕೆ ಸತ್ತವರೆಲ್ಲರೂ ತಪ್ಪಿತಸ್ಥರೇನು? ಭೂಮಿ ಅಗೆಸಿದವರ ಕಾಡು ಕಡಿಸಿದವರ ಮಹಡಿಗಳಲ್ಲಿ ಇರುಳ ದೀಪಗಳು ಅದೆಷ್ಟು ಚಂದವಾಗಿ ಮಿನುಗುತ್ತಿವೆ. ಕಾನೂನಿನನ್ವಯವೇ ದುಡ್ಡು ಕದಿಯುವ ರಾಜಕಾರಣಿಗಳೂ ಅಧಿಕಾರಿಗಳೂ, ಮೋಸಕ್ಕೆ ವ್ಯಾಪಾರದ ಮುಖವಾಡ ಹಾಕುವ ಬಂಡವಾಳಗಾರರೂ, ಮನುಷ್ಯನನ್ನೂ ಮೂಢನನ್ನಾಗಿಯೇ ಉಳಿಸಲು ಪಣತೊಟ್ಟ ಧರ್ಮ ಬೀರುಗಳೂ ಇವರೆಲ್ಲರೂ ಎಲ್ಲರಿಗಿಂತಲೂ ಹೆಚ್ಚಾಗಿಯೇ ಬದುಕುತ್ತಾರೆ. ಸಾವಿನಲ್ಲೂ ಎಲ್ಲರಿಗಿಂತ ಹೆಚ್ಚಿನ ಕಷ್ಟವನ್ನೇನೂ ಪಡುವುದಿಲ್ಲ. ಇವರೆಲ್ಲರನ್ನೂ ಕರ್ಮ ಸುಮ್ಮನೆ ಬಿಟ್ಟಿದಾದರೂ ಯಾಕೆ?
ಕರ್ಮ ಕೆಲವರನ್ನು ಮಾತ್ರವೇ ಆಯ್ಕೆಮಾಡಿಕೊಳ್ಳುತ್ತದೆಯೇನು? ನನ್ನನ್ನು ಆಯ್ಕೆಮಾಡಿಕೊಂಡಂತೆ. ಆದರೆ ತಾನು ಮಾಡಿದ್ದೇ ಈವಾಗಿನೆಲ್ಲವಕ್ಕೂ ಹೇಗೆ ಕಾರಣ ಎಂಬುದು ಪಳೆಯಯ್ಯರಿಗೆ ಅರಗದ ವಿಷಯವಾಗಿತ್ತು. ‘ಕರ್ಮ ಸುಮ್ಮನೆ ಬಿಡಲ್ಲ’ ಎಂದು ನನಗೆ ಅಂದನಲ್ಲ ಅವನನ್ನೇ ಕೇಳಿಬಿಡೋಣವೇ ಅನ್ನಿಸತು. ನಾನು ನಿರಪರಾಧಿಯಾಗಿದ್ದಲ್ಲಿ ಸಾಕ್ಷ್ಯವಿಲ್ಲದೇ ನನ್ನನ್ನು ನಿಂದಿಸಿದ ಅವನನ್ನೂ ಕರ್ಮ ಸುಮ್ಮನೆ ಬಿಡಬಾರದು. ಆಗ ಒಪ್ಪಿಕೊಳ್ಳುತ್ತೇನೆ ಕರ್ಮವನ್ನು ಎಂದು ಅಂದುಕೊಂಡರೂ ಅಷ್ಟು ಸುಲಭವಾಗಿ ಅವರಿಗೆ ಸಮಾಧಾನ ಸಿಗುವಂತದ್ದಾಗಿರಲಿಲ್ಲ. ಅಲೆಗಳು ಶಾಂತವಾಗಿಯೇ ಇದ್ದವು.
ಊರ ಹೆಸರು ನೆನಪಿಸಿಕೊಳ್ಳಲು ಯತ್ನಿಸಿದರೂ ತಕ್ಷಣಕ್ಕೆ ಹೊಳೆಯಲಿಲ್ಲ. ಕಂಪ್ಲಿಯವರೆಗೂ ನೆನಪಿದೆ. ಅದರ ಮುಂದಕ್ಕೆ ಕೂಡಲೇ ನೆನಪಾಗುವಷ್ಡು ದೊಡ್ಡ ಊರೇನೂ ಆಗಿರಲಿಲ್ಲ ಅದು. ಹೋಸಪೇಟೆಯಿಂದ ಕಂಪ್ಲಿಯವರೆಗೂ ಸೀದಾ ಬಸ್ಸು ಇದ್ದುದರಿಂದ ಅಲ್ಲಿಯವರೆಗೂ ಪ್ರಯಾಣಕ್ಕೆ ತೊಂದರೆಯಿರಲಿಲ್ಲ. ಅಲ್ಲಿಯೇ ಗಂಡಿನ ಕಡೆಯವರೂ ಕೂಡ ಬಂದು ಸೇರಿದ್ದರು. ಅಲ್ಲಿಂದ ಎಲ್ಲರೂ ಬೇರೆ ಬಸ್ಸು ಹಿಡಿದು ಆ ಊರಿಗೆ ಹೋಗಬೇಕಾಗಿತ್ತು. ತುಂಗಭದ್ರೆ ಹೊಳೆಯನ್ನು ದಾಟಿದ್ದು ನೆನಪಿದೆ. ಆದರೆ ಗಂಗಾವತಿಗೆ ಸಾಗುವಾಗಿನ ಒಂದು ಹಳ್ಳಿಯದು. ಹತ್ತಿರ ಹತ್ತಿರ 20 ವರ್ಷಗಳಾದರೂ ಆಗಿರಬೇಕು. ಆಗತಾನೆ ಪಳೆಯಯ್ಯರು ಆ ಕೆಲಸಕ್ಕೆ ಶುರುವಿಟ್ಟುಕೊಂಡಿದ್ದರು. ಗಂಡಿಗೆ ಹೆಣ್ಣನ್ನೂ ; ಹೆಣ್ಣಿಗೆ ಗಂಡನ್ನೂ ಹುಡುಕಿಕೊಡುವ ಕೆಲಸವದು. ಅವರ ಅಪ್ಪನೂ ಸಹ ಅದೇ ಕೆಲಸ ಮಾಡುತ್ತಿದ್ದರಿಂದ, ಅವರ ನಂತರ ಇವರಿಗದು ಮುಂದುವರೆಕೆಯಾಗಿತ್ತು. ತಂದೆಯೊಂದಿಗಿನ ಒಡನಾಟದಲ್ಲಿ ಚಲುವಾಗಿ ಮಾತನಾಡುವ ಲಯದಾಟಿಗಳು ಕರಗತವಾಗಿಬಿಟ್ಟಿದ್ದವು. ಇರಬೇಕಾದ್ದುದನ್ನು ಸ್ವಲ್ಪ ಜಾಸ್ತಿಯೇ ಹಿಗ್ಗಿಸುವಷ್ಟು, ಇರಬಾರದುದನ್ನು ತಗ್ಗಿಸುವ ಮಟ್ಟುಗಳನ್ನು ಕಲಿಯಲೇಬೇಕಾದ್ದರಿಂದ ಅದೂ ದಕ್ಕಿತ್ತು. ತೀರಾ ವಿಪರೀತಗಳನ್ನು ಕುದುರಿಸುವಾಗ ಮನಸ್ಸು ಅಳುಕುತ್ತಿತ್ತಾದರೂ, ವೃತ್ತಿಯ ದೃಷ್ಠಿಯಿಂದ ಮನುಷ್ಯವ್ಯಾಪಾರದ ದೃಷ್ಠಿಯಿಂದ ಅದೂ ಹಿಂದಾಗುತ್ತಿತ್ತು.
ಸುಮ್ಮನೆ ಮನಸ್ಸನ್ನು ಗೊಂದಲಗೊಳಿಸಿಕೊಳ್ಳುವುದಕ್ಕಿಂತ, ಖಾತರಿ ಮಾಡಿಕೊಳ್ಳುವುದು ಉತ್ತಮವೆಂದು ಆ ಊರಿಗೆ ಮತ್ತೆ ಹೋಗಿಬಂದುದೂ ಆಗಿತ್ತು. ಅಂದು ಬಸ್ಸು ನೇರವಾಗಿ ಗಂಗಾವತಿಯ ಹಾದಿಯದೇ ಆಗಿದ್ದರಿಂದ ಕಂಪ್ಲಿಯಲ್ಲಿ ಇಳಿಯುವ ಪ್ರಮೇಯವಿದ್ದಿಲ್ಲ. ಅಷ್ಟು ವರ್ಷಗಳ ನಂತರ ಹಳ್ಳಿಯಲ್ಲಿ ಏನೇನೂ ಬದಲಾವಣೆಗಳು ಆಗಿರಬೇಡ. ತೀರಾ ಭಿನ್ನ ಭಿನ್ನ ದಾರಿಗಳಲ್ಲಿ ಬದುಕು ಎತ್ತೆತ್ತಲೋ ಸಾಗಿರಲೂಬಹುದು. ಆ ಊರಿಗೆ ಬಸ್ಟಾಂಡು ಎಂದೇನೂ ಇದ್ದಿರಲಿಲ್ಲವಾದ್ದರಿಂದ ಪಳೆಯಯ್ಯರೇ ಕೂಗುಹಾಕಿ ನಿಲ್ಲಿಸಿ ಬಸ್ಸಿಂದ ಇಳಿದರು. ಇಷ್ಟು ದಿನದ ವೃತ್ತಿ ಬದುಕಿನಲ್ಲಿ ಕೊಂಚ ಪರಿಚಿತವಾದ ಊರೇ ಆಗಿದ್ದರಿಂದ, ಅಂದು ಗಂಡಿನೊಂದಿಗೆ ಸಾಗಿದ್ದ ಓಣಿಯಲ್ಲಿಯೇ ಸಾಗಿ ಮನೆಯೊಂದರ ಮುಂದೆ ನಿಂತರು. ಅವರಿಂದ ಅನ್ನಿಸಿಕೊಳ್ಳಬಹುದಾದುದೆಲ್ಲವಕ್ಕೂ ಸಿದ್ಧರಾಗಿಯೇ ಅಲ್ಲಿ ನಿಂತಿದ್ದರು. ವಯಸ್ಸಾದ ವ್ಯಕ್ತಿಯೊಬ್ಬರಿಂದ ಬಾಗಿಲು ತೆರೆಯಲ್ಪಟ್ಟಿತು. ಇವರಿಗೆ ಗುರುತು ಸಿಕ್ಕಿತು. ‘ಕರ್ಮ ನಿನ್ನ ಸುಮ್ನೆ ಬುಡಕಲ್ಲ’ ಎಂದು ಅಂದಿದ್ದ ವ್ಯಕ್ತಿಯೇ ಈತ; ಹೆಣ್ಣಿನ ತಂದೆ. ಪಳೆಯಯ್ಯ ಅಂದುಕೊಂಡಂತೆ ಆತನು ಯಾವುದೇ ಸಿಟ್ಟನ್ನೂ ತೋರಲಿಲ್ಲ. ಇವರು ಆಕೆಯ ಬಗ್ಗೆ ಕೇಳಲಾಗಿ, ಆತನೆಂದದ್ದು ಇಷ್ಟೇ “ಇಲ್ಲಿ ನಾನು ಮಗ ಸೊಸೆ ಅಸ್ಟೇ ಇರಾದು, ಆಕೆ ಊರ್ ಕೊನ್ಯಾಗ ಗುಡುಸುಲಾಗದಾಳ”. ಮನೆಯಲ್ಲಿಯೇ ಇಟ್ಟುಕೊಳ್ಳಲಿಕ್ಕೆ ತಂದೆ ಒಪ್ಪಿರಲಿಲ್ಲವೋ? ಇಲ್ಲವೇ ಹೆಂಡತಿ ಬಂದ ನಂತರ ಅಣ್ಣ ಒಪ್ಪಿರಲಿಲ್ಲವೋ? ಅಥವಾ ಆಕೆಯೇ ಒಂಟಿಯಾಗಿ ಉಳಿಯಲಿಕ್ಕೆ ತೀರ್ಮಾನಿಸಿದ್ದಳೋ? ಆದರೆ ಸಧ್ಯಕ್ಕಂತೂ ಆಕೆ ಜೀವಂತವಿದ್ದಾಳೆ ಮತ್ತು ಇದೇ ಊರಿನಲ್ಲಿ ಇದ್ದಾಳೆ ಮತ್ತು ಕೆಲವೇ ಕ್ಷಣಗಳಲ್ಲಿ ತಾವು ಆಕೆಯನ್ನು ಭೇಟಿಯಾಗಲಿದ್ದೇನೆ ಎಂಬುದೇ ಪಳೆಯಯ್ಯರಿಗೆ ನೆಮ್ಮದಿಯಾಗಿತ್ತು.
ಒಬ್ಬರು; ತೀರಾ ಎಂದಾದರೆ ಇಬ್ಬರು ವಾಸಿಸಬಹುದಾದ ಗುಡಿಸಲೊಂದರ ಬಳಿಯಲ್ಲಿ ಪಳೆಯಯ್ಯರು ನಿಂತಿದ್ದರು. ಹೆಸರು ನೆನಪಿರಲಿಲ್ಲವಾದ್ದರಿಂದ ‘ಮನ್ಯಾಗ್ ಯಾರದಿರಿ’ ಎಂದು ಕೂಗಿದರು. ಆಕೆಯ ಹೆಸರು ಶಾರದೆ. ಮಧ್ಯವಯಸ್ಸಿನ ಆಕೆ ಹೊರಬಂದಳು. ಆಗ 20 ವರ್ಷ ಇದ್ದಿರಬಹುದಾದರೆ ಈಗ 40. ಆಕೆಗೂ ಪಳೆಯಯ್ಯನ ಗುರುತು ಸಿಕ್ಕಿತು. ಹೀಗೆ ತಾನು ಒಂಟಿಯಾಗಿ ಗುಡಿಸಲಿನಲ್ಲಿ ಇರುವುದಕ್ಕೆ ಈತನೂ ಕಾರಣವಾಗಿರುವಾಗ ನೆನಪು ಒಡನೆಯೇ ನೆನಪಿಸಿತು. ಮರೆವು ಅಷ್ಟು ಸುಲಭವಾಗಿ ಯಾರಿಗೂ ದಕ್ಕುವುದಿಲ್ಲವಲ್ಲ.
ಆಕೆಯಲ್ಲೂ ಸಿಟ್ಟು ಕಾಣಲಿಲ್ಲ. ಹೊರಗಡೆ ಮಾತ್ರ ಕಾಣಿಸಲಿಲ್ಲವೆನೋ? ಬಹುಶಃ ಆಕೆ ಬದುಕನ್ನು ಒಪ್ಪಿಕೊಂಡಾಗಿತ್ತು; ಬದುಕು ಆಕೆಯನ್ನು ಅಪ್ಪಿಕೊಳ್ಳದಿದ್ದಾಗಲೂ. ಪಳೆಯಯ್ಯರು ಬಂದಿರುವುದರಲ್ಲಿ ಆಕೆಗೆ ಕುತೂಹಲವೂ ಇರಲಿಲ್ಲ. ಆಕೆಯ ಕಳೆದ ನಿನ್ನೆಗಳಿಗೆ ಹೋಲಿಸಿಕೊಂಡಲ್ಲಿ, ಅದಕ್ಕಿಂತಲೂ ಹೆಚ್ಚಿಗೆ ಘಟಿಸಬಹುದಾದದ್ದು ಯಾವುದೂ ಇರಲಿಲ್ಲವೇನೋ. ಪಳೆಯಯ್ಯರು ತಿಳಿದುಕೊಳ್ಳಲು ಬಯಸಿದ್ದು ಇಷ್ಟೇ; ಮದುವೆಯ ನಂತರ ಆಕೆಯ ಜೀವನದಲ್ಲಿ ಏನೇನಾಯಿತು? ಅವರಿಗೆ ಇದು ಮೊದಲ ಸಲವಿರಬೇಕು; ‘ತಾಳಿ’ಯಾದ ನಂತರ ಕಟ್ಟಿದವರೂ ಕಟ್ಟಿಸಿಕೊಂಡವರೂ ಏನಾದರೆಂದು ತಾವೇ ಕೇಳಿ ತಿಳಿಯುತ್ತಿರುವುದು.
ಗಂಡು ಮೊದಲಿಗೆ ಮದುವೆಯನ್ನು ಒಪ್ಪಿರಲಿಲ್ಲವಂತೆ. ತಾನು ಪೂರ್ತಿಯಾಗಿ ಗಂಡಸಲ್ಲವೆಂಬುದು ಆತನಿಗೆ ಗೊತ್ತಿತ್ತು. ಹೆಣ್ಣಿನ ಲಕ್ಷಣಗಳೂ ಲಯಗಳೂ ಅದಾಗಲೇ ಅವನಲ್ಲಿ ಶುರುವಾಗಿದ್ದವು. ಮೊದಮೊದಲು ಇತರರು ಅವುಗಳನ್ನು ಕಾಣದಂತೆ ಇರಿಸಿದನಾದರೂ, ಆ ಭಾವಗಳು ಬಯಕೆಯ ಸ್ವರೂಪ ಪಡೆಯತೊಡಗಿದಾಗ ಬಯಲಾಗದೇ ಬೇರೆ ವಿಧಿಯಿರಲಿಲ್ಲ. ಇದರಿಂದ ಬೆದರಿದ ಆತನ ತಂದೆತಾಯಿಗಳು, ಮದುವೆ ಮಾಡಿದರೆ ಸರಿಹೋಗುತ್ತಾನೆಂದು ಯೋಚಿಸಿದರು ಮತ್ತು ಅವನಿಗೆ ಇಚ್ಚೆಯಿಲ್ಲದ್ದಿದ್ಯಾಗೂ ಒಪ್ಪಿಸಿದರು. ಪಳೆಯಯ್ಯನೇ ಸಂಬಂಧವನ್ನು ಕುದುರಿಸಿ ಮದುವೆಯನ್ನು ಮಾಡಿಸಿದ್ದು. ಹುಡುಗನ ಬಗ್ಗೆ ಊರಲ್ಲಿ ಹಾಗೆ ಸುದ್ದಿಗಳು ಇರುವುದು ಪಳೆಯಯ್ಯರಿಗೂ ತಿಳಿದಿತ್ತು. ಆದರೆ ಅವನ ಮನೆಯವರು ಇಲ್ಲವೆಂದು ವಾದಿಸಿದರು. ಪಳೆಯಯ್ಯನೂ ಆ ಸುದ್ದಿಗಳನ್ನು ಅಷ್ಟು ಗಂಭೀರವಾಗಿಯೇನೂ ತೆಗೆದುಕೊಂಡಿರಲಿಲ್ಲ. ಮದುವೆಯಾಯಿತಷ್ಟೇ. ಆ ನಂತರ ಅವರು ಅಂದುಕೊಂಡಿದ್ದ ಮದುವೆಯ ನಂತರ ಹುಡುಗನು ಸರಿಯಾಗಬಹುದೆಂಬುದು ಆಗಲಿಲ್ಲ. ದಿನಕಳೆದಂತೆ ಆ ಕನ್ಯೆಗೂ ಆಕೆಯ ತವರಿಗೂ ವಿಷಯ ಅರಿವಾಯಿತು. ಆದರೆ ಏನೂ ಮಾಡುವಂತಿರಲಿಲ್ಲ. ಮದುವೆಯಾಗಿತ್ತು; ಮೂರ್ನಾಲ್ಕು ತಿಂಗಳೂ ಕಳೆದಾಗಿತ್ತು. ಹೆಣ್ಣಿನ ಕಡೆಯವರು ಪಂಚಾಯ್ತಿ ಮಾಡಿದರು. ಗಂಡಿನವರು ತಮ್ಮ ತಪ್ಪನ್ನು ಒಪ್ಪಿಕೊಂಡು, ಪಂಚಾಯಿತಿ ನಿರ್ಣಯದಂತೆ ಆಕೆಗೆ ಒಂದಷ್ಟು ಹಣವನ್ನು ನೀಡಿ ತವರಿಗೆ ಕಳಿಸಿದರು. ಆಕೆ ಈಗಲೂ ಕನ್ಯೆಯಿದ್ದಾಗಲೂ, ಎರಡನೆಯ ಮದುವೆಗೆಂದೇ ಸಿದ್ದತೆಗಳು ಆಗಬೇಕಿತ್ತು. ಮನೆಯವರು ಗಂಡು ಹುಡುಕುತ್ತಿರುವಾಗಲೇ ಕೆಲವು ದಿನಗಳ ಬಳಿಕ ಆಕೆ ಕಾಣೆಯಾದಳು. ಕೆಲವು ದಿನಗಳು ಹುಡುಕಿ ಇವರೂ ಸುಮ್ಮನಾದರು.
ಮತ್ತೆ ಕೆಲವು ದಿನಗಳ ನಂತರ ಆಕೆಯು ಆದವಾನಿ(ಆದೋನಿ)ಯಲ್ಲಿರುವುದಾಗಿಯೂ, ಅಲ್ಲಿಯೇ ಒಬ್ಬಾತನನ್ನು ಮದುವೆಯಾಗಿರುವುದಾಗಿಯೂ ಸುದ್ದಿ ಹರಡಿತು. ಆತ ಯಾರು? ಪರಿಚಯವಾದದ್ದು ಹೇಗೆ? ಮದುವೆಯಾದದ್ದು ಹೇಗೆ? ಯಾವೊಂದನ್ನೂ ಯಾರಲ್ಲಿಯೂ ಆಕೆ ಹೆಳಲಿಲ್ಲ. ಎಲ್ಲರಿಗೂ ತಿಳಿದದ್ದು ಇಷ್ಟೇ; ಆಕೆ ಆತನಿಗೆ ಎರಡನೆಯ ಹೆಂಡತಿಯಾಗಿದ್ದಳು. ಬಹುಶಃ ತಿಳಿಯದುದು ಆಕೆ ಬದುಕನ್ನು ಒಪ್ಪಿಕೊಂಡಿದ್ದಳು. ಹಲವು ವರ್ಷಗಳ ಸಂಸಾರದ ನಂತರ ಮೂರ್ನಾಲ್ಕು ಮಕ್ಕಳೂ ಆಗಿದ್ದವು. ಈಗ್ಗೆ ಕೆಲವು ದಿನಗಳ ಕೆಳಗಷ್ಟೇ ಆಕೆ ಊರಿಗೆ ಮರಳಿ ಬಂದಿದ್ದಳು. ಆಕೆಯ ಗಂಡನಿಗೇನಾದರೂ ಆಯಿತೋ ಅಥವಾ ಯಾರಾದರೂ ಅಲ್ಲಿಂದ ಹೊರಹಾಕಿದರೋ ಯಾರಿಗೂ ಗೊತ್ತಾಗಲಿಲ್ಲ. ಈಕೆಯೂ ಹೆಳಲಿಲ್ಲ. ಹೀಗೆ ಬಂದವಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಮನೆಯವರಿಗೂ ಕಷ್ಟವಾಗಿರಬೇಕು. ಈಕೆಗೂ ಅದು ಇಷ್ಟವಿರಲಿಲ್ಲ. ಒಂಟಿಯಾಗಿಯೇ ಇರಲು ತಿರ್ಮಾನಿಸಿ ಆಸರೆಗೆ ಗುಡಿಸಲೊಂದನ್ನು ಕಟ್ಟಿಕೊಂಡಿದ್ದಳು. ಮತ್ತು ಬದುಕನ್ನು ಒಪ್ಪಿಕೊಂಡಿದ್ದಳು.
ಒಮ್ಮೊಮ್ಮೆ ಬದುಕು ಎಷ್ಟು ಕ್ರೂರವಾಗಿ ಬೇಟೆಯಾಡುತ್ತದೆಂದರೆ, ಎಂದೋ ಕಳೆದ ಖುಷಿಯ ದಿನಗಳನ್ನು ನೆನಪು ಮಾಡಿಕೊಳ್ಳಲೂ ಅವಕಾಶ ನೀಡುವುದಿಲ್ಲ. ಒಲ್ಲದ ಭಾವನೆಗಳಿಂದ ಒದೆಸಿಕೊಂಡಾದರೂ ಸರಿ, ನೆನಪುಗಳು ಎದೆಯನ್ನು ಮುತ್ತಿ ಶೋಕಗೀತೆಯೊಂದಕ್ಕೆ ಕಿಡಿಯನ್ನು ಹೊತ್ತಿಸಿಬಿಡುತ್ತವೆ. ಸಾವು ಸನಿಹವಾದಗಲಾದರೂ ಒಂದು ಆಪ್ತಜೀವ ಬೇಕಲ್ಲವೇ? ಅದೂ ದೊರೆಯದಿದ್ದಾಗ ನೆಮ್ಮದಿಯ ಶಾಶ್ವತ ಆಮಂತ್ರಣವನ್ನೂ ಗೋರಿಗಳು ಖಚಿತವಾಗಿ ನೀಡಬಲ್ಲವು. ಅದಕ್ಕೆ ಬದುಕನ್ನು ಒಪ್ಪಿಕೊಳ್ಳಬೇಕಷ್ಟೇ.
ಅಷ್ಟೇ. ಪಳೆಯಯ್ಯರು ಅಲ್ಲಿಂದ ಹೊರಟರು. ಬಸ್ಸಿನಿಂದ ಇಳಿಯುವಾಗ ಇದ್ದಷ್ಟು ಸೌಕರ್ಯ, ಹಿಡಿಯುವಾಗ ಇರುವುದಿಲ್ಲ. ಅದು ಸಣ್ಣ ಊರಾದ್ದರಿಂದ ಅದಕ್ಕಾಗಿಯೇ ಪ್ರತ್ಯೇಕ ಬಸ್ಸು ವ್ಯವಸ್ಥೆ ಇರಲಿಲ್ಲ. ಹೈವೇ ರಸ್ತೆಗೆ ಹೊಂದಿಕೊಂಡುದುದು ತನ್ನದೇ ಬಸ್ ಇಲ್ಲದಿದ್ದುದಕ್ಕೆ ಕಾರಣವಿರಬೇಕು. ಎಕ್ಸ್ ಪ್ರೆಸ್ ಅನ್ನಿಸಿಕೊಂಡ ಬಸ್ಸುಗಳು ಅಲ್ಲಿ ನಿಲ್ಲಿಸುತ್ತಿದ್ದುದು ಕಮ್ಮಿ. ಯಾರಾದರೂ ಇಳಿಯುವವರಿದ್ದರಷ್ಟೇ ನಿಲುಗಡೆ. ಇಲ್ಲವೇ ಅಲ್ಲಿಂದ ಹತ್ತುವುದಕ್ಕೆ ಲೋಕಲ್ ಬಸ್ಸುಗಳನ್ನೇ ಕಾಯಬೇಕಿತ್ತು. ಪಳೆಯಯ್ಯರ ಮೈ ಸ್ವಲ್ಪ ದಣಿದಂತಿತ್ತು. ‘ಕರ್ಮ ಸುಮ್ಮನೆ ಬಿಡಲ್ಲ’ ಎನ್ನುವ ಮಾತು ಮತ್ತೆ ಮತ್ತೆ ನೆನಪಾಗುತ್ತಿತ್ತು. ಆದರೆ ಶಾರದೆಗೆ ಅದು ಯಾವ ಕಾರಣಕ್ಕಾಗಿ? ಹುಟ್ಟಿದ್ದಳು; ಹೆಣ್ಣಾಗಿ ಹುಟ್ಟಿದ್ದರಿಂದ ಬೇರೊಂದು ಮನೆಗೆ ಹೋಗಬೇಕಾಗಿತ್ತು; ಹೋದಳು; ಆ ಜಾಗದಲ್ಲಿ ರುಣವಿದ್ದಿಲ್ಲ: ಬಂದಳು. ಯಾವ ಕಾರಣಕ್ಕಾಗಿ? ಎಷ್ಟೋ ಮಕ್ಕಳು ಹುಟ್ಟಿದ ಕೂಡಲೇ ಸಾಯುತ್ತವೆ. ಕೆಲವು ಬೆಳೆಯುವ ಮುನ್ನವೇ ಬದುಕ ಕಂಡಿರುತ್ತವೆ. ಹಾಗೆ ಬದುಕಿದವು ಹೇಗೋ ಸಾಯುವವರೆಗೂ ಏನಾನ್ನಾದರೂ ಅನುಭವಿಸಿಕೊಂಡಿರುತ್ತವೆ. ಯಾವ ಕಾರಣಕ್ಕೆ? ಇದಕ್ಕೆಲ್ಲಾ ಕರ್ಮದಲ್ಲಿ ಹೇಗೆ ಉತ್ತರ ಹುಡುಕಬೇಕು? ತಂದೆ ತಾಯಿಯ ಕಾರಣವೇ ಈ ಪರಿಣಾಮಗಳ ಮೂಲ ಎಂದಾದರೆ, ಈ ನ್ಯಾಯವ್ಯವಸ್ಥೆಯೆಲ್ಲೇನೋ ದೋಷವಿದೆ. ಹಾಗೆ ಒಬ್ಬರ ತಪ್ಪನ್ನು ಇನ್ನೊಬ್ಬರ ಮೇಲೆ ಹೇರುವುದಾದರೆ ಈ ನಿಯಮದಲ್ಲೇನೋ ಪಕ್ಷಪಾತವಿದೆ. ಅಂದರೆ ಈ ಪಕ್ಷಪಾತ ದೋಷವೇ ಕರ್ಮ ನನ್ನನ್ನು ಆಯ್ಕೆ ಮಾಡಿಕೊಳ್ಳಲು ಕಾರಣವೇ? ಇಲ್ಲವೆ ಕೆಲವು ಹುಡುಕಾಟಗಳಲ್ಲಿ ಪುನರ್ಜನ್ಮದ ಕದ ತಟ್ಟಬೇಕಾಗುತ್ತದೆ. ಅದು ಮತ್ತೊಂದು ಗೋಜಲು. ಅಂತದ್ದಕ್ಕೆ ಸಾಕ್ಷಿಯಾಗಿ ಒಂದಾದರೂ ಇದ್ದಿದ್ದರೆ ನೆಮ್ಮದಿಯ ಸುಳುಹಾದರೂ ಸಿಗುತ್ತಿತ್ತು. ಹೀಗೆ ಈ ಜನ್ಮದ ಪ್ರಶ್ನೆಗಳಿಗೆ ಮತ್ತೊಂದು ಜನ್ಮದಲ್ಲಿ ಉತ್ತರ ಹುಡುಕುವುದಕ್ಕಿಂತ, ಬದುಕನ್ನು ಒಪ್ಪಿಕೊಂಡು ಸಾಗುವುದು ಉತ್ತಮ. ಶಾರದೆಯು ಅದನ್ನೇ ಮಾಡುತ್ತಿದ್ದಿರಬೇಕೆನ್ನಿಸಿತು. ಆಕೆಯ ಮುಖದಲ್ಲಿ ಖುಷಿಯೂ ಕಾಣಲಿಲ್ಲ. ನೋವೂ ಕಾಣಲಿಲ್ಲ.
ಶಾರದೆಯು ಹೇಳಿದ ಇಲ್ಲಿಯವರೆಗಿನ ಕತೆಯ ಹೊರತಾಗಿ ಪಳೆಯಯ್ಯರಿಗೆ ಕೇಳಿದ ಮತ್ತೊಂದು ಕತೆಯೆಂದರೆ; ಆಕೆಯ ತಂದೆಯು ಶಾರದೆಯು ಗರ್ಭದಲ್ಲಿರುವಾಗ ಮತ್ತೊಂದು ಗಂಡಾದರೆ ಹುಲಿಗೆಮ್ಮನಿಗೆ ‘ದೇವರು’ ಮಾಡುವುದಾಗಿ ಹರಕೆ ಹೊತ್ತಿದರಂತೆ. ಆದರೆ ಮಗು ಹೆಣ್ಣಾದ್ದರಿಂದ ಆ ಹರಕೆಯನ್ನು ತೀರಿಸಲಿಲ್ಲವಂತೆ. “ಗಣುಮಗ ಹುಟ್ಟಿಲಲ್ಲ ಹರ್ಕೆ ತೀರ್ಸಾಕ” ಎಂದು ಕೇಳಿದವರಿಗೆ ಹೇಳುತ್ತಿದ್ದನಂತೆ. ಆದ್ದರಿಂದ ಆತನ ಮಗಳಿಗೆ ಈ ಗತಿ ಒದಗಿತೆಂದು ಊರವರು ಮಾತಾಡಿಕೊಳ್ಳುತ್ತಿದ್ದರು. ಇಲ್ಲೂ ಸಹ ಪಳೆಯಯ್ಯರಿಗೆ ‘ತಂದೆಯ ತಪ್ಪಿಗೆ ಮಗಳಿಗೇಕೆ ಶಿಕ್ಷೆ?’ ಎಂಬ ಮತ್ತೊಂದು ಪ್ರಶ್ನೆ ಎದುರಾಯಿತೇ ವಿನಃ ಬೇರೆ ಉಪಯೋಗವಾಗಲಿಲ್ಲ. ದೇವರನ್ನೇ ಮುಳುಗಿಸಿದವರು, ದೇವರನ್ನೇ ಹೊತ್ತೊಯ್ದು ಬಿಸಾಡಿದವರು, ದೇವರನ್ನೇ ಮುಂದಿಟ್ಟುಕೊಂಡು ದುಡ್ಡು ಮಾಡುವವರು ಇವರೆಲ್ಲರೂ ದೇವರಿಗಿಂತಲೂ ಹಸನಾಗಿರುವಾಗ, ಅವರಿಗೆ ಹೋಲಿಸಿದರೆ ಶಾರದೆಯ ತಂದೆಯದು ಕರ್ಮದ ದಾಖಲಾತಿ ಪುಸ್ತಕದಲ್ಲಿ ಪುಟ ಖಾಲಿಯಿದೆಯೆಂದೇ ದಾಖಲಾದ ತಪ್ಪಷ್ಟೆ. ಮತ್ತೊಬ್ಬರ ಬೆನ್ನಿಗೆ ಬಡಿದೇ ಬದುಕುವ ಅದೆಷ್ಟೋ ಜನ ಅದೆಷ್ಟು ಹಾಯಾಗಿರುವರಲ್ಲ. ಅಥವಾ ನೋಡುವವರಿಗೆ ಮಾತ್ರವೇ ಹಾಗೇ ಕಾಣುತ್ತಾರೇನೋ? ಹೀಗೆ ಪ್ರಶ್ನೆಗಳು ಮಾತ್ರವೇ ಹುಟ್ಟುತ್ತಿದ್ದವೇ ಹೊರತು, ಉತ್ತರಗಳು ಮಾತ್ರ ಬ್ರಹ್ಮಚಾರಿಯೊಬ್ಬನಿಗೆ ಮಡದಿಯಾಗಬೇಕಾದವಳ ಒಡಲಿನಲ್ಲಿ ಬೆಚ್ಚಗೆ ಕುಳಿತಿದ್ದವು.
ಎಷ್ಟೋ ಹೊತ್ತಿನಿಂದ ಅವರು ಹಾಗೆಯೇ ಮೌನವಾಗಿ ಕುಳಿತ್ತಿದ್ದರು. ತೆರೆಗಳು ಶಾಂತವಾಗಿಯೇ ಇದ್ದವು. ‘ಕರ್ಮ ಸುಮ್ಮನೆ ಬಿಡುವುದಿಲ್ಲ’ ಎಂಬ ಅವರ ಮಾತು ಸೋಮನಲ್ಲಿ ಆವರ್ತನೆಯನ್ನು ಸೃಷ್ಟಿಸಿತ್ತು. ನಿಜಕ್ಕೂ ತಾನು ಮಾಡಿದ್ದು ದೊಡ್ಡ ಅಪರಾಧ ಎಂಬ ಭಾವನೆಯು ಅದಾಗಲೇ ಅವನಲ್ಲಿ ಆಳವಾಗಿ ಬೇರುಬಿಟ್ಟಿತ್ತು. ಈಗ ತಾನು ಪಶ್ಚಾತ್ತಾಪ ಪಡುತ್ತಿರುವುದೇ ಅದರ ಕರ್ಮಫಲ ಎಂದೆನಿಸಿತು. ತಾನು ಮಾಡಿದ ತಪ್ಪು ಇದಕ್ಕಿಂತಲೂ ತುಸು ಹೆಚ್ಚೇ ಎಂದೂ ಅನ್ನಿಸಿತು. ಪರಿಹಾರದ ದಾರಿಯಿಂದ ತಾನಾಗಲೇ ಬಹುದೂರ ಬಂದಿದ್ದೇನೆ ಎಂದುಕೊಂಡ. ಹಿಂದಿರುಗುವುದಕ್ಕೆ ತಾನು ಸಿದ್ದವಾದರೂ, ತನ್ನ ದೇಹ ಪ್ರಕೃತಿಯು ಅದಕ್ಕೆ ಸಹಕರಿಸುವುದಿಲ್ಲ ಎಂಬುದು ತಿಳಿದಿತ್ತು. ಹೀಗೆ ಎಷ್ಟೋ ಸಲ ಚಿಂತಿಸುತ್ತಾ ಕೂತಿದ್ದೂ ಆಗಿತ್ತು. ಹೀಗೆ ಒಮ್ಮೆ ಯೋಚಿಸುತ್ತಲೇ ಯಶೋದಾಳನ್ನು ಕಾಣುವ ಬಯಕೆ ಉಂಟಾಗಿ ಆಕೆಯ ಮನೆಗೂ ಹೋಗಿಬಂದಿದ್ದ.
ಅಂದು; ಅವರಿಂದ ಅಚಾನಕ್ಕಾಗಿ ಎದುರಾಗಬಹುದಾದ ಬೈಗುಳಗಳಿಗೂ ಪ್ರಶ್ನೆಗಳಿಗೂ ಸೋಮನು ಸಿದ್ಧನಿರಲಿಲ್ಲ. ಆದರೂ ಆಕೆಯ ಮನೆಯ ಹೊಸ್ತಿಲಲ್ಲಿ ನಿಂತಿದ್ದ. ಹೆಸರಿನಿಂದಲೇ ಕೂಗಿದ. ಬಾಗಿಲು ತೆಗೆಯಬಹುದಾದ ಇಪ್ಪತ್ತು ವಯೋಮಾನದ ಹುಡುಗಿ ಅಥವಾ ಐವತ್ತರ ಆಸುಪಾಸಿನ ಗಂಡಸಿನ ಆಕಾರಗಳ ನಿರೀಕ್ಷೆಯಿಂದ ಬಾಗಿಲೆಡೆಗೆ ನೋಡುತ್ತಿದ್ದ. ಹುಡುಗಿ ಅಥವಾ ಹೆಂಗಸು ಎರಡರಲ್ಲಿ ಯಾವುದು ಕರೆದರೂ ಒಪ್ಪಬಹುದಾಗಿದ್ದ ಹೆಣ್ಣೊಬ್ಬಳು ಬಾಗಿಲು ತೆರೆದಳು. ಇವನನ್ನು ಕಂಡೊಡನೆ ಕುತೂಹಲವೂ ಭಯವೂ ತಿರಸ್ಕಾರವೂ ಕೂಡಿಕೊಂಡ ಭಾವನೆ ಅವಳಲ್ಲಿ ಮಿಂಚಿತು. ಏನೂ ಮಾತನಾಡದೆ ಮನೆಯೊಳಕ್ಕೆ ತೆರಳಿದಳು. ಈತನೂ ಹಿಂಬಾಲಿಸಿ ಮನೆಯೊಳಕ್ಕೆ ನಡೆದ. ಸೋಮನನ್ನು ಕಂಡ ಹುಡುಗಿಯ ತಂದೆಯು ಆ ಹೆಣ್ಣುಮಗಳಲ್ಲಿ ಮೂಡಿದ್ದ ಭಾವನೆಗಳನ್ನೇ ಹೋಲುವ, ಜೊತೆಗೆ ಇನ್ನು ಕೆಲವು ಹೊಸತಾದುವೂ ಸೇರಿಕೊಂಡಂತೆ ಕಾಣುತ್ತಿದ್ದರು. ಉದ್ವೇಗವನ್ನು ತಡೆಯಲಾರದೆ “ಮತ್ತೆ ಯದೂಕ್ ಬಂದೆ, ಇಸ್ಟಕೊಂದು ಮಾಡಿರಾದು ಸಾಕಾಗಿಲ್ಲನು ನಿಂಗೆ. ಕರ್ಮ ನಿನ್ ಸುಮ್ನೆ ಬುಡ್ತ್ ಅನ್ಕಂಡಿಯನು” ಎಂದು ಅನ್ನತೊಡಗಿದರು. ಅದನ್ನು ಸುಧಾರಿಸಿಕೊಳ್ಳಲು ಸೋಮನಿಗೆ ಸ್ವಲ್ಪ ಸಮಯ ಬೇಕಾಯಿತು. ತಪ್ಪು ತನ್ನೆಡೆ ಇರುವಾಗ ಇವನ್ನೆಲ್ಲಾ ಸುಧಾರಿಸಿಕೊಳ್ಳಲೇಬೇಕಿತ್ತು.
ಅವರು ಸುಮ್ಮನಾದ ಮೇಲೆ ಇವನು ಮಾತನಾಡಿದ. ತನ್ನಿಂದಲೇ ಆಕೆಗೆ ಈ ಸಮಸ್ಯೆಯಾಗಿರುವುದಾಗಿಯೂ, ಅದನ್ನು ತಾನೇ ಕೈಲಾದಷ್ಟು ಸರಿಮಾಡಬೇಕೆಂದು ಬಂದಿರುವುದಾಗಿ ಹೇಳಿದ. ಆಕೆಯನ್ನು ನಾನೇ ಸಾಕುತ್ತೇನೆ, ಇನ್ನು ಮುಂದೆ ನನ್ನ ಬಳಿಯೇ ಇರಲಿ ಎಂದ. ಆದರೆ ಬರೀ ಅನ್ನ, ಆಸರೆ ಕೊಟ್ಟು ಸಾಕುವುದರಲ್ಲೇನಿದೆ. ಅದನ್ನು ಅವರೇ ತಮ್ಮ ಮಗಳಿಗೆ ಮಾಡಬಲ್ಲರು. ಸಾಕುವುದಕ್ಕೆ ಕೊರತೆ ಇದೆ ಎಂಬ ಕಾರಣಕ್ಕಾಗಿಯೇನೂ ಯಾರೂ ಮದುವೆ ಮಾಡಿ ಕಳಿಸುವುದಿಲ್ಲವಲ್ಲ. ತಕ್ಕಷ್ಟು ಸಿರಿವಂತಿಕೆ ಇತ್ತು. ಅಲ್ಲದೆ ಮಗಳ ಹೊರತಾಗಿ ಬೇರೆ ಯಾರೂ ಅವರಿಗೆ ಇದ್ದಿಲ್ಲ. ಹಾಗೇ ಸುಮ್ಮನೆ ಸಾಕುವುದಾದರೆ, ಸೋಮನಿಗೆ ಹೋಲಿಸಿದರೆ ತಂದೆಯ ಬಳಿಯಿರುವುದೇ ಯಶೋದಾಗೆ ಉತ್ತಮವಿತ್ತು. ಅವರಿಗೂ ಒಬ್ಬರು ಜೊತೆಯಿದ್ದಂತೆ ಆಗುತ್ತಿತ್ತು. ಅಷ್ಟೊತ್ತಿಗಾಗಲೇ ಸ್ವಲ್ಪ ಸಮಾಧಾನ ಹೊಂದಿದ್ದ ಅವರು “ನನ್ ಮಗುಳ್ನ ನಾನೇ ಸಾಕ್ಕೆಂಬ್ತ್ನು” ಎಂದು ಸೋಮನನ್ನು ಅಲ್ಲಿಂದ ಹೋಗಲು ಹೇಳಿದರು.
ಸೋಮನು ತನ್ನ ಹೆಂಡತಿಯ ಮುಖವನ್ನು ನೋಡಿದ. ಏನನ್ನೋ ಮಾತನಾಡುವವಳಂತೆ ಕಂಡಳು. ಆದರೆ ಮಾತನಾಡಲಿಲ್ಲ. ಆಕೆಗೆ ಮಾತನಾಡುವ ಇಷ್ಟ ಇತ್ತು. ಆದರೆ ಮಾತುಗಳಿರಲಿಲ್ಲ. ಯಶೋದಾಳು ಗಂಡನ ಮನೆಯನ್ನು ತೊರೆದು ಬಂದ ದಿನದಿಂದ ಒಂದೊಂದಾಗಿಯೇ ಮಾತುಗಳನ್ನು ಕಳೆದುಕೊಳ್ಳಲು ಶುರು ಮಾಡಿದ್ದಳು. ಅಥವಾ ಅದನ್ನು ಹೀಗೂ ಹೇಳಬಹುದು ‘ಯಶೋದಾಳು ಗಂಡನ ಮನೆಯಿಂದ ಬಂದ ದಿನದಿಂದಲೇ ಆಕೆಯ ಮಾತುಗಳು ಒಂದೊಂದಾಗಿಯೇ ಕಳೆದುಹೋಗತೊಡಗಿದವು ಇಲ್ಲವೇ ಕಳ್ಳತನವಾಗತೊಡಗಿದವು. ಈತ ಬರುವ ಈ ವೇಳೆಗಾಗಲೇ ಆಕೆಯ ಮಾತಿನ ಖಜಾನೆ ಪೂರ್ತಿ ಖಾಲಿಯಾಗಿ ಹೋಗಿತ್ತು. ಆಕೆಯ ಸುತ್ತಲಿನ ಕಣ್ಣುಗಳು, ಬಾಯಿಗಳು ಈ ಖಾಲಿಯಾಗುವಿಕೆಯಲ್ಲಿ ಹೆಚ್ಚಿನ ಪಾಲು ಹೊಂದಿದ್ದವು. ಸ್ವಲ್ಪ ಹೊತ್ತು ಮನೆಯೂ ಮೂಖವಾಗಿತ್ತು. ಮೂವರಲ್ಲಿ ಯಾರೂ ಮಾತಾಡಲಿಲ್ಲ. ಸೋಮನು ಸ್ವಲ್ಪ ಹೊತ್ತು ಕಾದಿದ್ದು ಅಲ್ಲಿಂದ ಹೊರಟುಬಂದಿದ್ದ.
ಸೋಮನು ಮೊದಲು ಮದುವೆಗೆ ಒಪ್ಪಿರಲಿಲ್ಲವಂತೆ. ತಾನು ಪೂರ್ತಿಯಾಗಿ ಗಂಡಸಲ್ಲವೆಂಬುದು ಆತನಿಗೆ ಗೊತ್ತಿತ್ತು. ಹೆಣ್ಣಿನ ಲಕ್ಷಣಗಳೂ ಲಯಗಳೂ ಅದಾಗಲೇ ಅವನಲ್ಲಿ ಶುರುವಾಗಿದ್ದವು. ಆದರೆ ಚೂರು ಕಷ್ಟ ಪಟ್ಟರೆ ಅವು ಹೊರಜಗತ್ತಿಗೆ ಕಾಣದಂತೆ ಇರಿಸಬಲ್ಲವಾಗಿದ್ದವೇ ಹೊರತು, ವಿಸ್ತರಣೆಯ ಇಚ್ಚೆಯನ್ನು ಕಳೆದುಕೊಂಡುವಾಗಿರಲಿಲ್ಲ. ಮನೆಯವರಿಗೆ ಕಾಲಕ್ರಮೇಣವಾದರೂ ಅವು ಗೊತ್ತಾಗದಿರಲು ಸಾಧ್ಯವಿದ್ದಿಲ್ಲ. ಮದುವೆಯಾದರೆ ಸರಿಹೋಗುತ್ತಾನೆಂದು ಮನೆಯವರು ಭಾವಿಸಿದರು. ಸ್ಥಿತಿವಂತರೂ ಆಗಿದ್ದುದರ ಜೊತೆಗೆ ನೋಡಲಿಕ್ಕೆ ಚಂದವುಳ್ಳವನೂ ಆಗಿದ್ದರಿಂದ ಹೆಣ್ಣು ಸಿಗುವುದೇನೂ ಕಷ್ಟವಿರಲಿಲ್ಲ. ಕಷ್ಟವಾಗಲಿಲ್ಲ ಸಹ. ಯಾವ ಸಮಸ್ಯೆಗೂ ಸಮಯವೀಯದಂತೆ ಮದುವೆಯೂ ಆಯಿತು. ಎರಡು ವರ್ಷಗಳ ಚಂದ ಸಂಸಾರದಲ್ಲಿ ಒಮ್ಮೆ ಯಶೋದಾಳು ಗರ್ಭಿಣಿಯಾಗಿ, ಹುಟ್ಟುವ ಮುನ್ನವೇ ಮಗು ಸತ್ತಿತ್ತು. ಕಾಲನಂತರದಲ್ಲಿ ಸೋಮನಿಗೆ ಹೆಂಡತಿಯಲ್ಲಿ ಆಕರ್ಷಣೆಯು ಕಡಿಮೆಯಾಗುತ್ತಾ ಬಂದಿತು. ಹೆಂಗಸುತನವು ಹೊರಗೆ ಇಣುಕುವಷ್ಟು ಹೆಚ್ಚಾಗಲಿಲ್ಲವಾದರೂ ಈತನಿಗೆ ಚಿಂತೆಯು ಹೆಚ್ಚತೊಡಗಿತು. ತನ್ನ ಬಗೆಗಿಂತ ಹೆಂಡತಿಯ ಚಿಂತೆಯೇ ಹೆಚ್ಚು ಕಾಡಿತು. ಅದಾಗಲೇ ಹೆಣ್ಣುಸೋಗಿನವನ ಹೆಂಡತಿಯೆಂದು ಯಶೋದಾಳನ್ನು ಜನರು ಆಡಿಕೊಳ್ಳುವುದನ್ನು ಕಲ್ಪಿಸಿಕೊಳ್ಳತೊಡಗಿದ್ದ. ಯಶೋದಾಳ ಮುಂದಿನ ಜೀವನವು ಚಂದವಿರಲೆಂದು ಆಕೆಯನ್ನು ತಂದೆಯ ಬಳಿ ಬಿಟ್ಟುಬಂದಿದ್ದ. ಯಶೋದಾಳ ತಂದೆ ಹೆಣ್ಣುಗಂಡುಗಳನ್ನು ಜೋಡಿಸುವವನಾದ್ದರಿಂದ, ತನ್ನ ಮಗಳಿಗೆ ಇನ್ನೊಂದು ಗಂಡು ಹುಡುಕಲು ಅವರಿಗೆ ಕಷ್ಟವೇನೂ ಆಗಲಾರದೆಂದು ಎಣಿಸಿದ್ದ. ಹೇಗಾದರೂ ಸರಿ ತನ್ನ ಹೆಂಡತಿಯೂ ನೆಮ್ಮದಿಯಿಂದ ಇರಲೆಂದೇ ಆಕೆಯನ್ನು ತವರಿಗೆ ಬಿಟ್ಟು ಬಂದಿದ್ದ.
ಆದರೆ ಆತನೆಂದುಕೊಂಡಷ್ಟು ಸುಲಭವಿದ್ದಿಲ್ಲ ಒಂದು ಹೆಣ್ಣಿಗೆ ಎರಡನೆಯ ಗಂಡು ಸಿಗುವುದು. ಈ ವಿಷಯದಲ್ಲಿ ಹೆಣ್ಣು ಗಂಡಿನಷ್ಟು ಅವಕಾಶಗಳನ್ನು ಪಡೆದು ಬಂದಿಲ್ಲ. ಸ್ವತಃ ತಂದೆಯ ಬಳಿಯೇ ನೂರಾರು ಹೆಣ್ಣು ಹುಡುಕುವವರ ಪಟ್ಟಿಯಿದ್ದರೂ, ಇನ್ನೂ ಬದುಕಿರುವ ಗಂಡನೊಬ್ಬನ ಹೆಂಡತಿಯನ್ನು ಮದುವೆಯಾಗಲು ಯಾರೂ ಸಿದ್ಧವಿರಲಿಲ್ಲ. ಅವರ ವಿಷಯ ಆಮೇಲೆ ಉಳಿಯಿತು; ಈಕೆಯ ಮನಸ್ಸೇ ಇನ್ನು ಮತ್ತೊಂದು ಮದುವೆಗೆ ಸಿದ್ಧವಿರಲಿಲ್ಲ. ಈಗಂತೂ ಆಕೆಯು ಮಾತುಗಳನ್ನು ಕಳೆದುಕೊಂಡಿರುವಾಗ, ಇಷ್ಟವಿದ್ದುದನ್ನೂ ಇಷ್ಟವಿಲ್ಲದ್ದನ್ನೂ ಏನೆಂದು ಹೇಳುವಲ್ಲಿ ಸೋಲುತ್ತಿದ್ದಳು. ಈ ಸಮಯದಲ್ಲಿಯೇ ಸೋಮನು ಈಕೆಯನ್ನು ಕಾಣಲು ಬಂದದ್ದು ಮತ್ತು ತನ್ನೊಡನೆ ಕರೆದೊಯ್ಯಲು ಬಯಸಿದ್ದು. ಸೋಮನು ಬಂದುಹೋದ ಮೇಲೆ ಪಳೆಯಯ್ಯರ ಮನಸ್ಸು ಇನ್ನೂ ನಿರ್ಧಾರಗಳಿಂದ ವಂಚಿತವಾಗತೊಡಗಿತು. ಮಗಳನ್ನು ಆತನೊಂದಿಗೆ ಕಳಿಸುವುದಕ್ಕಿಂತ, ಆತನನ್ನೇ ಇಲ್ಲಿಗೆ ತಂದು ಉಳಿಸಿಕೊಳ್ಳುವ ಯೋಚನೆಗಳು ಬಂದು ಹೋಗಲಾರಂಭಿಸಿದವು. ಅಲ್ಲದೆ ತಮಗೆ ತಿಳಿದಿರುವ ಯಾರಾದರೂ ವೈದ್ಯರಿಂದ ಇದಕ್ಕೇನಾದರೂ ಪರಿಹಾರವಿದೆಯೋ ಎಂದು ತಿಳಿಯಲೂ ಯೋಜಸಿದರು. ಯಾವುದಕ್ಕೂ ಒಮ್ಮೆ ಸೋಮನನ್ನು ಕಾಣುವುದೆಂದು ನಿರ್ಧರಿಸಿದರು.
ಅಲೆಗಳು ಶಾಂತವಾಗಿಯೇ ಇದ್ದವು. ಮತ್ತು ಮೌನವಾಗಿದ್ದವು. ಈ ಇಬ್ಬರಂತೆ. ತಮ್ಮನ್ನು ಕೂಡಿ ಹಾಕಿದ ಸಿಟ್ಟಿಗೋ ಎಂಬಂತೆ ಬಿರುಸಿನಿಂದ ಬಡಿಯುತ್ತಿದ್ದ ತೋಗಭದ್ರೆಯ ಅಲೆಗಳ ದನಿ ಹೊರತಾಗಿ ಅವರು ಬಂದಾಗಿನಿಂದಲೂ ಬೇರೇನೂ ಕೇಳಿಸಿಕೊಂಡಿರಲಿಲ್ಲ; ಕರ್ಮ ಸುಮ್ಮನೆ ಬಿಡಲ್ಲ ಎಂಬ ಒಂದು ಮಾತಿನ ಹೊರತಾಗಿ. ಸೋಮನು ತಾನು ಮಾಡಿದ ತಪ್ಪೇ ಈಗ ತನ್ನನ್ನು ಕಾಡುತ್ತಿರುವುದು ಎಂದು ಆಗಲೇ ಒಪ್ಪಿಕೊಂಡಿದ್ದನು. ಅಷ್ಟಕ್ಕೂ ಸ್ವಂತ ಮಾವನೇ ಅಂದಿದ್ದನಲ್ಲವೇ ಕರ್ಮ ಸುಮ್ಮನೆ ಬಿಡದೆಂದು. ಇದರಾಚೆ ತನಗಿಂತಲೂ ಹೆಚ್ಚು ವಿಧಿಯ ದಾಳಿಗೀಡಾದ ತನ್ನ ಹೆಂಡತಿಯದು ಯಾವ ಕರ್ಮದ ಪ್ರತಿಫಲ ಎಂದು ಅವನು ಯೋಚಿಸಲು ಹೋಗಿರಲಿಲ್ಲ. ಆದರೆ ಪಳೆಯಯ್ಯರಿಗೆ ಇದ್ದ ಯೋಚನೆಯೇ ಅದಾಗಿತ್ತು. ಶಾರದೆ ಮತ್ತು ಯಶೋದೆ ಕರ್ಮದ ನಿಯಮಗಳ ಯಾವ ತಳಹದಿಯೆಡೆಯಲ್ಲಿ ಪರಿಣಾಮಕ್ಕೆ ತುತ್ತಾದರು ಎಂಬುದು ಅವರನ್ನು ಕೊರೆಯುತ್ತಿತ್ತು. ಶಾರದೆಯ ಬದುಕು ತಮ್ಮ ಮುಂದೆಯೇ ಹಾಗಾದಾಗ ಆಕೆಯ ತಂದೆ ಕರ್ಮ ನಿನ್ನನ್ನು ಸುಮ್ಮನೆ ಬಿಡಲ್ಲ ಎಂದು ಹೇಳಿದ್ದು ಈಗ ನಿಜವಾಗಿದ್ದರೂ, ಅಷ್ಟು ಮಾತ್ರಕ್ಕೆ ಪಳೆಯಯ್ಯರು ಕರ್ಮವನ್ನು ನಂಬುವಂತಿರಲಿಲ್ಲ.
ಶಾರದೆಯ ನೆನಪಾಗುತ್ತಿದ್ದಂತೆಯೇ ತಮ್ಮ ಮಗಳೂ ಸಹ ಮನೆಬಿಟ್ಟು ಯಾರನ್ನೋ ಮದುವೆಯಾದರೆ ಏನು ಗತಿ ಎಂದು ಮನಸ್ಸು ಅಳುಕಿತು; ಆಕೆ ಅಷ್ಟು ಗಟ್ಟಿಗಿತ್ತಿ ಅಲ್ಲದಿದ್ಯಾಗೂ. ಇಲ್ಲವೆ ಇವೆಲ್ಲವುಗಳಿಂದ ನೊಂದು ಆಕೆಯೇನಾದರೂ ಸಾಯುವುದನ್ನು ಆಯ್ಕೆ ಮಾಡಿಕೊಂಡರೆ ಗತಿಯೇನು ಎಂಬುದು ಪಳೆಯಯ್ಯ ಮತ್ತು ಸೋಮ ಇಬ್ಬರ ಅಳುಕಾಗಿತ್ತು. ಇದರ ಹೊರತಾಗಿಯೂ ಯಶೋದೆಯ ಮುಂದೆ ಇದ್ದ ಮತ್ತೊಂದು ದಾರಿಯೆಂದರೆ ಈಗ ಇರುವಂತೆಯೇ ಮಾತುಗಳನ್ನು ಕಸಿದಲ್ಲಿಯೇ ಕಳಕೊಂಡಲ್ಲಿಯೇ ಇದ್ದುಬಿಡುವುದು. ಅದಾಗಲೇ ಅದು ಆಕೆ ಇರುತ್ತಿದ್ದುದು ಸಹ. ದಂಡೆಗೆ ಬಡಿದ ನೀರು ಆಗಾಗ ಇವರ ಎದೆಗೂ ಹಾಯೆನಿಸುತ್ತಿತ್ತು. ಅಲ್ಲಿ ಅವರಿಬ್ಬರೂ ಮಾತನಾಡುವುದಕ್ಕಿಂತ ಮುಖ್ಯವಾಗಿ ಅವರು ಮಾಡಬೇಕಿದ್ದುದ್ದು ಕಳೆದು ಹೋದ ಯಶೋದಾಳ ಮಾತುಗಳನ್ನು ಹುಡುಕಿಕೊಡುವುದಾಗಿತ್ತು. ಈಗ ಮಾತನಾಡಬೇಕಿದ್ದುದೂ ಅವಳೇ ಆಗಿತ್ತು. ಆಗಲೇ ಹಗಲು ಮುಗಿಯುವ ಸಮಯವಾಗಿತ್ತಾದ್ದರಿಂದ ಪಳೆಯಯ್ಯರು ಹೋಗೋಣ ಎಂಬಂತೆ ಎದ್ದು ನಿಂತರು. ಸೋಮನು ಅವರನ್ನು ಅನುಸರಿಸಿದ. ಇಬ್ಬರೂ ಮನೆಯ ಕಡೆ ನಡೆದರು. ಅಲೆಗಳು ಶಾಂತವಾಗಿಯೇ ಇದ್ದವು...
ಯಶೋದಾ ಎಂದು ಪಳೆಯಯ್ಯರು ಮಗಳನ್ನು ಕೂಗಿದರು. ಇಪ್ಪತ್ತು ಆಸುಪಾಸಿನ ಹೆಣ್ಣೊಬ್ಬಳು ಬಾಗಿಲು ತೆಗೆದಳು. ಹೊಸ್ತಿಲಲ್ಲಿ ಇಬ್ಬರು ನಿಂತದ್ದು ನೋಡಿದಳು. ಏನೂ ಮಾತಾಡದೆ ಸುಮ್ಮನೆ ಒಳಗೆ ಹೋದಳು. ಈಗ ಮಾತಿನ ಸರದಿ ಆಕೆಯದೇ ಆಗಿತ್ತು. ಆಕೆಯ ಮನಸ್ಸಿನಲ್ಲಿ ನೋವಿದೆ; ಹತಾಶೆಯಿದೆ. ತನ್ನ ಗಂಡನನ್ನು ಬಯ್ಯಬೇಕಿದೆ; ಒಬ್ಬನೇ ನಿರ್ಧಾರ ತೆಗೆದುಕೊಂಡುದಕ್ಕಾಗಿ. ತನ್ನ ತಂದೆಯನ್ನೂ ಬಯ್ಯಬೇಕಿದೆ; ತನ್ನ ಗಂಡನ ನಿರ್ಧಾರವನ್ನು ಒಬ್ಬನೇ ಮನ್ನಿಸಿದ್ದಕ್ಕಾಗಿ. ತನ್ನ ಸುತ್ತಲನ್ನೂ ಆಕೆ ಬಯ್ಯಬೇಕಿತ್ತು; ಹೀಗೆ ಮೌನವನ್ನು ಹೆಣ್ಣಿನ ಗುರುತಾಗಿಸಿದ್ದಕ್ಕೆ. ತನ್ನ ನಾಳೆಗಳ ಬಗ್ಗೆ ತಾನೇ ಮಾತನಾಡುವುದಿತ್ತು; ತನ್ನದಿನ್ನೂ ಬದುಕನ್ನು ಬಿಟ್ಟುಕೊಡುವ ವಯಸ್ಸು ಅಲ್ಲದಿದ್ದುದಕ್ಕೆ. ಹೊರಗಡೆ ಇನ್ನೂ ಚೂರು ಬೆಳಕಿತ್ತು. ಮೂವರಿಗೂ ಬಾಗಿಲು ಹಾಕುವ ಮನಸ್ಸಾಗಲಿಲ್ಲ. ಬೈಗಿನಲ್ಲಿ ಮನೆಬಾಗಿಲು ಹಾಕಬಾರದಂತೆ; ಬಾಗಿಲು ತೆರೆದೇ ಇತ್ತು...
** ** **
ಯುವ ಬರಹಗಾರ ರಾಮಕೃಷ್ಣ ಸುಗತ ಅವರು ಜನಿಸಿದ್ದು 1991 ನವೆಂಬರ್ 4ರಂದು. ಸ್ನಾತಕೋತ್ತರ ಪದವಿ, ಪಿಎಚ್‌ಡಿ ಪದವಿ ಪಡೆದಿರುವ ಇವರಿಗೆ ಪ್ರವಾಸ , ಕತೆ ಕವನ ಬರೆಯುವುದು, ಹಾಡುಗಳ ರಾಗ ಸಂಯೋಜನೆ, ಕಿರುಚಿತ್ರ ನಿರ್ಮಾಣ ಹವ್ಯಾಸಿ ಕ್ಷೇತ್ರ. ಉರಿಯ ಪೇಟೆಯಲಿ ಪತಂಗ ಮಾರಾಟ ಇವರ ಚೊಚ್ಚಲ ಕವನ ಸಂಕಲನವಾಗಿದೆ.
More About Author