Poem

ಕನ್ನಡಾಂಬೆಯ ವಿಜಯೋತ್ಸವ

ಜಯಿಸಿ ಬೆಳಗಲಿ ನಮ್ಮ ಕನ್ನಡದ ನಾಡು |
ಸಿರಿ ಶಾರದೆಯರೊಲಿದು | ಕಲೆತು ನರ್ತಿಪ ಹಾಡು

ಕನ್ನಡಿಗರೊಂದಾಗಿ ಸೇವೆಯೊಳು ಮುಂದಾಗಿ |
ವಿತರಣವೆ ಕುಂದಾಗಿ | ಬದುಕಿ ಬಾಳಿ |
ಧರೆಗೂರೆ ಕೋಲಾಗಿ | ದಳಿತರಿಗೆ ಹಾಲಾಗಿ |
ಜನತೆಯೊಳು ಮೇಲಾಗಿ | ಚಿರಯಶವ ತಾಳಿ |

ಅರಸುಗಳಿಗಿದು ವೀರ | ಅಧಿರಾಜರಧಿಕಾರ |
ಸರಸಿಗಳಿಗಾಧಾರ | ಸುಖದ ಸಾರ |
ರಮಣಿಯರ ಮಣಿಹಾರ | ಲಲಿತಕಲೆಗಾಗರ |
ನಿರತಿಶಯ ಶೃಂಗಾರ | ಅಮೃತಕೂಪಾರ

ಧರ್‍ಮ ಮಾರ್ಗದ ಬೆಳಕು | ಪರಚಗಳಿಗಳುಕು |
ರೀತಿನೀತಿಯ ಪಳುಕು | ಭಾಗ್ಯಯೋಗ |
ರಾಮನಾಶಯದೊಲವು | ಜಯಚಾಮನಲಿ ನಿಲುವು |
ಇಷ್ಟಸಿದ್ಧಿಯ ಗೆಲವು | ಫಲಿಸಲೀಗ

- ಬೆನಗಲ್ ರಾಮರಾವ್‌

ವಿಡಿಯೋ
ವಿಡಿಯೋ

ಬೆನಗಲ್ ರಾಮರಾವ್

ಕರ್ನಾಟಕದ ನಕಾಶೆ ರೂಪಿಸಿದ ಬೆನಗಲ್ ರಾಮರಾವ್ ಅವರು “ಕನ್ನಡವನುಳಿದೆನಗೆ ಅನ್ಯ ಜೀವನವಿಲ್ಲ” ಎಂಬ ಕವಿತೆಯ ಮೂಲಕ ಕನ್ನಡ ನಾಡಿನಲ್ಲಿ ಚಿರಪರಿಚಿತರಾದವರು. ಕವಿ, ನಾಟಕಕಾರ ಬೆನಗಲ್ ರಾಮರಾಯರು ಕೋಶರಚನೆ ಹಾಗೂ ಇತಿಹಾಸಕ್ಕೆ ಸಂಬಂಧಿಸಿದ ಕೃತಿಗಳ ಸಂಪಾದಕರೂ ಆಗಿದ್ದರು. ‘ಸುವಾಸಿನಿ’ ಪತ್ರಿಕೆಯ ಸಂಪಾದಕರಾಗಿ ವೃತ್ತಿ ಜೀವನ ಆರಂಭಿಸಿದ್ದರು.

ಬೆನಗಲ್ ರಾಮರಾವ್ ತಂದೆ ಮಂಜುನಾಥಯ್ಯ-ತಾಯಿ ರಮಾಬಾಯಿ. ಮುಲ್ಕಿ, ಮಂಗಳೂರು, ಪುತ್ತೂರುಗಳಲ್ಲಿ ವಿದ್ಯಾಭ್ಯಾಸ ಮಾಡಿದ ಅವರು ಜೀವವಿಜ್ಞಾನ, ಭೂಗರ್ಭಶಾಸ್ತ್ರ ಮತ್ತು ಕನ್ನಡ ವಿಷಯಗಳಲ್ಲಿ ಬಿ.ಎ. ಪದವಿ ಗಳಿಸಿದ್ದರು. 1900ರಲ್ಲಿ ಮದರಾಸು ವಿಶ್ವವಿದ್ಯಾಲಯಗಳಲ್ಲಿ ಎಂ.ಎ. ಪದವಿ ಪಡೆದರು. ಮುಂಬಯಿ ವಿಶ್ವವಿದ್ಯಾಲಯದಿಂದ ಎಲ್.ಎಲ್.ಬಿ ಪದವಿ ಪೂರ್ಣಗೊಳಿಸಿದರು.

ಮೈಸೂರು ನಾರ್ಮಲ್ ಸ್ಕೂಲಿನಲ್ಲಿ ಕನ್ನಡ ಅಧ್ಯಾಪಕರಾಗಿ ಕೆಲಸ ಮಾಡಿದ ಅವರು ನಂತರ 1902 ರಲ್ಲಿ ಮುಂಬಯಿ ಸರಕಾರದಲ್ಲಿ ಭಾಷಾಂತರಕಾರರಾಗಿ ಸೇರಿದರು. 1917ರಿಂದ ಮದರಾಸು ಸರ್ಕಾರದಲ್ಲಿ ಭಾಷಾಂತರಕಾರರಾಗಿ ಕಾರ್ಯ ನಿರ್ವಹಿಸಿ ಅಲ್ಲಿಯೇ ನಿವೃತ್ತರಾದರು.

ಮದರಾಸು ವಿಶ್ವವಿದ್ಯಾನಿಲಯದ ಸೆನೆಟ್ ಸದಸ್ಯರಾಗಿ ಪಠ್ಯಪುಸ್ತಕ ಸಮಿತಿಯ ಸದಸ್ಯರಾಗಿದ್ದ ಅವರು ಕರ್ನಾಟಕ ಏಕೀಕರಣ ಸಂಘದ ಅಧ್ಯಕ್ಷರಾಗಿದ್ದರು. ಪತ್ರಿಕೋದ್ಯಮದಲ್ಲಿ ಆಸಕ್ತಿ ಹೊಂದಿದ ಇವರು ‘ಸುವಾಸಿನಿ’, ‘ವಾಗ್ಭೂಷಣ’ ಪತ್ರಿಕೆಗಳ ಸಂಪಾದಕರಾಗಿದ್ದರು. ‘ಸುಗುಣವಿಲಾಸ ನಾಟಕಸಭೆ’ಯ ಕನ್ನಡ ವಿಭಾಗದ ಕಾರ್ಯದರ್ಶಿ ಆಗಿದ್ದ ಅವರು ರಂಗದ ಮೇಲೆ ಅಭಿನಯಿಸುತ್ತಿದ್ದರು ಕೂಡ.  1925ರಲ್ಲಿ ನಡೆದ 11 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಅವರು ಏಕೀಕರಣಕ್ಕೆ ಶ್ರಮಿಸಿದ್ದರು. ಬೆನಗಲ್ ಅವರು 1943ರ ಮೇ 8 ರಂದು ನಿಧನರಾದರು.

  1. ಪುರಾಣನಾಮ ಚೂಡಾಮಣಿ,   

  2. ಕೈಫಿಯತ್ತುಗಳ ಸಂಪಾದನೆ,   

  3. ಇರಾವತಿ,    ರಮಾಮಾಧವ (ಕಾದಂಬರಿ),   

  4. ಸತ್ಯರಾಜ ಪೂರ್ವದೇಶ ಚರಿತ್ರೆ (ತೆಲುಗಿನಿಂದ),   

  5. ಅವಿಮಾರಕ (ಸಂಸ್ಕೃತದಿಂದ),  

  6. ಸುಭದ್ರಾವಿಜಯ (ಮರಾಠಿಯಿಂದ),   

  7. ಕಲಹಪ್ರಿಯಾ (ಬಂಗಾಳಿಯಿಂದ) ಇತ್ಯಾದಿ ಕೃತಿಗಳನ್ನು ರಚಿಸಿದ್ದಾರೆ.

More About Author