ಕಂಡೂ ಕಾಣದಂತಿರುವ
ಕತ್ತಲ ಮುಸುಕಿನ ಇರುಳುಗನ್ನಡಿಯಲಿ
ನಿಂತಿರುವ ನಿಲುವನ್ನೊಮ್ಮೆ ನೋಡಬೇಕು
ಇಣುಕಿ ಮರೆಯಾಗುವ ಮಾತನೆಳೆಯಬೇಕು
ಮೌನ ಕ್ರಾಂತಿಯೊಳಗೆ ಮೌನಿಯಾಗಬೇಕು...
ಒಂದಷ್ಟು ಹೊತ್ತು ಆಚೆಗೆ ನಿಂತು ಬಿಡು
ಮಾತು ಆಡಿದಷ್ಟು ಹೊತ್ತು ,
ಕೇಳಲೆಳಸುವ ತನನದ ಮೋಡಿಗೋ,
ಕಾಯುವಿಕೆ ಸಲ್ಲದೆಂದೊತ್ತಿ ಹೇಳಬೇಕು
ದಿನಮಾನದಲಿ ಗುಣಕೆ ವಿಘ್ನ ಮೂಡಿರುವಲಿ...
ಒಲ್ಲದ ಸಲ್ಲದ ಒಗಟುಗಳನು ಬಿಡಿಸಬೇಕು
ಗುಲ್ಲೆಬ್ಬಿಸದೆ ಹಾಗೇ ಇದ್ದು ಬಿಡು
ಹಿಪ್ಪೆಯಾಗಿದೆ ಬಿದ್ದ ಕಲ್ಲಿನ ರಭಸಕೆ
ತಿದಿಯೂದುವ ನೋವು ಕಳೆದು
ತಿಳಿಯಾಗಬೇಕು ಮೃದ್ವಂಗಿಯೊಡಲು
ಲಾಲಿ ತೂಗಿನಲಿ ತನ್ನ ತಾ ಮರೆಯಬೇಕು
ಸಿಕ್ಕುವ ಸಿಕ್ಕನಳಿಸಿ, ಹಾಡು ನವಿರಾಗಬೇಕು...
ರಾಗ ಪಲ್ಲವಿಯಿಂದ ಕಳೆದು ಹೋಗಿಬಿಡು
ರೆಪ್ಪೆ ಮುಚ್ಚಿದರೂ ತೆರೆದರೂ ಅದೇ...!
ಹಿಡಿದಿಟ್ಟ ಕನಸಿಗೆ ತೆರೆ ಕಾಣಿಸಬೇಕು
ಒಂದೊಂದು ಹೊತ್ತಿಗೊಂದು ಕಟ್ಟುಕತೆ...
ಊಹೆಗಳ ತುರಂಗವೇರಿ ರಣರಂಗ!
ಚಿತ್ತ ಚಂಚಲಿಸದಂತೆ ತನ್ನ ಕಾಯಬೇಕು...
ನೆನಿಕೆಯೊಳಗಿಂದ ಮರೆಯಾಗಿ ಸರಿದುಬಿಡು
ಆನಂದದಾಳ ರಂಗಾಗಿ ಶೃತಿಯಾಗಲು,
ಮಾನಸದಲಿ ಹಿಡಿ ಬೆಳದಿಂಗಳು ಬೇಕು
ಸಿರಿ ಮೊಗದ ಕಾಂತಿಯ ನೆವದಿ,
ಹುಚ್ಚೆದ್ದು ಒಳಗಲೆವ ತವದ ಗುರುತನಳಿಸಬೇಕು
ಕಣ್ಣ ಕಾವಲಿನಲಿ ನಗುತಿರಬೇಕು
- ಅನಿತಾ ಪಿ. ತಾಕೊಡೆ
ಅನಿತಾ ಪಿ. ತಾಕೊಡೆ
ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ಸಮೀಪದ ತಾಕೊಡೆಯವರಾದ ಅನಿತಾ ಪೂಜಾರಿ ಅವರು ಸದ್ಯ ಮುಂಬೈಯಲ್ಲಿ ವಾಸಿಸುತ್ತಿದ್ದಾರೆ. ಕವಿ, ಕತೆಗಾರರಾಗಿರುವ ಅನಿತಾ ಅವರು ಅಂಕಣಕಾರರೂ ಆಗಿದ್ದಾರೆ. ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಪದವೀಧರರಾಗಿರುವ ಅವರು ಮುಂಬೈ ವಿ.ವಿ.ಯಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕಾಯುತ್ತಾ ಕವಿತೆ, ಅಂತರಂಗದ ಮೃದಂಗ (ಕವನ ಸಂಕಲನ), ಮರಿಯಲದ ಮದಿಮಾಲ್ (ತುಳು ಕವನ ಸಂಕಲನ), ಸವ್ಯಸಾಚಿ ಸಾಹಿತಿ, ಮೋಹನ ತರಂಗ -ಇವರ ಕೃತಿಗಳು. ಸುಶೀಲ ಎಸ್. ಶೆಟ್ಟಿ ಸ್ಮಾರಕ ಕಾವ್ಯ ಪ್ರಶಸ್ತಿ, ಅಲ್ಲಮ ಸಾಹಿತ್ಯ ಪ್ರಶಸ್ತಿ, ಕವಿರತ್ನ ಪುರಸ್ಕಾರ, ಡಿ.ಗೋಪಾಲಕೃಷ್ಣ ಸ್ಮಾರಕ ಪ್ರಶಸ್ತಿ, ಡೊಂಬಿವಲಿ ತುಳುಕೂಟದ ತುಳುಸಿರಿ ಪ್ರಶಸ್ತಿ, ಕಾವ್ಯಸಿರಿ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.
More About Author