Poem

ಕನಸುಗಳ ಕೊಲಾಜ್

ಕೆಟ್ಟ ಕನಸು ಎಷ್ಟೇ ಕೆಟ್ಟದಿದ್ದರೂ
ಎದ್ದ ನಂತರ ಮುಗಿದು ಬಿಡುತ್ತದೆ
ಕೆಟ್ಟ ಬದುಕು ಎಷ್ಟೇ ಕೆಟ್ಟದಿದ್ದರೂ
ಮಲಗಿದರೆ ಮುಗಿಯುವುದಿಲ್ಲ, ಅದೇ ಸಮಸ್ಯೆ!
*
ಕನಸುಗಳಲ್ಲಿ ಏರು ಹಾದಿಯಲ್ಲಿ
ಅನಾಯಾಸ ಗಾಡಿ ಓಡಿಸುತ್ತಿರುತ್ತೇನೆ
ಬದುಕಿನಲ್ಲಿ ಅಸಾಧ್ಯವೆಂದು ಗೊತ್ತಿದ್ದೂ;
ಕನಸಿನಲ್ಲಾದರೂ ಬಾ ನೀನು...
*
ಸದಾ ಚಲನೆ ಕನಸಿನಲ್ಲಿ,
ಎಲ್ಲೆಲ್ಲಿಯೋ ಅಲೆಯುತ್ತೇನೆ,
ನನ್ನದಲ್ಲದ ನೆಲೆಯೆಂಬ ಅರಿವಿದ್ದೂ;
ಕನಸಿನಲ್ಲಿಯೇ ಹೆಚ್ಚು ಎಚ್ಚರ, ವಿಚಿತ್ರವಲ್ಲವೇ!
*
ಕನಸನ್ನು 'ಬೀಳುವುದು'
ಅನ್ನುತ್ತೇವಲ್ಲ, ಯಾಕೆ...
ಮತ್ತೆ 'ಏಳುವುದು' ಕನಸು ಹೇಗಾಗುತ್ತದೆ!
ಅದು ಕನಸಿನ ಸಾವಲ್ಲವೇ?
*
ತುಂಡು ತುಂಡು ಕನಸುಗಳನ್ನೆಲ್ಲ
ಸೇರಿಸಿ ಹೊಲಿದರೆ ಏನಾಗಬಹುದು?
ಬೇಡ ಸುಮ್ಮನಿರು,
ಬದುಕಿನಂತೆ ನಿಚ್ಚಳವಾಗಿ ಬಿಟ್ಟರೆ ಕಷ್ಟ!

- ಭಾರತಿ ಬಿ.ವಿ

ಭಾರತಿ ಬಿ ವಿ

ಭಾರತಿ ಬಿ ವಿ ಅವರು ಜನಿಸಿದ್ದು ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲದಲ್ಲಿ. ಬಿ.ಕಾಂ ಪದವೀಧರೆಯಾಗಿರುವ ಇವರಿಗೆ ಕವಿತೆ ರಚನೆ, ಅನುವಾದ, ಪ್ರವಾಸ ಹವ್ಯಾಸಗಳಾಗಿವೆ. 

ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿರುವ ಇವರು 'ಸಾಸಿವೆ ತಂದವಳು', 'ಮಿಸಳ್ ಭಾಜಿ', 'ಕಿಚನ್‌ ಕವಿತೆಗಳು', 'ಜಸ್ಟ್‌ ಮಾತ್‌ ಮಾತಲ್ಲಿ', 'ಆನು ನಿನ್ನ ಹಾಡಿದಲ್ಲದೆ ಸೈರಿಸಲಾರೆನಯ್ಯ', 'ನಕ್ಷತ್ರಗಳ ಸುಟ್ಟ ನಾಡಿನಲ್ಲಿ', 'ಎಲ್ಲಿಂದಲೋ ಬಂದವರು' ಕೃತಿಗಳನ್ನು ಪ್ರಕಟಿಸಿದ್ದಾರೆ. ಇವರ 'ಸಾಸಿವೆ ತಂದವಳು' ಕೃತಿಗೆ ಶಿವಮೊಗ್ಗ ಕರ್ನಾಟಕ ಸಂಘದ ಎಂ.ಕೆ ಇಂದಿರಾ ಪ್ರಶಸ್ತಿ ಹಾಗೂ 'ಮಿಸಾಳ್ ಬಾಜಿ' ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಬಂದಿದೆ.

ಪ್ರಶಸ್ತಿಗಳು: ಕರ್ನಾಟಕ ಸಾಹಿತ್ಯ ಅಕಾಡೆಮಿಯ 2021ನೇ ಸಾಲಿನ ಪುಸ್ತಕ ಬಹುಮಾನ

More About Author