ಕಾಲ ಮಾಗಿಸದ ಗಾಯಗಳೇ ಇಲ್ಲ ಹುಡುಗಿ
ಸ್ವಲ್ಪ ಕಾಯು..
ಎದೆಯೊಳಗೆ ಉರಿವ ಜ್ವಾಲಾಗ್ನಿಯೂ
ಹೆಪ್ಪುಗಟ್ಟುತ್ತದೆ
ತಿದ್ದುಕೋ ನಿನ್ನ ನಿನಗೆ ಬೇಕಾದಂತೆ..
ಮರೆಯದ ಒಲವೆಂದು
ದಿನವಿಡೀ ತಳಮಳಿಸುವೆಲ್ಲಾ
ಕೂತು ನೋಡು ಅಗಾಧ ಪ್ರೇಮವೂ
ಕರಗಿಹೋಗುತ್ತದೆ ಅವನ
ಬದಲಾವಣೆಯೊಂದಿಗೆ…
ನೀನು ಪ್ರೇಮಿಸಿದ, ನೀನೇ ಕಟ್ಟಿಕೊಂಡ
ನೀನು ಬಯಸಿದ, ನೀನೇ ಆಲಾಪಿಸಿದ
ನೀನೇ ಸೃಷ್ಟಿಸಿದ, ನಿತ್ಯ ಆರಾಧಿಸಿದ
ಎಲ್ಲವೂ ಇಲ್ಲವಾಗುತ್ತವೆ ಸ್ವಲ್ಪ ಕಾಯು
ಕಾಲ ಮಾಗಿಸದ ಗಾಯಗಳೇ ಇಲ್ಲಾ
ಗುರುತುಗಳ ಹೊರತು…
ಗುರುತಿಟ್ಟುಕೋ
ದಾರಿ ತಪ್ಪಿದ್ದು
ತಪ್ಪಿದ ದಾರಿಯಲ್ಲಷ್ಟೇ ಸುಖಕಂಡದ್ದು
ಕಾಲವನ್ನ ಕಟ್ಟಿ ಕೂತದ್ದು
ಗಾಯಗಳ ಜೀವಿಸಿದ್ದು
ನೊಂದಿದ್ದು, ಕಣ್ಣೀರ ನದಿಯೊಳಗೆ
ಈಜಿ ದಡ ಸೇರಲಾಗದೇ
ಪದ ಕಟ್ಟಿದ್ದು, ಕಟ್ಟಿದ ಪದಗಳೊಳಗೇ
ನೀನೇ ಸಿಕ್ಕಿಕೊಂಡದ್ದು..
ಎಲ್ಲವುಗಳ ಗುರುತಿಟ್ಟುಕೋ…
ನೀನು ಕಲ್ಪಿಸಿದ
ಭ್ರಮೆಯೊಂದಿಗೆ ಬಯಸಿದ ಪ್ರೇಮಿ
ನಿನ್ನ ಕೈಸೇರಿದವನಲ್ಲವಾದ್ದರಿಂದ
ನಿನ್ನ ನೋವು ಸಾವು
ಅವನ ಒಂದು ಕ್ಷಣವನ್ನೂ
ನಿನ್ನಲ್ಲಿ ತಡೆದು ನಿಲ್ಲಿಸದಾದ್ದರಿಂದ
ವಿದಾಯವಿದೆ ನೋವಿಗೆ
ಕೊನೆಗೆ ಬದುಕಿಗೂ…
ಕಾಲ ಮಾಗಿಸದ ಗಾಯಗಳೇ ಇಲ್ಲಾ ಹುಡುಗಿ
ಸ್ವಲ್ಪ ಕಾಯು…
ಮಂಜುಳಾ ಹುಲಿಕುಂಟೆ
ಕವಿ, ಪತ್ರಕರ್ತೆ ಮಂಜುಳಾ ಹುಲಿಕುಂಟೆ ಹುಟ್ಟಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೊಡ್ಡಬಳ್ಳಾಪುರ ತಾಲೂಕಿನ ಹುಲಿಕುಂಟೆ ಗ್ರಾಮದಲ್ಲಿ. ಹುಟ್ಟೂರಿನಲ್ಲೇ ಪ್ರಾಥಮಿಕ ಮತ್ತು ಫ್ರೌಢಶಾಲಾ ಶಿಕ್ಷಣ ಮುಗಿಸಿದ ಮಂಜುಳಾ ತ್ಯಾಮಗೊಂಡ್ಲು ಶ್ರೀಮತಿ ನರಸಮ್ಮ ತಿಮ್ಮರಾಯಪ್ಪ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ಮತ್ತು ದೊಡ್ಡಬಳ್ಳಾಪುರದ ಶ್ರೀ ಕೊಂಗಾಡಿಯಪ್ಪ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ಪದವಿ ಪೂರ್ಣಗೊಳಿಸಿದ್ದಾರೆ. ಆನಂತರ ಬೆಂಗಳೂರಿನ ಬದುಕು ಕಮ್ಯುನಿಟಿ ಕಾಲೇಜಿನಲ್ಲಿ ಪತ್ರಿಕೋದ್ಯಮ ಡಿಪ್ಲಮಾ ಮಾಡಿದ್ದಾರೆ. ಕಸ್ತೂರಿ ಸುದ್ದಿವಾಹಿನಿಯಲ್ಲಿ ವೃತ್ತಿ ಬದುಕನ್ನು ಆರಂಭಿಸಿದ ಮಂಜುಳಾ, ಸುವರ್ಣ ನ್ಯೂಸ್ , ಟಿವಿ 9 ಸೇರಿದಂತೆ ಕರ್ನಾಟಕದ ಪ್ರಮುಖ ಸುದ್ದಿ ವಾಹಿನಿಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ.
ಸಂವಾದ ಸಂಸ್ಥೆಯಲ್ಲಿ ‘ಯುವಜನರ ಹಕ್ಕುಗಳು’ ಎಂಬ ವಿಷಯದಡಿ ನಡೆಸಿದ ಸಾಕ್ಷ್ಯ ಕಾರ್ಯದ ಫಲವಾಗಿ ‘ಹೆಡ್ಡಿಂಗ್ ಕೊಡಿ’ ಹೆಸರಿನ ಕೃತಿ ಸಂಪಾದನೆ ಮತ್ತು ದೀಪದುಳುವಿನ ಕಾತರ ಎಂಬ ಕವನ ಸಂಕಲನ ಬಿಡುಗಡೆಯಾಗಿದೆ. ಕರ್ನಾಟಕ ಲೇಖಕಿಯರ ಸಂಘದಿಂದ ಉದಯೋನ್ಮಕ ಕವಯತ್ರಿಯರಿಗೆ ನೀಡುವ 2016ನೇ ಸಾಲಿನ ಡಾ.ಸಿ.ವಿ.ವತ್ಸಲಾದೇವಿ ಸ್ಮಾರಕ ಪ್ರಶಸ್ತಿ, ವಿಜಯಪುರದ ಹಲಸಂಗಿ ಗೆಳೆಯರ ಬಳಗ ಪ್ರತಿಷ್ಠಾನದಿಂದ 2018ನೇ ಸಾಲಿನ ಯುವ ಸಾಹಿತಿ ಪುರಸ್ಕಾರ ಪಡೆದಿದ್ದಾರೆ. ಇವರ ಹಲವು ಕವಿತೆ, ಲೇಖನಗಳು ವಿಜಯ ಕರ್ನಾಟಕ ಸೇರಿದಂತೆ ಹಲವು ಪತ್ರಿಕೆ, ಮತ್ತು ಅಂತರ್ಜಾಲ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
More About Author