Poem

ಕಾಜೂರು ಸತೀಶ್ ಅವರ ಇಕೋ ಕವಿತೆಗಳು

ಕವಿತೆ-೧
ಪುಟ್ಟ ಮಗು ಬಲೂನು ಊದುವುದ ನೋಡಿರಬೇಕು
ಅಂತೆ ಗಾಳಿಯನ್ನೂದುತ್ತಿತ್ತು ಎಲೆ

ಈ ಶೂನ್ಯ ಈ ಜೀವ ತುಂತುಂಬಿಕೊಂಡು ಒಡೆಯುವ ಹಾಗೆ

ಎಲೆ ಊದಿ ತುಂಬಿಸಿದ ಗಾಳಿಯಲ್ಲಿ
ತೊಟ್ಟು ಕಳಚಿಕೊಂಡು
ತನ್ನ ಸಾವನ್ನು ಅತ್ತಿಂದಿತ್ತ ಇತ್ತಿಂದತ್ತ ಹಾರಾಡಿ ಸುಖಿಸುತ್ತಿತ್ತು.

ಕವಿತೆ-೨
ನಾನು ಎಲೆಯ ಮಗು
ಅದು ನನ್ನ ಮಗು
ಪರಸ್ಪರ ಉಸಿರು ಉಸಿರು ಬೆರೆತು ಹುಟ್ಟಿದ್ದು.

ಹಕ್ಕಿಯೊಂದು ದಿನ ಹಾರಿಬಂದು
ಎಲೆಯ ಮೈಗೆ ಮೈತಾಕಿಸಿತು
ಪುಳಕಗೊಂಡ ಎಲೆಗೆ ಸತ್ತು ಹಾರುವ ತವಕ

ಸಾವು ಕರೆದ ದಿನ
ಎಂದೋ ಹಕ್ಕಿ ಹಾರಿದ ದಾರಿಯಲ್ಲಿ
ಹಾರಿತು ಎಲೆ ಸಂಭ್ರಮದಿಂದ

ತನ್ನುಸಿರು ನನ್ನುಸಿರು ಹಕ್ಕಿಯುಸಿರು ಬೆರೆತ
ಗೆರೆಯಿರದ ದಾರಿಯಲ್ಲಿ.
*
ಕವಿತೆ-೩

ಪ್ರೀತಿ ಬಂದು ಹಾಸಿಗೆಯಲಿ ಕುಳಿತಿತು
ಮುತ್ತು ಮತ್ತು ಅಪ್ಪುಗೆಗಳು ಹುಟ್ಟಿದವು

ಪ್ರೀತಿ ಮತ್ತು ಕಾಮ ಹಾಸಿಗೆಯಲಿ ಕುಳಿತವು
ಅಳುಅಳುತಾ ಮಕ್ಕಳು ಹುಟ್ಟಿದವು.

*
ಕವಿತೆ-೪

ಒಂದು ಅರ್ಜಿ ಕೊಟ್ಟು ಸ್ವೀಕೃತಿ ಪಡೆದು..
ಒಂದು ಮಳೆಗಾಲ ಆಕಾಶದಿಂದ ಬಿದ್ದು ತಲೆಯೊಡೆದುಕೊಂಡು ಆಸ್ಪತ್ರೆ ಸೇರಿತ್ತು
ಬೇಸಿಗೆಯು ಬೆವರಿ ಬೆವರಿ ಮೈಸುಟ್ಟು ಕಪ್ಪಾಗಿ ಮೂರ್ಛೆ ಹೋಗಿತ್ತು
ಚಳಿಗಾಲಕ್ಕೆ ಮದುವೆಯಾಗಿ ಮೂರ್ನಾಲ್ಕು ಮಕ್ಕಳು - 'ಕಂಯ್ಯೋ..'

ಒಂದು ತಡರಾತ್ರಿ ನನಗೆ ನಿದ್ದೆ ಹತ್ತಿತ್ತು
ಭಯಾನಕ ಕನಸು!
ನಾನವರ ರಕ್ತ ಹೀರುತ್ತಿದ್ದೆ!
ರಕ್ತಕ್ಕೆ ಬೆವರ ನಾತ

ನೂರು ಸಾವಿರ ಮಂದಿ ಒಂದಾದ ರಕುತ
ಅಲ್ಲಲ್ಲಿ ಸೂರ್ಯಗುಳ್ಳೆ ಥಳಥಳ ತಳತಳ
ಸಾಸಿವೆಯಿದ್ದಿದ್ದರೆ ಚಿಟಿಚಿಟಿಚಿಟಿ
ಆಹಾ.. ಕರಿಬೇವು ಇದ್ದಿದ್ದರೆ..

ಅದರಲ್ಲಿದ್ದ ನನ್ನ ರಕುತವೂ ನಾಲಗೆಗೆ ತಾಗಲು..
ಎಚ್ಚರಗೊಂಡೆ
ಆಗ ಕತ್ತಲು ಕೆಂಪಾಗಿತ್ತು
ಥೇಟ್ ಮೂಡಣ ಸೂರ್ಯ!

ಕವಿತೆ-೫
ಈ ಕಾಳರಾತ್ರಿ
ಇಲ್ಲೆಲ್ಲ ಮರಗಳಿವೆ
ಅಲ್ಲೆಲ್ಲ ಮನೆಗಳಿವೆ
ಎಂದು ನೆನಪಿನ ಬಲದಿಂದ ಹೇಳುತ್ತೇನೆ.

ಒಂದೊಮ್ಮೆ ನನಗೆ ತುಂಬು ಮರೆವಿರುವುದಾದರೆ
ಮರಗಳು ಮತ್ತು ಮನೆಗಳು
ಹೀಗೆ ಹೇಳಿಕೊಳ್ಳಲು ಎಲ್ಲಿರುತ್ತಿದ್ದವು ಈ ಕಾಳರಾತ್ರಿಯಲ್ಲಿ?

ಹೇಳು ಬೆಳಕೇ
ಹೇಳು ಮಳೆಯೇ
ಹೇಳು ಬರವೇ
ಹೇಳು ಗಾಳಿಯೇ
ಹೇಳು ಗರಗಸವೇ
ಹೇಳು ಜೆಸಿಬಿಯೇ
ಎಲ್ಲಿರುತ್ತಿದ್ದವು ಅವು?

ಕವಿತೆ-೬
ಈ ಮನೆಗೂ ಆ ಮನೆಗೂ ದ್ವೇಷ
ಒಮ್ಮೆ ಆ ಮನೆಯ ಒಡೆಯ ಸತ್ತ
ಈ ಮನೆಯವರಾರೂ ಹೋಗಲಿಲ್ಲ ಅಲ್ಲಿಗೆ

ಸುಡಲಾಯಿತು ಅವರನ್ನು
ಮೈ ಮಾಗಿ ಹೊಗೆಯೆದ್ದಿತು

ಇವರಿಲ್ಲಿ ಉಸಿರಾಡಿದರು

ಒಂದಾದರು
ಸತ್ತ ಆ ಮನೆಯೊಡೆಯ
ಮತ್ತು ಬದುಕಿರುವ ಇವರು

ಕವಿತೆ-೭
ಗುಡಿಸಲಿನ ಕಣ್ಣು ಚಾಪೆಯ ಮೇಲೆರಗಿ
ಒಂದು ಎರಡು ಮೂರು... ನಕ್ಷತ್ರಗಳೆಣಿಕೆ

ಗುಡಿಸಲಿನ ಕಿವಿ ಮಿಡತೆಗಳ ಒಳಬಿಟ್ಟುಕೊಂಡು
ಚಿರ್ ಚಿರ್ರ್ ಸಂಗೀತ ಕಚೇರಿ

ಗುಡಿಸಲಿನ ಕಾಲು ಸುಯ್ಯೋ ಗಾಳಿಗೆ
ತಕ್ಕ ತಕ ತಕ್ಕ ತಕ

ಗುಡಿಸಲಿನ ಅಂಗೈಗೆ ಸಲಾಕೆಯ ಚುಂಬಿಸಿದ
ಗುಂಡುಗುಂಡು ಕೆಂಪುಕೆಂಪು ನೆನಪು

ಗುಡಿಸಲಿನ ಎದೆಗೆ ಗಿಡಬೆಳೆಸಿದ ಖುಷಿಯಲ್ಲಿ
ನೆರೆಮನೆಯ ಡಿಜೆಯ ಡುಬ್ಬುಡುಬ್ಬು ಡುಬ್ಬುಡುಬ್ಬು

ಗುಡಿಸಲಿನ ಹೊಟ್ಟೆಗೆ ಒಂದು ಮಗು
ಗೇರುಬೀಜದ ಹಾಗೆ ಅಂಟಿಕೊಂಡು ಸದಾ..

ಕವಿತೆ-೮
ಮಗುವಿನಂಥ ಮೊದಲ ಸಾಲು ಹುಟ್ಟಿತು
ಅಳಿಸಿ ಹಾಕಲೇಬೇಕಾದಾಗ ನನ್ನ ನೆಲದ ಕಳ್ಳುಬಳ್ಳಿ ತುಂಡಾಯಿತು

ಹೂವಿನಂಥ ಎರಡನೇ ಸಾಲು ಹುಟ್ಟಿತು
ಅಳಿಸಿ ಹಾಕಲೇಬೇಕಾದಾಗ ಹಸಿರು ಶಾಯಿ ನನ್ನ ಕಣ್ಣ ತಿಂದಿತು

ನೀರಿನಂಥ ಮೂರನೇ ಸಾಲು ಹುಟ್ಟಿತು
ಅಳಿಸಿ ಹಾಕಲೇಬೇಕಾದಾಗ ನನ್ನ ಹೆಸರೇ ನರಳಿ ಸತ್ತಿತು

ಸಾವಿನಂಥ ಕಡೆಯ ಸಾಲು ಹುಟ್ಟಿತು
ಮಾತುಗಳೇ ಬೆಳೆದು ನನ್ನ ಕರುಳ ತಿಂದು ಸಾವು ಸತ್ತಿತು.

ಕಾಜೂರು ಸತೀಶ

ಕಾಜೂರು ಸತೀಸ್ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಕಾಜೂರು ಗ್ರಾಮದವರು.  ಶಿಕ್ಷಣ ಇಲಾಖೆಯಲ್ಲಿ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ ಸೋಮವಾರಪೇಟೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ‘ಗಾಯದ ಹೂವುಗಳು’ ಮತ್ತು ‘ಕಡಲ ಕರೆ’ ಪ್ರಕಟಿತ ಕೃತಿಗಳು

More About Author