Story

ಕಾಡಿನ ಮಾತು  

ಒನ್ ಇಂಡಿಯಾ ಡಿಜಿಟಲ್ ಮಾಧ್ಯಮದಲ್ಲಿ ಹಳೆಯ ಬೆಂಗಳೂರಿನ ಕತೆ ಹಾಗೂ ಪ್ರಸಂಗಗಳನ್ನು ‘ಜಯನಗರದ ಹುಡುಗಿ’ ಹೆಸರಿನಲ್ಲಿ ಬರೆದು ಖ್ಯಾತಿ ಪಡೆದ ‘ಮೇಘನಾ ಸುಧೀಂದ್ರ’ ಅವರು ‘Master of Science in Artificial Intelligence and Signal Processing’ ವಿಷಯದಲ್ಲಿ ಸ್ನಾತಕೋತ್ತರ ಪದವೀಧರರು. ಬಾರ್ಸಿಲೋನಾದಲ್ಲಿ ಉನ್ನತ ಶಿಕ್ಷಣ ಪಡೆದ ಇವರ ‘ಕಾಡಿನ ಮಾತು’ ಕತೆ ಇಲ್ಲಿದೆ.

“ಇವತ್ತು ಎಕ್ಸಿಕ್ಯುಟೀವ್ ಮೀಟಿಂಗ್ ಇದೆ, ಬೇಗ ಆಫೀಸಿಗೆ ತಲುಪು” ಎಂದು ಬಾಸ್ ಯುವಾನಿಗೆ ಹೇಳಿದಾಗ ಆಗಲೇ ಸಮಯ 9 ಘಂಟೆಯಾಗಿತ್ತು. “10 ಘಂಟೆಗೆ ಮೀಟಿಂಗ್ ಅಂದರೆ ಸೌತ್ ಬೆಂಗಳೂರಿನಿಂದ ಸಿಲ್ಕ್ ಬೋರ್ಡ್ ದಾಟೋಕೆ ಒಂದು 45 ನಿಮಿಷ ಆಗತ್ತೆ ಆಮೇಲೆ ಈಕೋ ಸ್ಪೇಸಿನಲ್ಲಿ ಪಾರ್ಕಿಂಗ್ ಸಿಕ್ಕು ಆಫೀಸಿನ ಒಳಗೆ ಹೋಗೋಕೆ ಮಿನಿಮಮ್ 1 ಘಂಟೆ ಆಗತ್ತೆ. ಈ ಬಾಸಿಂದು ಈ ನಡುವೆ ಜಾಸ್ತಿ ಆಗಿದೆ” ಎಂದು ಬೈದುಕೊಂಡೇ ಕಾರಿನ ಅಕ್ಸಲಿರೇಟರ್ ಒತ್ತಿದ್ದಳು. ನೆಮ್ಮದಿಯಾಗಿ ಒಂದು ದಿನ ಆಫೀಸಿಗೆ ಹೋಗೋದಕ್ಕೆ ಸಾಧ್ಯವಾಗುತ್ತಿಲ್ಲ ಈ ಹೊಸ ಬಾಸ್ ಬಂದಾಗಿನಿಂದ ಎಂದು ಗೊಣಗಿಕೊಂಡು “ಫ್ಲೇ ಎಸ್ ಪಿ ಬಿ ಸಾಂಗ್ಸ್” ಎಂದು ತನ್ನ ಸ್ಮಾರ್ಟ್ ಕಾರಿಗೆ ತಿಳಿಸಿ ಜಯದೇವ ಸಿಗ್ನಲ್ ಹತ್ತಿರದಿಂದಲೇ ನಿಂತಿದ್ದ ಕಾರುಗಳನ್ನ ಕಂಡು ನಿಟ್ಟುಸಿರು ಬಿಟ್ಟಳು. ಯುವಾನಿ ಏ ಐ ಇಂಜಿನಿಯರ್, ವಾಯ್ಸ್ ಬಾಟ್ಸ್ ಮಾಡೋದು ಇವಳ ಚಾಕಚಕ್ಯತೆ. ಚಿಕ್ಕವಳಿದ್ದಾಗ ಅಜ್ಜಿ, “ಕಲ್ಲನ್ನು ಮಾತಾಡಿಸುತ್ತಾಳೆ” ಎಂದು ಹೇಳಿದ್ದು ಈಗ ಮನುಷ್ಯರನ್ನಷ್ಟೇ ಅಲ್ಲ, ಮೆಷೀನುಗಳಿಗೂ ಮಾತು ಕಲಿಸುವ ಹುಮ್ಮಸ್ಸು ಹೊಂದಿದವಳು. ನ್ಯಾಚುರಲ್ ಲ್ಯಾಂಗ್ವೇಜ್ ಪ್ರಾಸೆಸ್ಸಿಂಗ್, ಡಿ ಎಸ್ ಪಿ ಎಂದೆಲ್ಲಾ ಏನೇನೋ ಉಪಯೋಗಿಸಿ ಅಂತೂ ಅಸಂಖ್ಯಾತ ಬಾಟ್ ಗಳು ಮತ್ತು ಸ್ಮಾರ್ಟ್ ಅಸಿಸ್ಟೆಂಟ್ ಬಿಲ್ಡ್ ಮಾಡಿದ್ದಾಳೆ. ಒಂದು ದೊಡ್ಡ ಬಹುರಾಷ್ಟೀಯ ಕಂಪೆನಿಯಲ್ಲಿ ತನ್ನ ಕೆಲಸದ ಅಲ್ಗಾರಿಥಮ್ಮಿನ ಪೇಟೆಂಟ್ ಪಡೆದವಳಾದ್ದರಿಂದ ರಿಸೆಷನ್ನು, ಫರ್ಲೋ ಯಾವುದು ಅವಳಿಗೆ ಅಪ್ಲೈ ಆಗೋದಿಲ್ಲ ಇವೆಲ್ಲದರ ಕಾರಣ ಆಫೀಸಿನ ಬಾಸುಗಳು ಕೆಲವೊಮ್ಮೆ ಅವಳಿಗೆ ಕಾಟ ಕೊಡುವ ಕೆಲಸ ಮಾಡುತ್ತಿರುತ್ತಾರೆ. ನಾರ್ತ್ ಇಂಡಿಯಾದಿಂದ ಬಂದ ಒಬ್ಬ ಹೊಸ ಬಾಸ್ ಈಗ ಕಾಟ ಕೊಡುವ ಹೊಸ ಮನುಷ್ಯ.

ಅಂತೂ 9.55ಕ್ಕೆ ಸರಿಯಾಗಿ ದಡ ದಡ ಮೀಟಿಂಗ್ ರೂಮಿಗೆ ದೌಡಾಯಿಸಿದಾಗ ಬಾಸ್ ಇರಲ್ಲಿಲ್ಲ. ಟೀಮ್ ಮೇಟ್ ಸಂದೀಪ್ ಕೂತಿದ್ದ. “ಯೂ ಲುಕ್ ಗಾರ್ಜಿಯಸ್” ಎಂದು ಎಂದಿನಂತೆ ಯುವಾನಿ ಜೊತೆ ಫ್ಲರ್ಟ್ ಮಾಡಲು ಪ್ರಯತ್ನಿಸಿದ, ಯಾವುದಕ್ಕೂ ಸೊಪ್ಪು ಹಾಕದೆ ಇವಳು, “ಆ ಬಾಸಿಗೇನ್ ಲೂಸಾ, 9ಘಂಟೆಗೆ ಹೇಳ್ತಾನೆ 10 ಘಂಟೆಗ ಬಾ ಅಂತ, ಹಿಂದಿನ ದಿವಸ ಹೇಳಿ ಸಾಯಕ್ಕೇನು” ಎಂದು ಉರ್ಕೊಂಡು ಮಾತಾಡೋವಾಗ, ಸಂದೀಪ ಮಾತ್ರ, “ಸೋ ಕ್ಯೂಟ್” ಎಂದು ನಗುತ್ತಿದ್ದ. ಘೋಷ್ ಬಂದ. “ಸೋ ಯುವಾನಿ ನೀನೆ ಇವತ್ತಿನ ಹೈಲೈಟ್, ನಿನ್ನ ಅಲ್ಗಾರಿಥಮ್ಮು ಹೊಸ ಭಾಷೆಗಳ ಮೇಲೆ ಪ್ರಯೋಗ ಮಾಡಲು ಒಂದು ಹೊಸ ಪ್ರಾಜೆಕ್ಟ್ ಬಂದಿದೆ. ಅಂಡಮಾನ್ ಮತ್ತು ನಿಕೋಬಾರ್ ಐಲ್ಯಾಂಡಿನಲ್ಲಿ ಇರುವ ಕಾಡಿನ ಜನಗಳ ಭಾಷೆಯಲ್ಲೂ ನಮ್ಮ ಅಸಿಸ್ಟೆಂಟ್ ಮಾತಾಡುವ ಹಾಗೆ ಮಾಡಬೇಕು, ಮಾಡಿದರೆ ಪ್ಯಾನ್ ಇಂಡಿಯಾ ಕವರೇಜ್ ಆಗುತ್ತದೆ” ಎಂದು ಕಿಸಕಿಸನೆ ನಕ್ಕ. ಅಂಡಮಾನಿಗೆ ಆಪ್ಟಿಕ್ ಫೈಬರ್ ಕೇಬಲ್ ಹೊಸದಾಗಿ ಹಾಕಿದ್ದು ನ್ಯೂಸಿನಲ್ಲಿ ನೋಡಿದ್ದ ಇವಳಿಗೆ, “ಎಲಾ ಇವರಾ ಆ ಜನ ಟೆಕ್ನಾಲಜಿ ಏನೂ ಇಲ್ಲದೆ ನೆಮ್ಮದಿಯಾಗಿದ್ದರು, ಆ ಜನರನ್ನ ಟೆಕ್ನಾಲಜಿಯ ದಾಸರನ್ನಾಗಿ ಮಾಡುವ ಹುನ್ನಾರ ಇವರದ್ದು” ಎಂದು ತಲೆ ಚೆಚ್ಚಿಕೊಂಡು, “ಅಲ್ಲಾ ನಾನು 6 ತಿಂಗಳಿಂದ ಕನ್ನಡವನ್ನ ನಮ್ಮ ಅಸಿಸ್ಟೆಂಟಿನಲ್ಲಿ ಕೊಡಬೇಕೆಂದು ಸಾವಿರ ಸಲ ಹೇಳಿದ್ದೇನೆ, ಇಂಟರ್ನೆಟ್ಟಿನಲ್ಲಿ ದೊಡ್ಡ ಸಮೀಕ್ಷೆಯೇ ಆಗುತ್ತಿದೆ. ನಮಗೆ ಮಾರ್ಕೆಟ್ಟು ಇಲ್ಲ ಅಂತೀರಾ ಅಲ್ಲಿ ಜನ ಅಂತರ್ಜಾಲವನ್ನೇ ಉಪಯೋಗಿಸುವುದಿಲ್ಲ ಅಲ್ಲಿ ಹೇಗೆ ನಿಮಗೆ ಮಾರ್ಕೆಟ್ ಬಂತು, ನಿಮ್ಮದು ಇನ್ನೇನೋ ಬೇರೆ ಇಂಟೆನ್ಶನ್ಸ್ ಇದೆ” ಎಂದು ಭರಭರನೆ ಮಾತಾಡುತ್ತಾ ಹೋದಳು.

ಘೋಷ್ ಸುಮ್ಮನೆ ನೋಡಿ, “ನಾವು ಭಾರತದಲ್ಲಿ ಜಾಸ್ತಿ ಯಾವ ಭಾಷೆ ಮಾತಾಡುತ್ತಾರೋ ಅದರ ಪ್ರಕಾರ ನಾವು ನಮ್ಮ ಅಸಿಸ್ಟೆಂಟಿಗೆ ಭಾಷೆಗಳನ್ನ ಚೂಸ್ ಮಾಡೋದು, ನೀನು ನಿನ್ನ ಒಣ ಭಾಷಾ ಪ್ರೇಮವನ್ನ ಇಲ್ಲಿ ತರಬೇಡ. ನನಗೆ ಸೋಮವಾರ ಬೆಳಗ್ಗೆ ಬೆಳಗ್ಗೆ ಜಗಳ ಆಡಲು ಇಷ್ಟ ಇಲ್ಲ, ನೀನು ಈ ಪ್ರಾಜೆಕ್ಟಿಗೆ ಯಾಕೋ ಮುಂಚೆಯೇ ಕಲ್ಲು ಹಾಕುತ್ತಿದ್ದೀಯ, ಮೀಟಿಂಗ್ ಆಗಲಿ” ಎಂದು ಹುಸಿಮುನಿಸಿಂದ ಮೀಟಿಂಗ್ ಚಾಲೂ ಮಾಡಿದ. ಅದೇ ಅದೇ ಕೃತಕ ಬುದ್ಧಿಮತ್ತೆಯಿಂದ ನಾವು ಜಗತ್ತನ್ನ ಚಿಕ್ಕದು ಮಾಡುತ್ತೇವೆ, ಎಲ್ಲರನ್ನೂ ಒಂದೇ ಸಂಪರ್ಕ ಸೇತುವೆಯಲ್ಲಿ ಇರಿಸುತ್ತೇವೆ ಅದೂ ಇದೂ ಎಂದು ಡೋಂಗಿ ಬಿಟ್ಟು ಮೀಟಿಂಗ್ ಮುಗಿಸಿದ ನಂತರ ಬಾಸ್ ಕರೆದು ಯುವಾನಿಗೆ, “ನಿನಗೆ ಈ ಪ್ರಾಜೆಕ್ಟಿಗಿಂತ ಮತ್ತೊಂದು ಪ್ರಾಜೆಕ್ಟ್ ಚೆನ್ನಾಗಿರತ್ತೆ, ಆಫ್ರಿಕಾಗೆ ಹೋಗಬೇಕಾಗಬಹುದು, ನಿನಗೆ ಸ್ವಲ್ಪ ಬ್ರೇಕ್ ಬೇಕು, ಲೋಕಲ್ ಇಷ್ಯೂಸಿನಲ್ಲಿ ಸಿಕ್ಕಿಹಾಕೊಂಡಿದ್ದೀಯ” ಎಂದು ನಕ್ಕು ಡೆಸ್ಕಿಗೆ ಕಳಿಸಿದ. ಈಮೇಲ್ ಓಪನ್ ಮಾಡುವಷ್ಟರಲ್ಲಿ ಆಫ್ರಿಕಾದ ಮ್ಯಾನೇಜರ್ ಚಾವ್ ಈಮೇಲ್ ಬರೆದಿದ್ದ. “ಹೊಸ ಪ್ರಾಜೆಕ್ಟಿಗೆ ನಿನ್ನ ಸಹಾಯ ಬೇಕು, ಇಲ್ಲೇ ಬಂದು ಮೂರು ನಾಲ್ಕು ತಿಂಗಳಿರಬೇಕು, ಹೇಗಿದ್ದರೂ ನಿನ್ನ ವೀಸಾಗೆ ತೊಂದರೆ ಇಲ್ಲ, ಘೋಷ್ ಹತ್ತಿರ ಮಾತಾಡಿದ್ದೀನಿ” ಎಂಬುದನ್ನು ಓದಿ ಘೋಷಿಗೆ ಚಳಿ ಬಿಡಿಸೋಣ ಎಂದು ಹೋಗುವಷ್ಟರಲ್ಲಿ, ಹೆಚ್ ಆರ್ ಸೋನಿಕಾ, ನಾಲ್ಕೈದು ಫಾರ್ಮ್ಗಳನ್ನ ಹಿಡಿದುಕೊಂಡು ಬಂದಿದ್ದಳು. “ಇದು ಸೆಲ್ಫ್ ಡೆಕ್ಲರೇಷನ್ ಫಾರ್ಮು, ಇದು ಲ್ಯಾಪ್ ಟಾಪ್ ತೆಗೆದುಕೊಂಡು ಹೋಗುವುದಕ್ಕೆ, ಇದು ವೋಚರ್, ಆಮೇಲೆ ಇದು ಹೆಲ್ತ್ ಚೆಕಪ್ಪಿಗೆ” ಎಂದು ಫೇಕ್ ಆಕ್ಸೆಂಟ್ ಇಂಗ್ಲೀಷಿನಲ್ಲಿ ಹೇಳೋದಕ್ಕೆ ಶುರು ಮಾಡಿದಳು. “ನಾನು ಹೋಗೋದಿಲ್ಲ, ನೀನು ಅದು ಹೇಗೆ ಅಂದುಕೊಂಡೆ” ಎಂದು ಸಿಟ್ಟಾಗಿ ಫಾರ್ಮನ್ನ ಅಲ್ಲೇ ಹರಿದು ಬಿಸಾಕಿ ತನ್ನ ಡೆಸ್ಕಿನ ಬಳಿ ಹೋದಳು. ಸಂದೀಪ ಕಾಫಿ ತಂದು ಕೊಟ್ಟ, “ಒಂದು ದೊಡ್ಡ ವ್ಯವಸ್ಥೆಯ ವಿರುದ್ಧ ಹೋದಾಗ ಹೀಗೆ ಆಗೋದು, ನಿನ್ನನ್ನ ಆದಷ್ಟು ಅವರಿಂದ ದೂರ ಇರಲು ಪ್ರಯತ್ನ ಮಾಡುತ್ತಾರೆ , ಇಲ್ಲ ನಿನ್ನನ್ನು ಇಲ್ಲಿಂದ ಕಳಿಸೇ ಬಿಡುತ್ತಾರೆ ನನ್ನ ಪ್ರಕಾರ ನೀನು ಅಷ್ಟು ಗಟ್ಟಿಯಾಗಿ ಮಾತಾಡಿದ್ದೇ ಅವರಿಗೆ ಇಷ್ಟವಾಗಲ್ಲಿಲ್ಲ, ನೀನು ಮೀಟಿಂಗ್ ಮುಗಿಸುವ ಒಳಗೇ ನನಗೆ ಸಂದೇಶ ಕಳಿಸಿ ಈ ಪ್ರಾಜೆಕ್ಟ್ ನೋಡಿಕೊಳ್ಳೋದಕ್ಕೆ ಹೇಳಿದ್ದಾರೆ , ಡಿಸೆಂಟಿಗೆ ಯಾವ ವ್ಯವಸ್ಥೆಯಲ್ಲೂ ಜಾಗವಿಲ್ಲ, ನೀನು ನಾನು ಹೇಳಿದಕ್ಕೆಲ್ಲಾ ಹೂ ಅನ್ನಬೇಕು ಇಲ್ಲ ಗಾಡಿ ಬಿಡಬೇಕು” ಎಂದು ಕೂಲಾಗಿ ಹೇಳಿ “ಹೇಗಿದ್ದರೂ ಆಫ್ರಿಕಾದಲ್ಲಿ ಒಂದು ಅರಾಮಾದ ರಜೆ ಕಳೆಯಬಹುದು, ಚಾವ್ ಘೋಷಿಗಿಂತ ಒಳ್ಳೆ ಮನುಷ್ಯ, ಆರಾಮಾಗಿ ಇರು” ಎಂದು ಸಂದೀಪ ಸ್ವಲ್ಪ ಬುದ್ಧಿ ಹೇಳಿ ಸೋನಿಕಾಳನ್ನ ಇವಳ ಡೆಸ್ಕಿಗೆ ಕರೆದ.

“3 ತಿಂಗಳು ಈ ಟ್ರಾಫಿಕ್ಕಿನಲ್ಲಿ ಓಡಾಡೋದಿರಲ್ಲ” ಎಂಬ ಒಂದೇ ಕಾರಣದಿಂದ ಫಾರ್ಮುಗಳಿಗೆ ಸಹಿ ಹಾಕಿ , ಮಿಕ್ಕ ಎಲ್ಲಾ ವಿಷಯಗಳನ್ನೂ ಆಫೀಸೇ ನೋಡಿಕೊಳ್ಳಬೇಕು ಎಂದು ಹೇಳಿ “ಬೌರಿಂಗ್ ಆಸ್ಪತ್ರೆಯಲ್ಲಿ ಎಲ್ಲೋ ಫೀವರ್ ಚುಚ್ಚುಮದ್ದು ಕೊಡುತ್ತಾರೆ ಅದನ್ನು ನೀವೇ ಅರೇಂಜ್ ಮಾಡಬೇಕು” ಎಂದು ಹೇಳಿ ಪೂಲ್ ಏರಿಯಾಗೆ ಹೋದಳು. ಅಲ್ಲಿ ಫೂಸ್ ಬಾಲ್ ಆಡುತ್ತಿದ್ದ ಮುದಿತ್ ಮತ್ತು ಚಿಂತನ್, “ಏನು ಆನ್ ಸೈಟಾ ಅದಿಕ್ಕೆ ಬೆಳಗ್ಗೆ ಬೆಳಗ್ಗೆ ಪೂಲ್ ಹತ್ತಿರ ಬಂದಿದ್ಯಾ, ಘೋಷ್ ಅದೇನೆ ಕೋಪ ಇಟ್ಟುಕೊಂಡಿರಲಿ ನಿನ್ನ ಮೇಲೆ ಪ್ಲೇನ್ ಹತ್ತಿಸೋದು ಮಾತ್ರ ನಿನ್ನನ್ನೇ, ನಮ್ಮನ್ನ ಕ್ರಾಶ್ ಟೆಸ್ಟ್ ಅಂತ ಬರಿ ಕಲ್ಕತ್ತಾಗೆ ಕಳಿಸುತ್ತಾನೆ” ಎಂದು ಬೈದುಕೊಂಡೇ ಗೋಲ್ ಹೊಡೆದ ಮುದಿತ್. “ಬಿಡು ಮುಂದೆ ಅಂಡಮಾನಿಗೆ ನಿನ್ನನ್ನ ಕಳಿಸುತ್ತಾನೆ, ಕಲ್ಕತ್ತಾಗಿಂತ ಎಷ್ಟೋ ವಾಸಿ” ಎಂದು ಯುವಾನಿ ನಕ್ಕಾಗ, “ಅಯ್ಯೋ ಅಲ್ಲಿ ಕಲ್ಕತ್ತಾಗಿಂತ ಜಾಸ್ತಿ ಬೆಂಗಾಲಿ ಅಡುಗೆ ಸಿಗತ್ತೆ, ಗೋವಿಂದ” ಎಂದು ನಕ್ಕು ಮೂರೂ ಜನ ಫೂಸ್ ಬಾಲ್ ಆಡುವಾಗಲೇ, ಸೋನಿಕಾ ಇಂಟರ್ಕಾಮಲ್ಲಿ ಪೂಲ್ ಏರಿಯಾಗೆ ಸಂದೇಶ ಕಳಿಸಿದಳು. “ಬೌರಿಂಗ್ ಆಸ್ಪತ್ರೆಗೆ ಈ ಕೂಡಲೇ ಹೊರಡಬಹುದು, ಚುಚ್ಚುಮದ್ದಿನ ನಂತರ ಕೈ ನೋಯುವುದರಿಂದ ಕ್ಯಾಬ್ ಏರ್ಪಾಡು ಮಾಡಲಾಗಿದೆ, ಹೋಗಿ ಬಾ” ಎಂದು ಹೇಳಿದಳು.

ಬೌರಿಂಗ್ ಆಸ್ಪತ್ರೆಯ ಒಂದು ಮೂಲೆಯಲ್ಲಿ “ಯೆಲ್ಲೋ ಫೀವರಿಗೆ ದಾರಿ” ಎಂದು ಬರೆದಿತ್ತು. ಒಳಗೆ ಹೋದರೆ ಯೆಲ್ಲೋ ಫೀವರ್ ಬರುತ್ತದಾ ಎಂದು ತನಗೆ ತಾನೆ ನಕ್ಕು ಒಳಗೆ ಹೋದರೆ ಒಳಗಡೆ ಯಾರೂ ಇಲ್ಲ. “ಓಹ್ ಇಡೀ ದಿನ ಇಲ್ಲೇ ಕಳೆಯಬೇಕು, ಈ ಸೋನಿಕಾಗೆ ಒಂದು ಚೂರು ಮನುಷ್ಯತ್ವ ಇಲ್ಲ” ಎಂದು ಬೈದುಕೊಂಡು ಅಲ್ಲೇ ಸ್ಟೂಲಿನ ಮೇಲೆ ಕೂತಳು. 3 ವರ್ಷದ ಹಿಂದೆ ಬಂದಾಗ ಇದ್ದ ಆಸ್ಪತ್ರೆಗಿಂತ ಈ ವರ್ಷ ಬಹಳ ಬದಲಾಗಿತ್ತು. “ಡಾಕ್ಟ್ರು ಬಂದ್ರು” ಎಂದು ದಾದಿ ಹೇಳಿದಾಗಲೇ ಯುವಾನಿಗೆ ಓಲ್ಡ್ ಸ್ಪೈಸ್ ಎಂಬ ಘಮ್ಮೆನುವ ಸೆಂಟಿನ ವಾಸನೆ ಮೂಗಿಗೆ ಬಡಿದ್ದಿದ್ದು. ಒಳಗೆ ಹೋಗಿ ನೋಡಿದರೆ, ಬಿಳಿ ಕೋಟಿನಲ್ಲಿ ಎಡಕ್ಕೆ ಬೈತಲೆ ತೆಗೆದುಕೊಂಡು ಕೂತಿದ್ದ ಜಯವರ್ಧನ. ಇಬ್ಬರಿಗೂ ಮಾತು ಹೊರಡಲ್ಲಿಲ್ಲ, 3 ವರ್ಷದ ಹಿಂದೆ ಚಾಮರಾಜಪೇಟೆಯ ಸಾಹಿತ್ಯ ಪರಿಷತ್ತಿನ ಮುಂದಿರುವ ಚಾಟ್ಸ್ ಗಾಡಿಯ ಮುಂದೆ ಸಿಕ್ಕಾಪಟ್ಟೆ ಜಗಳ ಮಾಡಿ ಯುವಾನಿ ಅತ್ತು ಬೇರೆಯಾಗಿದ್ದು ಇಬ್ಬರಿಗೂ ಮಾಸದ ಗಾಯ. ಅದಾದ ನಂತರ ಮತ್ತೆ ಯಾವ ಸಂಬಂಧಗಳನ್ನೂ ಅವರಿಗೆ ಬೇಕಾಗಿರಲ್ಲಿಲ್ಲ. ನರ್ಸ್ ಬಂದು, “ನಾ ಕೊಡ್ಲಾ ಸರ್” ಎಂದಾಗ ವರ್ಧನ “ಬೇಡ ನಾ ನೋಡ್ಕೋತೀನಿ ನೀವು ಆಚೆ ಇರಿ” ಎಂದು ಹೇಳಿ ಯುವಾನಿ ಮುಂದೆಯೇ ಸ್ಟೂಲ್ ಹಾಕಿಕೊಂಡು ಕೂತ, 3 ವರ್ಷದ ಹಿಂದೆ ಹೀಗೆ ಇಬ್ಬರೇ ಎದುರು ಬದುರು ಕೂತುಕೊಂಡಿದ್ದರೆ ಮಾತು ಗೀತ ಬೇರೆಯದ್ದಾಗಿತ್ತು ಆದರೆ ಈಗ ಅವನು ಡಾಕ್ಟರು ಇವಳು ಪೇಷೆಂಟ್. ಅವನೇ ಅವಳ ಸ್ಲೀವ್ಸನ್ನ ರೋಲ್ ಮಾಡಿ ತುಂಬಾ ಮುತುವರ್ಜಿಯಿಂದ ಚುಚ್ಚುಮದ್ದು ಕೊಟ್ಟ, “ನೋವಾಯ್ತಾ?” ಎಂದು ಕೇಳುವಾಗ ಅವಳ ಕಣ್ಣಲ್ಲಿ ಧಾರಾಕಾರ ನೀರು, ತನ್ನ ಕರವಸ್ತ್ರವನ್ನೇ ಕೊಟ್ಟು ಅವಳ ಫಾರ್ಮನ್ನು ಸಹಿ ಮಾಡಲು ತೆಗೆದುಕೊಂಡ. ಅವಳ ಹೆಸರು, ಫೋನ್ ನಂಬರ್, ಪಾಸ್ ಪೋರ್ಟ್ ನಂಬರ್, ಮನೆ ವಿಳಾಸ ಎಲ್ಲವೂ ಅಚ್ಚೊತ್ತಿದ ಹಾಗೆ ಅವನ ತಲೆಯಲ್ಲಿತ್ತು ಎಲ್ಲವನ್ನು ಬರೆದು ಕಡೆಗೆ ಒಂದು ಸಹಿ ಹಾಕಿ “ಮುಗೀತು” ಎಂದು ಕೊಟ್ಟು ಸ್ಟೂಲಿಂದ ಎದ್ದ. ಸರಿಯಾದ ಮುಕ್ತಾಯ ಇರದ ಕಥೆಗಳು ಹೇಗೆ ತಲೆಯಲ್ಲಿ ಕೊರೆಯುತ್ತದೆಯೋ ಹಾಗೆ ಯುವಾನಿಗೂ ಮನಸಲ್ಲಿ ಏನೋ ಓಡುತ್ತಿತ್ತು. ವರ್ಧನನೇ, “ನನ್ನದು ಡ್ಯೂಟಿ ಆಯಿತು, ಬಿಡುವಿದ್ದರೆ ಕಾಫಿ ಕುಡಿಯಬಹುದು ಕ್ಯಾಂಟೀನಿನಲ್ಲಿ” ಎಂದಾಗ ಮೊದಲಬಾರಿ ಅವನು ಕಾಫಿ ಕರೆದಾಗ ಆದ ಸಂತೋಷವೇ ಆಯಿತು. “ಹೂಂ” ಎಂದು ಅವನ್ನನ್ನೇ ಹಿಂಬಾಲಿಸಿದಳು.

ಒಂದು ಅಗಾಧ ಮೌನ ಇಬ್ಬರಲ್ಲೂ ಆವರಿಸಿತ್ತು. ಒಂದು ಸ್ಟ್ರೆಚರ್ ಅಚಾನಕ್ಕಾಗಿ ಜಾರಿಕೊಂಡು ಬರುವಾಗ ಜಯವರ್ಧನ ಯುವಾನಿಯ ಕೈ ಹಿಡಿದು ಪಕ್ಕಕ್ಕೆ ಎಳೆದುಕೊಂಡ. “ನಾನು ಆಫ್ರಿಕಾಗೆ ಹೋದಂಗೆ, ಇಲ್ಲೇ ಸಿಕ್ಕಿಹಾಕಿಕೊಳ್ಳೋಥರ ಇದೆ” ಎಂದು ಚಕ್ಕನೆ ಕೈ ಎಳೆದುಕೊಂಡು, “ನಂಗೆ ಆಫೀಸಿಗೆ ಹೊತ್ತಾಗುತ್ತದೆ ನಾನು 2 3 ದಿವಸದಲ್ಲೇ ಹೊರಡಬೇಕು ಮತ್ತೊಮ್ಮೆ ಕಾಫಿಗೆ ಸಿಗೋಣ” ಎಂದು ಕೈಬಿಡಿಸಿಕೊಂಡು ಹೋಗಲು ಯತ್ನಿಸಿದಳು, “ಮತ್ತೆ ಆಫ್ರಿಕಾಗೆ ಹೋಗೋವಾಗ ಬಂದರೆ ತುಂಬಾ ತಡವಾಗುತ್ತದೆ , 10 ನಿಮಿಷ” ಎಂದಾಗಲೇ ಯುವಾನಿಗೆ ಇದು ಯಾಕೋ ಉಲ್ಟಾ ಹೊಡೆಯುತ್ತದೆ ಎಂದು ಗೊತ್ತಾಗಿ ತಪ್ಪಿಸಿಕೊಂಡು ಬಂದಳು. ಮತ್ತೆ ಅವನ ಜೊತೆ ಕಾಫಿ ಕುಡಿದು ಮತ್ತೆ ಅವನ್ನನ್ನ ಬಿಟ್ಟು ಬರದೇ ಆಗಿ ಮತ್ತೆ ಪ್ರೀತಿಯಾಗಿ ಮತ್ತೆ ಅದೇ ಸೈಕಲ್ ಹೊಡೆಯೋದು ಅವಳಿಗೆ ಇಷ್ಟವಾಗಲ್ಲಿಲ್ಲ. ಕ್ಯಾಬ್ ಹತ್ತಿ ಹೊರಟು ಹೋದಳು.

ಒಂದೆರೆಡು ದಿವಸದ ನಂತರ ಆಫ್ರಿಕಾಗೆ ಫ್ಲೈಟ್ ಹತ್ತಿ ಕೇಪ್ ಟೌನಿಗೆ ಬಂದಿಳಿದಳು. ಒಂದು ದಿನದ ಜೆಟ್ ಲ್ಯಾಗ್ ನಿದ್ದೆಯ ನಂತರ ಚಾವ್ ಲ್ಯಾಪ್ ಟಾಪ್ ಹಿಡಿದು ಪ್ರಾಜೆಕ್ಟ್ ವಿವರಿಸಲು ಕೂತ, “ನೋಡು ಇದು ಬಹಳ ಆಸಕ್ತಿದಾಯಕವಾದ ಒಂದು ಪ್ರಾಜೆಕ್ಟ್, ಇದರಿಂದ ನಮ್ಮ ಸಮಾಜಕ್ಕೆ ಒಳ್ಳೆಯದಾಗುತ್ತದೆ” ಎಂದು ಶುರು ಮಾಡಿದ. ಐಟಿಯ ಪ್ರತಿಯೊಂದು ಪ್ರಾಜೆಕ್ಟು ಹೀಗೆ ಶುರುವಾಗೋದು, ಕೆಲವೊಮ್ಮೆ ಈ ಪ್ರಾಜೆಕ್ತಿನಲ್ಲಿ ಬರುವ ಲಾಭದ 1 ಪ್ರತಿಶತವನ್ನ ಒಂದು ಸರ್ಕಾರಿ ಆಸ್ಪತ್ರ್ಗೆಗೆ ಅಥವಾ ಸರ್ಕಾರಿ ಶಾಲೆಗೆ ದಾನ ಕೊಟ್ಟು ಅದರ ಫೋಟೋ ಎಲ್ಲಾದರೂ ಹಾಕಿ “ಸಮಾಜದ ಉದ್ಧಾರ ಮಾಡಿದೆವು” ಎಂದು ಹೇಳಿಕೊಳ್ಳುವುದು ಅಭ್ಯಾಸ. ದೊಡ್ಡ ದೊಡ್ಡ ಬಹುರಾಷ್ತ್ರೀಯ ಕಂಪೆನಿಗಳು ಮತ್ತೆ ಇಲ್ಲಿ ಆಫ್ರಿಕಾದಲ್ಲಿ ಇನ್ನೇನು ಗಲಾಟೆ ಎಬ್ಬಿಸೋದಕ್ಕೆ ಬಂದಿದ್ದಾರೆ ಎಂಬ ಸಿನಿಕತನದಲ್ಲೇ ಪ್ರಾಜೆಕ್ಟಿನ ಬಗ್ಗೆ ನೋಡೋಕೆ ಹೋದಳು. “ಸಿರಿಯಸ್ ಬಿ ಎಂಬ ನಕ್ಷತ್ರ ಇದೆ. ಅದರ ಬಗ್ಗೆ ನಿಂಗೇನು ಗೊತ್ತು” ಎಂದು ಕೇಳಿದ ಚಾನ್. “ಇಲ್ಲಿ ಎನ್ ಎಲ್ ಪಿ ಮಾಡಬೇಕಾಗಿರೋದು, ಅವರ ಭಾಷೆಯ ಡೇಟಾ ಸೆಟ್ ಕೊಟ್ಟು ಪುಣ್ಯ ಕಟ್ಟಿಕೋ ಸಾಕು ಈ ಅಸ್ಟ್ರಾನಮಿ ಕ್ಲಾಸ್ ನನಗೆ ಬೇಡ” ಎಂದು ಖಾರವಾಗಿ ಹೇಳಿದಳು.

“ನೋ ಯುವಾನಿ, ಒಂದು ಹಿನ್ನೆಲೆ ಕಥೆ ತಿಳಿದುಕೊಳ್ಳದೇ ನೀನು ಇದನ್ನ ಶುರು ಮಾಡೋದಕ್ಕೆ ಆಗೋದಿಲ್ಲ” ಎಂದು ಕಥೆ ಶುರು ಮಾಡಿದ. “ಡೊಗಾನ್ ಎಂಬ ಒಂದು ಜನಾಂಗ ಇದೆ. ಇವರು ಮಾಲಿಯಲ್ಲಿರುತ್ತಾರೆ, ಇವರ ಭಾಷೆಯ ಹೆಸರೂ ಡೊಗಾನ್ ಅಂತಲೇ ಆದರೆ 5 6 ಉಪಭಾಷೆಗಳಿವೆ. ನಮಗೆ 2 ಉಪಭಾಷೆಯ ಡೇಟಾ ಸೆಟ್ ಸಿಕ್ಕಿದೆ ಆದರೆ ಮಿಕ್ಕ ಮೂರು ಉಪಭಾಷೆಯದ್ದು ಸಿಕ್ಕಿಲ್ಲ ಸಿಗದ್ದಿದ್ದ ಉಪಭಾಷೆಯಲ್ಲಿ ಒಂದಷ್ಟು ಸತ್ಯಗಳು ಅಡಗಿವೆ, ಅದನ್ನ ನಾವು ಹೊರತೆಗೆಯಬೇಕು” ಎಂದು ಹೇಳಿದಾಗ, “ಇದ್ಯಾಕೋ ಗಣೇಶಯ್ಯನವರ ಕಾದಂಬರಿಯ ಹಾಗೆ ಕಥೆ ನಡೆಯುತ್ತಿದೆ, ಕಾಡಿನವರನ್ನು ಇವರು ಯಾವುದೋ ರಹಸ್ಯಕ್ಕೆ ಕೊಂದು ಗಿಂದು ಏನಾದರೂ ಮಾಡುತ್ತಾರೆ” ಎಂದು ಭಯವಾಗಿ, “ನಾ ಕಾಡಿನವರ ಹತ್ತಿರ ಎಲ್ಲಾ ಹೋಗಿ ಮಾತಾಡಲ್ಲ, ನಾ ಹೋಟೆಲ್ಲನ್ನು ಬಿಟ್ಟು ಬರಲ್ಲ ನನಗೆ ಸುಮ್ಮನೆ ಡೇಟಾ ಸೆಟ್ ಕೊಡಿ, ಟ್ರೈನ್ ಮಾಡುತ್ತೇನೆ, ವಾಯ್ಸ್ ಆಮೇಲೆ ನೋಡೋಣ” ಎಂದು ಬಡ ಬಡ ಹೇಳಲು ಶುರುಮಾಡಿದಳು. ಚಾನ್ ಮಾತ್ರ , “ಅಯ್ಯೋ ಅದು ಪ್ರಾಜೆಕ್ಟ್ ಅಲ್ಲವೇ ಅಲ್ಲ, ವಿಷಯ ಇರೋದು ಇದರಲ್ಲಿ, ಡೊಗಾನ್ ಜನರು ಸಿರಿಯಸ್ ಅನ್ನುವ ನಕ್ಷತ್ರದಲ್ಲಿ ವಾಸಿಸುವ ಏಲಿಯನ್ ಗಳ ಸಂತತಿ ಎಂದು ನಂಬುತ್ತಾರೆ ಸಿರಿಯಸ್ ಬಿ ನಕ್ಷತ್ರ 1950ರಲ್ಲಿ ನಮ್ಮ ಅಸ್ಟ್ರಾನಮರ್ಸಿಗೆ ಕಂಡಿದ್ದು ಅಥವಾ ಅದರ ಬಗ್ಗೆ ಗೊತ್ತಾದ್ದದ್ದು ಆದರೆ ಇವರಿಗೆ ತಲತಲಾಂತರದಿಂದ ಇದು ಅವರಿಗೆ ಗೊತ್ತಿದೆ ಅಲ್ಲಿರುವ ಏಲಿಯನ್ ಗಳ ಹತ್ತಿರ ಮಾತೂ ಆಡುತ್ತಾರಂತೆ, 60 ವರ್ಷಗಳಿಗೊಮ್ಮೆ ಸಿರಿಯಸ್ ಬಿ ನಕ್ಷತ್ರ ಬರಿಗಣ್ಣಿಗೆ ಎರಡು ಬೆಟ್ಟಗಳ ಮಧ್ಯ ಕಾಣುತ್ತದೆ ಆಗ ತರುಣರು ಒಬ್ಬೊಬ್ಬರೆ ಎಲ್ಲೋ ಹೋಗಿ ವಾಸಿಸುತ್ತಾರೆ ಆ ಸಮಯದಲ್ಲೊಂದು ಉಪಭಾಷೆ ಮಾತಾಡುತ್ತಾರೆ ಅದನ್ನ ಡಿಕೋಡ್ ಮಾಡೋದಕ್ಕೆ ಮತ್ತು ಅದನ್ನು ನಮ್ಮ ಅಸಿಸ್ಟೆಂಟಿಗೆ ಅಳವಡಿಸಿದ್ದರೆ ಅಕಸ್ಮಾತ್ ಅವರು ಏಲಿಯನ್ ಗಳ ಸಂಪರ್ಕ ಮಾಡುತ್ತಿದ್ದರೆ ನಮಗೆ ಅದು ಗೊತ್ತಾಗಬೇಕು, ಅದು ಹೊಸ ಆವಿಷ್ಕಾರಕ್ಕೆ ದಾರಿಯಾಗುತ್ತದೆ” ಎಂದು ಒಂದೇ ಉಸಿರಿನಲ್ಲಿ ಮ್ಯಾನೇಜರ್ ಹೇಳಿದ.

ನಿಟ್ಟುಸಿರು ಬಿಟ್ಟ ಯುವಾನಿ, “ಅವರ ಜೀವನದಲ್ಲಿ ಈ ಟೆಕ್ನಾಲಜಿಗೆ ಜಾಗವೇ ಇಲ್ಲ ಹೀಗಿದ್ದಾಗ ಅವರನ್ನ ಯಾಕೆ ಇಲ್ಲಿ ಎಳೆದು ತರಬೇಕು, ಆಗೋದಿಲ್ಲ ನನಗೆ ಇದೆಲ್ಲಾ ಮಾಡೋದಕ್ಕೆ, ಅವರು ಈ ಟೆಕ್ನಾಲಜಿ ಇಲ್ಲದೇ ಏನೂ ಕಳೆದುಕೊಂಡಿಲ್ಲ, ನೆಮ್ಮದಿಯಾಗೇ ಇದ್ದಾರೆ ಸುಮ್ಮನಿರಿ” ಎಂದು ಹೇಳುವಷ್ಟರಲ್ಲಿ ಒಂದು ಬೆಡ್ ಷೀಟಿನ ಡಿಸೈನ್ ಇರುವ ಬಟ್ಟೆ ಹಾಕಿಕೊಂಡು ಹೋಗಾನ್ ಅನ್ನುವ ಹೆಸರಿನ ಒಬ್ಬ ಮನುಷ್ಯ ಬಂದ. ಚಾನ್, “ಇವನು ಡೊಗಾನ್ ಜನರ ಒಬ್ಬ ದೊಡ್ಡ ತಲೆ, ನಿನ್ನ ಹತ್ತಿರ ಮಾತಾಡೋಕೆ ಬಂದಿದ್ದಾನೆ” ಎಂದು ಪರಿಚಯ ಮಾಡಿಸಿದ. “ನೋಡಿ ಸರ್ ನಾನು ನಿಮ್ಮ ರಹಸ್ಯ ಎಲ್ಲಾ ಬೇಧಿಸೋ ಕೆಲ್ಸಾ ಮಾಡಲ್ಲ, ನಮ್ ಭಾಷೇನೆ ಇನ್ನೂ ಅಸಿಸ್ಟೆಂಟಲ್ಲಿ ಬಂದಿಲ್ಲ, ಆಯ್ತಲ್ಲ” ಎಂದು ಬಡ ಬಡ ಹೇಳಲು ಶುರು ಮಾಡಿದಳು, ಹೋಗಾನ್ ಸ್ವಚ್ಚ ಇಂಗ್ಲೀಷಿನಲ್ಲಿ, “ಇಲ್ಲ ನಮಗೆ ಈ ಭಾಷೆ ಅಸಿಸ್ಟೆಂಟಲ್ಲಿ ಬೇಕಿರೋದು ನಮ್ಮ ಮುಂದಿನ ಪೀಳಿಗೆಯ ಉಪಯೋಗಕ್ಕೆ, ಸರ್ಕಾರ ಹೊಸ ಯೋಜನೆಯಲ್ಲಿ ನಮ್ಮ ಮಕ್ಕಳಿಗೆ ನಿಮ್ಮ ಥರದ ಶಾಲೆ, ಸವಲತ್ತುಗಳನ್ನ ಕೊಡುತ್ತಿದೆ. ಆದರೆ ಸವಲತ್ತುಗಳೆಲ್ಲಾ ಇಂಗ್ಲೀಷಿನಲ್ಲಿದೆ. ಮಕ್ಕಳು ಓದಿ ಕೇಪ್ ಟೌನಿಗೆ ಅಥವಾ ಅಮೇರಿಕಾಗೆ ಹಾರುವ ತಯಾರಿಯಲ್ಲಿದ್ದಾರೆ ಹೊರತಾಗಿ ಅವರಿಗೆ ಇಲ್ಲೇ ಇರಬೇಕೆಂಬ ಆಸೆಯಿಲ್ಲ, ಅದು ನಾವು ಇರಬೇಕೆಂದು ಹೇಳುವುದು ಸರಿಯಲ್ಲ, ಸಿಟಿಯ ಸವಲತ್ತುಗಳು ಮತ್ತು ಸುಲಭ ಜೀವನ ಅವರನ್ನ ಇಲ್ಲಿಂದ ಆಚೆಗೆ ಕಳಿಸಿದೆ. ನನ್ನ ಮೊಮ್ಮಗಳ ಹತ್ತಿರ ನಾನು ನನ್ನ ಭಾಷೆಯಲ್ಲಿ ಮಾತಾಡಬೇಕು ಆದರೆ ಅವಳು ದಿನನಿತ್ಯ ನನಗೆ ಕರೆ ಮಾಡೋದಕ್ಕೆ ಸ್ವಲ್ಪ ಕಷ್ಟ, ನಮಗೆ ಸರಿಯಾದ ನೆಟ್ವರ್ಕ್ ಸಿಗುವುದಿಲ್ಲ. ಹೀಗಿದ್ದಾಗ ನಿಮ್ಮ ರೊಬಾಟ್ ನಮ್ಮ ಭಾಷೆಯನ್ನ ಅವರಿಗೆ ಕಲಿಸಿದರೆ ಆ ಮೊಮ್ಮಗಳು ನನ್ನನ್ನ ಚೆನ್ನಾಗಿ ಮಾತಾಡಿಸುತ್ತಾಳಲ್ಲವಾ" ಎಂದು ತಾತನ ಸಹೃದಯ ಮಾತು ಕೇಳಿ ಯುವಾನಿಯ ಮನಸ್ಸು ಕರಗಿತು.

“ಚಾನ್ ನಾನು ಇದನ್ನ ಮಾಡುತ್ತೇನೆ, ಆದರೆ ನನಗೆ ಬೇರೆಯವರು ತಲೆ ಹಾಕೋದು ಇಷ್ಟ ಇಲ್ಲ, ಪ್ರಾಜೆಕ್ಟಿನ ಕಡೆಯಲ್ಲಿ ರಿಪೋರ್ಟ್ ಸಬ್ಮಿಟ್ ಮಾಡುತ್ತೇನೆ, ಡೇಟಾ ಬೇಸ್ ಮತ್ತು ಐಪಿ ನನ್ನದೇ, ಇದಷ್ಟು ನನ್ನ ಷರತ್ತುಗಳು ಒಪ್ಪಿಗೆಯಾದರೇ ಸರಿ ಇಲ್ಲದಿದ್ದರೆ ಈ ಭಾಷೆ ನಮ್ಮ ಅಸಿಸ್ಟೇಂಟಿನಲ್ಲಿ ಬರೋದಿಲ್ಲ” ಎಂದು ತಕ್ಷಣ ಈಮೇಲ್ ಬರೆದು ಇದು ಒಪ್ಪಿದ ಮೇಲೆ ಕೆಲಸ ಶುರು ಮಾಡುತ್ತೇನೆ ಎಂದು ಬರೆದಳು. ಲಿಖಿತ ಒಪ್ಪಿಗೆಯ ನಂತರ, ಹೋಗಾನ್ ಹತ್ತಿರ ಮಾತಾಡುತ್ತಾ, ಒಂದಷ್ಟು ದೇಟಾ ಸೆಟ್ಟುಗಳನ್ನ ಪ್ರಿಪೇರ್ ಮಾಡಿದಳು. ಅವರ ಅಕ್ಷರಗಳು, ಉಚ್ಚಾರಣೆ, ಇನ್ನೊಂದಷ್ಟು ವಾಕ್ಯಗಳು ಎಲ್ಲವೂ ಇದರಲ್ಲಿ ಇದ್ದವು. ಒಂದು 2 - 3 ತಿಂಗಳು ಹೋಗಾನ್ ಹತ್ತಿರ ಮತ್ತು ಹೋಗಾನಿನ ಟ್ರೈಬಿನ ಹತ್ತಿರದ ಮಾತಿನ ಫಲಶೃತಿ ಒಂದಷ್ಟು ಮಾತುಗಳು ಅಸಿಸ್ಟೆಂಟಿಗೆ ಬಂದವು. ಒಂದು ಒಳ್ಳೆಯ ಟೆಸ್ಟಾಗಿ ಹೋಗಾನ್‌ನ ಮೊಮ್ಮಗಳನ್ನೇ ಆಯ್ದುಕೊಂಡು ಎಲ್ಲೆಲ್ಲಿ ಮಾರ್ಪಾಡು ಮಾಡಬೇಕೋ ಅದನ್ನ ಮಾಡಿ ಚೆಂದವಾಗಿ ಅವರ ಹಬ್ಬದ ದಿವಸ ಕೊಡಲಾಯಿತು. ಇನ್ನು ಇಲ್ಲಿ ಬೆಂಗಳೂರಿನ ಘೋಷ್, ಆಫ್ರಿಕಾದ ಚಾನ್ ಮತ್ತು ಅಮೇರಿಕಾದ ಪಾಲ್ ಗೆ ಸಿರಿಯಸ್ ಸಿ ನ ದಾರಿ ಹೇಳೇ ಹೇಳುತ್ತದೆ ಎಂದು ನಂಬಿ ಕೂತೇ ಇದ್ದರು. ಯುವಾನಿಯ ತನ್ನ ಬಾಸಿಗೊಂದು ಮಿಂಚಂಚೆ ಬರೆದಳು, “ನಾನು ಕೆಲಸ ಮಾಡುವುದು ಕೃತಕ ಬುದ್ದಿಮತ್ತೆಯಲ್ಲಿ, ನಿಮ್ಮ ಕೆಲಸಗಳು ಕೃತಕ, ನನ್ನದು ಬುದ್ದಿಮತ್ತೆ, ಈ ಸಹಾಯಕಿಗೆ ನಾನು ಮಾಲಿಯ ಭಾಷೆ ಕಲಿಸಿದ್ದೇನೆ, ಆದರೆ ಅದು ನೀವು ಕೇಳಿದಕ್ಕೆ ಮಾತ್ರ ಉತರ ಕೊಡುತ್ತದೆ ನಂತರ ಸಿರಿಯಸ್ ಅಂದಾಗಲ್ಲೆಲ್ಲಾ ಅದು ಫೆಡರಲ್ ಏಜೆನ್ಸಿಗೆ ಈ ಕದ್ದಾಲಿಕೆಯ ವಿಷಯ ತಲುಪಿಸಿ ಅವರ ವೈಯುಕ್ತಿಕ ಸ್ವಾತಂತ್ರ ಹರಣಕ್ಕೆ ಪ್ರಯತ್ನ ಪಟ್ಟಿರುತ್ತೀರಿ ಎಂಬ ದೊಡ್ಡ ಗಲಾಟೆಯಾಗುತ್ತದೆ ಹುಷಾರು” ಎಂದು ಬರೆದು ಮಾಲಿಯ ಕಾಡಿಗೆ ಹೋದಳು.

ಚಾನ್ ಅವಳ ಕಡೆಯ ಸಿಗ್ನಲ್ ಹುಡುಕಿಕೊಂಡು ಮಾಲಿಯ ಕಾಡಿಗೆ ಬಂದ, “ಎಲ್ಲಿ ಯುವಾನಿ ಎಲ್ಲಿ” ಎಂದು ವಿಪರೀತ ಗಲಾಟೆ ಮಾಡಲು ಶುರು ಮಾಡಿದ, ಹೋಗಾನ್ ಒಂದು ಗುಹೆಗೆ ಕರೆದುಕೊಂಡು ಹೋಗಿ ಒಂದು ದೊಡ್ಡ ಮುಖವಾಡ ಹೊತ್ತ ವಿಗ್ರಹವನ್ನ ತೋರಿಸಿದ, “ಅಮ್ಮ” ಎಂದ. ಅಮ್ಮ ಡೋಗಾನ್ ಜನರ ಸೃಷ್ಟಿಕರ್ತೆ, ಆಕೆಯಿಂದಲೆ ಸರ್ವ ಸಮಸ್ತವೂ ಎಂದು ಅವರ ನಂಬಿಕೆ. “ಯುವಾನಿ ಎಲ್ಲಿ, ಯುವಾನಿ ಎಲ್ಲಿ” ಎಂದು ಕಿರುಚಾಡಿದಾಗಲೂ, ಡೋಗಾನ್ ಅಂದಿದ್ದು ಒಂದೆ, “ಅಮ್ಮ ಅಮ್ಮ ಅಮ್ಮ “ ಎಂದು….

ಕಲಾಕೃತಿ : ಕಂದನ್

ಮೇಘನಾ ಸುಧೀಂದ್ರ

ಜಯನಗರದ ಹುಡುಗಿ ಎಂದೇ ಖ್ಯಾತರಾದ ಮೇಘಾನರವರು ಬಾರ್ಸಿಲೋನಾದಲ್ಲಿ ಏಐ ವಿಷಯದಲ್ಲಿ ಪರಿಣಿತಿ ಪಡೆದು ಈಗ ಬೆಂಗಳೂರಿನ ಒಂದು ಖಾಸಗಿ ಸಂಸ್ಥೆಯಲ್ಲಿ ಏ ಐ(ಕೃತಕ ಬುದ್ಢಿಮತ್ತೆ) ಗುಂಪಿನ ಟೀಮ್ ಲೀಡ್ ಆಗಿ ಕೆಲಸ ಮಾಡುತ್ತಿದ್ದಾರೆ. 2019ರಲ್ಲಿ ನಡೆದ ವಿಜಯ ಕರ್ನಾಟಕದ ಯುಗಾದಿ ಕಥಾ ಸ್ಪರ್ಧೆಯಲ್ಲಿ ಮೂರನೇ ಬಹುಮಾನ ವಿಜೇತರು. ಜಯನಗರದ ಹುಡುಗಿ, ಲಿಪಿಯ ಪತ್ರಗಳು #AI ಕಥೆಗಳು,ಬೆಂಗಳೂರು ಕಲರ್ಸ್ , ಪ್ರೀತಿ ಗೀತಿ ಇತ್ಯಾದಿ ಇವರ ಪ್ರಕಟಿತ ಪುಸ್ತಕಗಳು. ಕನ್ನಡಗೊತ್ತಿಲ್ಲ ಸಂಸ್ಥೆಯಲ್ಲಿ ಕನ್ನಡೇತರರಿಗೆ ಕನ್ನಡ ಕಲಿಸುವ ಕಾಯಕದಲ್ಲಿ 6 ವರ್ಷದಿಂದ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. 
ಹೊಸ ಪೀಳಿಗೆಯ ಕಥೆಗಳು ಬರೆಯುವುದು ಇವರ ಅಭ್ಯಾಸ. ಚಾರಣ ಮತ್ತು ಕರ್ನಾಟಕ ಶಾಸ್ತ್ರೀಯ  ಸಂಗೀತ ಇವರ ಆಸಕ್ತಿ.

More About Author