Poem

ಜೋಡಿ ಕೊಲೆಯ ಬಳಿಕ

ಆಡಿದ ಮಾತುಗಳು
ಬಣಗುಡುತ್ತಿರುವಾಗ
ಆಡದೇ ಉಳಿದವು
ಸದ್ದಿರದೇ ತುಟಿಗಳ
ದಿಡ್ಡಿಬಾಗಿಲ ಜಿಗಿದಿದ್ದವು
ಹುಚ್ಚು ಸಂಭ್ರಮದಲ್ಲಿ...

ನೀನೋ
ಆಡಿದ ಮಾತುಗಳಿಗೆ
ಮಾತ್ರ ಮಾರುತ್ತರ
ಕೊಟ್ಟೆ...
ಆಡದೆಯೂ
ನಿನ್ನ ಕೆನ್ನೆಯ
ರಂಗೇರಿಸಿದ ಮಾತಿಗೆ
ಹೇಳಲೇಬೇಕಿದ್ದ
ಮರು ಮಾತುಗಳನ್ನು
ನಿರ್ದಯವಾಗಿ
ಕೊರಳಲ್ಲೇ
ಕತ್ತು ಹಿಸುಕಿದೆ..

ತುಟಿಯ
ದಿಡ್ಡಿ ಬಾಗಿಲಿಗೆ
ನೀ ಹಾಕಿದ ಅಗಣಿಯ
ರಹಸ್ಯ ಚಿಲಕದ
ಗುಟ್ಟು ಈಗ
ನಿನಗೇ ಮರೆತಿದೆ...

ಮಾತುಗಳನ್ನು
ಹಾಗೇ ಕತ್ತು
ಹಿಸುಕಲೇ ಬೇಕೆಂದಿದ್ದರೆ
ಆ ಭೇಟಿಯ ಮುಂಚೆಯೇ
ನಾವು ಅದರ ಕುರಿತು
ಮಾತನಾಡಲೇಬೇಕಿತ್ತು;
ಕತ್ತು ಹಿಸುಕದೇ...

ಆಗ
ಆ ಭೇಟಿಯ ಕುರಿತು
ಹೀಗೆ ಒಂದು
ವಿನಾಕಾರಣ ವಿಷಾದ
ಇರುತ್ತಿರಲಿಲ್ಲ
ಮತ್ತು ಈ ಕವಿಯ
ಕಿಡಿಗೇಡಿ ಕವಿತೆಗೆ
ನಾವು
ಆಹಾರವಾಗಬೇಕಿರಲಿಲ್ಲ!

ನಾನೂ
ಈಗ; ಎದೆಯ
ಭಾವ ಮಾತಾಗಿ
ಬೆಳೆವ ಮೊದಲೇ
ಅದರ ಖೂನಿ ಮಾಡಿರುವೆ
ನೆತ್ತರ ಚಹರೆಯೂ ಸಿಗದಂತೆ
ಎಲ್ಲಾ ಒರೆಸಿಹಾಕಿದ್ದೇನೆ...

ಸಾಕ್ಷ್ಯ ಅಳಿಸುವುದು
ಸಾಧ್ಯವಾದರೆ;
ಬದುಕು ಸಲೀಸು ತಾನೆ?!
...
~ ಶಶಿ ಸಂಪಳ್ಳಿ

ಶಶಿ ಸಂಪಳ್ಳಿ

ಶಶಿ ಸಂಪಳ್ಳಿ ಅವರು  ಸಾಗರ ತಾಲೂಕಿನ ಪುಟ್ಟ ಸಂಪಳ್ಳಿಯಲ್ಲಿ ಜನಿಸಿದರು. ಕುವೆಂಪು ವಿವಿಯಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ ಪದವಿಯನ್ನು ಪಡೆದಿದ್ದಾರೆ.  ಪತ್ರಕರ್ತರಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. ವಿಜಯ ಕರ್ನಾಟಕ, ಪ್ರಜಾವಾಣಿ , ಕನ್ನಡ ಪ್ರಭ, ದಿ ಸಂಡೆ ಇಂಡಿಯನ್  ಪತ್ರಿಕೆಗಳಲ್ಲಿ ವೃತ್ತಿಯನ್ನು ನಿರ್ವಹಿಸಿದ್ದಾರೆ. ಪರಿಸರ ಅಭಿವೃದ್ಧಿ,  ಗ್ರಾಮೀಣ, ಕೃಷಿ ಹಾಗು ರಾಜಕೀಯ ವಿಶ್ಲೇಷಣೆ ಮೊದಲಾದ ಕ್ಷೇತ್ರಗಳಲ್ಲಿ ಇವರು ಪರಿಣತಿಯನ್ನು ಹೊಂದಿದ್ದಾರೆ. ಪಶ್ಚಿಮ ಘಟ್ಟ ಪ್ರದೇಶದ ಪರಿಸರ-ಕೃಷಿ ಬಿಕ್ಕಟ್ಟುಗಳು, ಡಾ.ಮಾಧವ್ ಗಾಡ್ಗೀಳ್ ಮತ್ತು ಕಸ್ತೂರಿ ರಂಗನ್ ವರದಿಯ ಕುರಿತು ಲೇಖನಗಳನ್ನು ರಚಿಸಿದ್ದಾರೆ. ಕೆಲವು ಸಾಹಿತ್ಯ ವಿಮರ್ಶನಾ ಲೇಖನಗಳನ್ನ ಕೂಡ ರಚಿಸಿದ್ದಾರೆ. ವನ್ಯ ಜೀವಿ ಛಾಯಾಗ್ರಹಣ  ಆಸಕ್ತಿಯ ಕ್ಷೇತ್ರವಾಗಿದೆ.

More About Author