ಈಗೆಲ್ಲ ಒಳ್ಳೆಯ ವಾಸನೆಗಳು....
ಮೊದಲು ಬರೀ ಸತ್ತ ಕನಸುಗಳ
ಕಮರು
ಹಾಲಂತೆ ಉಕ್ಕುತಿದ್ದವು ನೋವು
ತಳಸೀದು ಬಿಟ್ಟಿದ್ದವು
ಹಂಬಲಗಳು
ಕಿಟಕಿ ಪಟ್ಟಿ ಯ ಮೇಲೆ ರೆಕ್ಕೆ ಬಿಚ್ಚಿ
ಕುಳಿತಿದೆ
ಅಂತರಂಗದ ಹಕ್ಕಿ.
ಇನ್ನೇನು ಒಂದೇ ಜಿಗಿತ
ಮೇಲೆ, ಮೇಲೆ ನಭದಾಚೆಯೇ
ಅದರ ಕಣ್ಣು.
ಅದೆಷ್ಟು ವರ್ಷಗಳ ತಾಲೀಮಿದೆ
ಗೊತ್ತೆ ?
ಇದೊಂದು ಜಿಗಿತದ ಹಿಂದೆ!
ಒಳಗೊಳಗೇ ತುಯ್ದ
ತುಮುಲಗಳಿವೆ.
ಗದರಿಸಿ ಬಾಯ್ಮುಚ್ಚಿಸಿದ
ತುಡಿತಗಳಿವೆ.
ಕಣ್ಣೆದುರೇ ಕೈ ತಪ್ಪಿದ
ಕಳವಳಗಳಿವೆ.
ರೆಕ್ಕೆ ಬಿಚ್ಚಿದ್ದೇನೆ
ಪುಟ್ಟ ಕಾಲುಗಳಿಗೆ ಬೆಂಕಿ
ಇಟ್ಟಿದ್ದೇನೆ
ಇದೋ ಇದೊಂದೇ ಕ್ಷಣ,
ಬಿಟ್ಟಾಯಿತು ನೆಲವನ್ನು.
ಆಚೆ, ಅದರಾಚೆ ನೋವುಗಳ
ಸುಳಿವಿಲ್ಲ
ಅವನೊಂದಿಗೆ ಕಾದಾಡಿದ
ನೆನಪುಗಳೂ ಇಲ್ಲ
ಹೊಸ ಸುಳಿಗಾಳಿ ಕಿವಿ ಸವರಿ,
ಎದೆಕೋಶಕ್ಕಿಳಿದು
ಅದೇನೊ ಹಗುರವೆಲ್ಲ.
ನವಿರು, ಆಹ್ಲಾದ, ಆರಾಮ
ಅಂದರೆ ಹೀಗೇನಾ?
- ಗೀರ್ವಾಣಿ
ವಿಡಿಯೋ
ವಿಡಿಯೋ
ಗೀರ್ವಾಣಿ
ಲೇಖಕಿ ಗೀರ್ವಾಣಿ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಸಮೀಪದ ಹಾರೂಗಾರಿನವರು. ಸಾಹಿತ್ಯ, ಸಂಗೀತದ ವಾತಾವರಣದಲ್ಲಿ ಬೆಳೆದಿದ್ದು, ಶಿರಸಿಯಲ್ಲೇ ಬಿ.ಕಾಂ.ಪದವೀಧರರು. ಮೈಸೂರಿನಲ್ಲಿ ಪತ್ರಿಕೋದ್ಯಮ ಪದವಿ ಪೂರ್ಣಗೊಳಿಸಿದರು. ಸಂಯುಕ್ತ ಕರ್ನಾಟಕದಲ್ಲಿ ಉಪಸಂಪಾದಕಿಯಾಗಿ ಜೊತೆಗೆ, ಟಿ.ವಿ.ಧಾರಾವಾಹಿಗಳಿಗೆ ಚಿತ್ರಕಥೆ, ಸಂಭಾಷಣೆಗಳ ಬರವಣಿಗೆಯಲ್ಲಿ ತೊಡಗಿದ್ದಾರೆ.
ನಮ್ಮಮ್ಮ ಶಾರದೆ, ಚಿ.ಸೌ.ಸಾವಿತ್ರಿ, ಅಂಜುಮಲ್ಲಿಗೆ, ಚಿತ್ರಲೇಖ, ಇದೇ ಪ್ರೀತಿ ಪ್ರೇಮ ಮುಂತಾದ ಟೆಲಿವಿಷನ್ ಧಾರಾವಾಹಿಗಳಲ್ಲಿ ಬರವಣಿಗೆ ಮಾಡಿದ್ದಾರೆ. ಕವನ, ಲೇಖನಗಳು ಪ್ರವಾಸ ಕಥನಗಳ ಬರಹಗಳು ಇವೆ. ವಿದ್ಯುನ್ಮಾನ ಮಾಧ್ಯಮದ ಪ್ರೊಡಕ್ಷನ್ ವಿಭಾಗದಲ್ಲೂ ಕೆಲಸ ಮಾಡಿದ್ದಾರೆ.
ಕೃತಿಗಳು: ಚಂದಮಾಮನ ಭೂಮಿ ಟೂರ್ , ಅಂಕೋರ್ ವಾಟ್ (ಪ್ರವಾಸ ಕಥನ)