Poem

ಜೀವಾಮೃತ

ನೆನಪಾಗುತ್ತಾಳೆ ಅಮ್ಮ
ಒಂದಿಡಿ ಪ್ರೀತಿಗಾಗಿ ಹೃದಯ ಮಿಡಿದಾಗ
ಸೋತು ಸುಸ್ತಾಗಿ ಒರಗಲು ದಿಂಬು ಕಾಣದಾದಾಗ
ತಡಕಾಡುತ್ತದೆ ಮೆತ್ತನೆಯ ಮಡಿಲು.

ಅಲವತ್ತುಕೊಳ್ಳಲು ನೂರೆಂಟು ಮಾತು
'ಬೇಜಾರು ಮಾಡಿಕೊಳ್ಳಬೇಡ್ವೆ ಜೀವನ ಅಂದ್ರೆ ಹೀಗೆ'
ತಾಳ್ಮೆ, ಸಹನೆ,ಸಂಯಮ ಧಾರೆಯೆರೆದು
ಮಿಡಿವ ಅಂತರಂಗದ ಒಡಲು ಅವಳು ಮಾತ್ರ.

ಸಾಸಿವೆ, ಕಡ್ಲೆ ಬೇಳೆ, ತೊಗರಿ ಬೇಳೆ, ಕೊತ್ತಂಬರಿ
ಹೀಗೆ ಒಂದೊಂದೂ ಗುರುತಿಸಲು ಕಾರಣವಾಗಿ
ಅಡಿಗೆ ಕಲಿಸಿದವಳು ನಿತ್ಯ ಕೇಳುತ್ತಿದ್ದಳವಳು
ಉಂಡು ಮೇಲೆದ್ದಾಗ 'ಹೊಟ್ಟೆ ತುಂಬ ಉಂಡ್ಯಾ?'

ಮಡಿಸಿಟ್ಟ ಸೀರೆ ಬಿಚ್ಚಿ ಹರಡಿಕೊಂಡಾಗ
ಅಲ್ಲಿ ಬಂದು ನಿಲ್ಲುತ್ತಾಳೆ ಹೀಗೀಗೇ ಉಡಬೇಕು
ನಿರಿಗೆ ಕೈ ಹಿಡಿದು ತಾನೇ ಒಪ್ಪ ಮಾಡುವವಳು
ನಡೆವಾಗ ಹುಷಾರೆಂದು ಜೀವನ ಪಾಠ ಕಲಿಸಿದವಳು.

ಹೊತ್ತು ಮೂಡುವ ಮುನ್ನ ತಲೆ ಸವರಿ 'ಎದ್ದೇಳು
ಮೂಡಣದ ಸೂರ್ಯ ನಿನಗಾಗಿ ಕಾಯುತಿರುವ'
ಅಮ್ಮನಾಡುವ ಹುಸೀ ಸುಳ್ಳು ಮನಕೇನೊ ಖುಷಿ
ಸೋಂಬೇರಿತನ ಇಲ್ಲವಾಗಿಸಿದವಳು.

ಹೆಜ್ಜೆ ಹೆಜ್ಜೆಗೂ ತನ್ನ ಛಾಪು ಮೂಡಿಸಿದ
ಅಮ್ಮನೆಂಬ ಅಮೃತ ಚಿರನಿದ್ರೆಗೆ ಜಾರಿದ ಕ್ಷಣ
ಒಂದಿನಿತೂ ಮರೆಯಲಾಗದ ಮನಕೇಗೆ
ಸಾಂತ್ವನ ನೀಡಲೆಂಬುದೇ ಬಿಡಿಸಲಾಗದ ಒಗಟು!

ಗೀತಾ ಜಿ ಹೆಗಡೆ ಕಲ್ಮನೆ

ಗೀತಾ ಜಿ ಹೆಗಡೆ ಕಲ್ಪನೆ

ಗೀತಾ ಜಿ ಹೆಗಡೆ ಕಲ್ಮನೆ ಮೂಲತಃ ಬೆಂಗಳೂರಿನವರು. ಬರವಣಿಗೆ ಅವರ ಆಸಕ್ತಿ ಕ್ಷೇತ್ರ.

ಕೃತಿಗಳು: ಮನಸೆ ನಿನೇಕೆ ಹೀಗೆ (ಲೇಖನಗಳ ಸಂಗ್ರಹ) 

More About Author