Poem

ಇಲ್ಲೊಬ್ಬ ಹೊರಟಿಹ

ಇಲ್ಲೊಬ್ಬ ಹೊರಟಿಹ
ಜಾತಿ ಧರ್ಮದಿ ಹೊತ್ತಿ ಉರಿಯುತಿಹ ಮನೆಗೆ
ನೀರು ಹಾಯಿಸುತ
ಗಾಯಗೊಂಡಿರುವ ಮನಕೆ
ಮುಲಾಮು ಹಚ್ಚುತ
ಭಾಷೆ ಬಣ್ಣ ನೀರು ಬೀದಿ ಹೆಸರಲಿ
ಚಿದ್ರಗೊಂಡಿರುವ ಮಣ್ಣಿಗೆ
ಪಾದ ಸ್ಪರ್ಶದಿ ಜೋಡಿಸುತ,

ಇಲ್ಲೊಬ್ಬ ಹೊರಟಿಹ
ಕ್ಷಣಮಾತ್ರದಿ ಉತ್ತರದಿಂದ ದಕ್ಷಿಣಕ್ಕೆ ಹಾರುತ್ತಿದ್ದವ
ಬಾನಿಂದಲೇ ಭುವಿಯನ್ನು ನೋಡುತ್ತಿದ್ದವ
ನೆಲದ ನೋವಿಗೆ, ಆಕ್ರಂದನಕೆ
ಕಣ್ಣು ಕಿವಿಯಾಗಲು
ಕೆಳಗಿಳಿದು ಬಂದ ಬೆಳಕಿವ

ಇಲ್ಲೊಬ್ಬ ನಡೆದೇ ಹೊರಟಿಹ
ತಲತಲಾಂತರದ ಬಿರಿದು ಬಾವಳಿಗಳ ಬದಿಗಿಟ್ಟು
ಪಾರಂಪರಿಕ ಕಿರೀಟವನು ಕಳಚಿಟ್ಟು
ಹಳೆಯದ ಹಿಮ್ಮೆಟ್ಟಿ ಹೊಸ ಸೃಷ್ಟಿಗೆ
ಜನರ ಬಳಿಯೇ ಬಂದಿಹ

ಹೊರಟಾತ
ಬಾಂಬು ಬಂದೂಕಿನ ರುಚಿ ಬಲ್ಲಾತ
ರಕ್ತ ಸಿಕ್ತ ಚರಿತ್ರೆಯ ಸಂಗಾತ
ಸಂಚಿನ ಸಾವಿನ ತುದಿ ಅರಿತು,
ಭವಿಶ್ಯವ ಸುಳ್ಳಾಗಿಸಲು ಹೊರಟ
ಹೂಮನದ ಕಲಿ ಈತ

ಅಂದು ಸಿದ್ದಾರ್ಥ ಮನೆ ತೊರೆದಂತೆ
ಅಶೋಕ ಖಡ್ಗ ಬಿಸುಟಿದಂತೆ
ದ್ವೇಷಾಸೂಯೆಗಳ ಕಳಚಿ
ಪ್ರೀತಿ ಸ್ನೇಹಗಳ ಹರಹಿ
ಒಡೆದ ದೇಶದ ಅಂಗಾಗಗಳ ಕೂಡಿಸಿ
ಉಸಿರನೀಯಲು ನಡೆದೇ ಸಾಗಿದ
ನಿಜ ಕನಸಿಗ!

- ಗುರುಪ್ರಸಾದ್ ಕಂಟಲಗೆರೆ

ಗುರುಪ್ರಸಾದ್‌ ಕಂಟಲಗೆರೆ

ತಮ್ಮ ಅನುಭವಗಳನ್ನು ಗಟ್ಟಿಯಾಗಿ ಕಥೆಗಳ ಮೂಲಕ ದನಿಸಿದವರು ಗುರುಪ್ರಸಾದ್‌ ಕಂಟಲಗೆರೆ. ಮೂಲತಃ ತುಮಕೂರಿನ ಕಂಟಲಗೆರೆಯವರು. ವೃತ್ತಿಯಲ್ಲಿ ಶಿಕ್ಷಕರು. ತಮ್ಮ ವೃತ್ತಿಯೊಂದಿಗೆ ಸಾಹಿತ್ಯ ಪ್ರೇಮವನ್ನು ಸಮಾನವಾಗಿ ನಿರ್ವಹಿಸುತ್ತಿರುವವರು. ತಮ್ಮ ಸಂವೇದನೆಗಳನ್ನು ಅಚ್ಚರಿ ಎನ್ನುವಂತೆ ಅಚ್ಚಿಳಿಸುವ ಯುವ ಬರೆಹಗಾರ. ಪ್ರಜಾವಾಣಿ, ವಿಜಯಕರ್ನಾಟಕ ಕತಾ ಸ್ಪರ್ಧೆಗಳಲ್ಲಿ ಹಲವಾರು ಬಹುಮಾನ ಪಡೆದಿದ್ದಾರೆ. 2017 ನೇ ಸಾಲಿನ ‘ಅನನ್ಯ ಪ್ರಶಸ್ತಿ’ ಅವರ ’ಗೋವಿನ ಜಾಡು’ ಕತಾ ಸಂಕಲನಕ್ಕೆ ಲಭಿಸಿದೆ. ‘ದಲಿತ ಸಾಂಸ್ಕೃತಿಕ ಕಥನಗಳ ಅಧ್ಯಯನ’ ಅವರ ಮತ್ತೊಂದು ಕೃತಿ.

More About Author