Poem

ಇಲ್ಲಿ ಎಲ್ಲವೂ ಬದಲಾಗುತ್ತವೆ... 

ಇಲ್ಲಿ ಎಲ್ಲವೂ ಬದಲಾಗುತ್ತವೆ...
ಬದಲಾಗುವುದೇ ನಿಯಮ ಎನ್ನುತ್ತದೆ ಜಗತ್ತು
ತೊಟ್ಟು ಕಳಚಿಬೀಳುವ ಹೂವಿನಂತೆ ಎಲ್ಲವೂ ಕಳಚಿ ಬೀಳುತ್ತವೆ…
ಇಲ್ಲೊಂದು ಹೂವಿತ್ತು, ನನ್ನ ಪಾಲಿಗದು ಪ್ರೇಮವೆಂದುಕೊಳ್ಳಿ...
ಅದರ ಕುರುಹೂ ಇಲ್ಲದಂತೆ ಎಲ್ಲವೂ ಸರಿದುಹೋಗುತ್ತವೆ
ಮತ್ತೆ ಹೂ ಅರಳುತ್ತದೆನ್ನುತ್ತೀರಿ ನನಗದು ಗೊತ್ತಿಲ್ಲದ್ದೇನಲ್ಲಾ .

ಕಳಚಿದ ಹೂವಿನ ಕುರಿತ ಚಿಂತೆ ನನ್ನದು, ಕಳೆದ ಪ್ರೇಮದ್ದೇ ಎಂದುಕೊಳ್ಳಿ..
ಅದರ ಗುರುತೂ ಉಳಿಯದಂತೆ ತೋರೆದುಹೋಗುತ್ತದೆ
ಆದರೆ
ಗಾಯದ ಮಾಯದ ಕಲೆಗಳ ಕೂಡಿಡುವ ನನ್ನೊಳಗೆ
ತೊಟ್ಟುಕಳಿಚಿದ ಹೂ, ಅಥವಾ ಕಳೆದ ಪ್ರೇಮ
ಯಾವುದರ ನೆನಪೂ ಸರಿಯುವುದಿಲ್ಲ ..

ನಿಮಗೆ ತಿಳಿದಿಲ್ಲ…
ಮರೆಯಾಗದ ಎಷ್ಟೋ ನೆನಪುಗಳನ್ನ
ಮರೆತಂತೆ ನಟಿಸುತ್ತೇನೆ ನಾನು
ನನಗದು ಅನಿವಾರ್ಯ ಎನಿಸುತ್ತದೆ..
ಕೆಲವರಿಗೆ ಹುಚ್ಚೆನ್ನಿಸಬಹುದು…
ಅವರ ಹುಚ್ಚುಗಳ ಕುರಿತೂ ಆರೋಪಗಳೇನಿಲ್ಲ ….

ನಿನ್ನೆಯೊಂದು ಇಂದಿಗಿಲ್ಲವಾಗುವ
ನಾಳೆಯೊಂದು ಅಜ್ಞಾತವೆನಿಸುವ
ಈ ಕ್ಷಣಗಳು ಕಾಡುವ ಬಗೆ ಕೌತುಕವೆನಿಸುತ್ತದೆ
ನನ್ನ ನಿನ್ನೆಗಳಲ್ಲಿದ್ದ ಅವನು
ಅವನ ನಾಳೆಗಳಲ್ಲಿರುವ ಯಾರೋ
ಅಥವಾ ನಿನ್ನೆ ನಾಳೆಗಳು ತಲೆಕೆಳಗಾಗುವುದನ್ನ
ದಡ್ಡಿಯಂತೆ ನೋಡುತ್ತಾ ಕೂರುವ ನಾನು…
ಮತ್ತೇನೋ ಕಂಡಂವರಂತೆ ಆಡಿಕೊಳ್ಳುವ ಇನ್ಯಾರೋ
ಅವರ ನಿನ್ನೆ ನಾಳೆ ಎಲ್ಲವುಗಳ ಗೋಜಲು
ನನಗೆ ಮಾತ್ರವೇ ಕಾಡುವಂತೆ
ಆರೋಪಿಸಿಕೊಳ್ಳುವ ನನ್ನೋಳಗಿನ ಮತ್ಯಾರೋ
ಬೆನ್ನುತಿರುಗಿಸಿ ಕೂತು
ನನಗರ್ಥವಾಗದ ಯಾವುದೋ ಭಾಷೆಯಲ್ಲಿ
ಕತೆ ಹೆಣೆಯುತ್ತಾರೆನಿಸುತ್ತದೆ….

ಎಂದೂ ಆರಂಭವೇ ಆಗದಾ…
ಮುಗಿದೂ ಹೋಗದ
ತಲ್ಲಣಗಳೆಲ್ಲವೂ ನನ್ನೊಳಗೆ ಕುದಿವಾಗ
ಹಾಳೆಯಾಗುವ ಮನದ ಮೇಲೆ ಕಾಣದ ಪದಗಳು
ಪಡಿಯಚ್ಚಾಗುತ್ತವೆ….

ಮುಗಿಸಲಾಗದೇ ಮುಂದುವರೆಸಲಾಗದೆ
ಮುಖವಿಡಲು ಒಂದಗುಲ
ಬೆಚ್ಚನೆಯ ಎದೆಗೂಡಿಗಾಗಿ ತಡಕಾಡುತ್ತೇನೆ

ಕಳೆದ ರಾತ್ರಿಯ ಕನಸೊಂದು ಮತ್ತೆ ಮೊದಲಾಗುತ್ತದೆ
ಬಿಟ್ಟೋಗದ ಒಲವ ಕತ್ತರಿಸಿ ಕಳಿಸಿಕೊಟ್ಟ
ಆ ದಾರಿ, ತಿರುವುಗಳು
ತುಂಬಿದ ಕಣ್ಣೋಳಗೆ ಕವಲಾಗುತ್ತವೆ….

ಮಂಜುಳಾ ಹುಲಿಕುಂಟೆ

ಕವಿ, ಪತ್ರಕರ್ತೆ ಮಂಜುಳಾ ಹುಲಿಕುಂಟೆ ಹುಟ್ಟಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೊಡ್ಡಬಳ್ಳಾಪುರ ತಾಲೂಕಿನ ಹುಲಿಕುಂಟೆ ಗ್ರಾಮದಲ್ಲಿ. ಹುಟ್ಟೂರಿನಲ್ಲೇ ಪ್ರಾಥಮಿಕ ಮತ್ತು ಫ್ರೌಢಶಾಲಾ ಶಿಕ್ಷಣ ಮುಗಿಸಿದ ಮಂಜುಳಾ ತ್ಯಾಮಗೊಂಡ್ಲು ಶ್ರೀಮತಿ ನರಸಮ್ಮ ತಿಮ್ಮರಾಯಪ್ಪ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ಮತ್ತು ದೊಡ್ಡಬಳ್ಳಾಪುರದ ಶ್ರೀ ಕೊಂಗಾಡಿಯಪ್ಪ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ಪದವಿ ಪೂರ್ಣಗೊಳಿಸಿದ್ದಾರೆ. ಆನಂತರ ಬೆಂಗಳೂರಿನ ಬದುಕು ಕಮ್ಯುನಿಟಿ ಕಾಲೇಜಿನಲ್ಲಿ ಪತ್ರಿಕೋದ್ಯಮ ಡಿಪ್ಲಮಾ ಮಾಡಿದ್ದಾರೆ. ಕಸ್ತೂರಿ ಸುದ್ದಿವಾಹಿನಿಯಲ್ಲಿ ವೃತ್ತಿ ಬದುಕನ್ನು ಆರಂಭಿಸಿದ ಮಂಜುಳಾ, ಸುವರ್ಣ ನ್ಯೂಸ್ , ಟಿವಿ 9 ಸೇರಿದಂತೆ ಕರ್ನಾಟಕದ ಪ್ರಮುಖ ಸುದ್ದಿ ವಾಹಿನಿಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ.  

ಸಂವಾದ ಸಂಸ್ಥೆಯಲ್ಲಿ ‘ಯುವಜನರ ಹಕ್ಕುಗಳು’ ಎಂಬ ವಿಷಯದಡಿ ನಡೆಸಿದ ಸಾಕ್ಷ್ಯ ಕಾರ್ಯದ ಫಲವಾಗಿ ‘ಹೆಡ್ಡಿಂಗ್‌ ಕೊಡಿ’ ಹೆಸರಿನ ಕೃತಿ ಸಂಪಾದನೆ ಮತ್ತು ದೀಪದುಳುವಿನ ಕಾತರ ಎಂಬ ಕವನ ಸಂಕಲನ ಬಿಡುಗಡೆಯಾಗಿದೆ. ಕರ್ನಾಟಕ ಲೇಖಕಿಯರ ಸಂಘದಿಂದ ಉದಯೋನ್ಮಕ ಕವಯತ್ರಿಯರಿಗೆ ನೀಡುವ 2016ನೇ ಸಾಲಿನ ಡಾ.ಸಿ.ವಿ.ವತ್ಸಲಾದೇವಿ ಸ್ಮಾರಕ ಪ್ರಶಸ್ತಿ, ವಿಜಯಪುರದ ಹಲಸಂಗಿ ಗೆಳೆಯರ ಬಳಗ ಪ್ರತಿಷ್ಠಾನದಿಂದ 2018ನೇ ಸಾಲಿನ ಯುವ ಸಾಹಿತಿ ಪುರಸ್ಕಾರ ಪಡೆದಿದ್ದಾರೆ. ಇವರ ಹಲವು ಕವಿತೆ, ಲೇಖನಗಳು ವಿಜಯ ಕರ್ನಾಟಕ ಸೇರಿದಂತೆ ಹಲವು ಪತ್ರಿಕೆ, ಮತ್ತು ಅಂತರ್ಜಾಲ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. 

 

More About Author