ಸುರಿಯುವ ರಭಸದ ಮಳೆಗೆ
ಗುಡ್ಡ ಕಡಿದುರುಳಿ
ನೆಲ ಕೆಂಪು ಮಣ್ಣಿನ ಹಾಸು
ಮನೆ ಮಠ
"ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ"
ಅಬ್ಬಾ! ಅದೆಷ್ಟು ಜನರ ಮೊರೆತ
ಆ ದೇವರೂ ಕಲ್ಲಾಗಿಬಿಟ್ಟ.
"ಮತ್ತೆ ಮಳೆಯ ಅಬ್ಬರ ಮುಂದುವರೆದಿದೆ
ಭೂಮಿಯಲ್ಲಿ ಕಂಪನ
ಅಲ್ಲಲಿ ಮತ್ತೆ ಗುಡ್ಡ ಕುಸಿತ
ಜನರ ಬವಣೆ ಹೇಳತೀರ"
ಇತ್ಯಾದಿ ಇತ್ಯಾದಿ
ಯುದ್ಧೋಪಾದಿಯಲ್ಲಿ
ಆತಂಕ ಹೊತ್ತ ಸಮಾಚಾರ
ಪೇಪರು ಮಾಧ್ಯಮದವರ ಸುದ್ದಿ
ಕೇಳಿ ಕೇಳಿ
ಹೃದಯದಾಳಕ್ಕಿಳಿದು
ಉಂಡನ್ನಕ್ಕೂ ಗಂಟಲು ಕಟ್ಟುವ ಪರಿಸ್ಥಿತಿ
ಮತ್ತೆ ಮತ್ತೆ ಮಳೆಯಾಗುತ್ತಿದೆಯಲ್ಲಾ
ಆಕಾಶಕ್ಕೆ ತೂತು ಬಿದ್ದಂತೆ!
ಚಿತ್ತದಲಿ ರಾಮ ರಾವಣರ ಯುದ್ಧದ
ಸನ್ನಿವೇಶ ನೆನಪಾಯಿತು
ರಾಮಾಯಣದ ಕಥೆ ಸತ್ಯವೋ ಸುಳ್ಳೋ
ಆದರೀಗಿಲ್ಲಿ
ಎಲ್ಲವೂ ಕಣ್ಣ ಮುಂದಿನ ಸತ್ಯ.
ಈ ಮಳೆಯನ್ನು ತಡೆಯಲು
ಏನಾದರೂ ಹಿಕ್ಮತ್ ಇರಬಹುದೇ...?
ಅದೇ ರಾಮ ರಾವಣರ ಯುದ್ಧದಲ್ಲಿ
ರಾವಣನ ತಲೆ ಕಡಿದುರುಳಿಸಿದಷ್ಟೂ
ಮತ್ತೆ ಬೆಳೆಯುತ್ತಿತ್ತು
ರಾವಣನ ಕೊಲ್ಲಲಾಗದೆ
ರಾಮ ಕೈ ಸೋತ
ವಿಭೀಷಣ ದೇಹದತ್ತ ಗುರಿಯಿಡಲು ಸೂಚಿಸಿ
ರಾವಣನ ಜೀವದ ಗುಟ್ಟು ಹೇಳಿಬಿಟ್ಟ
ರಾಮ ಗೆದ್ದ
ರಾವಣ ಸತ್ತ.
ಆಗ ರಾಮ ರಾವಣರ ರಾಜ್ಯ ಸರಿ
ಈಗಿಲ್ಲಿ ನಮ್ಮ ರಾಜ್ಯ
ಯಾವುದಾದರೇನು ಕಣ್ಣಿಗೆ ಕಾಣುವ ದುಷ್ಟನಾಗಿ
ಮಾರಣ ಹೋಮ ನಡೆಸುತ್ತಿರುವ
ಈ ಮಳೆರಾಯನ ಗುಟ್ಟು
ಯಾರಿಂದಲಾದರೂ ಹೇಗಾದರೂ
ಮೂಲ ದೊರಕಿದ್ದರೆ............
ತಲೆಕೆಟ್ಟಂತೆ ಉಧೋ ಉಧೋ
ಹೊಯ್ಯುವ ಮಳೆ ನಿಲ್ಲಿಸಬಹುದಿತ್ತಲ್ಲಾ
ರಾಮ ರಾವಣನ ಯುದ್ಧ
ಕೊನೆಯಾದಂತೆ!!
- ಗೀತಾ ಜಿ. ಹೆಗಡೆ ಕಲ್ಪನೆ
ಗೀತಾ ಜಿ ಹೆಗಡೆ ಕಲ್ಪನೆ
ಗೀತಾ ಜಿ ಹೆಗಡೆ ಕಲ್ಮನೆ ಮೂಲತಃ ಬೆಂಗಳೂರಿನವರು. ಬರವಣಿಗೆ ಅವರ ಆಸಕ್ತಿ ಕ್ಷೇತ್ರ.