Story

ಇಚಿಂಗ್ ಬಗ್ಗೆ ಬಿಚಿಂಗ್...

ಲೇಖಕಿ ನಳಿನಿ ಟಿ. ಭೀಮಪ್ಪ ಅವರು ಚಿತ್ರದುರ್ಗದವರು. ಪ್ರಸ್ತುತ ಗೃಹಿಣಿಯಾಗಿ ಧಾರವಾಡದಲ್ಲಿ ನೆಲೆಸಿದ್ದಾರೆ. ಬಿ.ಎಸ್ .ಸಿ ಪದವೀಧರರು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಪದವೀಧರರು. ಕಥೆ, ಲೇಖನ, ಪ್ರಬಂಧ, ಕವಿತೆ, ಲಲಿತ ಪ್ರಬಂಧ ಬರಹದಲ್ಲಿ ಆಸಕ್ತಿ. ಪ್ರಸ್ತುತ ಅವರು ಬರೆದಿರುವ ‘ಇಚಿಂಗ್ ಬಗ್ಗೆ ಬಿಚಿಂಗ್...’ ಕತೆ ನಿಮ್ಮ ಓದಿಗಾಗಿ....

ಮೊನ್ನೆ ಜಾತ್ರೆಗೆ ಹೋಗಿದ್ದಾಗ ಎಲ್ಲ ಹೆಣ್ಣುಮಕ್ಕಳು ಬಳೆ, ಸರ ಅಂತೆಲ್ಲಾ ಕೊಂಡುಕೊಳ್ಳಲು ಮುಗಿಬಿದ್ದಿದ್ದರೆ, ನಾನು ಬೆನ್ನು ಕೆರೆಯುವ ಕೋಲೊಂದನ್ನು ಕೊಂಡಾಗ ಗೆಳತಿಯರೆಲ್ಲ ನಗತೊಡಗಿದರು. ಅದರಲ್ಲಿ ನಗೋದೇನಿದೇ ಅಂತೀನಿ. ಬೆನ್ನು ಕಡಿತ ಶುರುವಾದರೆ ಎಮ್ಮೆಗಳು ಹೋಗಿ ಮರಕ್ಕೋ, ಉರುಟು ಗೋಡೆಗೋ ಉಜ್ಜಿದ ಹಾಗೆ ನಾವುಗಳು ಉಜ್ಜೋಕಾಗುತ್ತಾ? ಕೆಲವೊಮ್ಮೆ ಅವುಗಳು ತಮ್ಮ ಬಾಲವನ್ನೇ ಎತ್ತಿ ಎತ್ತಿ ಬಡಿದುಕೊಳ್ಳುತ್ತಿರುತ್ತವೆ. ಮನುಷ್ಯ ಏನು ಮಾಡಬೇಕು ಹೇಳಿ? ಬೆನ್ನನ್ನು ಹೊರತುಪಡಿಸಿ, ಕೈಗಳು ದೇಹದ ಯಾವ ಭಾಗವನ್ನು ಬೇಕಾದರೂ ಸಲೀಸಾಗಿ ತಲುಪಬಲ್ಲವು. ಮನುಷ್ಯನ ಕೈಗಳು ಇನ್ನೊಂದು ಅಡಿ ಉದ್ದವಿದ್ದರೆ ಚೆಂದಿತ್ತೇನೋ ಅಂತಾ ಆಗ ಅನಿಸದಿರಲಾರದು. ಹಾಗಾಗಿ ಬೆನ್ನು ಕಡಿತಕ್ಕೆ, ಕೋಲಿನ ತುದಿಗೆ ಕೆರೆಯುವುದಕ್ಕೆ ಅನುಕೂಲವಾಗುವಂತೆ, ಮುಂಗೈ ಅಂಟಿಸಿದ ವಿನ್ಯಾಸ ಅದೆಷ್ಟು ಬುದ್ದಿ ಉಪಯೋಗಿಸಿ ಮಾಡಿದ್ದಾರೆ ಎನ್ನಿಸಿತ್ತು. ಅದೇನೇ ಲೇವಡಿ ಮಾಡಿ, ನಕ್ಕರೂ ನಂತರ ಎಲ್ಲರೂ ಒಂದೊಂದು ಉಳ್ಳಗೆ ಕೊಂಡುಕೊಂಡರು ನೋಡಿ.

ಹಳೆಯ ಕಾಲದ ಅಜ್ಜಿಗಳೆಲ್ಲ ಬೆನ್ನು ಉಜ್ಜುವುದಕ್ಕೇ ಅಂತಾನೇ ಒಂದಿಷ್ಟು ತೆಂಗಿನ ನಾರು ಅಥವಾ ಉರುಟಾದ ಕಲ್ಲನ್ನು ಇಟ್ಟುಕೊಳ್ಳುತ್ತಿದ್ದರು. ಮನೆಯಲ್ಲಿರುವ ಚಿಳ್ಳೆಮಿಳ್ಳೆಗಳದು ಅವರ ಬೆನ್ನು ಉಜ್ಜುವ ಕೆಲಸ. ‘ಹಾ ಜಾಣಾ, ಅಲ್ಲಿ ಉಜ್ಜು, ಇಲ್ಲಿ ಉಜ್ಜು’ ಅಂತೆಲ್ಲ ಅವರ ಬೆನ್ನು ಮತ್ತು ಸೊಂಟದ ಟೈರ್‌ಗಳ ಸಂದಿಗೊಂದಿಗಳಲ್ಲೆಲ್ಲಾ ಉಜ್ಜಿಸಿಕೊಳ್ಳುವಾಗ, ಅವರ ಬಾಯಿಯಿಂದ ‘ಅಹಾಹಹಹಾ’ ಎನ್ನುವ ಶಬ್ದ ಹೊರಡುತ್ತಿತ್ತು. ಅದೇ ಅಜ್ಜನ ಬೆನ್ನನ್ನು ಮಾತ್ರ ತಾವೇ ಹೋಗಿ ಉಜ್ಜಿ ಬರುತ್ತಿದ್ದರು. ಕೆಲವು ಕಡೆ ಈಗಲೂ ಮದುವೆಯಾದ ಹೊಸತರಲ್ಲಿ ನವವಧುವಿಗೆ ಗಂಡನ ಬೆನ್ನನ್ನು ಉಜ್ಜಲು ಕಳಿಸುವ ಸಂಪ್ರದಾಯವಿದೆ.

ಇನ್ನು ತಲೆ ಕಡಿತದ ವಿಷಯಕ್ಕೆ ಬಂದರೆ, ಮನುಷ್ಯನಿಗೆ ಅದೇನೇ ಸಮಸ್ಯೆ ತಲೆದೋರಿದರೂ, ಸರಕ್ಕನೆ ಅದ್ಯಾಕೆ ಕೈಗಳು ಸೀದಾ ತಲೆಕೆರೆಯುವುದಕ್ಕೆ ಶುರು ಹಚ್ಚಿಕೊಳ್ಳುತ್ತವೆ ತಿಳಿಯುವುದಿಲ್ಲ. ಹೊಟ್ಟು, ಹೇನುಗಳು ಇವೆಲ್ಲ ತಲೆಯಲ್ಲಿ ಠಿಕಾಣಿ ಹೂಡಿ ಒಂದಿಷ್ಟು ಕಡಿತವನ್ನು ದಯಪಾಲಿಸುತ್ತವೆ. ಕೆರೆಯುತ್ತಿದ್ದರೆ ಅವುಗಳಿಂದ ಮುಕ್ತಿ ಸಿಗುತ್ತೋ ಇಲ್ಲವೋ ಗೊತ್ತಿಲ್ಲ, ತಲೆಕೂದಲುಗಳು ಕೈಗೆ ಬಂದು ನಿಧಾನವಾಗಿ ಮಂಡೇ ಎನ್ನುವುದು ನುಣ್ಣನೆಯ ಹಂಡೆಯಾಗುವುದು ಖಚಿತ. ಜೊತೆಗೆ ಬಿಳಿಕೂದಲುಗಳೂ ಕಡಿತಕ್ಕೆ ಕಾರಣ ಎಂದು ಹೇಳುವವರಿದ್ದಾರೆ. ಅದೇನೇ ಕಾರಣ ಇದ್ದರೂ ನೆತ್ತಿಯನ್ನು ಪರಪರ ಅಂತಾ ಗಾಯ ಆಗುವವರೆಗೂ ಕೆರೆದು, ಹೊಟ್ಟನ್ನೋ, ಹೇನನ್ನೋ ಉಗುರುಗಳ ಸಂದಿಯಲ್ಲಿ ಕಂಡಾಗ ಖುಷಿ ಪಡುವುದೂ ಉಂಟು.

ಮೈಕಡಿತವಂತೂ ಅನಾಹುತಕಾರಿ. ಇದಕ್ಕೆ ಇಂತಹ ಕಾಲವೇ ಅಂತಿಲ್ಲ. ಸರ್ವಋತುಗಳಲ್ಲೂ ಭೇಧಭಾವವಿಲ್ಲದೆ ವಕ್ಕರಿಸುತ್ತದೆ. ಬೇಸಿಗೆಯಲ್ಲಿ ಬಿಸಿಲಿಗೆ ಬೆವರು ಹೆಚ್ಚಾಗಿ, ಎಲ್ಲೆಲ್ಲಿಯೋ ನೀರು ಇಳಿದು ಕಡಿತ ಶುರುವಾಗುತ್ತದೆ. ಮಳೆಗಾಲದಲ್ಲಿ ಆರ್ದ್ರತೆ ಹೆಚ್ಚಾಗಿ ಗುಪ್ತ ಸಂದುಗೊಂದುಗಳಲ್ಲಿ ತಕಧಿಮಿ. ಇನ್ನು ಚಳಿಗಾಲದಲ್ಲಿ ತಣ್ಣನೆಯ ಗಾಳಿ ಬಿಟ್ಟಾಗ ಮೈಕೈಯೆಲ್ಲ ಒಡೆದು ತುರಿಕೆ ಹೆಚ್ಚಾಗುವುದರಿಂದ ಸೂಡರ ಗಾಳಿ ಬಿಟ್ಟಿದೆ ಎಂದೇ ಹೇಳುವುದು. ಕರಕರ ಕೆರೆದು ಮೈಕೈ ಎಲ್ಲ ಬೂದಿ ಬಳಿದ ಹಾಗಾಗಿ, ಕೆಲವೊಮ್ಮೆ ರಕ್ತ ಒಸರುವುದೂ ಇದೆ. ಕೆಲವರಿಗೆ ಯಾವುದಾದರೂ ಆಹಾರ ಅಲರ್ಜಿಯಾದರೂ ನವೆ. ‘ತ್ರೀ ಈಡಿಯಟ್ಸ್’ ಸಿನೆಮಾದಲ್ಲಿ ಚಪಾತಿ ಲಟ್ಟಿಸುತ್ತಲೇ ಗಂಡನ ಎದೆಯ ಭಾಗದ ನವೆಯನ್ನು ಲಟ್ಟಣಿಗೆಯಿಂದಲೇ ಕೆರೆದು ಶಮನ ಮಾಡಿ, ಅದರಲ್ಲೇ ಮತ್ತೆ ಚಪಾತಿಯನ್ನು ಲಟ್ಟಿಸತೊಡಗುವುದನ್ನು ನೋಡುವಾಗ ನವೆ ತಡೆಯುವುದು ಅದೆಷ್ಟು ಕಷ್ಟ ಎನ್ನುವುದು ಮನವರಿಕೆಯಾಗುತ್ತದೆ. ಕೆಲವರಂತೂ ರಾತ್ರಿಯ ಹೊತ್ತು ಮಲಗಿದಾಗ ರಾಜಾರೋಷವಾಗಿ ನಿದ್ದೆಗಣ್ಣಿನಲ್ಲಿ ಎಲ್ಲೆಂದರಲ್ಲಿ ಕೈಹಾಕಿ, ಕೆರೆದುಕೊಳ್ಳಲು ಶುರುಹಚ್ಚಿಕೊಳ್ಳುತ್ತಾರೆ. ಪಕ್ಕದಲ್ಲಿದ್ದವರು ಎರಡೇಟು ಹಾಕಿದರೇನೇ ಸಾಮಾನ್ಯ ಸ್ಥಿತಿಗೆ ಬರುವುದು. ಈ ಕಡಿತಗಳೇ ದೇಹಕ್ಕೆ ಇಷ್ಟು ಕಿರಿಕಿರಿ ಎನಿಸಿದರೆ, ಇನ್ನು ಕಜ್ಜಿ, ಇಸುಬು, ಗಜಕರ್ಣ ಎಂದೆಲ್ಲ ಚರ್ಮರೋಗಗಳು ವಕ್ಕರಿಸಿದಾಗ ಆಗುವ ಕಡಿತವಂತೂ ಹೇಳೋಕಾಗಲ್ಲ, ತಾಳೋಕಾಗಲ್ಲ.

ಇದರ ಜೊತೆಗೆ ಸೊಳ್ಳೆ, ಇರುವೆ, ತಿಗಣೆ, ನೊಣ, ಗೊದ್ದದಂತಹ ಸಹಚರರು, ಪ್ರತೀದಿನ ಮನುಷ್ಯರನ್ನು ಚುಟುಚುಟು ಅಂತಾ ಕಡಿದು ಒಂದೆರಡು ಗ್ರಾಂ ರಕ್ತವನ್ನು ಹೀರಿ, ಕಡಿತವನ್ನು ದಯಪಾಲಿಸಿ ಪರಾರಿಯಾಗುತ್ತವೆ. ಯಾರಿಗಾದರೂ ಸಿಟ್ಟು ತರಿಸಿದರೆ ‘ತಿಂದು ಕಡಿತತೇನಲೇ’ ಎನ್ನುವುದು ಲೋಕಾರೂಢಿ. ಉತ್ತರ ಕರ್ನಾಟಕದ ಭಾಗದಲ್ಲಂತೂ ‘ತಿಂಡಿ ಹತ್ತೇತೇನಲೇ’ ಎಂದೇ ಜಗಳಕ್ಕೆ ಇಳಿಯುವುದು. ಕೈಕಡಿತ ಶುರುವಾದರೆ ಲಕ್ಷ್ಮೀ ಬರುತ್ತಾಳೆ ಎಂದೋ, ಕಾಲು ಕಡಿತ ಶುರುವಾದರೆ ಜಗಳ ಕಾಯುತ್ತಾರೆ ಎನ್ನುವ ನಂಬಿಕೆಗಳೂ ಇವೆ. ತುರಿಕೆ ಸೊಪ್ಪು ಎನ್ನುವ ಸೊಪ್ಪು ಮೈಗೆ ತಗುಲಿದರೆ ಕಡಿತವುಂಟಾಗಿ ಹೊಸ ಶೈಲಿಯ ನೃತ್ಯಪ್ರಾಕಾರಗಳೆಲ್ಲ ಮೈಮೇಲೆ ಆವಾಹನೆಯಾಗುವುದುಂಟು. ಹಾಗಾಗಿ ಮಾರುಕಟ್ಟೆಯಲ್ಲಿ ತುರಿಕೆಗಳಿಗೆಂದೇ ಅದೆಷ್ಟೋ ತರಹದ ಪೆಟ್ರೋಲಿಯಮ್ ಜೆಲ್ಲಿಗಳು, ಪೌಡರ್‌ಗಳು, ತುರಿಕೆ ಕಡಿಮೆ ಮಾಡುವ ಕ್ರೀಮುಗಳು ಲಭ್ಯವಿವೆ.

ಬಹುಶಃ ದೇವರು ಮನುಷ್ಯನ ದೇಹದ ಜೊತೆಗೆ ಕಡಿತವನ್ನೂ ಉಚಿತವಾಗಿ ಕೊಟ್ಟಿದ್ದಾನೆ ಅನ್ಸುತ್ತೆ. ಯಾವಾಗ ಎಲ್ಲಿ ಕಡಿತ ಶುರುವಾಗುತ್ತದೆಯೋ ಗೊತ್ತಾಗುವುದೇ ಇಲ್ಲ. ಚರ್ಮದ ಜೊತೆಗೆ ನವರಂಧ್ರಗಳಲ್ಲೂ ನವೆ ಉಂಟು ಮಾಡಿ, ಅದನ್ನು ತಾತ್ಕಾಲಿಕವಾಗಿ ಶಮನಗೊಳಿಸಲು ಉಗುರುಗಳೆಂಬ ಅಸ್ತ್ರ ಕೊಟ್ಟಿರಬಹುದೇನೋ ಎನ್ನುವ ಗುಮಾನಿ. ಕಡಿತದ ಹಿಂಸೆ ಅದೆಷ್ಟು ಕಾಡುತ್ತದೆ ಎಂದರೆ, ಕೆಲವೊಮ್ಮೆ ಅಕ್ಕ ಪಕ್ಕ ಯಾರಿದ್ದಾರೆ, ಯಾರಿಲ್ಲ ಎನ್ನುವುದನ್ನೂ ಸಹ ಗಮನಿಸದೆ ಶಮನಗೊಳಿಸುವುದರಲ್ಲಿ ನಿರತರಾಗುವುದುಂಟು. ಮತ್ತೂ ಕೆಲವರು ಯಾರೂ ಇರದ ಸ್ಥಳ ಹುಡುಕಿಕೊಂಡು ಹೋಗಿ ತುರಿಸಿಕೊಂಡು ಹಗುರಾಗುತ್ತಾರೆ. ಈ ಕಡಿತ ಎನ್ನುವುದು ಒಂದು ರೀತಿ ಕೆಮ್ಮು ಇದ್ದ ಹಾಗೆ, ತಡೆಯುವುದಕ್ಕೆ ಪ್ರಯತ್ನಪಟ್ಟಷ್ಟೂ ಹೆಚ್ಚಾಗುತ್ತಲೇ ಹೋಗುತ್ತದೆ. ಆದರೆ ತುರಿಸಿದ ಬಳಿಕ ಸ್ವರ್ಗಸಮಾನ ಸುಖ ಸಿಕ್ಕಂತೆ ಎನಿಸಿದರೂ, ನಂತರ ಇನ್ನೂ ಹೆಚ್ಚಾಗಿ ವ್ರಣವಾಗುವ ಸಾಧ್ಯತೆಗಳೇ ಹೆಚ್ಚು. ಅವು ಒಣಗಿ ಹಕ್ಕಳಿಕೆ ಕಟ್ಟಿದಾಗ ಮತ್ತೆ ಪರಪರ ಕಡಿತ ಶುರು. ಆದರೂ ‘ತುರಿಕೆಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ’ ಎನ್ನುವ ಮಾತು ಮಾತ್ರ ಸರ್ವಜನಪ್ರಿಯ ಅಲ್ವಾ?

-ನಳಿನಿ ಭೀಮಪ್ಪ

 

ನಳಿನಿ ಟಿ. ಭೀಮಪ್ಪ

ಲೇಖಕಿ ನಳಿನಿ ಟಿ. ಭೀಮಪ್ಪ ಅವರು ಚಿತ್ರದುರ್ಗದವರು. ಪ್ರಸ್ತುತ ಗೃಹಿಣಿಯಾಗಿ ಧಾರವಾಡದಲ್ಲಿ ನೆಲೆಸಿದ್ದಾರೆ. ಬಿ.ಎಸ್ .ಸಿ ಪದವೀಧರರು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಪದವೀಧರರು. ಉತ್ತಮ ಕ್ರೀಡಾಪಟುವೂ ಹೌದು. ಕಥೆ, ಲೇಖನ, ಪ್ರಬಂಧ, ಕವಿತೆ, ಲಲಿತ ಪ್ರಬಂಧ ಬರಹದಲ್ಲಿ ಆಸಕ್ತಿ. ಇವರ ಬರಹಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ಕೃತಿಗಳು: ಒಂದು ಕಪ್ ಕಾಫೀss (ಹರಟೆಗಳ ಸಂಗ್ರಹ)

More About Author