Poem

ಹೊಸ್ತಿಲಕ ಇಣಕೇದ

ಹೊಸ್ತಿಲಕ ಇಣಕೇದ
ಈ ಮಹಾ ಶಕ್ತಿ
ಮುಕುತಿಗೆ ಕಾದದ
ಹೊಸದೊಂದು ಭಕ್ತಿ

ಬ್ಯಾಸರಕಿ ಕಳೆದು
ಬಯಲಿಗೆ ಸುರದು
ಹರುಷವ ಬಳಿದು
ಬೆಳಕಿಗೆ ಕರೆದು
ಕೊಡಪಾನ ತುಂಬಿ ತಂದದ

ಆಸರದ ಮರಕ
ಕುಸುಮದ ಬಳ್ಳಿ
ಭಸ್ಮದ ಬದುಕಿಗೆ
ಮುಸು ಮುಸು ಅಂತದ
ಬುಸುಗುಡುವ ಬಿಯದ ಭಯಕ

ನಿಂತಲ್ಲೆ ನಿಲ್ಲದ
ಕಾಲದ ಹರಿವು
ಯುಗಯುಗದ ಯಾಗ
ತಪಸಿನ ಫಲವು
ಈ ಮಹಾನಾದ ನಿನದ

ನೊಂದಾವ ಜೀವ
ಬೆಂದಾವ ಭಾವ
ನೂರೆಂಟು ನೋವ
ವಿಧವಿಧದ ಕಾವ ತೇವ

ಒಡಲೆಲ್ಲ ಹಸಿದು
ನೆಮ್ಮದಿಯು ಕುಸಿದು
ಉಸಿರುಸಿರು ಬಸಿದು
ಮನಸೆಲ್ಲ ಕಹಿಯಾದ
ಬೇವ ಬೇವ

ಹೊಸ ತಳಿರ ಹಸಿರು
ಹೊಸ ಮುಗುಳ ಚಿಗುರು
ಹಚ್ಚಲಿ ಸಿಹಿ ಬೆಲ್ಲದ ಕುಸುರು
ಹಿಗ್ಗಲಿ ಈ ಜಗದ ಬಸಿರು

-----------0--------

ವಿಭಾ ಪುರೋಹಿತ
ಬೆಂಗಳೂರು

ವಿಡಿಯೋ
ವಿಡಿಯೋ

ವಿಭಾ ಪುರೋಹಿತ

ಕವಯತ್ರಿ ವಿಭಾ ಪುರೋಹಿತ, ಇಂಗ್ಲೀಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವೀಧರೆ. ಸದ್ಯ ಬೆಂಗಳೂರಿನ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಕನ್ನಡತೇರರಿಗೆ ಕನ್ನಡ ಕಲಿಕಾ ತರಬೇತಿ ನೀಡುತ್ತಿದ್ದಾರೆ. ಚಂದನ ವಾಹಿನಿಯಲ್ಲಿ ವಾರ್ತಾವಾಚಕಿಯಾಗಿ ಮತ್ತು ಹಾಸನದ ಎಫ್.ಎಂ. ಕೇಂದ್ರದಲ್ಲಿ ಉದ್ಘೋಷಕಿಯಾಗಿ ಕೆಲಸ ಮಾಡಿದ್ದಾರೆ. ಕವನ -ಪ್ರಬಂಧ ಬರೆಯುವುದು, ಅನುವಾದ ಮಾಡುವುದು ಇವರ ಹವ್ಯಾಸ. 'ಮಲ್ಲಿಗೆ ಮತ್ತು ಇತರೆ ಕವಿತೆಗಳು' ಹಾಗೂ  'ದೀಪ ಹಚ್ಚು' ಕವನಸಂಕಲನಗಳನ್ನು ಪ್ರಕಟಿಸಿದ್ದಾರೆ.  ಕರ್ನಾಟಕ ಲೇಖಕಿಯರ ಸಂಘ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು ಸೇರಿದಂತೆ ರಾಜ್ಯ ಹಲವಾರು ಕನ್ನಡ ಪರ ಮತ್ತು ಸಾಹಿತ್ಯಕ ಸಂಘ ಸಂಸ್ಥೆಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಸಾಹಿತ್ಯ ಸೇವೆಗೆ 'ಸ್ವಾಮಿ ವಿವೇಕಾನಂದ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ' ಮತ್ತು ಹುಬ್ಬಳ್ಳಿಯ ಚೇತನ ಸಾಹಿತ್ಯ ಪ್ರಕಾಶನದ 'ಚೇತನ ಸಾಹಿತ್ಯ ಸಮ್ಯಾನ್' ದೊರತಿವೆ. 'ಕಲ್ಲೆದೆ ಬಿರಿದಾಗ' ಅವರ ಮೂರನೆ ಕವನ ಸಂಕಲನ.

More About Author