ಹರೆಸುರಿದು ತೊರೆಯುಕ್ಕಿ ಸಂಗಮಕೆ ಹಪಹಪಿಸಿ
ಮುಖದೊಳಗೆ ಹೊಸಕಾವ್ಯ ಮೂಡುತ್ತಿದೆ
ವ್ಯಾಪಿಸುತ ದೇಹವಿಡಿ ಹಬ್ಬುತ್ತಿದೆ ॥ಪ॥
ಬಾಯಿಲ್ಲಿ ಬಂದುಬಿಡು ಅರೆಘಳಿಗೆ ಬಂಧಿಸುವೆ
ತೊಡಿಸುವೆನು ಮೇಲೆತ್ತಿ ತೋಳಬಂಧಿ
ಮೃದುಗಲ್ಲ ಎದೆಗಾತು ಒರಗಿಬಿಡು ಅರ್ಪಿಸುತ
ಮರವಪ್ಪಿ ಹೂಬಳ್ಳಿ ಘಮಲುಗಂಧಿ ೧
ತುದಿಬಾಗಿಲೊಳು ನಿಂತು ಮೈಮರೆತು ಬಿಡುಗಣ್ಣು
ಮುಕ್ಕುತ್ತ ಗಬಗಬನೆ ಹಸಿದಕಣ್ಣು
ನೆಪನೂರು ತಿರುಗಾಡಿ ಮನೆಯೆದುರು ಸುಳಿದಾಡಿ
ರುಚಿದುಂಬಿ ಕಾಯುತಿದೆ ಮಾಗಿಹಣ್ಣು ೨
ನಿದ್ದೆ ನೀರಡಿಕೆಗಳು ಹಸಿವಿಲ್ಲ ರುಚಿಯಿಲ್ಲ
ಹೊಸರಾಗ ಅನುಭೋಗ ಮನದಲ್ಲಿದೆ
ಕಾಯಗುಣ ಹದವೆದ್ದು ಹರೆಜಿನುಗಿ ಹೊಸಕಾವ್ಯ
ಚೈತ್ರದಲಿ ಕುಕಿಲುಕ್ಕಿ ಬನದಲ್ಲಿದೆ ೩
ಕುಡಿನೋಟ ಒಳನಾಟಿ ಉಟ್ಟುಡುಗೆ ಬಿಗಿಯಾಗಿ
ಉದ್ವೇಗದ್ವಿದ್ಯುತ್ತು ಝಗಮಗಿಸಿದೆ
ನೋಟಗಳು ಮಾತುಗಳು ಭೇಟಿಗಳು ಸ್ಪರ್ಶಗಳು
ಬೇಳೆಗಳು ಕಾಳಾಗಿ ಮರುಹುಟ್ಟಿದೆ ೪
ತುಟಿಹಾಡಿ ಪಲ್ಲವಿಯ ಧರಣಿಯಲಿ ಚರಣಗಳು
ಹೆಜ್ಜೆ ಗುರುತುಗಳೀಗ ಸಾಕ್ಷಿಕರಿಸಿ
ಪದವಿಟ್ಟು ಪದತೆಗೆದು ಹದಮಾಡಿ ನಾದಿದರು
ಅಪಸ್ವರವ ಸುಸ್ವರದಿ ಇಂದಿಕರಿಸಿ ೫
- ಜೀವರಾಜ ಹ ಛತ್ರದ
ಜೀವರಾಜ ಹ ಛತ್ರದ
ಲೇಖಕ ಜೀವರಾಜ ಹನುಮಂತಪ್ಪ ಛತ್ರದ ಮೂಲತಃ ಹಾವೇರಿ ಜಿಲ್ಲೆಯ ಬ್ಯಾಡಗಿಯವರು. ಸರ್ಕಾರಿ ಪ್ರೌಢಶಾಲಾ ಶಿಕ್ಷಕರು. ಹಾವೇರಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷರು. ಪ್ರಸ್ತುತ ಬ್ಯಾಡಗಿ ತಾಲೂಕಿನ ಮಾಸನಗಿ ಸರಕಾರಿ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಕೃತಿಗಳು: ಖುಷಿ ತರಲಿ ಕೃಷಿ, ಅಕ್ಕಡಿ ಕಾಳು( ವೈಚಾರಿಕ ಲೇಖನಗಳು), ಯಾಲಕ್ಕಿ ಹಾಲಕ್ಕಿ, ರಮ್ಯಗಾನ, ಅನುವಿನು, ದಾಂಪತ್ಯ ಗೀತೆಗಳು, ಜೀವಣ್ಣನ ಆಧುನಿಕ ತ್ರಿಪದಿಗಳು, ಅಸಲಿ ಮಳೆ, ಹನಿ ಹನಿ ಕಾವ್ಯಧಾರೆ, ಮಂಜೂರ್ಶಿ, ಸೂರು ಗುಡ್ಡ, ಉದಯ ರಶ್ಮಿ (ಕವನ ಸಂಕಲನಗಳು)
More About Author