ಅವ್ವ,ಅಮ್ಮ,ಚಿಕ್ಕಮ್ಮನಾದಿ ಯಾಗಿ
ಅಕ್ಕನು ಕಲಿಯುತ್ತಾ
ಹೂ ಮಾಲೆ ನೇಯುವಾಗ
ಈ ಕಲೆ ನನಗೆ ಒಲಿಯಬಹುದೇ
ಎಂದು ಸೋಜಿಗದಿಂದ ನೋಡಿದ ಬಾಲ್ಯವಿತು !
ಭಯದ ಎದೆಯಲ್ಲಿ ...
ಚುಕ್ಕರ ಕುಳಿತು ಬೆರಗು ಕಣ್ಣಲ್ಲಿ ನೋಡಿದ್ದನ್ನು ಈಗ
ತನ್ನ ತೆಕ್ಕೆಗೆ ದಕ್ಕಿಸಿಕೊಂಡಿದೆ ಕಾಲ.
ನಯ - ನಾಜೂಕಿನ ಮೃದು
ಅಚ್ಚ ಬಿಳುಪಿನ ಶುಭ್ರ ಮಲ್ಲಿಗೆಯ
ಸುಖದ ಸ್ಪರ್ಶದ ಮಾಲೆ ಹೆಣೆಯುತ್ತಾ
ಇನ್ನೇನು ಬೆರಳ ತುದಿಯಲ್ಲಿ ಇತ್ತೆಂದಾಗ
ತೊಟ್ಟು ತುಂಡಾಗುವ ವೈರುಧ್ಯಗಳು .
ಆಚೆ ತೊಟ್ಟು ಈಚೆ ತೊಟ್ಟು ಸೇರಿಸಿ
ಎಳೆ ಬಾಳೆ ನಾರಿನ ದಾರದಿ
ಸುತ್ತು ಹಾಕಿ ಎರಡೆಳೆಯ ಒಂದು ಗಂಟು
ಹಾಗೆಯೇ ಎರಡನೆಯ ಗಂಟು
ಮೂರೂ ಗಂಟು ಹಾಕಿ ಬಿಡುತ್ತೇವೆ ಬೆರಳ ಚಮತ್ಕಾರಲ್ಲಿ
ಶಾಶ್ವತವೆಂಬ ಭ್ರಮೆಯಲ್ಲಿ....
ಮೂರರ ಆಸೆಯ ಮೂವತ್ತರ ಹರೆಯಕ್ಕು ದಾಟಿಸಿ
ಈಗ ಒಂದಲ್ಲ ,ಎರಡಲ್ಲ
ಮೊನ್ನೆ ತಾನೆ ಮೂರನೆ ನಮೂನಿಯ
ಮಾಲೆ ಕಟ್ಟಲು ಕಲಿತ ಬಿಸುಪು
ಇನ್ನು ಬೆರಳ ತುದಿಯಲ್ಲಿ ಇತ್ತೆಂದಾಗ
ಈಗದೇ ಮಗಳ ಸೋಜಿಗದ ಕಣ್ಣು
ನನ್ನ ಸುತ್ತಲೇ ಗಸ್ತು ತಿರುಗುತ್ತಾ ನೇಯುವ ಅವಳದೇ ಆಸೆ
ನನ್ನೆದೆ ತುಂಬುತ್ತಿದೆ.
ಅವ್ವನಿಂದ ,ಅಮ್ಮನಿಗೆ
ಅಮ್ಮನಿಂದ ,ನನಗೆ
ನನ್ನಿಂದ ,ಮಗಳಿಗೆ
ಹಿಂತಿರುಗಿ ನೋಡಿದರೆ
ಹೀಗೆ ರವಾನಿಸಲ್ಪಟ್ಟ
ಈ ನೇಯುವ ಸುಖದ ಕಲೆಯ
ಇತಿಹಾಸ ಹೆಣ್ಣು.
- ಸಂಗೀತಾ ರವಿರಾಜ್ ಚೆಂಬು.
ಸಂಗೀತಾ ರವಿರಾಜ್
ಕವಯಿತ್ರಿ ಸಂಗೀತಾ ರವಿರಾಜ್ ಅವರು ಮೂಲತಃ ಕೊಡಗಿನವರು. ಅವರು ಎಂ.ಎ ಅರ್ಥಶಾಸ್ತ್ರ ಬಿ.ಇಡಿ ಪದವೀಧರೆ. ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ಇವರ ಕವಿತೆಗಳು, ಪ್ರಬಂಧಗಳು ಮತ್ತು ವಿಮರ್ಶಾ ಲೇಖನಗಳು ಪ್ರಕಟಗೊಂಡಿವೆ. ರಾಜ್ಯ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಸೇವೆ ಸಲ್ಲಿಸಿರುತ್ತಾರೆ. ಅವರು ‘ಚೆಂಬು ಸಾಹಿತ್ಯ ವೇದಿಕೆ’ ಯನ್ನು ಹುಟ್ಟುಹಾಕಿರುತ್ತಾರೆ. ಪ್ರಶಸ್ತಿ: ‘ಕಪ್ಪು ಹುಡುಗಿ” ಕೃತಿಗೆ 2018ರ ಕೊಡಗಿನ ಗೌರವ ಪ್ರಶಸ್ತಿ. ಕೃತಿಗಳು: ಕಪ್ಪು ಹುಡುಗಿ(ಕವನ ಸಂಕಲನ), ಕಲ್ಯಾಣ ಸ್ವಾಮಿ(ಕಾದಂಬರಿ), ನಿರುತ್ತರ(ಕವನ ಸಂಕಲನ)
More About Author