Poem

ಹೊಂದಿಕೆ ಎಂಬುದು 

ಹೊತ್ತಿನ ಮೆಹನತ್ತಿಗೆ ಸಿಗುವುದು
ಇನ್ನೂರೈವತ್ತು...
ಅದರಲ್ಲಿ ಮನೆಯವನ
ಬೀಡಿ ಬೆಂಕಿಪೊಟ್ಟಣಕ್ಕೆ ಇಪ್ಪತ್ತು
ಉಳಿದದ್ದು ಮೀನು ಮೆಣಸು
ಅಕ್ಕಿ ಕಾಯಿ ಸಂಬಾರದ ಬಾಬತ್ತು

 

"ಹತ್ತಾದರೂ ಹೆಚ್ಚಿಗೆ ಕೊಡು"
ಸಣ್ಣ ಸೊಲ್ಲು ಬಂದರೆ
ದಿಗಿಣ ಹಾಕಿ, ಹಿಡುಗಲು ಹುಡುಕಿ
ಖಡೂಸು ದನಿಯಲ್ಲಿ
`ಬೇಕೇನೋ ಹೊಡ್ತ..?'
ಎಂದರೆ ಮತ್ತೆ ಅವಾಜಿಲ್ಲ

 

ನಯ ನಾಜೂಕುಗಳ ಹಂಗಿಲ್ಲ
ಕದಗಳ ಮರೆಗೆ ಗುಸುಗುಸು ಮಾತಿಲ್ಲ
ಸೆರಗ ಮುಚ್ಚಿ ಅಳುವಿಲ್ಲ
ಹೊರಜಗಲಿಯ ಮೇಲೇ
ಎಲ್ಲವೂ ಖುಲ್ಲಂ ಖುಲ್ಲ

 

ಕುಡಿದು ಬರದೇ ಇದ್ದರೂ
ಬಂದರೂ
ತಟ್ಟೆ ತುಂಬ ಗಂಜಿ
ಬದಿಗೆ ತಲೆ ಮುರಿದು ಇಟ್ಟ ಒಣಮೀನು
ಮತ್ತೆರಡು ಸುಟ್ಟ ಹಸಿಮೆಣಸು
ಗೋಡೆಗೆ ಚಾಚಿಟ್ಟ ಮಣೆಯಲ್ಲಿದೆ
ಮುಚ್ಚಿಟ್ಟ ಪ್ರೀತಿ

 

ನಿನ್ನೆ ಇದೇ ಹೊತ್ತಿಗೆ ಇಲ್ಲೇ ಜಗುಲಿಯ ಮೇಲೆ
ಕೋಳಿಬುಟ್ಟಿಯ ಸಮೀಪ
ಕಾಲಿಗೆ ಸಿಕ್ಕ ಕರಿಕುನ್ನಿ ಕುಂಯ್ಯೋ ಮುರ್ರೋ
ಅನ್ನುವಂತೆ ಜಟಾಪಟಿ ಹೊಡೆದಾಟ
ಅವನ ಕೈಯಲ್ಲಿತ್ತು ಇವಳ ಜುಟ್ಟು
ಇವಳ ಒಡೆದ ಬಳೆ ತಾಗಿ ಅವನ ಕೆನ್ನೆ ಹೋಳಾಗಿತ್ತು

 

ನಿಂತು ನೋಡುವರ ಕಣ್ಣುಗುಡ್ಡೆ
ನೂರು ಮತ್ತೊಂದು ಚೂರಾಗಲಿ
ಹಿಡಿಶಾಪ ಮುಗಿದ ಮೇಲೆ
ಒಡ್ಡು ಒಡೆದು ನದಿಯ ಪಾತ್ರ ಒಣ ಒಣ
ತುಂಬಿಕೊಂಡ ಸಮುದ್ರಕ್ಕೆ ಭಾರೀ ಹೊಯ್ದಾಟ

 

ಅಷ್ಟಾದ ಮೇಲೆ
ಸೌದೆ ಒಡೆಯಲು ಅವನು ಹೋದರೆ
ಇವಳು ಮಡಕೆ ತಿಕ್ಕಲು ಕುಳಿತಳು
ನಿಂತು ನೋಡಿದವರು ಮರುಬೆಳಿಗ್ಗೆ
ಕತ್ತಿ ಬಳ್ಳಿ ಹಿಡಿದು ಬೆಟ್ಟದ ದಾರಿಗುಂಟ
ಕವಳಕ್ಕೆ ಸುಣ್ಣ,ಅಡಿಕೆ ಬದಲಾಯಿಸಿಕೊಳ್ಳುತ್ತ
ಊರ ಹಬ್ಬಕ್ಕೆ ಪದಾರ್ಥ ಹೊಂದಿಸುವ ಬಗ್ಗೆ ಮಾತಾಡಿದರು
ಅವರೆಲ್ಲರ ಜೊತೆಗೆ ಇವರಿದ್ದರು.

 

ಹೊಂದಿಕೆಯೆಂಬುದು ಎಷ್ಟೂ ಕಷ್ಟವಲ್ಲ
ಪಾಠಮಾಡಿ ಬಂದು ಕುರ್ಚಿ ಸರಿಸಿ
ಆಫೀಸು ರೂಮಿನಲ್ಲಿ ಉಸ್ಸೆಂದು ಕುಳಿತು ನೀರಿನಬಾಟ್ಲಿ ತೆರೆದರೆ
ಹತ್ತಿರದಲ್ಲೊಂದು
ಮರೆಮಾಚುವ ಅಳು
ಬೆನ್ನು ನೀವಿ ಸಮಾಧಾನಿಸಿದರೆ
ತಿಂಗಳಿಗೆ ನಲವತ್ತು ಸಾವಿರ ಸ್ಯಾಲರಿಯ
ಟೀಚರಮ್ಮನದು
ಹಳೆಯ ತರಹದ್ದೇ ಕಥೆ-

 

ನಾಳೆ ನಿವೃತ್ತಿಯಾಗಲಿರುವ ಗುರುಗಳ
ಬೀಳ್ಕೊಡುಗೆಯ ಹಣಕ್ಕೆ
ಇಂದು ರಾತ್ರಿ ಗಂಡನ ಮುಂದೆ
ನೂರು ಮಾತನ್ನಿಸಿಕೊಂಡು
ಕೈಚಾಚಬೇಕು

ಕಲಾಕೃತಿ : ಕಂದನ್‌ ಜಿ. ಕೆ.

ರೇಣುಕಾ ರಮಾನಂದ

ರೇಣುಕಾ ರಮಾನಂದ ಅವರು ತಲೆಮಾರಿನ ಭರವಸೆಯ ಕವಯತ್ರಿ. ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ವಂದಿಗೆ ಹುಟ್ಟೂರು. ತಂದೆ ಹೊನ್ನಪ್ಪ ನಾಯಕ ಮತ್ತು ತಾಯಿ ಮಾಣು.

ತವರೂರಿನ ಸರ್ಕಾರಿ ಶಾಲೆಯಲ್ಲಿ ಆರಂಭದ ಅಕ್ಷರಾಭ್ಯಾಸ, ಅಂಕೋಲಾದ ಟೀಚರ್ ಟ್ರೈನಿಂಗ್ ಕಾಲೇಜಿನಲ್ಲಿ ಟಿಸಿಎಚ್ ಪೂರ್ಣಗೊಳಿಸಿರುವ ರೇಣುಕಾ ಅವರು ಕನ್ನಡ ಎಂ.ಎ.ಪದವಿಧರೆ. ರೇಣುಕಾ ಅವರು ವೃತ್ತಿಯಲ್ಲಿ ಪ್ರಾಥಮಿಕ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಜೀವನ ಸಂಗಾತಿ ರಮಾನಂದ ಪಿ.ನಾಯಕ್ ರವರು ಕೂಡ ವೃತ್ತಿಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಮಾನಂದ ದಂಪತಿಯ ಬಾಳು ಬೆಳಗಿಸಲು ಗುಲಾಬಿಗಳಾದ ತ್ರಿಭುವನ ಮತ್ತು ಪ್ರಾರ್ಥನ ಬಂದಿದ್ದಾರೆ.

ವೃತ್ತಿಯಲ್ಲಿ ಪ್ರಾಥಮಿಕ ಶಾಲಾಶಿಕ್ಷಕಿ, ಪ್ರವೃತ್ತಿಯಲ್ಲಿ ಕವಯತ್ರಿ- ಲೇಖಕಿ. ಬದುಕಿನ ಅನುಭವ, ಮಾಗಿದ ಭಾವಗಳೇ ಕಾವ್ಯದ ವಸ್ತುಗಳು, ಏಕಾಂಗಿತನವೇ ಕಾವ್ಯಕಟ್ಟುವ ಗೋಪುರ. ಕರಾವಳಿ ಮುಂಜಾವು ಪತ್ರಿಕೆಯಲ್ಲಿ ರೇಣುಕಾ ಅವರ ಪ್ರಬಂಧ-ಲೇಖನಗಳು ಪ್ರಕಟವಾಗಿವೆ. ಕಡಲಿನ ಮೊರೆತ-ಕಡಲಿನ ಮೌನವೆರಡರ ಸಮ್ಮಿಳಿತದಂತ ಅಭಿವ್ಯಕ್ತಿಯ ರೇಣುಕಾ ಅವರು ನನ್ನಿಷ್ಟದಂತೆ ಬರೆಯುತ್ತೇನೆ, ತಿಂಗಳುಗಟ್ಟಲೆ ಮಾಗಿಸಿಯೇ ಕಾವ್ಯಕಟ್ಟುತ್ತೇನೆ ಎನ್ನುತ್ತಾರೆ.

'ಮೀನುಪೇಟೆಯ ತಿರುವು' ಚೊಚ್ಚಲ ಕವನ ಸಂಕಲನ. ರಾಜ್ಯ ಮಟ್ಟದ ಕವಿಗೋಷ್ಠಿಕಾವ್ಯಸ್ಪರ್ಧೆಗಳಲ್ಲಿ ಬಹುಮಾನ ಪಡೆದಿರುವ ರೇಣುಕಾ ಅವರಿಗೆ ಸಂಕ್ರಮಣ ಕಾವ್ಯ ಪ್ರಶಸ್ತಿ, ಕಸಾಪ ದತ್ತಿನಿಧಿ ಪ್ರಶಸ್ತಿ, ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ ದೊರೆತಿವೆ.


 

More About Author