Poem

ಹೆಣ್ಣಾದೆ

ಅಂದು ನೀ ಆಕೃತಿಯಾಗಿದ್ದೆ
ನಾನು ನೆರಳಾಗಿದ್ದೆ

ವೀರ ಸಹಸ್ರ ಬಾಹು ಆದಾಗ
ಮಾಲೆ ಹಾಕಿದ್ದೆ

ನೀನು ಬೀಜ ಎಂದೊಡನೆ
ಹೊಲವಾಗಿ ಮಲಗಿದ್ದೆ

ಗಂಡಾಳ್ವಿಕೆಯ ಅಡಿಯಲ್ಲಿ
ಮಕ್ಕಳನ್ನು ಹೆತ್ತಿದ್ದೆ

ಅಶ್ವಮೇಧಕೆ ಹೊರಟಾಗ
ಗೃಹಕೃತ್ಯದಲ್ಲಿದ್ದೆ

ಕುಡಿದು ಗಂಡಿಸುವಾಗ
ಮುದುಡಿ ನರಳುತ್ತಿದ್ದೆ

ಅನುಮಾನ ಪಟ್ಟಾಗ
ಅಪಮಾನ ಸಹಿಸಿದ್ದೆ

ಸತ್ತು ಚಿತೆ ಏರಿದರೂ
ಸಹಗಮನವಾಗಿದ್ದೆ

ಇಂದು ನಾ ಹೆಣ್ಣಾದೆ
ಸಮತೆಯಲ್ಲಿ ಒಂದಾದೆ

- ಸಾವಿತ್ರಿ ಮುಜುಮದಾರ

ಸಾವಿತ್ರಿ ಮುಜುಮದಾರ

ಸಾವಿತ್ರಿ ಮುಜುಮದಾರ ಅವರು ಮೂಲತಃ ಕೊಪ್ಪಳ ಜಿಲ್ಲೆಯವರು. ಚಿಂತಕಿ, ಲೇಖಕಿ, ಕವಯತ್ರಿ ಹಾಗೂ ಸಮಾಜಿಕ ಹೋರಾಟಗಾರ್ತಿಯಾಗಿ ಹೆಸರಾದವರು. ಇವರು ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿ ಸಿಂಡಿಕೇಟ್‌ ಸದಸ್ಯೆಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆಗಳಿಗೆ ಅಂಕಣಗಳನ್ನು ಬರೆಯುವ ಹವ್ಯಾಸ ಇವರದು. ʻಹೆಣ್ಣು ಹೆಜ್ಜೆʼ ಅಂಕಣ ಬರಹಕ್ಕೆ 6ನೇ ದಲಿತ ಸಾಹಿತ್ಯ ಸಮ್ಮೇಳನದ ʻಪುಸ್ತಕ ಪ್ರಶಸ್ತಿʼ ಲಭಿಸಿದೆ. ಕೃತಿಗಳು: ʻಹೆಣ್ಣು ಹೆಜ್ಜೆʼ (ಅಂಕಣ ಬರಹ), ನಾರಿಪದ್ಯ (ಕವನ ಸಂಕಲನ)

More About Author