Story

ಹೆಜ್ಜೆಗೆ ದಾರಿ 

ಮನೆ ಬಾಗಲಿಗೆ ಬಂದಾಗ ಕಣ್ಣು ಕುಕ್ಕುವ ಚಿತ್ತಾರದ ರಂಗೋಲಿ ಇರಲಿಲ್ಲ. ಸದಾ ಮನೆಯ ಮುಂದುಗಡೆ ಬೆಳಕು ಹರಿಯೊ ಹೊತ್ತಿಗೆ ಬಣ್ಣ ತುಂಬಿಕೊಂಡ ರಂಗೋಲಿ ಇರುತಿತ್ತು. ಮಹಾದೇವಮ್ಮನವರ ಕೈಯಲ್ಲಿ ಅದ್ಯಾವ ಮಾಂತ್ರಿಕತೆ ಇತ್ತೋ ರಂಗೋಲಿ ಬಿಡಿಸಿದರೆ ಭೂಮಿಗೆ ಹೂ ಮುಡಿಸಿದಂತಿರುತಿತ್ತು. ಮಹಾದೇವಮ್ಮನ ಹಣೆ ಮೇಲಿನ ಕುಂಕುಮದಂತೆ ಕಂಗೊಳಿಸಿ, ಮೋಡಯೇರಿ ಬರುತಿದ್ದ ಸೂರ್ಯನೆ ಕ್ಷಣ ನಿಂತು ಬೆರಗಾಗಿ ರಂಗೋಲಿಯನ್ನು ನೋಡುತ್ತಿದ್ದ. ಚಿಲಿಪಿಲಿಗುಡುವ ನೂರಾರು ಗುಬ್ಬಿಗಳು ಶಿವಯ್ಯ ಮಾಸ್ತಾರರು ಬೆಳಿಸಿದ ಮಾವಿನ ಮರದಲ್ಲಿ ಕುಳಿತು ರಂಗೋಲಿಯನ್ನು ನೋಡಿ ಕಣ್ಣು ತುಂಬಿಕೊಂಡು, ಚಿಂವ್...ಚಿಂವ್... ಎಂದು ಹಾಡುತ್ತಿದ್ದವು. ಅವುಗಳ ಹಾಡು ಕೇಳಿ ಮಹಾದೇವಮ್ಮ ಅಕ್ಕಿ ನುಚ್ಚು ತಂದು ಅಂಗಳಕ್ಕೆ ಚೆಲ್ಲುತ್ತಿದ್ದಳು. ಮರದಲ್ಲಿದ್ದ ಗುಬ್ಬಿಗಳು ಒಮ್ಮಲೇ ಅಂಗಳಕ್ಕಿಳಿದು ತಾಯಿಯ ಹಾಲು ಕುಡಿವಂತೆ ಒಂದೊಂದೆ ಕಾಳನ್ನು ತಿನ್ನುತ್ತಿದ್ದವು. ಈ ದೃಶ್ಯವನ್ನು ನೋಡುವದೆ ಒಂದು ಮಹಾದಾನಂದ. ಶಿವಯ್ಯ ಮಾಸ್ತರರು ಬೆಳಗ್ಗೆದ್ದು ಓದುತ್ತಿದ್ದ ವಚನಗಳ ಜೊತೆಗೆ ಈ ಆತ್ಮಾನಂದದ ದೃಶ್ಯವನ್ನು ಮೈತುಂಬಿಕೊಳ್ಳುತ್ತಿದ್ದರು. `ಯಪ್ಪಾ ಬಸವಣ್ಣ ಜೀವನ ಎಷ್ಟು ಸುಂದರಪ್ಪ. ಇದಕ್ಕಿಂತ ಮತ್ತ್ಯಾವ ಮಹಾದಾನಂದ ಐತಿ. ಅರಿತರೆ ಅರಿವು ಮರೆತರೆ ಮರಣ’ ಎಂದು ತಮ್ಮಷ್ಟಕ್ಕೆ ತಾವೆ ಅಂದುಕೊಂಡು ವಚನಗಳ ಓದಿನಲ್ಲಿ ತಲ್ಲೀನಾಗುತ್ತಿದ್ದರು. ಪೂರ್ವ ದಿಕ್ಕಿಗಿದ್ದ ಕಿಡಿಕಿಯ ಮೂಲಕ ಸೂರ್ಯನ ದಿವ್ಯವನ್ನು ಹೃದಯ ತುಂಬಿಕೊಳ್ಳುತ್ತಾ ಧ್ಯಾನಸ್ಥರಾಗಿ ಓದುವುದು ಶಿವಯ್ಯ ಮಾಸ್ತಾರರ ಅಭ್ಯಾಸ.

ಮನೆ ಮುಂದೆ ನಿಂತವನು ಕಿಡಿಕಿ ಕಡೆ ನೋಡಿದೆ ಮುಚ್ಚಿತ್ತು. ಬಾಗಿಲು ಮುಂದೆ ಎರಡೆಳೆಯ ರಂಗೋಲಿ ಮಾತ್ರ ಇದೆ. ಮಾವಿನ ಮರ ಹಣ್ಣಾಗಿದೆ. ಎಲೆಗಳು ಒಣಗಿವೆ. ಗುಬ್ಬಿಗಳ ಕಲರವ ಇಲ್ಲ. ಗುಬ್ಬಿಗಳಿಗೂ ಈ ಮನೆ ಬೇಸರವಾಯಿತೆ. ಮಾಸ್ತಾರರು ಬೇಡವಾದರೆ. ಮನಸ್ಸಿಗೆ ಹಿಂಸೆ ಅನಿಸಿತು.

ಹೊಸ್ತಿಲು ದಾಟಿ ಮನೆ ಒಳಗೆ ಕಾಲಿಟ್ಟೆ. ಅದೆ ಎರಡು ಕೋಣೆಯ ಮನೆ. ಆರು ವರ್ಷದ ಹಿಂದೆ ಮನೆ ಹೇಗಿತ್ತೋ ಹಾಗೆ ಇದೆ. ಇದ್ದ ಜಾಗದಲ್ಲಿಯೇ ಮಂಚ. ಮಂಚದ ಕೆಳಗಡೆ ಅಕ್ಕಿ, ಜೋಳ, ಗೋಧಿ, ತೊಗರಿಬೇಳೆ, ಅಲಸಂದಿ, ಮೆಟಿಕೆ, ಉಳ್ಳಿ, ಮೆಂತೆ, ಗುರೆಳ್ಳು, ಶೇಂಗಾ, ಎಳ್ಳು, ಕುಸುಬೆಯ ಚಿಕ್ಕ ಚೀಲಗಳು. ಹಾಸಿಕೊಳ್ಳುವ ಹಾಸಿಗೆಗಳು. ನಾನಿದ್ದಾಗ ಈ ಚೀಲಗಳನ್ನು ಹೊಂದಿಸಿ ಇಡುತ್ತಿದ್ದೆ. ಹಾಗೆ ಮಟ್ಟಸ ಇಟ್ಟಾಗಲೆಲ್ಲಾ ಮಾಸ್ತಾರರ ಕೃಪಾ ಕಟಾಕ್ಷಕ್ಕೆ ಒಳಗಾಗುತ್ತಿದ್ದೆ. ಅವರ ಪ್ರೀತಿಯ ಹೊಗಳಿಕೆ ನಿರೀಕ್ಷಿಸುತ್ತಿದ್ದೆ. ಮಂಚಕ್ಕೆ ಸ್ವಲ್ಪ ಹತ್ತಿಕೊಂಡಂತೆ ಮಾಸ್ತಾರರು ಓದಲು ಬರೆಯಲು ಉಪಯೋಗಿಸುತ್ತಿದ್ದ ಟೇಬಲ್ಲು, ಖುರ್ಚಿ, ಅದೇ ಜಾಗದಲ್ಲಿದೆ. ಮಾಸ್ತಾರರು ಇಲ್ಲದಾಗ ಆ ಖುರ್ಚಿಯ ಮೇಲೆ ಕೂಡುವುದೆಂದರೆ ನನಗೆ ಬಲು ಖುಷಿ. ಮಾಸ್ತಾರರು ಇಲ್ಲದಾಗ ಆ ಖುರ್ಚಿ ಮೇಲೆ ಕುಳಿತು ಮಾಸ್ತಾರರ ಶೈಲಿಯಲ್ಲಿ ಓದುತ್ತಿದ್ದೆ. ಆಗ ವಿಚಿತ್ರ ಸಂತೋಷ ಆಗುತ್ತಿತ್ತು. ಮಹಾದೇವಮ್ಮ ಎಷ್ಟೋ ಸಲ ನನ್ನ ಹುಚ್ಚು ಆಸೆ ನೋಡಿದ್ದಳು. `ನೀನು ಓದಿ ಜಾಣ ಆಗು. ಇಂತ ಟೇಬಲ್ಲು, ಖುರ್ಚಿ ತಗವಂತಿಗಿ’ ಅಂತಿದ್ದರು. ಟೇಬಲ್ಲು ಕೆಳಗೆ ಪುಸ್ತಕ ಇಡಲು ಮಾಡಿದ್ದ ಮೂರು ಮಣೆಗಳು ಹಾಗೆ ಇವೆ. ಮೂರನೆಯ ಮಣೆ ನಾನೆ ತಂದಿದ್ದೆ. ಆ ಮಣೆಯ ಮೇಲೆ ನನ್ನ ಪುಸ್ತಕ ಇಡುತ್ತಿದ್ದೆ. ಟೇಬಲ್ಲು ಮೇಲ್ಗಡೆ ಶಿವಯ್ಯಾ ಮಾಸ್ತಾರರ ಫೋಟೋ. ಅದರ ಪಕ್ಕದಲ್ಲಿ ಅರವಿಂದರ ಫೋಟೋ. ಮಂಚದಿಂದ ಎರಡು ಮಳ ದೂರದಲ್ಲಿ ಬಚ್ಚಲು ಮನೆ. ನೀರು ತುಂಬಿಡುವ ಕೇಲು. ನಾನು ಆ ಕೇಲು ತುಂಬುವರೆಗೂ ನೀರು ತರುತ್ತಿದ್ದೆ. ಮಾಸ್ತಾರರಿಗೆ ಯಾವಾಗಲು ಕೇಲು ತುಂಬಿರಬೇಕು. ಮಂಚ ಇಟ್ಟ ಹಿಂದಿನ ಕೋಣೆಯೆ ಅಡುಗೆ ಮನೆ. ಅಡುಗೆ ಮನೆಯ ಒಂದು ಮೂಲೆಯಲ್ಲಿ ದೇವರ ಫೋಟೋಗಳು. ದೇವರಿಗೆ ಪೂಜೆ ಆಗುವವರೆಗೆ ಯಾರೂ ಒಂದು ಹನಿ ನೀರು ಮುಟ್ಟುವ ಹಾಗಿರಲಿಲ್ಲ. ಪೂಜೆ ಆದ ಮೇಲೆ ಎಲ್ಲಾರಿಗೆ ಊಟ. ಈಗಲೂ ಅದೇ ನಿಯಮ ಇರಬೇಕು. ಆರು ವರ್ಷದ ಹಿಂದೆ ಮನೆ ಹೇಗಿತ್ತೋ ಹಾಗೆ ಇದೆ. ಮನೆಯಲ್ಲಿರುವ ಮನಸ್ಸುಗಳು ಮಾತ್ರ ಅಲ್ಲೋಲ ಕಲ್ಲೋಲವಾಗಿವೆ.

ಪಾಶ್ರ್ವವಾಯ ಬಡಿದ ಶಿವಯ್ಯ ಮಾಸ್ತಾರರು ಮಂಚದ ಮೇಲೆ ಮಲಗಿದ್ದರು. ಆರು ವರ್ಷದ ಹಿಂದೆ ಮಂಚದ ಮೇಲೆ ಕೂರಲು ಹೆದರುತಿದ್ದ ನಾನು ಮಂಚದ ಮೇಲೆ ಸಂಕಟದಿಂದಲೆ ಕುಳಿತುಕೊಂಡೆ. ಮಾಸ್ತಾರರು ಕಣ್ಣು ಮುಚ್ಚಿಕೊಂಡಿದ್ದರು. ನೇರವಾಗಿ ಅವರ ಮುಖ ನೋಡಲು ಧೈರ್ಯವಾಗಲಿಲ್ಲ. ಅವರನ್ನು ಮಾತಾಡಿಸಲು ಇಡೀ ದೇಹ ತವಕಿಸುತ್ತಿದ್ದರೂ ಸುಮ್ಮನೆ ಕೂತೆ. ಮಾತೆ ಬಾಯಿಂದ ಬರಲಿಲ್ಲ. ಮನಸ್ಸು ಕಂಪಿಸುತಿತ್ತು. ಕೈಕಾಲು ನಡುಗುತ್ತಿದ್ದವು. ಮಹಾದೇವಮ್ಮ ಇದ್ದರೆ ಇಷ್ಟು ಹೆದರಬೇಕಿರಲಿಲ್ಲ. ಅವರು ನನ್ನ ನೋಡಿದ ಕೂಡಲೆ ಮಾತಾಡಿ ಐದು ಹತ್ತು ನಿಮಿಷದಲ್ಲಿ ಮನಸ್ಸು ಹಗುರ ಮಾಡಿಕೊಂಡು ನಮ್ಮನ್ನೂ ಹಗುರಗೊಳಿಸುತ್ತಿದ್ದರು.

ಒಂದು ವರ್ಷ ಕಾಲ ಅನ್ನ ನೀರು ಹಾಕಿದ ಮಾಸ್ತಾರರ ಮನೆಗೆ ಆರು ವರ್ಷ ಏಕೆ ಬರಲಿಲ್ಲವೋ ...? ಅನ್ನ ಹಾಕಿದ ಇವರನ್ನು ನೆನೆಯುತ್ತಿದ್ದರೂ ಈ ಮನೆ ಬಿಟ್ಟು ಹೋದ ಮೇಲೆ ಮತ್ತೆ ಬರಲಿಲ್ಲ. ಹೋಗಬೇಕೆಂಬ ಮನಸ್ಸಿದ್ದರೂ ಯಾವುದೋ ಅವ್ಯಕ್ತ ಭಯ ತಡೆಯುತ್ತಿತ್ತು. ಒಂದು ಸಲ ಹೋಗಲೇಬೇಕಂದು ಅವರಿಗೆ ಇಷ್ಟವಾದ ಹುಣಸೇ ಚಟ್ನಿ, ತುಪ್ಪ ತಗಂಡು ಬಸ್ ಸ್ಟ್ಯಾಂಡಿಗೆ ಬಂದು ವಾಪಸ್ಸು ಹೋಗಿದ್ದೇನೆ. ಅನ್ನ ನೀಡಿ ವಿಶ್ವಾಸ ತೋರಿಸಿದ ಕುಟುಂಬವನ್ನು ತೀವ್ರವಾಗಿ ನೆನಪಿಸಿಕೊಳ್ಳುವುದರಲ್ಲಿಯೇ ನನಗೆ ಅತೀವ ಆನಂದವಿತ್ತು.

ಸುಮ್ಮನೆ ಕೂಡುವುದು ಹಿಂಸೆ ಅನಿಸಿತು. ನನ್ನನ್ನು ನೋಡಬೇಕೆಂಬ ಆತುರ ಅವರಲ್ಲಿದ್ದರೂ ತೋರಗೊಡದೆ ಕಣ್ಣು ಮುಚ್ಚಿದ್ದರು. ಅವರನ್ನು ಮಾತಾಡಿಸಲು ನನಗೆ ಹೆದರಿಕೆಯಾಗುತಿತ್ತು. ಆರಡಿ ಎತ್ತರದ ಮೂರಡಿ ಅಗಲದ ಅಜಾನುಬಾಹು ಮಾಸ್ತಾರರು ಈಗ ಗುಬ್ಬಿಯಂತೆ ಮುದುಡಿ ಮಲಗಿದ್ದರು. ನಿಧಾನಕ್ಕೆ ಕಣ್ಣು ತೆರೆದರು. ಮಾತನಾಡಿಸಬೇಕೆಂದರೆ ನಾಲಿಗೆ ಒಣಗಿತು. ಗಂಟಲು ಬಿಗಿಯಿತು. ನರಗಳಿಗೆ ಚೇಳು ಕಡಿದಂತಾಗಿ ತತ್ತರಿಸಿದೆ. ಮಾಸ್ತಾರರ ಕಣ್ಣುಗಳಲ್ಲಿದ್ದ ಆ ದಿವ್ಯ ಬೆಳಕು ಎಲ್ಲಿ ಹೋಗಿತ್ತೋ. ಯಾರು ಕದ್ದು ಒಯ್ದಿದ್ದರೋ. ಉತ್ಸಾದಿಂದ ಪುಟಿಯುತ್ತಿದ್ದ ಮಾಸ್ತಾರರ ದೇಹ ಹೀಗೆ ಶವದಂತೆ ಬಿದ್ದಿದ್ದು ನೋಡಿ ದೇಹವೇ ಜಡಗೊಂಡಿತು.

ನಾನು ಹೀಗೆ ಕುಳಿತರೆ ಭೂಮಿಯೇ ನನ್ನನ್ನು ನುಂಗುತ್ತದೆ. ನನ್ನ ಮೌನ ನನ್ನನ್ನೇ ತಿನ್ನುತ್ತದೆ ಎಂದು ಸಾವರಿಸಿಕೊಂಡು ಮಾತಾಡಿಸುವ ಧೈರ್ಯ ತಂದುಕೊಂಡೆ. ಮಾತು ಹೇಗೆ ಆರಂಭಿಸಬೇಕು. ಯಾವ ಮಾತು ಅವರಿಗೆ ಇಷ್ಟವಾದೀತು. ಹಾಸಿಗೆಯಲ್ಲಿ ನಿಸ್ಸಾಯಕರಾಗಿ ಬಿದ್ದವರಿಗೆ ಯಾವ ಮಾತುಗಳು ಸಮಧಾನ ತರಬಲ್ಲವು. ಮಾತಿಗಾಗಿ ತಡಕಾಡಿದೆ. ಹೇಗೋ ಉಸಿರು ಬಿಗಿ ಹಿಡಿದು `ಅರಾಮಿದ್ದೀರಾ...’ ಎಂದು ಕೈ ಹಿಡಕಂಡೆ. ರಕ್ತ ತುಂಬಿಕೊಂಡು ಉಬ್ಬುರಿತಿದ್ದ ಬೆರಳುಗಳು ಬಟ್ಟೆ ಬಟ್ಟೆಯಾಗಿದ್ದವು. ನನ್ನ ನೋಡಿ ನೋಡದವರಂತೆ ಸಣ್ಣ ಹುಡುಗರು ಸಿಟ್ಟಿನಿಂದ ಮುಖ ತಿರುವುವಂತೆ ತಿರುಗಿಸಿ ಆಕ್ರೋಶದಿಂದಲೋ ಅಸಹಾಯಕತೆಯಿಂದಲೋ `ಬದುಕಿದ್ದೀವಿ...’ ಅಂದರು. ನನ್ನ ಕೈಯನ್ನು ಬಿಗಿಯಾಗಿ ಹಿಡಿದುಕೊಂಡರು. ನನ್ನ ಕೈ ಹಿಡಿಕಂಡದ್ದೇ ನನ್ನಲ್ಲಿ ಜೀವ ಸಂಚಾರವಾಯಿತು.

ಮಾಸ್ತಾರರು ನನ್ನ ಮೇಲೆ ಮುನಿಸಿಕೊಂಡಿಲ್ಲ. ಅವರ ಕರುಣೆ ನನ್ನನ್ನು ಕಾಯುತ್ತಲೇ ಬಂದಿದೆ. ಅವರ ಅಪಾರ ಪ್ರೀತಿ ನನ್ನಲ್ಲಿ ಅಮೃತವೇ ತುಂಬಿತ್ತು. ಆದರೂ ನಾನು ಆರು ವರ್ಷ ದೂರವೇ ಇದ್ದೆ. `ಬದುಕಿದ್ದೀವಿ’ ಅನ್ನೋ ಮಾತು ನನ್ನನ್ನು ಪಾತಾಳಕ್ಕೆ ಇಳಿಸಿತು. ಮುವತ್ತೇಳು ವರ್ಷಗಳ ಕಾಲ ತಮ್ಮ ಸೇವೆಯಲ್ಲಿ ಅಸಂಖ್ಯ ಮಕ್ಕಳಿಗೆ ಪಾಠ ಹೇಳಿದ್ದರು. ಅನೇಕರಿಗೆ ಅನ್ನದಾನ ಮಾಡಿ ಓದಿಸಿ ಬೆಳಿಸಿದ್ದರು. ಅವರು ಮಾಸ್ತಾರಿಕೆ ಎಂದರೆ ಬರೀ ಪಾಠ ಮಾಡುವದಷ್ಟೆ ಎಂದು ತಿಳಿದಿರಲಿಲ್ಲ. ಹಳ್ಳಿಗಳಿಗೆ ಬೇಕಾದ ನೀರು, ಆರೋಗ್ಯ ಕೇಂದ್ರ, ಶಾಲೆ, ರಸ್ತೆಗಳಿಗಾಗಿ ಮಕ್ಕಳನ್ನು ಕಟ್ಟಿಕೊಂಡು ಹೋರಾಟ ಮಾಡಿದ್ದರು. ಕೆಲವು ಹಳ್ಳಿಗಳು ಇವರ ಪ್ರಭಾವದಿಂದ ಮಾದರಿ ಹಳ್ಳಿಗಳು ಎನಿಸಿಕೊಂಡಿದ್ದವು. ಒಳ್ಳೆಯದು ಮಾಡುತ್ತೇವೆ ಅಂದಾಗ ಜನ ಸಹಕರಿಸಿದ್ದು ನೋಡಿ ಮಾಸ್ತಾರರಿಗೆ ಆಶ್ಚರ್ಯವಾಗಿತ್ತು. ನಿಸ್ವಾರ್ಥ ಪ್ರೀತಿಗೆ ಇಷ್ಟೊಂದು ಶಕ್ತಿ ಇದೆಯೇ ಅನಿಸುತ್ತಿತ್ತು. ಕೆಲವು ಹಳ್ಳಿಗಳಲ್ಲಿ ಮದ್ಯಪಾನ ಮಾಡುವ ಕುಟುಂಬಗಳ ಮನೆಗಳ ಮುಂದೆ ಮಕ್ಕಳನ್ನು ಜೊತೆಗೆ ಸೇರಿಸಿಕೊಂಡು ಉಪವಾಸ ಸತ್ಯಾಗ್ರಹ ಮಾಡಿದ್ದರು. ಇದು ಜನರ ಮೇಲೆ ಅಗಾಧ ಪರಿಣಾಮ ಬೀರಿತ್ತು. `ಮನುಷ್ಯ ಸದಾ ಈಜುತ್ತಿರಬೇಕು, ಬದುಕಿನಲ್ಲಿ ಬರುವ ಪ್ರವಾಹಗಳನ್ನು ಎದುರಿಸುತ್ತಿರಬೇಕು, ಜನರಿಗೆ ಒಳ್ಳೆಯದು ಮಾಡಬೇಕು. ಮನುಷ್ಯ ಮರದಂತೆ ಬದುಕಿ ನಾಲ್ಕು ಮಂದಿಗೆ ನೆರಳಾಗಬೇಕು’ ಎಂದು ಹೇಳುತ್ತಿದ್ದರು. ಸದಾ ಹುಡುಗರಂತೆ ಓಡಾಡುತ್ತಿದ್ದ ಮಾಸ್ತಾರರು ಈಗ `ಬದುಕಿದ್ದೀವಿ’ ಅನ್ನುವ ಮಾತು ನನ್ನ ಎದೆಗೆ ಕಿಚ್ಚು ಇಟ್ಟಂತಾಯಿತು.

ಮಾಸ್ತಾರರ ಕೈಯನ್ನು ನಾನು ಒತ್ತಿ ಹಿಡುಕೊಂಡೆ. ಮಾಸ್ತಾರರಿಗೆ ಹಿತವೆನಿಸಿತೇನೋ ಸಂತೋಷದಿಂದ ಮುಖ ಅರಳಿತು. ನನ್ನ ಕಡೆ ದೀನ ದೃಷ್ಟಿಯಿಂದ ನೋಡಿದರು. ಆ ನೋಟ ನನ್ನಲ್ಲಿ ಸಂಕಟವನ್ನುಂಟುಮಾಡಿತು. ಆ ನೋಟಯಲ್ಲಿದ್ದ ದೀನ ದೃಷ್ಟಿ ನನ್ನ ನರನಾಡಿಗಳನ್ನು ಈಟಿಯಿಂದ ತಿವಿದಂತಾಯಿತು. ಅವರ ದೈನ್ಯತೆಯ ಮುಖ ನೋಡುವುದೆ ಚಿತ್ರಹಿಂಸೆ ಅನಿಸಿತು. ತುಂಬಿದ ಮಲ್ಲಿಗೆ ಬಳ್ಳಿಯಂತೆ ನಗುತ್ತಿದ್ದ ಮಾಸ್ತಾರರ ಮುಖ ಪ್ರೇತ ಕಳೆ ತುಂಬಿ ನರಳುತ್ತಿತ್ತು. ದಿವ್ಯ ತೇಜದಿಂದ ಬೆಳಗುತ್ತಿದ್ದ ಕಣ್ಣುಗಳು ಆಳಕ್ಕಿಳಿದು ಬತ್ತಿದ ಸಮುದ್ರದಂತಾಗಿತ್ತು. ರಕ್ತದಿಂದ ತುಂಬಿಕೊಂಡಿದ್ದ ಕಪಾಳಗಳು ಸುಡುಗಾಡದಂತೆ ಗುಳಿ ಬಿದ್ದಿದ್ದವು. ಹೂವಿನ ಪಕಳೆಯಂತಿದ್ದ ತುಟಿಗಳು ರಕ್ತಹೀನಗೊಂಡು ಬತ್ತಿದ್ದವು. ಮಾಂಸದಿಂದ ತುಂಬಿಕೊಂಡಿದ್ದ ದೇಹ ಅಸ್ತಿಪಂಜರದಂತಾಗಿತ್ತು.

ತುಟಿ ಅರಳಿಸಿ ಏಳಲು ಪ್ರಯತ್ನಿಸಿದರು. ನಾನು ಭುಜ ಹಿಡಿದು ಮೇಲಕ್ಕೆತ್ತಿ ದಿಂಬಿಗೆ ಒರಗಿಸಿದೆ. ನನ್ನ ಕೈಯನ್ನು ತಮ್ಮ ಎದೆಯ ಮೇಲಿಟ್ಟುಕೊಂಡರು. ನನ್ನ ಕೈಯನ್ನು ಒತ್ತಿ ಹಿಡಿದರು. ಬಿಟ್ಟು ಹೋಗಬೇಡವೆನ್ನುವ ಆದ್ರ್ರಭಾವ, ಮಮತೆಯ ಸ್ಪರ್ಷ ನನ್ನ ಕೈಯನ್ನು ನಿಧಾನಕ್ಕೆ ಒತ್ತಿದವು. ನನ್ನ ದೇಹ ಅವರ ಸ್ಪರ್ಷಕ್ಕೆ ಕಂಪಿಸಿತು. ಹೃದಯ ಅರಳಿದಂತಾಯಿತು. ಮನಸ್ಸು ತಪ್ತಗೊಂಡಿತು. ಕಣ್ಣೀರು ತುಂಬಿಕೊಂಡು ಬಂದವು. ನನ್ನ ಕಣ್ಣೀರು ಅವರ ದುಃಖವನ್ನು ಸ್ಪೋಟಗೊಳಿಸಬಹುದೆಂದು ಕಣ್ಣು ಬಿಗಿ ಹಿಡಿದೆ. ನಾನೆ ಅಸಹಾಯಕನಾಗಬಾರದು. ಮಾಸ್ತಾರರಿಗೆ ಧೈರ್ಯ ಹೇಳಬೇಕು. ಮಾಸ್ತಾರರು `ಧೈರ್ಯವೇ ಬದುಕಿನ ಲಕ್ಷಣ’ ಅನ್ನುತ್ತಿದ್ದರು. ಹೇಗೋ ಸಾವಾರಿಸಿಕೊಂಡು ಇನ್ನಷ್ಟೂ ಹತ್ತಿರ ಕೂತೆ.

`ನಿಮ್ಮ ಮಗ ಭಾರಿ ಅನ್ಯಾಯ ಮಾಡಿಕೊಂಡ’ ಅವರ ಯಾತನೆಯಲ್ಲಿ ಪಾಲ್ಗೊಳ್ಳಲು ಮಾತಾಡಿದೆ. ಈ ಮಾತಿನಿಂದ ಅವರ ಮನಸ್ಸಿಗೇನನಿಸಿತೋ ಎಂದು ಅಳುಕಿದೆ. ಅವರಿಗೆ ನನ್ನ ಮಾತು ಸಮಾಧಾನ ತಂದಿತೋ ಇಲ್ಲ ಗಾಯದ ಪಕಳೆ ಕಿತ್ತಿ ಚೂರಿಯಿಂದ ಚುಚ್ಚಿದಂತಾಯಿತೋ ತಿಳಿಯಲಿಲ್ಲ. ನನ್ನ ಮಾತಿನಿಂದ ಅವರ ಮುಖದ ಭಾವದಲ್ಲಿ ಯಾವ ವ್ಯತ್ಯಾಸ ಕಾಣಲಿಲ್ಲ. ಮುಖ ಶಾಂತವಾಗಿಯೇ ಇತ್ತು. ಅವರಿಗಾದ ದುಃಖ ಮಾತುಗಳನ್ನು ಕಸಿದುಕೊಂಡಿತ್ತು. ನಮ್ಮ ನಡುವೆ ಮೌನ ಸಮುದ್ರದಂತೆ ಹೆಪ್ಪುಗಟ್ಟಿತ್ತು. ನಾನು ಅವರು ಮಾತಾಡಬೇಕೆಂದು ಚಡಪಡಿಸಿದೆ. ಅವರ ಧ್ವನಿ ನನ್ನ ಕಿವಿ ಕೇಳಬೇಕಿತ್ತು. ಅವರ ಧ್ವನಿಯನ್ನೇ ವಿಧಿ ಕಸಿದುಕೊಂಡಿತ್ತು. ಒಂದು ಮಾತಾಡಲು ಅವರು ದೇಹವನ್ನು ಏಕಾಗ್ರಗೊಳಿಸಬೇಕಿತ್ತು.

ಮಾಸ್ತಾರರು ರೋಮಗಳು ಅದುರುವಂತೆ, ಕಿವಿಗಳ ಚಿತ್ತ ತಮ್ಮತ್ತ ಸೆಳೆಯುವಂತೆ ಮಾತಾಡುತ್ತಿದ್ದರು. ಧ್ವನಿ ಕಂಚಾಗಿತ್ತು. ಎಂತವರು ಅವರ ಮಾತುಗಳನ್ನು ನಿಂತು ಕೇಳಬೇಕು. ಸಿಡಿಲೊಡೆದಂತೆ ಮಾತಾಡುತ್ತಿದ್ದರು. ಈಗ ಮಾತಿಲ್ಲದ ಖಾಲಿ ಕೊಡ. ನನಗೋ ಕತ್ತಿ ಮೇಲೆ ಕುಂತತಾಗಿತ್ತು.

ದೊಡ್ಡ ಮಗ ಸರಿಯಾದ ದಾರಿ ಹಿಡಿಯಲಿಲ್ಲ ಎಂಬ ಸಿಟ್ಟು ಮಾಸ್ತಾರರಿಗೆ ಇತ್ತು. ಅವನು ಹೇಗಿದ್ದರೂ ಮಗನಲ್ಲವೇ...ಮಗನ ಸಾವು ಮಾಸ್ತಾರರನ್ನು ಅಲ್ಲಾಡಿಸಿತ್ತು. ಮಗ ಸಹಜವಾಗಿ ಸತ್ತಿದ್ದರೆ ಇಷ್ಟು ಕುಗ್ಗುತ್ತಿರಲಿಲ್ಲ. ಮಾಸ್ತಾರರ ದೊಡ್ಡ ಮಗ ಗಿರೀಶ ಎಂಟನೆಯ ತರಗತಿಗೆ ಪಟ್ಟಣ ಸೇರಿದ್ದ. ಮಹಾದೇವಮ್ಮನಿಗೆ ಮಗ ಇಂಗ್ಲೀಷ್ ಮೀಡಿಯಂನಲ್ಲಿ ಓದಿ ದೊಡ್ಡ ಅಧಿಕಾರಿಯಾಗಬೇಕೆಂಬ ಕನಸು ಇತ್ತು. ಮಾಸ್ತಾರರು ಇಂಗ್ಲಿಷ್ ಶಾಲೆಗೆ ಹೋಗುವುದು ಬೇಡವೆಂದು ವಾದ ಮಾಡಿದ್ದರು. ಆ ತಾಯಿ ನನ್ನ ಇದೊಂದು ಮಾತು ನಡಿಸಿರಿ ಎಂದು ಬೇಡಿದ್ದಳು. ಮಾಸ್ತಾರರು ಬಹಳ ತಾಪದಿಂದಲೇ ಒಪ್ಪಿದ್ದರು. `ದೇವರ ಇಚ್ಚೆ’ ಎಂದು ಅವನಿಗೆ ಬೇಕಾದ ಅನುಕೂಲವನ್ನು ಒದಗಿಸಿದ್ದರು. ಗಿರೀಶ ಕೂಡ ಪಿ. ಯು. ಸಿ. ಮುಗಿಯುವವರೆಗೆ ಸರಿಯಾಗಿ ಓದಿದ. ಪಿ.ಯು.ಸಿ. ನಂತರ ಏನಾಯಿತೋ ಪಟ್ಟಣದಲ್ಲಿ ಯಾರ ಸಹವಾಸ ಮಾಡಿದನೋ ಪ್ರತಿ ವರ್ಷ ಫೇಲಾಗುತ್ತಲೇ ಹೋದ. ಮಾಸ್ತಾರರು ಮಗನ ಮೇಲೆ ಕೆಂಡ ಕಾರಿದರು. ಊರಿಗೆ ಬಂದು ಬಿಡು ಎಂದು ಒತ್ತಾಯ ಮಾಡಿದರು. ಮಹಾದೇವಮ್ಮನೇ ಗಂಡನನ್ನು ಸಮಾಧಾನಗೊಳಿಸಿದಳು. ಆತ ಪದವಿ ಮುಗಿಸದೆ ಮನೆಗೆ ಮರಳಿದ್ದ.

ನಾನು ಅವರ ಮನೆಯಲ್ಲಿದ್ದಾಗ ಯಾವಾಗೋ ಒಂದು ಸಲ ಬರುತ್ತಿದ್ದ. ಬಂದಾಗ ಮನೆಯಲ್ಲೇ ಇರುತ್ತಿರಲಿಲ್ಲ. ಮುಂಜಾನೆ ಮನೆ ಬಿಟ್ಟರೆ ಸಂಜೆಗೆ ಬರುತ್ತಿದ್ದ. ಮಾಸ್ತಾರರು ಮಗ ದೊಡ್ಡವನಾಗಿದ್ದರಿಂದ ಅಷ್ಟೊಂದು ವಿಚಾರಿಸುತ್ತಿದ್ದಿಲ್ಲ. ಮಾಸ್ತಾರರೊಂದಿಗೆ ಗಿರೀಶ ಅಷ್ಟೊಂದು ಸಲಿಗೆಯಿಂದ ಮಾತಾಡುತ್ತಿರಲಿಲ್ಲ. ಮುಖ ಕೊಟ್ಟು ಮಾತಾಡಲು ಹೆದರುತ್ತಿದ್ದ. ಯಾವಾಗಲೂ ಏನೋ ಅಪರಾಧಿ ಭಾವದಿಂದ ಇರುತ್ತಿದ್ದ. ಏನಿದ್ದರೂ ಮಹಾದೇವಮ್ಮರ ಜೊತೆ ಮಾತು ಕತೆ. ನನ್ನನ್ನು ಸೇರುತ್ತಿರಲಿಲ್ಲ. ನಾನು ಅವರ ಮನೆಗೆ `ಕೂಳಿಗೆ’ ಬಂದಿದ್ದೇನೆ ಅನ್ನುತ್ತಿದ್ದ. ನನಗೆ ಈ ಮಾತು ಅತೀವ ದುಃಖವನ್ನುಂಟುಮಾಡುತ್ತಿತ್ತು. ಆತ ಮನಗೆ ಬಂದಾಗ ನಮ್ಮೂರಿಗೆ ಹೋಗಲು ಪ್ರಯತ್ನಿಸುತ್ತಿದ್ದೆ. ಮಾಸ್ತಾರರ ಪ್ರೀತಿ ಹಿಡಿದು ನಿಲ್ಲಿಸುತ್ತಿತ್ತು. ಆಗಂತೂ ಅವನು ನನ್ನ ಮೇಲೆ ಇನ್ನೂ ಸಿಟ್ಟು ಮಾಡುತ್ತಿದ್ದ. `ಯಾರು ಯಾರಿಗೋ ಅಪ್ಪ ಹಚ್ಚಿಗಂಡು ಸಾಕ್ತಾನ. ನಮ್ಮನ್ನು ಕಂಡರ ಆಗಾದಿಲ್ಲ’ ಎಂದು ಎಷ್ಟೋ ಸಲ ಮಹಾದೇವಮ್ಮನ ಮುಂದೆ ಅನ್ನುತ್ತಿದ್ದ.

ಗಿರೀಶ ಊರಿಗೆ ಬಂದ ಮೇಲೆ ಫೈನಾನ್ಸ್ ಮಾಡುತ್ತೇನೆಂದು ಒಂದು ಲಕ್ಷ ರೂಪಾಯಿ ಕೇಳಿದ್ದ. ಮಗ ಖಾಲಿ ಇರಬಾರದೆಂದು ಒಂದು ಲಕ್ಷ ರೂಪಾಯಿ ಕೊಟ್ಟಿದ್ದರು. ಇದಕ್ಕೆ ಮಹಾದೇವಮ್ಮನವರ ಒತ್ತಾಯವೂ ಇತ್ತು. ನಾಲ್ಕೈದು ಗೆಳೆಯರೊಂದಿಗೆ ಸೇರಿಕೊಂಡು ಫೈನಾನ್ಸ್ ಪ್ರಾರಂಭಿಸಿದ. ಎರಡು ಮೂರು ವರ್ಷ ಸರಿಯಾಗಿ ನಡೆಯಿತು. ಆದರೂ ಈ ದಂದೆ ಮಾಸ್ತಾರರಿಗೆ ಸರಿ ಕಂಡಿರಲಿಲ್ಲ. ಸಾಲ ಕೊಟ್ಟು ಬಡ್ಡಿ ವಸೂಲಿ ಮಾಡುವುದು ಜನರಿಗೆ ಮೋಸ ಮಾಡಿದಂತೆ ಅನಿಸುತ್ತಿತ್ತು. ಮಗನ ದಾರಿಯನ್ನು ಬದಲಿಸುವುದು ಅವರಿಗೆ ಸಾಧ್ಯವಿರಲಿಲ್ಲ. ಗಿರೀಶನಿಗೆ ಹಣಕಾಸು ವಿಷಯದಲ್ಲಿ ಗೆಳೆಯರು ಮೋಸ ಮಾಡಿದರು. ಫೈನಾನ್ಸ್ ನಷ್ಟವಾಯಿತು. ದುಡ್ಡು ತಗಂಡವರು ಮರಳಿ ಕೊಡಲಿಲ್ಲ. ಗೆಳೆಯರು ಸಹಾಯಕ್ಕೆ ಬರಲಿಲ್ಲ. ಫೈನಾನ್ಸ್ ಗಿರೀಶನ ಹೆಸರಗೆ ಇದ್ದುದ್ದರಿಂದ ಹಣ ತೊಡಗಿಸಿದ ಮಂದಿ ಮನೆಗೆ ಬಂದರು. ಗಿರೀಶ ಇದರಿಂದ ಆಘಾತಗೊಂಡು ಉರುಲು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಮಾಸ್ತಾರರಿಗೆ ಮಗನ ಆತ್ಮಹತ್ಯೆ ಜೀವ ಹಿಂಡಿತ್ತು.

ಮಾಸ್ತಾರರು ನನ್ನ ತೋಳುಗಳನ್ನು ಹಿಡಕಂಡು `ವಾಗೀಶ ನಾನೇನು ಪಾಪ ಮಾಡೀನೋ ...ನೋಡೋ ನನ ದೇಹ ನೋಡೋ... ನನ್ನ ಮನಸ್ಸಂತೂ ಸತ್ತು ಹೋಗ್ಯಾದ... ವಾಗೀಶ...’ ಎಂದು ಅತಿ ನಿಸ್ಸಾಹಾಯಕತೆಯಿಂದ ನನ್ನನ್ನು ನೋಡಿದರು. ಇಷ್ಟು ಮಾತಾಡಿದ್ದಕ್ಕೆ ಬಾಳ ತ್ರಾಸಾಗಿ ಜೋರು ಉಸಿರಾಡುತ್ತಾ ಕೆಮ್ಮಿದರು. ನಾನು `ಸಮಧಾನ ಮಾಡಿಕೋರಿ...’ ಎಂದೆ. ಸ್ವಲ್ಪ ತಡದು ಮತ್ತೆ ಮಾತಾಡಲು ಪ್ರಯತ್ನಿಸಿದರು.

`ಮಗಾ ಸತ್ತನಂತ ನನಗಾ ದುಃಖ ಇಲ್ಲೋ... ಅವನ ಹಣೆಬರಹ ಅಷ್ಟಿತ್ತು ದೇವರು ಕರ್ಕಂಡ. ಅವನ ನೆನಪಾದಾಗ ಕರುಳ್ ಚುರ್ರ್...ಅಂತಾದ... ದುಃಖಾನು ಆಗ್ತದ... ಮಗಾ ಅಲ್ಲೇನೋ...ಅವನನ್ನ ನಾನೆ ಸರಿಯಾಗಿ ನೋಡಿಕೊಳ್ಳಲಿಲ್ಲೇನೋ ಅನಿಸ್ತದ...’ ಎಂದು ಮಗುವಿನಂತೆ ಅತ್ತರು. ಕಣ್ಣೀರು ಕುತ್ತಿಗೆಯನ್ನು ತೋಯಿಸಿತು. ಧ್ವನಿಯಲ್ಲಿ ಬಾಳ ಆಯಾಸ ಇತ್ತು. ಇಷ್ಟು ಮಾತಾಡುವದರಲ್ಲಿಯೇ ತೇಕು ಬರಲು ಸುರುವಾಯಿತು. ಮುಖ ಕಿವಿಚಿಗಂಡು, ಉಸಿರು ಬಗಿ ಹಿಡಿದು ಜೋರಾಗಿ ಕೆಮ್ಮಿದರು. ಕಫ ಕಿತ್ತಿಕೊಂಡು ಬಂದಿತು. ನಿಧಾನಕ್ಕೆ ಗೋಣು ಎತ್ತಿದೆ. ಚಿಪ್ಪಿನಲ್ಲಿ ಉಗುಳಿದರು. ತುಟಿಗಳನ್ನು ಒರಿಸಿ ಸ್ವಲ್ಪ ನೀರು ಕುಡಿಸಿದೆ. ಅವರ ಎದೆಯೊಳಗಿನ ಮಾತು ಹೊರಗ ಬರಲಿ. ಸ್ವಲ್ಪ ಸಮಾಧಾನ ಅನಿಸಬಹುದೆಂದು ಸುಮ್ಮನೆ ಕುಳಿತೆ.

`ವಾಗೀಶ...’ ಎಂದು ಗಟ್ಟಿಯಾಗಿ ತಬ್ಬಿಕೊಂಡು ಗಳಗಳನೆ ಅತ್ತರು.` ನೋಡೋ... ನನಗೆಂತ ಬ್ಯಾನೆ ಬಂದಾದ... ಕುಂದ್ರಾಕ ಬರಾದಿಲ್ಲ... ನಿಂದ್ರಾಕ ಬರಾದಿಲ್ಲ... ಓಡ್ಯಾಡಕ ಬರಾದಿಲ್ಲ...ಹೆಂಗ ಬದುಕಬೇಕೋ... ಎಷ್ಟು ದಿನಂತ ಇನ್ನೊಬ್ಬರಿಗೆ ತ್ರಾಸು ಕೊಡಬೇಕೋ...ಯಾವುದು ಬಯಸಿರಲಿಲ್ಲವೋ ಅದೇ ಬಂದಾದ...ಹೆಂಡತಿಗೆ ಕರ್ಮ ಬುಡುದು ಆಕೀನೆ ತೊಳಿತಾಳ ಬಳಿತಾಳ. ಇದು ಎಷ್ಟು ದಿನ ವಾಗೀಶ...ಸತ್ತ ಮ್ಯಾಲ ಸುಖ ಅನ್ನೂ...’ಎಂದು ಬಿಕ್ಕಿ ಬಿಕ್ಕಿ ಅತ್ತರು. `ಇಂತಹ ಮಾತು ಆಡುಬ್ಯಾಡರಿ. ಅದು ಕಡಿಮಿ ಆಗೋ ಬ್ಯಾನಿ. ನಾನೆಲ್ಲಾ ದೊಡ್ಡ ಡಾಕ್ಟರ ಹತ್ತಿರ ತೋರುಸ್ತೀನಿ. ನೀವು ಆರಾಮ ಮಾಡರಿ...’ ಎಂದೆ.

ನನ್ನ ಮಾತುಗಳು ಮಾಸ್ತಾರರನ್ನು ಸಂತೈಯಿಸಲು ಸಾಧ್ಯವಿರಲಿಲ್ಲ. ನನ್ನನ್ನು ಮತ್ತಷ್ಟೂ ಸಮೀಪ ಕರೆದುಕೊಂಡರು. ತಲೆ ಸವರಿ `ಇಷ್ಟು ವರ್ಷ ಯಾಕೋ ಬರಲಿಲ್ಲ. ನಿಮಪ್ಪಗ ಎಷ್ಟು ಸಲ ಹೇಳಿ ಕಳಿಸಿದೆ. ನಿಮ್ಮೂರಿಗೆ ಹೋಗೋರು ಮುಂದೆಲ್ಲಾ ಹೇಳಿ ಕಳಿಸಿದರೂ ನೀನು...’ ಈ ಮಾತು ನನ್ನ ಹೃದಯ ಹಿಂಡಿತು. `ನಿನಗೂ ಗೊತ್ತಿದೆಯಲ್ಲೋ ನಮ್ಮ ಉಮಾ ನನ್ನ ಅರ್ಧ ಜೀವ ತಿಂದಳು. ಮಗ ಕಣ್ಮರೆಯಾದ ದುಃಖ ಹೇಗೋ ತಡುಕೊಂಡೇನು. ಕಣ್ಣೆದುರಿಗಿರುವ ಅವಳ ಸಂಕಟ... ನೋಡಲಾರೆ ವಾಗೀಶ...ಮನಸ್ಸು ಸುಟ್ಟು ಹೋಗ್ಯಾದ....’ ಎಂದು ಕಣ್ಣು ಅಗಲ ಮಾಡಿ ಜಂತೆ ನೋಡುತ್ತಾ ನಿಟ್ಟುಸಿರು ಬಿಟ್ಟರು.

ಅಪ್ಪಂದು ಶಿವಯ್ಯಾ ಮಾಸ್ತಾರರದು ಹಳೇ ಗೆಳೆತನ. ಅಪ್ಪ ಮಾಸ್ತಾರರು ಏಳನೇ ತರಗತಿಯವರೆಗೆ ಕೂಡಿ ಓದಿದವರು. ಮಾಸ್ತಾರರು ನಮ್ಮನಿಗೆ ಹೋಗೋದು ಬರೋದು ಇತ್ತು. ನಾನು ಪಿ.ಯು.ಸಿ. ಓದುವಾಗ ಊರಿನಿಂದ ಕಾಲೇಜಿಗೆ ಓಡಾಡುತ್ತಿದ್ದೆ. ಬಸ್ಸಿಂದು ಅಷ್ಟೊಂದು ಅನುಕೂಲ ಇರಲಿಲ್ಲ. ಊರಿಂದ ಬಸ್ಸು ಬರೋ ಜಾಗಕ್ಕ ಮೂರು ಕಿ. ಮೀ. ನಡಿಬೇಕಿತ್ತು. ಕಾಲೇಜು ಮಾಸ್ತಾರರ ಊರಲ್ಲೇ ಇತ್ತು. ಮಾಸ್ತಾರರು ನಮ್ಮೂರಿಗೆ ಬಂದಾಗ `ಹೀಂಗಾದರ ನಿನಗ ಓದಾಕ ಬಾಳ ತ್ರಾಸು ಆತದ. ನಮ್ಮನ್ಯಾಗ ಇದ್ದುಬುಡು’ ಅಂದರು. ಆಗಿಂದಾಗಲೇ ಅಪ್ಪನಿಗೆ ಹೇಳಿ ಮರುದಿವಸ ತಾವೆ ಬಂದು ನನ್ನನ್ನು ಕರೆದುಕೊಂಡು ಹೋದರು. ಅವರ ವಿಶ್ವಾಸ ನನ್ನನ್ನು ಒಳ್ಳೇ ಮನುಷ್ಯನನ್ನಾಗಿ ಮಾಡಿತು. ಆ ವಿಶ್ವಾಸಕ್ಕೆ ಎಂತ ಶಕ್ತಿ ತಿಳಿಯಲಾರೆ. ಅವರ ಗುಣಕ್ಕೆ ತಕ್ಕಂತೆ ಅವರೊಂದಿಗಿದ್ದೆ. ನನ್ನಲ್ಲಿ ಅದೇನು ಕಂಡರೋ ತಂದೆ ತಾಯಿಯಂತೆ ಕಾಳಜಿಯಿಂದ ನೋಡಿಕೊಂಡರು. ಅವರ ನಂಬಿಕೆಯಲ್ಲಿ ನಾನು ಕರಗಿಯೇ ಹೋಗಿದ್ದೆ.

ಮಾಸ್ತಾರರಿಗೆ ಎರಡು ಮಕ್ಕಳು. ದೊಡ್ಡವ ಗಿರೀಶ. ಎರಡನೆಯವಳು ಉಮಾ. ನಾನು ಮಾಸ್ತಾರರ ಮನೆಗೆ ಹೋದಾಗ ಉಮಾ ಹತ್ತನೆಯ ತರಗತಿ ಫೇಲಾಗಿ ನಾಲ್ಕು ವರ್ಷ ಆಗಿತ್ತು. ಆಕೆಯೊಂದಿಗೆ ನಾನು ಅಷ್ಟೊಂದು ಸಲಿಗೆಯಿಂದ ಇರಲಿಲ್ಲ. ಮಾಸ್ತಾರರು ಹೇಳುವದಕ್ಕಿಂತ ಮುಂಚೆ ಮನೆಗೆಲಸ ಮಾಡುತ್ತಿದ್ದೆ. ಹೊರಗಡೆ ಮಂಚದ ಮೇಲೆ ಮಾಸ್ತಾರರು ಮಹಾದೇವಮ್ಮ ಮಲಗಿದರೆ, ಮಂಚದ ಕೆಳಗೆ ಉಮಾ ಮಲಗುತ್ತಿದ್ದಳು. ನಾನು ಅಡಿಗೆ ಮನೆಯಲ್ಲಿ ಮಲಗಿರುತ್ತಿದ್ದೆ. ಅವರ ಮಗ ಬಂದಾಗ ಅವನು ತಂಗಿಯ ಜೊತೆ ಮಲಗುತ್ತಿದ್ದ.

ಅವತ್ತು ಮುಂಗಾರು ಮಳೆ ಮುಂಜಾನೆ ಬಿದ್ದಿತ್ತು. ಮಹಾದೇವಮ್ಮನವರು ನೆಂಟರ ಮನೆಗೆ ಹೋಗಿದ್ದರು. ಮನೆಯಲ್ಲಿ ಮಾಸ್ತಾರರು, ಉಮಾ, ನಾನು ಇದ್ದೆವು. ರಾತ್ರಿನೂ ಮಳೆ ಬಂದಿದ್ದರಿಂದ ನಾನು ಅಡುಗೆ ಮನೆಯಲ್ಲಿ ಮಲಗಿದ್ದೆ. ಹೊರಗಡೆ ಗುಡುಗು ಸಿಡಲು ಅಬ್ಬರದಿಂದ ಮಳೆ ಸುರಿಯುತ್ತಿತ್ತು. ಮಳೆ ಜೋರಾಗಿ ಸುರಿಯುತ್ತಿದ್ದರಿಂದ ನಿದ್ದೆ ಬಂದಿರಲಿಲ್ಲ. ಮಳೆ ನಿಂತು ಜಿಟಿ ಜಿಟಿ ಹತ್ತಿರಬೇಕು. ಮಾಸ್ತಾರರ ಗೊರಕೆ ಕೇಳುತಿತ್ತು. ಅವರದು ಯಾವಾಗಲೂ ಸಂಪೂರ್ಣ ನಿದ್ದೆ. ಹಾಗೇ ಕಣ್ಣು ಮುಚ್ಚಿದ್ದೆ. ಆಗ ಯಾರೋ ಗಟ್ಟಿಯಾಗಿ ತಬ್ಬಿಕೊಂಡು ತುಟಿಗೆ ತುಟಿ ಒತ್ತುತ್ತಿದ್ದರು. ನನಗೆ ಭಯವಾಗಿ ಕಣ್ಣು ಬಿಟ್ಟರೆ ಉಮಾ. ನನಗೆ ಕನಸೋ ನನಸೋ ಗಾಬರಿಯಾಯಿತು. ನನ್ನ ಮೈ ಬಿಸಿಯಾಯಿತು. ಅವಳನ್ನು ಗಟ್ಟಿಯಾಗಿ ತಬ್ಬಿಕೊಂಡೆ. ನನಗೆ ಅತೀವ ಭಯ ಅನಿಸಿತು. ಮಾಸ್ತಾರರು, ಮಹಾದೇವಮ್ಮನವರ ಮುಖಗಳು ಕಣ್ಣು ಮುಂದೆ ಬಂದವು. ಅವರು ಕೈ ಮಾಡಿ ಕರೆದು ತುತ್ತು ಉಣಿಸಿದಂತಾಯಿತು. ಹಿಂದಕ್ಕೆ ದೂಕಿದೆ. ಮೈಯೆಲ್ಲಾ ಬೆವರಿತ್ತು. ಮೈ ಕಂಪಿಸುತ್ತಿತ್ತು. ನರ ನಾಡಿಗಳು ಬಿಗಿದುಕೊಂಡಿದ್ದವು. ಹೊರಗಡೆ ಮಳೆ ನಿಂತಿತ್ತು. ಹೊರಗೆ ಬಂದು ಹಾಗೆಯೇ ಬಂಡೆಯ ಮೇಲೆ ಮಲಗಿದೆ. ಗಾಳಿ ಹಿತವಾಗಿ ಬೀಸುತ್ತಿತ್ತು. ಅವತ್ತು ದುಡಿಕಿದ್ದರೆ ಈ ವಿಶ್ವಾಸ ಪ್ರೀತಿ, ಅಂತಃಕರಣಗಳು ಅವರಿಟ್ಟ ಅನ್ನದ ಋಣ.. ನೆನಸಿಕೊಂಡರೆ ಮೈ ಜುಂ ಅನ್ನುತ್ತದೆ. ಮರುದಿನವೆ ಊರಿಗೆ ಹೋಗಬೇಕಂದು ಯೋಚಿಸಿದೆ. ಇದ್ದಕ್ಕಿದ್ದಂತೆ ಊರಿಗೆ ಹೋದರೆ ಮಾಸ್ತಾರರಿಗೆ ಏನು ಹೇಳಬೇಕಂದು ಯೋಚಿಸಿದೆ. ಹಾಗೇ ಹೋಗೋದು ಸರಿಯಲ್ಲ ಅನಿಸಿತು. ತಾಳಿಕೊಂಡು ಇದ್ದೆ. ಬೆಳಗ್ಗೆ ಯಥಾ ಪ್ರಕಾರ ಓದಿನಲ್ಲಿ ತೊಡಗಿಕೊಂಡೆ. ಉಮಾ ಅವತ್ತಿನಿಂದ ನನ್ನ ಮುಖ ಸರಿಯಾಗಿ ನೋಡಲಿಲ್ಲ.

ಮಾಸ್ತಾರರು ಉಮಾಳಗೆ ಮದುವೆ ಮಾಡಬೇಕಂದು ಬಹಳ ಪ್ರಯತ್ನಿಸಿದರು. ಉಮಾ ಮೂಲಾ ನಕ್ಷತ್ರದಲ್ಲಿ ಹುಟ್ಟಿದ್ದರಿಂದ ಯಾರೂ ಮದುವೆಯಾಗಲು ಮುಂದೆ ಬರಲಿಲ್ಲ. ಇದೊಂದು ಮಾಸ್ತಾರರಿಗೆ ದೊಡ್ಡ ಚಿಂತೆಯಾಗಿತ್ತು. ನಾನು ಪಿ.ಯು.ಸಿ. ಮುಗಿಸಿ ಊರಿಗೆ ಮರಳಿದ ಮೇಲೆ ಮಹಾದೇವಮ್ಮನ ತಮ್ಮನ ಮಗ ರಮೇಶ ಅದೇ ಊರಿಗೆ ಶಿಕ್ಷಕನಾಗಿ ಬಂದು, ಮಾಸ್ತಾರರ ಮನೆಯಲ್ಲಿಯೆ ಇದ್ದ. ಉಮಾಳನ್ನು ರಮೇಶನಿಗೆ ಮದುವೆ ಮಾಡಬೇಕಂದು ನಿಶ್ಚಯಿಸಿದ್ದರು. ರಮೇಶನು ಒಪ್ಪಿಕೊಂಡಿದ್ದ. ರಮೇಶ ಮನೆಯಲ್ಲಿಯೇ ಇದ್ದುದ್ದರಿಂದ ಉಮಾಳೊಂದಿಗೆ ತೀರಾ ಸಲುಗೆಯಿಂದ ಇರುತ್ತಿದ್ದ. ಈ ಸಲುಗೆ ಯಾರಿಗೂ ಅನುಮಾನದ ರೀತಿಯಲ್ಲಿ ಕಾಣಲಿಲ್ಲ. ಆದರೆ ಉಮಾ ಮಾಸ್ತಾರರ ಕೈ ಜಾರಿದ್ದಳು. ರಮೇಶನಿಗೆ ದೇಹ ಮನಸ್ಸು ಕೊಟ್ಟಿದ್ದಳು. ಉಮಾ ತಾಳಿ ಕಟ್ಟುವ ಮುಂಚೆಯೇ ಮೂರು ತಿಂಗಳ ಗರ್ಭಿಣಿಯಾಗಿದ್ದಳು. ರಮೇಶನ ಮನೆಯವರು ಉಮಾ ಹುಟ್ಟಿದ್ದು ಮೂಲಾ ನಕ್ಷತ್ರ ಎಂದು ಮದುವೆ ಮಾಡಿಕೊಳ್ಳಲು ನಿರಾಕರಿಸಿದ್ದರು. ರಮೇಶ ವರ್ಗಾವಣೆ ಮಾಡಿಸಿಕೊಂಡು ಹೋಗಿದ್ದ.

ಒಳಗಡೆ ಉಮಾ ಅಪ್ಪನ ಮಾತು ಕೇಳಿಸಿಕೊಂಡಿರಬೇಕು. ಅಳುವ ಧ್ವನಿ ಕೇಳಿತು. ಸದಾ ಹೂವಿನ ನಗುವಿನೊಂದಿಗೆ ತುಂಬಿರುತ್ತಿದ್ದ ಮನೆ ಈಗ ಸತ್ತವರ ಮನೆಯಾಗಿತ್ತು.

ಮಾಸ್ತಾರರು ಮತ್ತೆ ಕೆಮ್ಮಿದರು. ಚಿಪ್ಪು ಬಾಯಿಗೆ ಇಟ್ಟೆ ಉಗುಳಿದರು. ಉಚ್ಚೆ ಬಂದಿವೆ ಎಂದು ಸನ್ನೆ ಮಾಡಿದರು. ಉಚ್ಚೆ ಒಯ್ಯುವ ಪಾತ್ರೆಯನ್ನು ತೊಡೆ ಸಂದಿಗೆ ಇಟ್ಟೆ.

ಹೊರಗಡೆ ಹೋಗಿದ್ದ ಮಹಾದೇವಮ್ಮ ತಾಯಿ ಬಂದರು. ನನ್ನನ್ನು ನೋಡಿದ್ದೆ `ಅಯ್ಯಯ್ಯಪ್ಪೋ.. ಈಗ ನೆನಪಾಯಿತನೋ ನಿನಗಾ... ದೇವರು ನಮ್ಮ ಪಾಲಿಗೆ ಇಲ್ಲಪ್ಪೋ... ಕೈಗೆ ಬಂದ ಮಗನ್ನ ಅಡ್ಡಗುಣಿಗೆ ಕಳಿಸಿದ್ನೆಪ್ಪೋ... ಈಕೆ ಹೀಂಗ ಮಾಡಿಕಂಡು ಕುಂತ್ಲಪ್ಪೋ...’ ಎಂದು ನನ್ನನ್ನು ಗಟ್ಟಿಯಾಗಿ ತಬ್ಬಿಕೊಂಡು ಅತ್ತರು. ಆ ತಾಯಿಯನ್ನು ನೋಡಿ ಕರುಳಿಗೆ ಬೆಂಕಿ ತಗುಲಿದಂತಾಯಿತು. ನನ್ನನ್ನು ಮತ್ತಷ್ಟೂ ಗಟ್ಟಿಯಾಗಿ ತಬ್ಬಿಕೊಂಡು `ನಮಗಿನ್ನು ಯಾರಪ್ಪೋ ದಿಕ್ಕು ...’ ಎಂದು ಕುಸಿದು ಕುಂತರು. ಚಿಲುಮೆಯಿಂದ ಚಿಮ್ಮುತ್ತಿದ್ದ ಮುಖ ಮರುಭೂಮಿಯಾಗಿತ್ತು. ಅತ್ತೂ ಅತ್ತೂ ಗಂಟಲು ಒಡೆದಿತ್ತು. ತುಂಬಿದ ನದಿಯಂತಿದ್ದ ದೇಹ ಒಣಗಿದ ಕಟಿಗೆಯಂತಾಗಿತ್ತು. ಮಹಾದೇವಮ್ಮನ ಕಣ್ಣಲ್ಲಿ ನೀರೇ ಇರಲಿಲ್ಲ. ದುಃಖದಿಂದ ಬಸಿದು ಬತ್ತಿದ್ದವು. ನನಗೆ ಆ ಸ್ಥಿತಿ ಭರ್ಚಿಗಳ ಮೇಲೆ ಮಲಗಿಸಿದಂತಾಗಿತ್ತು. ತಾಯಿ ಭುಜ ಹಿಡಿದು ಬಿಕ್ಕಿಸುತ್ತಲೇ ಇದ್ದರು. ಮಾಸ್ತಾರರು ಹೆಂಡತಿಯನ್ನು ಸಮಾಧಾನ ಮಾಡಲು ಕೈ ಮೇಲೆತ್ತಲಾಗದೆ ಬಾಣ ನೆಟ್ಟ ಪಕ್ಷಿಯಂತೆ ಹಾಸಿಗೆಯಲ್ಲಿಯೇ ಚಡಪಡಿಸಿದರು. ಮಗ ಸತ್ತಾಗ ಮಹಾದೇವಮ್ಮನ ಗೋಳಾಟ ನೋಡಲಾರದೆ ಮಾಸ್ತಾರರು ಆಕೆಯನ್ನು ಅಪ್ಪಿಕೊಂಡು ಸಂತೈಯಿಸುವಾಗ ಮಾಸ್ತಾರರ ದೇಹಕ್ಕ ಪಾಶ್ರ್ವವಾಯಿ ಹೊಡೆದಿತ್ತು. `ನನಗಾ ಎಂತಾ ಗತಿ ಬಂತಪ್ಪಾ...ಏನಂದರೂ ದೇವರಿಗೆ ಕಣ್ಣಿಲ್ಲಪೋ...’ ಅಂದು ನಿತ್ರಾಣದಿಂದ ಸುಡುಗಾಡಿಗೆ ಹೆಣ ಕಳಿಸಿ ಬಂದವರಂತೆ ಕುಳಿತಳು. ಇಬ್ಬರ ಸ್ಥಿತಿ ಹಾರಾಡುವ ಪಕ್ಷಿಗಳ ರೆಕ್ಕೆ ಕತ್ತರಿಸಿ ಒಗೆದಂತಾಗಿತ್ತು.

ಮಹಾದೇವಮ್ಮ, ಮಾಸ್ತಾರರನ್ನು ನಮ್ಮೂರಿಗೆ ಕರೆದುಕೊಂಡು ಹೋಗಬೇಕು. ರಮೇಶನನ್ನು ಭೇಟಿಯಾಗಿ ಮಾತಾಡಬೇಕೆಂದು ಮನಸ್ಸಿನಲ್ಲಿ ಆಲೋಚಿಸುತ್ತಾ ಕೂತೆ. ಮಧ್ಯಾಹ್ನಾದ ಸೂರ್ಯನ ಕಿರಣಗಳು ಬಾಗಿಲು ಮುಚ್ಚಿದ್ದರಿಂದ ಅದರ ಸಂದಿಯಿಂದ ಗೆರೆಯಾಗಿ ಮೂಡಿದ್ದವು. ಆ ಕಿರಣಗಳನ್ನು ನೋಡುತ್ತಾ ಮಾಸ್ತಾರರ ಕಡೆ ನೋಡಿದೆ.

ಕಲಾಕೃತಿ - ಅಶೋಕ್ ಶೆಟಕಾರ

ರಾಜಶೇಖರ ಹಳೆಮನೆ

ರಾಜಶೇಖರ ಹಳೆಮನೆ ಅವರು ಸೂಕ್ಷ್ಮ ಸಂವೇದನೆಯ ಕತೆಗಾರ ಹಾಗೂ ಅಪರೂಪದ ಒಳನೋಟಗಳುಳ್ಳ ವಿಮರ್ಶಕರು ಎಂದೇ ಪ್ರಸಿದ್ಧರು. ವಿಜಯ ಕರ್ನಾಟಕ, ಅಕ್ಷಯ ಮತ್ತು ಕರ್ಮವೀರ ಕಥಾ ಸ್ಪರ್ಧೆಗಳಲ್ಲಿ ಬಹುಮಾನ ಗಳಿಸಿದ್ದಾರೆ. ರಾಜ್ಯ ಮತ್ತು ರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ.

ಕೇಂದ್ರ ಸಾಹಿತ್ಯ ಅಕಾಡಮಿಯು ಸಂಯೋಜಿಸಿದ ಸಮಾವೇಶದಲ್ಲಿ ಅವರು ಕರ್ನಾಟಕವನ್ನು ಪ್ರತಿನಿಧಿಸಿದ್ದಾರೆ. ಈ ತನಕ ಪ್ರಕಟಿಸಿದ ಮೂರು ಕೃತಿಗಳನ್ನು ಪ್ರಕಟಿಸಿದ್ದಾರೆ. ಅವರಿಗೆ 2019ನೇ ಸಾಲಿನ ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ ಸಂದಿದೆ.

More About Author