Poem

ಹೆಬ್ಬೆಟ್ಟು ಬೆಲೆ ತೆರುವುದಕ್ಕಿದೆ

ತೋರುಬೆರಳು ತೋರಿಸುತ್ತಿದೆ
ಮಸೀದಿಯ ಮೇಲಿನ ಮೈಕನ್ನು
ಧ್ವಜಸ್ತಂಭದ ಮೇಲಿನ ಕೇಸರಿ ಪತಾಕೆಯನ್ನು
ತಲೆಮೇಲಿನ ಹೊದಿಕೆಯ ಕಪ್ಪನ್ನು
ಕೇಸರಿ ಶಾಲಿನ ತಪ್ಪನ್ನು
ಉಳಿದದ್ದು ಅಳಿದದ್ದು ಎಲ್ಲವನ್ನು

ತೋರುಬೆರಳು ಚಾಚಿದೆ ಆ ಕಡೆಗೆ
ಕಲ್ಲಂಗಡಿ ಅಂಗಡಿಯೆಡೆಗೆ
ಒಡೆದು ಹೋಳಾದ ಹಣ್ಣಿನ
ಹಸಿರು- ಕೆಂಪು ಬಣ್ಣದಲ್ಲಿ
ರಾಷ್ಟ್ರೀಯತೆ- ಕೋಮುವಾದದ ಎಳೆಗಳನ್ನು
ಇನ್ನಿಲ್ಲದಂತೆ ಶೋಧಿಸುತ್ತಿದೆ

ತೋರುಬೆರಳಿನ ತುದಿಯಲ್ಲಿದೆ ಹೆಣ
ಸತ್ತವನ ಕಳೇಬರಕ್ಕೆ ಬಣ್ಣ ಬಳಿದು
ಮತಪೆಟ್ಟಿಗೆಯಲ್ಲಿ ಭದ್ರವಾಗಿ ಸಂರಕ್ಷಿಸಿ ಇಡಲಾಗಿದೆ
ಮತಪೆಟ್ಟಿಗೆಯೊಳಗಿನಿಂದೆದ್ದ 'ಭೂತ'
ವರ್ತಮಾನ- ಭವಿಷ್ಯತ್ತಾಗಿ ಕಾಡಲಿದೆ

ತೋರುಬೆರಳು ಎಲ್ಲವನ್ನೂ ಬೊಟ್ಟು ಮಾಡುತ್ತಿದೆ
ಅವನು ಲಂಚ ತೆಗೆದುಕೊಂಡದ್ದು ಇವನು ಮಂಚ ಏರಿದ್ದು
ಸಂಕೋಲೆ ಕಳಚಿಕೊಂಡ ಬಿಳಿಯಾನೆ
ತಿಂದು ತೇಗಿದ್ದು
ಎಲ್ಲವನ್ನೂ

ನಿರೀಕ್ಷಿಸುತ್ತಿರಿ
ತೋರುಬೆರಳು ತೋರಿದ್ದಕ್ಕೆ ಪ್ರತಿಯಾಗಿ
ಹೆಬ್ಬೆಟ್ಟು ಬೆಲೆ ತೆರುವುದಕ್ಕಿದೆ

*****

ವಿಶ್ವನಾಥ ಎನ್ ನೇರಳಕಟ್ಟೆ

 

ವಿಶ್ವನಾಥ್ ಎನ್. ನೇರಳಕಟ್ಟೆ

ಲೇಖಕ ವಿ.ಎನ್. ನೇರಳಕಟ್ಟೆ ಕಾವ್ಯನಾಮದ ಮೂಲಕ ಕತೆ-ಕಾವ್ಯ ರಚನೆಯಲ್ಲಿ ತೊಡಗಿಸಿಕೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲ್ಲೂಕಿನ ಪಂತಡ್ಕದ ವಿಶ್ವನಾಥ್ ಎನ್. ನೇರಳಕಟ್ಟೆ ಅವರು, ‘ಡಾ.ನಾ. ಮೊಗಸಾಲೆಯವರ ಸಾಹಿತ್ಯದಲ್ಲಿ ಪ್ರಾದೇಶಿಕತೆ’ ವಿಷಯದಲ್ಲಿ ಪಿಎಚ್‌ಡಿ ಸಂಶೋಧನೆ ನಡೆಸಿದ್ದಾರೆ. ಪ್ರಸ್ತುತ ಸಿದ್ಧಕಟ್ಟೆಯ ಸರ್ಕಾರಿ ಪದವಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿದ್ದಾರೆ. ‘ತುಸು ತಿಳಿದವನ ಪಿಸುಮಾತು’ ಅಂಕಣ ಬರಹ ಬರೆಯುತ್ತಿದ್ದಾರೆ.

ಕೃತಿಗಳು:   ಮೊದಲ ತೊದಲು, ಕಪ್ಪು ಬಿಳುಪು (ಕವನ ಸಂಕಲನ), ಹರೆಯದ ಕೆರೆತಗಳು (ಚುಟುಕು ಸಂಕಲನ) ಮತ್ತು ಸಾವಿರದ ಮೇಲೆ (ನಾಟಕ). ಇವರಿಗೆ ಪುಟ್ಟಣ್ಣ ಕುಲಾಲ್‌ ಯುವ ಕತೆಗಾರ ಪುರಸ್ಕಾರ’, ‘ಯೆನಪೋಯ ಎಕ್ಸಲೆನ್ಸಿ ಪ್ರಶಸ್ತಿ ಹಾಗೂ ಚಂದನ ಸಾಹಿತ್ಯ ವೇದಿಕೆ ನೀಡುವ ಸಾಹಿತ್ಯ ರತ್ನ ಪ್ರಶಸ್ತಿ ಸಂದಿವೆ.

More About Author