ಕತೆಗಾರ ತಿರುಪತಿ ಭಂಗಿ ಅವರು ಬಾಗಲಕೋಟೆ ಸಮೀಪದ ದೇವನಾಳದವರು. ಸಾಹಿತ್ಯ ರಚನೆಗೆ ಇವರ ಬಡತನ, ಹಸಿವು, ಅವಮಾನಗಳೇ ಮೂಲ ದ್ರವ್ಯ. ಅವರ ಚೊಚ್ಚಲ ಕೃತಿ ‘ಜಾತಿ ಕುಲುಮ್ರಾಗ ಅರಳಿದ ಪ್ರೀತಿ’ ಗೆ ಕೆ. ವಾಸುದೇವಾಚಾರ್ಯ ಪ್ರಶಸ್ತಿ, ಬೀಳಗಿ ದತ್ತಿ ಪ್ರಶಸ್ತಿ, ಸಮೀರವಾಡಿ ದತ್ತಿ ಪ್ರಶಸ್ತಿಗಳು ಸಂದಿವೆ. ‘ಕೈರೊಟ್ಟಿ’ ಎಂಬ ಕತೆ ಸಿನಿಮಾ ಆಗಿ ಬೆಳ್ಳಿತೆರೆಯ ಮೇಲೂ ಮೂಡಿದ್ದು ಅವರ ‘ಹರಕ್ ಚಡ್ಡಿ’ ಕತೆ ಇಲ್ಲಿದೆ.
ರಾಷ್ಟ್ರಪತಿಯವರು ವೀರೇಶನಿಗೆ ಪದ್ಮಭೂಷಣ ಪ್ರಶಸ್ತಿ ಕೊಟ್ಟ ವಿಷ್ಯಾ ರಾಜ್ಯದಾಗಿದ್ದ ಸಣ್ಣ-ದೊಡ್ಡ ಎಲ್ಲಾ ಪತ್ರಿಕಿಗೊಳ, ದೊಡ್ಡ ದೊಡ್ಡ ಸುದ್ದಿ ಮಾಡಿ ಮಾಡಿ ತಮ್ಮ ಕರ್ತವ್ಯನಿಷ್ಠೆ ಹೆಚ್ಚಿಸಿಕೊಂಡಿದ್ದವು. ಕೆಲವು ಹಳ್ಯಾಗ, ದೊಡ್ಡ ದೊಡ್ಡ ಪ್ಯಾಟ್ಯಾಗ, ಹಾದಿ ಬೀದಿ ತುಂಬ ಮುಗಿಲೆತ್ತರಕ್ಕ ಎದ್ದ ನಿಂತ ಬ್ಯಾನರ್, ಎತ್ತಾಗ ಹೊಳ್ಳಿದ್ರೂ ವೀರೇಶನ ಕಲರ್ ಕಲರ್ ಭಾವಚಿತ್ರ. ಟಿ.ವ್ಹಿ ಚಾನಲ್ ತುಂಬಾನೂ ಅವನ ಸಾಧನೆ ಗುಣಗಾಣ..! ಅಂವನ ಸೇವೆಯ ಸುದ್ದಿನೇ.... ಇಡೀ ರಾಜ್ಯದ ತುಂಬಾ ಕುಂತ- ನಿಂತಲ್ಲಿ, ಹ್ವಾದಲ್ಲಿ-ಬಂದಲ್ಲಿ, ಬರೀ ವೀರೇಶನ ಸುದ್ದಿನ, ಮಂದಿ ಹೆಚ್ಚ ಮಾತಾಡ್ತಿದ್ರು. ಇತ್ತ ಮಂಟೂರ ಸಾಲ್ಯಾಗ.......
“ಏನ್ ವಳ್ಯಾ ಮನಷ್ಯಾ ರೀ ವೀರೇಶಾ.. ಇಡೀ ತನ್ನ ಜೀವನಾನ ಅನಾಥ ಮಕ್ಕಳಿಗಾಗಿ ಮುಡಪಿಟ್ಟಾ, ಸಾಲಿ ಬಿಟ್ಟ ಮಕ್ಕಳ್ನ ಹುಡಕ್ಯಾಡಿ ಹುಡಕ್ಯಾಡಿ, ಪತ್ತೆ ಹಚ್ಚಿ, ಮನವಲಿಸಿ, ನಾಕ ಅಕ್ಷರ ಕಲಿಸಿ, ಅವರ ಬದಕಾಕ ಒಂದ ದಾರಿ ಮಾಡಿಕೊಟ್ಟಾ, ದಿಕ್ಕ ಇಲ್ಲದ ಮಕ್ಕಳಿಗೆ ದೇವ್ರಾಗಿ ದಿಕ್ಕ ತೋರ್ಸಿದಾ.. ಸರಕಾರ ಮಾಡ್ಬೇಕಾದ ಕೆಲಸಾ ಪುಣ್ಯಾತ್ಮ ಮಾಡಿದ, ಕಾಲ ಕಾಲಕ್ಕೊಬ್ಬ ದೇವ್ರ ಒಳ್ಯಾಂವ್ನ ಈ ಭೂಮಿಗೆ ತಂದ ಬಿಡ್ತಾನಂತಾರಲ್ಲಾ..ಅದೇನ್ ಸುಳ್ಳಲ್ಲ ನೋಡ, ರಾಮನಂತವರು, ಕೃಷ್ಣನಂತವರು, ಬಸವಣ್ಣನಂತವರು, ಬುದ್ಧನಂತವರು, ಅಂಬೇಡ್ಕನಂತವ್ರು, ಮಹಾವೀರನಂತವರು, ಈ ಭೂಮಿಮ್ಯಾಲ ಅವರ್ಗಿ ನೀಗಿದಷ್ಟು, ಅವರಿಗಿ ಹತ್ತಿದಷ್ಟು, ತಿಳದಷ್ಟು ಸುಧಾರಣೆ ಮಾಡಾಕ ಹೋಗಿ ಅವರ ತಮ್ಮ ಜೀವನಾನ ಸುಟಗೊಂದಿಲ್ಲೇನ..! ಹಂಗ ಈ ಮನುಷ್ಯಾನು ಅವರಷ್ಟ ಎತ್ತರಕ್ಕ ಹೋಗದಿದ್ದರೂ ತನಗ ನಿಗಿದಷ್ಟು, ದೇವ್ರ ಅಂವಗ ಕೊಟ್ಟಷ್ಟ ಕೆಲಸಾ ಭಾಳ ಅಚ್ಚು ಕಟ್ಟಾಗಿ ಮಡ್ಯಾನ, ಹಿಂತ ಮನಷ್ಯಾರ್ಗೆ ಪ್ರಶಸ್ತಿ, ಸನ್ಮಾನ, ಅಷ್ಟ ಸಾಲದೂ, ಇಂತವರ್ನ ಗುಡಿ ಕಟ್ಟಿ ಪೂಜಸ್ಬೇಕು.. ಆ ದೇವ್ರ ಇಂತವರ್ಗಿ ಇನ್ನಟ ಆಯುಷ್ ಆರೋಗ್ಯ ಹೆಚ್ಚಮಾಡ್ಲಿ, ಅದು ಅಲ್ಲದ ಈ ಸಮಾಜ ಸುಧಾರಕ ನನ್ನ ಕೈಯಾಗ ಕಲತ ವಿದ್ಯಾರ್ಥಿ ಅಂತ ನನಗ ಎದಿ ತಟ್ಟಿ ಹೇಳಾಕ ಭಾಳ ಹುಮ್ಮಸ್ ಅಕೈತಿ” ಎಂದು ತನ್ನ ಶಿಷ್ಯಾ ವೀರೇಶನ ಕಲರ್ ಭಾವಚಿತ್ರವೊಂದ ಎರುಡು ಕೈಗಳಲ್ಲಿ ಎತ್ತಿ ಹಿಡಿದ ತರಗತಿ ಒಳಗಿದ್ದ ಹುಡಗ್ರಕಡೆ ತೋರಸ್ಕೋತ ಗಣಪತಿ ಸರ್ ಅಂದು ವೀರೇಶನ ಪರಿಚಯ ಮಾಡ್ತಿದ್ರು. ತಮ್ಮ ಗುರುಗಳ ಮಾತಾಡು ಮಾತಗಳ್ನ ಮುಂದ ಕುಂತ ಶಿಷ್ಯಾರು ಕಿವಿ..ಬಾಯಿ ಎರಡು ತಗದ ಕೇಳಕೋತ ತಮ್ಮ ಗುರಗಳ ಕೈಯಾಗ ಕಲತಾವ್ರ ಹಿಂಗೆಲ್ಲಾ ಅಕ್ಕಾರಾ..? ನಾಂವೂ ಮುಂದೊಂದ ದಿನ ಹಿಂಗ ಆದ್ರೂ ಆಗಬಹುದೆಂಬ ಹಗಲುಗನಸು ಕಾಣುತ್ತ ಕೆಲವು ಶಿಷ್ಯರು ಕಲ್ಪನಾ ಲೋಕದಲ್ಲಿ ತೇಲಾಡುತ್ತಿದ್ದರು. ಕೆಲ ಹುಡಗರ್ಗೆ ಗಣಪತಿ ಸರ್ ಅಂದ್ರ ಅಂದಿನಿಂದ ಭಾಳ ಭಯ ಭಕ್ತಿ ಹೆಚ್ಚಾತು.
ಸರ್ ಸರ್.. ಸಮಾಜ ಸುಧಾರಕ ವೀರೇಶ ಹೆಂಗಾದ್ರೂ ನಿಮ್ಮ ಶಿಷ್ಯಾರ ಅಂತೀರಿ.. ಅವರ್ನ ನಮ್ಮ ಸಾಲಿಗೆ ಒಮ್ಮಿ ಕರಸ್ರೀ ಎಂದು ಕಿಡಗೇಡಿ ಸಿದ್ದ ಗಣಪತಿ ಸರ್‍ಗೆ ಸವಾಲ ಹಾಕಿದ. ಸರ್ ಕರಸ್ರೀ.. ಸರ್ ಕರಸ್ರೀ.. ಎಂದು ಎಲ್ಲಾ ಹುಡಗ್ರು ಸಾಲಿ ಹಾರಿ ಹೋಗುವಂಗ ಚಿರ್ಯಾಡಾಕ ಹತ್ತಿದ್ರು.. ಈ ಗದ್ದಲಾ ಕೇಳಿ ಆಪೀಸನ್ಯಾಗಿದ್ದ ಮುಖೋಪಾಧ್ಯಾಯರು ಮೆಲ್ಲಕ ಹಿಂದ ಕೈಕಟಗೊಂದ ಗಣಪತಿ ಸರ್ ಪಾಠ ಮಾಡುವ ಕೋಣಿ ಹೊಕ್ಕು “ಏನ್ರೀ ಈ ಗದ್ದಲಾ.. ನಿಂವೂ ಹುಡಗರ ಜೋಡಿ ಹುಡಗ್ರ ಆಗೀರೇನ್” ಎಂದು ನಕ್ಕೋತ ಕೇಳಿದ್ರು. ಆಗ ಮತ್ತೊಮ್ಮೆ ಸಿದ್ದ ಜೋರಾಗಿ ಕೂಗಿದ.. ಮತ್ತೆ ಹುಡುಗ್ರು.. ಸಿದ್ದನ ದ್ವನಿಗೆ ದ್ವನಿ ಗೂಡಿಸಿದ್ರು. ಮಕ್ಕಳ ಕೋರಿಕೆಯನ್ನು ಮುಖೋಪಾಧ್ಯಾಯರು ತಿಳಿದು. “ನೀವೇನ ಚಿಂತಸಬ್ಯಾಡ್ರಿ ವೀರೇಶ ಇದ ಸಾಲಿ ಹುಡುಗ.. ನಿಮ್ಮಗತೇನ ಇದ ಜಾಗದಾಗ ಕುಂತ ಕಲತಾನ. ನಾಂವ ಬಾ ಅಂದ್ರ ಜಗತ್ತಿನ ಯಾವ ಮೂಲ್ಯಾಗಿದ್ರೂ ಅಂವ ಬರ್ತಾನ. ಅದು ಅಲ್ಲದ ಶಾಲಾ ವಾರ್ಷಿಕೋತ್ಸವಕ್ಕ ಅಂವಗ ಕರಿಸಿ ಸನ್ಮಾನ ಮಾಡ್ಬೇಕಂತ ನಾನೂ ಮನಸನ್ಯಾಗ ಅಂದಕೊಂಡಿದ್ದೆ, ನಿಮಗೂ ಅಂವ ಬಂದರ ಅವನ ಪ್ರಭಾವ.. ಅವನ ಸಭಾವ, ತಿಳದಂಗ ಅಕೈತಿ.. ಮುಂದಿನ ತಿಂಗಳ ಕಾರ್ಯಕ್ರಮಕ ಕರಸ್ತಿನಿ” ಎಂದು ಮುಖ್ಯಗುರುಗಳು ಹೇಳಿದ ಮಾತು ಕೇಳಿ, ಎಲ್ಲ ಹುಡಗ್ರು ಮತ್ತೊಮ್ಮೆ ಖುಷಿಯಿಂದ ಓ..ಎಂದು ಕೂಗಿದರು. ಆಗ ಗಣಪತಿ ಸರ್ ಮುಖದ ಮೇಲೆ ಭಾಳ ಹೊತ್ತಿನವರಗೆ ಆನಂದದ ನಗೆಯೊಂದು ಮೂಡಿ, ಅವರ ಖುಷಿಗೆ ಇಂಬುಕೊಟ್ಟಿತ್ತು.
*******
ಮಂಟೂರ ಹಳ್ಳಿ ತುಂಬ ದೊಡ್ಡ ಸಡಗರ ಸಂಭ್ರಮ. ರಾಷ್ಟಪತಿಗಳಿಂದ ಪದ್ಮಭೂಷಣ ಪ್ರಶಸ್ತಿ ಪಡೆದುಕೊಂಡ ಮಹಾಪುರುಷ ಇಂದ ಕುಗ್ರಾಮ್ ಹಳ್ಳಿಗೆ ಬರುವ ಸುದ್ದಿ ತಿಳಕೊಂಡ ಊರ ಮಂದಿ ವೀರೇಶನ ನೋಡಾಕ, ಅಂವನ ಮಾತ ಕೇಳಾಕ ಕಿಕ್ಕಿರದಿದ್ದರು. “ಸಣ್ಣಾಂವ ಇದ್ದಾಗ ನಮ್ಮ ಜೋಡಿನ ಕೂಡಿ ಸಾಲಿ ಕಲತಾನ ಈಗ ನಮ್ಮನ ಖೂನಾ ಹಿಡಿತಾನೋ ಇಲ್ಲೋ” ಎಂದು ಆಡಕಾಯೋ ಕರಿಯಪ್ಪ, ಮುಲ್ಲಾಗೋಳ ಹುಸೇನಿ, ವಡ್ಡರ ಭೀüಮಾ ಹಳಹಳಿಸುತ್ತ ಇದ್ದರು. ಅಂವಗ ಆಗ ಈರ್ಯಾ.. ಈರ್ಯಾ.. ಅಂತಿದ್ವಿ.. ಅಂವನ ಚಡ್ಡಿ ನೋಡಿ ನಗ್ತಿದ್ವಿ.. ಪಾಪ..! ಸಣ್ಣಾಂವ ಇದ್ದಾಗ ಎಷ್ಟ ಕಷ್ಟಾ ಪಟ್ಟೈತಿ.. ಅಂವನ ಒಳ್ಳೆತನಕ್ಕ ಈಗ ಒಳ್ಳೇದ ಅಗೇತಿ. ಮನದಲ್ಲಿ ಮುಲ್ಲಾಗೊಳ ಹುಸೇನಿ ತನ್ನ ಗೆಳೆಯನ ಬಾಲ್ಯದ ದಿನಗಳನ್ನು ಸಣ್ಣಗೆ ಮೆಲಕು ಹಾಕಿದ.
ಮಂಟೂರ ಸಾಲಿಯ ಬಯಲು ಅಂಗಳದಲ್ಲಿ ಜನಜಾತ್ರಿ ಆಗಿತ್ತು. ಸಾಲಿಯ ಮಕ್ಕಳು ಕುತೂಹಲದಿಂದ ವೀರೇಶನ ದಾರಿ ಕಾಯುತ್ತಿದ್ದರು. ಗಣಪತಿ ಸರ್‍ಗೆ ಎಲ್ಲರಿಗಿಂತ ಒಂದು ಗುಂಜಿ ಹೆಚ್ಚಿಗೆ ಕಾತರ ಇತ್ತು. ತನ್ನ ಕೈಯಾಗ ಕಲತ ಸಾಧನೆ ಮಾಡಿದ ಶಿಷ್ಯಾಗ ಇಂದ ತನ್ನ ಕೈಯಿಂದ ಸನ್ಮಾನ ಮಾಡುವ ಸಂಭ್ರಮ ಸಿಕ್ಕದ್ದು ಅವರ ಮನಸಿಗೆ ಹೆಚ್ಚ ಖುಷಿ ಕೊಟ್ಟಿತ್ತು.
ಇಡೀ ಊರ ಮಂದಿ ವೀರೇಶನ ಬರುವ ಕಾರಿನ ದಾರಿಯನ್ನು ಕಾತರದಿಂದ ಕಾಯುತ್ತಿತ್ತು. ಅವನನ್ನು ಬರಮಾಡಿಕೊಳ್ಳಲು ಸಾಲಿಯ ಮಕ್ಕಳು ಕೈಯಲ್ಲಿ ಬೊಗಸಿತುಂಬ ಹೂಗಳನ್ನು ಹಿಡಿದುಕೊಂಡು ನಿಂತಿದ್ದರು. ಅಂವನನ್ನು ನೋಡಲು ಬಂದವರೂ ಹೆಚ್ಚು ಕಾತರದಲ್ಲಿದ್ದರು. ಮೈಕಿನಲ್ಲಿ ಸುಜಾತಾ ಮೇಡಂ “ಇನ್ನೇನು ಅತಿಥಿಗಳು ಕೆಲವೇ ನಿಮಿಷಗಳಲ್ಲಿ ಬಂದೇ ಬಿಡುತ್ತಾರೆ” ಎಂದು ಅಲ್ಲಿದ್ದವರ ಮನಸನ್ನು ವೇದಿಕಿಯತ್ತ ಆಗಾಗ ಜಗ್ಗುತ್ತಿದ್ದರು.
ಗಂಡನ ಮನಿಯಿಂದ ತೌರಮನಿಗೆ ಬರುವ ಹೆಣ್ಣಮಗಳ ಗತೆ ಸಡಗರಾ, ಸಂಭ್ರಮಾ ಎದಿಯಾಗ ಇಟಗೊಂದ ವೀರೇಶ ತನ್ನೂರಿಗೆ ಬಂದ. ತಾನು ಸಣ್ಣಾಂವ ಇದ್ದಾಗ ಹುಟ್ಟಿ,ಬೆಳದ ಈ ಊರಿಗೆ ಬರ್ಬೇಕಂತ ಎಷ್ಟ ಭಾರಿ ಅನಕೊಂದ್ರೂ.. ಆಗಿರಲಿಲ್ಲ. ತನಗ ಆ ಊರಾಗ ಯಾರೂ ಕರಿಯವರಿಲ್ಲ, ಕುಲಬಾಂದವರಿಲ್ಲಾ, ಅಣ್ಣತಮ್ಮರಿಲ್ಲಾ.. ಹ್ವಾದ್ರ ನಾನ ಯಾರ ಮನಿಗೆ ಹೋಗ್ಬೇಕು..? ಗೆಳೆಯಾರಿದ್ದರೂ ಅವರೂ ಅಷ್ಟರಪುರ್ತೆಕ.. ಅಂತ ಅಂದಕೊಂಡ ಊರಕಡೆ ಮೂವತ್ತ ವರಷ ಆದ್ರೂ ತಿರ್ಗಿ ನೋಡಿರ್ಲಿಲ್ಲ. ತಾನ ಎಲ್ಲಿ ಇರ್ತಾನೋ ಅದ ತನ್ನೂರು.. ತನ್ನ ಯಾರ ಹಚಗೊಂಡ ಮಾತಾಡಸ್ತಾರೋ ಅವರ ಬಂಧುಬಾಂದವರೆಂದು, ಯಾರೊಂದಿಗೂ ಜಗಳಾ ಜೋಟಿ ಮಾಡ್ದ, ಪ್ರೀತಿ, ಸ್ನೇಹಾ, ಪ್ರೇಮದಿಂದ ಎಲ್ಲರ ಹೃದಯ ಗೆದ್ದ ಎಲ್ಲರಿಗೂ ಲಗೂನ ಹತ್ತಿರ ಆಗು ಸ್ವಭಾವ ಅಂವದಾಗಿತ್ತ. ತನಗ ತನ್ನೂರವರು, ತನಗ ಕಲಿಸಿದ ಗುರಗೊಳು ಕೂಡಿಕೊಂಡ ತನ್ನೂರಿಗೆ ಕರದದ್ದು ವೀರೇಶನಿಗೆ ಪದ್ಮಭೂಷಣ ಪ್ರಶಸ್ತಿ ಬಂದಾಗಿನ ಖುಷಿಗಿಂದ ಹತ್ತ ಪಟ್ಟು ಹೆಚ್ಚು ಖುಷಿಯಾಗಿತ್ತು. ಇದ್ದ ಬಿದ್ದ ಕೈಯಾಗಿನ ಕೆಲಸ ಮಗ್ಗಲ್ಕ ಸರಿಸಿ ಹಿಗ್ಗಿಸತ್ತ ಬಂವ್ ಅಂತ ಕಾರ ಹತಗೊಂದ ವೀರೇಶ ಮಂಟೂರಿಗೆ ಬಂದು ಮೂರು ಸಂಜಿಮುಂದ ಇಳಿದಾಗ ಅಲ್ಲಿ ಸೇರಿದ ಜನಸಾಗರ ಅಂವನಿಗಾಗಿ ಕಾದದ್ದು ಕಂಡು ಅಂವನ ಕಣ್ಣು ತುಂಬಿ ಬಂದವು..
ಕಾರಿನಿಂದ ಇಳಿದ ವೀರೇಶನಿಗೆ ಆ ಸಾಲಿಯ ಪುಟ್ಟ ಪುಟ್ಟ ಮಕ್ಕಳು ಅಂವ ಪಾದ ಇಡುವ ದಾರಿಗೆ ಹೂಗಳನ್ನು ಚಲ್ಲುತ್ತಿದ್ದರು. ಗಣಪತಿ ಸರ್ ವೀರೇಶನ ಜೋಡಿ ಏನೆನೋ ಮಾತಾಡ್ಕೊಂತ ಜೊತೆಗೆ ಹೊಂಟಿದ್ರು. ಅಲ್ಲಿ ಸೇರಿದ ಜನರೆಲ್ಲ ತುಂಬಾ ಬೆರಗಾಗಿ ಆ ಅಪರೂಪದ ಸಾಧಕನನ್ನು ನೋಡ್ಕೋತ ನಿಂತಿದ್ದರು.. “ತಮ್ಮಾ ಈರೇಶಾ ನಾ ನಿನಗ ಖೂನದಿನೇನ..” ಅಂತ ಭರಮಕ್ಕಾ ಕೇಳಿದಾಗ ವೀರೇಶ ಹಾಂ.. ಹೂಂ..ಅನದ ನಕ್ಕೋತ ಅಕಿನ ನೋಡತಿದ್ದ.. ಅಷ್ಟರಾಗ ಅಕಿನ, ಇರ್ಲಿ ಬಿಡಪಾ ಭಾಳ ಚಲೋ ಆತ ಚಂದ್ರಜಿ ನಿನ್ನ ಸಡಗರಾ ನೋಡಲಿಲ್ಲ..ಅಂತ ಬುಳುಬುಳು ನಾಕ ಹನಿ ಕಣ್ಣೀರ ಹಾಕಿದ್ಳು.. “ಏ ಹುಚ್ ಬರಮವ್ವಾ ಇಂತಾ ಸಂತೋಷದಾಗ ಅಳತಾರಾ ಅರಿಷ್ಟಗೇಡಿ” ಅಂತ ಗಂಗವ್ವ ಅಕಿನ ಬಾಯಿ ಮುಚ್ಚ ಅನ್ನುವಂಗ ಬೈಯದ್ಳು.
ವೀರೇಶಗ ಕೆಲವರ ಮೋತಿ ಖೂನ ಸಿಕ್ಕರ ಕೆಲವರ ಮೋತಿ ಖೂನ ಸಿಗಲಿಲ್ಲ. ತಾನಿದ್ದಾಗಿದ್ದ ಹಾಳ ಊರ ಈಗ ಭಾಳ ಅಂದ್ರ ಭಾಳ ಬದಲಾದದ್ದು ಕಂಡು ಮನಸನ್ಯಾಗ ಖುಷಿಪಟ್ಟ. ಗಣಪತಿ ಸರ್ ವೀರೇಶ್ಯಾ ನೀ ಬಂದದ್ದ ನಮಗ ಭಾಳ ಸಂತೋಷ ಆತಪಾ.. ನಿನ್ನ ಬಗ್ಗೆ ಪಾಠಾ ಮಾಡುವಾಗ ಮಕ್ಕಳಿಗೆ ಆಗಾಗ ಹೇಳ್ತಿರಿನಿ.. ಎಂದು ಹೇಳವಾಗ ಯಾಕೋ ಗಣಪತಿ ಸರ್ ಗಂಟಲ ಬಿಗದ್ಹಂಗ ಆಗಿತ್ತು. ವೀರೇಶ ಗಟ್ಟೆಂಗ ಗಣಪತಿ ಸರ್ ಕಾಲ ಮುಟ್ಟಿ ನಿಮ್ಮ ಪುಣ್ಯಾದಿಂದ ರೀ ನಾನಿಟ್ಟ ಎತ್ತರಕ್ಕ ಏರಿದ್ದ.. ನಿಮ್ಮಂತಾ ಗುರಗಳ ಕರುಣಾ ಇಲ್ಲಂದ್ರ ಏನ ಮಾಡಾಕ ಅಕ್ಕಿತ್ತು ಅಂತ..ಮುಖ್ಯಗುರಗಳ ಕೋಟಡಿಯಾಗ ಕುಂತ ಚಾ ಕುಡಕೋತ ಚುಟುಕು ಮಾತಗಳನ್ನ ಮಾತಾಡುತ್ತ.. ನಡಿ ನಡಿ ನಿನ್ನ ನೋಡಾಕ.. ನಿನ್ನ ಮಾತ ಕೇಳಾಕ ಹೊರಗ ಜನ ಜಾತ್ರಿ ಆಗೇತಿ ಅಂತ ಮೆಲ್ಲಕ ನೆಡೆದ ವೇದಿಕಿ ಕಡೆ ಬರುತ್ತಿದಂಗ ಜನಸಾಗರೆಲ್ಲ ಚಪ್ಪಾಳೆ ಹೊಡೆದು, ಸೀಟಿ ಹಾಕಿ, ತಮ್ಮ ಮನಸನ್ಯಾಗ ವೀರೇಶಿ ಬಗ್ಗೆ ಇದ್ದ ಅಭಿಮಾನ, ಪ್ರೇಮ ತೋರ್ಪಡಿಸಿದ್ರು.
ಸಣ್ಣ ಪುಟಾನಿಗಳು ಕೂಡಿಕೊಂಡ ಪ್ರಾರ್ಥನಾ ಗೀತೆ ಹಾಡಕೋತ ಕಾರ್ಯಕ್ರಮ ಸುರೂ ಮಾಡೂಕ ಆಕಾಶದಾಗ ಪಳಪಳ ನಕ್ಷತ್ರಗಳು ನಗತಿದ್ದವು. ನಾಕಾರ ಊರಿನ ಹಿರ್ಯಾರು, ಮುಖ್ಯಗುರಗೊಳು, ಮತ್ತ ಗಣಪತಿ ಸರ್, ವೇದಿಕೆಮ್ಯಾಲ ಕುಂತಿದ್ರೂ ಅಲ್ಲಿದ್ದ ಮಂದಿ ಕಣ್ಣಗಳೆಲ್ಲವೂ ವೀರೇಶನ ಮ್ಯಾಲ ಇದ್ದವು. ಅವರಿವರು ಎಲ್ಲಾರೂ ಆದ ಮ್ಯಾಲ ಮತಾಡಾಕ ವೀರೇಶ ಬರೂದ ತಡಾ.. ಆಗ ಮತ್ತ ಒಂದಿಷ್ಟು ಕೂಗು, ಚಪ್ಪಾಳೆ, ಸೀಟೆ ದ್ವನಿ ಮಾರ್ಧನಿಸಿತು. ಮೈಕ್ ಮುಂದ ಬಂದು ವೀರೇಶ ನಿಂತದ್ದ ತಡಾ.. ಹೆಂಗ ಮಾತಾಡ್ತಾನೋ.. ಏನ್ ಮಾತಾಡ್ತಾನೋ.. ಮಾತಾಡುವಾಗ ನಮ್ಮ ಹೆಸರ ಏನಾರ ತಗಿತಾನೋ ಇಲ್ಲೋ.. ತಗದ್ರ ಭಾರೀ ಪಸಂದ್ ಅಕೈತಿ.. ನಮ್ಮದೂ ಒಂದೀಟ ಊರಾಗ ಹವಾ ಅಕೈತಿ .. ಮುಲ್ಲಾಗೋಳ ಹುಸೇನಿ ಮನದಲ್ಲಿಯೇ ಮಂಡಿಗೆ ತಿನ್ನಲು ಸುರುಮಾಡಿದ್ದ. ವೀರೇಶ ಮಾತಾಡಲು ಪ್ರಾರಂಭಿಸಿದ.... ವೀರೇಶ ಮಾತನಾಡುವ ರೀತಿ, ಬಳಸುವ ಪದ, ಕೊಡುವ ಸಣ್ಣಪುಟ್ಟ ಉದಾಹರಣೆಗಳು, ಅಲ್ಲಿದ್ದವರ ಮನದಲ್ಲಿ ಮಲ್ಲಿಗೆ ಮಳೆ ಸುರದ್ಹಂಗ ಆತು. ಆಗಾಗ ಚಪ್ಪಾಳೆಗಳು, ಸಿಳ್ಳೆಗಳ ಮುಕಾಂತರ ಜನರು ತಮ್ಮ ಖುಷಿಯನ್ನ ಹೊರ ಚೆಲ್ಲುತ್ತಿದ್ದರು. ಕಾರ್ಯಕ್ರಮ ಮುಗಿದ ಮ್ಯಾಲ ಎಷ್ಟೋ ಜನರು ನಮ್ಮೂರ ಕೀರ್ತಿ ಬೆಳಗಾಕ ಒಬ್ಬನ ಆ ಗುಡಿಯಾಗಿನ ವೀರಭದ್ರ ತಯಾರ ಮಾಡ್ಯಾನ, ಅನ್ನುವ ಭಾವ ಹೊತಗೊಂಡ ತಮ್ಮ ಮನಿಯತ್ತ ಹೆಜ್ಜಿ ಹಾಕಿದ್ರು. ಇನ್ನಷ್ಟ ಮಂದಿ ವೀರೇಶಿ ಜೋಡಿ ನಿಂತು ಪೋಟೋ, ಸೇಲ್ಪಿ ತಗೆದುಕೊಂಡು ಫೇಸ್ ಬುಕ್ ನಲ್ಲಿ ಶೇರ್ ಮಾಡಿದ್ರು.
ಮುಲ್ಲಾಗೊಳ ಹುಸೇನಿ, ವಡ್ಡರ ಭೀಮಾ, ಆಡಕಾಯೋ ಕರಿಯಪ್ಪ ಮೂರು ಮಂದಿ ಮೆಲ್ಲಕ ಬಂದು ವೀರೇಶನ ಬಾಜೂಕ ನಿಂತ ನಮಸ್ಕಾರ್ ಸರ್ ಅಂದ್ರು. ವೀರೇಶ ಅವರ್ನ ಭಾಳ ದಿಟ್ಟಿಸಿ ನೋಡ್ಕೋತ ತಾನು ಹೊಡಮರಳಿ ನಮಸ್ಕಾರ ಅಂದ. ನಿಂವ್.. ಅಂತ ವೀರೇಶಿ ಬಾಯಾಗಿಂದ ಪದಾ ಹೊರಗ ಚೆಲ್ಲುದ್ರೊಳಗ.. ಮುಲ್ಲಾಗೋಳ ಹುಸೇನಿ.. ಟಕಾಟಕಾ ತಮ್ಮ ಪರಿಚಯ ಹೇಳಿಕೊಂಡ... ವೀರೇಶ್ ಮೂರು ಮಂದಿ ಗೆಳೆಯರ್ನ ಬಾಚಿ ತಬ್ಬಿಕೊಂಡ.. ನಿಮ್ಮ ನೋಡಿ ಮೂವತ್ತ ವರಷ ಮ್ಯಾಲ ಆತ ನನಗಂತೂ ಒಂದೀಟೂ ಖೂನ ಸಿಗವಲ್ರಿ... ಎಂದು ವೀರೇಶ ಗೆಳೆಯರ ಕುರಿತು ಹೇಳಿದ. ಒಬ್ಬರಿಗೊಬ್ಬರ ಮಾತಾಡ್ಕೋತ ಹತ್ತ ಹದಿನೈದ ನಿಮಿಷಕ್ಕ ಗಣಪತಿ ಸರ್ ಅಲ್ಲಿಗೆ ಬಂದು ಕೂಡಿದ್ರು. ಗಣಪತಿ ಸರ್ ಹುಸೇನಿ, ಬೀಮ, ಕರಿಯಪ್ಪ ಮೂರು ಮಂದಿನ ನೋಡಿ ಏನ್ರಪ್ಪಾ ಆರಾಮದಿರಾ..? ನಿಮ್ಮ ಗೆಳ್ಯಾನ ಜೋಡಿ ನಿಂವೂ ಊಟಾ ಮಾಡುವಂತರೆ ಅಂತ ಗಡಿಬಿಡಿಯಲ್ಲಿ ಗಣಪತಿ ಸರ್ ನಡೆದು ಮುಖ್ಯಗುರುಗಳ ಕೋಣಿ ಹೊಕ್ಕರು. ಹುಸೇನಿ ಪಾಡಾತಪಾ ವೀರೇಶಿ ಜೋಡಿ ಊಟಾ ಮಾಡು ಯೋಗ ಕೂಡಿ ಬಂತ ನನಗ.. ಹೂವಿನ ಜೋಡಿ ದಾರನೂ ... ಹ..ಹ..ಹ.. ಮನದಲ್ಲಿ ನಕ್ಕ ಸುಮ್ಮಾದ.
ಎಲ್ಲರೂ ಊಟಾ ಮಾಡಿ ಮುಗಸು ಹೊತ್ತಿಗೆ ಬರೊಬ್ಬರಿ ಹತ್ತುವರೆ ಆಗಿ ಮ್ಯಾಲ ಒಂದೆರಡು ನಿಮಿಷಗಳಾಗಿದ್ದವು. ರಾತ್ರಿ ತಿರಿಗೆ ಪಟ್ಟಣಕ ಹೋಗುದ ಬ್ಯಾಡ .. ಮುಂಜಾನೆ ಲಗೂನ ಹೊರಡುವಂತೆ ಎಂದು ಗಣಪತಿ ಸರ್ ವೀರೇಶನಿಗೆ ಮಲಗಲು ತಮ್ಮ ಮನಿಗೆ ಕರಕೊಂಡ ಹೋಗುವ ವಿಚಾರ ಮಾಡಿದ್ರು. ಸರ್ ಭಾಳ ದಿನದಿಂದ ಕೂಡಿವ ಇವತ್ತ ವೀರೇಶನ ನಮ್ಮ ಮನಿಗೆ ಕರ್ಕೊಂಡ ಹೊಕ್ಕಿನಿ, ಅಡ್ಡ ಬಾಯಿ ಹಾಕಿ ಹುಸೇನಿ ಗಣಪತಿ ಸರ್ ಜಿಂವಾ ತಿನ್ನಾಕತ್ತಿದ. ನಿಮ್ಮ ಮನ್ಯಾಗ ಮಂದಿ ಭಾಳೈತಿ, ಹುಡಗ್ರು ಹುಪ್ಪಡಿ ಅಂವಗ ಅಲ್ಲಿ ಸಜ್ಜ ಆಗೂದಿಲ್ಲೋ ಪುಣ್ಯಾತ್ಮಾ.. ಅಂತ ಹೇಳಿದ್ರೂ ಹಟ ಹಿಡಿದ ಹುಸೇನಿ ವೀರೇಶನನ್ನು ತನ್ನ ಮನಿಗೆ ಕರ್ಕೊಂಡ ಹ್ವಾದ.
ನಾಕು ಕೋಣೆಯ ಪತ್ರಾಸ್ ಮನೆಯಲ್ಲಿ ಹುಸೇನಿ ಸುಲ್ತಾನಂತೆ ಬದಕುತ್ತಿದ್ದ. ಚಿಕ್ಕದಾಗಿದ್ರೂ ಮನೆಯನ್ನು ಹಸನಾಗಿ ಇಟಗೊಂದಿದ್ದ. ಹೆಂಡತಿ ಮಕ್ಕಳು ಮಲಗದೆ ಇನ್ನು ಎಚ್ಚರಾಗಿದ್ರು.. ಸಾಲಿ ಕಾರ್ಯಕ್ರಮದಲ್ಲಿದ್ದ ವೇದಿಕೆ ಮ್ಯಾಲ ಕುಂತ ಅಥಿತಿ ತನ್ನ ಗಂಡನ ದೋಸ್ತ ಅನ್ನುದ ಗೊತ್ತಿತ್ತು. ಅವ್ರ ತಮ್ಮಂತವ್ರ ಮನಿಗೆ ಬರ್ತಾರನ್ನುದ ಗೊತ್ತಿರಲಿಲ್ಲ. ಗಂಡ ಅವರ್ನ ಮನಿಗೆ ಕರಕೊಂಡ ಬಂದದ್ದಕ್ಕ ಹಿಗ್ಗಿ ಸತ್ತ ಹುಸೇನಿ ಹೆಂಡತಿ ಪಾತೀಮಾ ತಮ್ಮನಿಗೆ ಅಲ್ಲಾನೇ ಬಂದಾನೇನೋ ಅನ್ನುವ ಸಡಗರದಲ್ಲಿ ಒಂದ ಬಿಟ್ಟ ಒಂದ ಮಾತಾಡಾಕತ್ತಿದ್ಳು. ಹುಸೇನಿ ಮಕ್ಕಳ ನಿದ್ದಿ ಮಾಡೂದ ಬಿಟ್ಟ ವೀರೇಶಿನ ನೋಡಕೋತ ಕುಂತ್ರು. ವೀರೇಶಿ ಪ್ರೀತಿಯಿಂದ ಹುಸೇನಿ ಎರ್ಡೂ ಮಕಳ್ನ ಗದ್ದ ತುಟಿ ಹಿಡದ ಮಾತಾಡಿಸಿದ, ಹುಸೇನಿ ಸಣ್ಣ ಮಗ ತುಂಬಾ ತುಂಟನಿದ್ದ. ವೀರೇಶಿ ಜೋಡಿ ಲಗೂನ ಹೊಂದಕೊಂಡ. “ನಮ್ಮ ಅಪ್ಪಾ ನಿನಗ ಹೆಡ್ಲೈಟ್” ಅಂತ ಕರಿತಿದ್ದಂತಲ್ಲ ಹೌದಾ ಎಂದು ಹುಸೇನಿ ಮಗ ಎಳ್ಳ ಹುರದ್ಹಂಗ ಮಾತಾಡಿದ. ಹುಸೇನಿ “ಲೇ ಬೇಟಾ ಚುಪ್” ಎಂದು ಬಾಯಿ ಮುಚ್ಚಲು ಮಗನ್ನ ಹೆದರ್ಸಿದ. ಹುಡುಗ ವೀರೇಶಿ ಮುಂಗೈ ಬಿಡಸ್ಕೊಂಡ ಅವರ ತಾಯಿ ಪಾತಿಮಾನ ಹತ್ರ ಓಡಿ ಹೋಗಿ ಕುಂತ. ವೀರೇಶಿ ಮುಖದಲ್ಲಿ ನಗು ಇತ್ತು. ಹುಸೇನಿ ಮುಖದಲ್ಲಿ ಅಳಕಿತ್ತು.
ಸಪರೇಟಾಗಿ ಇದ್ದ ಒಂದು ಕೋಣ್ಯಾಗ ಹುಸೇನಿ ಗೆಳೆಯನಿಗೆ ಹಾಸಿಗೆ ಹಾಸಿದ.ವೀರೇಶಿ ಹುಸೇನಿಯ ಯೋಗಕ್ಷೇಮ ಮಲಗುವ ಮೊದಲು ಕೇಳಿದ. “ಕುರಿ, ಕೋಳಿ ವ್ಯಾಪಾರ ಮಾಡಿ ಜೀವನಾ ಸಾಗಸ್ತಿನಿ, ಅದರಾಗ ಗುದ್ದಾಡಿ ನಾಕ ದುಡ್ಡ ಕೂಡಿಟ್ಟ ಮಕ್ಕಳ್ನ ಪ್ಯಾಟಿ ಸಾಲಿಗೆ ಇಂಗ್ಲೀಷ್ ಕಲ್ಯಾಕ ಹಚ್ಚಿನಿ” ಎಂದು ಹುಸೇನಿ ತನ್ನ ದೈನಿಕ ಬದುಕಿನ ಕಥೆ ತನ್ನ ಸಹಪಾಠಿ ಗೆಳೆಯ ವೀರೇಶನಮುಂದೆ ಹೇಳಿಕೊಂಡ. ಮಾತಾಡುತ್ತ ಮಾತಾಡುತ್ತ “ಈಗ ಸೋನಾಲಿ ಇರ್ಬೇಕಿತ್ತು, ನಿನ್ನ ಈ ಅವತಾರ ನೋಡಿದ್ರ, ಅಕಿ ನವಿಲನಂಗ ಕುಣಿತಿದ್ಳು, ಹಕ್ಕಿ ಹಂಗ ಹಾರ್ತಿದ್ಳು, ಎಂದು ಸೋನಾಲಿಯ ಕಥೆಯನ್ನು ಎಳೆದ ತಂದು ಹುಸೇನಿ, ನಿಧಾನ್ಕ ವೀರೇಶನ ಮುಂದ ಸುರಿದ ಬಿಟ್ಟ. ಇರ್ಲಿ ಬಿಡು ಅದದ್ದ ಆಗಿ ಹೋಗಿದೆ, ಅನ್ನುವ ರೀತಿಯಲ್ಲಿ ನೀ ಮಲಗು, ಎಂದು ಶುಭಕೋರಿ ಹುಸೇನಿ ತಾನು ಹೆಂಡತಿ ಮಕ್ಕಳೊಂದಿಗೆ ಮಲಗಲು ಹೋದ.
ವೀರೇಶನಿಗೆ ಎತ್ತ ಉಳ್ಳಾಡಿದೂ ನಿದ್ದಿ ಬರಲಿಲ್ಲ, ತನ್ನ ಬಾಲ್ಯದ ದಿನಗಳು, ಮೂವತ್ತು-ಮೂವತ್ತೈದು ಹಿಂದಿನ ನೆನಪಗಳೆಲ್ಲ ಸುರಿಮಳಿಂತೆ ವೀರೇಶಿನ ಮನಸನ್ಯಾಗ ಸುರಿಯತೊಡಗಿದವು... ಕನಸೋ.. ನೆನಪೋ.. ಅವನ ಮನಸ್ಸು ತುಂಬಾ ಹಿಂದಕ್ಕೆ ಹೊರಟಿತು. ವೀರೇಶನ ಮನದಲ್ಲಿ ಸಿನಿಮಾ ರೀಲಿನಂತೆ ಒಂದೊಂದೆ ನೆನಪುಗಳು ಆ ರಾತ್ರಿಹೊತ್ತು ಹುಸೇನಿಯ ಪತ್ರಾಸಿನ ಮನೆಯಲ್ಲಿ ಬಿಚ್ಚತೊಡಗಿದವು.
*******
ಮಸೂತಿ ಮುಂದಿನ ಕಚ್ಚಾ ರಸ್ತಾದಾಗ ತನ್ನ ಪುಟ್ಟ ಕಾಲ ಊರಕೋತ, ಸರಕಾರದಾವರ ಕೊಟ್ಟ ನೀಲಿ ಚಡ್ಡಿ ಬಿಳಿ ಅಂಗಿ ಹಕ್ಕೊಂಡ, ಹೆಗಲಿಗೆ ಪಾಟಿ ಕೈಚೀಲ ಜೋತ ಬಿಟಗೊಂದ, ಚಂದ್ರಜ್ಜಿ ಬೊಗಸೆ ತುಂಬಿ ಕೊಟ್ಟ ಕಡ್ಲಿಕಾಳ ಬಾಯಿಗೆ ಹಾಕಿ “ಕಟಮ್ ಕುಟುಮ್” ತಿನಕೋತ, ಕಂಬಾರ ಓಣ್ಯಾಗಿದ್ದ ಈರಭದ್ರ ದೇವರಿಗೊಂದು ನಮಸ್ಕಾರ ಹೊಡದು, ಪುಟಚಂಡಿನಂತೆ ಪುಟಿಯುತ್ತ, ಹಿಗ್ಗಿನಿಂದ ಈರ್ಯಾ ದಿನಾ ಸಾಲಿಗೆ ಹೊಕ್ಕಿದ್ದ. ಸಾಲಿಯ ಮುಂಬಾಗದಾಗ ಇರುವ ದೊಡ್ಡ ಅಕ್ಷರ “ಶಾಲೆಯೇ ಜೀವಂತ ದೇವಾಲಯ, ಕೈ ಮುಗಿದು ಒಳಗೆ ಬಾ” ಅನ್ನುವ ದೊಡ್ಡ ವಾಕ್ಯವನ್ನು ಮನದಲ್ಲಿಯೇ ಓದಿಕೊಂಡು, ಈರ್ಯಾ ಸಾಲಿಯ ಗೇಟು ದಾಟುತ್ತಿದ್ದ. ತುಂಬಾ ಹಳೆಯ ನಾಲ್ಕು ಕೋಣೆಯ ಆ ಸಾಲಿಗೆ ಒಂದ ಇತಿಹಾಸ ಇತ್ತು. ಆ ಸರಕಾರಿ ಸಾಲ್ಯಾಗ ಕಲತವರು, ದೊಡ್ಡ ಡಾಕ್ಟರ್, ಸಾಹಿತಿ, ರಾಜಕಾರ್ಣಿಗಳು, ಸಮಾಜ ಸುಧಾರಕರು ಆದ ಉದಾಹರಣೆಯನ್ನು ಇಡೀ ಊರಿಗೂರೇ ಜಪಿಸುತ್ತಿತ್ತು. ಸುತ್ತಮುತ್ತಲಿದ್ದ ಹಸರು ಹಸರಾದ ಗಿಡಮರಗಳಿಂದ ಆ ಸಾಲಿ ಹಳೆ ದೇವಸ್ತಾನದಂತೆ ಕಾಣ್ತಿತ್ತು. “ಈ ಸಾಲ್ಯಾಗ ಕಲತವರೂ ದೊಡ್ಡ ಮನಸ್ಯಾರ ಅಕ್ಕಾರ” ಅನ್ನುವ ಮಾತು ಊರ ಜನರ ದೈನಿಕ ಘೋಷಣೆಯಾಗಿತು. ಈರ್ಯಾ ಈ ಮಾತ ದಿನಾ ನೆನಸ್ಕೊಂಡ ನೆನಸ್ಕೊಂಡು, ನಾನೂ ಒಬ್ಬ ದೊಡ್ಡ ವ್ಯಕ್ತಿ ಆಗ್ಬೇಕು, ಅಬ್ದುಲ್ ಕಲಾಂ ನಂಗ, ಸಿ ವಿ ರಾಮಣ್ಣನಂಗ, ಹೆಸರ ಮಾಡ್ಬೇಕು ಅಂತ ಲೆಕ್ಕಾಚಾರ ಹಕ್ಕೊಂತ ತರಗತಿಗೆ ಹೋಗಿದ್ದೇ ತಡ, ಅಲ್ಲಿ....
“ಹೆಡ್ಲೈಟ್ ಬಂದ್ನಲೇ.. ಹೆಡ್ಲೈಟ್ ಬಂದ್ನಲೇ” ‘ಗೊಳ್, ಎಂದು ಎಲ್ಲ ಸಾಲ್ಯಾಗಿನ ಹುಡುಗ್ರು-ಹುಡಗ್ಯಾರು ನಕ್ಕಾಗ ಈರ್ಯಾನ ಎರ್ಡು ಕುಂಡಿಮ್ಯಾಲ ಅವ್ನ ಅಂಗೈಗಳೇ ಶ್ರೀರಕ್ಷೆ ಅಕ್ಕಿದ್ವು. ಆಗಂತೂ ಈರ್ಯಾನಿಗೆ ಭಾಳ ಮುಜುಗುರ, ಅಸಹ್ಯ, ಅನಿಸಿ ಒಮ್ಮೊಮ್ಮೆ ಕಣ್ಣಾಗ ನೀರ ತುಳಕ್ಯಾಡ್ತದ್ವು. ಈರ್ಯಾನ ಚಡ್ಡಿ ಗತಿ ನೋಡಿದ ಮಂಗ್ಯಾನ ಮನಸಿನ ಹುಡಗ್ರು, ಮುಗಲ ಹರದ ಬಿಳುವಂಗ ನಗತಿದ್ರು. “ಲೇ ಹರಕ ಚಡ್ಡಿ” ಅಂತ ಒಬ್ಬಾಂವ ಕರದ್ರ, ಮತ್ತೊಬ್ಬ ‘ಲೇ ಹೆಡ್ಲೈಟ್’ ಅಂತ ಹಂಗಿಸಿ, ಹಂಗಿಸಿ ನಗತ್ತಿದ್ದ, ಮತ್ತೊಂದಿಷ್ಟ ಮಂದಿ ಈರ್ಯಾನ ಹರಕ ಚಡ್ಯಾಗ ಕರೀ ಗುಂಡಕಲ್ಲಗತೆ ಕಾಣತಿದ್ದ ಕರಿ ಕುಂಡಿ ನೋಡಿ ಕಕ್ಕಾಬಿಕ್ಕಿಯಾಗಿ ನಕ್ಕ ನಕ್ಕ ಅವರ ಆರೋಗ್ಯ ಕಾಪಾಡ್ಕೊತಿದ್ರ. ಹುಡಗ್ಯಾರಂತೂ ಈರ್ಯಾನ ಹರಕು ಚಡ್ಡಿ ಭಾಳ ಬೆರಗುಗಣ್ಣಿನಿಂದ ನೋಡಿ, ನೋಡಿ ನಾಚಕೊಂತ, ನುಲಕೊಂತ ಇಂಗತಿಂದ ಮಂಗ್ಯಾನ್ಹಂಗ ಮೋತಿ ಕಿಂವಚಾಡಿ, ಮುರದಾಡಿ, ಹೊಟ್ಯಾಗಿಂದ ಬಂದ ನಗಿ ತಾಳಲಾರ್ದಕ್ಕ “ಕುಲಕ್ ಕುಲಕ್” ತುಂಬಿದ ಕೊಡಾ ತುಳಕಿದಂಗ ನಗತಿದ್ರು.
“ಲೇ ಪದ್ದಿ ನಿಮ್ಮ ಅಣ್ಣನ ಹರಕ ಚಡ್ಯಾಗ ಎರಡ ಲೈಟ್ ಹತ್ಕೊಂಡಾವ ನೋಡ” ಎಂದು ಸರಸ್ವತಿ ಮೇಡಂ ಇಡೀ ಕ್ಲಾಸ್ ಹಾರಿ ಹೋಗುವಂಗ ದೊಡ್ಡ ದನಿ ಮಾಡಿ ನಗುತ್ತಿದ್ರು. ಸರಸ್ವತಿ ಮೇಡಂ ಜೋಡಿ ‘ಸೋ..’ ಅನಕೋತ ಮತ್ತೊಮ್ಮೆ ಇಡೀ ಸಾಲಿನ ಹಾರಿ ಹೋಗುವಂಗ ಹುಡುಗ್ರು-ಹುಡುಗ್ಯಾರು ನಗತಿದ್ರು. ಆಗ ಪದ್ದಿ ಕಣ್ಣುಗಳು ಒದ್ದೆಯಾಗಿದ್ದವು. ಪದ್ದಿ ಬಿಕ್ಕಿ ಬಿಕ್ಕಿ ಅಳೂದ ಕಂಡ ಇಡೀ ಕ್ಲಾಸಿಗೆ ಕ್ಲಾಸೇ ತಣ್ಣಗ ಅಗಿತ್ತು. ಸರಸ್ವತಿ ಮೇಡಂ ಪದ್ದಿ ಹತ್ತಿರಕ್ಕ ಬಂದ “ಹಂಗ ಕಾಮಿಡಿ ಮಾಡಿದ್ರ, ನೀ ಏನ್ ಲೇ ಅಳಬುರುಕಿ ಅತ್ತ ಬಿಡ್ತಿಯಲ್ಲ” ಎಂದು ಸಮಾಧಾನ ಮಾಡಿದ್ಹಂಗ ನಟಸ್ತಿದ್ರು. ಸರಸ್ವತಿ ಮೇಡಂನ ಮ್ಯಾಲ ಪದ್ದಿಗೆ ಸಿಟ್ಟ ಬರೂ ಬದಲಿಗೆ ಚಂದ್ರಜ್ಜಿ ಮ್ಯಾಲ ಸಿಟ್ಟು ಬಂದ ಬಾಳ ಹೊತ್ತ ಮನಸನ್ಯಾಗ ಉಳಿಲಾರ್ದ ಕರಿಗಿ, ಮತ್ತ ಮಕದ ತುಂಬ ಪಳ್ ಅಂತ ಹುಣ್ಣಿಮಿ ಚಂದ್ರನಂಗ ನಗಿ ಹುಟಕೊಂಡ ಅಕಿ ಮೋತ್ಯಾಗಿನ ಚಂದ ಚಾಯಿ ಎದ್ದ ಕಾಣತಿತ್ತು. ಆಗಾಗ ಈರ್ಯಾಗ ಸಾಲ್ಯಾಗಿದ್ದ ಮಾಸ್ತರಗೊಳಾಗಲಿ, ಹುಡುಗುರಾಗಲಿ ಅಂವನ ಹರಕ್ ಚಡ್ಡಿ ನೋಡಿ ಅವಮಾನ ಮಾಡಿದ್ರ ಅದನ್ನ ಪದ್ದಿಗೆ ಸಹಿಸಿಕೊಳ್ಳಾಕ ಆಗದ ಬುಳುಬುಳು ಅತ್ತ ಬಿಡ್ತಿದ್ಳು.
“ ಏ.. ಪದ್ದಮ್ಮಾ ನಿಮ್ಮ ಅಣ್ಣ ಸಾಲ್ಯಾಗ ಭಾಳ ಸ್ಯಾನ್ಯಾ ಅದಾನ, ಅಂವಗ ಅನೂಕುಲ ಇದ್ದರ ದೊಡ್ಡ ಮನಶ್ಯಾ ಆಗುವಷ್ಟ ಬುದ್ದಿ ಅಂವ್ನ ತಲ್ಯಾಗೈತಿ. ಕೊಟ್ಟ ಕೆಲಸಾ ಆಗಿಂದ ಆಗ ಪಟಾಪಟ್ ಮಾಡ್ತಾನ, ಅದರ ಇವತ್ತ ನಿಮಗ ಬಡತನ ಐತಿ ಖರೇ, ಇದ ಖಾಯಂ ಉಳಿಯಂಗಿಲ್ಲ, ರಾತ್ರಿ ಹ್ವಾದ ಮ್ಯಾಲ ಹಗಲ ಬರ್ತೈತಿಲ್ಲೋ? ಹಂಗ, ಬಿಸಲ ಬಿದ್ದಮ್ಯಾಲ ತಂಪತ್ತ ಬರದ ಇರ್ತೈತೇನ..? ನೋಡತೀರ ನೀನು.... ಈರ ಮುಂದ ಒಂದ ದಿನ ದೊಡ್ಡ ಮನಶ್ಯಾ ಆಗಿಯೇ ಅಕ್ಕಾನ” ಎಂದು ಬದುಕನ್ಯಾಗ ಬಡತನದ ನಂಜು ಉಂಡ ಗಣಪತಿ ಮಾಸ್ತರ ಮುಗ್ದ ಮನಸಿನ ಹುಡುಗಿಗೆ ಸಮಾಧಾನ ಮಾಡಿ, ಜೀವನದ ಉತ್ಸಾಹ ಹೆಚ್ಚುವಂಗ ಉರುಪ ತುಂಬತಿದ್ದ.
ಗಣಪತಿ ಸರ್ ಅಂದ್ರ ಪದ್ದಿಗೆ ಈರ್ಯಾಗ ದೇವರಿದ್ದಾಂಗ. ಅವರ ಬಾಯಿಯಿಂದ ಬರುವ ಪ್ರತಿಯೊಂದ ಮಾತನ್ಯಾಗೂ ಒಂದ ತತ್ವ ಇರ್ತಿತ್ತು. ಗಣಪತಿ ಸರ್... ಕುಂಟನೂ ಎದ್ದ ಓಡುವಂಗ, ಸೋತಾಂವ ಗೆಲ್ಲಾಕ ಸಜ್ಜಾಗುವಂಗ, ಅಳತಿದ್ದಾಂವ ನಗುವಂಗ, ಮಾತನ್ಯಾಗ ಮೋಡಿಮಾಡಿ ಎಲ್ಲರ್ನ ನಗಸ್ಕೋತ, ಜೀವನದ ಉತ್ಸಾಹ ಹೆಚ್ಚಿಸಿ, ಬಡವರ ಮಕ್ಕಳ್ನ ಭಾಳಂದ್ರ ಭಾಳ ಅಕ್ಕರೆಯಿಂದ ನೋಡ್ತಿದ್ರು. ಅವರ ಪಾಠ ಹೇಳಾಕತ್ತಿದ್ರಂತೂ ಮುಗಿತು. ಎಲ್ಲ ಹುಡುಗ್ರು ಕೈಕಟ್ಟಿ, ತುಟಿ ಪಿಟಕ್ ಅನ್ನದ ಗಪ್ಪಚುಪ್ ಕುಂತ ಕೇಳ್ತಿದ್ರು. ಅವರು ಹೇಳುವ ಪಾಠದ ಶೈಲಿ ಎಲ್ಲ ಮಕ್ಕಳ ಮನಸನ್ಯಾಗ ಅಚ್ಚೊತ್ತಿದ್ಹಂಗ ಇರ್ತಿತ್ತು. ಹಿಂಗಾಗಿ ಗಣಪತಿ ಸರ್ ಅಂದ್ರ ಆ ಸಾಲ್ಯಾಗಿನ ಎಲ್ಲ ಹುಡಗರಿಗೂ ಹಿಗ್ಗೋ ಹಿಗ್ಗು.
*****
ಹರಕು ಚಡ್ಡಿಯ ಬಿಟ್ಟು ಮತ್ತೊಂದು ಚಡ್ಡಿ ಕೊಡಸುವಷ್ಟು ಭಗವಂತ ಚಂದ್ರಜ್ಜಿಗೆ ಶ್ರೀಮಂತಿಕೆ ಕೊಟ್ಟರಲಿಲ್ಲ. ಹಿಂಗಾಗಿ ಈರ್ಯಾಗ ಹರಕ್ಕ್ ಚಡ್ಡಿ ಹಾಕಿ ಹಾಕಿ ರೂಡಿಯಾಗಿತ್ತು. ಊರಾಗ ಹಬ್ಬ ಇದ್ದರೂ ಅದ ಚಡ್ಡಿ, ಯಾರ್ದಾರ ಲಗ್ಗನ ಹ್ವಾದ್ರೂ ಅದ ಚಡ್ಡಿ. ಈರ್ಯಾನ ಕರಿಕುಂಡಿ ನೋಡಿ ನಕ್ಕನಕ್ಕ ಬ್ಯಾಸತ್ತ ಹೊಕ್ಕಿದ್ರ. ಈರ್ಯಾಗ ಯಾರ ನಕ್ಕರೂ.. ಯಾರರ ಅಸಯ್ಯ ಮಾಡಿದ್ರೂ ಹಾಂ.. ಹೂಂ.. ಅನ್ನದ ಅಲ್ಲಿಂದ ಲುಟುಲುಟು ನಡ್ಕೋತ ಅಲ್ಲಿಂದ ಕಣ್ಮಿರಿ ಅಕ್ಕಿದ್ದ.
ಕೆಲವಂದ ಭಾರಿ ಊರ ಮಂದಿ ಚಂದ್ರಜ್ಜಿಗೆ “ಏನ್ ಚಂದ್ರಮ್ಮಾ.. ಊರ ಮಂದಿಗೆಲ್ಲ ಕೌದಿ ಹೊಲದ ಕೊಡ್ತಿ, ಅದ ನಿನ್ನ ಮೊಮ್ಮಗಗ ಒಂದ ಗಟ್ಟಿಮುಟ್ಟಾದ ಚಡ್ಡಿ ಹೊಲದ ಕೊಡೂದ ಆಗ್ವಲ್ದಾ ನಿನಗ..” ಎಂದ ಆಡಸ್ಯಾಡ್ತಿದ್ರು. ಎಟ್ ಹೊಲದ್ರೂ ಅದ ಪಿಸಗಿ..ಪಿಸಗಿ ಹಂಗ ಹುಣ್ಣಿಮಿ ಚಂದ್ರನಗತೆ ಅಗಲ ಅಕ್ಕೋತ ಹೊಕ್ಕೈತಿ..”ಈರಪ್ಪ ಕುಂಡ್ಯಾಗ ಭಾಳ ಬಿರಸ್ ಅದಾನ” ಎಂದ ಅಡಸ್ಯಾಡದ ಮಂದಿ ಬಾಯಮುಚಗೊಳುವಂಗ ಚಂದ್ರಜ್ಜಿ ಮಾತಾಡುವಾಗ ಅಕಿ ಮನಸಿನ ಮೂಲ್ಯಾಗ ಒಂದ ಕಡೆ ಸೂಜಿ ಚುಚ್ಚಿದಂಗ ಅಕ್ಕಿತ್ತ. ನಮ್ಮ ಈರಪ್ಪಗ ಆ ಮಾದೆವ್ರ ಎಷ್ಟರ ಸಹನ ಗುಣಾ ಕೊಟ್ಟಾನ.. ಇದ್ದದ್ದ ಉಂತಾನಾ, ಇದ್ದದ್ದ ಹಕ್ಕೊತಾನಾ, ದೇವ್ರಮ್ಯಾಲ ಎಷ್ಟ ಭಕ್ತಿ ಐತೋ ಅಷ್ಟ ಭಕ್ತಿ, ಕಲಿಯುವ ಸಾಲಿ ಮ್ಯಾಲ ಐತಿ, ಅಂವ ನಂಬಿದ ಸರಸ್ವತೆವ್ವ ಮುಂದ ಅಂವನ ಕೈಹಿಡದ್ರ ಅಷ್ಟ ಸಾಕ.. ಹಳಹಳಿಸುತ್ತ ಚಂದ್ರಜ್ಜಿ ಬಾಗಲಮುಂದ ಕುಂತ ಸೂಜಿ ಕುಂಡಿಗೆ ದಾರ ಪೋನಿಸಿ ಕೌದಿ ಹೊಲಿಯುತ್ತಲೇ ಇರ್ತಿದ್ಳು. ಕೆಲ ಓಣಿಯ ಹೆಂಗಸರು ತಮ್ಮ ಮಕ್ಕಳು ಹಟ ಹಿಡಿದ ಕುಂತಾಗ, ಸಾಲಿಗೆ ಹೋಗಾಕ ಒಲ್ಲೆಂದಾಗ, ಹೇಳಿದ ಕೆಲಸಾ ಮಾಡದಿದ್ದಾಗ ಭಾಳ ಗರಂ ಅಗಿ “ನೋಡಲ್ಲಿ ಆ ಚಂದ್ರಜ್ಜಿ ಮೊಮ್ಮಗ ಈರ್ಯಾ ಎಷ್ಟೊಂದ ಕೆಲಸಾ ಮಾಡ್ತಾನ, ಹೆಂಗ ಹಿಗ್ಗಿಸತ್ತ ಸಾಲಿಗೆ ಹೊಕ್ಕಾನ, ಆಡ ಮೇಸ್ತಾನ, ಮನಿ ಕಸಾ ಹೊಡಿತಾನ, ನೀರತರತಾನ, ಗುಡ್ಡಕ್ಕ ಹೋಗಿ ಕಟಗಿ ತರ್ತಾನ.. ಅಂವನ ನೋಡಿ ನಾಚರಿ ಎಂದು ಓನ್ಯಾನ ಹೆಂಗಸರ ಬೈಯುದ ಕೇಳಿದಾಗ ಚಂದ್ರಜ್ಜಿ ತನ್ನ ಮೊಮ್ಮಗನ ಮ್ಯಾಲ ಭಾಳ ಹೆಮ್ಮೆ ಪಡ್ತಿದ್ಳು.
“ಅಜ್ಜಿ ನೀ ಇದ್ದಬಿದ್ದ ಕೆಲಸಾ ಬಿಟ್ಟ ಮೊದಲ ಅಣ್ಣನ ಚಡ್ಡಿ ಬರೊಬ್ಬರಿ ಹೊಲದಕೊಡ ಸಾಲ್ಯಾಗ ನನ್ನ ಗೆಳತ್ಯಾರೂ, ಮೇಡಮ್ಮಾರೂ, ಹುಡುಗ್ರು ಎಲ್ಲರೂ ಅಣ್ಣನ ಹರಕ ಚಡ್ಡಿ ನೋಡಿ ಹಂಗಿಸಿ ಹಂಗಿಸಿ ನಗ್ತಿರ್ತಾರ, ನನಗಂತೂ ಅಳು ಬಂದಂಗ ಅಕ್ಕೈತಿ, ಅಣ್ಣ ಅದನೆಲ್ಲ ಸಹಿಸಕೊಂಡ ಹೆಂಗ ಸುಮ್ನ ಇರ್ತಾನೋ ದೌಳಾಂವ” ಎಂದು ಪದ್ದಿ ಕೌದಿ ಹೊಲೆಯುತ್ತ ಕುಳಿತಿದ್ದ ಚಂದ್ರಜ್ಜಿ ಮುಂದ ಸಾಲೆಯಲ್ಲಿ ಈರ್ಯಾನ್ನಿಂದಾದ ಅವಮಾನವನ್ನು ಪದ್ದಿ ಅಜ್ಜಿಯ ಮುಂದೆ ಸಮರ್ಥಿಸಿಕೊಳ್ಳುತ್ತಿದ್ದಳು.
“ನಾಳೆ ಗೌಡರ ಕೌದಿ ಮುಗಿತೈತಿ, ಅವರ ರೊಕ್ಕಾ ಕೊಟ್ಟಮ್ಯಾಲ ಕಲಾದಗಿ ಸಂತಿಗೆ ಹೋಗಿ ನಿಮ್ಮ ಅಣ್ಣಗ ಚಲೋ ಎರಡ ಚಡ್ಡಿ ತಂದಕೊಡ್ತಿನಿ,” ಪದ್ದಿಯ ಖಾಸಗಿ ಕಾನೂನಿಗೆ ಚಂದ್ರಜ್ಜಿ ಅವಳನ್ನು ಖುಷಿಗೊಳಿಸಲು ಒಂದು ನಕಲಿ ಜವಾಬು ಸೃಷ್ಠಿಸಿ ಹೇಳಿದಳು. “ಬರೆ ಬರೆ ನೀ ಸುಳ್ಳ ಹೇಳ್ತಿ, ಮನ್ನೆ ಹೊಸಮನಿ ಸಾವುಕಾರ ಕೌದಿ ದುಡ್ಡ ಕೊಟ್ಟರ ತಂದ ಕೊಡ್ತಿನಂದಿ, ಈಗ ಗೌಡರ ದುಡ್ಡ ಕೊಟ್ಟಮ್ಯಾಲ ಅಂತ ನನಗ ಸುಳ್ಳ ಸುಳ್ಳ ನಂಬಸ್ತಿ, ತಂದ ಕೊಡ್ತಿನಿ ಅಂತ ನನ್ನ ತಲಿ ಮುಟ್ಟಿ ಆನಿ ಮಾಡು” ಎಂದು ಈ ಸಾರಿ ಪದ್ದಿ ಪಟ್ಟು ಹಿಡಿದು ಚಂದ್ರಜ್ಜಿಯನ್ನು ಇಕ್ಕಟ್ಟಿಗೆ ಸಿಲುಕಿಸಿದಳು.
ಪದ್ದಿಯ ಮಾತಿಗೆ ಪೂರಾ ಅಜ್ಜಿ ಸೋತಿದ್ದಳು. ಈರ್ಯಾ ಹರಕ್ಕ್ ಚಡ್ಡಿಯಲ್ಲಿ ಇರುವ ರೀತಿಗೆ ಅಜ್ಜಿಗೆ ಹೊಟ್ಟೆಯಲ್ಲಿ ಖಾರಾ ಕಲಿಸಿದಂತಾಗುತ್ತಿತ್ತು. ಆದ್ರೂ ಅವಳ ಕೈಯಿಂದ ಏನೂ ಮಾಡಲಾಗದೆ ಬಡತನದ ದಾರಿದ್ರ್ಯತೆಯನ್ನು ಶಪಿಸುತ್ತಿದ್ದಳು. ಅಂದು ಗೌಡರು ದುಡ್ಡುಕೊಟ್ಟರೆ ಖಂಡಿತ ಆ ದುಡ್ಡು ಚಡ್ಡಿಗೇ ಎಂದು ನಿರ್ಧಾರ ಮಾಡಿ ಮೀಸಲಿರಿಸಿದಳು.
ಮನೆಯ ಪರಸ್ಥಿತಿ ಎಲ್ಲವೂ ಗೊತ್ತಿದ್ದ ಈರ್ಯಾ ಒಂದು ದಿನವೂ ಅಜ್ಜಿಯನ್ನು ಕಾಡಿಸಿ, ಪೀಡಿಸಿ, ಇದು ಬೇಕು, ಅದು ಬೇಡ ಎಂದು ಕೇಳಿರಲಿಲ್ಲ, ಒಪ್ಪತ್ತಿನ ಊಟಕ್ಕೆ ಹೋರಾಟ ಮಾಡುತ್ತಿದ್ದ ಚಂದ್ರಜ್ಜಿಗೆ ದುಡಿಯುವ ಹುಮ್ಮಸಿತ್ತು ಆದರೆ ರಟ್ಟೆಯಲ್ಲಿರುವ ಶಕ್ತಿಯನ್ನು ಆ ಪರಮಾತ್ಮ ಕಸಿದುಕೊಂಡಿದ್ದ. ಅಜ್ಜಿ ಹಗಲು ರಾತ್ರಿ ಕೌದಿ ಹೊಲೆದು, ಆ ದುಡ್ಡಲ್ಲಿಯೇ ಓದಿಸುವ ಸಾಹಸ ಕೂಡಾ ಹೊತ್ತಿದ್ದಳು. “ಈ ಜೀವ ಇರುತನಕಾ ನೀ ಹೆದರಾಕ ಹೋಗಬ್ಯಾಡ, ಆ ಪರಶಿವನ ಅಡ್ಡ ಬಂದ ನಿಂತರೂ ನಿಮ್ಮನ್ನ ಸಾಲಿ ಬಿಡಸಾಂಗಿಲ್ಲ, ನಿಂವ ಓದಕ್ಕೊಂಡ ವಿದ್ಯಾವಂತರಾಗಿ, ನಿಂವ ಕಲಿತ ಅಕ್ಷರಗಳಿಂದ ನಿಮ್ಮ ಅನ್ನ, ನೀರು ಹುಡ್ಕೊಂಡ ಬದಕ್ರಿ” ಎಂದು ಅಜ್ಜಿ ಹೇಳಿದ ಮಾತು ಈರ್ಯಾನಿಗೆ ಕುಂತ ನಿಂತಲ್ಲಿ ತಿವಿದು, ಚುಚ್ಚಿ ಎಚ್ಚರಿಸುತ್ತಿತ್ತು.
ಅಜ್ಜಿ ಪಡುತ್ತಿದ್ದ ಕಷ್ಟ-ಪರಿಪಾಟಿನ ಮುಂದೆ ಹರಕು ಚಡ್ಡಿಯ ಕತಿ ಈರ್ಯಾನಿಗೇನು ದೊಡ್ಡದೆನಿಸುತ್ತಿರಲಿಲ್ಲ. ಆದ್ರೂ, ಅಜ್ಜಿನೇ ಇಂದು “ಗೌಡರು ದುಡ್ಡು ಕೊಟ್ಟ ಮೇಲೆ ಕಲಾದಗಿ ಸಂತಿಗೆ ಹೋಗಿ ನಿಮ್ಮ ಅಣ್ಣನಿಗೆ ಒಂದ ಜೋಡ ಚಡ್ಡಿ ತರ್ತಿನಿ” ಅಂತ ತಂಗಿ ಮುಂದೆ ಹೇಳುವುದನ್ನ ಕೇಳಿದ ಈರ್ಯಾ, ಕುಂಡಿ ಮುಟ್ಟಿ ನೋಡಿದ, ಥೂ ನನಗ ಇಷ್ಟ ಇನ್ನ ನಾಚೀಕಿ ಬರ್ತೈತಿ, ಮಂದಿಗೆಷ್ಟ ಆಗ್ಬಾರ್ದು..! ಇನ್ನ ಮ್ಯಾಲ ಹರಕ್ಕ್ ಚಡ್ಡಿ ನೋಡಿ ಹಂಗಿಸಿದವರು, ನಾ ಹಾಕಿಕೊಂಡ ಹೊಸ ಚಡ್ಡಿ ನೋಡಿ ಬೆರಗಾ ಆಗಾಕಬೇಕ; ಹುಬ್ಬ ಏರಿಸಿ ಅಬಬಬಾ ಅನ್ನಾಕಬೇಕ; ಹಿಂಗ ಅನೇಕ ಬಗೆ ಬಗೆ ಕನಸು ಕಂಡು ಆನಂದಿತನಾದ. ಈರ್ಯಾನ ಕನಸು ಕನಸಾಗಿಯೇ ಉಳಿಯಿತು. ನನಸಾಗಲೇ ಇಲ್ಲ. ಅಂವನತಂಗಿ ಪದ್ದಿಗೆ ಇದ್ದಕ್ಕಿದ್ದತೆ ಜ್ವರ ಬಂದು ನರಳಾಡ ತೊಡಗಿದಳು. ಆಗ ಚಂದ್ರಜ್ಜಿ ತುಂಬಾ ಗಾಬರಿಯಿಂದ ಒಂದು ಬಿಟ್ಟು ಒಂದು ಮಾತಾಡ ತೋಡಗಿದಳು. “ಏನೂ ಆಗಾಂಗಿಲ್ಲ ಸುಮ್ನಿರು ಅಷ್ಟ್ಯಾಕ ಹೆದರಿ” ಎಂದು ಈರ್ಯಾ ಕಣ್ಣಾಗ ಬಂದ ಕಣ್ಣೀರ ವರಸ್ಕೋತ ಚಂದ್ರಜ್ಜಿಗೆ ಸಾಂತ್ವನ ಹೇಳಾಕ ಗುದ್ದಾಡಿದ. ಈರ್ಯಾನ ಮಾತ ಕೇಳಕೋತ, ಪದ್ದಿ, ಹಣಿಮುಟ್ಟಿ, ಕೈಕಾಲ ಮ್ಯಾಲ ಕೈಸವರಾಡುತ್ತ ಚಂದ್ರಜ್ಜಿ ಇದ್ದಕ್ಕಿದ್ದಂತೆ ಅಳ ತೊಡಗಿದಳು. ಆಗ ಈರ್ಯಾನೂ ಜೋಡಿಯಾದ.
“ಹತ್ತ ವರ್ಷದ ಹಿಂದ ಹಿಂತವೇ ಜ್ವರಾ ನಿಮ್ಮ ಅಪ್ಪಗ ಬಂದು ಅಂವನ ಜೀವಾ ತಂಗೊಂದ ಹ್ವಾದು, ಈ ಹಾಳಾದ ಜ್ವರಕ್ ನಮ್ಮಂತ ಬಡವರ ದೇಹಾನ ಬೇಕೇನು, ಕುಡಿಕ್ಯಾಗ ಒಂದ ಕಾಸಿಲ್ಲ, ನನ್ನ ಮೊಮ್ಮಗಳಿಗೆ ಏನರಾ ಆದ್ರ ಹೆಂಗ ಮಾಡ್ಲೋ ಗುಡ್ಡದ ಯಲ್ಲಮ್ಮ” ಎಂದು ಒಂದು ಬಿಟ್ಟು ಬಂದು ಬಡಬಡಿಸತೊಡಗಿದಳು ಅಜ್ಜಿ.
ಆಗತಾನೆ ಹೊಲದಿಟ್ಟ ಗೌಡರ ಕಾದಿಯನ್ನ ಹೊತ್ತುಕೊಂಡು ‘ಬಂವ್’ ಅಂತ ಅವರ ಮನೆಯತ್ತ ಈರ್ಯಾ ಏಳುತ್ತ ಬೀಳುತ್ತ ಓಡಿದ. ಗೌಡರ ಮಗಳು ‘ಸೋನಾಲಿ’ ಹೂಬಿಳುಪಿನ ಲಂಗಾದಾವನಿ ಹಾಕಿಕೊಂಡು ತುಗುವಯ್ಯಾಲೆಯಲ್ಲಿ ಕುಳಿತು ಏನನ್ನೊ ತಿನ್ನುತ್ತಿದ್ದಳು. ಈರ್ಯಾ ತಲೆ ಮೇಲೆ ಕೌದಿ ಹೊತ್ತುಕೊಂಡು ಅವರ ಅಂಗಳಕ್ಕೆ ಬರುವುದನ್ನು ನೋಡಿದ ಸೋನಾಲಿ “ಅಮ್ಮಾ.. ಅಮ್ಮಾ ವೀರ ಕೌದಿ ತಗೊಂದ ಬಂದ” ಎಂದು ಚಂಗನೆ ತುಗೂ ಉಯ್ಯಾಲೆಯಿಂದ ಜಿಗಿದು ಜೋರು ದನಿಮಾಡಿ ಮನಿಯೊಳಗೆ ಹಾರಿ ಹೋಗುವುದನ್ನು ಕೊಟ್ಟಿಗೆಯ ದನಗಳು ಅವಳ ಮುದ್ದಾದ ಗಿಳಿಮರಿಯಂತ ದನಿ ಕೇಳಿ ಅರಗಳಿಗೆ ಮೇವು ತಿನ್ನವುದನ್ನ ಬಿಟ್ಟು ಸೋನಾಲಿಯ ದನಿಯತ್ತ ಚಿತ್ತ ಹರಿಸಿದ್ದವು.
ಸೋನಾಲಿಗೆ ಈರ್ಯಾ ಅವರ ಮನೆಗೆ ಬಂದದ್ದು ದೊಡ್ಡ ಸಂಭ್ರಮವಾಗಿತ್ತು. ಅದ್ಯಾಕೊ ಏನೋ ಸಾಲಿಯಲ್ಲಿ ಈರ್ಯಾ ಹರಕು ಚಡ್ಡಿಯನ್ನು ನೋಡಿ ಎಲ್ಲ ಹುಡುಗ ಹುಡುಗಿಯರು ಗೇಲಿ ಮಾಡಿ ನಕ್ಕರು ದೇವತೆ ಮನಸ್ಸಿನ ಸೋನಾಲಿ ಒಂದು ದಿನವೂ ಅಪಹಾಸ್ಯವಾಗಿ ನಕ್ಕಿರಲಿಲ್ಲ ಹಬ್ಬ ಹರಿದನಗಳ ನೆಪದಲ್ಲಿ ಅವನಿಗೆ ಪೆನ್ನು ನೋಟ ಬುಕ್ ಬೇಕ ಬೇಕಂತಲೇ ಉಡುಗರೆಯಾಗಿ ನೀಡುತ್ತದ್ದಳು. ಈರ್ಯಾ ಬ್ಯಾಡ ಬ್ಯಾಡ ಅಂದ್ರೂ ನಿರಾಕರಿಸಿದರೂ ಪಟ್ಟು ಹಿಡಿದು ಹಟಮಾಡಿ ಸೋನಾಲಿ ಈರ್ಯಾನ ಹರಕು ಪಾಟಿ ಚೀಲದಲ್ಲಿ ಅವರಪ್ಪ ತನಗೆ ಕೊಡಿಸಿದ್ದ ಪೆನ್ನು ನೋಟ ಬುಕ್ ಅವನ ಬ್ಯಾಗಿಗೆ ತುಂಬಿಡುತ್ತಿದ್ದಳು. ರವೆ ಉಂಡಿ, ಶಂಕರ ಪಾಳಿ, ಚುರುಮರಿ ಕಾರಾ, ಬಾಳೆ ಹಣ್ಣು, ಒಂದಿಲ್ಲ ಒಂದು ತಿನಸು ದಿನಾಲೂ ಈರ್ಯಾನ ಬ್ಯಾಗಿನಲ್ಲಿ ಹಾಜರಿ ಇರುತ್ತಿದ್ದವು. ಸೋನಾಲಿ ಸಾಲಿಯಲ್ಲಿ ತುಂಬಾ ದಡ್ಡಿಯಾಗಿದ್ದಳು. ಈರ್ಯಾ ತುಂಬಾ ಚುರುಕಾದ ಹುಡುಗ ಅಂತ ಮೇಷ್ಟ್ರು ಆಗಾಗ ಸಬ್ಬಾಸ್‍ಗಿರಿ ನೀಡುತ್ತಿದ್ದರು. ಆಗ ಎಲ್ಲರಿಗಿಂತ ಜೋರಾದ ಚಪ್ಪಾಳೆ ಸದ್ದು ಸೋನಾಲಿಯಿಂದ ಹೊರಡುತ್ತುದ್ದದ್ದು ಈರ್ಯಾನಿಗೆ ಒಂದು ಖುಷಿ ನೀಡುತ್ತಿತ್ತು. ಇದ್ದಕಿದ್ದಂತೆ ಈರ್ಯಾ ಕೌದಿ ಹೊತ್ತು ಅವರ ಮನೆಗೆ ಬಂದ ಖುಷಿಯಲ್ಲಿ ಸೋನಾಲಿ ಅಂದು ಜಿಂಕೆಯಾಗಿದ್ದಳು. ಆದ್ರ ಈರ್ಯಾನ ಮುಖದಲ್ಲಿ ಇರುವ ದುಗುಡ ದುಮ್ಮಾನ ಸೂಕ್ಷ್ಮ ಮನಸಿನ ಹುಡುಗಿ ಸೋನಾಲಿಗೆ ಲಗೂಮ ಅರ್ಥಆ ಮಾಡ್ಕೊಂಡ್ಳು.
“ಅವ್ವಾರ ನಿಮ್ಮ ಕೌದಿ ಕೆಲಸ ಮುಗಿತು, ನಮ್ಮಜ್ಜಿ ಕೊಟ್ಟ ಬಾ ಅಂತ ಹೇಳಿ ಕೇಳಿಸಿದ್ಳು, ಅದಕ್ಕ ಬಂದಿದ್ದೆ. ಈ ಕೌದಿ ತಗೊಳ್ಳಿರಿ” ಅಂತ ಈರ್ಯಾ ಮೆದುವಾಗಿ ಮಾತಾಡುತ್ತಿರುವುದನ್ನು ಸೋನಾಲಿಯ ಮುಗ್ದ ಹೃದಯ ಈರ್ಯಾನ ಮನದಲ್ಲಿರುವ ನೋವನ್ನು ಹುಡುಕತೊಡಗಿತು.
“ಈ ಕಂಬಕ ಕುಂದ್ರ ತಮ್ಮ, ತಿನ್ನಾಕ ಒಂದೀಟ ಏನಾರ ಕೊಡ್ತಿನಿ” ಎಂದು ಗೌಡತಿ ಈರ್ಯಾನಿಗೆ ಹೇಳುತ್ತ ಒಳ ನಡೆದಳು. “ಯಾಕ ವೀರ ಮೋತಿ ಸಪ್ಪ ಮಾಡಿ, ನಮ್ಮನಿಗೆ ಕೌದಿ ಹೊತ್ತ ತಂದದ್ದ ಅವಮಾನಾ ?” ಸೋನಾಲಿ ಸಣ್ಣಗೆ ಉಲಿದಳು. ಹರಕು ಚಡ್ಡಿ ಹಾಕಿಕೊಂಡು ಊರೆಲ್ಲ ಅಲೆದಾಗ ಆಗದ ಅವಮಾನ, ಕೌದಿ ಹೊತ್ತ ತಂದಾಗ ಆದಿತೆ ? ಅದು ಅಲ್ಲದೆ ಅಜ್ಜಿ ಹೊಲೆಯುವ ಕೌದಿಯೇ ಮೂರು ಜನರ ತುತ್ತಿನ ಚೀಲ ತುಂಬಿಸುತ್ತಿತ್ತು. ಇದನೆಲ್ಲ ಸೋನಾಲಿಗೆ ವಿವರವಾಗಿ ಹೇಳಲು ಆಗದೆ ಈರ್ಯಾ “ಇಲ್ಲ ನನಗೇಕೆ ಅವಮಾನ, ನಮ್ಮ ಕೆಲಸಾನೆ ಇದ ಐತಿ” ಎಂದು ಮುಗ್ದನಂತೆ ಮಾತಾಡಿ ಸೋನಾಲಿಯನ್ನು ನೋಡುವ ಧೈರ್ಯ ಸಾಲದೆ, ನೆಲದಲ್ಲಿ ಚಿತ್ತವನ್ನು ಊರಿ ಕುಳಿತ. ಕೌದಿಯ ದುಡ್ಡು ಗೌಡ್ತಿ ತಾವಾಗಿಯೇ ಕೊಟ್ರೆ ಚಲೋ ಆಕ್ಕೈತೆ, ಕೊಡದಿದ್ರೆ ಪಜೀತಿ, ತಂಗಿಗೆ ಜ್ವರಾ ಜೋರಾಗಿವೆ, ದವಾಖಾನಿಗೆ ಹೋಗಲೇಬೇಕು. ಇಲ್ಲಂದ್ರೆ ಅವಳು ಅಪ್ಪನಂತೆ... ಬೇಡ ಬೇಡ, ಹಂಗಾಗೂದ ಬೇಡ, ಎಂದು ಕುಂತಲ್ಲಿಯೇ ಈರ್ಯಾ ಬಡಬಡಿಸಿದ್ದು ಪುಸ್ತಕ ಓದಿದ್ರೆ ತಿಳಿಯದ ಪೆದ್ದಿ ಸೋನಾಲಿಗೆ ಅಂದು ಈರ್ಯಾನ ನಡಾವಳಿ ಲಗೂನ ತಿಳಿಯಿತು. ಹತ್ತಿರ ಬಂದು “ವೀರ ಯಾಕೋ ಏನೇನೋ ಒಬ್ನೆ ಮಾತಾಡ್ತಿದ್ದಿಯಲ್ಲ” ಎಂದು ಅವಳ ಮುದ್ದಾದ ಕೈಗಳು ನನ್ನ ಮುಂಡಿಯನ್ನು ಕುಲುಕಿದವು. ಅದ್ಯಾಕೋ ಏನೋ ಈರ್ಯಾನಿಗೆ ಗೊತ್ತಿಲ್ಲದೆ ಕಣ್ಣಲ್ಲಿ ಎರಡು ಹನಿ ಕಣ್ಣೀರು ಹೊರ ಬರಲು ಹಾತೊರೆಯುತ್ತಿದ್ದವು, ಅಷ್ಟೊತ್ತಿಗೆ ಸೋನಾಲಿಯ ಕಣ್ಣುಗಳು ತುಂಬಿಕೊಂಡಿದ್ದವು.
“ಏನಾತು ವೀರಾ ನನಗ ಹೇಳೋ ಎಂದು ಸೋನಾಲಿ ಅತ್ತೆ ಬಿಟ್ಟಳು, ಈರ್ಯಾ ಕಣ್ಣೊರಸಿಕೊಂಡು ತಂಗಿಗೆ ಜ್ವರ ಬಂದ ವಿಷಯ, ಮನೆಯಲ್ಲಿ ಪುಡಿಗಾಸು ಇಲ್ಲದ ಸಂಗತಿ, ಜ್ವರದಿಂದಲೇ ಅವರಪ್ಪ ಸತ್ತ ಅವಗಡ, ಈಗ ಗೌಡತಿ ಕೌದಿಯ ದುಡ್ಡು ಕೊಡದಿದ್ದರೆ ಮುಂದಿನ ಪರಸ್ಥಿತಿ ಏನೂ ಎಂಬ ಎಲ್ಲ ಚಿಂತೆಯನ್ನು ಸೋನಾಲಿ ಎದರು ಒಂದೇ ಉಸಿರಲ್ಲಿ ತೋಡಿಕೊಳ್ಳವಷ್ಟರಲ್ಲಿ ಒಳಗಿನಿಂದ ಗೌಡತಿ ಬಂದು ಹಿತ್ತಾಳಿ ತಾಟಿನಲ್ಲಿ ಅವಲಕ್ಕಿ ಹಾಕಿಕೊಂಡು ಈರ್ಯಾನ ಮುಂದೆ ಇಟ್ಟಳು. ತಗೋ ಒಂದೀಟ ಬಾಯಾಡ್ಸು ಅಂತ ಗೌಡ್ತಿ ಹೇಳಿದಳು. ಇರ್ಯಾನಿಗೆ ಒಂದು ತುತ್ತು ಒಳಗೆ ಇಳಿಯಲಿಲ್ಲ. “ಅವ್ವಾರ ನಾ ಇದನ್ನು ಮನಿಕಡೆ ಓದು ತಿಂತಿನಿ” ಎಂದು ಒಂದು ಪೇಪರದಲ್ಲಿ ಅವಲಕ್ಕಿ ಹಾಕಿಕೊಂಡು, ಆ ತಾಟನ್ನ ನೀರಿನಿಂದ ತೊಳದಿಟ್ಟ, ಗೌಡತಿ ದುಡ್ಡು ಕೊಡುತ್ತಾಳೆನೋಂ ಎಂದು ಒಂದರಗಳಿಗೆ ನಿಂತು ಅವಳತ್ತ ನೋಡಿದ. “ಗೌಡ್ರು ಊರಾಗಿಲ್ಲ ನಾಳೆ ಬರ್ತಾರೆ, ನಿನ್ನ ಕೌದಿ ದುಡ್ಡು ನಾಳೆ ಬಂದು ಇಸ್ಕೊಂಡ ಹೋಗು” ಎಂದು ಗೌಡತಿ ಕಡ್ಡಿ ಮುರಿದಂತೆ ಮಾತು ಮುಗಿಸಿ ಒಳ ನಡೆದಳು.
ಈರ್ಯಾ ವಿಧಿಯನ್ನು ಹಳೆಯುತ್ತ, ಸೋತ ಹೆಜ್ಜೆ ಇಡುತ್ತ, ಮನೆಯತ್ತ ಮುಖ ತಿರುಗಿಸಿದ. ಈರ್ಯಾ ಮೋತಿ ಸಪ್ಪಗ ಮಾಡ್ಕೊಂಡ ಹೋಗೂದ ನೋಡ್ಕೋತ ನಿಂತ ಸೋನಾಲಿಗೆ ತನ್ನ ಜೀವವೇ ಹೋದಂತೆ ಅನಿಸುತ್ತಿತ್ತು. ಅವ್ವ –ಅಪ್ಪ ಕೊಟ್ಟ ದುಡ್ಡನ್ನ ಕೂಡಿ ಇಟ್ಟ ಮಣ್ಣಿನ ಕುಡುಕಿ ನೆನಪಾಯಿತು. ಅದರಲ್ಲಿ ಸಾಕಷ್ಟು ಹಣ ಇದೆ, ಪದ್ದಿಯ ದವಾಖಾನೆಗೆ ಸಾಕಾಗುವಷ್ಟ ದುಡ್ಡು ಖಂಡಿತ ಅದರಲ್ಲಿದೆ ಎಂದು ಖಾತರಿ ಮಾಡಿಕೊಂಡ ಸೋನಾಲಿ ಮೆಲ್ಲನೆ ಒಳನಡೆದು ಮಣ್ಣಿನ ಮಡಿಕೆಯನ್ನು ತನ್ನ ಲಂಗಾದಲ್ಲಿ ಮರೆ ಮಾಡಿಕೊಂಡು ಚಿಗರಿಯಂತೆ ಚಂಗನೆ ಅಂಗಳಕ್ಕೆ ಹಾರಿ ಅಂಗಳದಾಟಿ ಕಂಬಾರ ಓಣಿಯ ಹಾದಿ ಹಿಡಿದು ಹೊರಟಿದ್ದ ಈರ್ಯಾನನ್ನು ಅಡ್ಡಗಟ್ಟಿ ಸೋನಾಲಿ “ವೀರಾ ವೀರಾ ನಿಲ್ಲೋ” ಎಂದು ಎದುಸಿರು ಬಿಡುತ್ತ ಬಂದು ಆ ಮಣ್ಣಿನ ಮಡಿಕೆಯನ್ನ ಅಂವನ ಅಂಗೈಯಲ್ಲಿಟ್ಟು “ತಗೋ ಇದನ್ನ ನಿಮ್ಮ ತಂಗೀನ ದವಾಖಾನಿಗೆ ಕರ್ಕೊಂಡ ಹೋಗು” ಎಂದು ಸೋನಾಲಿ ಪಿಳಿಪಿಳಿ ಕಣ್ಣುಬಿಟ್ಟು ಈರ್ಯಾನ ನೋಡಿದಳು. ಈರ್ಯಾನ ಕಣ್ಣುಗಳಲ್ಲಿ ಸೋನಾಲಿ ದೇವತೆಯಂತೆ, ತಾಯಿಯಂತೆ, ಕಲ್ಪನೆಯ ಮೀರಿ ಕಾಣುತ್ತಿದ್ದಳು ಅವಳ ಆ ಧನ್ಯತೆಯನ್ನು ಕಂಡು ಮತ್ತೊಮ್ಮೆ ಈರ್ಯಾನ ಕಣ್ಣಹನಿಗಳು ಜಲಪಾತದಂತೆ ಜಾರುತ್ತಿದ್ದವು. ಸೋನಾಲಿ ಅವನ ಕಣ್ಣಿಂದ ಜಾರುತ್ತಿದ್ದ ಕಣ್ಣೀರು ವರೆಸಿತ್ತಿರುವಾಗಂತು ಈರ್ಯಾ ತಾನು ಪರದೇಸಿ ಅಲ್ಲ ಅಂದುಕೊಂಡ. ದೇವರೆ ನನಗೂ ತಾಯಿಗುಣದ ಗೆಳತಿನ ಕೊಟ್ಟಿಯಲ್ಲ ಇಷ್ಟ ಸಾಕು ಅಂತ ಈರ್ಯಾ ಮುಗಿಲತ್ತ ಮುಖಮಾಡಿದ. ಮುಗಿಲು ಖಾಲಿ ಖಾಲಿ ಇತ್ತು.
“ನಿನಗ ಹೆಂಗ ಥ್ಯಾಂಕ್ಸ್ ಹೇಳ್ಬೇಕು ಅಂತ ನನಗ ಗೊತ್ತಾಗ್ತಿಲ್ಲ ಸೋನಾಲಿ” ಎಂದು ಮತ್ತೊಮ್ಮೆ ಕಣ್ಣುವರೆಸಿಕೊಂಡ. “ಪದ್ದಿನ ದವಾಖಾನಿಗೆ ತೋರಿಸು ಏನ ಸಮಸ್ಯೆ ಇದ್ರೂ ನನ್ನ ಮುಂದ ಹೇಳ್ಕೊ ನಾನು ನಿನ್ನ ಪ್ರೆಂಡ್ ಅಲ್ವೆನೋ” ಎಂದು ಸೋನಾಲಿ ಸಣ್ಣದೊಂದು ನಗೆ ತೂರಿ, ನಿಧಾನಕ್ಕೆ ಮನೆಯತ್ತ ಹೆಜ್ಜೆ ಹಾಕಿದಳು. ಸೋನಾಲಿನ ತನ್ನ ಪಾಲಿನ ದೇವರು ಎಂದು ಮನದಲ್ಲಿ ಊಹಿಸಿಕೊಳ್ಳತ್ತ ಮನೆಯತ್ತ ಅವಸರ ಅವಸರವಾಗಿ ಹೆಜ್ಜೆ ಹಾಕಿದ. ತನ್ನ ಮನೆಯ ಮುಂದೆ ಹತ್ತಾರ ಜನರು ಕೂಡಿದ್ದನ್ನು ದೂರದಲ್ಲಿಯೇ ಕಂಡ ಈರ್ಯಾನ ಎದಿ ‘ದಸಕ್’ ಎಂದಿತು. “ಅಯ್ಯೋ ಪದ್ದಿಗೆ ಏನಾದ್ರೂ ಹೆಚ್ಚು ಕಮ್ಮಿ ಆತಾ” ಎಂದು, ಒಂದು ಕೈಯಲ್ಲಿ ಗೌಡತಿ ಕೊಟ್ಟ ಅವಲಕ್ಕೆ ಮತ್ತೊಂದು ಕೈಯಲ್ಲಿ ಸೋನಾಲಿಕೊಟ್ಟ ರೊಕ್ಕದ ಕುಡಕಿಯನ್ನು ಹಿಡಿದು ಕಬರುಗೆಟ್ಟ ಓಡಿಬಂದು ಮನೆ ಮುಂದೆ ನಿಂತಕೊಂಡ. ಆಗ ಪಿಂಜಾರ ನಭೀ ಪದ್ದಿಯ ಮೈಗೆ ಆಡಿನ ಹಾಲು ಹಚ್ಚಿ ಜ್ವರ ಇಳಿಸುತ್ತಿದ್ದ. “ಪಿಂಜಾರ ನಭಿ ಕೈಗುಣಾ ಚಲೋ ಐತಿ” ಎಂದು ಊರೆಲ್ಲ ಮಾತಾಡುತ್ತಿದ್ದದ್ದು ನನಗೆ ಗೊತ್ತಿತ್ತು. ಇನ್ನು ನಾನು ಗಾಬರಿಯಾಗಬೇಕೆಲ್ಲ, ಪದ್ದಿ ಆರಾಮ ಆಕ್ಕಳ ಎಂದು ತನಗೆ ತಾನೇ ಸಮಾಧಾನ ಮಾಡಿಕೊಂಡ. ಆಗ ಚಂದ್ರಜ್ಜಿಯ ಮೋತಿಯಲ್ಲಿ ಹುಟ್ಟಿಕೊಂಡಿದ್ದ ಆತಂಕ, ಭಯ ಕಣ್ಮರೆಯಾಗಿ, ಭರವಸೆಯ ಆಶಾಕಿರಣದ ಛಾಯೇ ಹೊಳೆಯುತ್ತಿರುವುದನ್ನು ಈರ್ಯಾ ಕಂಡು ಸಮಾಧಾನಗೊಂಡ..
“ಚಂದ್ರಜ್ಜಿ ಮೊಮ್ಮಳಿಗೆ ಜ್ವರಾ ಗಂಟ ಬಿದ್ದಾವ ಅಂತ” ಸುತ್ತ ಮುತ್ತಲಿನ ಮನೆಯವರು ಜ್ವರ ಹಿಡಿದ ಪದ್ದಿಯನ್ನು ನೋಡುವ ಬದಲು, ಜ್ವರ ಬಿಡಿಸಲು ಬಂದಿದ್ದ ಪಿಂಜಾರ ನಭಿಯನ್ನು ನೋಡಲು ಮುಗಿಬಿದ್ದಿದ್ದರು.
ಹಷಿರು ವೇಷಧಾರಿಯಾದ ಫಿಂಜಾರ ನಭಿ, ದೈವಸಂಭೂತ ವ್ಯಕ್ತಿ ಎಂದು ಇಡೀ ಊರೆ ಮಾತಾಡುತಿತ್ತು. ಅಂವನ ಲೀಲೆ ಬಗ್ಗೆ ಒಬ್ಬರು ಒಂದೊಂದು ಮಾತಾಡುತ್ತಿದ್ದರು. ನಭಿ ಕೈಯಿಟ್ಟರೆ ಬಡ್ಡ ಎಮ್ಮಿಯು ಹೈಣ ನೀಡುತ್ತಿತ್ತು. ಬಂಜೆಯು ಬಸುರಾಗುತ್ತಿದ್ದಳು. ಹಂತದ್ದರಲ್ಲಿ ಬಡವಳ ಮನೆಗೆ ನಭಿ ಬಂದದ್ದು ಚಂದ್ರಜ್ಜಿಗೆ ದೇವರೆ ಬಂದಂತಾಗಿತ್ತು.
ನಭಿ ಆಡಿನ ಹಾಲನ್ನ ಜ್ವರ ಬಂದ ಪದ್ದಿಯ ಪಾದ ಹೊಟ್ಟೆ ಬೆನ್ನು, ಹಣೆಗೆ ಹಚ್ಚಿದ, ಮಂತ್ರಿಸಿ ಅಂಗಾರವನ್ನ ಹಣಿಗೆ ಹಚ್ಚಿದ, ನವಿಲುಗರೆಯಿಂದ ಐದುಬಾರಿ ಅವಳ ತಲೆಗೆ ಹೊಡೆದ, ಏನೂ ಹೇಳದೇ ಕೇಳದೆ ದುಡು ದುಡು ಎದ್ದು ಹೋಗಿ ಬಿಟ್ಟ. ಅಂವನು ಹೋಗುವುದನ್ನ ಓಣಿಯ ಎಲ್ಲ ಜನರು ಬೆರಗಾಗಿ ನೋಡುತ್ತಿದ್ದರು. ಚಂದ್ರಜ್ಜಿ ತನ್ನ ಎರಡು ಕೈಗಳನ್ನು ಜೋಡಿಸಿ ನಭಿ ಮರೆಯಾಗುವರೆಗೂ ಏಕಚಿತ್ತದಿಂದ ನಿಂತುಕೊಂಡಿದ್ದಳು.
ಪಿಂಜಾರ ನಭಿ ಹೋದ ಅರಗಳಿಗೆಯಲ್ಲಿ ಪದ್ದಿ ಎದ್ದು ಕುಳಿತು ಮೊದಲಿನಂತೆ ನಗತೊಡಗಿದಳು “ಅಪ್ಪಾ ನಿನ್ನ ಲೀಲೆ ತುಂಬಾ ದೊಡ್ಡದು” ಎಂದು ಚಂದ್ರಜ್ಜಿ ಮಸೂತಿಯತ್ತ ಮತ್ತೊಮ್ಮೆ ಕೈ ಜೋಡಿಸಿದಳು. ಗೌಡತಿ ಕೊಟ್ಟ ಅವಲಕ್ಕಿಯನ್ನ ಮೂವರು ಹಂಚಿಕೊಂಡು ತಿಂದರು. ಸೋನಾಲಿ ಕೊಟ್ಟ ರೊಕ್ಕದ ಕುಡಕಿಯನ್ನು ಅಜ್ಜಿಯ ಲಾಯಿಗಂಟಿನಲ್ಲಿ ಇಟ್ಟು ಈರ್ಯಾ ಮಲಗಿದ. ನಿದ್ದಿ ಲಗೂನ ಬರಲಿಲ್ಲ. ಸೋನಾಲಿ ನೆನಪಾದಳು, ನಂತರ ನಭಿ ನೆನಪಾದ ಎಷ್ಟೋ ಹೊತ್ತು ಅಜ್ಜಿ ಮನಸ್ಸಿನಿಂದ ಎದ್ದು ಹೋಗಲಿಲ್ಲ. ಸೋನಾಲಿ ಕೊಟ್ಟ ರೊಕ್ಕದ ಕುಡಕಿಯನ್ನ ಅವಳಿಗೆ ಕೊಡಬೇಕೆಂದು ಮಲಗಿದಲ್ಲಿಯೇ ತೀರ್ಮಾನಿಸಿದ, ಸೋನಾಲಿ ಬಡವರ ಮೇಲೆ ತುಂಬಾ ದಯೆ ತೋರುತ್ತಾಳೆ, ಅದರಲ್ಲು ನನ್ನ ಮೇಲೆ ಅವಳಿಗೆ ಬಾಳ ಕರುಣೆ ಇದೆ. ಆದ್ರೆ ಪಾಪ! ಅವಳ ತಲೆಗೆ ಯಾಕೆ ವಿದ್ಯೆ ಹತ್ತಿತ್ತಿಲ್ಲೊ ಎಂದು ಹಳಹಳಿಸುತ್ತ ನಿದ್ದೆಗೆ ಜಾರಿದ್ದ.
ಪದ್ದಿ ಮನೆ ಕಸಗೂಡಿಸಿ, ಪಾತ್ರೆ ಪಗಡೆ ತೊಳೆದು, ನೀರು ಕಾಯಿಸುವ ಹೊತ್ತಿಗೆ, ಈರ್ಯಾ ಅಜ್ಜಿಯ ಲಾಯಿಗಂಟನ್ನು ಉಚ್ಚಿ ಅದರಲ್ಲಿದ ಹಳೆ ಬಿಳೆ ಅರಿವಿಯನ್ನು ತೊಳೆದು ಮನೆ ಮುಂದಿರುವ ವನಾ ಕಟ್ಟಿಗೆ ವಣಗಲು ಹಾಕಿದ. ಅವರಿವರು ಕೌದಿ ಹೊಲೆಹಲು ಕೊಟ್ಟ ಹಳೆಬಿಳೆ ಬಟ್ಟಿಯನ್ನು ತೋಳೆದು ಕೌದಿ ಹೊಲೆಯುವುದು ಅಜ್ಜಿಯ ಸಂಪ್ರದಾಯವಾಗಿತ್ತು. ಬಟ್ಟೆಗಳು ವಣಗಿದ ಮೇಲೆ ಚಂದ್ರಜ್ಜಿ ತನ್ನ ಸೂಜಿಗೆ ದಾರ ಪೋಣಿಸಿ ಕೌದಿ ಹೊಲೆಯಲು ಸಜ್ಜಾಗುತ್ತಿದಳು. ಇದು ಚಂದ್ರಜ್ಜಿಯ ದೈನಂದಿನ ಕೆಲಸವಾಗಿತ್ತು. ಎಲ್ಲ ಬಟ್ಟೆ ತೊಳೆದ ಮೇಲೆ ಚಂದ್ರಜ್ಜಿ ಮಾಡಿಟ್ಟ ತತ್ತಿಸಾರು, ಕಟಕ ರೊಟ್ಟಿ ಕಲಿಸಿ ಎರಡೆರಡು ರೊಟ್ಟಿ ತಿಂದು ಈರ್ಯಾ-ಪದ್ದಿ ಸಾಲಿಗೆ ಹೋಗುತ್ತಿದ್ದರು. ಕಟಕ ರೊಟ್ಟಿ ಹಲ್ಲಿಗೆ ಬರೊದಿಲ್ಲವೆಂದು ಗಂಗಾಳದಲ್ಲಿ ಮುರಿದು ಹಾಕಿ ಅದರ ಮೇಲೆ ಸಾರು ಸುರಿದು, ಒಂದಿಷ್ಟು ಹೊತ್ತು ಬಿಟ್ಟ ಮೇಲೆ ಕಟಕ ರೊಟ್ಟಿ ಬಿಸಿ ಸಾಂಬರನೊಂದಿಗೆ ಬೆರೆತು ಹುವಿನಂತೆ ಅರಿಳಿಕೊಂಡಿರುತಿತ್ತು. ಆಗ ಚಂದ್ರಜ್ಜಿ ನೆನೆದರೊಟ್ಟಿಯನ್ನ ತನ್ನ ಹೊಟ್ಟೆಗೆ ಇಳಿಸಿಕೊಳ್ಳುತ್ತಿದ್ದಳು.
ಸಾಲಿಗೆ ಬರುವಾಗ ಸೋನಾಲಿಕೊಟ್ಟ ರೊಕ್ಕದ ಕುಡಕಿಯನ್ನ ತನ್ನ ಪಾಟಿ ಚೀಲಿನಲ್ಲಿ ಇಟ್ಟಕೊಂಡು ಅವಳಿಗೆ ಮರಳಿ ಕೊಡಲು ತಂದಿದ್ದ. ಎಲ್ಲ ಹುಡುಗ-ಹುಡುಗಿಯರಕ್ಕಿಂತ ಮೊದಲೆ ಹಾಜರಾಗುತ್ತಿದ್ದ ಸೋನಾಲಿ ಅಂದು ಎಷ್ಟೋ ಹೊತ್ತಾದರೂ ಅವಳ ಸುಳಿವೆ ಇರಲಿಲ್ಲ. ಈರ್ಯಾನ ಕಣ್ಣುಗಳು ಅವಳ ಬರುವ ದಾರಿಯನ್ನೇ ತಡಕಾಡುತ್ತಿದ್ದವು. ಪ್ರಾರ್ಥನೆಯಾಯಿತು, ಎಲ್ಲ ಹುಡುಗರ ತಮ್ಮ ತಮ್ಮ ಕ್ಲಾಸಿಗೆ ಹೋದರೂ, ಆದರೂ ಸೋನಾಲಿ ಬರಲೇ ಇಲ್ಲ, ಯಾಕೆ ಸೋನಾಲಿ ಬರಲಿಲ್ಲ ಎಂಬ ಹಳಹಳಿ ಹೆಚ್ಚಿತು. ಯಾರನ್ನಾದರೂ ಕೇಳಿ ತಿಳಿಯುವ ಸಾಹಸಕ್ಕೂ ಈರ್ಯಾ ಹೋಗಲಿಲ್ಲ.
ಯಾಕೊ ಅಂದು ಸೋನಾಲಿ ಇಲ್ಲದಕ್ಕೆ ಮನವೆಲ್ಲ ಭಾರವಾಗಿತ್ತು. ಬೇಸರ ಉಕ್ಕಿ ಹರೆಯುತ್ತಿತ್ತು, ಅದು ಸೋನಾಲಿ ಬಂದಿಲ್ಲ ಅನ್ನುವ ಕಾರಣಕ್ಕೊ, ಅವಳು ಕೊಟ್ಟ ರೊಕ್ಕದ ಕುಡುಕಿ ಮರಳಿಸಲು ಇಂದು ಆಗಲಿಲ್ಲವಲ್ಲ ಅನ್ನುವ ಕಾರಣಕ್ಕೊ ಒಂದೂ ತಿಳಿಯಲಿಲ್ಲ. ಸಾಲಿ ಬಿಟ್ಟ ಮೇಲೆ ಮನೆಗೆಬಂದು ಕೈ-ಕಾಲು ತೊಳೆದುಕೊಂಡು ಚಂದ್ರಜ್ಜಿ ಎದರು ಹಾಗೆ ಸುಮ್ಮನೆ ಕುಳಿತ. ಚಂದ್ರಜ್ಜಿ ಲಾಯಿಗಂಟಿನಿಂದ ಒಂದೊಂದೆ ಅರವಿ ತುಂಡನ್ನು ನಯವಾಗಿ ಜೋಡಿಸಿ ಅದಕೊಂದು ರೂಪ ತುಂಬುತ್ತಿದ್ದಳು. ಈರ್ಯಾನಿಗೆ ಅಂದು ಅವನಜ್ಜಿ ಒಬ್ಬ ವಿಜ್ಞಾನಿಯಂತೆ ಕಂಡಳು, ಕೌದಿ ಹೊಲೆಯುವುದು ಒಂದು ಕಲೆ, ಅವರಿವರು ಊಟ್ಟುಬಿಟ್ಟ ಹರಕು ಚಿಂದಿ ಬಟ್ಟೆಯನ್ನು ಕೂಡಿಸಿ ತೊಳೆದು, ಒಂದು ಮಾಡುವ ಕಲೆ ತುಂಬಾ ದೊಡ್ಡದು.
ಎಷ್ಟೊ ಬದುಕುಗಳು, ಎಷ್ಟೊ ಮನಸ್ಸುಗಳು ಈ ಬಟ್ಟೆಗಳಂತೆ ಒಡೆದು ಹೋಗಿರುತ್ತವೆ. ಕೆಲವು ಮತ್ತೆ ಕೂಡಿದರೆ, ಕೆಲವಂತೂ ಏನೂ ಮಾಡಿದರೂ ಕೂಡದ ಸ್ಥಿತಿಯಲ್ಲಿರುತ್ತವೆ. ಚಂದ್ರಜ್ಜಿ ಯಾರೋ ಉಟ್ಟ, ಯಾರೋ ಬಿಟ್ಟ, ಚಿಂದಿ ಬಟ್ಟೆಯಲ್ಲಿ ಬದುಕನ್ನ ರಕ್ಷಿಸುವ, ಜೀವವನ್ನು ಜತನು ಮಾಡಿ ಇಡುವ, ಕೌದಿಯನ್ನ ಹೊಲೆದು ತನ್ನ ವಿದ್ಯೆಯನ್ನು ಅಭಿವ್ಯಕ್ತ ಪಡಿಸುತ್ತಾಳೆ. ಈ ನನ್ನ ಅಜ್ಜಿ ಮಾಡಿದ ಮಹತ್ತರ ಕೆಲಸವನ್ನು ಕುಲಂಕುಷವಾಗಿ ಯಾರು ಗಮನಿಸುತ್ತಾರೆ ? ಗಮನಿಸಿಯಾದರೂ ಏನು ಮಾಡುತ್ತಾರೆ? “ಬಾಳ ಚಂದ ಹೊಲದಿಯವ್ವಾ ಕೌದಿ ಚಂದ್ರಜ್ಜಿ” ಎಂದು ಹೇಳವ ಜನರ ಮಾತೆ ಅವಳಿಗೆ ಕೊಡುವ ಬಿರುದು ಪ್ರಶಸ್ತಿಗಳೆರಬೇಕು. ಹತ್ತಾರು ವಿಚಾರವನ್ನು ತನ್ನ ತಲೆಯಲ್ಲಿ ಎಳೆದುಕೊಂಡೆ ಒಂದಕ್ಕೆ ಅರ್ಥ ಸಿಕ್ಕರೆ ಮತ್ತೊಂದಕ್ಕೆ ಸಿಗುತ್ತಿರಲಿಲ್ಲ.ತನ್ನ ಬುದ್ದಿಗೆ ನಿಲುಕಿದಷ್ಟು ತರ್ಕಿಸಿದ ಕೆಲವಕ್ಕೆ ಕೊನೆಗೂ ಅರ್ಥವೆ ಹೊಳೆಯಲಿಲ್ಲ.
“ಯಾಕ ವೀರ ಒಂಥಾರ ಅದಿ, ಯಾಕ ಸಾಲ್ಯಾಗ ಸರ್ ಏನಾರ ಹೊಡದ್ರನ, ನೀ ಎಂದೂ ಹೊಡಸ್ಕೊಳ್ಳವಂತ ಕೆಲಸಾ ಮಾಡಿದಾಂವ ಅಲ್ಲ” ಚಂದ್ರಜ್ಜಿ ಈರ್ಯಾನ ಸಪ್ಪಾದ ಮುಖ ಚಹರೆ ನೋಡೆ ಪ್ರಶ್ನೆನೆನೊ ತಾನೆ ಕೇಳಿ, ಉತ್ತರನೂ ತಾನೆ ಹೇಳಿ ಸಮಾಧಾನಗೊಂಡಳು.
ಈರ್ಯಾನ ತಲೆಯಲ್ಲಿ ಸೋನಾಲಿ ಕುಣಿಯ ತೊಡಗಿದಳು. “ಕೌದಿಯ ದುಡ್ಡು ನಾಳೆ ಬಂದು ಇಸಿದುಕೊಂಡು ಹೋಗು” ಎಂದು ಹೆಂಗೂ ಗೌಡ್ತಿ ನಿನ್ನೆ ಹೇಳಿದ ಮಾತು ಥಟ್ಟನೆ ನೆನಪಾಗಿ ಅದನ್ನೇ ಮುಂದು ಮಾಡಿಕೊಂಡು ಅವರ ಮನೆಗೆ ಹೋಗಲು ತಿರ್ಮಾನಿಸಿ ಅತ್ತ ಹೆಜ್ಜೆ ಹಾಕಲು ಮನವು ಕಾತರಿಸಿತು.
ನಿನ್ನೆ ಕುಡಿಕೆ ತುಂಬ ದುಡ್ಡು ಕೊಟ್ಟದ್ದಿನಿ, ಮತ್ತೆ ಇಂದು ಬಂದು ದುಡ್ಡು ಕೇಳುತ್ತಿಯಾ? ಎಂದು ನನ್ನ ಕಂಡು ಸೋನಾಲಿ ಅಸಯ್ಯ ಪಟ್ಟರೆ? ಎಂಬ ಅಳಕೊಂದು ಮನದಲ್ಲಿ ಮೂಡಿತು. ಸೋನಾಲಿ ಅಂತವಳಲ್ಲ, ಅವಳೇಕೆ ಇಂದು ಶಾಲೆಗೆ ಬಂದಿಲ್ಲ ಅನ್ನುವ ಸತ್ಯ ತಿಳಿಯಬೇಕಾದರೆ ಈ ಕೌದಿ ಹಣ ಪಡೆಯುವ ನೆಪದಲ್ಲಿ ಅವರ ಮನೆಗೆ ಹೋಗಬೇಕು, ಬಿಟ್ಟರೆ ಅವರ ಮನೆಗೆ ಹೋಗಲು ಸಾದ್ಯವಾದಿತೆ ? ಅಜ್ಜಿಗೆ ಹೇಳಿ ಹೋಗಬೇಕು.
“ಗೌಡರ ಮನೆಗೆ ಹೋಗಿ ಕೌದಿ ದುಡ್ಡು ಇಸಿದುಕೊಂಡ ಬರ್ತಿನಿ” ಎಂದು ಒಂದು ವಾಕ್ಯದಲ್ಲಿ ಅಜ್ಜಿಗೆ ಉತ್ತರಸಿ. ಅವಳಿಂದ ಮರಳಿ ಬರುವ ಮಾತಿಗೆ ಕಿವಿಗೊಡದೇ ಮೆಲ್ಲಗೆ ಗೌಡರ ಮನೆಯತ್ತ ಅವಸರದ ಹೆಜ್ಜೆ ಹಾಕಿದ. ಆಗ ಪಡುವನದಲ್ಲಿ ಸೂರ್ಯ ಮರೆಯಾಗಲು ಹವಣಿಸುತ್ತಿದ್ದ. ಗೌಡರ ಅಂಗಳದಲ್ಲಿ ಮೆಲ್ಲಗೆ ಹೆಜ್ಜೆ ಊರಿದ, ಯಾರ ಸುಳಿವು ಕಾಣಲಿಲ್ಲ. ತೂಗು ಉಯ್ಯಾಲೆ ಬೀಕೋ ಎನ್ನುತ್ತಿತ್ತು, ಕೊಟ್ಟಿಗೆಯಲ್ಲಿ ದನಗಳು ಮಲಗಿ ಮೆಲಕು ಹಾಕುತ್ತಿದ್ದವು. ಒಂದೊಂದ ಹೆಜ್ಜೆ ಇಟ್ಟಕೊಂಡು ಮನೆಯನ್ನ ಸಮೀಪಿಸಿದ. “ಯಾರ ತಮ್ಮಾ ನೀನು” ಎಂದು ಕಿಡಕಿಯಲ್ಲಿ ಕಣ್ಣು ನೆಟ್ಟು ಕುಳಿತ ಸೋನಾಲಿಯ ಅಜ್ಜಿ ಕೂಗಿದಳು. “ನಾನ ರೀ ಚಂದ್ರಜ್ಜಿ ಮೊಮ್ಮಗ, ವೀರ, ನಿನ್ನೆ ಗೌಡತಿ ಕೌದಿ ರೊಕ್ಕ ಇಸ್ಕೊಂಡ ಹೋಗಾಕ ಬಾ ಅಂದಿದ್ರು, ಅದಕ್ಕ ಬಂದಿದ್ಯಾ” ಎಂದು ನ್ಯಾಯಾದೀಶರ ಮುಂದೆ ಜವಾಬ್ ನೀಡಿದಂತೆ ಅಜ್ಜಿ ಮುಂದೆ ಹೆದರುತ್ತ ನಿಂತುಕೊಂಡು ತೊದಲಿದ.
“ಅಯ್ಯೋ ಚಂದ್ರಜ್ಜಿ ಮೊಮ್ಮಗನಾ ನೀನು ಎಷ್ಟ ಎತ್ತರ ಆಗಿಯಲ್ಲೋ, ಬಾ ಇತ್ತಾಗ, ಕುಂದ್ರ ಬಾ, ನಿಮ್ಮ ಅಪ್ಪ-ಅವ್ವ ಸತ್ತಾಗ ಒಂದ ತಟಗ ಇದ್ರೀ, ಈಗ ನೋಡಿದ್ರ ಎಟ್ಟ ಬೆಳದ ದೊಡ್ಡಂವ ಆಗಿಯಪ್ಪಾ. ನಿಮ್ಮ ಅಪ್ಪ ಹಾಳಾದ ಎಂಥವೋ ಜ್ವರ ಬಂದ ಹ್ವಾದ, ನಿಮ್ಮವ್ವ ಹಾವ ಕಚ್ಚಿಸ್ಕೊಂಡ ಹ್ವಾದ್ಳು, ದೇವ್ರ ನಿಮಗ ಚಂದ್ರಜ್ಜಿನ ಜೋಡ ಮಾಡ್ಯಾನ, ಆಕೀನ ಚಂದ್ಹಂಗ ನೋಡ್ಕೊ, ಸಾಲಿಗೆ ಹೊಕ್ಕಿಯನ, ಏಸನೇತೆ ಅದಿ,” ಒಂದೆ ಉಸಿರಲ್ಲಿ ಹತ್ತಾರು ಪ್ರಶ್ನೆ ಕೇಳಿದ ಅಜ್ಜಿಗೆ ಈರ್ಯಾ, ಸೋನಾಲಿ ಕ್ಲಾಸ್‍ನಲ್ಲಿಯೋ ಓದತೀನಿ, ನಾನು ಏಳನೇ ತರಗತಿ ಎಂದು ಹೇಳಿದ್ದ ತಡ, ಅಜ್ಜಿ “ಅಯ್ಯೋ ಹಾಳಾದವಳು ಒಂದ ಅಕ್ಷರ ಓದಾಕ ಬರಂಗಿಲ್ಲ-ಒಂದ ಅಕ್ಷರ ಬರ್ಯಾಕ ಬರಂಗಿಲ್ಲ, ಉದ್ದಕ ಬೆಳದೈತಿ ಏನ ಮಾಡೂದ, ಅದಕ್ಕ ಅವರಪ್ಪ ಈ ಊರಾಗ ಇದ್ದ ನನ್ನ ಮರ್ಯಾದಿ ಕಳಿಬ್ಯಾಡ ಅಂತ ಅಕಿನ ಸಾಲಿ ಬಿಡಿಸಿ ಅವರತ್ತಿ ಊರಿಗೆ ಬಿಡಾಕ ಹೋಗ್ಯಾನ, ಮುಂಜಾನೆ ಅತ್ತು, ಕರದು ಗೊಳಾಡಿ, ದೊಡ್ಡ ರಂಬಾಟ ಮಾಡಿ ಹೋಗ್ಯಾಳ” ಎಂದು ಅಜ್ಜಿ ಹೇಳುತ್ತಿದ್ದ ಮಾತು ಕೇಳಿದ ಈರ್ಯಾನಿಗೆ ನೂರು ಮುಳ್ಳು ಚುಚ್ಚಿದಷ್ಟು ನೋವಾಯಿತು. ಕಣ್ಣುಗಳು ತುಂಬಿ ಬಂದವು. ಹಾಂ-ಹೂಂ ಎನ್ನದೆ, ದಿಗ್ಗನೆ ಮೇಲೆದ್ದು ಮನೆಯತ್ತ ಓಡತೊಡಗಿದ. ಸೋನಾಲಿ ಅಜ್ಜಿ “ನಿಂದ್ರೋ ತಮ್ಮಾ, ನಿನ್ನ ಕೌದಿ ದುಡ್ಡ ತಗೊಂದ ಹೋಗೋ” ಎಂದು ಕಿರುಚುತ್ತಿದ್ದಳು. ಅವಳ ಮಾತಿನತ್ತ ಈರ್ಯಾ ಕಿವಿಗೊಡದೆ ಓಡಿದ. ಓಡಿ ಓಡಿ ಸುಸ್ತಾಗಿ ನಿಂತಾಗ ಊರ ಹೋರಗಿರುವ ಹನಮಪ್ಪನ ಗುಡಿ ಎದುರಿಗಿದ್ದ. ಚುಮುಚುಮು ಹೊತ್ತು ಮುಳಗಿತ್ತು. ಸೋನಾಲಿ ಇಲ್ಲದನ್ನು ಕಲ್ಪಿಸಿಕೊಂಡು ಇರಲು ಆಗದೇ ಮನಸ್ಸು ಗೋಳೋ ಎಂದು ಗೋಳಾಡಿತು. ಅವನನ್ನ ಆ ಗೋಳಾಟ ಗುಡಿಯಲ್ಲಿದ್ದ ಹನಮಪ್ಪನೂ ಕೇಳಲಿಲ್ಲ.
ದಿನಾಲು ತನ್ನ ಪಾಠಿ ಚೀಲದಲ್ಲಿ ರವೆ ಉಂಡಿ, ಚಕ್ಕಲಿ, ಚುರುಮರಿ ಕಾರ, ಶಂಕರ ಪಾಳಿ, ಯಾರಿಗೂ ಗೊತ್ತಿಲ್ಲದೆ ಇಡುತ್ತಿದ್ದ ಸೋನಾಲಿ ನೆನಪು ಈರ್ಯಾನ ಪುಟ್ಟ ಎದೆಯನ್ನು ಗಾಯಮಾಡಿತು. ಅವಳು ಕೊಟ್ಟ ಪೆನ್ನು, ನೋಟ ಬುಕ್ ಅವನ ಜೀವಮಾನದ ಆಸ್ತಿಯಾಗಿ ಉಳಿದವು. ಅವಳು ಕೊಟ್ಟ ರೊಕ್ಕದ ಕುಡಕಿಯನ್ನು ತುಂಬಾ ಜತನ ಮಾಡಿ ಕಾಯ್ದಿಟ್ಟುಕೊಂಡ. ಆ ರೊಕ್ಕದ ಕುಡಿಕಿಗೆ ಒಂದು ಹಾಳಿಯಲ್ಲಿ ‘ಸೋನಾಲಿ’ ಎಂದು ಹೆಸರು ಬರೆದು ಅದಕ್ಕೆ ಅಂಟಿಸಿ, ಅದೇ ‘ಸೋನಾಲಿ’ ಅನ್ನುವಂತೆ ಕಲ್ಪಿಸಿಕೊಂಡಿರುತ್ತಿದ್ದ. ಎಂಥದ್ದೆ ತ್ರಾಸ್ ಬಂದರೂ ಈ ಸೋನಾಲಿಯನ್ನು ಒಡೆಯಲಾರೆ ಎಂದು ನನ್ನಲ್ಲಿ ನಾನೇ ತೀರ್ಮಾನಿಸಿದ. ಅದನ್ನು ಲಾಯಿಗಂಟಿನಲ್ಲಿ ಯಾರ ಕೈಗೂ ಸಿಗದಂತೆ ಜತನಮಾಡಿ ಬಚ್ಚಿಟ್ಟ.. ದಿನಾಲು ಶಾಲೆಗೆ ಹೋಗುವಾಗೊಮ್ಮೆ, ಬಂದ ಮೇಲೊಮ್ಮೆ ತನ್ನ ಸೋನಾಲಿಯನ್ನು ನೋಡಿ, ಅವಳೊಂದಿಗೆ ಏನೇನೊ ಮಾತಾಡಿ ಸಮಯ ಕಳೆಯುತ್ತಿದ್ದ.
******
ಅತ್ತೆಯ ಮನೆ ಸೋನಾಲಿಗೆ ಜೈಲಾದಂತೆ ಅನಿಸಿತು. ಅದು ಅಲ್ಲದೆ ಸೋನಾಲಿಯ ತಂದೆ ಭರೆಮೆಗೌಡರು ಸ್ವತ: ಮಗಳು ತುಂಬಾ ದಡ್ಡಿ ಒಂದಕ್ಷರವೂ ಓದೊಕೆ ಬರೊದಿಲ್ಲ ಬರೆಯೊಕೆ ಬರೊದಿಲ್ಲ, ಇಂಥ ಮಗಳನ್ನು ನಮ್ಮೂರ ಶಾಲೆಯಲ್ಲಿ ಓದಿಸಿ ನನ್ನ ಮರ್ಯಾದೆ ನಾನೇ ಕಳದುಕೋಬೇಕಾಗತ್ತೆ. ಇನ್ನ ಮ್ಯಾಲ ಇಕಿಗೆ ಸಾಲಿನೂ ಬ್ಯಾಡ ಗೀಲಿನೂ ಬ್ಯಾಡ, ಮೈನೆರುತನಕ ಇಕಿ ನಿನ್ನ ಮನ್ಯಾಗ ಇರ್ಲಿ, ಆ ಮ್ಯಾಲ ನಮ್ಮೂರಿಗೆ ಕರ್ಕೊಂಡ ಹೊಕ್ಕಿನಿ, ನಂತರ ಇದ್ದೆ ಇದೆಯಲ್ಲ, ಮದವಿ ಮಾಡಿ ಕೈ ತೊಳ್ಕೊಳ್ಳುವುದೆಂದು ಅಕ್ಕ ಸುಮಿತ್ರಾ ಮಾಡಿದ ಸಾವಿಗೆ ಪಾಯಿಸಾ ಬಾಯಿಗೆ ಸುರವಿಕೊಳ್ಳುತ್ತ ಭರಮೆಗೌಡರು ಬಾಯಿ ಚಪ್ಪರಿಸಿದರು. ಸೋನಾಲಿ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು. ಭರಮೆಗೌಡರ ಅಕ್ಕ ಸುಮಿತ್ರವ್ವ ಸುಮ್ಕಿರ್ ಮುದ್ದು ಸೋಸಿಯ ಅಂತ ರಮಿಸುತ್ತಿದ್ದಳು. ತನ್ನ ಹಿರಿಯ ಮಗ ‘ಶಶಿರನಿಗೆ ತಕ್ಕ ಜೋಡಿ ಅಕ್ಕಳ’ ಅನ್ನುವ ವಿಚಾರ ಮನದಲ್ಲಿಯೇ ಸುಮಿತ್ರವ್ವ ಜೇಡರ ಬಲೆ ಹೆಣದಂತೆ ಹೊಣೆದು ಕೊಂಡಳು. ಈಗ ಇನ್ನ ಹನ್ನೊಂದ ವಯಸ್ಸು ಸೋನಾಲಿಗೆ, ಮೈನೆರಿಬೇಕಾದ್ರ ಇನ್ನ ಒಂದೆರಡ ವರಸಬೇಕು, ಶಶಿನಿಗೂ ಧಾರವಾಡದಾಗ ಡಿಗ್ರಿ ಮಾಡ್ತಿದ್ದಾನ, ಅಂವಗ ಹೂಂ ಅನುಸುದೇನ ತಡಾ ಇಲ್ಲ. ಸೋನಾಲಿ ಅಂದ ಚಂದ ನೋಡಿದ್‍ರ ಕಲ್ಲನೂ ಕರಗೈತಿ ಅಂಥ ಚಲುವಿ ಸೋನಾಲಿ, ನನ್ನ ಮುದ್ದಿನ ಸ್ವಸಿ ಅಂತ ಸುಮಿತ್ರವ್ವ ತಮ್ಮನಿಗೆ ಸಾವಿಗಿ ಪಾಯಿಸ ಮತ್ತಸ್ಟು ಸುರಿಯುತ್ತ ಹಗಲುಗನಸು ಕಾಣುತ್ತಿದ್ದಳು. ಈಗ ಈ ವಿಷ್ಯಾ ಹೇಳೊದ ಬ್ಯಾಡ ಒಂದ ವೇಳೆ ಶಶಿ ವಲ್ಲ್ಯ ಅಂತ ಹಟ ಹಿಡ್ಕೊಂದ ಕುಂತ್ರ, ಜೀವನ ಪರ್ಯಂತ ತಮ್ಮನ ಜೋಡಿ ವರಮ್ ಮಾಡ್ಬೇಕ ಅಕ್ಕೈತಿ, ಎಂದು ತನ್ನ ಮನದಲ್ಲಿ ಮೂಡಿದ ವಿಚಾರವನ್ನು ಮನದಲ್ಲಿಯೇ ಸುಮಿತ್ರವ್ವ ಹುಗಿದಿಟ್ಟಳು.
ಭರಮೆಗೌಡ ಊಟ ಮಾಡಿ ಎಲೆ ಅಡಕಿ ಬಾಯಿಗೆ ಹಾಕಿಕೊಂಡು ಚನ್ನಾಗಿ ಅರೆದು, ಊಟ ಬಾಳ ಆತು ಎಂದು ಹೊಟ್ಟೆ ಮೇಲೆ ಕೈಯಾಡಿಸಿಕೊಳ್ಳುತ್ತ ಸೋನಾಲಿಯತ್ತ ಕಣ್ಣು ಹರಿಬಿಟ್ಟ. ಬಿಳಿ ಪಾರಿವಾಳ ಮರಿಯಂತ ಮುದುಡಿ ಮುದ್ದಿಯಾಗಿ ಕುಳಿತ ಸೋನಾಲಿಯ ದು:ಖ ಇನ್ನು ಶಮನವಾಗಿರಲಿಲ್ಲ. “ಯಾಕ ಅಳತಿ ಸುಮ್ಮಿರವ್ವಾ, ನಿನ್ನೇನ ದೆವ್ವದ ಮನಿಗೆ ತಂದ ಹಾಕಿ ಹೊಂಟಿನೇನ, ದೇವತೆಯಂತ ಅತ್ತಿ ಮನ್ಯಾಗ ಇರ್ತಿ, ಚಂದಂಗ ತಿಂದ ಉಂಡ ಅತ್ತಿ ಜೋಡಿ ನಕ್ಕೋತ, ಹರಟಿ ಹೊಡಕೋತ ಇರ, ತಲಿಗೆ ಹತ್ತದ ವಿದ್ಯೆದ ಜೋಡಿ ಗುದ್ದಾಡುದ ನಿನಗ ನಿಗೂದಿಲ್ಲ, ನಮಗರ ನೀ ಓದಿ ಸಾಕ್ಬೇಕಾಗಿಲ್ಲ ಇರುವಾಕೆ ಒಬ್ಬಾಕಿ ಅದಿ, ನಾ ಮಾಡಿದ್ದೆಲ್ಲ ನಿನಗ, ಅಲ್ಲೇನ? ನಾನು ನಿಮ್ಮ ಅವ್ವ, ವಾರಕ್ಕೊಮ್ಮೆ ಬಂದ ಹೊಕ್ಕಿವಿ, ಹಬ್ಬಾಗಿಬ್ಬಾ ಇದ್ರ ಮತ್ತೆರಡ ದಿನಾ ಊರಿಗೆ ಕರಸ್ಕೋತಿವಿ.” ಎಂದು ಸಮಾಧಾನ ಮಾಡಲು ಭರಮೆಗೌಡರು ಸಾಕಷ್ಟು ತಿನಕ್ಯಾಡಿದರು ಸೋನಾಲಿಯ ಅಳುವು ಸಣ್ಣ ಝರಿಯಂತೆ ಹರಿಯುತ್ತಲಿತ್ತು.
ಅತ್ತರ ಎಷ್ಟ ಅಳತಿ, ಒಂದ ತಾಸೋ, ಒಂದ ದಿನವೊ, ಆ ಮ್ಯಾಲ ನಿನ ಸುಮ್ಮನಿರ್ತಿ, ಎಂದು ಭರಮೆಗೌಡ ಯಾರಿಗೂ ಕೇಳದಂತೆ ತಾನೆ ಒಟಗುಡುತ್ತ, “ನಾ ಇನ್ನ ಹೋಗಿ ಬರ್ತಿನವ್ವಾ ಸುಮಿತ್ರಾ || ಎಂದು ಭರಮೆಗೌಡ ಮೇಲೆದ್ದುದ್ದೆ ತಡ, ಸೋನಾಲಿ ಜೋರಾಗಿ ಬಿಕ್ಕ ತೊಡಗಿದಳು. ಸುಮಿತ್ರಾಗೂ ಈ ಚಿಕ್ಕ ಮಗುವನ್ನು ಹಿಂಗ ಬಿಟ್ಟ ಹೋಗುದು ತಪ್ಪ ಅಂತ ಅನಿಸಿದರೂ, ತಮ್ಮನಿಗೆ ಹೇಳುವ ಧೈರ್ಯ ಸಾಲಲಿಲ್ಲ, ನನ್ನ ಮಗಳಿಗೆ ಮೂರ ಹೊತ್ತ ಕೂಳ ಹಾಕೂದ ವಜ್ಜಿ ಅಕತೇನ ನಿನಗ ಎಂದು ಭರಮೆಗೌಡ ಅನ್ನದೆ ಇರಲಾರ ಅಂದುಕೊಂಡು ಸೋನಾಲಿಯ ಕೆನ್ನೆ ವರೆಸುತ್ತ, ತಲೆ ಸವರುತ್ತ, ಸಮಾಧಾನ ಮಾಡುತ್ತ ಸುಮಿತ್ರ ಪಡಸಾಲೆಯಲ್ಲಿರುವ ಕುರ್ಚಿಯ ಮೇಲೆ ಕುಳಿತುಕೊಂಡಳು, ದುಡು ದುಡು ನಡೆದು ಭರೆಮೆಗೌಡರು ತಮ್ಮ ಬುಲೇಟಗಾಡಿ ಹತ್ತಿ ದೂಳೆ ಬಿಸುತ್ತ ಬರಗುಡುತ್ತ ಹೋಗಿಯೋ ಬಿಟ್ಟರು. ಸೋನಾಲಿ ಅತ್ತು ಅತ್ತು ಸುಸ್ತಾಗಿ ಪಡಸಾಲಿಯಲ್ಲಿಯೇ ಮಲಗಿ ನಿದ್ರಿಸತೋಡಗಿದಳು.
ಮಗಳನ್ನ ಅಕ್ಕನ ಮನೆಯಲ್ಲಿ ಬಿಟ್ಟು ಬಂದ ಮೇಲೆ ಭರೆಮೆಗೌಡನಿಗೆ ಮನಸ್ಸಿಗೆ ಭಾಳ ಹಳಹಳಿ ಅನಿಸತೊಡಗಿತು. ಹೆಂಡತಿಯೂ ಹಾಗೆ ಅಂದು ಕೊಂಡಳು. ಸೋನಾಲಿಯ ಅಜ್ಜಿ “ಇರೂದ ಒಂದ ಮೊಮ್ಮಗಳು, ಅದನ್ನೂ ದೂರ ಇಟ್ಟ ಬಂದ್ಯಾ, ಅಕಿ ದಡ್ಡಿನೋ ಶ್ಯಾನಾಕಿನೋ ಆದ್ರ ಅದು ಅಕಿ ಹಣೆ ಬರಹ, ನಿನಗ್ಯಾಗ ಮರ್ಯಾದೆ ಕಮ್ಮಿ ಅಕ್ಕೈತಿ. ಸಾವಕಾರ ಮಕ್ಕಳ ಶ್ಯಾನ್ಯಾರ ಇರ್ಬೇಕಂತೇನೈತೇನ, ಲಕ್ಷ್ಮೀ ಇದ್ದ ಜಾಗದಾಗ ಸರಸ್ವತಿ ಹೆಚ್ಚ ನಿಂದರಾಂಗಿಲ್ಲಂತ ಹಿರ್ಯಾರ ಏನ ಚಂದಕ ಗಾದಿ ಮಾತ ಮಾಡ್ಯಾರೇನ” ಎಂದು ಮೊಮ್ಮಗಳ ಇಲ್ಲದ ಕೊರಗಿನಿಂದ ಸೋನಾಲಿ ಅಜ್ಜಿ ಮರಗಿದಳು. ಭರೆಮೆಗೌಡರಿಗೆ ಏನು ಮಾಡಬೇಕೆಂದು ತೋಚಲಿಲ್ಲ. ಸುಮ್ಮನೆ ಕುರ್ಚಿಯ ಮೇಲೆ ಕುಳಿತು, ಹಿಂದಕ್ಕೆ ಒರಗಿ ಕುಳಿತು ಉಸಿರು ಹಾಕಿದರು. ಸೋನಾಲಿಯನ್ನ ಮರಳಿ ಕರೆತರಬೇಕೆನಸಿತು. ನಿನ್ನೆ ಬಿಟ್ಟು ಬಂದಿದ್ದೇನೆ. ಮರಳಿ ಇವತ್ತೆ ಹೋದರೆ ಅಕ್ಕ ಏನಾದರೂ ತಪ್ಪು ತಿಳಿದುಕೊಳ್ಳಬಹುದು, ಸೋನಾಲಿ ಉಂಡಳೋ ಅಳುತ್ತಿರುವಳೋ ಪಾಪ! ನಾನೆಂತ ಅಪ್ಪ ಅವಳ ಪಾಲಿಗೆ! ನನ್ನ ಪ್ರತಿಷ್ಠೆಗಾಗಿ ಅವಳನ್ನ ಸಾಲಿ ಬಿಡಸಿದ್ದು ಅಲ್ಲದೆ, ಊರೇ ಬಿಟ್ಟು ಕಳಿಸಿದ್ದು ಮಹಾಕ್ರೂರತನ ಅನಿಸಿತು. ಇಂಥ ನಿರ್ಧಾರವನ್ನ ಯಾವ ತಂದೆಯೂ ಮಾಡಲಾರ, ನನ್ನ ಮಗಳಿಗೆ ನನ್ನ ಮೇಲೆ ಸಾಯುವ ವರೆಗೂ ಪ್ರೀತಿ ಹುಟ್ಟಿತೆ ? ಸಾಧ್ಯವಿಲ್ಲ. ಅವಳ ಪಾಲಿಗೆ ನಾನು ಖಳನಾಯಕನಂತೆ ಕಂಡರೆ ಹೇಗೆ? ಅಯ್ಯೋ --! ನಾನು ಮಹಾ ತಪ್ಪು ಮಾಡಿದೆ, ನನ್ನ ಮಗಳನ್ನು ಪುನ: ಕರೆದುಕೊಂಡು ಬರಬೇಕು, ಎಂದು ಭರಮೆಗೌಡರು ಕುಂತ ಕುಂತಲ್ಲಿ ನೂರಾರುಬಾರಿ ಬಡಬಡಿಸಿದರು. “ನಾಳೆಯೋ ಹೋಗಿ ಸೋನಾಲಿ ಕರೆದುಕೊಂಡು ಬರುತ್ತೇನೆ. ಅವಳನ್ನ ಬಿಟ್ಟ ಇರಾಕ ಆಗೂದಿಲ್ಲ ಎಂದು ಗೌಡ ಹೆಂಡತಿಗೆ ಕೇಳಿಸುವಂತೆ ಹೇಳಿ ಹೊರಗೆ ನಡೆದು ಹೋದ. ಗೌಡತಿಗೆ ಖುಷಿ ಅನಿಸಿತು. ಗಂಡನ ಮಾತಿಗೆ ಇದಿರಾಡಬಾರದೆಂದು ಸುಮ್ಮನಿದ್ದಳು. ಹೂವಿನಂತೆ ಬೆಳಿಸಿದ ಮಗಳನ್ನ ಬಿಟ್ಟರಲು. ಹೆತ್ತ ಕರಳಿಗೆ ಸಾಧ್ಯವಾದಿತೆ? ಗಂಡನಿಗೆ ಎಂದೂ ಎದರು ವಾದಿಸಿದ ಶಿವಲಿಲಾ ಗಂಡನ ಮಾತು ಕೇಳಿ ಖುಷಿಯಾಗಿ ನಗುತ್ತ ಕಣ್ಣಲ್ಲಿ ಬಂದ ಕಣ್ಣೀರು ವರೆಸುಕೊಳ್ಳತ್ತ ಅಡಿಗೆ ಮನೆ ಸೇರಿದಳು.
*****
ಮಗ್ಗಲ ಮನಿ ಹೆಂಗಸಳೊಬ್ಬಳಿಗೆ ಸುಮಿತ್ರವ್ವ ಇಕಿನ ನನ್ನ ತಮ್ಮನ ಮಗಳು ಹೆಸರು ಸೋನಾಲಿ, ನಮ್ಮ ಶಶಿಕುಮಾರಗ ಇಕಿನ ತಗೋಬೇಕಂತ ಅಂದ್ಕೊಂಡಿದ್ದಿನಿ, ಎಂದು ನಗುನಗುತ್ತ ಸುಮಿತ್ರವ್ವ ಆ ಹೆಂಗಸಿಗೆ ಹೇಳುತ್ತಿರುವಾಗ ಸೋನಾಲಿಯ ಪುಟ್ಟ ಎದೆಗೂಡಿಗೆ ಯಾರೋ ಬಂದು ಬೆಂಕಿ ಇಟ್ಟಂತೆ ಆಯ್ತು. ಥಟ್ಟನೆ ವೀರು ನೆನಪಾದ. ಸದಾ ಅವಳ ಎದೆಯ ಅರಮನೆಯಲ್ಲಿ ಕುಳಿತುಕೊಂಡಿದ್ದ ವೀರುನನ್ನ ಕೈಕಾಲು ಹಿಡಿದು ಎಳೆದು ಹೊರ ಹಾಕಿದಂತೆ ಅನಿಸತೋಡಗಿತು. ಅಪ್ಪ ನನ್ನ ಇಲ್ಲಿ ಕರೆದುಕೊಂಡು ಬಂದು ಬಿಟ್ಟದ್ದು ಇದೇ ಉದ್ದೇಶಕ್ಕಾ...? ಎಂದು ಸೋನಾಲಿಯ ಎಳೆ ಮನಸ್ಸು ಚಿಂತೆಗಿಡಾಯಿತು. ಅವಳಿಗೆ ಅಪ್ಪ ಅಮ್ಮನ ಮೇಲೆ ಅಸಯ್ಯ ಹುಟ್ಟಿತು. ಹೆಂಥ ತಂದೆ-ತಾಯಿಯ ಹೊಟ್ಟೆಯಲ್ಲಿ ಹುಟ್ಟಿದನಲ್ಲ ಎಂದು ತನಗೆ ತಾನೆ ಶಾಪ ಹಾಕಿಕೊಂಡಳು, ಕಂಡಿತ ನನ್ನ ಹೆತ್ತವರು ಅವರೇನಾ? ಎಂಬ ಅನುಮಾನ ಸೋನಾಲಿಯ ಮನದಲ್ಲಿ ಮೂಡಿತು. ಅವರು ನನ್ನ ಹೆತ್ತವರಾಗಿದ್ದರೆ, ನನ್ನನ್ನ ಸಾಲಿ ಬಿಡುಸುತ್ತಿರಲಿಲ್ಲ, ಮನೆ ಬಿಟ್ಟು, ಕಳಿಸುತ್ತಿರಲಿಲ್ಲ, ನನ್ನ ತಲೆಯಲ್ಲಿ ವಿದ್ಯೆ ಇಲ್ಲ ಅನ್ನುವ ಕಾರಣ ಇಟ್ಟುಕೊಂಡು ಈ ರೀತಿ ನಾಟಕ ಮಾಡಿ ಇಲ್ಲಿ ಕಳಿಸಿದ್ದಾರೆ. ಖಂಡಿತ ಅವರ ಮೋತಿ ನಾನು ನೋಡಲಾರೆ, ಎಂದು ಸೋನಾಲಿ ಚಕ್ಕನೆ ಮೇಲೆದ್ದು ಮನೆಯ ಅಂಗಳದಲ್ಲಿರುವ ಬೇವಿನ ಗಿಡದ ಬುಡದತ್ತ ಓಡಿದಳು. “ನೋಡ ಕಳ್ಳಿ ಶಶಿಕುಮಾರನ ಅಕಿ ಗಂಡ ಅಕ್ಕನ ಅನ್ನುದ ತಡಾ ಹೆಂಗ ನಾಚಿ ಓಡಿ ಹ್ವಾದ್ಳು, ಎಂದು ಆ ಹೆಂಗಸು ಸುಮಿತ್ರವ್ವನಿಗೆ ಹೇಳಿದ್ದು ಕೇಳಿ ಸುಮಿತ್ರವ್ವ ಹಿರಿಹಿರಿ ಹಿಗ್ಗಿ ನಗತೊಡಗಿದಳು. ಸ್ವಸಿಯ ಮೇಲೆ ಪ್ರೀತಿ ಉಕ್ಕೇರಿತು.
******
ಸೋನಾಲಿಗೆ ತನ್ನ ನೋಡಬೇಕೆನಿಸಿ ಅಳುತ್ತಿರುವಳೋ..ಅಥವಾ ಹಾಯಾಗಿ ನವಿಲಿನಂತೆ ನಲಿಯುತ್ತಿರುವಳೋ ಎಂದು ಈರ್ಯಾ ಕುಂತ ನಿಂತಲ್ಲಿ ಅವಳನ್ನೇ ನೆನೆದು ಬಿಕ್ಕುತ್ತಿದ್ದ. ನಮ್ಮ ಮುಗ್ದ ಪ್ರೀತಿ ದೇವರಿಗೆ ಇಷ್ಟವಾಗಲಿಲ್ಲವೇನೋ?
ಇತ್ತ ಸೋನಾಲಿ .. ವೀರುನ ತಂಗಿಗೆ ಜ್ವರಾ ಬಂದಿತ್ತು. ಆರಾಮತೋ ಇಲ್ಲೋ... ಪಾಪ ವೀರನಿಗೆ ಅಷ್ಟೇಕ ಬಡತನಾಕೊಟ್ಟಾನೆ ಆ ದೇವ್ರು, ನನಗ್ಯಾಕೆ ಈ ಹಾಳಾದ ಶ್ರೀಮಂತಿಕೆ ಕೊಟ್ಟಾನೆ ಈ ನೀಚ ದೇವ್ರು” ಎಂದು ದೇವರನ್ನ ಸೋನಾಲಿ ಬೈಯುತ್ತ ಕಣ್ಣಂಚಲ್ಲಿ ಬಂದ ಕಣ್ಣೀರನ್ನ ತೀಡಿಕೊಳ್ಳುತ್ತಿದ್ದಳು.
ವೀರುನಿಗೆ ದಿನಾ ಉಂಡಿ, ಚಕ್ಕಲು, ಶಂಕರ ಪಾಳಿ ಅವನಿಲ್ಲದಾಗ ಅವನ ಪಾಠಿ ಚೀಲದಲ್ಲಿ ಹಾಕಿಡುತ್ತಿರುವುದು, ಅಂವನು ಅದನ್ನ ತಗೆದುಕೊಂಡು ತಿನ್ನತ್ತ ಕಣ್ಣಲ್ಲೆ ಧನ್ಯತೆ ಭಾವ ತೋರುತ್ತಿರುವುದು ನೆನೆದುಕೊಂಡು ಸೋನಾಲಿ ನಕ್ಕಳು ನಿನೊಬ್ಬನೆ ನನಗೆ ಒಳ್ಳೆಯ ಗೆಳೆಯ ಈ ಭೂಮಿಯ ಮೇಲೆ ಈಗ ನೀನೂ ದೂರಾದೆ. ನನ್ನ ಸುತ್ತಲೂ ಕತ್ತಲಿದೆ ವೀರು, ಬೆಳಕೆ ಇಲ್ಲ, ನನ್ನವರೆನ್ನವರೆಲ್ಲರೂ ತುಂಬಾ ಸ್ವಾರ್ಥಿಗಳಿದ್ದಾರೆ, ಅವರವರ ಪ್ರತಿಷ್ಟೆಗೆ ಅವರವರ ಘನತತೆಗೆ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳನ್ನ ಈ ರೀತಿ ಬಲಿಪಶು ಮಾಡುತ್ತಾರೆ. ನಿನಗೆ ತಂದೆ- ತಾಯಿ ಇಲ್ಲ ವೀರು, ನೀನು ಕೊರಗುತ್ತಿಯಾ, ನನಗೆ ತಂದೆ ತಾಯಿ ಇದ್ದಾರೆ ..... ಯಾಕಾದರೂ ಇದ್ದಾರೆ ಅಂತ ನಾನು ಶಫಿಸುತ್ತೇನೆ, ವೀರು ದೇವರು ನಮ್ಮ ಬದುಕಿನಲ್ಲಿ ಒಂದು ಕೊಟ್ಟು ಇನ್ನೊಂದು ಕಿತ್ತುಕೊಳ್ಳತ್ತಾನೆ ಅಲ್ವಾ! ಅವನೊಬ್ಬ ಆಟಗಾರ.
ಬೇವಿನ ಗಿಡವೇ ವೀರು ಎಂದು ಭಾವಿಸಿ, ಅದರ ಪೊದರ ಮೇಲೆ ವೀರು ಎಂಬ ಎರಡಕ್ಷರ ಬರೆದು ಸೋನಾಲಿ ಆ ಮರದೊಂದಿಗೆ ಎಷ್ಟೊ ಹೊತ್ತ ಮಾತಾಡಿ ಮಾತಾಡಿ ತನ್ನ ದು:ಖವೆಲ್ಲವನ್ನ ಹೇಳಿಕೊಂಡಳು. ಆಗಷ್ಟೇ ಅವಳ ಮನಸ್ಸು ಹಗುರವಾಯಿತು.
ದಿನಾಲೂ ಆ ಮರದ ಹತ್ತಿರ ಹತ್ತಾರು ಬಾರಿ ಹೋಗಿ, ವೀರು ಏನ್ ಮಾಡ್ತಿದ್ದಿಯಾ ? ಶಾಲೆಗೆ ಹೊಂಟಿಯಾ ? ಉಂಡಿ ಬೇಕಾ? ಚಕ್ಕುಲಿಬೇಕಾ? ಪೆನ್ನು ತಗೊ, ಪುಸ್ತಕ ತಗೊ, ಎಂದು ಅದರೊಟ್ಟಿಗೆ ಮಾತಾಡಿ, ಅಲ್ಲಿಯೇ ನಿಂತು ಕುಂತು, ಸೋನಾಲಿ ದಿನ ಕಳೆಯುತ್ತಿದ್ದಳು. ತಾನು ಊಟ ಮಾಡುವ ಮೊದಲು ಆ ಮರದ ಹತ್ತಿರ ಹೋಗಿ ವೀರು ಊಟಾ ಮಾಡೋಣ ಬಾ ಎಂದು ಕರೆದು ಬರುತ್ತಿದ್ದಳು ಹಟಮಾಡಬೇಡ ಬಾ ಎಂದು ಒತ್ತಾಯಿಸುತ್ತಿದ್ದಳು. ಹೀಗೆ ಪ್ರತಿಯೊಂದು ವಿಷಯವನ್ನ ಆ ಬೇವಿನ ಮರದ ಹತ್ತಿರ ಹೋಗಿ ಹಂಚಿಕೊಳ್ಳವ ರೂಡಿಯನ್ನ ಸೋನಾಲಿ ದಿನೆ ದಿನೆ ಹೆಚ್ಚಿಸಿಕೊಂಡಳು. ತಂದೆ – ತಾಯಿ ನೆನಪು ದಿನಕಳೆದಂತೆ ಮರೆತಳು, ಆ ಊರು ಮರೆತಳು, ವೀರು ಸದಾ ತನ್ನೊಂದಿಗೆ ಇದ್ದಾನೆ, ದಿನಾಲೂ ತನ್ನೊಟ್ಟಿಗೆ ಮಾತಾಡುತ್ತಾನೆ, ಜೊತೆಗೆ ಕುಳಿತು ಊಟಾ ಮಾಡುತ್ತಾನೆ ಎಂಬೆಲ್ಲ ಭ್ರಮೆಯಲ್ಲಿ ಸೋನಾಲಿ ದಿನವನ್ನ ದುಡುತ್ತಿದ್ದಳು.
*********
ಈರ್ಯಾ ಏಳನೇ ತರಗತಿ ಮುಗಿಸಿ ಎಂಟನೆ ತರಗತಿಗೆ ಹೋಗುವ ಸಂಭ್ರಮ ಅಂವನ ಪಾಲಿಗೆ ಬಂದಿತೆನೋ ನಿಜ . ಹಾಕಿಕೊಳ್ಳಲು ಒಂದು ಸರಿಯಾಗಿ ಚಡ್ಡಿ ಇರಲಿಲ್ಲ. ಆಗ ಅಜ್ಜಿಗೆ ಜೀವ ಸಂಕಟ. ಏನ್ ಮಾಡಿದರು ಈ ದರಿದ್ರ ಬಡತನ ಮೈಗಂಟಿದ ಕಲೆಯಂತೆ ನಮ್ಮ ಬದುಕಿನ ಸುತ್ತವೆ ಕಾಲುಮುರಿದು ಕುಂತಿದೆ. ಓದುವ ಛಲ ಎದೆಯಲ್ಲಿ ಇದ್ದರೂ ಓದುವ ಮಾರ್ಗ ಕಾಣಲಿಲ್ಲ. ಆಗ ಈರ್ಯಾನ ಪಾಲಿಗೆ ದೇವರಾಗಿ ಬಂದವರು ಗಣಪತಿ ಸರ್ “ಲೇ ವೀರ್ಯಾ ಹೈಸ್ಕೂಲ್ ವರೆಗೂ ನಿನ್ನ ಹರಕ್ಕ್ ಚಡ್ಡಿ, ನಿನ್ನ ಅರ್ಧಮರ್ಧ ಕುಂಡಿ ಪರಿಚಯ ಮಾಡೂದ ಬ್ಯಾಡಪಾ ನಾ ನಿನಗ ಹೊಸಾ ಚಡ್ಡಿ, ಪುಸ್ತಾಕ ಕೊಡಸ್ತಿ ಎಂದು ನಕ್ಕೊಂತ ಈರ್ಯಾನ ತಲೆ ಸವರಿ, ಅವರು ಹೇಳಿದಂತೆ ಹೊಸವೆರಡು ಚಡ್ಡಿ ಪುಸ್ತಕ ಪೆನ್ನು ಕೊಟ್ಟಾಗ ಅಜ್ಜಿಯ ಕಣ್ಣುಗಳಲ್ಲಿ ನೀರು ತುಂಬಿದ್ದವು. ಈಗ ಸೋನಾಲಿಯ ಜಾಗದಲ್ಲಿ ದೇವರು ಗಣಪತಿ ಸರ್ನ ತಂದಿಟ್ಟದ್ದು ನನೆದು ಕಾಣದ ದೇವರಿಗೊಂದು ಕೈಮುಗಿದಿದ್ದೆ.
ಊರಾಗ ಮೋಹರಮ್ಮ ಹಬ್ಬ ತುಂಬಾ ಫೇಮಸ್. ಗೋವಾ, ಮಂಗಳೂರ, ರತ್ನಾಗಿರಿಗೆ ದುಡಿಯಲು ಹೋದವರು ತಪ್ಪದೆ ಈ ಹಬ್ಬಕ್ಕೆ ಹಾಜರಿರುತ್ತಿದ್ದರು. ಈ ಹಬ್ಬಕ್ಕೆ ಚಿಕ್ಕವರಿಂದ ಹಿಡಿದು ಎಲ್ಲರೂ ಹೊಸಬಟ್ಟೆ ತೊಟ್ಟುಕೊಂಡು ಅಲೈಯಿ ದೇವರ ಕರುಣೆಗೆ ಪಾತ್ರರಾಗುತ್ತಿದ್ದರು.
ಸೋನಾಲಿ ಇವತ್ತಾದರೂ ಬರಬಹುದು ಎಂದು ಈರ್ಯಾನ ಮನಸ್ಸು ಕಾತರಿಸಿ ಅವರ ಮನೆಯ ಮುಂದೆ ಸದ್ದಿಲ್ಲದೆ ನಾಲ್ಕಾರು ಭಾರಿ ಸುತ್ತಿಸಿತ್ತು. ಅವಳ ಸುಳಿವು ಕಾಣಲಿಲ್ಲದಾಗ ಸಪ್ಪು ಮೋರಿಮಾಡಿಕೊಂಡು ಉತ್ಸಾಹ ಇಲ್ಲದೇ ಅಂದು ಊರೆಲ್ಲ ಸುಮ್ಮ ಸುಮ್ಮನೇ ಸುತ್ತಿದ್ದ. ಇಡೀ ಊರಿಗೂರೇ ಅಂದು ರಂಗು ರಂಗಾಗಿತ್ತು . ಮೋಹರಂನ ಕೋನೆಯ ದಿನವಾಗಿದ್ದರಿಂದ ಅನೇಕ ಕಾರ್ಯಕ್ರಮಗಳು ಊರ ಹೊಸ್ತಿಲಲ್ಲಿ ಜರಗಿದ್ದವು. ಈರ್ಯಾನಿಗಂತೂ ಮನದಲ್ಲಿ ಸೋನಾಲಿ ಇಲ್ಲದ ಹಳಹಳಿಕೆ ಅಷ್ಟೇ. ಅವಳು ಈ ಹಬ್ಬಕ್ಕೂ ಬರಲಿಲ್ಲ ಎಂದುಕೊಂಡು ನೊಂದುಕೊಂಡ.
ತುಂಬಾ ಗತ್ತಿನಿಂದ ಹೆಂಗೆಳೆಯರ ಗಮನ ತಮ್ಮತ್ತ ಸೆಳೆಯಲು ಹೆಜ್ಜೆ ಆಡುತ್ತಿದ್ದ ಯುವಕರನ್ನು ಕೂತುಹಲದಿಂದ ನೋಡುತ್ತ ನಿಂತ, ಆಗಷ್ಟು ಅವನ ಮನಸ್ಸಿಗೆ ಹಗುರವೇನಿಸಿತು. ಹಲಗೆಯ ತಾಳಕ್ಕೆ ಜಡಿಜಡಿನಪಂಕ್ ಜಡಿಜಡಿನಪಂಕ್ ಎಂದು ಸರಿಯಾಗಿ ಮೇಳೈಸುವ ಯುವಕರ ಭಾವಭಂಗಿಯಂತು ಇರ್ಯಾನನ್ನು ಅಲ್ಲಿಯೇ ತಡೆದು ನಿಲ್ಲಿಸಿತು.
ಕೆಲವರು ಅಲೈಯ ಕೊಂಡದಿಂದ ಬಂವ್ ಎಂದು ಓಟಕಿತ್ತರು, ಹಲಿಗೆ ಬಾರಿಸುವವನು ಬಾರಿಸುವುದು ನಿಲ್ಲಿಸಿದರು, ಮಸೂತಿಯಲ್ಲಿದ್ದ ಕೆಲವರೂ ದಿಕ್ಕಾಪಾಲಾಗಿ ಓಡತೋಡಗಿದರು, ಹೆಂಗಸರೂ ಕೂಸು ಕುನ್ನಿ ಹೊತ್ತು ಅವರೂ ಓಡತೋಡಗಿದರು, ಜನರೆಲ್ಲರೂ ಚೆಲ್ಲಾಪಿಲ್ಲಿಯಾಗಿ ಓಡುತ್ತಿರುವುದನ್ನು ಕಂಡು ಈರ್ಯಾನೂ ಓಡತೊಡಗಿದ.
ಓಡುತ್ತ ಓಡುತ್ತ ಎಲ್ಲರೂ ತಮ್ಮ ಮನೆಯತ್ತನೆ ಓಡುವುದು ಕಂಡು £ಈರ್ಯಾನಿಗೆ ಕೈ-ಮೈ ತಣ್ಣಗಾದವು. ಅಜ್ಜಿಗೇನಾತು ?ಅಯ್ಯೋ ಅಜ್ಜಿ ನಮ್ಮನ್ನ ಬಿಟ್ಟು ಹ್ವಾದಳೇ..? ಎಂದು ಕಣ್ಣೀರು ಪುಟಿಯುತ್ತಿರುವಾಗ ಯಾರೋ ಒಬ್ಬರು ಗೌಡರ ಹುಡುಗಿ ಸೋನಾಲಿಗೆ ಹಾವು ಕಚ್ಚಿದೆ ಎಂದು ಹೇಳಿದ್ದು ಕೇಳಿ ಅರೇ ಈರ್ಯಾನ ಕ್ಷಣ ಉಸಿರೇ ನಿಂತಿತು. ಗುಬಗೂಡಿ ನಿಂತಿದ್ದ ಮಂದಿಯಲ್ಲಿ ಹಾದು ಮುಂದೆ ಹೋಗಿ ಈರ್ಯಾ ನಿಂತುಕೊಂಡ. ಸೋನಾಲಿ ಇನ್ನೂ ಜೀವಂತವಿದ್ದಳು. ಅವಳ ಕೈಯಲ್ಲಿ ಎರಡು ಹೊಸ ಚಡ್ಡಿಗಳಿದ್ದವು. ಈರ್ಯಾನತ್ತ ನೋಡುತ್ತ ‘ವೀರೂ’ ಎಂದೂ ಕೂಗಲು ಹರಸಸಾಹಸ ಮಾಡಿದರೂ ಆ ದನಿ ಅವಳ ಗಂಟಲ್ಲಿಯೇ ಉಳಿಯಿತು. ಅವಳ ಕಣ್ಣುಳು ಮುಚ್ಚಿದ್ದವು. ಈ ಹಾಳಾದ ಚಡ್ಡಿ ಕೊಡಲು ಬಂದು ನನ್ನ ಸೋನಾಲಿ ಪ್ರಾಣಬಿಟ್ಟಳು, ನನಗೋಸ್ಕರ ಸತ್ತಳು. ಈ ಹಾಳಾದ ವಿಧಿಗೆ ಕರುಣೆಯೇ ಇಲ್ಲವೇ ಎಂದು ಈರ್ಯಾ ಬಿಕ್ಕಿ ಬಿಕ್ಕಿ ಅತ್ತದ್ದು ಸೋನಾಲಿಗೆ ಹೇಗೆ ತಿಳಿದಿತು? ಈರ್ಯಾ ಕಣ್ಣೀರು ವರೆಸುವ ಕೈಗಳಲ್ಲಿ ಹೊಸ ಚಡ್ಡಿಗಳಿದ್ದವು. ಅಂದು ಇಡೀ ಊರೇ ಈರ್ಯಾನಿಗೆ ಸುಡಗಾಡಾಗಿ ಕಂಡಿತು.
ಒಮ್ಮಿಂದೊಮ್ಮಲೇ ಎಚ್ಚರಾದಾಗ ವೀರೇಶನ ನಡಗುತ್ತಿದ್ದ. ತಾನೆಲ್ಲಿದ್ದಿನಿ ಅನ್ನುವ ಅರಿವಿಲ್ಲದೆ ಬೇವತುಕೊಂಡಿದ್ದ. “ಅಲ್ಲಾ.. ಹೋ..ಅಕ್ಬರ್.. ಅಲ್ಲಾ..ಹೋ..ಅಕ್ಬರ್..” ಅನ್ನುವ ದನಿ ಕೇಳುತ್ತಿದ್ದಂತೆ ತಾನು ಗೆಳೆಯನ ಮನೆಯಲ್ಲಿರುವುದು ಅರಿವಾಗಿ, ಮೇಲೆದ್ದ. ಮುಂದೆ ಏನುಮಾಡಬೇಕು ಅನ್ನುವುದು ತಿಳಿಯದೇ ಎದ್ದು ಕುಳಿತ. ಆ ಕೋಣೆಯ ಒಂದು ಗೂಟಕ್ಕೆ ಹರಕ್ ಚಡ್ಡಿ ಜೋತಾಡುತ್ತಿತ್ತು. ಅದನ್ನು ನೋಡುತ್ತ ನೋಡುತ್ತ ನಗತೊಡಗಿದ.
******
ಕಲಾಕೃತಿ : ಕಲ್ಲೇಶ ಕುಂಬಾರ್
ಕತೆಗಾರ ತಿರುಪತಿ ಭಂಗಿ ಅವರು ಬಾಗಲಕೋಟೆ ಸಮೀಪದ ದೇವನಾಳ ಎಂಬ ಹಳ್ಳಿಯಲ್ಲಿ 1984 ರಲ್ಲಿ ಜನಿಸಿದರು. ತಂದೆ ಮಲ್ಲಪ್ಪ ತಾಯಿ ಗೌರವ್ವ. ಬಾಲ್ಯದಲ್ಲಿಯೇ ಹೆತ್ತವರನ್ನು ಕಳೆದುಕೊಂಡರು. ಹೈಸ್ಕೂಲ್ ಶಿಕ್ಷಣ ಮಾಡುತ್ತಿರುವಾಗಲೇ ಅಜ್ಜ-ಅಜ್ಜಿಯರೂ ತೀರಿಕೊಂಡರು. ಸಾಹಿತ್ಯ ರಚನೆಗೆ ಇವರ ಬಡತನ, ಹಸಿವು, ಅವಮಾನಗಳೇ ಮೂಲ ದ್ರವ್ಯ. .
ಬಾಗಲಕೋಟೆಯ ಬಸವೇಶ್ವರ ಸಿ.ಬಿ.ಎಸ್.ಇ ಶಾಲೆಯಲ್ಲಿ ಕನ್ನಡ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ‘ಹೃದಯರಾಗ, ಅವ್ವ, ಕವಳೆಗಣ್ಣಿನ ಹುಡುಗಿ, ಮನಸು ಕೊಟ್ಟವಳು, ಅಪ್ಪ’ ಕವನ ಸಂಕಲನಗಳು ಪ್ರಕಟವಾಗಿವೆ. ಅವರ ಮೊದಲ ಕಾದಂಬರಿ ‘ಫೋಬಿಯಾ' 2017ರಲ್ಲಿ ಪ್ರಕಟಣೆ ಕಂಡಿತು. ಅವರ ‘ಜಾತಿ ಕುಲುಮ್ರಾಗ ಅರಳಿದ ಪ್ರೀತಿ’ ಚೊಚ್ಚಲ ಕೃತಿ ಕನ್ನಡ ಸಾಹಿತ್ಯ ಪರಿಷತ್ ನಿಂದ ಪ್ರೋತ್ಸಾಹ ಧನ ಸಹಾಯ ಪಡೆದಿದೆ. ಈ ಕೃತಿಗೆ ಕೆ. ವಾಸುದೇವಾಚಾರ್ಯ ಪ್ರಶಸ್ತಿ, ಬೀಳಗಿ ದತ್ತಿ ಪ್ರಶಸ್ತಿ, ಸಮೀರವಾಡಿ ದತ್ತಿ ಪ್ರಶಸ್ತಿಗಳು ಸಂದಿವೆ. “ಕೈರೊಟ್ಟಿ” ಕಥಾ ಸಂಕಲನದ “ಕೈರೊಟ್ಟಿ” ಕಥೆ ಸಿನಿಮಾ ಆಗಿ ಬೆಳ್ಳಿತೆರೆಯ ಮೇಲೂ ಮೂಡಿದೆ. ‘ಗಾಂಧಿ ಬಜಾರ’, ‘ಕೆಂಪರೋಡ್’ ಅವರ ಕಥಾ ಸಂಕಲನ.
More About Author