Poem

ಗಂಡೆಂಬ ಮಾಯೆಯೂ ಹೆಣ್ಣೆಂಬ ವಾಸ್ತವವೂ

ನಾನು ಹುಟ್ಟಿದಾಗ
ನೋಡಲು ಬಂದವರೆಂದರು
ಗಂಡಾಗಿದ್ದಿದ್ದರೆ
ಪರವಾಗಿರಲಿಲ್ಲ ಈ ಬಣ್ಣಕ್ಕೆ
ನಾನು ತೊಟ್ಟಿಲಲ್ಲಿ ಚೀರಿದೆ

ಹತ್ತು ವರ್ಷದವಳಿದ್ದಾಗ
ಮಕ್ಕಳ ಸೈನ್ಯದ ಅಧಿಪತಿಯಾಗಿ
ಕಾಡುಮೇಡು ಅಲೆದೆ
ಮೇಷ್ಟ್ರಿಗೆ ಇವಳು
ತಪ್ಪಿ ಹೆಣ್ಣಾಗಿ ಹುಟ್ಟಿದಳು ಎಂದರು
ಹಾ! ಕಾಲಿಗೆ ಮುಳ್ಳುಚುಚ್ಚಿ ನೊಂದೆ

ಹದಿನೆಂಟಕ್ಕೆ ಭಾಷಣದಲ್ಲಿ
ಪಳಗಿ ನಾಲ್ಕಾರು ಸಂಘಟನೆ
ಮಣ್ಣು ಮಸಿ ಎಂದು ತಿರುಗಿಸಿ
ಗಂಡುಬೀರಿ ಎಂದರು
ಆ ದಿನಗಳ ನೋಯುವ
ಹೊಟ್ಟೆಯನು ಒತ್ತಿ ಹಿಡಿದು
ಅವುಡುಗಚ್ಚಿ ಮಾತಾಡಿದೆ

ಆಫೀಸಿನಲ್ಲಿ ಮೊದಲ ತಿಂಗಳೇ
ಟಾರ್ಗೆಟ್ ರೀಚ್ ಆದಾಗ
ಬಾಸ್ ಹೇಳಿದರು
‘ವೆಲ್ ಡನ್, ಐ ವಂಡರ್
ನೀವು ಗಂಡಸಾಗಿದ್ದಿದ್ದರೆ’
ಕಂಪ್ಯೂಟರ್ ಶಟ್ ಡೌನ್ ಮಾಡಿ
ಕೂತೆ

ಅವನುಕ್ಕಿಸಿದ ಒಲವಿನ
ಮಹಾಪೂರದಲಿ ಕೊಚ್ಚಿ
ಹೋಗಿ ಮಾತುಬಾರದೆ
ಅಕ್ಷರಕ್ಕಿಳಿಸಿದೆ ಭಾವನೆಗಳ
ಗೆಳತಿಯೆಂದಳು- ‘ಶೀ ನೀನೇನು
ಗಂಡಸಾ, ಬರೆಯಲಿ ಬಿಡು
ಮೊದಲು ಅವನೇ’
ಲೇಖನಿ ಎತ್ತಿಟ್ಟು ಶಬರಿಯಾದೆ

ನಾನು ನನ್ನ ತುಟಿಗಳನು
ಗಂಟಿಕ್ಕಿ ಮುಂಗುರಳು ತೀಡಿ
ಹಾರುವ ಸೆರಗನು ಹಿಡಿದು
ಬಸ್ ಗಾಗಿ ಕಾಯುತ್ತಿದ್ದರೆ
ಸುತ್ತಲೂ ಆಸೆ ತುಳುಕಿಸುತ್ತ
ದಿಟ್ಟಿಸುವ ಕಣ್ಣುಗಳು
ನಾನು ಹೆಣ್ಣೇ ಎನ್ನುವುದರ
ಬಗ್ಗೆ ಯಾರಿಗೂ ಸಂದೇಹವಿಲ್ಲದ
ಪಶ್ಚಾತ್ತಾಪವೂ ಇಲ್ಲದ
ಅಪರೂಪದ ಗಳಿಗೆಯಾಗಿತ್ತದು.

- ದೀಪಾ ಹಿರೇಗುತ್ತಿ

 

ವಿಡಿಯೋ
ವಿಡಿಯೋ

ದೀಪಾ ಹಿರೇಗುತ್ತಿ

ಕವಿ, ಲೇಖಕಿ ದೀಪಾ ಹಿರೇಗುತ್ತಿ ಅವರು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಗೋಕರ್ಣದವರು. ಬಾಲ್ಯದಿಂದಲೇ ಸಾಹಿತ್ಯದಲ್ಲಿ ಆಸಕ್ತಿ ಬೆಳೆಸಿಕೊಂಡ ಅವರು ಕನ್ನಡದ ಸಶಕ್ತ ಅಂಕಣಗಾರ್ತಿ ಎಂಬುದನ್ನು “ನಾನು, ನೀವು ಮತ್ತು ...” ಅಂಕಣ ಬರಹಗಳ ಮೂಲಕ ಸಾಬೀತು ಪಡಿಸಿದ್ದಾರೆ. 'ಪರಿಮಳವಿಲ್ಲದ ಹೂಗಳ ಮಧ್ಯೆ' ಅವರ ಚೊಚ್ಚಲ ಕವನ ಸಂಕಲನ. ದಸರಾ ಕವಿಗೋಷ್ಠಿ, ಸಂಕ್ರಮಣ, ಪ್ರಜಾವಾಣಿ ಸಂಚಯ, ತಿಂಗಳು ಕವನಸರ್ಧೆಯಲ್ಲಿ ಬಹುಮಾನ, ಪ್ರಜಾವಾಣಿ - ವಿಮೋಚನಾ ಏರ್ಪಡಿಸಿದ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿದ್ದಾರೆ. ಜೊತೆಗೆ ಕರ್ನಾಟಕ ಲೇಖಕರ ಸಂಘದಿಂದ ಕೊಡಮಾಡುವ ಗುಡಿಬಂಡೆ ಪೂರ್ಣಿಮಾ ದತ್ತಿ ಪ್ರಶಸ್ತಿಯನ್ನು ಪಡೆದಿದ್ದಾರೆ. 

 

More About Author