Poem

ಗಜಲ್ - ಅವಳು

ಅವಳು ಮುನಿದುಹೋದ ಮೇಲೆ ಅವಳಂತೆ ಮತ್ತಾರೂ ಬೇಕೆನಿಸಲಿಲ್ಲ
ಜನ ಸಾಗರದಲ್ಲಿ ಮತ್ತೆ ನೋಡಿದೆ ಅವಲಂತೆ ಮತ್ತಾರೂ ಬೇಕೆನಿಸಲಿಲ್ಲ

ಆಡಿದ ಪಿಸುಮಾತು ಮಧುರ ನೆನಪಾಗಿ ಕಾಡುವವು ಅವು ಬದುಕಿಗಾಧಾರ
ನಾನಿಲ್ಲಿ ಅವಳಲ್ಲಿ ಏಕಾಂಗಿತನ ಕಾಡುವುದಂತೆ ಮತ್ತಾರೂ ಬೇಕೆನಿಸಲಿಲ್ಲ

ಪ್ರೇಮದಲಿ ಕಣ್ಣು ಮತ್ತು ಕರುಳು ಅರಿತಷ್ಟು ಬೇರೇನು ಅರಿಯಲಾರವು
ಕೆಲವರು ಬಂದು ಅವಳಿಗೂ ಇಷ್ಟವಾಗದೆ ಹೋದರಂತೆ ಮತ್ತಾರೂ ಬೇಕೆನಿಸಲಿಲ್ಲ

ನಮ್ಮೀರ್ವರ ಆಯ್ಕೆಗಳು ನೋವು ಒಂದೆಂದು ಮೆಚ್ಚಿ ಹಚ್ಚಿಕೊಂಡಿದ್ದಳು
ಬಿಟ್ಟಿರಲಾರೆ ಇಡೀ ಬದುಕೆಂದವಳು ಮಾತು ಮರೆತವಳಂತೆ ಮತ್ತಾರೂ ಬೇಕೆನಿಸಲಿಲ್ಲ

ಪ್ರೀತಿಯಲಿ ಬೆರೆತು ಸವಿ ಖುಷಿ ಮಾತು ಹಂಚಿಕೊಂಡೆವು ಸುವರ್ಣಕಾಲ
ಹೋಗುವ ಮುನ್ನ ಬಿಟ್ಟ ನೆನಪುಗಳು ಸದಾ ಜೊತೆಗಿದ್ದಂತೆ ಮತ್ತಾರೂ ಬೇಕೆನಿಸಲಿಲ್ಲ

ಮನಸಿಂದ ಗುಣವಂತೆ ಹೃದಯವಂತೆ ಸಹನಶೀಲೆ ಅಪ್ಪಟ ಬಂಗಾರವವಳು
ಕಪಟಿಗರ ಸುಳ್ಳು ಮಾತು ನಂಬಿ ದೂರಾದವಳಂತೆ ಮತ್ತಾರು ಬೇಕೆನಿಸಲಿಲ್ಲ

ಅವಳಿಗೆ ಬೇಕೆನಿಸಿದರೆ ಸಿಗಲಿ, ಬರುವುದಾದರೆ ಅವಳೇ ಮರಳಲಿ ಸದಾ ಕಾದಿರುವೆ
ಹೊನ್ನಸಿರಿ ಕನಸಲೂ ಬೇರಾರನು ಕಾಣನಂತೆ ಮತ್ತಾರೂ ಬೇಕೆನಿಸಲಿಲ್ಲ

- ಸಿದ್ಧರಾಮ ಹೊನ್ಕಲ್

ಸಿದ್ಧರಾಮ ಹೊನ್ಕಲ್

ಸೃಜನಶಿಲತೆಯ ಬಹುಮುಖಿ ಆಯಾಮಗಳಲ್ಲಿ ತೊಡಗಿಸಿಕೊಂಡಿರುವ ಕವಿ ಸಿದ್ಧರಾಮ ಹೊನ್ಕಲ್ ಅವರು ಯಾದಗಿರಿ ಜಿಲ್ಲೆಯ, ಶಹಾಪುರ ತಾಲೂಕಿನ ಸಗರ ಗ್ರಾಮದವರು.  ಎಂ ಎ., (ಎಲ್.ಎಲ್.ಬಿ ), ಡಿ.ಎನ್.ಹೆಚ್.ಇ , ಪಿ ಜಿ.ಡಿಎಮ್.ಸಿ.ಜೆ ಪದವೀಧರರು. ಕಥೆ, ಕಾವ್ಯ, ಹನಿಗವನ, ಲಲಿತ ಪ್ರಬಂಧ, ಪ್ರವಾಸ ಕಥನ, ವ್ಯಕ್ತಿ ಚಿತ್ರಣ, ಸಂಪಾದನೆ - ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳ 40 ಕೃತಿಗಳನ್ನು ರಚಿಸಿದ್ದಾರೆ. ಆರೋಗ್ಯ ಶಿಕ್ಷಣಾಧಿಕಾರಿಯಾಗಿ ನಿವೃತ್ತರು. 

ಕೃತಿಗಳು: ಕಥೆ ಕೇಳು ಗೆಳೆಯ, ಬಯಲು ಬಿತ್ತನೆ, ನೆಲದ ಮರೆಯ ನಿನಾದ, ಅಂತರಂಗದ ಹನಿಗಳು, ಹೊಸ ಹಾಡು, ಬೆವರು, ನೆಲದ ನುಡಿ, ಗಾಂಧಿಯ ನಾಡಿನಲ್ಲಿ, ಪಂಚನಾದಿಗಳ ನಾಡಿನಲ್ಲಿ ಮುಂತಾದವು. ಇವರು ಬರೆದ ಕಥೆ ಮತ್ತು ಪ್ರಬಂಧಗಳು ಗುಲಬರ್ಗಾ ವಿಶ್ವವಿದ್ಯಾಲಯದ ಪದವಿ ವಿದ್ಯಾರ್ಥಿಗಳಿಗೆ ಮತ್ತು ಪ್ರವಾಸ ಕಥನ ಕೊಲ್ಲಾಪುರ ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪಠ್ಯವಾಗಿವೆ.  

ಪ್ರಶಸ್ತಿ-ಪುರಸ್ಕಾರಗಳು: ಇವರ ಕೃತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಗುಲಬರ್ಗಾ ವಿಶ್ವವಿದ್ಯಾಲಯದ ರಾಜ ಪುರೋಹಿತ ಸ್ಮಾರಕ, ಶ್ರೀವಿಜಯ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ಸಂಚಯ ಸಾಹಿತ್ಯ ಪ್ರಶಸ್ತಿ ಪ್ರಮುಖವಾದವು.

 

 

More About Author