ತಾಜಾ ತಾಜಾ ನಸು ಬೆಳಕು
ಹರಡಿ ಕೊಳ್ಳುವಾಗಲೇ ಧ್ಯಾನಕ್ಕೆ
ಕುಂತು ಬಿಡಬೇಕು
ಕಿವಿ ಮುಚ್ಚಿ,ಅರೇನಿಮೀಲಿತ ನೇತ್ರದಲ್ಲಿಯೇ
ಈ ವಯಸ್ಸಿನಲ್ಲಾದರೂ ಅತೀತ ಅನುಭವವೊಂದಕ್ಕೆ
ಒಡ್ಡಿಕೊಳ್ಳಬೇಕು ಅಂದುಕೊಳ್ಳುವಾಗಲೆಲ್ಲಾ..
ಕುಕ್ಕರು ಕೂಗಿ ಕೊಳ್ಳುತ್ತದೆ
ಮಿಕ್ಸರ್ ಗರ್ರ್.. ತಿರುಗಿಸಿ ಆದಷ್ಟು
ತೆಳ್ಳಗೆ ನೀರು ದೋಸೆ ಕಾದ ಕಾವಲಿಗೆ
ಬಿಡುವಾಗ ಮೊಬೈಲ್ ಬೀಪಿಸಿ ಕೊಳ್ಳುತ್ತದೆ.
ದೋಸೆ ಬೇಯುವ ಅಂತರದೊಳಗೆ
ವಾಟ್ಸಪ್ ಕದ ನೂಕಿ ಇಣುಕಿದರೆ
ಏನು ಬರೆದ್ರಿ? ಪದ್ಯವ? ಗದ್ಯವಾ?
ಅಭಿಮಾನಕ್ಕೋ? ಕುತೂಹಲಕ್ಕೋ?
ಕವಿ ಸಂಕುಲ ಸೇರಿದ ಮೇಲೆ
ತೀರಾ ಸಹಜಾತೀಸಹಜ ಪ್ರಶ್ನೆಯಿದು.
ಇದರ ನಡುವೆ ಇದೆಲ್ಲಾ ಹೇಗೆ ಸಾದ್ಯ
ನೀವೇ ಹೇಳಿ?
ಕುದಿಯುವ ಸಾರು ,ಹಬೆಯಾಡುವ ದೋಸೆ ಫೋಟೋ ಕ್ಲಿಕ್ಕಿಸಿ ರವಾನಿಸಿದರೆ..
ಪುರುಸೊತ್ತು ಮಾಡಿಕೊಂಡು ಗದ್ಯ
ಬರೆಯಿರಿ
ಚಂದಕ್ಕೆ ಬರೆಯುತ್ತೀರಿ..
ಆದರೆ ಗದ್ಯ ಬರೆಯುವಾಗ ಒಲೆ ಮಾತ್ರ
ಹಚ್ಚಿರಬಾರದು
ತಾರೀಫಿನ ಜೊತೆಗೆ ಸಲಹೆಯೂ ದಕ್ಕುತ್ತದೆ.
ಅವರುಗಳಂತೆ ಒಲೆ ಹಚ್ಚದೆ, ಬಿಸಿ ತಾಗಿಸಿ ಕೊಳ್ಳದೆ,
ಧ್ಯಾನಿಸಿ ಬರೆದು,ಗುಡ್ಡೆ ಹಾಕಿದ್ದು ನಮ್ಮ ಯಾದಿಯಲ್ಲಿ
ಇದೆಯಾ ..ಅಂತ ಹಿಂತಿರುಗಿ ನೋಡಿದಷ್ಟು
ಕತ್ತು ನೋಯುತ್ತದೆ.
ಎದೆ ಮೇಲಿನ ಒಂದು ಮಾಯದ ನೋವಿನ
ಗೀರಿನ ಮೇಲೆ ಕಾಣದಂತೆ ಕವಿತೆಯ ದಳಗಳನ್ನು
ಉದುರಿಸುತ್ತಲೇ..
ಸೌದೆ ದೂಡಿ, ಒಲೆ ಊದುತ್ತಲೋ,
ಸ್ಟವ್ ಹಚ್ಚುತ್ತಲೋ, ಕುದಿಯುವ ನೀರಿಗೆ
ಅಕ್ಕಿ ಹಾಕಿ ತಟ್ಟೆ ಮುಚ್ಚಿಟ್ಟು , ಸೆರಗಂಚಲ್ಲೇ ಉಫ್.. ಗಾಳಿಬೀಸುತ್ತಾ ಹೊರಬರುತ್ತೇವೆ.
ಮುಗುಳಕ್ಕಿ ಕೊತಕೊತ ಕುದಿಯ
ತೊಡಗುತ್ತದೆ
ಅತ್ತ ಒಲೆಯ ಮೇಲೂ
ಇತ್ತ ಎದೆಯ ಒಳಗೂ
ಗದ್ಯ ಬರೆಯುವಾಗ ಹಚ್ಚಬಾರದು ಒಲೆ.
ನೀವು ಹೇಳಿದ್ದು ಖರೆ ಹೌದು !
ಕಾವು ತಾಗದೆ ಹುಟ್ಟಲಾರದು ಪುಡಿ ಬೀಜ
ಇನ್ನೂ ಕಟ್ಟಲಾದೀತೆ ಇಡೀ ಕಾವ್ಯ?
- ಸ್ಮಿತಾ ಅಮೃತರಾಜ್. ಸಂಪಾಜೆ
ವಿಡಿಯೋ
ವಿಡಿಯೋ
ಸ್ಮಿತಾ ಅಮೃತರಾಜ್
ಲೇಖಕಿ ಸ್ಮಿತಾ ಅಮೃತರಾಜ್, ಸಂಪಾಜೆ, ಗೃಹಿಣಿ ಮತ್ತು ಕೃಷಿಕ ಮಹಿಳೆ. ಕನ್ನಡ ಎಂ. ಎ.ಪದವೀಧರೆ. ಲಲಿತ ಪ್ರಬಂಧ,ಕವನ ಸಂಕಲನ,ಪುಸ್ತಕ ಪರಿಚಯ ಸೇರಿದಂತೆ ಒಟ್ಟು ಏಳು ಪುಸ್ತಕಗಳು ಪ್ರಕಟಗೊಂಡಿವೆ. ‘ಕಾಲ ಕಾಯುವುದಿಲ್ಲ’, ‘ತುಟಿಯಂಚಿನಲ್ಲಿ ಉಲಿದ ಕವಿತೆಗಳು’ ‘ಮಾತು ಮೀಟಿ ಹೋಗುವ ಹೊತ್ತು’ ಅವರ ಕವನ ಸಂಕಲನಗಳು. ‘ಅಂಗಳದಂಚಿನ ಕನವರಿಕೆಗಳು’, ‘ಒಂದು ವಿಳಾಸದ ಹಿಂದೆ’, ‘ನೆಲದಾಯ ಪರಿಮಳ’ ಮೂರು ಲಲಿತ ಪ್ರಬಂಧಗಳು. ‘ಹೊತ್ತಗೆ ಹೊತ್ತ’ ಪುಸ್ತಕ ಪರಿಚಯ.
ಇವರ ಕೆಲವು ಕವಿತೆ ಮತ್ತು ಪ್ರಬಂಧಗಳಿಗೆ ಬಹುಮಾನಗಳು ಸಂದಿವೆ. ಇವರ ಕೆಲ ಕವಿತೆಗಳು ಇಂಗ್ಲಿಷ್ ಮತ್ತು ಮಲಯಾಳಂಗೆ ಅನುವಾದಗೊಂಡಿದೆ. ಒಂದು ಪ್ರಬಂಧ, ಕವಿತೆ, ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ತರಗತಿಯ ಮಕ್ಕಳಿಗೆ ಪಠ್ಯವಾಗಿದೆ.
ಮುಂಬೈಯ ಸುಶೀಲಾ ಸೀತಾರಾಮ ಶೆಟ್ಟಿ ಪ್ರಶಸ್ತಿ, ಸ್ವಾಭಿಮಾನಿ ಪುಸ್ತಕ ಪ್ರಶಸ್ತಿ, ಕೊಡಗಿನ ಗೌರಮ್ಮ ಪ್ರಶಸ್ತಿ, ಬಿ.ಎಂ.ಕಾವ್ಯ ಪ್ರಶಸ್ತಿ, ಸಾಹಿತ್ಯ ರತ್ನ ಪ್ರಶಸ್ತಿ, ಕಾಯಕ ರತ್ನ ಪ್ರಶಸ್ತಿ, ಅಡ್ವೈಸರ್ ಕಾವ್ಯ ಪ್ರಶಸ್ತಿ, ಕಾವ್ಯ ಮಾಣಿಕ್ಯ, ಗುರುಕುಲ ಶರಭ ಪ್ರಶಸ್ತಿ ಸೇರಿದಂತೆ, ಬುದ್ದ ಬಸವ ಗಾಂಧಿ ಪ್ರಶಸ್ತಿ, ಸಾಹಿತ್ಯ ಪರಿಷತ್ತಿನ ಗೌರಮ್ಮ ಹಾರ್ನಳ್ಳಿ ದತ್ತಿ ಪ್ರಶಸ್ತಿಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಸಾಹಿತ್ಯ ಕೃತಿಗಳಿಗೆ ಸಂದಿವೆ. ಕೊಡಗಿನ ಸಂಪಾಜೆ ಬಳಿಯ ಚೆಂಬುವಿನಲ್ಲಿ ವಾಸವಾಗಿದ್ದಾರೆ.