Story

ಗಡಾರಿ ಸೀನ

ಕತೆಗಾರ, ನಟ ಶಿವರಾಜ್ ಡಿ.ಎನ್.ಎಸ್ ಅವರು ಮೂಲತಃ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ದಾಸನಹುಂಡಿಯವರು. ಬರಹ-ಓದು-ನಟನೆ ಹಾಗೂ ಛಾಯಾಗ್ರಹಣ ಮುಖೇನ ಗುರುತಿಸಿಕೊಂಡಿರುವ ಶಿವರಾಜ್ ಡಿ.ಎನ್.ಎಸ್ ಅವರ ‘ಗಡಾರಿ ಸೀನ’ ಕತೆ ನಿಮ್ಮ ಓದಿಗಾಗಿ..

ಒಂದಾನೊಂದ್ ಕಾಲದಲ್ಲಿ ಹಳೆ ಮೈಸೂರು ಪ್ರಾಂತ್ಯದ ಕಾಡಂಚಿನ ಕಡೆ ಹಳ್ಳಿಯಲ್ಲಿ ರಾಮಣ್ಣ, ಶಾಮಣ್ಣ, ದೇವಮ್ಮ ಮಾದೇವಮ್ಮ, ಚೋಟು ಮೋಟು, ಸಣ್ಣಿ, ಪುಟ್ಟಿ, ಹೀಗೆ ಎಲ್ಲರಂತೆ ಗಡಾರಿ ಸೀನ, ತುತ್ತೂರಿ ನಾಗ, ಮಧುಬಾಲ, ಶಂಕ್ರಿ ಅಂತ ನಾಲ್ವರು ಗೆಳೆಯರು ಕೂಡ ಇದ್ದ್ರು..

ವಿಶಾಲ ಹಳ್ಳಿ ಶುಭ್ರಗಾಳಿ ಸಿಹಿನೀರು ಸೌಕರ್ಯಗಳಿರುವಂತ ಆ ಸಾಮನ್ಯ ಹಳ್ಳಿಯಲ್ಲೆ ಸೀನ ಮತ್ತವನ ಸ್ನೇಹಿತರಿದ್ದರು, ಅದೇ ಊರಲ್ಲಲ್ಲದೆ ಅಕ್ಕ ಪಕ್ಕದ ಹಳ್ಳಿಯಾದ ರಾಮಪೂರ, ಸೋಮಪುರದಲ್ಲಿನ ಸಣ್ಣ ಪುಟ್ಟ ಕೂಲಿ ಕೆಲಸ ಅವಲಂಬಿಸಿ ಆರಾಮವಾಗಿ ಜೀವನ ನೆಡೆಸುತ್ತಿದ್ದ ಯುವಕರು. ಗುಂಗರು ಕೂದಲು,ಸ್ಪಷ್ಟ ಕಣ್ಣುಬ್ಬು ಬಣ್ಣ ಸ್ವಲ್ಪ ಕಪ್ಪಾದರೂ ನಂಜುಡಿ ಕಲ್ಯಾಣ ಸಿನಿಮಾದ ರಾಘವೇಂದ್ರ ರಾಜ್ಕೂಮಾರ್ ರವರನ್ನು ಹೋಲುವಂತ ಸಹಜ ಸುಂದರನಾಗಿದ್ದ ಸೀನನಿಗೆ ಗಡಾರಿ ಸೀನ ಅಂತ ಯಾಕ್ ಕರಿತಾರೆ ಅನ್ನೋದನ್ನ ಹೇಳೋದಾದ್ರೆ.. ಅವನ ಅಪ್ಪನ ಕಾಲದಿಂದಲೂ ಅವರ ಮನೆಲಿ ಒಂದು ಗಡಾರಿ, ಅಂದ್ರೆ ಹಾರೆಕೊಲಿತು, ಪ್ರತಿದಿನ ಕೆಲಸಕ್ಕೆ ಹೋಗುವಾಗ ಬರುವಾಗ ಅದನ್ನ ಸೀನ ಭೇಟೆಗಾರನ್ಯಾರು ಈಟಿ ಹೊತ್ತು ತಿರುಗುವಂತೆ ಸದಾ ಹೆಗಲ ಮೇಲೆ ಹೊತ್ತು ತಿರುಗುತ್ತಿದ್ದ, ಆದ್ದರಿಂದಲೇ ಅವನನ್ನ ಎಲ್ಲರು ಗಡಾರಿ ಸೀನ, ಗಡಾರಿ ಸೀನ ಎನ್ನುವ ಹೆಸರಿನಿಂದಲೇ ಕರೆಯತಿದ್ದರು. ಇನ್ನೂ ಈ ತುತ್ತೂರಿ ನಾಗ ಚಿಕ್ಕವಯಸಲ್ಲಿದ್ದಾಗ ಬೆರಳ್ ಚೀಪ್ತಿದ್ದ, ಹಾಗೆ ದೊಡ್ಡವನಾದ್ಮೇಲೂ ಕೂಡ ಯಾವಾಗಲೂ ಬೆರಳನ್ನ ಬಾಯಲ್ಲಿಟ್ಕೊಂಡು ಉಗುರು ಕಡಿತಾ ಇದ್ದ, ಅದನ್ನ ನೋಡಿದ್ದ ಗೆಳೆಯರು ಅವನ ಹೆಸರಿನ ಮುಂದೆ ತುತ್ತೂರಿ ಸೇರಿಸಿ ಕರೆಯುತ್ತಿದ್ರು, ಮಧುಬಾಲ ಇದನಾಲ್ಲ ಅವನ ಹೆಸ್ರಿಗೂ ಒಂದು ಕಥೆಯಿದೆ ಅದೇನಪ್ಪ ಅಂದ್ರೆ.. ಅವನು ಯಾವಾಗ್ಲೂ ಮಧು ಗುಟ್ಕಾ ತಿನ್ನುತ್ತಿದ್ದ, ತಾಲೋಕಿಗೆ ಹೋಗೊರು ಬರೋರಿಗೆ ಬರುವಾಗೊಂದು ಮಧು ತರಲು ಹೇಳ್ತಿದ್ದ, ಹಾಗಾಗಿ ಕಿರಿಯರಿಂದ ಹಿಡಿದು ಹಿರಿಯರ ತನಕ ಅವನನ್ನ ಮಧುಬಾಲ ಅಂತ ಕರೆಯುತ್ತಿದ್ದ್ರು. ಬಹುತೇಕ ಆ ಹಳ್ಳಿಯಲ್ಲಿ ಅರ್ಧ ಜನಕ್ಕೆ ಇಂತಹ ಅಡ್ಡ ಹೆಸರು ಮಾಮೂಲು, ಈ ಶಂಕ್ರೀ ಸೀನ ಇವರೆಲ್ಲ್ರು ಆ ಪುಟ್ಟ ಹಳ್ಳಿಯಲ್ಲಿ ಕೂಲಿ ಕೆಲಸ ಮಾಡ್ಕೊಂಡು ಒಂದು ರೀತಿಯ ಆರಾಮವಾಗಿ ಇದ್ದು ಇಲ್ಲದಂತೆಯು ಜೀವ್ನಾ ಮಾಡ್ತಿದ್ರು. ಕೆಲಸ ಕಡಿಮೆಯಿರುವಂತ ಆ ಹಳ್ಳಿಗಳಲ್ಲಿ ಸೀನನಿಗೆ ಪ್ರತಿ ದಿನ ಏನಾದ್ರು ಒಂದು ಕೂಲಿ ಕೆಲಸ ಸಿಗ್ತಾನೆ ಇತ್ತೂ, ಕಾರಣ ಅವನ ಹತ್ರ ಇದ್ದ ಗಡಾರಿ ಇರಬಹುದು, ಕೆಲವರು ಜಮೀನಲ್ಲಿ ಕಲ್ಲು ಕಂಬ ನೆಡುವುದಕ್ಕೆ ಗುಂಡಿ ತೆಗೆಯುವಂತಹ ಕೆಲಸ ಇಲ್ಲಾ ಅಂದ್ರೇ ಮನೆಕಟ್ಟುವವರು ಪಾಯಾ ತಗೆಯೊದಕ್ಕೆ, ಅಂದ್ರೆ ಬೇಸ್ಮೆಂಟ್ ಗುಂಡಿ ತೆಗೆಯೋವಂತಹ ಕೆಲಸ ಇತ್ತೆಂದರೆ ಸೀನನನ್ನೆ ಕರೆಯೋರು, ಗೆಳೆಯರ ಗುಂಪಿನಲ್ಲಿ ಎಲ್ಲರಿಗಿಂತ ಹೆಚ್ಚು ಇವನೇ ದುಡಿಯುತಿದ್ದ, ಮಿಕ್ಕವರಿಗೆಲ್ಲ ಸರಿಯಾಗಿ ಕೂಲಿ ಸಿಗ್ತಿರ್ಲಿಲ್ಲಾ, ಒಂದು ದಿನ ಕೆಲಸ ಇದ್ದರೆ ಎರಡು ದಿನ ಇರ್ತಿರ್ಲಿಲ್ಲ ಅಂತಹ ಪರಿಸ್ಥಿತಿ.

ಹೀಗೆ ಒಂದ್ ದಿನ ತುತ್ತೂರಿ ನಾಗ, ಮಧುಬಾಲ, ಶಂಕ್ರಿ ಗೆಳೆಯರೆಲ್ಲ ಒಟ್ಟಿಗೆ ಕೂತು ಅರಳಿಕಟ್ಟೆ ಹತ್ತಿರ ಹರಟೆ ಮಾತಾಡುವಾಗ.. ಮಧುಬಾಲ ಹೇಳ್ತಾನೆ : ಡೋ ನಾಗ ಶಂಕ್ರಿ, ನಮ್ಮ ಸೀನುಂಗೆ ಜಿನಾ ಒಂದಲ್ಲಾ ಒಂದು ಕೆಲಸ ಸಿಕ್ತನೆ ಇರ್ತದೆ, ನಮಗೆ ಎಲ್ಲೂ ನ್ಯಯವಾಗ್ ಕೂಲಿ ಸಿಕ್ಕದಿಲ್ಲ, ಇಂಗೇ ಆದ್ರ ನಾವು ಜೀವ್ನಾ ಮಾಡದ್ಯಂಗ್ಯಾ.? ಯಂಗೊ ಅಷ್ಟಗಲ ಇಷ್ಟಗಲ ಇರವ್ರು ಮಳ ಬಿದ್ದಾಗ ರಾಗಿ ಭತ್ತ ಜ್ವಾಳ ಅಂತ ಏನೊ ಉತ್ತು ಬಿತ್ತು ಜೀವ್ನ ಮಾಡ್ತಾರ, ಹೆಸರಿಗಾದ್ರು ಇಷ್ಟಗಲ ಹೊಲಗದ್ದ ಇಲ್ಲದಂತ ನಮ್ಗೊಳ್ ಕಥೆಯೇನಪ. ಕಷ್ಟ ಆಯ್ತದೆ ಯೋಚನೆ ಮಾಡಿ, ಇರೋದಿಷ್ಟಗಲನೆಲ್ಲ ನಮ್ಮ ಅಪ್ಪ ತಾತನಕಾಲದಲ್ಲೆ ಮದ್ವೆ ಮುಂಜಿ ಬಾಣಂತನ ಅಂತೆಲ್ಲ ಕೈ ಸಾಲ ಮಾಡ್ಕಂಡ್ ದುಡ್ಡಿಗೆ ಪಟೇಲ್ರಿಗೆಲ್ಲಾನು ಮಾರ್ಕಂಡ್ ಕೇರ್ಕಂಡ್ ತಿನ್ಕಂಡೋರೆ, ನಮ್ಮ ಜೀವ್ನದಲ್ಲೂ ಮುಂದಾ ಯಂಡ್ರು ಮಕ್ಳುಅಂತ ಬಂದಾಗ ಇಂಗೆ ಆದ್ರ ಏನ್ ಮಾಡದು ..? ನಾವು ಎಲ್ಲರು ಸಿಟಿಗೋಗಿ ದುಡಿಮೆ ನೋಡವ್ ಕಣ್ರಡೊ, ಎಷ್ಟದಿನ ಅಂತ ಈ ಕೊಂಪಲಿರವು.
ಅಂತ ಹೇಳಿದಕ್ಕೆ’ ಶಂಕ್ರಿ : ಡೌ ನೀ ಯಾನ್ ಎಂ ಬಿ ಎಸ್ ಮಾಡಿದಯಾ, ನಿಮ್ಮ ಮಾವ ಅಲ್ಲಿ ನೀ ಓದೇಟ್ಗೆ ಬಾ ಕುಸು ಬಂದ್ಯಾ ಊರ್ಲೆಲ್ಲ ಆರಾಮ ಅಂತ ವಿಚಾರಮಾಡಿ ಕೆಲ್ಸ ಕೊಡ್ಸ್ತನ ಅನ್ಕಂದಿದಯ, ಚೂರೂ ಪಾರಾದ್ರೂ ಓದ್ಕಂದಿರವ್ರಾದ್ರ ನೀ ಯೋಳ್ದಂಗ ಬೆಂಗಳೂರ ಕಡ ಹೋಗಿ ಏನಾರು ಕೆಲ್ಸ ನೋಡ್ಬೋದಾಗಿತ್ತು ಅನ್ನೂ, ಆ ಕೆಂಚಿಂಗೊಂದ್ ಲವ್ ಲೆಟ್ರು ಬರೆಯಕ್ಕೆ ಐಕ ಮಕ್ಳ ಪುಸಲಾಯ್ಸ್ಬೇಕು,, ನಮ್ಮ ತಲಜಜ್ಜುದ್ರೂ ನಾಕಕ್ಷರ ಕಾಣಲ್ಲ ಅಂತಾದ್ರಲ್ಲಿ ಅಲ್ಲೋಗಿ ಏನ್ ಮಾಡಕ್ಕಾದು ನೀನೆ ಯೋಳು,' ಅಂತ ಮಾತಾಡುವಗ ಅಲ್ಲೆ ಪಕ್ಕದಲ್ಲಿ ಮಲಗಿದ್ದ ಸೀನನ ಕಿವಿಗೆ ಈ ವಿಚಾರ ಬಿತ್ತು, ಅವನಲ್ಲಿ ಒಳಗಿಂದೊಳಗೆ ಆಸೆಯ ಬೀಜ ಬಿದ್ದು ಕ್ಷಣ ಮಾತ್ರದಲ್ಲೆ ಹೆಮ್ಮರವಾಗಿ ಬೆಳೆಯಿತು, ಆಲೋಚನೆಯ ಬಿಳ್ಳಿಡಿದು ಜೋಕಾಲಿ ಆಡಲು ಶುರುವಿಟ್ಟ. ನಾನು ನನ್ನ ಗಡಾರಿ ಇಟ್ಕೊಂಡು ಈ ಸಣ್ಣ ಹಳ್ಳಿಯಲ್ಲೆ ಇಷ್ಟು ದುಡಿತಾ ಇದೀನಿ ಅಂದ್ರೆ..! ಗಡಾರಿ ಸಮೇತ ಸಿಟಿಗೆ ಹೋದ್ರೆ ಎಷ್ಟೆಲ್ಲ ಹಣ ಸಂಪಾದನೆ ಮಾಡಬಹುದು, ಅಲ್ವ?. ಇಡೀ ರಾತ್ರಿಯೆಲ್ಲಾ ಮನಸಲ್ಲಿ ಬೆಳೆದ ಹೆಮ್ಮರದ ಬುಡದಲ್ಲಿ ಕುಂತು ಜಪ ಮಾಡಿದವನೇ..ಬೆನಸುಕಿನಲೆ ಎದ್ದವನೆ ಒಂದೆರಡು ಜೊತೆ ಬಟ್ಟೆ ಗಂಟೂ ಮೂಟೆ ಕಟ್ಕೊಂಡು ಹನುಮಪ್ಪನ ಗುಡಿಗೆ ಕೈ ಮುಗಿದು ಗಂಟೆ ಬಾರಿಸಿ, ನಡೆದು ತಾಲೋಕಿಗೆ ಹೋಗಿ ಕೆಂಪು ಬಸ್ ಹತ್ತಿ ಬೆಂಗಳೂರಿಗೆ ಹೊರಟೆ ಬಿಟ್ಟ. ಸಂಜೆ ಹೊತ್ತಿಗೆ ಸಿಟಿಗೆ ಬಂದಿಳಿದ ಸೀನ ' ಸುತ್ತಾಡಿ ಸುಸ್ತಾಗಿದ್ದಕ್ಕಿಂತ ಹೆಚ್ಚಾಗಿ ದೊಡ್ಡ ದೊಡ್ಡ ಬಿಲ್ಡಿಂಗ್ ಎಲ್ಲಾ ನೋಡಿ ಸುಸ್ತನ್ನೆ ಸಂಭ್ರಮಿಸಿ ಖುಷಿ ಪಡ್ತಾ : ‘ನಾಳೆಯಿಂದ ಎಲ್ಲಾದರೂ ಹೊಸ ಮನೆ ಕಟ್ಟೋ ಜಾಗ್ದಾಗೆ ಪಾಯ ತೋಡ್ತಿರೋ ಕೆಲ್ಸಾ ಕೆಳ್ಕೊಂಡ್ ಶೀವಾ ಅಂತ ಕೆಲ್ಸ ಶುರುಮಾಡ್ಬೇಕು ಅಂತ ಯೋಚನೆ ಮಾಡಿ ಒಂದ್ ರಾತ್ರಿ ಅಲ್ಲಿ ಬಸ್ಟಾಪ್ ಅಲ್ಲಿ ಮಲಗಿ ದಿನ ಕಳೆದ.

ಮಾರನೆಯ ದಿನ ಹಳ್ಳಿಯಲ್ಲಿ ಶಂಕ್ರಿ ಮತ್ತು ಗೆಳೆಯೆರೆಲ್ಲ : ನಮ್ಮ ಗಡಾರಿ ಒತ್ನಂತೆಯಿಂದಲೂ ಕಾಣ್ತಿಲ್ವಲ್ಲ, ಬೆಳಿಗ್ಗೆ ಎದ್ದೇಟ್ಗೆ ಸುಬ್ಬಣ್ಣನ ಹೋಟೆಲ್ಗೆ ಟೀ.. ಕುಡಿಯಕ್ಕೆ ಬರ್ತಿದ್ನಲ್ಲ ಎಲ್ಲೋದ ಬಡ್ಡೇದ ಕಾಣ್ತಿಲ್ಲ. ಅಂತ ಎಲ್ರು ಮಾತಾಡ್ತಾಲೆ ನೋಡ್ಕೊಂಡ್ ಬರವ್‌ ಬನ್ನಿ ಅಂತ ಮದುಬಾಲ ನಾಗ ಶಂಕ್ರಿ ಮೂವರು ಸೀನನ ಮನೆ ಹತ್ರ ಹೋದ್ರು. ಆಗ ಅವರ ಅಮ್ಮ : ಅವ ಅದೇನೊ ಕೆಲ್ಸಮಾಡ್ತಿನಿ ಅಂತ ಬೆಂಗ್ಳೂರ್ಗೆ ಎಲ್ಗೊ ಹೋದ ಕಣ್ರಪ್ಪ. ಶಂಕ್ರಿ ಮದುಬಾಲ ನಾಗ ಎಲ್ಲರು ಖುಷಿ ಪಟ್ರು : ಪರವಾಗಿಲ್ಲ ಕಣ್ರೊ ನಮ್ಮ ಸೀನ ನಾವು ಅನ್ಕೊಂಡದ್ದನ್ನ ಮಾಡೆ ಬುಟ್ಟಾ, ನೆಕ್ಸ್ಟ್ ಅವ್ನೂ ಊರಿಗ್ ಬಂದಾಗ ನಾವು ಅವ್ನ್ ಜೊತೆ ಹೋಗಣ ಸಿಟಿಗೆ ಅಂತ ಮಾತಾಡಿಕೊಂಡರು.‌

ಈ ಕಡೆ ಸಿಟಿಲಿ ಸೀನ ತನ್ನ ಗಡಾರಿ ಹೊತ್ಕೊಂಡು ಎಲ್ಲಾ ಕಡೆ ಕೆಲಸದ ಓಡಾಟಕ್ಕೆನಿಂತಿದ್ದ., ಕಾಂಕ್ರೀಟ್ ಕಾಡಿನಂತೆ ಕಂಡ ಎಲ್ಲ ಕಟ್ಟಡಗಳು, ಝರಿಯಂತೆ ಹರಿದುಬರುವ ಜನಸಾಗರ, ದುಂಬಿ ಚಿಟ್ಟೆಗಳಂತೆ ರಸ್ತೆ ಉದ್ದಕ್ಕೂ ಸಾಗುತ್ತಿದ್ದ ವಾಹನಗಳನ್ನ ನೋಡಿ ಕಣ್ತುಂಬಿಕೊಂಡ, ಅಲ್ಲೆಲ್ಲೊ ಒಂದುಕಡೆ ದೊಡ್ಡ ಜೆಸಿಬಿ ಕೆಲಸ ಮಾಡುತಿತ್ತು., ಕ್ರಷ್ಸರ್ಸು ಕಲಸಿದ ಸೀಮೆಂಟ್ ಮೇಲೆ ಎತ್ತೊ ಮಿಷನ್ ಎಲ್ಲಾ ಬೆರಗಾಗಿ ನಿಂತು ನೋಡಿ ಸುಸ್ತಾದವನೆ.. ಅಲ್ಲೊಬ್ಬ ಬಿಳಿ ಬಟ್ಟೆ ಹಾಕೊಂಡಿದ್ದ ಮೇಸ್ತ್ರಿ ನೋಡಿ ಅವನೇ ಯಜಮಾನ ಇರ್ಬೇಕು ಅಂತ ಅವನ ಹತ್ರಹೋಗಿ ತಲೆಕೆರೆಯುತ್ತ.. ‘ಸಾ ನಮಸ್ಕಾರ ಅನ್ನಿ, ನಾನು ಸೀನ ಅಂತ, ಬೂಡ್ಬಾಳು ನಮ್ಮೂರು, ನಾನು ಕೆಲಸಕ್ಕ ಅಂತಾ ಈ ಊರ್ಗ್ ಬಂದಿವ್ನಿ, ನನಿಗೊಂದು ಕೆಲ್ಸಕೊಡಿ ಸ, ನಾನು ಕೆಲಸ ಮಾಡ್ತಿನಿ 'ಅಂತ ಕೇಳ್ದ. ಅದಕ್ಕೆ ಅವನೇಳ್ದ : ನಮ್ಮತ್ರ ಆಳುಗಳಿದಾರೆ ಕಣಯ್ಯ ಅವರಿಗೆ ಕೆಲಸ ಇಲ್ಲ ನಿನಗೇನು ಕೆಲಸಕೊಡ್ಲಪ್ಪ, ಸೀನ : ಸಾ ನನ್ನ ಹತ್ರ ಗಡಾರಿ ಅದೆ ಅಂತ ಜೋರಾಗ್ ಹೇಳ್ತಾ ಹೆಗಲಿಂದಿಳಿಸಿ ನಿನಕ್ಕೆ ಗುದ್ದಿ ನಿಲ್ಲಿಸಿದ. ಅರ್ಥವಾದ ಮೇಸ್ತ್ರಿ : ಯೊ ಹೋಗಪ ಇಂತಹ ನೂರ್ ಗಡಾರಿ ನಮ್ಮ್ ಸ್ಟೋರ್ ರೂಮಲ್ಲಿ ಬಿದ್ದಿದೆ, ಯಾವ್ದು ಕೆಲಸ ಖಾಲಿಯಿಲ್ಲ ಹೋಗು, ಅಂತ ಹೇಳಿ ಕಳುಹಿಸಿದ. ಸೀನ ಹ್ಯಾಪುಮೊರೆ ಹೊತ್ತು ಮುಂದೆ ನೆಡೆದು ಹೋದ, ಅಲ್ಲೊಂದ್ ಕಡೆ ಬ್ರಿಡ್ಜ್ ಕಾಮಾಗಾರಿ ನೆಡೆಯುತ್ತಲಿತ್ತು, ಅಲ್ಲೂ ಕೆಲಸ ಕೇಳೋ ಪ್ರಯತ್ನ ಮಾಡಿ ವಿಫಲನಾದ, ನಿರಾಸೆ ಯ ನಿಟ್ಟಉಸಿರು ಬಿಟ್ಟು., ಟೈಂ ಹನ್ನೆರಡಾಯ್ತು ಹೊಟ್ಟೆಗೆ ಏನು ತಿಂದಿಲ್ಲ, ಪಾಪ ಸೀನ.. ‘ನನ್ನ ಜೋಬ್ಲಿರದು ಐವತ್ತ್ಮೂರುಪಾಯಿ ಏನ್ ಮಾಡ್ಲಿ ಹನುಮಪ್ಪ ಕೆಲ್ಸಾ ಬೇರೆ ಯಾವ್ದು ಸಿಗ್ತಿಲ, ಈಗ ಇರೋ ದುಡ್ಡು ಖಾಲಿಯಾದ್ರೆ ಏನ್ ಗತಿ' ಅಂತ ಅಲ್ಲೊಂದು ದೇವಸ್ಥಾನದ ದಲ್ಲಿ ಕೈಮುಗಿದು, ಒಂದ್ರುಪಾಯ್ ಹುಂಡಿಗಾಕಿ ಬೇಡ್ಕೊಂಡು, ಅಲ್ಲೇ ಕೂತಿದ್ದ ಒಬ್ಬನ ಹತ್ರ : ಅಣ್ಣ ನಮಸ್ಕಾರ ನಾ ಇಂಗೆ ಹಳ್ಳಿಯಿಂದ ಬಂದಿವ್ನಿ ನನ್ನಂತವರಿಗೆ ಎಲ್ಲಿ ಕೆಲ್ಸ ಸಿಗ್ತದೆ ಒಸಿ ಹೇಳು' ಅಂತ ಕೇಳುವಾಗ ಅಲ್ಲಿದ್ದಾತ : ಯಾವ್ ಕೆಲಸನಮ, ಸಿಟಿಲಿ ಈಗ ಯಾವ್ದೆ ಕೆಲಸನೂ ಅಷ್ಟು ಈಜಿಯಾಗಿ ಸಿಗಲ್ಲ ಕಣಮ, ಅದಕ್ಕೆ ಅಂತಲೆ ದೊಡ್ಡ ದೊಡ್ಡ ಏಜೆನ್ಸಿಗಳಿದವೆ ಅವ್ರಗಳು ಜನಗಳನ್ನ ಗುಂಪು ಗುಂಪಾಗಿ ಕಳ್ಸ್ತಾರೆ, ಕೆಲಸಗಾರರು ದುಡಿಯೊ ದುಡ್ಡಲ್ಲಿ ಅವ್ರು ಸ್ವಲ್ಪ ಕಟ್ಮಾಡ್ಕೊಂಡು ಉಳಿದ ದುಡ್ಡನ್ನ ಕೂಲಿ ಕಾರ್ಮಿಕರಿಗೆ ಕೊಡ್ತಾರೆ' ಅಂತಾಕಡೆ ಹೋಗಿ ವಿಚಾರಿಸು ಅಂದ.. ಸೀನ : ಅದೆಲ್ ಬತ್ತದೆ ಒಸಿ ಹೇಳು ಅನ್ನುವಾಗ' ಅದೆಲ್ಲ ನನಿಗೆ ಗೊತ್ತಿಲ್ಲ ಅಂತ ಆತ ಅಲ್ಲಿಂದ ಎದ್ದೋದ. ಅಲ್ಪ ಸ್ವಲ್ಪ ಜ್ಞಾನವಿದ್ದ ಗಡಾರಿ ಸೀನ, ಸರಿ ಏನಾದ್ರೂ ಮಾಡಲೇ ಬೇಕು ಅಂತ ಯೋಚ್ನೆ ಮಾಡ್ತಾನೆ ಸಿಕ್ಕ ಸಿಕ್ಕವರನ್ನ ವಿಚಾರಿಸುತ್ತ ಸಿಟಿಯ ಒಂದೆರಡು ಏರಿಯಾ ಅಲೆದಾಡ್ತ ಕಡೆಗೆ ಮಾರುಕಟ್ಟೆ ತಲುಪಿದ. ಅಲ್ಲಿ ಎಲ್ಲರು ಬುಟ್ಟಿಗಳನ್ನ ಹೊತ್ತು ಅತ್ತಿಂದಿತ್ತ ಹಣ್ಣು ತರಕಾರಿಯಲ್ಲಾ ಹೊತ್ತು ತಿರುಗುತ್ತಿದ್ದರು, ಅಲ್ಲಿ ತಲೆಗೊಂದು ಲುಂಗಿಯ ಪೇಟ ಕಟ್ಟಿ, ಎಲೆ ಅಡಿಕೆ ಜಗಿದು ಕೆಂಪಾಗಿದ್ದ ಬಾಯಿಗೆ ಬೀಡಿ ಅಂಟಿಸಿಕೊಳ್ಳುತ್ತ ಬುಟ್ಟಿಯೊಂದಿಗೆ ಕುಳಿತಿದ್ದ ,ಅವನ ಬಳಿಹೋದ ಸೀನ ‘ಅಣಾ ನಾನು ಇಲ್ಲಿ ಕೂಲಿ ಕೆಲ್ಸ ಮಾಡ್ಬೋದಣೈ,? ಮಾಡ್ಬಬೇಕು ಅಂದ್ರ ಯಾನ್ಮಾಡದು,? ಅಂತ ತಲೆಕೆರೆಯುತ್ತ ಕೇಳ್ದಾ. ಆತನು ತಮಿಳಿಗ ‘ಯನಕೆ ವ್ಯಾಲೆ ಇಲ್ಲ ಇಂಗ, ನೀ ಯನ್ನಾ ಪಣ್ಣುವೆ ಪೋಯಾ.. ಮರುಬಡಿಯ್ಯೊ ವ್ಯಾಲ ಗೀಲಾನ್ನಿ ಇಂದ ಪಕ್ಕ ವಂದಾ.. ಅಡಿವಾಂಗುವೆ, ಪೋಯಾ ಪೊ’ ಅಂತ ಏನೊ ತಲೆ ಮೇಲೆ ಹೊಡೆದಂತೆ ಹೇಳಿ ಮುನ್ನೆಡೆದ., ಪಾಪ ಅವನಿಗೆ ಇನ್ನೂ ಕೂಲಿ ಸಿಕ್ಕರಿಲಿಲ್ಲ ಅನ್ಸತ್ತೆ' ಸೀನನಿಗೆ ಅವನೇಳಿದ ಭಾಷೆ ಅರ್ಥವಾಗದಿದ್ದರೂ ಭಾವಾರ್ತವಾಗಿ.. ಯಾಕೋ ಈ ಸಿಟಿ ನಮ್ಮಂತೋರಿಗೆ ಸರಿಬರಲ್ಲ, ನಮಗೆ ನಮ್ಮೂರೆ ಸರಿ ಅನ್ಸೋಕ್ ಶುರುವಾಯಿತು, ವಾಪಸ್ ಊರಿಗೆ ಹೋಗೋದೆ ಸರಿ ಅನ್ನೋ ತೀರ್ಮಾನಕ್ಕೆ ಬಂದ, ಅವನ ಮನದಾಸೆ ಮಾಮರದಲ್ಲಿ ಒಂದೇ ದಿನದಲ್ಲಿ ಎಲೆಯುದುರಿ ಬೋಳಾಯ್ತು., ಗಂಟೆ ಎರಡಾಯ್ತು, ಹೊಟ್ಟೆಗೆ ಇನ್ನೂ ಏನೂ ತಿಂದಿಲ್ಲ, ಊಟ ಮಾಡೋಣ ಅಂತ ಬಸ್ ಸ್ಟ್ಯಾಂಡಿಗೆ ಹೋಗುವ ಮುಖ್ಯ ರಸ್ತೆ ಹಿಡಿದವನಿಗೆ ಸಣ್ಣ ಕೈಗಾಡಿ ಕಾಣಲಿಲ್ಲ,, ಸರಿ ಇನ್ನೇನ್ ಮಾಡೋದು ಎಂದು ಹಿಂದುಮುಂದು ಯೋಚನೆ ಮಾಡುತ್ತಲೆ ಗಾಜಿನ ಗೋಡೆಯ ಹೋಟೆಲ್ ಒಂದಕ್ಕೆ ಗಂಟು ಗಡಾರಿಯ ಸಮೇತ ನುಗ್ಗಿದ, ಒಂದು ಮೂಲೆಯಲ್ಲಿ ತನ್ನ ವಸ್ತುಗಳನ್ನ ಇಟ್ಟು, ಸಿಂಕ್ ಮುಂದೆ ಹೋಗಿ ಕೈ ತೊಳೆದು, ಬಾಯ್ ಮುಕ್ಕಳಿಸಿ, ಜಮ್ಮ್' ಅಂತ ತೇಬಲ್ ಒಂದರ ಮುಂದೆ ಕೂತು, ಒಂದು ಮಸಾಲೆ ದೋಸೆ ಒಂದು ಪ್ಲೇಟ್ ಇಡ್ಲಿ ವಡೆ, ಎನ್ನುವಷ್ಟರಲ್ಲಿ ಸಪ್ಲೈಯರ್ ಇದು ಊಟದ್‌ ಟೈಮು ಸಾರ್‌, ಮಿಲ್ಸ್‌ ಇದೆ.. ಸೌತ್‌ ಮಿಲ್ಸ್‌ ನಾರ್ತ್‌ ಮಿಲ್ಸ್‌ ರೋಟಿ ಕರಿ ಏನ್ಬೇಕು..? ತಲೆಕೆರೆಯುತ್ತಿದ್ದ ಸೀನನ ಕಂಡು ಚಪಾತಿ ಊಟ ಕೊಡ್ಲ..? ಎಂದು ಕೇಳಿ ಅವನೆ ತಂದನು. ತಿಂದು ಮುಗಿಸುವುದರೊಳಗೆ ಬಿಲ್ಲು ತಂದಿಟ್ಟವನಿಗೆ ‘ಎಷ್ಟಣೈ ಎಂದು ಕೇಳಿದ ಸೀನನಿಗೆ ಐವತ್ತು ರುಪಾಯಿ ಎಂದೊಡನೇ ತಿಂದಿದ್ದೇಲ್ಲ ಹಿಂದೆ ಬಂದಂತಾಯ್ತು, ಯವ್ವಾ ಎನ್ನುತ್ತಾ ಮುಖಮುಖ ನೋಡುತ್ತ ಬೆರಗಾದವನೆ ಬೇರೆ ದಾರಿಲ್ಲದೆ ತನ್ನ ಬಳಿಯಿದ್ದ ಐವತ್ತು ರೂಪಾಯಿಯನ್ನೂ ಕೊಟ್ಟು ಹೊರನೆಡೆದ.

ಇದ್ದ ಐವತ್ತು ರೂಪಯಿಯನ್ನ ಹೋಟೆಲ್‌ನವನಿಗೆ ಕೊಟ್ಟ ಸೀನನ ಬಳಿ ಈಗ ಊರಿಗೆ ಬಸ್ಸತ್ತಲೂ ಜೇಬಲ್ಲಿ ಎರಡು ರೂಪಾಯಿ ತನ್ನ ಗಡಾರಿ ಹಾಗು ಗಂಟಿನ ಹೊರತಾಗಿ ಏನು ಇರಲಿಲ್ಲ, ಏನೇನೊ ಯೋಚನೆ ಮಾಡಿ ಕೊನೆಗೆ ಅಲ್ಲೊಂದು ಗುಜರಿ ಅಂಗಡಿ ಕಾಣಿತು, ಹಳೆ ಪೇಪರ್ ಹಾಗು ಕಬ್ಬಿಣ ತೂಗುತ್ತಿದ್ದ ಅಂಗಡಿಯಲ್ಲಿ ತನ್ನ ಗಡಾರಿಯನ್ನ ಗುಜರಿಗೆ ಹಾಕುವ ಆಲೋಚನೆ ಬಂತಾದರೂ, ಏನು ಮಾಡುವುದು ಎಂದು ತಿಳಿಯದೆ ಸತಪತ ಹಾಕಿ ಸುಸ್ತಾಗಿ ಮುನ್ನೆಡೆದ, ಸಿಟಿಯಲ್ಲಾ ತಿರುಗುತ್ತ ನಿಂತವನಿಗೆ. ಹೀಗೇನಾದರು ನನ್ನ ಗಡಾರಿ ಗುಜರಿ ಸೇರಿದರೆ ಕಷ್ಟ ಎನ್ನುವುದನ್ನ ಅರಿತು ತನ್ನ ಗಡಾರಿಯನ್ನ ಹೇಗಾದರೂ ಮಾಡಿ ಉಳಿಸಿಕೊಳ್ಳಲೇ ಬೇಕು, ಇದಿಲ್ಲದೆ ಊರಿಗೆ ಹಿಂದಿರುಗಿದರೂ ಬದುಕುವುದು ಬಾಳ ಕಷ್ಟ, ಎನ್ನುವುದನ್ನ ಯೋಚಿಸುತ್ತಲೆ ನೆಡೆಯುತ್ತ ಖಾಲಿ ಹೊಟ್ಟೆಗೆ ನೀರು ತುಂಬಿಸಿಕೊಂಡು ಮತ್ತೊಂದು ರಾತ್ರಿ ಕಳೆದ, ನಂತರ ಹೇಗೊ ಲಾರಿ ಟ್ರಾನ್ಸ್‌ಪೋರ್ಟ್ಗಳೆ ಹೆಚ್ಚಿರುವಂತಹ ಏರಿಯಾವೊಂದರಲ್ಲಿ ಹೋದವನೆ..ಅಲ್ಲೆಲ್ಲೋ ಲಾರಿ ಅನ್ಲೋಡು ಮಾಡುವವರ ಜೊತೆ ತನ್ನ ಕಷ್ಟ ಹೇಳಿಕೊಂಡ, ಎರಡು ಲಾರಿ ಲೋಡು ಅನ್ಲೋಡು ಮಾಡಿ ಸುಸ್ತಾದ, ಅವರು ಕೊಟ್ಟ ಐವತ್ತು ರುಪಾಯಿ ಕೂಲಿ ಜೊತೆಗೆ ಊರಿಗೆ ಹೋಗಪ್ಪ ಮಾರಾಯ ಸಿಟಿ ಮೊದಲಿನಂತಿಲ್ಲ ಇಲ್ಲಿರುವವರಿಗೆ ಸರಿಯಾಗಿ ಕೆಲಸ ಇಲ್ಲ, ಎನ್ನುವಂತ ಬುದ್ದಿಮಾತೇಳಿದ ಟ್ರಾನ್ಸ್ಪೋರ್ಟ್ ಮ್ಯಾನೆಜರ್ ಹತ್ತು ರುಪಾಯಿ ಸೇರಿಸಿ ಕೊಟ್ಟ, ಜೊತೆ ಕೆಲಸಮಾಡಿದ ಸಹ ಕೆಲಸಗಾರರೂ ಕೂಡಿಸಿ ಹತ್ತು ರುಪಾಯಿಗಳನ್ನ ಕೊಟ್ಟರು, ಒಟ್ಟು ಎಪ್ಪತ್ತು ರೂಪಾಯಾಯಿತು, ಇಪ್ಪತು ರೂಪಾಯಿಗೆ ಅಲ್ಲೆಲ್ಲೊ ಮೂರು ಚಕ್ರದ ತಳ್ಳುವ ತಮಿಳಿನವರ ಗಾಡಿಯಲ್ಲಿ ಹೊಟ್ಟೆ ತುಂಬಾ ಪರೋಟ ತಿಂದ, ಬಿರುಸಿನ ನಡಿಗೆಯಲ್ಲಿ ಸೀದ ಮೆಜೆಸ್ಟ್ರಿಕ್ಕಿಗೆ ಹೋಗಿ ತನ್ನ ಗಂಟು ಗಡಾರಿಯೊಂದಿಗೆ ಊರಿನ ಬಸ್ಸು ಹತ್ತಿದವನೆ ರಾತ್ರೋ ರಾತ್ರಿ ಊರು ತಲುಪಿದ, ಬೆಳಗಿನ ಜಾವ ಸುಬ್ಬಣ್ಣನ ಟೀ ಅಂಗಡಿಯಲ್ಲಿ ಪ್ರತ್ಯೇಕ್ಷನಾದ.

ಈ ವಿಶಾಲ ಜಗತ್ತು ಜಾಗತಿಕರಣ ಗೊಳ್ಳುತ್ತಿರುವ ಸಣ್ಣ ಸುಳಿವು ಕಂಡ ಸೀನನು ಮುಂದೊಂದಿನ ನಮ್ಮ ಈ ಹಳ್ಳಿಗಳೆಲ್ಲ ದಿಲ್ಲಿಯಂತಾದರೆ ನಮ್ಮಂತವ ಕಥೆಯೇನು ಎಂದು ಆಲೋಚಿಸುತ್ತಿರುವಾಗ ಗೆಳೆಯರೆಲ್ಲ ಪ್ರತ್ಯಕ್ಷವಾದರು.

- ಡಿ ಎನ್ ಎಸ್

ಶಿವರಾಜ್ ಡಿ.ಎನ್.ಎಸ್

ಶಿವರಾಜ್ ಡಿ.ಎನ್.ಎಸ್ ಅವರು ಮೂಲತಃ ಚಾಮರಾಜನಗರ ಜಿಲ್ಲೆಯ ದಾಸನಹುಂಡಿಯವರು. ಬರಹ-ಓದು-ನಟನೆ ಹಾಗೂ ಛಾಯಾಗ್ರಹಣ ಅವರ ಹವ್ಯಾಸ. ಕಲರ್‍ಸ್ ಕನ್ನಡದ ‘ಕಾಮಿಡಿ ಕಂಪನಿ’ಶೋ ನಲ್ಲಿ ನಟಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಸಹಾಯಕ ನಿರ್ದೇಶಕರಾಗಿ, ಸಂಭಾಷಣೆಕಾರರಾಗಿ ಕಾರ್ಯನಿರ್ವಹಿಸಿದ್ದಾರೆ. ಸಿನಿಮಾ ಅವರ ಆಸಕ್ತಿ ಕ್ಷೇತ್ರ.

More About Author