ಮುಂಚಿನಂತಿಲ್ಲ ಈಗ ಏನೂ ಯಾವುದೂ.
ಇರಲೂಬಾರದು ಒಂದೇ ಥರ
ಹಳಹಳಿಕೆ, ತಿಳಿವಳಿಕೆ, ಕಲ್ಲು ಬಂಡೆಯ ಶಾಂತತೆ.
ಹೇಳುತ್ತಾರಲ್ಲ ಇತಿಹಾಸ ಬೇಕು
ವರ್ತಮಾನಕ್ಕೆ, ಭವಿಷ್ಯಕ್ಕೆ. ಬೇಕಷ್ಟೇ,
ಅದೇ ಅಲ್ಲವಲ್ಲ, ಬೇರೆ ಥರ.
ಯಾರೋ ಕಡಿದು ಗುಡ್ಡೆ ಹಾಕಿದ್ದರಂತೆ,
ಆ ಗುಡ್ಡ ಕಡಿಯಬೇಕೆಂದೇ? ಹಾಗಲ್ಲ
ಹೊಸ ಗುಡ್ಡೆ ಹಾಕೋಣ ಬನ್ನಿ
ಅಭಿಯಾನ ಇದೊಂಥರ.
ಅದು ಹಾಗಲ್ಲ, ಇದು ಹೀಗಲ್ಲ
ಸಂವಾದ, ವಾದ ವಿವಾದ.
ಮತ್ತೆ ಹೇಗೋ ಏನೋ ಹೊಸದಾರಿ
ಸಾಗುವುದೋ ಸಾಯುವುದೋ
ಗೊತ್ತಾದರೂ ಗೊತ್ತಾಗದ ಥರ
ಸಂಯಮದ ಹಳಿಗೆ ದ್ವೇಷದ ರೈಲು
ದೇಶಕ್ಕೂ ದ್ವೇಷಕ್ಕೂ ಸಣ್ಣ ವ್ಯತ್ಯಾಸ
ಏಕಾಂತವನ್ನೂ ಕಾಡುವ ಲೋಕಾಂತ
ಮನಸನ್ನೇ ಹುಡುಕಬೇಕು ಮನಸಿಲ್ಲ
ಒಂದು ಬೊಗಸೆ ಪ್ರೀತಿಗೂ, ಒಂದು ಮೊಳ
ಸೌಹಾರ್ದಕ್ಕೂ ಗತಿಯಿಲ್ಲದ ಥರ.
ಹೌದು, ಇರಬಾರದು ಒಂದೇ ಥರ
ಹಳಹಳಿಕೆ, ತಿಳಿವಳಿಕೆ
ಎಲ್ಲ ಬೇರೆ ಥರ
ರಾಜಶೇಖರ ಜೋಗಿನ್ಮನೆ
ರಾಜಶೇಖರ ಜೋಗಿನ್ಮನೆ ಅವರ ಮೂಲ ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಜೋಗಿನ್ಮನೆ ಗ್ರಾಮ. ತಂದೆ ಅಣ್ಣಪ್ಪ ಹೆಗಡೆ, ತಾಯಿ ಕಾಮಾಕ್ಷಿ ಹೆಗಡೆ. ವೃತ್ತಿಯಿಂದ ವಿಜಯವಾಣಿ ದಿನಪತ್ರಿಕೆಯಲ್ಲಿ ಸುದ್ದಿ ಸಂಪಾದಕರು. ಪ್ರವೃತ್ತಿಯಿಂದ ಕಥೆಗಾರರು. ನೀರಿನ ಕುರಿತ ಬರೆಹವೊಂದಕ್ಕೆ ’ಚರಕ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ ಸಂದಿದೆ. ಸಂಗೀತ, ಸಿನಿಮಾ, ನಾಟಕ, ಯಕ್ಷಗಾನ, ಸಾಹಿತ್ಯ- ಇವರ ಆಸಕ್ತಿ ಕ್ಷೇತ್ರಗಳು.
More About Author