Poem

ಈಗ ಆಕೆಯೇ

 

ನಯವಾದ ಹಣೆಯ ಮೇಲೆ
ಯಾರೊ ಸಂಕುಚಿಸಿದ ನೆರಿಗೆಗಳಿದ್ದವು
ಅಗಲ ಕಣ್ಣುಗಳು ಬೆರಗಾಗಿ
ಯಾವುದೊ ಭಯದಲ್ಲಿ ಕೊಳಗಳಾಗಿದ್ದವು
ತುಂಬುಗೆನ್ನೆಯ ತುಂಬ ನೀಟಾಗಿ
ಜೋಡಿಸಿದಂತಿದ್ದ ಕೆಂಪು ಬೆರಳುಗಳ ಕುರುಹು

ಚಿಗುರು ಸಂಪಿಗೆಯ ಮೂಗುಶಿಖರದ
ತುದಿಗೆ ಮೆಣಸು ಹಚ್ಚಿದ ಉರಿ
ಕಚ್ಚುವಂತೆ ಕೆಂಪಗಿದ್ದ ತುಟಿಗಳು
ಏನೋ ಒದರುವ ಕಾತುರದಲ್ಲಿ ಕಂಪಿಸುತ್ತಿದ್ದವು
ಶಂಖುಕಿವಿಗಳು ಅದಾವುದೊ
ಭೀತಿ ಭರಿತ ಉನ್ಮಾದದ
ಘರ್ಜನೆಗೆ ಅದುರುತಿದ್ದವು

 

 

 

 

 

 

 

 

 

 

ನೀಳ ಬಳ್ಳಿದೇಹದ ಥರ ಥರ
ಚಿಗುರು ಬೆರಳುಗಳ ತಹತಹ
ಬಾಳೆದಿಂಡಿನ ಕಾಲುಗಳ ನಡುಕ

ಎದುರು ನಿಂತವಳ ಸೊಬಗನ್ನು
ಅಚ್ಚುಕಟ್ಟಾಗಿ
ಕವಿಯೊಬ್ಬ ವರ್ಣಿಸುತ್ತಿದ್ದ
ಕಲಾವಿದನೊಬ್ಬ ಚಿತ್ರಿಸುತ್ತಿದ್ದ
ವಿಮರ್ಶಕನೊಬ್ಬ ಹೊಗಳುತ್ತಿದ್ದ

ನೃತ್ಯಕ್ಕೆ ಕುಣಿಸುವ ಉಮೇದು
ಕಾಮಿಗೆ ಚಿಗುಟುವ ತವಕ
ಕರುಣೆಗೆ ಮಾತ್ರ ಕಾವಿಲ್ಲ

ಕಾದಂಬರಿಯ ವಸ್ತು
ಕತೆಯ ಆಶಯ
ಪ್ರಬಂಧದ ಮೂಲಧಾತು
ಜಾಗತಿಕ ಜಗತ್ತಿನ ಬಂಡವಾಳ
ಈಗ ಆಕೆಯೇ

ಬಿ.ಎ. ಮಮತಾ ಅರಸೀಕೆರೆ

ಬಿ.ಎ. ಮಮತಾ ಅರಸೀಕೆರೆ ಅವರು ಮೂಲತಃ ಹಾಸನ ಜಿಲ್ಲೆಯವರು. 

ಕನ್ನಡ ಸಾಹಿತ್ಯ ಕೃಷಿಯಲ್ಲಿ ತೊಡಗಿರುವ ಇವರು ಸಂತೆ ಸರಕು ಎಂಬ ಕವನ ಸಂಕಲನವನ್ನು ಹೊರತಂದಿದ್ದಾರೆ. ಇದಲ್ಲದೇ ಕಾಲಡಿಯ ಮಣ್ಣು ಎಂಬ ಅನುವಾದಿತ ಕೃತಿಯನ್ನೂ ರಚಿಸಿದ್ದಾರೆ. 

More About Author