ಹಿಂದೆ ಕಳೆದ ರಾತ್ರಿಗಳ ತುಂಬಾ
ಬರೀ ಕರಾಳ ಆತಂಕ ಸಿಗಬೇಕು
ಪಡೀಬೇಕು ಪಡೆದರೂ ನನ್ನ
ಬಳಿ ಇರಬೇಕು ಬರೀ ಅತೃಪ್ತ
ಕರಿ ನೆರಳು ಪ್ರೇಮದಾಟದ ತುಂಬಾ
ಅನುಮಾನದ ವಿಷ; ಹೇವರಿಕೆ
ಹುಟ್ಟಿಸುವ ಕಡು ಭೀತಿ
ಆಸೆ ದುರಾಸೆ ಮೈಮನಗಳ ಕಂಪನಕೆ
ಬರೀ ಹಸಿವು ದಾಹ ಉದ್ವೇಗ ಉತ್ಕಟತೆ
ದೇಹವೆಂದರೆ ಬರೀ ದೇಹವಾಗಿರದ
ಅದರಾಚೆಗೆ ಇನ್ನೂ ಏನೇನೋ ಅರ್ಥ
ವಾಗದ ಅನರ್ಥಗಳ ಸರಮಾಲೆ
ಹಗಲು ರಾತ್ರಿ ಅದೇ ವ್ಯಸನ; ಕೂಡುವ
ಕಳೆಯುವ ಸಮಯಕೆ ಲೆಕ್ಕ ಇಡದಷ್ಟು
ಹುಚ್ಚಾಟ ಮುಂದೆ ಏನು?
ಉತ್ತರ ಸಿಗದ ಪ್ರಶ್ನೆಗಳಿಗೆ ಚೀರಿದ
ಮನಕೆ ಸಂತೈಸುವ ಕೈಗಳೂ ಖಾಲಿ
ಸಾಕಪ್ಪ ಸಾಕು ಅನಿಸದ ದಾಹಕೆ
ಅವಾಸ್ತವಿಕ ಮಂಕು ಬೂದಿ
ಹೈರಾಣಾದ ಜೀವ
ವಿಧಿ ರೋಸಿ ಹೋದ ಪರಿಗೆ
ತಿಂಗಳುಗಳ ಸಜೆ ಮತ್ತದೇ ಯಮ
ಯಾತನೆಯ ವಿಕೃತ ಲೆಕ್ಕಾಚಾರ
ಹಗಲಾದ ರಾತ್ರಿಗಳು ಅಲ್ಲಿ ಬರೀ
ಅಭರವಸೆಯ ಒಳ ಸಂಚುಗಳು
ಸಿಗದಿದ್ದರೆ ಹೇಗೆ ಮುಂದೆ ?
ಏನಿದು ಭೀತಿ ಕಣ್ಣಿಗೆ ಕಾಣದ
ಅಣುವಂದು ಅಣಕಿಸಿ ಮೂಲೆ
ಹಿಡಿದು ಕೂಡಲು ಆದೇಶಿಸಿದಾಗ
ಮತ್ತದೇ ರೋಶ ಆಕ್ರೋಶ
ಮೈಗೆ ಬೆಂಕಿ ಬಿದ್ದ ಅನುಭವ
ಯಾರೋ ಕತ್ತು ಹಿಸುಕಿ ಮತ್ತು
ಬರಸಿ ನೆಲಕ್ಕೆ ಅಪ್ಪಳಿಸಿದಂತಾದಾಗ
ಬರೀ ಶೂನ್ಯ ಕತ್ತಲು
ಮುಗಿಯುವ ಲಕ್ಷಣಗಳೇ ಇಲ್ಲದ
ವಿಲಕ್ಷಣ ಕಾಲದಲಿ ಬರೀ ಶೂನ್ಯ
ವಿರಹ ಬೇಗುದಿ ತಣ್ಣಗಾಗಲೋ?
ಅಗಲಿಕೆ ನನ್ನ ವಿನಾಶ ಮಾಡಲೋ?
ಉತ್ತರ ಹೇಳಬೇಕಾದ ನಾನು
ಪ್ರಶ್ನೆ ಕೇಳುತ್ತ ಕೇಳುತ್ತ ಕಾಲ
ನೂಕಿದೆ
ಅಳುತ್ತ ಅಳುತ್ತ ಕತ್ತು ಹಿಚುಕಿ
ಸತ್ತು ಹೋದಾಗ ಅಣು ಕೇಕೆ
ಹಾಕಿ ಚಪ್ಪಾಳೆ ತಟ್ಟಿ ನಗುತ್ತಿತ್ತು
ಹೆಣ ಮನದ ಮೂಲೆ ಸೇರಿ ಅಳುತ್ತಿತ್ತು
*
ಇಂದು ರಾತ್ರಿ ಶವಾಗಾರದಿಂದ
ಹೊರಗೆದ್ದು ನಾ ಜಳಕ ಮಾಡಿ
ಹೆಣವಲ್ಲ ಎಂದು ಖಾತ್ರಿ ಮಾಡಿ
ಕೊಂಡು ನಸು ನಕ್ಕಾಗ ದುರಾಸೆ
ಓಡಿ ಹೋಗಿತ್ತು
ಆಸೆ ದುರಾಸೆ ಮೈಮನಗಳ ಕಂಪನ
ತಣ್ಣಗಾಗಿತ್ತು ದೇಹ ದಾಹ ಕತ್ತು
ಕೊಯ್ದ ನೆನಪುಗಳ ದಾಳಿಗೆ ಮನ
ರೋಸಿ ಹೊರ ಬಿದ್ದಾಗ ಎಲ್ಲವೂ
ಛಂದ ಸ್ವಚ್ಛಂದ ಅಂದಕಿಂತ ಛಂದ
ಇಂದು ರಾತ್ರಿ ಎಂದಿನಂತೆ
ಕರಾಳವಲ್ಲ
ಮೈ ಚಾಚಿದ ಭರವಸೆ
ಕಾಲು ಝಾಡಿಸಿ ಹೊರ ಬಂದಾಗ
ನಡು ರಾತ್ರಿಯಲೂ ಸೂರ್ಯನ
ಜೊತೆಗೆ ಚಂದ್ರನೂ ನಗುತ್ತಿದ್ದ.
ಕಾಯುವ ಸಹನೆ;ಹಂಚಿ ತಿನ್ನುವ
ಮನೋಧೈರ್ಯಕೆ ಅಸಂಖ್ಯ ಒಲವು
ಸಹಿಸುವ ಪಾಠ ಕಲಿಸಿದ ಅಣುವಿಗೆ
ನಮಿಸಿ ಭರವಸೆಯ ಬೆಳಕಲಿ ಒಮ್ಮೆ
ನೋಡಿಕೊಂಡು ಮಲಗಿದಾಗ ಮನಸು
ಹಗುರಾಗಿತ್ತು ; ವಾಸ್ತವದ ಅಲೆಯ
ಮೇಲೆ ತೇಲಾಡಿ ದಡ ಸೇರಿದಾಗ
ಕಣ್ಣು ಎಳೆದು ನಿದ್ರೆ ಆವರಿಸಿ
ಒಲವ ಜೋಗುಳ ರಿಂಗಣಿಸುವ
ಹೊತ್ತು ಈ ಹೊಸ
ರಾತ್ರಿಯ ಹೊತ್ತು ಹೊಸ ಹೊತ್ತು
ಸಿದ್ದು ಯಾಪಲಪರವಿ
ಸಿದ್ದು ಯಾಪಲಪರವಿಯವರು ಮೂಲತಃ ಕೊಪ್ಪಳ ಜಿಲ್ಲೆಯ ಕಾರಟಗಿಯವರು. ಸರಕಾರಿ ಶಾಲೆಗಳಲ್ಲಿ, ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಶಿಕ್ಷಣ ಪೂರೈಸಿ ಗದುಗಿನ ಕನಕದಾಸ ಸಮಿತಿಯ ಮಹಾವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ಬರಹ, ಮಾತು, ತರಬೇತಿ ಹಾಗೂ ಪ್ರವಾಸ ಇವರ ನೆಚ್ಚಿನ ಪ್ರವೃತ್ತಿ. ಉಪನ್ಯಾಸಗಳು, ವಚನ ಚಳವಳಿ, ಸಾಹಿತ್ಯ, ಸಂಸ್ಕೃತಿ, ಸಿನೆಮಾ, ರಾಜಕಾರಣ ಹಾಗೂ ಆಧ್ಯಾತ್ಮ ಕುರಿತು ಚಿಂತನ- ಮಂಥನ ನಡೆಸುತ್ತಾ ದೇಶ-ವಿದೇಶಗಳಿಗೂ ಭೇಟಿ ನೀಡಿ ಜೀವನ ಕೌಶಲ್ಯ ಕುರಿತ ತರಬೇತಿ ನೀಡುತ್ತಾ ಬಂದಿದ್ದಾರೆ. ಕಳೆದ ಒಂದು ದಶಕದಿಂದ ’ಸಿದ್ದು ಕಾಲ' ಎಂಬ ಬ್ಲಾಗಿನ ಮೂಲಕ ಲೇಖನಗಳನ್ನು ಬರೆಯುತ್ತಿದ್ದಾರೆ. 1999-2002 ರವರೆಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾಗಿದ್ದರು. ಕಾರಟಗಿ ನೂತನ ತಾಲೂಕಿನ ಪ್ರಥಮ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಸಂದರ್ಭದಲ್ಲಿ, ಇವರ ಬದುಕಿನ ಸಾಧನೆಗಳನ್ನು ಆಧರಿಸಿ ಸಿಕಾ ಅವರು ಬರೆದ ಬ್ಯಾಸರಿಲ್ಲದ ಜೀವ ಪ್ರಕಟಗೊಂಡಿದೆ.
ಕೃತಿಗಳು: ’ನೆಲದ ಮರೆಯ ನಿಧಾನ’ ಕವನ ಸಂಕಲನ (2007), ’ಎತ್ತಣ ಮಾಮರ ಎತ್ತಣ ಕೋಗಿಲೆ ( 2009) , ಇಂಗ್ಲೆಂಡ್ ಪ್ರವಾಸ ಕಥನ, ’ಒಂದು ಬಿರುಗಾಳಿಯ ಕಥೆ’ ಅನುವಾದಿತ (2016) ಕಾದಂಬರಿ. ಅಸಂಗತ ಬರಹಗಳು (ಲೇಖನಗಳ ಸಂಗ್ರಹ ಕೃತಿ), ಮಗಲಾಯಿ ಹುಡುಗನ ಪರೆನ್ ಟೂರು(2018), ಡೋಂಟ್ ಬಿ ಹ್ಯಾಪಿ(2020), ಕಾಲ್ದಾರಿಯ ಕನವರಿಕೆ(2020), ಹಗಲಿನಲ್ಲಿಯೆ ಸಂಜೆಯಾಯಿತು(2021), ದಣಿವರಿಯದ ದಾರಿಯಲ್ಲಿ(2022)
More About Author