Poem

ಈ ಸಂಜೆ

ಈ ಸಂಜೆ
ಈ ಸಂಜೆಗೆ ಕಣ್ಣು ಕಿವಿ ಬಾಯಿ
ಇರದಿದ್ದರೂ ಹೃದಯವಿದೆ
ಅವನ ಮುನ್ನುಡಿ ದಾಖಲಾಗಿದ್ದೇ
ಈ ಸಂಜೆಯಲ್ಲಿ

ಈ ಸಂಜೆಯಲ್ಲಿ
ಏನೋ ಇತ್ತು
ಅವನಿಗೆ ಕಾಯುತ್ತಿತ್ತು
ತಳಮಳ ಹೆದರಿಕೆ
ಇನ್ನೇನೋ....
ಕಣ್ಣ ಕಾಡಿಗೆ ಕರಗುವ ಸಮಯ
ತಿರುಗಿ ತಿರುಗಿ ದಾರಿಯ ಬಾಗಿಲಿಗೆ
ಉಸಿರು ದಾಟಿಸುತ್ತಾ
ಸುತ್ತ ತರಂಗಗಳು ಕಂಪಿಸಿ
ಕಾದ ಬೆಂದ ಮಾತನ್ನು
ಎದೆಯಾಳದಿಂದ ಇಳಿಸುತ್ತಿತ್ತು

ಮತ್ತೆ ಮತ್ತೆ ಎದೆಬಡಿತ ಜೋರಾಗುತ್ತಿತ್ತು
ಹಜ್ಜೆಯ ಸಪ್ಪಳವೂ ಇಲ್ಲ
ಈ ತೋಳುಗಳನ್ನು ಬಿಗಿದಪ್ಪುವ
ಸೂಚನೆಯೂ ಇಲ್ಲ
ಮಾತು ಮುರಿಯಲು
ದಾರಿ ಕವಲಾಗಲು
ಅವನು ಕೊಟ್ಟ ಕೊನೆಯ ಸಂಜೆಯ ಆಮಂತ್ರಣ

ಇಷ್ಟು ದಿನ ಕಾದಿದ್ದ ಆತ್ಮೀಯ ಸಂಜೆಯಲ್ಲಾ
ಬೆದರಿದೆ ಇಂದು
ಸ್ನೇಹ ನೀಡುವ ಹಸಿರು
ಮುಪ್ಪಾಗಿದೆ
ನಿಂತ ನೆಲದಲ್ಲಿ
ಪಾದ ಹುದುಗುತ್ತಿದೆ
ದ್ವೇಷಕಾದರೂ ಮರು
ಆಣೆಯ ಭಾಷೆಗಾದರೂ
ಕೋಪ ಕಟ್ಟಿಕೊಂಡು
ಒಮ್ಮೆಯಾದರೂ ಕಾದಾಡಬಹುದಿತ್ತು

ಸುಳ್ಳು ವದಂತಿ ಬಾಚಿ
ನನ್ನೆದೆಯ ಮೇಲೆ ಎರಚಲು
ಸಿದ್ಧನಾಗಿ ಬರಬಹುದಿತ್ತು
ನನಗೆ ಈ ಮುಸಂಜೆಯ
ಕಲ್ಪಿತ ಅಲಂಕಾರಗಳಲ್ಲಿ ನಂಬಿಕೆಯಿಲ್ಲ
ಅದು ನನ್ನಂತೆ ಒಂಟಿ ಆಗಿರಬಹುದು
ಅಳುತ್ತಿರಬಹುದು

ಪ್ರೇಮ ಪಲ್ಲವಿಸಿದ ಇನ್ನೆಷ್ಟೋ ಕತೆಗಳು
ಈ ಸಂಜೆಯಲ್ಲಿ ಕಳಚಿರಬಹುದು
ನಾ ಊಹಿಸಲಾರೆ
ಸಂಜೆ ಜೊತೆ ಒಂದಿಷ್ಟು ಮಾತು
ಶುರು ಅಗಬೇಕಿದೆ
ನನ್ನ ಹುಡುಕುತ್ತಾ…. ಇನ್ಯಾರಿಗೂ ತಿಳಿಸದಂತೆ....

- ಎಂ.ಜಿ.ತಿಲೋತ್ತಮೆ

ವಿಡಿಯೋ
ವಿಡಿಯೋ

ಎಂ.ಜಿ. ತಿಲೋತ್ತಮೆ

ಕವಿ ಎಂ.ಜಿ. ತಿಲೋತ್ತಮೆ ಅವರು ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವರು. ಪದವಿ ವಿಧ್ಯಾಭ್ಯಾಸವನ್ನು ಭಟ್ಕಳದಲ್ಲಿ ಪೂರೈಸಿದರು. ಸದ್ಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಪುತ್ತೂರಿನ ವಿದ್ಯಾರ್ಥಿ ನಿಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿದ್ಯಾರ್ಥಿಯಾಗಿದ್ದಾಗಲೇ ಸಾಹಿತ್ಯದ ಬಗ್ಗೆ ಒಲವು. 2013ರಲ್ಲಿ ‘ನಾ ಅಬಲೆಯಲ್ಲ’, 2020ರಲ್ಲಿ `ನೀಲಿ ಬಯಲು’ ಕವನ ಸಂಕಲನಗಳು ಪ್ರಕಟಗೊಂಡಿವೆ. ಅವರಿಗೆ ಯುವ ಬರಹಗಾರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ.

More About Author