Poem

ದ್ವೇಷದಿಂದ ಅಂತರ ಬಯಸಿ

ಸದಾ ನಡೆಯುತ್ತಿರುತ್ತೇನೆ
ದ್ವೇಷದಿಂದ ಅಂತರ ಬಯಸಿ
ಇಚ್ಛೆಗಳ ಸಮಯಕೆ ಮಾರಿ
ಸ್ವೇಚ್ಛೆ ಬದುಕ ಕಟ್ಟಿಕೊಳ್ಳಲು !
ಕೆಚ್ಚಿನ ನುಡಿಗಲ್ಲ; ಹಕ್ಕಿಗಳ
ಹಾಡಿಗೆ ಮನ ಸೋಲುತ್ತೇನೆ;
ಹೂಗಳನ್ನು ಮುದ್ದಿಸುತ್ತೇನೆ
ತಂಗಾಳಿಯ ಅಪ್ಪುತ್ತೇನೆ !
ಹರಿಯುವ ನದಿಗಳ ಮೇಲೆ,
ಆವರಿಸಿದ ಮಲೆಗಳ ಮೇಲೆ
ಸುರಿಯುವ ಮಳೆಗಳ ಮೇಲೆ
ಪದ್ಯ ಕಟ್ಟಿ ಹಾಡುತ್ತೇನೆ !
ಹೃದಯ ಬಿಚ್ಚಿ ಮಾತನಾಡಿದರೆ
ಕಿವಿಗೊಟ್ಟು ಕೇಳುತ್ತೇನೆ;
ಹೊಟ್ಟೆಕಿಚ್ಚಿನ ಮಾತುಗಳಿಗೆ
ಕರವೆತ್ತಿ ಮುಗಿದು; ಬಿಳ್ಕೊಡುತ್ತೇನೆ !
ಕೈ ಕೈ ಮೀಲಾಯಿಸಬಹುದು
ನಾನೂ ನೀನೂ,
ಇಬ್ಬರಲ್ಲಿ ಯಾರೇ ಗೆದ್ದರೂ,
ಖುಷಿ ಸಂಚಾರಿ ಭಾವ;
ಈ ಸತ್ಯವ ಅರಿತ್ತಿದ್ದೇನೆ !
ಮನಸ್ತಾಪವಿಲ್ಲದ ಬದುಕಿಲ್ಲ;
ಇಲ್ಲಿ, ಕಲಹವಿಲ್ಲದ ಒಲವಿಲ್ಲ
ಅದಾಗ್ಯೂ,
ಗದ್ದಲವೇ ಇರದ ದಿಕ್ಕಿನತ್ತ
ನನ್ನ ಚಿತ್ತ,
ಸಾಗುತ್ತಿದ್ದೇನೆ; ಕೋಪ,
ತಾಪಗಳಿಂದ ಅಂತರ ಬಯಸಿ
- ಮನು ಗುರುಸ್ವಾಮಿ

 ಮನು ಗುರುಸ್ವಾಮಿ 

ಮನು ಗುರುಸ್ವಾಮಿ ಮೂಲತಃ ಮೈಸೂರು ಜಿಲ್ಲೆಯ ತಲಕಾಡಿನವರು. ಮೈಸೂರು ವಿಶ್ವವಿದ್ಯಾನಿಲಯ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಿಂದ ಕನ್ನಡ ಸ್ನಾತಕೋತ್ತರ ಪದವಿಯನ್ನು ಪಡೆದಿರುವ ಅವರು ಬೆಂಗಳೂರಿನ ಕೆ ಎಲ್ ಇ -ಎಸ್ ನಿಜಲಿಂಗಪ್ಪ ಕಾಲೇಜಿನಲ್ಲಿ ಅಧ್ಯಾಪಕ ವೃತ್ತಿಯನ್ನು ಆರಂಭಿಸಿದ ಇವರು ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಪ್ರಸ್ತುತ ಬೆಂಗಳೂರಿನ ವಿದ್ಯಾವನ ಪಿಯು ಮತ್ತು ಪದವಿ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.  ಅವಳೂ ಕತೆಯಾದಳು, ವ್ಯಭಿಚಾರಿ ಹೂವು, ಕಲ್ಲು ದೇವರು ದೇವರಲ್ಲ, ಗಾಂಧಿ ನೀ ನನ್ನ ಕೊಂದೆ  ಕೃತಿಗಳು ಪ್ರಕಟಣಾ ಹಂತದಲ್ಲಿವೆ. 

ಕೃತಿಗಳು : ನಿಬ್ಬೆರಗು

 

 

 

More About Author