Poem

ದಟ್ಟ ಕಾನನದಲ್ಲಿ

ದಟ್ಟ ಕಾನನದಲ್ಲಿ
ದೊಡ್ಡ ತಲೆಯ ಜೀವಿಯೊಂದು
ಚಲಿಸುತ್ತಿದೆ.
ಬೆಳಕಿಗೆ ಅಲ್ಲಿ ಬಹಿಷ್ಕಾರ
ಹಾಕಲಾಗಿದೆ.
ಅದು ಕತ್ತಲೆಯ ಸಾಮ್ರಾಜ್ಯ.
ದಿನ, ವಾರ, ತಿಂಗಳು, ವರ್ಷ,
ರಾಶಿ, ನಕ್ಷತ್ರ
ಈ ವಿಲಕ್ಷಣ ಜೀವಿಯ
ಖಾತೆಗೆ ಜಮೆಯಾಗುವುದಿಲ್ಲ.
ಯಾರು ತಂದು ಬಿಟ್ಟರೋ?
ತಾನೇ ಧುತ್ತೆಂದು ಬಿದ್ದಿತೋ?
ಯಾವ ಬೆಳಕಿಗೆ ಹಂಬಲಿಸಿ
ದಾಂಗುಡಿವಿಟ್ಟಿದೆಯೋ?
ಗೊತ್ತುಗುರಿಯಿಲ್ಲದ ಜಾಗದಲ್ಲಿ
ಮತ್ತೇರಿಸಿಕೊಂಡಂತೆ
ನಡೆಯುತ್ತಿದೆ.
ಗವ್ವೆನ್ನುವ ಕರಾಳ ಕತ್ತಲೆಯಲ್ಲಿ
ದೆವ್ವಗಾಳಿಯ ಸೀಳಿಕೊಂಡು
ಸಾಗುತ್ತಿದೆ.
ಕ್ರೂರಾತಿಕ್ರೂರ ವಿಷಜಂತುಗಳ
ಹಲ್ಲು,ದವಡೆ,ಉಗುರು,ಗೊರಸುಗಳ
ಭಯವಿಲ್ಲದೆ
ಅಭಯದ ಶಕುತಿ ಹೊಕ್ಕಿರುವಂತೆ
ಹೆಜ್ಜೆಹಾಕುತ್ತಿದೆ.
ಗಿಡಮರಬಳ್ಳಿ ಹೂಮುಳ್ಳು ಪೊದೆಗಳ
ಸಾಂಗತ್ಯದಲ್ಲಿ
ಕಾಲ ಸವೆಸುತ್ತಿದೆ.
ಕತ್ತಲೆಯ ಸಂಗಡ ಸಂಸರ್ಗದಲ್ಲಿ
ಬೆಳಕಿನ ಹುಟ್ಟಿಗೆ
ನಾಂದಿ ಹಾಡಬಹುದು;
ಕತ್ತಲೆಯಲ್ಲಿ ಪೂರ ಕರಗಿಹೋಗಿ
ದಟ್ಟ ಕಾನನ
ಇನ್ನೂ ದೀರ್ಘವಾಗಬಹುದು.

- ರೇವಣಸಿದ್ದಪ್ಪ ಜಿ.ಆರ್.

ರೇವಣಸಿದ್ದಪ್ಪ ಜಿ.ಆರ್.

ರೇವಣಸಿದ್ದಪ್ಪ ಜಿ.ಆರ್. ಅವರು ಮೂಲತಃ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ತಿಮ್ಲಾಪುರ ಗ್ರಾಮದವರು. ಎಂ.ಎ(ಇಂಗ್ಲಿಷ್). ಹಾಗೂ ಬಿ.ಇಡಿ. ವಿದ್ಯಾರ್ಹತೆಯನ್ನು ಹೊಂದಿರುವ ಅವರಿಗೆ ಕಾವ್ಯ ಕೃಷಿ, ಕಲೆ, ಸಾಹಿತ್ಯ, ಸಂಸ್ಕೃತಿ, ಚರ್ಚೆ, ಭಾಷಣ ಇತ್ಯಾದಿಗಳಲ್ಲಿ ಒಲವು. ಪ್ರಸ್ತುತ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೇಬೆನ್ನೂರು ಹೋಬಳಿ ಕೇಂದ್ರದಲ್ಲಿರುವ ಎಸ್ಜೆವಿಪಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಂಗ್ಲ ಭಾಷಾ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

More About Author