ಚಿನ್ನದ ನಾಡಲಿ ಕನ್ನಡ ಭಾಷೆಯು
ಹೊನ್ನಿನ ತೆರದಲಿ ಹೊಳೆಯುತಲಿರುವುದು
ಮಣ್ಣಿನ ಗಂಧವು ಸುತ್ತಲು ಸುಳಿಯಲು ತನುವನು ಮರೆಸುವುದು
ಕಣ್ಣಿಗೆ ತಂಪಿನ ಹಸಿರಿನ ಹೂಬನ
ಮನ್ನಣೆ ಗಳಿಸಿದೆ ಜಗದೆಲ್ಲೆಡೆಯಲಿ
ಬಣ್ಣಿಸಲರಿಯದ ನಲಿವನು ಹಂಚುತ ಮೆಲ್ಲಗೆ ಕಾಡುವುದು
ಹರಿಯುವ ನದಿಗಳ ಜುಳು ಜುಳು ನಾದವು
ಕರೆಯಿತು ಕಾಣದ ಲೋಕಕೆ ರಸಿಕರ
ಬಿರಿಯಿತು ಹೂವಿನ ತೆರದಲಿ ಭಾವವು ಬರೆಸುತ ಕವಿತೆಯನು
ಮರೆಯಲಿ ತೋರುವ ತರುಲತೆ ಸೊಬಗಲಿ
ಮರೆಯಿತು ಮನಸಿನ
ಬೇಸರವೆಲ್ಲವು
ಸರಿಸಿತು ಕವಿದಿಹ ಮಂಜಿನ ತೆರೆಯನು ಹಿಗ್ಗನು ತುಂಬುತಲಿ
ವೀರರು ಧೀರರು ಬದುಕಿದ ಮಣ್ಣಿದು
ಶೂರರು ಕಲಿಗಳು ಬಾಳಿದ ಬೀಡಿದು
ಸಾರುತ ಸಂಸ್ಕೃತಿ ಸೌರಭ ಸೂಸುತ ಲೋಕದಿ ಮೆರೆಯುತಿದೆ
ನಾರಿಯರೆಲ್ಲರು ಹರುಷದಿ ಹಾಡುತ
ಸೇರುವ ಪರಿಯದು ಖ್ಯಾತಿಯ ಹಬ್ಬಿಸಿ
ಮೇರೆಯ ಮೀರಿತು ಸುಂದರ ಸುಮಧುರ ಡಿಂಡಿಮ ಬಾರಿಸಲು
ಕಂದನ ತೊದಲಿನ ನುಡಿಯಿದು ತಿಳಿಯಿರಿ
ಗಂಧದ ಗುಡಿಯಲಿ ಮುತ್ತುತ ತಬ್ಬುತ
ಬಂಧವ ಬೆಸೆಯುತ ಮನುಜರ ಕೂಡಿಸಿ ಸಂತಸ ತರುತಿಹುದು
ಚಂದದ ಚೆಲುವಿನ ನಲಿವಿನ ನಂದನ
ಮಂದಿಯ ಗಮನವ ತನ್ನೆಡೆ ಸೆಳೆದಿದೆ
ಅಂದದ ನಾಡಿನ ಕೀರ್ತಿಯು ಬೆಳಗಲು ಹೆಮ್ಮೆಯು ಮೂಡುತಿದೆ
ರನ್ನನು ಪಂಪನು ಹೊಗಳುತ ಹಾಡಿದ
ಚೆನ್ನುಡಿ ನಮ್ಮಯ ತಾಯಿಯ ಭಾಷೆಯು
ಮುನ್ನುಡಿ ಬರೆದಿದೆ ಕವಿಗಳ ಕಲ್ಪನೆ ಖುಷಿಯನು ಹುಟ್ಟಿಸುತ
ಕನ್ನಡಿಯಂತೆಯೆ ಹೊಳೆಯುತ ಲಿರುವುದು
ಕಣ್ಣಲಿ ಕನಸನು ಮುದ್ರಿಸುತಿರುತಲಿ
ತಣ್ಣನೆ ಜೀವವ ಕುಣಿಸುತ ನನ್ನಯ ಚಿತ್ತವ ಜಗ್ಗುವುದು
-ಪಂಕಜಾ..ಕೆ. ಮುಡಿಪು
ಪಂಕಜಾ ರಾಮ ಭಟ್
ಬಂಟ್ವಾಳ ತಾಲೂಕು ಕುರ್ನಾಡು ಗ್ರಾಮದ ನಿವಾಸಿ ಪಂಕಜ ಕೆ ಮುಡಿಪು ಅವರು ಕೊಡಕ್ಕಲ್ಲು ವೆಂಕಟ್ರಮಣ ಭಟ್ ಮತ್ತು ಸಾವಿತ್ರಿ ದಂಪತಿಗಳ ಪುತ್ರಿ. ಅಂಚೆ ಇಲಾಖೆಯಲ್ಲಿ ಸುದೀರ್ಘ ಸೇವೆಯ ಬಳಿಕ ಅಸ್ಸಿಸ್ಟಂಟ್.ಪೋಸ್ಟ್ ಮಾಸ್ಟರ್ ಆಗಿ ಸ್ವಯಂ ನಿವೃತ್ತಿ ಪಡೆದಿರುವ ಇವರು ಇತಿಹಾಸದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಕಥೆ ಕವನಗಳನ್ನು ಅಲ್ಲದೆ ಇತ್ತೀಚಿಗೆ ಪ್ರವರ್ಧಮಾನಕ್ಕೆ ಬರುತ್ತಿರುವ ಜಪಾನಿ ಪ್ರಕಾರದ ಹಾಯ್ಕು, ಟಂಕಾ ಗಜಲ್ ,ಚುಟುಕು ,ಜಾನಪದ ಗೀತೆ ,ರುಬಾಯಿ, ಹನಿಕವನ ಚಿತ್ರಕವನ ,ಭಕ್ತಿಗೀತೆ,ಭಾವಗೀತೆ , ದೇಶಭಕ್ತಿಗೀತೆ, ನ್ಯಾನೊ ಕಥೆಗಳು ಸಣ್ಣ ಕಥೆಗಳು ಇತ್ಯಾದಿ ಹಲವು ಪ್ರಕಾರಗಳನ್ನು ಬರೆಯುವ ಹ್ಯಾಸವುಳ್ಳವರು. ತುಮಕೂರಿನಲ್ಲಿ ನಡೆದ ರಾಜ್ತಮಟ್ಟದ ಸಾಹಿತ್ಯ ಸಮ್ಮೇಳನದಲ್ಲಿ ಇವರ ಮೊದಲ ಕವನ ಸಂಕಲನ ‘ಸಾವಿತ್ರಿ’ಗೆ ಸಾಹಿತ್ಯ ಶರಭ ಪ್ರಶಸ್ತಿ ಲಭ್ಯವಾಗಿದೆ. ಕೃತಿ: ‘ಸಾವಿತ್ರಿ’ (ಕವನ ಸಂಕಲನ -2019)
More About Author