ಹುಳು ಹುಪ್ಪಟೆ
ಊರಗಗಳಿಂದಿಡಿದು
ಆನೆ ತಿಮಿಂಗಿಲದ ವರೆಗೂ,
ಪದವಿ ಕಸಿಯುವ ಹುಕಿ
ಯಾವ ಜೀವಿಗೂ ಇಲ್ಲ!
ಹಾಲಿ ಅರಸ ಸಿಂಹವೂ
ಬಳುವಳಿಯ ಪದವಿ ಸಾಬೀತಿಗೆ
ಪೌರುಷ ತೋರುತಿಲ್ಲ!
ಗರಿಕೆ, ತುಳಸಿ,
ಸಮಿಧಾದಿಗಳಿಂದಿಡಿದು
ಶ್ರೀಗಂಧದವರೆಗೆ,
ಇನ್ನೂ ದೊಡ್ಡ ದೇವರಾಗುವ ಆಸೆ
ಯಾವ ಸಸ್ಯಕೂ ಇಲ್ಲ!
ಅರಳಿ ಬೇವುಗಳಿಗೆ
ಇಹದ ಸತಿಪತಿ ಯೋಗ ಮೀರಿ
ಬೇರೇನೂ ಕೇಳಲು ತಿಳಿಯುತ್ತಿಲ್ಲ!
ಹಲ್ಲಿ ಲೋಚಗುಡುವ ಮುನ್ನ
ಆಡಿದವನ ಮಾತ
ಒಳ ಹೊರಗುಗಳ
ಅಳೆದು ತೂಗಿ ನೋಡುತ್ತಿಲ್ಲ!
ಬೆಕ್ಕು ಅಡ್ಡ ಹೋಗುವ ಮುನ್ನ
ರಾಹು, ಗುಳಿಕ, ಯಮಗಂಡ
ಕಾಲಗಳ ಆಯ್ದು
ಗುಡಾಚಾರಿಕೆ ಮಾಡುತ್ತಿಲ್ಲ!
ತನ್ನೊಡಲ ತುಂಬ
ದೇವರುಗಳನೆ ಹೊತ್ತ ಗೋಮಾತೆ,
ದ್ವೈತಾದ್ವೈತಗಳ ಬಗ್ಗೆ
ತಲೆಕೆಡಿಸಿಕೊಳ್ಳುತ್ತಿಲ್ಲ!
ಕಾಣಿಕೆ ಬಯಸಿ
ಪೂಜೆಗೆ ಮೊಗವೊಡ್ದುವ ಬಸವ
'ನನ್ನಂತೆ ನಿಮ್ಮ ಕೊರಳಿಗೂ ಹಗ್ಗ ಬರಲಿ'
ಎಂದೇಕೋ ಅಪ್ಪಣೆ ಕೊಡುತ್ತಿಲ್ಲ!
ಭಗೀರಥನ ಕೂಗಿಗೆ ದೇವಲೋಕದಿಂದಿಳಿದ ಗಂಗೆ,
'ಶವಗಳ ಜೊತೆ ಚಿಲ್ಲರೆ ಎಸೆಯುತ್ತಿದ್ದೀರಿ,
ನನಗೆ ಗರಿ ಗರಿ ನೋಟು ಬೇಕು'
ಎಂದೇಕೋ ಕೇಳುತ್ತಿಲ್ಲ!
ಪೂಜಾರಿಯೇ ದೇವರಾದಾಗಲೂ
ಸುಮ್ಮನಿರುವ ದೇವರು,
ತನ್ನ ಏಜೆಂಟರುಗಳನು ಚಂದ್ರ ಮಂಗಳಗಳಲೂ
ಸ್ಥಾಪಿಸಲು ಯೋಚಿಸುತ್ತಿಲ್ಲ!
ಕೊಲೆ, ಸುಲಿಗೆ, ಮೋಸ
ಹಾದರ, ಅವ್ಯವಹಾರ
ಮಾಡಿದವರೂ
ಸ್ನಾನ ಮಾಡಿ ಮಡಿಯುಟ್ಟು
ತಪ್ಪುಕಾಣಿಕೆ ನೀಡಬಂದರೆ,
ಇಷ್ಟು ಲಂಚ
ಸಾಲದು ಎನ್ನಲೂ
ದೇವರಿಗೆ ಗೊತ್ತಾಗುತ್ತಿಲ್ಲ!
ವಿ ಐ ಪಿ ಬಂದನೆಂದೆಡೆ
ಮಲಗಿದ್ದರೂ, ಮೈತುನದಲಿದ್ದರೂ
ದಿಗ್ಗನೆದ್ದು, ಸಿಂಗಾರಗೊಂಡು
ಬರುವ ಪರಮಾತ್ಮನಿಗೆ
'ಕನಕನಿಗೂ ಮೀರಿದವ ನೀ'
ಎಂದು ಬರೆದುಕೊಡಲಾಗುತ್ತಿಲ್ಲ!
ಧನಿಕರಿಗೆ ವಿಶೇಷ ದರುಷನವಷ್ಟೇ ಏಕೆ,
ಗರ್ಭಗುಡಿಯನೆ ಹರಾಜಿಗಿಡುತ್ತಿಲ್ಲ!
ಬಿಡಿ ಇವೆಲ್ಲ,
ರೋಧಿಸಿ ಪಲವಿಲ್ಲ.
ಮೃಗ ಖಗಗಳಿಗೂ ,
ಗಿಡ ಮರಗಳಿಗೂ,
ಕೊನೆಗೆ
ದೇವರು ದಿಂಡರುಗಳಿಗೂ,
ಮಹತ್ವಾಕಾಂಕ್ಷೆ
ಎಂಬುದೇ ಇಲ್ಲ!
-ನಟರಾಜ್. ಎಸ್. ಮೈಸೂರು
ನಟರಾಜ್. ಎಸ್
ಲೇಖಕ ನಟರಾಜ್. ಎಸ್ ಅವರು ಮೂಲತಃ ಹಾಸನ ಜಿಲ್ಲೆಯ ಬೇಲೂರಿನವರು. ಎಂ.ಎ(ಇಂಗ್ಲಿಷ್) ಮತ್ತು ಬಿ.ಎಡ್ ಪದವೀಧರರಾಗಿರುವ ಅವರು ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ರಾಂಕ್ ಮತ್ತು ಚಿನ್ನದ ಪದಕ ವಿಜೇತರು. ಸಾಹಿತ್ಯ, ಕಲೆ, ವಿಜ್ಞಾನ ಅವರ ಆಸಕ್ತಿಕರ ವಿಚಾರವಾಗಿದ್ದು ಕತೆ, ಕವನ, ಲೇಖನಗಳನ್ನು ಬರೆಯುವುದು ಅವರ ಹವ್ಯಾಸ. ಕನ್ನಡ ಮತ್ತು ಇಂಗ್ಲಿಷ್ ಅನುವಾದ ಕಾರ್ಯದಲ್ಲೂ ತೊಡಗಿಸಿಕೊಂಡಿರುವ ಅವರ ಕೆಲವು ಕವಿತೆಗಳು, ಕತೆಗಳು, ಬರಹಗಳು ವಿವಿಧ ಪತ್ರಿಕೆಗಳು ಹಾಗು ಅಂತರ್ಜಾಲ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪ್ರಸ್ತುತ ಮೈಸೂರಿನಲ್ಲಿ ಇಂಗ್ಲಿಷ್ ಭಾಷಾ ಉಪನ್ಯಾಸಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
More About Author