ಓದು, ಪ್ರವಾಸ ಮತ್ತು ಚಿತ್ರಕಲೆಯಲ್ಲಿ ಅಪಾರ ಆಸಕ್ತಿ ತಳೆದವರು ದಕ್ಷಿಣ ಕನ್ನಡದ ಕಿನ್ನಿಗೋಳಿಯ ಪ್ರಸಾದ್ ನಾಯ್ಕ್ ಅವರು. ಕನ್ನಡದ ಖ್ಯಾತ ಜಾಲತಾಣ 'ಅವಧಿ'ಯಲ್ಲಿ ಇವರು ಬರೆಯುತ್ತಿದ್ದ 'ಹಾಯ್ ಅಂಗೋಲಾ!' ಅಂಕಣವು ಓದುಗರಿಂದ ಅಪಾರ ಮೆಚ್ಚುಗೆ ಗಳಿಸಿದ್ದು ಈ ಕೃತಿಗೆ 2018ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರವಾಸ ಸಾಹಿತ್ಯ ಪುಸ್ತಕ ಬಹುಮಾನ ಸಂದಿದೆ. ಯೋನಿ ಛೇದನವೆಂಬ ಸಾಮಾಜಿಕ ಅನಿಷ್ಟದ ವಿರುದ್ಧ ದಿಟ್ಟವಾಗಿ ಹೋರಾಡುತ್ತಿರುವ ವಾರಿಸ್ ಡಿರೀ ಅವರ ‘Saving safa' ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದು, ಪ್ರಸಾದ್ ನಾಯ್ಕ್ ಅವರ ‘ಸೆಂಚುರಿ ಜುಟ್ಲಿಂಗನ ಖ್ಯಾತಿ’ ಕತೆ ಇಲ್ಲಿದೆ.
ಎದುರಿಗೆ ನಿಂತಿದ್ದ ನಾಲ್ವರು ಕಣ್ಣಲ್ಲೇ ಸಿಗಿದುಹಾಕುವಂತೆ ಜುಟ್ಲಿಂಗನನ್ನು ನೋಡುತ್ತಿದ್ದರೆ ಹೊಳೆಯುತ್ತಿದ್ದ ಮಾರ್ಬಲ್ ನೆಲದ ಮೇಲೆ ಕೈಮುಗಿದ ಭಂಗಿಯಲ್ಲಿ ಕೂತಿದ್ದ ಜುಟ್ಲಿಂಗ ಕೂತಲ್ಲೇ ಮತ್ತಷ್ಟು ಮುದುಡಿಹೋಗುತ್ತಿದ್ದ. ಅಂದಹಾಗೆ ಆ ಭವ್ಯಕೋಣೆಯಲ್ಲಿ ಜುಟ್ಲಿಂಗನ ಸಮ್ಮುಖದಲ್ಲಿ ಸಿನಿಮೀಯ ವಿಲನ್ ಗಳಂತೆ ನಿಂತಿದ್ದು ನಾಲ್ವರಷ್ಟೇ. ಮಟ್ಟಸವಾಗಿ ಸಮವಸ್ತ್ರವನ್ನು ತೊಟ್ಟು ನಿಂತಿದ್ದ ಆ ನಾಲ್ವರು ಪೈಲ್ವಾನರ ಕೈಗಳಲ್ಲಿ ಉದ್ದುದ್ದ ಬಂದೂಕುಗಳಿದ್ದವು. ಅವರೆಲ್ಲರ ಕಣ್ಣುಗಳಲ್ಲೂ ನಿಗಿನಿಗಿ ಕೆಂಡ. ಆದರೆ ಮೆತ್ತನೆಯ ದುಬಾರಿ ಸೋಫಾ ಒಂದರಲ್ಲಿ ಆಸೀನನಾಗಿ ಜುಟ್ಲಿಂಗನತ್ತಲೇ ನೋಡುತ್ತಿದ್ದ ವ್ಯಕ್ತಿ ಮಾತ್ರ ಶಾಂತವಾಗಿಯೇ ಇದ್ದ. ಆತನಿಗೆ ಕೋಪ ಬಂದಿಲ್ಲವೆಂದಲ್ಲ. ಆದರೆ ಅವನ ಕಣ್ಣುಗಳಲ್ಲಿ ಜುಟ್ಲಿಂಗನ ಬಗ್ಗೆ ಎಂಥದ್ದೋ ಒಂದು ಅನುಕಂಪವಿತ್ತು. ಎಲ್ಲದಕ್ಕಿಂತಲೂ ಮಿಗಿಲಾಗಿ ಒಟ್ಟಾರೆಯಾಗಿ ಈ ಒಂದು ಘಟನೆಯೇ ತಮಾಷೆಯೆಂಬಂತೆ ಕಂಡು ಅವನ ತುಟಿಗಳಲ್ಲಿ ಆಗಾಗ ಮಂದನಗೆಯನ್ನು ಹೊರಹೊಮ್ಮಿಸುತ್ತಿತ್ತು. ಆ ನಗೆಯನ್ನು ತುಟಿಯಲ್ಲೇ ಅದುಮಿಡಲು ಆತ ಅದೆಷ್ಟು ಕಷ್ಟಪಡುತ್ತಿದ್ದನೋ ಅವನಿಗೇ ಗೊತ್ತು. ಆತ ಇನ್ಯಾರೂ ಅಲ್ಲ. ಆತನ ಹೆಸರು ಸುಹಾಸ್. ಹೌದು, ಸಾಕ್ಷಾತ್ ಸುಹಾಸ್ ನಾಯಕ್. ಭಾರತೀಯ ಕ್ರಿಕೆಟ್ ತಂಡದ ಉಪಕಪ್ತಾನ. ಇನ್ನು ಸುಹಾಸನ ಹಿಂದೆ ನಿಂತಿದ್ದ ನಾಲ್ವರು ಬಂದೂಕುಧಾರಿ ಪೈಲ್ವಾನರು ಇನ್ಯಾರೂ ಅಲ್ಲ. ಆತನ ಅಂಗರಕ್ಷಕ ಪಡೆಯ ಸದಸ್ಯರು.
``ಯಾಕಪ್ಪಾ ಇಲ್ಲಿವರೆಗೆ ಬಂದೆ? ಇದೆಲ್ಲಾ ತಪ್ಪು ಅಂತ ಗೊತ್ತಿಲ್ವಾ ನಿಂಗೆ? ಜೈಲಿಗೆಲ್ಲಾ ಹೋದರೆ ಕಷ್ಟವಲ್ವೇನಪ್ಪಾ?'', ಸಾವಧಾನವಾಗಿಯೇ ಕಾಳಜಿಯ ದನಿಯಲ್ಲಿ ಸ್ಪಷ್ಟ ಕನ್ನಡದಲ್ಲಿ ಕೇಳಿದ ಸುಹಾಸ್. ಜುಟ್ಲಿಂಗ ಇನ್ನೂ ಸಣ್ಣಗೆ ಕಂಪಿಸುತ್ತಲೇ ಇದ್ದ. ಅವನ ಕಣ್ಣುಗಳು ಆ ಹೊಳಪಿನ ನೆಲದಲ್ಲಿ ಬಾವಿ ಕೊರೆಯುವಷ್ಟು ತೀಕ್ಷ್ಣವಾಗಿ ಪಶ್ಚಾತ್ತಾಪದಿಂದ ನೆಲವನ್ನೇ ದಿಟ್ಟಿಸುತ್ತಿದ್ದವು. ಆದರೆ ಏನು ನಡೆಯಿತು ಎಂದು ಸಂಪೂರ್ಣವಾಗಿ ಹೇಳದಿದ್ದರೆ ಜುಟ್ಲಿಂಗ ಅಲ್ಲಿಂದ ಹೊರಹೋಗುವಂತೆಯೂ ಇರಲಿಲ್ಲ. ಕೊನೆಗೂ ಅಳುಕಿನಿಂದಲೇ ಒಪ್ಪಿದ ಜುಟ್ಲಿಂಗ ಮೆಲ್ಲನೆ ಮಾತನಾಡಲಾರಂಭಿಸಿದ. ಸುಹಾಸನನ್ನು ಬಿಟ್ಟು ಉಳಿದವರಿಗೆ ಜುಟ್ಲಿಂಗನ ಬಗ್ಗೆ ಕಿಂಚಿತ್ತು ಆಸಕ್ತಿಯೂ ಇರಲಿಲ್ಲ ಎಂಬುದಂತೂ ಸತ್ಯ. ಈ ಹಳ್ಳಿಹೈದನನ್ನು ಒದ್ದೋಡಿಸಲು ಪೈಲ್ವಾನರಿಗೆ ಸುಹಾಸನ ಒಂದು ಅಪ್ಪಣೆಯಷ್ಟೇ ಸಾಕಿತ್ತು. ಅಭಿಮಾನಿಗಳು ಹೀಗೆಲ್ಲಾ ಕಪಿಚೇಷ್ಟೆ ಮಾಡುವುದು ಸುಹಾಸನಿಗೆ ಹೊಸ ವಿಷಯವೇನೂ ಅಲ್ಲ. ಆದರೆ ಜುಟ್ಲಿಂಗನ ಪ್ರಕರಣವೇ ಬೇರೆ ಎಂಬುದು ಅವನ ಅಭಿಪ್ರಾಯವಾಗಿತ್ತು. ಅದೇನೇ ಆಗಲಿ, ಇವತ್ತು ಇವನ ಕತೆಯನ್ನು ಕೇಳಿಯೇ ಮುಂದಿನ ಕೆಲಸ ಮಾಡೋಣ ಎಂದು ಮೆತ್ತನೆಯ ಆಸನದಲ್ಲಿ ಆರಾಮಾಗಿ ಮೈಚೆಲ್ಲಿ ಜುಟ್ಲಿಂಗನತ್ತಲೇ ಆಸಕ್ತಿಯಿಂದ ನೋಡುತ್ತಾ ಕುಳಿತ ಸುಹಾಸ್.
ಕಥೆಯು ಮೆಲ್ಲನೆ ಸುರುಳಿ ಬಿಚ್ಚಿಕೊಳ್ಳಲಾರಂಭಿಸಿತ್ತು.
*****
ಎಲ್ಲಿಯ ಜನಕಾಪುರದ ಏಳನೇ ತರಗತಿ ಫೇಲ್ ಜುಟ್ಲಿಂಗ, ಎಲ್ಲಿಯ ಭಾರತೀಯ ಕ್ರಿಕೆಟ್ ತಂಡದ ಉಪಕಪ್ತಾನ ಸುಹಾಸ್ ನಾಯಕ್ ಎಂದು ನೀವು ಕೇಳುತ್ತಿದ್ದೀರೋ? ಹೇಳಹೊರಟರೆ ಅದೇ ಒಂದು ದೊಡ್ಡ ಕಥೆ.
ಇದೆಲ್ಲಾ ಶುರುವಾಗಿದ್ದು ಆಕಾಶದೆತ್ತರಕ್ಕೆ ಚಿಮ್ಮಿದ ಸಿಕ್ಸರ್ ಒಂದರಿಂದ!
ಸುಹಾಸನ ಆ ಒಂದೇ ಒಂದು ಭರ್ಜರಿ ಹೊಡೆತವು ಜುಟ್ಲಿಂಗನ ಜಗತ್ತನ್ನೇ ಬುಡಮೇಲು ಮಾಡಿತ್ತು. ಹಾಗೆ ನೋಡಿದರೆ ಕ್ರಿಕೆಟ್ ಆಟಕ್ಕೂ, ಸುಹಾಸ್ ಕುಮಾರನಿಗೂ, ಜುಟ್ಲಿಂಗನಿಗೂ ಎತ್ತಣಿಂದೆತ್ತಣ ಸಂಬಂಧವೂ ಇಲ್ಲ. ಜುಟ್ಲಿಂಗನ ಚಡ್ಡಿದೋಸ್ತೂ, ಜನಕಾಪುರದಲ್ಲಿದ್ದ ಅಬ್ಬೇಪಾರಿಗಳಲ್ಲಿ ಕೊಂಚ ಶಾಣ್ಯಾನೂ ಆಗಿದ್ದ ಸುದಾಮ ಅವನನ್ನು ಒತ್ತಾಯಪೂರ್ವಕವಾಗಿ ಕ್ರಿಕೆಟ್ ಪಂದ್ಯವನ್ನು ನೋಡಲು ಬೆಂಗಳೂರಿನವರೆಗೆ ಎಳೆದುಕೊಂಡು ಬಂದಿದ್ದ. ಕ್ರಿಕೆಟ್ ಬೆಟ್ಟಿಂಗ್ ಗಳಲ್ಲಿ ಒಳ್ಳೇ ಕಾಸು ಮಾಡಬಹುದು ಎಂದು ಹಳ್ಳಿಯ ಸೇಂದಿ ಅಂಗಡಿಯಲ್ಲಿ ಯಾರೋ ಸುದಾಮನ ಕಿವಿ ಕಚ್ಚಿದ್ದರು. ಅದೇನು ಭೂತ ಹೊಕ್ಕಿಬಿಟ್ಟಿತೋ ಸುದಾಮನಿಗೆ! ಸೀದಾ ಭೂಗತ ದೊರೆ ದಾವೂದ್ ಇಬ್ರಾಹಿಂನ ಲೆವೆಲ್ಲಿಗೇ ಬೆಟ್ಟಿಂಗ್ ಮಾಡಬೇಕೆಂದು ಆತ ತೀರ್ಮಾನಿಸಿಯಾಗಿತ್ತು. ಆದರೆ ಸಮಸ್ಯೆಯೆಂದರೆ ಹೇಗೆ, ಎತ್ತ ಎಂಬ ಬಗ್ಗೆ ಯಾವ ಮಾಹಿತಿಯೂ ಅವನಲ್ಲಿರಲಿಲ್ಲ. ಹೀಗಾಗಿ ಯಾವುದಕ್ಕೂ ಒಮ್ಮೆ ಪಂದ್ಯವನ್ನು ಕಣ್ಣಾರೆ ನೋಡಿಬರೋಣ ಎಂದು ಅವನಿಗನ್ನಿಸಿತ್ತು. ಸುದಾಮನ ತೆವಲಿಗೆ ಜನಕಾಪುರದಿಂದ ರಾತ್ರಿ ಒಂಭತ್ತರ ಡಿಲಕ್ಸ್ ಬಸ್ಸು ಹಿಡಿದು ಮುಂಜಾನೆ ಬೆಂಗಳೂರಿಗೆ ತಲುಪಿ, ಪಂದ್ಯದ ಟಿಕೆಟ್ಟಿಗೆ ಪ್ರತ್ಯೇಕವಾಗಿ ಕಾಸು ಬಿಚ್ಚಲು ಹಳ್ಳಿಯಲ್ಲಿ ಯಾವ ಮೂರ್ಖ ತಾನೇ ಮುಂದೆ ಬಂದಾನು? ಆಗ ಸುದಾಮನಿಗೆ ಬಲಿಪಶುವಿನಂತೆ ಸಿಕ್ಕಿದ್ದೇ ತನ್ನ ಖಾಸಾ ಗೆಳೆಯ ಜುಟ್ಲಿಂಗ.
ಜುಟ್ಲಿಂಗನ ಅಸಲಿ ಹೆಸರೇನು ಎಂಬುದು ಸ್ವತಃ ಜುಟ್ಲಿಂಗನಿಗೇ ತಿಳಿದಿರಲಾರದೇನೋ. ಅದು ಲಿಂಗಣ್ಣ, ಲಿಂಗಪ್ಪ, ಲಿಂಗೇಶ... ಹೀಗೆ ಏನೋ ಒಂದು ಆಗಿರಬಹುದು. ಇರಲಿ. ಜನಕಾಪುರದ ಎಲ್ಲರಿಗೂ ಆತ ಜುಟ್ಲಿಂಗ. ಹೆಸರಿನೊಂದಿಗೆ ಸೇರಿಕೊಂಡಿರುವ ಜುಟ್ಟು ಅವನ ತಲೆಯ ಜುಟ್ಟಿನಿಂದ ಬಂದಿದ್ದು. ಸಿನೆಮಾ ಹೀರೋನಂತೆ ಕ್ರಾಪು ಹಾಕಿ ಮೆರೆಯುವ ವಯಸ್ಸಿನಲ್ಲೇ ಜುಟ್ಲಿಂಗನ ಕೂದಲುಗಳು ಉದುರಿ ತಲೆಯು ಬೋಳಾಗತೊಡಗಿತ್ತು. ನಂತರ ವಯಸ್ಸಿಗೆ ಬಂದ ಹುಡುಗನ ತಲೆ ಅಂದ ಮೇಲೆ ಅದಲ್ಲಿ ನಾಲ್ಕು ಕೂದಲು ಇರಲೇಬೇಕು ಎಂಬ ಹಟಕ್ಕೆ ಬಿದ್ದ ಜುಟ್ಲಿಂಗನ ಅಪ್ಪ ಶಂಕ್ರ ಮಗನ ತಲೆಯಲ್ಲಿ ಚಿಕ್ಕ ಜುಟ್ಟೊಂದನ್ನು ಉಳಿಸಿ ಮಿಕ್ಕ ಭಾಗವನ್ನು ಸಪಾಯಿ ಮಾಡಿಹಾಕಿಸಿದ್ದ. ಅಂದಿನಿಂದ ಆ ಕೇಶಶೈಲಿಯೇ ಜುಟ್ಲಿಂಗನಿಗೆ ಖಾಯಮ್ಮಾಯಿತು. ಶಾಲೆ ಅಂದ ಮೇಲೆ ಮಕ್ಕಳು ಒಬ್ಬರನ್ನೊಬ್ಬರು ಕಿಚಾಯಿಸುವುದು, ಗೋಳುಹೊಯ್ದುಕೊಳ್ಳುವುದು ಸಹಜವಲ್ಲವೇ? ಲೋಕಜ್ಞಾನದಲ್ಲಿ ಉಳಿದ ಮಕ್ಕಳಿಗಿಂತ ಕೊಂಚ ಹಿಂದಿದ್ದು ಥೇಟು ಸಾಧು ಹಸುವಿನಂತಿದ್ದ ಇವನನ್ನು ಎಲ್ಲರೂ ಚೆನ್ನಾಗಿಯೇ ತಮಗಿಷ್ಟಬಂದಂತೆ ಬಳಸಿಕೊಂಡರು. ಬೋಳುತಲೆಯು ವ್ಯಂಗ್ಯದ ವಸ್ತುವಾಗಿ ಬದಲಾದ ಪರಿಣಾಮವಾಗಿ `ಜುಟ್ಟು ಲಿಂಗ' ಪದವು `ಜುಟ್ಲಿಂಗ' ಆಗಿ ಅದೇ ಹೆಸರು ಖಾಯಮ್ಮಾಗಿ ಉಳಿದುಬಿಟ್ಟಿತ್ತು.
ಕ್ರಿಕೆಟ್ ಮ್ಯಾಚ್ ನೋಡಲು ತನ್ನೊಂದಿಗೆ ಬೆಂಗಳೂರಿಗೆ ಬರಲೇಬೇಕೆಂದು ರಚ್ಚೆ ಹಿಡಿದ ಸುದಾಮ ಕೊನೆಗೂ ಜುಟ್ಲಿಂಗನ ಬಾಯಿಯಿಂದ ಅಸ್ತು ಎಂದು ಹೇಳಿಸುವಲ್ಲಿ ಯಶಸ್ವಿಯಾಗಿದ್ದ. ಸುದಾಮ ಒಂದೆರಡು ಬಾರಿ ಬೆಂಗಳೂರಿಗೆ ಹೋಗಿದ್ದರೂ ಜುಟ್ಲಿಂಗ ಈವರೆಗೆ ಜನಕಾಪುರದಿಂದಾಚೆಗೆ ಕುತೂಹಲಕ್ಕೂ ತಲೆಹಾಕಿದವನಲ್ಲ. ಆದರೆ ಎರಡು ಸಿಗರೇಟು, ಹೋಟೇಲಿನಿಂದ ಕಟ್ಟಿಸಿಕೊಂಡು ಬಂದಿದ್ದ ಕೋಳಿ-ರೊಟ್ಟಿ ಮತ್ತು ಕಂಟ್ರಿ ಸಾರಾಯಿಯ ಲಂಚವು ಜುಟ್ಲಿಂಗನನ್ನು ಸಂತೃಪ್ತನನ್ನಾಗಿಸಿತ್ತು. ಇಬ್ಬರೂ ಕೊಂಚ ಕಾಸನ್ನು ಜೇಬಿಗೆ ತುರುಕಿಕೊಂಡು ರಾತ್ರಿಯ ಬಸ್ಸು ಹಿಡಿದು ಬೆಂಗಳೂರಿಗೆ ಹೊರಟೇಬಿಟ್ಟಿದ್ದರು. ರಾತ್ರಿಯ ಬಸ್ ಪ್ರಯಾಣವೆಂದರೆ ಜುಟ್ಲಿಂಗನಿಗೆ ಥೇಟು ಜೋಗುಳ ಹಾಡಿದಂತೆ. ಮುಂಜಾನೆ ಕಣ್ತೆರೆದರೆ ಇಬ್ಬರೂ ಬೆಂಗಳೂರು ಮಹಾನಗರಿಯ ಮಡಿಲಿನಲ್ಲಿದ್ದರು. ``ಅಬ್ಬಬ್ಬಾ... ಏನು ಮಹಾ ಇದೆ ಈ ಜಾಗ'', ಎಂದು ಕಣ್ಣರಳಿಸುತ್ತಾ ಬಾಯಿಬಾಯಿಬಿಟ್ಟಿದ್ದ ಜುಟ್ಲಿಂಗ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಂದು ಭಾರತ-ಶ್ರೀಲಂಕಾ ಏಕದಿನ ಪಂದ್ಯವು ನಡೆಯುತ್ತಲಿತ್ತು. ಪಂದ್ಯವನ್ನು ನೋಡಲು ಅಷ್ಟೇನೂ ಜನಜಂಗುಳಿಯಿರದಿದ್ದ ಕ್ರೀಡಾಂಗಣದಲ್ಲಿ ಬಂದಿದ್ದ ಬೆರಳೆಣಿಕೆಯ ಜನರ ಮಧ್ಯೆ ಇವರಿಬ್ಬರು ಕುಳಿತುಕೊಂಡಿದ್ದೂ ಆಯಿತು. ದೂರದಲ್ಲಿ ಇರುವೆಗಳಂತೆ ಕಾಣುತ್ತಿದ್ದ ಆಟಗಾರರನ್ನು ಕಂಡು ಭ್ರಮನಿರಸನಗೊಂಡ ಜುಟ್ಲಿಂಗ ಇದನ್ನು ನೋಡಲು ಇಲ್ಲಿವರೆಗೂ ಬಂದಿದ್ದಾ ನಾವು ಎಂದು ಸುದಾಮನನ್ನು ಗೋಳುಹೊಯ್ದುಕೊಂಡ. ತನಗೂ ಒಳಗೊಳಗೇ ನಿರಾಶೆಯಾಗಿದ್ದರೂ ತೋರಗೊಡದ ಸುದಾಮ ``ಇಷ್ಟು ಫೇಮಸ್ ಆಟಗಾರರು ಅಂದ್ರೆ ಸುಮ್ನೇನಯ್ಯಾ? ನಾವು ದೂರದಿಂದಲೇ ಇವರ ಆಟವನ್ನು ನೋಡಬೇಕು'' ಎಂದು ತನಗೆ ಗೊತ್ತಿದ್ದಷ್ಟು ತಿಪ್ಪೆಸಾರಿಸಿ ಜುಟ್ಲಿಂಗನ ಬಾಯಿಯನ್ನು ಮುಚ್ಚಿಸಿದ. ಅಂತೂ ಬಂದ ತಪ್ಪಿಗೆ ನೋಡಿ ಹೋದರಾಯಿತು ಎಂದು ಇಬ್ಬರೂ ತೆಪ್ಪಗೆ ಕುಳಿತುಕೊಂಡು ನಿರಾಸಕ್ತಿಯಿಂದಲೇ ಪಂದ್ಯವನ್ನು ನೋಡಲಾರಂಭಿಸಿದ್ದರು. ಕ್ರೀಡಾಂಗಣದ ಮತ್ತೊಂದು ಬದಿಯಲ್ಲಿ ಆ ದೈತ್ಯ ಪರದೆಯೊಂದನ್ನು ಹಾಕಿರದಿದ್ದರೆ ಇಬ್ಬರೂ ಕೂತಲ್ಲೇ ನಿದ್ದೆಹೋಗುತ್ತಿದ್ದರೋ ಏನೋ!
ಆದರೆ ಪಂದ್ಯದ ದ್ವಿತೀಯಾರ್ಧದಲ್ಲಿ ಚಿತ್ರಣವು ಕೊಂಚ ವಾಸಿ ಎಂಬಂತಾಗಿದ್ದಂತೂ ಸತ್ಯ. ಶ್ರೀಲಂಕಾದ ಮುನ್ನೂರಿಪ್ಪತ್ತು ರನ್ನುಗಳ ಗುರಿಯ ಬೆನ್ನಟ್ಟಿದ ಭಾರತ ಆರಂಭದಲ್ಲಿ ಎಡವಿದ್ದು ಹೌದಾದರೂ ಮೂರನೇ ವಿಕೆಟ್ಟಿನ ಆಟಕ್ಕೆ ಉಪಕಪ್ತಾನ ಸುಹಾಸ್ ಕುಮಾರ್ ಮತ್ತು ಆಲ್ರೌಂಡರ್ ಭೂಪೇನ್ ಸಿಂಗ್ ಉತ್ತಮವಾಗಿ ರನ್ ಕಲೆಹಾಕತೊಡಗಿದ್ದರು. ನೋಡನೋಡುತ್ತಲೇ ನೂರೈವತ್ತು ರನ್ನುಗಳು ಇವರಿಬ್ಬರ ಜೊತೆಯಾಟದಿಂದಲೇ ಹರಿದುಬಂದಿದ್ದವು. ಸುಹಾಸ್ ತೊಂಭತ್ತನಾಲ್ಕರ ಗಡಿಯಲ್ಲಿ ನಿಂತು ಎದೆಯುಬ್ಬಿಸಿ ಶತಕದ ಕದವನ್ನು ತಟ್ಟುತ್ತಿದ್ದ. ಸಂಜೆಯಾದಂತೆ ಸೂರ್ಯನೂ ತನ್ನ ಪಾಳಿಯನ್ನು ಮುಗಿಸಿದ ಪರಿಣಾಮವಾಗಿ ಬಿಸಿಲಿನ ಝಳದಿಂದ ಪಾರಾದ ಹುಮ್ಮಸ್ಸಿನಲ್ಲಿದ್ದ ವೀಕ್ಷಕರು ಮತ್ತಷ್ಟು ಉತ್ಸಾಹದಲ್ಲಿ ಭಾರತ ತಂಡವನ್ನು ಹುರಿದುಂಬಿಸುತ್ತಿದ್ದರು.
ಭಾರತ-ಶ್ರೀಲಂಕಾ ಕ್ರಿಕೆಟ್ ಪಂದ್ಯವೇನೋ ಸರಿ. ಆದರೆ ಬೆಂಗಳೂರಿನಲ್ಲಿ ತಮ್ಮದೇ ಒಂದು ದೊಡ್ಡ ಡ್ರಾಮಾ ಆಗಿಬಿಡುತ್ತೆ ಎಂದು ಸುದಾಮನಾಗಲಿ ಜುಟ್ಲಿಂಗನಾಗಲೀ ಕನಸುಮನಸಲ್ಲೂ ಯೋಚಿಸಿದ್ದಿರಲಿಕ್ಕಿಲ್ಲ. ಆ ದಿನ ಬೆಳ್ಳಂಬೆಳಗ್ಗೆ ಜುಟ್ಲಿಂಗ ಯಾರ ಮುಖ ನೋಡಿದ್ದನೋ ಏನೋ! ಸುಹಾಸ್ ನಾಯಕ್ ಹೊಡೆದ ಭರ್ಜರಿ ಸಿಕ್ಸರ್ ಹೊಡೆತವೊಂದು ನೇರವಾಗಿ ತನ್ನ ಪಾಡಿಗೆ ಕುಳಿತು ತೂಕಡಿಸುತ್ತಿದ್ದ ಜುಟ್ಲಿಂಗನ ಮೂಗಿಗೇ ಬಡಿದಿತ್ತು. ಕಲ್ಲಿನಂತಿದ್ದ ಚೆಂಡು ಬಡಿದಿದ್ದೇ ತಡ ಕಣ್ಣು ಪೂರಾ ಕತ್ತಲಾದಂತಾಗಿ ಗೋಣಿಚೀಲದಂತೆ ಧೊಪ್ಪನೆ ನೆಲಕ್ಕೆ ಬಿದ್ದಿದ್ದ ಜುಟ್ಲಿಂಗ. ಆ ದಿನದ ಅವನ ಕೊನೆಯ ನೆನಪೆಂದರೆ ಅದೊಂದೇ. ಆಗಸದಿಂದ ಉದುರಿದ ಕಬ್ಬಿಣದಂತಿದ್ದ ಗೋಲವೊಂದು ಅವನ ಮೂಗಿಗಪ್ಪಳಿಸಿದ್ದು! ಗಾಜಿನ ಕೋಣೆಯಲ್ಲಿ ಕುಳಿತಿದ್ದ ವೀಕ್ಷಕ ವಿವರಣೆಕಾರನಿಂದ ಶ್ಲಾಘನೆಗೊಳಗಾದ ಆ ಭರ್ಜರಿ ಸಿಕ್ಸರ್ ಮೂಲಕವಾಗಿ ಸುಹಾಸನ ಸ್ಕೋರ್ ನೂರಾಗಿತ್ತು. ಆದರೆ ಇತ್ತ ಅಮಾಯಕ ಜುಟ್ಲಿಂಗನ ಮೂಗು ಮಾತ್ರ ಚೂರಾಗಿತ್ತು.
******
ಕೊನೆಗೂ ಜುಟ್ಲಿಂಗ ಕಣ್ತೆರೆದಾಗ ಅವನ ಸುತ್ತಲೂ ದೊಡ್ಡ ಜನಜಂಗುಳಿ. ಪ್ರಯಾಸದಿಂದ ಕಣ್ತೆರೆದು ತಾನೆಲ್ಲಿದ್ದೇನೆ, ಏನಾಗುತ್ತಿದೆ ಎಂಬುದನ್ನು ಅರಿತುಕೊಳ್ಳಲು ಪ್ರಯತ್ನಿಸಿದರೆ ಸುತ್ತಲೂ ಜನರ ಸದ್ದು, ಕಣ್ಣಿಗೆ ರಾಚುವ ಕ್ಯಾಮೆರಾಗಳ ಬೆಳಕು, ಎಲ್ಲರೂ ಏನನ್ನೋ ಒಂದೇ ಬಾರಿಗೆ ಕೇಳುತ್ತಿರುವಂತೆ ಪ್ರಶ್ನೆಗಳ ಹಾವಳಿ, ಭಯಂಕರ ನೂಕುನುಗ್ಗಲು. ಇದೇನಿದು, ಒಳ್ಳೆ ಜಾತ್ರೆಯಲ್ಲಿ ಬಂದು ಮಲಗಿದಂತಾಯಿತಲ್ಲಾ ಎಂದು ಗಾಬರಿಯಿಂದ ಏಳಲು ಪ್ರಯತ್ನಿಸಿದರೆ ನೀಲಿ ಟೋಪಿಧಾರಿ ತರುಣನೊಬ್ಬ ``ಆರಾಮ... ಮೆಲ್ಲಗೆ... ನೀವು ಮಲಗಿಕೊಂಡೇ ಇರಿ... ಆ ಕ್ಯಾಮೆರಾಗಳತ್ತ ನೋಡಿ'', ಎನ್ನುತ್ತಾ ಹೂಗುಚ್ಛವೊಂದನ್ನು ಜುಟ್ಲಿಂಗನಿಗೆ ನೀಡುತ್ತಿದ್ದ. ತಕ್ಷಣ ಎಡಕಿವಿಯ ಪಕ್ಕದಲ್ಲೊಂದು ದನಿಯು ``ಈತ ಸುಹಾಸ್ ಕುಮಾರ್ ಕಣ್ಲಾ'' ಎಂದು ಉತ್ಸಾಹದಿಂದ ಉಸುರಿದಂತಾಯಿತು. ಯಾರೆಂದು ನೋಡಿದರೆ ಸುದಾಮ. ತಲೆಯಿನ್ನೂ ನೋವಿನಿಂದ ಭಾರವಾಗಿದ್ದರೂ ತಕ್ಷಣ ಜುಟ್ಲಿಂಗನ ನೆನಪೆಲ್ಲವೂ ಮರಳಿಬಂದಿತ್ತು. ಸುದಾಮನ ಮುಖದಲ್ಲಂತೂ ಲಕ್ಷದೀಪೋತ್ಸವ! ಭಾರತೀಯ ಕ್ರಿಕೆಟ್ ತಂಡದ ಉಪಕಪ್ತಾನ ಸುಹಾಸ್ ಕುಮಾರ್ ತನ್ನ ಬ್ಯಾಟಿಂಗಿನಿಂದ ಆಕಸ್ಮಿಕವಾಗಿ ಗಾಯಾಳುವಾಗಿದ್ದ ಜುಟ್ಲಿಂಗನನ್ನು ನೋಡಲು ಖುದ್ದಾಗಿ ಆಸ್ಪತ್ರೆಗೆ ಬಂದಿದ್ದ. ಜುಟ್ಲಿಂಗ ಮಲಗಿರುವಂತೆಯೇ ಅಸಂಖ್ಯಾತ ಕ್ಯಾಮೆರಾಗಳು ಸುಹಾಸ್ ಮತ್ತು ಜುಟ್ಲಿಂಗನ ಚಿತ್ರವನ್ನು ಸೆರೆಹಿಡಿದವು. ಇಬ್ಬರ ಚಿತ್ರವೂ ಮರುದಿನದ ಬಹುತೇಕ ಎಲ್ಲಾ ಪತ್ರಿಕೆಗಳಲ್ಲೂ ಮುಖಪುಟದಲ್ಲಿ ರಾರಾಜಿಸಿದವು. ಪತ್ರಿಕೆಗಳು ಜುಟ್ಲಿಂಗನನ್ನು `ಸೆಂಚುರಿ ಜುಟ್ಲಿಂಗ' ಎಂದು ಕರೆದವು. ಜುಟ್ಲಿಂಗ ರಾತ್ರೋರಾತ್ರಿ `ಸ್ಟಾರ್' ಆಗಿಬಿಟ್ಟಿದ್ದ.
ನಂತರ ಬೆಂಗಳೂರಿನಿಂದ ಜನಕಾಪುರಕ್ಕೆ ಮರಳಿದ ಜುಟ್ಲಿಂಗ-ಸುದಾಮನ ಜೋಡಿಗೂ ಊರಿನಲ್ಲಿ ಭವ್ಯ ಸ್ವಾಗತವೇ ದೊರೆಯಿತು. ರಾಷ್ಟ್ರೀಯ ಕ್ರಿಕೆಟ್ ತಂಡದ ಉಪಕಪ್ತಾನನೇ ನಮ್ಮ ಜುಟ್ಲಿಂಗನನ್ನು ಕಾಣಲು ಬರುವುದೆಂದರೇನು? ಎಲ್ಲರ ಬಾಯಲ್ಲೂ ಇದೇ ಗುಲ್ಲು. ಜನಕಾಪುರದಲ್ಲೂ ಕೆಲ ಹಿರಿ, ಕಿರಿ, ಕಿರಿಕಿರಿ ಪತ್ರಕರ್ತರ ದಂಡು ತಮ್ಮ ತಮ್ಮ ಪ್ರಶ್ನೆಗಳೊಂದಿಗೆ ತಯಾರಾಗಿ ಕೂತಿತ್ತು. ಒಬ್ಬನಂತೂ ``ಹೇಗನ್ನಿಸುತ್ತಿದೆ ಸಾರ್?'' ಎಂದು ಕೇಳಿದ. ``ಈ ಮನೆಹಾಳನಿಂದ ಮೂಗು ಮುರ್ದೋಯ್ತು. ನೋಯ್ತಿದೆ ಕಣಣ್ಣೋ'' ಎಂದು ಅಸಮಾಧಾನದಿಂದ ಮುಖಕಿವುಚುತ್ತಾ ಉತ್ತರಿಸಿದ ಜುಟ್ಲಿಂಗ. ಎಲ್ಲರೂ ಗೊಳ್ಳನೆ ನಕ್ಕರು. ಸುಹಾಸ್ ಕುಮಾರನ ಬಗಲಿನಲ್ಲಿ ಮೂಗಿಗೆ ಬ್ಯಾಂಡೇಜು ಸುತ್ತಿಕೊಂಡು ಒತ್ತಾಯದ ನಗೆಬೀರುತ್ತಿದ್ದ ಪತ್ರಿಕೆಯ ಚಿತ್ರಗಳಲ್ಲಿ ಜುಟ್ಲಿಂಗ ಶುದ್ಧಪೆಕರನಂತೆ ಕಾಣುತ್ತಿದ್ದ. ನೋಡಿ ನಗುವವರು ಚೆನ್ನಾಗಿಯೇ ನಕ್ಕರು. ಆದರೂ ಅದೃಷ್ಟ ಮಾರಾಯ ಎಂದು ಒಳಗೊಳಗೇ ಸೆಂಚುರಿ ಜುಟ್ಲಿಂಗನ ಬಗ್ಗೆ ಹೊಟ್ಟೆಕಿಚ್ಚುಪಟ್ಟುಕೊಂಡರು. ಇನ್ನು ಇವೆಲ್ಲದರ ಸೂತ್ರಧಾರನು ನಾನೇ ಎಂದು ಸುದಾಮನೂ ಕೂಡ ಊರೆಲ್ಲಾ ಟಾಂಟಾಂ ಮಾಡುತ್ತಾ ಜುಟ್ಲಿಂಗನ ಹೆಸರಿನಲ್ಲಿ ಕುಣಿದಾಡಿದ್ದಾಯಿತು. ಜುಟ್ಲಿಂಗನಿಗೆ ತನ್ನ ಖ್ಯಾತಿಯು ಅದೆಷ್ಟು ಅರಿವಾಯಿತೋ ಬಿಟ್ಟಿತೋ, ಆದರೆ ಜನಕಾಪುರದಲ್ಲಂತೂ ಅವನಿಗೊಂದು `ಸೆಲೆಬ್ರಿಟಿ' ಪಟ್ಟವು ದೊರಕಿಯಾಗಿತ್ತು.
******
ಸೆಂಚುರಿ ಜುಟ್ಲಿಂಗನ ಹೊರತು ಈ ಘಟನೆಯಿಂದ ಸಂಪೂರ್ಣ ಲಾಭವಾಗಿದ್ದು ಮಾತ್ರ ಸುದಾಮನಿಗೆ. ಈ ಅಪರೂಪದ ಕ್ರಿಕೆಟ್ ಪ್ರಕರಣವು ನಡೆದ ನಂತರ ಸೆಂಚುರಿ ಜುಟ್ಲಿಂಗನನ್ನು ಎಲ್ಲರೂ ಹೊಗಳಿ ಹೊಗಳಿ ಅಟ್ಟಕ್ಕೇರಿಸಿದ್ದೇ! ಊರಿನ ಹಲವು ಕಾರ್ಯಕ್ರಮಗಳಿಗೆ ಅವನನ್ನು ಮುಖ್ಯ ಅತಿಥಿಯಾಗಿ ಕರೆಸಲಾಯಿತು. ಶೆಟ್ಟರ ಅಂಗಡಿಯಲ್ಲಿ ಅವನಿಗೊಂದು ವಿಶೇಷ ಕುರ್ಚಿ. ಭಂಡಾರಿಯವರ ಸಲೂನಿನಲ್ಲಿ ಅದೆಷ್ಟು ದೊಡ್ಡ ಕ್ಯೂ ಇದ್ದರೂ ಸೆಂಚುರಿ ಜುಟ್ಲಿಂಗನಿಗೆ ಮಾತ್ರ ಬಂದ ಕೂಡಲೇ ಕ್ಷೌರ ಮಾಡಿಸುತ್ತಾ ಭಂಡಾರಿಯವರು ತಮ್ಮದೇ ಆದ ರೀತಿಯಲ್ಲಿ ಅವನನ್ನು ಬುಟ್ಟಿಗೆ ಹಾಕಿಕೊಂಡಿದ್ದರು. ಮೂವತ್ತು ದಾಟಿದ ಜುಟ್ಲಿಂಗನೆಂದರೆ ಇದುವರೆಗೂ ಮೂಗು ಮುರಿಯುತ್ತಿದ್ದ ಕನ್ಯಾಪಿತೃಗಳು ಈ ಬಾರಿ ಅವನ ಮನೆಯ ಮುಂದೆ ನೆಂಟಸ್ತಿಕೆಗಾಗಿ ಕಾವಲು ಕಾಯಬೇಕಾಯಿತು. ಹೀಗೆ ಒಬ್ಬೊಬ್ಬರದ್ದೂ ಒಂದೊಂದು ವರಸೆ. ಎಲ್ಲರೂ ಗೆದ್ದೆತ್ತಿನ ಬಾಲ ಹಿಡಿಯುವವರೇ! ಅಂತೂ ಈ ನೆಪದಲ್ಲಿ ಸೆಂಚುರಿ ಜುಟ್ಲಿಂಗನ ಲಗ್ನವು ಗುತ್ತಿಗೆದಾರ ಸದಾಶಿವ ಗಾಣಿಗರ ಪುತ್ರಿಯಾದ ಮಾಧವಿಯೊಂದಿಗೆ ಸಾಂಗವಾಗಿ ನೆರವೇರಿತು. ಜುಟ್ಲಿಂಗನಿಗೆ ಅವಳು ಮುದ್ದಿನ ಮಾದು. ಕೊನೆಗೂ ಜೀವನವು ಒಂದು ಹದಕ್ಕೆ ಬಂದೇಬಿಟ್ಟಿತು ಎಂಬ ಭಾವ ಜುಟ್ಲಿಂಗನಿಗೆ.
ಆದರೆ ಸೆಂಚುರಿ ಜುಟ್ಲಿಂಗನಾಚೆಗೂ ಜನಕಾಪುರದಲ್ಲಿ ತ್ವರಿತ ಬೆಳವಣಿಗೆಗಳು ನಡೆಯುತ್ತಿದ್ದವು. ಗ್ರಾಮಪಂಚಾಯ್ತಿ ಚುನಾವಣೆಯ ಸಮಯವು ಮತ್ತೆ ಎದುರಾಗಿತ್ತು. ಜನಕಾಪುರದ ಪುಡಿ ಪಕ್ಷಗಳು ಮತ್ತೆ ರಾಜಕೀಯದಾಟದಲ್ಲಿ ವ್ಯಸ್ತವಾಗಿದ್ದವು. ಸ್ಥಳೀಯ ಜನಸತ್ತಾ ಪಕ್ಷದ ಪ್ರದೇಶ ಕಾರ್ಯದರ್ಶಿಯಾಗಿದ್ದ ಕೇಶಪ್ಪ ತಾನು ಯಾವ ಅಭ್ಯರ್ಥಿಯನ್ನು ನಿಲ್ಲಿಸಿದರೆ ಈ ಬಾರಿ ಚುನಾವಣೆ ಗೆಲ್ಲಬಹುದು ಎಂದು ಜನಪ್ರಿಯತೆಯ ಆಧಾರದಲ್ಲಿ ಯೋಚಿಸತೊಡಗಿದರೆ ಸೆಂಚುರಿ ಜುಟ್ಲಿಂಗನ ಹೆಸರು ಥಟ್ಟನೆ ಹೊಳೆದಿತ್ತು. ಸೆಂಚುರಿ ಜುಟ್ಲಿಂಗನನ್ನು ಒಳಕ್ಕೆಳೆದುಕೊಂಡಿದ್ದೇ ಆದರೆ ಜಾತಿ ಸಮೀಕರಣವೂ ಬಹುತೇಕ ಎಲ್ಲಾ ರೀತಿಯಲ್ಲೂ ಸರಿದೂಗುವ ಸಂಭವಗಳಿದ್ದವು. ಕೂಡಲೇ ಸೆಂಚುರಿ ಜುಟ್ಲಿಂಗನ ಬಾಲದಂತಿದ್ದ ಸುದಾಮನನ್ನು ತನ್ನ ಮನೆಗೆ ಸಂಜೆಯ ಗುಂಡುಪಾರ್ಟಿಗೆ ಕರೆಸಿಕೊಂಡ ಕೇಶಪ್ಪ ಈ ವಿಷಯವನ್ನು ಮೆಲ್ಲಗೆ ಪ್ರಸ್ತಾಪಿಸಿದ್ದ. ಸ್ವಭಾವತಃ ಶಾಣ್ಯಾ ಆಗಿದ್ದ ಸುದಾಮನ ಕನಸು ಕಂಗಳಲ್ಲೀಗ ಭಾರದ ಹಣದ ಥೈಲಿಗಳೇ. ಜುಟ್ಲಿಂಗನನ್ನು ಸಿಂಹಾಸನದ ಮೇಲೆ ಕೂರಿಸಿ ಅವನ ಹೆಸರಿನಲ್ಲಿ ತಾನೇ ಆಡಳಿತ ಮಾಡಬಹುದಲ್ವಾ ಎಂದು ಅಂದುಕೊಂಡು ಒಳಗೊಳಗೇ ಖುಷಿಯೂ, ಜೊತೆಗೇ ತನ್ನ ಬುದ್ಧಿವಂತಿಕೆಯ ಬಗ್ಗೆ ಹೆಮ್ಮೆಯೂ ಆಯಿತು. ``ನೀವೇನೂ ಚಿಂತೆ ಮಾಡ್ಬೇಡ್ರೀ ಧಣೀ... ಜುಟ್ಲಿಂಗನನ್ನು ಒಪ್ಪಿಸುವ ಜವಾಬ್ದಾರಿ ನನ್ನದು'', ಎಂದ ಸುದಾಮ ಉತ್ಸಾಹದಿಂದಲೇ ಕೇಶಪ್ಪನ ಮನೆಯಿಂದ ಹೊರಬಿದ್ದಿದ್ದ. ಅಲ್ಲಿಂದ ಸೀದಾ ಜನಕಾಪುರದ ಅಂಚಿನಲ್ಲಿದ್ದ ಬಾರಿಗೆ ಹೋದ ಸುದಾಮ ನಂತರ ಗೂಟ ಹೂಡಿದ್ದು ಜುಟ್ಲಿಂಗನ ಮನೆಯಲ್ಲಿ. ಈ ಬಾರಿಯೂ ಸುದಾಮನ ಕೈಯಲ್ಲಿ ಕಂಟ್ರಿ ಸಾರಾಯಿ, ಕ್ಯಾಂಟೀನಿನ ಕೋಳಿ-ರೊಟ್ಟಿ ಮತ್ತು ಸಿಗರೇಟಿನ ಪ್ಯಾಕೊಂದಿತ್ತು. ಸೆಂಚುರಿ ಜುಟ್ಲಿಂಗ ಸುದಾಮನ ಖೆಡ್ಡಾದೊಳಕ್ಕೆ ಬಿದ್ದಾಗಿತ್ತು.
******
ಕೇಶಪ್ಪನ ಸಂಘಟನಾ ಚಾತುರ್ಯವೋ, ಜನಸತ್ತಾ ಪಕ್ಷದ ಹೈಕಮಾಂಡ್ ಜನಕಾಪುರಕ್ಕೆ ದರ್ಶನವಿತ್ತ ಸೌಭಾಗ್ಯವೋ, ಸೆಂಚುರಿ ಜುಟ್ಲಿಂಗನ ಜನಪ್ರಿಯತೆಯೋ... ಅಂತೂ ಜನಸತ್ತಾದ `ಬೆಂಕಿಕಡ್ಡಿ' ಚಿಹ್ನೆಯಡಿಯಲ್ಲಿ ಚುನಾವಣಾ ಕಣಕ್ಕಿಳಿದಿದ್ದ ಸೆಂಚುರಿ ಜುಟ್ಲಿಂಗ ಗೆದ್ದುಬಂದಿದ್ದ. ``ನಾವು ಭಾರತದ ಭವಿಷ್ಯವಾದ ಯುವಶಕ್ತಿಯನ್ನು ನಂಬಿದ್ದೇವೆ. ಸೆಂಚುರಿ ಜುಟ್ಲಿಂಗನಂತಹ ಯುವಕರಿಂದಲೇ ದೇಶ ಉದ್ಧಾರವಾಗೋದು ಸಾಧ್ಯ'', ಎಂಬ ದಾಳವನ್ನೆಸೆದು ಆಟವಾಡಿದ್ದ ಪಕ್ಷವು ಸೆಂಚುರಿ ಜುಟ್ಲಿಂಗನ ಜನಪ್ರಿಯತೆಯ ತೂಕದಿಂದಾಗಿ ಸುಲಭವಾಗಿ ಗೆದ್ದಿತ್ತು. ಜನಪ್ರತಿನಿಧಿಯಾದ ನಂತರ ನೀನು ಹೀಗೆಲ್ಲಾ ಅಂಗಡಿಯಲ್ಲಿ ಕುಳಿತುಕೊಳ್ಳಬಾರದು ಎಂದು ಬುದ್ಧಿವಾದ ಹೇಳಿದ ಸುದಾಮನ ಮಾತಿನಿಂದಾಗಿ ಜುಟ್ಲಿಂಗನ ಮನೆಯ ಮಹಾಲಕ್ಷ್ಮಿ ಮಾದು ಹೊರಬಂದು ಹೊಟ್ಟೆಪಾಡಿನ ಏಕೈಕ ಮೂಲವಾಗಿದ್ದ ಬೀಡದಂಗಡಿಯನ್ನು ಸಂಭಾಳಿಸತೊಡಗಿದ್ದಳು.
`ಬೆಂಕಿಕಡ್ಡಿ' ಪಕ್ಷದವರು ಅದೆಷ್ಟು ಹಣತೆ ಹಚ್ಚಿದರೋ ಅಥವಾ ಕೊಳ್ಳಿಯಿಟ್ಟರೋ ದೇವರೇ ಬಲ್ಲ. ಆದರೆ ಜನಕಾಪುರವೇನೂ ರಾತ್ರೋರಾತ್ರಿ ಸಿಂಗಾಪುರವಾಗಲಿಲ್ಲ. ಜನಕಾಪುರವನ್ನು ಸಿಂಗಾಪುರ ಮಾಡೋ ಉಮೇದೂ ಯಾರಿಗೂ ಇರಲಿಲ್ಲ. ಸುದಾಮ, ಸದಾಶಿವ ಗಾಣಿಗ ಮತ್ತು ಕೇಶಪ್ಪನನ್ನೂ ಸೇರಿದಂತೆ ಸೆಂಚುರಿ ಜುಟ್ಲಿಂಗನನ್ನು ಎದುರಿಗಿಟ್ಟುಕೊಂಡು ತೆರೆಮರೆಯಲ್ಲಿ ಲಾಭದ ಕೆಲಸ ಮಾಡುವವರ ಪಡೆಗೆ ಮಾತ್ರ ಸುಗ್ಗಿ ಶುರುವಾಗಿತ್ತು. ಚುನಾವಣಾ ಫಲಿತಾಂಶದ ಒಂದು ವರ್ಷದೊಳಗೇ ಬೈಸಿಕಲ್ಲು ತುಳಿಯುತ್ತಿದ್ದ ಸುದಾಮ ಕಾರು ಖರೀದಿಸಿದ್ದ. ಕೇಶಪ್ಪನವರು ತನ್ನನ್ನು ಪ್ರದೇಶ ಕಾರ್ಯದರ್ಶಿಯಿಂದ ಜಿಲ್ಲಾಧ್ಯಕ್ಷನಾಗಿ ಮಾಡಬೇಕೆಂದು ಪಕ್ಷದ ಹೈಕಮಾಂಡಿಗೆ ಅರ್ಜಿ ಗುಜರಾಯಿಸಿದರು. ಜುಟ್ಲಿಂಗನ ಮಾವನೂ, ಮಂಡಳಿ ಸದಸ್ಯನೂ ಆಗಿದ್ದ ಸದಾಶಿವ ತನ್ನ ಎರಡನೇ ಮಗಳ ವಿವಾಹವನ್ನು ಮುಂಬೈಯ ದೊಡ್ಡದೊಂದು ಮನೆತನಕ್ಕೆ ಕೈತುಂಬಾ ವರದಕ್ಷಿಣೆ ಕೊಟ್ಟು ಮಾಡಿಸಿದ. ಇತ್ತ ಸೆಂಚುರಿ ಜುಟ್ಲಿಂಗ ಮಾತ್ರ ಶಾಲಾಶೌಚಾಲಯದ, ಕ್ಯಾಂಟೀನಿನ ಉದ್ಘಾಟನೆ, ಊರಿನ ಜಾತ್ರೆಗೆ ಚಾಲನೆ, ಏನೇನೋ ಕಟ್ಟಡಗಳ ಶಂಕುಸ್ಥಾಪನೆ... ಇತ್ಯಾದಿ ಚಿಲ್ಲರೆ ಕೆಲಸಗಳಲ್ಲೇ ಉಳಿದುಬಿಟ್ಟ. ಹಾಗೆಂದು ಇವನಿಗೆ ಏನೂ ಸಿಗುತ್ತಿರಲಿಲ್ಲವೆಂದಲ್ಲ. ಕಡತಗಳ ಪ್ರಕಾರ ಕೂಟದ ರಾಜ ಸೆಂಚುರಿ ಜುಟ್ಲಿಂಗನೇ ಆಗಿದ್ದರಿಂದ ಅವನಿಗೂ ಒಂದು ಪಾಲಿರುತ್ತಿತ್ತು. ಆದರೆ ಅವನಿಗೆ ದೊಡ್ಡ ಪಾಲೋ, ಚಿಕ್ಕ ಪಾಲೋ ಎಂಬುದನ್ನೆಲ್ಲಾ ಆಸ್ಥಾನದ ಚಾಣಕ್ಯನಾದ ಸುದಾಮನೇ ನೋಡಿಕೊಳ್ಳುತ್ತಿದ್ದ. ಅಂತೂ ರಥವು ಸರಾಗವಾಗಿಯೇ ಚಲಿಸುತ್ತಿತ್ತು ಅಥವಾ ಹಾಗಂತ ಹೊರಗಿನವರಿಗೆ ಭಾಸವಾಗುತ್ತಿತ್ತು. ಅದು ಪಂಚಾಯತ್ತೋ, ಮಣ್ಣುಮಸಿಯೋ... ಹೇಗೋ ಏನೋ ನಡೆಯುತ್ತಿದೆ ಎಂದು ಆರಾಮಾಗಿದ್ದ ಸೆಂಚುರಿ ಜುಟ್ಲಿಂಗನಿಗೆ ಮುಂದೆ ಬರಲಿದ್ದ ಸವಾಲಿನ ದಿನಗಳ ಅಂದಾಜಾದರೂ ಎಲ್ಲಿತ್ತು?
******
``ಅಲ್ಲಾ... ಆ ಮೈಗಳ್ಳ ಸುದಾಮನಿಗೆ ಇದೆಲ್ಲಾ ಯಾಕೆ ಅಂತ! ನೀವೀಗ ಜುಜುಬಿ ಜುಟ್ಲಿಂಗ ಅಲ್ಲಾರೀ... ಪಂಚಾಯ್ತಿ ಅಧ್ಯಕ್ಷರು ನೀವೀಗ... ಇಡೀ ಊರಿನವರಿಗೆ ಶ್ರೀ ಸೆಂಚುರಿ ಜುಟ್ಲಿಂಗಣ್ಣ... ನಮ್ಮಪ್ಪಾನೇ ಮಂಡಳಿಯಲ್ಲಿರುವಾಗ ಆ ಸುದಾಮ ಯಾಕ್ಬೇಕು? ಮನೆಯವ್ರೇ ಎಲ್ಲಾ ನೋಡ್ಕೊಂಡ್ರಾಯ್ತಪ್ಪಾ...'', ಮಾದು ಆ ರಾತ್ರಿ ಮಂಚದಲ್ಲಿ ರೊಳ್ಳೆ ತೆಗೆದಿದ್ದಳು.
ಈ ವಿಷಯದಲ್ಲೆಲ್ಲಾ ಯಾವತ್ತೂ ತಲೆಹಾಕದ ಮಾದು ಹೀಗಂದಿದ್ದನ್ನು ಕೇಳಿದ ಜುಟ್ಲಿಂಗ ಅಚ್ಚರಿಯಿಂದ ತನ್ನ ಬೋಳುತಲೆಯ ಮೇಲೆ ಕೈಯಾಡಿಸುತ್ತಾ ಜುಟ್ಟನ್ನು ಸವರಿದ್ದ. ``ಯಾವಾಗ್ಲೂ ಫೈಲು, ಟೆಂಡರು, ಕಾಂಟ್ರಾಕ್ಟು, ಮಣ್ಣುಮಸಿ... ಅಂತೆಲ್ಲಾ ಹೇಳ್ತಾ ಇರ್ತಾರೆ ಕಣೇ... ನಾನಂತೂ ಏಳಕ್ಕೇ ಫೇಲು... ನನಗಿದೆಲ್ಲಾ ಗೊತ್ತಾಗುತ್ತಾ? ಮಾಡ್ಕೊಂಡಿರಲ್ಲ ಬಿಡೇ'', ಎಂದು ಅವಳ ಮುಂಗುರುಳಿನೊಂದಿಗೆ ಆಟವಾಡುತ್ತಾ ಮಾದುವನ್ನು ರಮಿಸಲು ಯತ್ನಿಸಿದ್ದ ಜುಟ್ಲಿಂಗ. ಆದರೆ ಅವಳೋ, ``ಏನು ನಿಮ್ಮ ಸುದಾಮ ಮಹಾ ಡಬ್ಬಲ್ ಡಿಗ್ರಿ ಪಡ್ಕೊಂಡೋನು'' ಎಂದು ಮೂತಿ ಸಿಂಡರಿಸಿ ಹೇಳುತ್ತಾ ಪಕ್ಕಕ್ಕೆ ತಿರುಗಿ ಮಲಗೇಬಿಟ್ಟಳು. ``ಓ ಮಾರಾಯ... ಹೌದಲ್ವಾ, ಈ ಬಗ್ಗೆ ನಾನು ಯೋಚಿಸಲೇ ಇಲ್ಲ...', ಎಂದು ತನ್ನಷ್ಟಕ್ಕೇ ತಲೆಕೆರೆದುಕೊಂಡುಬಿಟ್ಟ ಜುಟ್ಲಿಂಗ. ಶಾಲೆಯಲ್ಲೂ ಇಬ್ರೂ ಫೇಲೇ ಆದರೂ ಇವನಿಗೆ ಸುದಾಮನಿಗಿಂತ ಒಂದೆರಡು ಅಂಕೆಗಳು ಹೆಚ್ಚೇ ಇರುತ್ತಿದ್ದವು. ಅವನಿಗೆ ಇಪತ್ತೆರಡಾದರೆ ಇವನಿಗೆ ಇಪ್ಪತ್ತೈದು. ಅವನಿಗೆ ಹತ್ತಾದರೆ ಇವನಿಗೆ ಹದಿನಾಲ್ಕು. ಇಬ್ಬರೂ ವಾರ್ಷಿಕ ಪರೀಕ್ಷೆಗಳಲ್ಲಿ ಮೂವತ್ತೈದು ದಾಟಿದ್ದೇ ಆದರೆ ಅದು ಇವರಿಬ್ಬರ ಮುಖಾರವಿಂದವನ್ನು ಒಂದೇ ತರಗತಿಯಲ್ಲಿ ನೋಡಿ ನೋಡಿ ಬೇಜಾರಾಗಿಬಿಟ್ಟ ಮೇಷ್ಟ್ರುಗಳ ಕೃಪಾಕಟಾಕ್ಷವೇ ಸರಿ.
ಅಷ್ಟಕ್ಕೂ ಆಗಿದ್ದೇನೆಂದರೆ ಮನೆದೈವದ ಪೂಜೆಗೆಂದು ಮಾದು ಐದು ಕಿಲೋಮೀಟರ್ ದೂರವಿದ್ದ ತನ್ನ ತವರುಮನೆಗೆ ಹೋದರೆ ಅಪ್ಪ ಸದಾಶಿವ ಚೆನ್ನಾಗಿಯೇ ಅವಳ ಕಿವಿಯಲ್ಲಿ ಇಲ್ಲಸಲ್ಲದ್ದನ್ನು ಊದಿದ್ದ. ಅಳಿಯನ ಹೆಸರು ಹೇಳುತ್ತಾ ಸುದಾಮ ಉಳಿದವರಿಗಿಂತ ಹೆಚ್ಚು ಕಾಸು ಬಾಚುತ್ತಿರುವುದು, ತನ್ನದೇ ಆಟ ಎಂಬಂತೆ ಮೆರೆಯುವುದು ಅವನಲ್ಲಿ ಅಸಮಾಧಾನವನ್ನು ತಂದಿತ್ತು. ಸುದಾಮನ ವಿರುದ್ಧ ಒಂದಿಬ್ಬರು ಮಂಡಳಿಯ ಸದಸ್ಯರನ್ನು ಎತ್ತಿಕಟ್ಟಿದ್ದ ಸದಾಶಿವ ಗಾಣಿಗ ಈ ದಾರಿಯ ಮುಳ್ಳನ್ನು ಶಾಶ್ವತವಾಗಿ ಕಿತ್ತೆಸೆದರೆ ಹೇಗೆ ಎಂದು ಗಂಭೀರವಾಗಿ ಯೋಚಿಸಲು ಶುರುಮಾಡಿಯಾಗಿತ್ತು. ಈ ನಿಟ್ಟಿನಲ್ಲೇ ಸದಾಶಿವ ಅಸೂಯೆಯ ಹುಳುವೊಂದನ್ನು ಸೃಷ್ಟಿಸಿ ಮಗಳ ತಲೆಯೊಳಗೆ ಬಿಟ್ಟಿದ್ದ. ಆ ಹುಳುವನ್ನೇ ಈಗ ಮಾದು ತನ್ನ ಪತಿಯ ತಲೆಯಲ್ಲಿ ಬಿಟ್ಟಿದ್ದಳು. ಬಹುಷಃ ಆಟವು ಈಗ ತಲೆಕೆಳಗಾಗುವ ಹಂತಕ್ಕೆ ಬಂದುಬಿಟ್ಟಿತ್ತು.
******
ಮಡದಿಯ ಮಾತನ್ನು ಸೆಂಚುರಿ ಜುಟ್ಲಿಂಗ ಗಂಭೀರವಾಗಿ ಪರಿಗಣಿಸಿದ್ದು ಹೌದಾದರೂ ಉಡಾಫೆ ಸ್ವಭಾವದವನಾಗಿದ್ದ ಜುಟ್ಲಿಂಗ ಈ ಬಗ್ಗೆ ಹೆಚ್ಚಿನದ್ದೇನನ್ನೂ ಮಾಡಲಿಲ್ಲ. ಬುದ್ಧಿ ಬಂದ ದಿನಗಳಿಂದಲೂ ತನ್ನ ಜೊತೆಗಿದ್ದ ಮಿತ್ರ ಸುದಾಮ. ಆತ ತನಗಿಂತ ಕೊಂಚ ಹೆಚ್ಚು ಶಾಣ್ಯಾ ಆಗಿರಬಹುದು. ಪಂಚಾಯತ್ ಕೂಟಕ್ಕೆ ಬಂದ ನಂತರ ಎಲ್ಲೋ ನೂರೋ ಇನ್ನೂರೋ ತನಗಿಂತ ಹೆಚ್ಚು ಸಂಪಾದಿಸಿರಬಹುದು. ಹಾಗೆಂದು ನಿಷ್ಠುರ ಕಟ್ಟಿಕೊಳ್ಳಲಾಗುತ್ತದೆಯೇ? ಹಾಗೇನಾದರೂ ಆದರೆ ತನ್ನ ಪಂಚಾಯ್ತಿ ಕೆಲಸವನ್ನೆಲ್ಲಾ ನೋಡೋರ್‍ಯಾರು? ಮುದುಕ ಮಾವ ಸದಾಶಿವನೂ ಏನು ಕಮ್ಮಿ ಆಸಾಮಿಯೇ?... ಹೀಗೆ ಏನೋ ತಿಳಿದಷ್ಟು ಅಳೆದು ತೂಗಿ ಕೊನೆಗೆ ಇವೆಲ್ಲವನ್ನೂ ಮರೆತೇಬಿಟ್ಟಿದ್ದ ಸೆಂಚುರಿ ಜುಟ್ಲಿಂಗ. ಎಲ್ಲವೂ ಹಿಂದಿನಂತೆಯೇ ಸರಾಗವಾಗಿ ಮುಂದುವರಿದಿತ್ತು.
ಮಗಳ ಬಳಿ ಹೇಳಿ ಕಳಿಸಿದ ನಂತರ ಏನಾದರೂ ಲಾಭವಾಗಲಿದೆಯೋ ಎಂದು ರಣಹದ್ದಿನಂತೆ ಕಾದುಕುಳಿತಿದ್ದ ಸದಾಶಿವನಿಗೆ ಸಿಕ್ಕಿದ್ದು ಮಾತ್ರ ತೆಂಗಿನ ಚಿಪ್ಪು. ಈ ಮೂರ್ಖ ಏನೂ ಮಾಡುವವನಲ್ಲ ಎಂದು ಲೆಕ್ಕಹಾಕಿದ ಸದಾಶಿವ ಒಂದಿಬ್ಬರು ರೌಡಿಗಳನ್ನು ಕೇಶಪ್ಪನ ನೆರವಿನಿಂದ ಪಕ್ಕದ ಹಳ್ಳಿಯಿಂದ ರಹಸ್ಯವಾಗಿ ಕರೆಸಿಕೊಂಡು ಸುದಾಮನನ್ನು ಗಡಿಬಿಡಿಯಲ್ಲೇ ಕೊಲೆ ಮಾಡಿಸಿಬಿಟ್ಟಿದ್ದ. ಸುಮಾರು ಇಪ್ಪತ್ತು ಗಂಟೆಗಳ ಬಳಿಕ ರಕ್ತ ಸಿಕ್ತವಾಗಿದ್ದ ಸುದಾಮನ ದೇಹವು ಹೊಳೆಯ ಬದಿಯಲ್ಲಿ ಪತ್ತೆಯಾಯಿತು. ಸುದಾಮನ ಜೀವದ ಗೆಳೆಯನಂತಿದ್ದ ಸೆಂಚುರಿ ಜುಟ್ಲಿಂಗನೇ ಕಣ್ಣೀರಿಡುತ್ತಾ ಆ ದಿನ ಚಿತೆಗೆ ಕೊಳ್ಳಿಯಿಟ್ಟಿದ್ದ. ಅಂದು ಧಾರಾಕಾರ ಮಳೆಯಾಗುತ್ತಿದ್ದರೂ ಇಡೀ ಊರಿಗೆ ಊರೇ ಜನಕಾಪುರದ ಸ್ಮಶಾನದಲ್ಲಿ ಸೇರಿತ್ತು. ಆದರೆ ಸದಾಶಿವನೊಬ್ಬ ಮಾತ್ರ ತನ್ನ ಒಂದಿಬ್ಬರು ಹಿಂಬಾಲಕರ ತಂಡದೊಂದಿಗೆ ಪಕ್ಷದ ಆಫೀಸಿನಲ್ಲಿ ಕುಳಿತುಕೊಂಡು ಬೀಡಿ ಸೇದುತ್ತಾ ಮುಂದಿನ ನಡೆಗಳ ಬಗ್ಗೆ ಲೆಕ್ಕ ಹಾಕುತ್ತಿದ್ದ. ಆಟವೆಂದರೆ ಕ್ಷಣಿಕ ಮುನ್ನಡೆಗೆ ತೃಪ್ತಿಪಡುವುದಷ್ಟೇ ಅಲ್ಲ, ಕೊನೆಯ ವಿಜಯವು ದಕ್ಕುವವರೆಗೂ ಆಡುತ್ತಲೇ ಇರಬೇಕು ಎಂಬ ಸತ್ಯವು ಸದಾಶಿವನಿಗೆ ಸ್ಪಷ್ಟವಾಗಿ ತಿಳಿದಿತ್ತು.
******
ಇತ್ತ ಆಸ್ಥಾನದ ಮಹಾಮಂತ್ರಿಯಂತಿದ್ದ ಸುದಾಮನ ಬರ್ಬರ ಹತ್ಯೆಯ ನಂತರ ಜನಕಾಪುರದ ಆಡಳಿತ ಯಂತ್ರದ ರಥವು ಹಟಾತ್ ಕುಸಿಯತೊಡಗಿತ್ತು. ಸದಾಶಿವ ಗಾಣಿಗರಿಗೆ ಮೊದಮೊದಲು ಲಾಭವಾಗಿದ್ದು ಸತ್ಯವಾದರೂ ಮುಂದೆ ಕೂಟದ ಇತರ ಸದಸ್ಯರು ಮಾವ-ಅಳಿಯ ಸೇರಿ ಮನೆಯವರದ್ದೇ ಸಾಮ್ರಾಜ್ಯ ಕಟ್ಟಿದ್ದಾರೆ ಎಂಬ ಗಾಳಿ ಮಾತುಗಳನ್ನು ಹುಟ್ಟು ಹಾಕಿದ್ದರು. ವಿಪರ್ಯಾಸವೆಂದರೆ ಈ ಒಟ್ಟಾರೆ ವ್ಯವಸ್ಥೆಯಲ್ಲಿ ಸೆಂಚುರಿ ಜುಟ್ಲಿಂಗ ಒಬ್ಬ ಉತ್ಸವಮೂರ್ತಿಯಷ್ಟೇ ಆಗಿದ್ದ ಎನ್ನುವ ಸತ್ಯ ಗೊತ್ತಿದ್ದವರೂ ಕೂಡ ಕ್ರಮೇಣ ಇದು ಕುಟುಂಬ ರಾಜಕಾರಣ ಆಗಿಹೋಗಿದೆ ಎಂದು ಹುಯಿಲೆಬ್ಬಿಸತೊಡಗಿದ್ದರು. ಇನ್ನು ಸೆಂಚುರಿ ಜುಟ್ಲಿಂಗನ ವಿಜಯದ ನಂತರ ಪಕ್ಷದ ಜಿಲ್ಲಾಧ್ಯಕ್ಷನಾಗಿ ಭಡ್ತಿಗೊಂಡು ನೇಮಕಗೊಂಡಿದ್ದ ಕೇಶಪ್ಪ ಭಿನ್ನಮತ ಪರಿಹಾರದ ಜವಾಬ್ದಾರಿಯನ್ನು ಇನ್ಯಾರದ್ದೋ ತಲೆಗೆ ಹೊರಿಸಿ ತಾನು ಮತ್ತೆ ಸ್ಥಳೀಯ ರಾಜಕಾರಣಕ್ಕೆ ಕಾಲಿಟ್ಟರೆ ತನ್ನ ಗೌರವಕ್ಕೇ ಕುಂದು ಎಂದು ಲೆಕ್ಕಹಾಕಿ ದೂರವೇ ಉಳಿದುಬಿಟ್ಟ.
ಆದರೆ ನಂತರ ಸೆರೆಯಾದ ಸುದಾಮನ ಕೊಲೆಗಾರರು ಪೋಲೀಸರೆದುರು ಸತ್ಯ ಬಾಯಿಬಿಟ್ಟ ನಂತರವಂತೂ ಕಟ್ಟಿದ್ದ ಮರಳಿನ ಅರಮನೆಯು ಅನಿರೀಕ್ಷಿತ ವೇಗದಲ್ಲಿ ಕುಸಿಯುತ್ತಲೇ ಹೋಯಿತು. ಸಹಜವಾಗಿಯೇ ಎದ್ದಿದ್ದ ಪ್ರಶ್ನೆಗಳನ್ನು ಉತ್ತರಿಸಬೇಕಾದ ಅನಿವಾರ್ಯತೆಯು ಈಗ ಸೆಂಚುರಿ ಜುಟ್ಲಿಂಗನ ಹೆಗಲ ಮೇಲೆ ಬಿದ್ದಿತ್ತು. ಸುದಾಮ ಸತ್ತೇ ಹೋಗಿದ್ದ. ಮಾವ ಸದಾಶಿವ ಜೈಲು ಸೇರಿದ್ದ. ಕೇಶಪ್ಪ ಕೈಗೆಟುಕಲಾಗದ ಆಯಕಟ್ಟಿನ ಸ್ಥಾನದಲ್ಲಿ ಕೂತಿದ್ದ. ನಮ್ಮ ನಾಯಕ ಜೈಲು ಸೇರಿದ ಎಂದು ಗಾಬರಿಯಾದ ಸದಾಶಿವನ ಹಿಂಬಾಲಕರು ಹಟಾತ್ತನೆ ತಣ್ಣಗಾಗಿದ್ದರು. ಉಳಿದಿದ್ದು ಸೆಂಚುರಿ ಜುಟ್ಲಿಂಗ ಒಬ್ಬನೇ. ಇಷ್ಟಿಷ್ಟು ಭ್ರಷ್ಟಾಚಾರ ನಡೆಯಿತು, ಇವರಿವರು ಕೊಳ್ಳೆ ಹೊಡೆದರು ಎಂಬ ಅರೆಬೆಂದ ಲೆಕ್ಕವನ್ನೆಲ್ಲಾ ಜನಕಾಪುರದ ಸ್ಥಳೀಯ ಸಂಜೆ ಪತ್ರಿಕೆಯಾದ `ಜನಾನುರಾಗಿ' ಪ್ರಕಟಿಸಿತು. `ಸೆಂಚುರಿ ಜುಟ್ಲಿಂಗನ ಭರ್ಜರಿ ಬ್ಯಾಟಿಂಗು', ಎಂದು ಪತ್ರಿಕೆಯೊಂದು ಬರೆಯಿತು. ಜಿಲ್ಲೆಯ ಪ್ರಮುಖ ಪತ್ರಿಕೆಯಂತೂ ಸುಹಾಸ್ ಕುಮಾರ್-ಜುಟ್ಲಿಂಗ-ಸುದಾಮರು ಜೊತೆಗಿದ್ದ ಹಳೆಯ ಕ್ರಿಕೆಟ್ ಸುದ್ದಿಯನ್ನು ಬಾಕ್ಸ್ ಐಟಮ್ ಆಗಿ ಪ್ರಕಟಿಸಿ `ಹೇಗಿದ್ದವ ಹೇಗಾದ ನೋಡಿ' ಎಂದು ಬರೆದು ತೆವಲು ತೀರಿಸಿಕೊಂಡವು. ಒಂದು ಕಾಲದಲ್ಲಿ ಇಂದ್ರ-ಚಂದ್ರ ಎಂದೆಲ್ಲಾ ಕೊಂಡಾಡಿದ್ದ ಪತ್ರಿಕೆಗಳ ನಿಜರೂಪವನ್ನು ಕಂಡ ಸೆಂಚುರಿ ಜುಟ್ಲಿಂಗ ಈಗ ಬೆಚ್ಚಿಬಿದ್ದಿದ್ದ. ಯುದ್ಧಭೂಮಿಯಲ್ಲಿ ಏಕಾಂಗಿಯಾಗಿ ಶಸ್ತ್ರರಹಿತನಾಗಿ ನಿಂತವನಂತೆ ಅಕ್ಷರಶಃ ಕಂಗಾಲಾಗಿದ್ದ. ರಾತ್ರೋರಾತ್ರಿ ಬಂದೆರಗಿದ ಖ್ಯಾತಿಯು ಅವನ ಜೀವನವನ್ನು ಹಂತಹಂತವಾಗಿ ಕರಗಿಸಿತ್ತು. ಇಂಥಾ ಖ್ಯಾತಿಗೆ, ಪೊಳ್ಳು ಪ್ರತಿಷ್ಠೆಗೆ ಅರ್ಹನಾದವನೂ ನಾನಲ್ಲ ಎಂಬ ಸತ್ಯವೂ ಅವನಿಗೀಗ ನಿಧಾನವಾಗಿ ತಿಳಿಯತೊಡಗಿತ್ತು. ಅವನಿಗೀಗ `ಖ್ಯಾತ ಸೆಂಚುರಿ ಜುಟ್ಲಿಂಗ'ನಿಂದ ಮರಳಿ ಸಾಮಾನ್ಯ `ಜುಟ್ಲಿಂಗ'ನಾಗಬೇಕಿತ್ತು. ಜನಜಂಗುಳಿಯಲ್ಲಿ ಅನಾಮಿಕನಂತೆ ಕಳೆದುಹೋಗಬೇಕಿತ್ತು.
******
``ನೀವು ಆ ದಿನ ಏನಾದ್ರೂ ಇದ್ರೆ ನನ್ನನ್ನು ಖಂಡಿತ ನೆನಪಿಸಿಕೊಳ್ಳಿ ಅಂತ ಹೇಳಿದ್ರಿ ಬುದ್ದೀ. ನನ್ನ ಹಳೆಯ ಲೆಕ್ಕ ಪುಸ್ತಕವೊಂದರಲ್ಲಿ ನಿಮ್ಮ ಮನೆಯ ದೂರವಾಣಿ ಸಂಖ್ಯೆ ಮತ್ತು ವಿಳಾಸ ಸಿಕ್ತು. ಕರೆ ಮಾಡಿದರೆ ನಿಮ್ಮ ಕಡೆಯವರು ಯಾರು, ಏನು, ಯಾವ ಜುಟ್ಲಿಂಗ, ಏನದು ಸೆಂಚುರಿ ಜುಟ್ಲಿಂಗ ಅಂತೆಲ್ಲಾ ಕೇಳಿ ಫೋನಿಟ್ಟರು. ನಿಮ್ಮವರ ತಪ್ಪೇನಿಲ್ಲ ಬಿಡಿ... ನಮ್ಮಂಥೋರನ್ನೆಲ್ಲಾ ನೀವ್ಯಾಕೆ ನೆನಪಿಟ್ಟುಕೊಳ್ತೀರಿ ಹೇಳಿ? ನಿಮ್ಮೊಂದಿಗೆ ಮಾತನಾಡಲು ಸಾಧ್ಯವಾಗಲಿಲ್ಲ ಅಂತ ವಿಳಾಸ ಹುಡುಕ್ತಾ ಸೀದಾ ಮನೆಗೇ ಬಂದ್ಬಿಟ್ಟೆ. ಇಲ್ಲೂ ನನ್ನನ್ನು ಒಳಕ್ಕೆ ಬಿಡ್ಲಿಲ್ಲ. ಹೀಗಾಗಿ ಸಂಜೆ ನಿಮ್ಮ ಮನೆಯ ಪಾಗಾರ ಹಾರಲು ಪ್ರಯತ್ನಿಸಿ ಸಿಕ್ಕಿಬಿದ್ದೆ ಬುದ್ದೀ'', ಎಂದು ಗಳಗಳನೆ ಅತ್ತ ಸೆಂಚುರಿ ಜುಟ್ಲಿಂಗ. ಅವನ ಕೈಗಳು ಧಾರಾಕಾರವಾಗಿ ಹರಿಯುತ್ತಿದ್ದ ಕಣ್ಣೀರು ಒರೆಸುವುದನ್ನೂ ಕೂಡ ಮರೆತು ನಮಸ್ಕರಿಸುವ ಭಂಗಿಯಲ್ಲೇ ಸ್ಥಿರವಾಗಿದ್ದವು. ``ಹೌದು, ತಕ್ಷಣಕ್ಕೆ ನನಗೆ ತಿಳಿಯಲಿಲ್ಲ. ಆದರೆ ನಿನ್ನ ಈ ದೊಡ್ಡ ಮೂಗು ನೋಡಿದ ಕೂಡಲೇ ಎಲ್ಲವೂ ನೆನಪಿಗೆ ಬಂದುಬಿಟ್ಟಿತು. ಎಲ್ಲಾ ಎಷ್ಟು ಬದಲಾಯಿತಲ್ವಾ?'', ಎಂದು ತಣ್ಣಗಿನ ದನಿಯಲ್ಲೇ ಸಂತೈಸಲು ಪ್ರಯತ್ನಿಸುತ್ತಿದ್ದ ಸುಹಾಸ್ ಕುಮಾರ್. ಅಂದು ತನ್ನ ಕೈಯಿಂದ ಹೂಗುಚ್ಛ ಪಡೆದುಕೊಂಡು ಮಾಧ್ಯಮಗಳ ಕಣ್ಣಲ್ಲಿ `ಸ್ಟಾರ್' ಆದ ನಂತರ ಇದೇ ಮೊದಲ ಬಾರಿಗೆ ಜುಟ್ಲಿಂಗು ಬೆಂಗಳೂರಿಗೆ ಬಂದಿದ್ದ ಎಂಬ ಸಂಗತಿಯು ಸುಹಾಸನನ್ನು ಮತ್ತಷ್ಟು ಕಾಡಿತ್ತು. ಶ್ರೀಲಂಕಾ ಸರಣಿಯ ಅದ್ಭುತ ಗೆಲುವಿನ ನಂತರದ ಒಂದು ವರ್ಷದಲ್ಲೇ ಸುಹಾಸ್ ಕುಮಾರ್ ಭಾರತೀಯ ಕ್ರಿಕೆಟ್ ತಂಡದ ಕಪ್ತಾನನಾಗಿ ನೇಮಕಗೊಂಡಿದ್ದ. ಈ ಅಮಾಯಕನ ಮೂಗು ಮುರಿದ ತನ್ನ ಒಂದು ಸಿಕ್ಸರ್ ಏನೆಲ್ಲಾ ಮಾಡಿಹಾಕಿತು ಎಂಬ ಪಶ್ಚಾತ್ತಾಪದ ಭಾವವೂ ಸುಹಾಸನ ಮನದಲ್ಲಿ ಸುಳಿದುಹೋಯಿತು.
``ಈಗ ನನ್ನಿಂದೇನಾಗಬೇಕು ಹೇಳ್ತೀಯಾ?'', ಎಂದು ಕಾಳಜಿಯ ದನಿಯಲ್ಲೇ ಜುಟ್ಲಿಂಗನಲ್ಲಿ ಕೇಳಿದ ಸುಹಾಸ್ ಕುಮಾರ್. `ಅಸಲಿಗೆ ತನಗೇನು ಬೇಕು' ಎಂಬ ಪ್ರಶ್ನೆಯು ಜುಟ್ಲಿಂಗನೆದುರು ಸಾಕ್ಷಾತ್ಕಾರವಾದ ಕ್ಷಣವೇ ಅದು. ಸುಹಾಸ್ ಕುಮಾರನಿಂದ ಬಂದಿದ್ದ ಖ್ಯಾತಿಯನ್ನು ಅವನಿಂದಲೇ ತಾನು ಕಳೆದುಕೊಳ್ಳಬಹುದು ಎಂಬ ಲೆಕ್ಕಾಚಾರದೊಂದಿಗೆ ಬಂದಿದ್ದ ಜುಟ್ಲಿಂಗನಿಗೆ ಈಗ ತನ್ನ ದಡ್ಡತನದ ಬಗ್ಗೆಯೇ ನಾಚಿಕೆಯಾಯಿತು. ಸುದಾಮನ ಮರಣಾನಂತರದ ಈ ಎರಡು ವರ್ಷಗಳ ಅವಧಿಯಲ್ಲಿ ಜುಟ್ಲಿಂಗನಿಗೆ ನೈಜ ಬದುಕಿನ ಹಲವು ಅನುಭವಗಳು ಸಾಕಷ್ಟು ಪಾಠಗಳನ್ನು ಕಲಿಸಿದ್ದವು. ಆದರೆ ತನ್ನ `ಸೆಂಚುರಿ ಜುಟ್ಲಿಂಗ'ನೆಂಬ ಖ್ಯಾತಿಯು ಎಷ್ಟು ಪೊಳ್ಳು ಎಂಬುದು ಅರ್ಥವಾಗಲು ಈ ಬಿರುದು ಸಿಗಲು ಕಾರಣನಾದ ಸುಹಾಸನ ಮನೆಯ ಆಳುಗಳಿಂದಲೇ ಜುಟ್ಲಿಂಗ ಇಲ್ಲಸಲ್ಲದ್ದನ್ನು ಕೇಳಿಸಿಕೊಳ್ಳಬೇಕಾಯಿತು. ಬಹಿಷ್ಕೃತನಂತೆ ಹೊರದಬ್ಬಿಸಿಕೊಳ್ಳಬೇಕಾಯಿತು. ಕ್ಯಾಮೆರಾ ಬೆಳಕುಗಳು, ಪತ್ರಕರ್ತರ ಪ್ರಶ್ನೆಗಳು, ಮುಖಸ್ತುತಿ, ಬಹುಪರಾಕು, ಪಂಚಾಯ್ತಿ ಪಟ್ಟ... ಹೀಗೆ ಎಲ್ಲವೂ ಭ್ರಮೆಯಂತೆ ಅನಿಸತೊಡಗಿತು ಅವನಿಗೆ. ಸತ್ಯದಂತಹ ಸತ್ಯವನ್ನೂ ಯಾಮಾರಿಸಬಲ್ಲ ಭ್ರಮೆ.
ಹತ್ತು ಸಾವಿರ ರೂಪಾಯಿಗಳ ಬ್ಯಾಂಕ್ ಚೆಕ್ ಒಂದನ್ನು ಬರೆದು ಸಹಿ ಮಾಡಿ ಜುಟ್ಲಿಂಗನ ಕೈಗಿಟ್ಟ ಸುಹಾಸ್ ಕುಮಾರ್ ಶುಭವಾಗಲಿ ಎಂದು ಕೋಣೆಯ ಬಾಗಿಲಿನವರೆಗೂ ಬಂದು ಬೀಳ್ಕೊಟ್ಟಿದ್ದ. ಅಲ್ಲಿಂದ ಸುಹಾಸನ ಆಳೊಬ್ಬ ಜುಟ್ಲಿಂಗನನ್ನು ಮೆಜಿಸ್ಟಿಕ್‌ವರೆಗೂ ಕರೆದೊಯ್ದು ಜನಕಾಪುರಕ್ಕೆ ತೆರಳುವ ಬಸ್ಸಿನಲ್ಲಿ ಕೂಡಿಸಿದ. ಈ ಹಿಂದೆ ಸುದಾಮನೊಂದಿಗೆ ಬಂದಾಗ ಇದ್ದಕ್ಕಿಂತಲೂ ಹೆಚ್ಚಾದಂತೆ ಕಾಣುತ್ತಿದ್ದ ಬೆಂಗಳೂರಿನ ಜನದಟ್ಟಣೆ, ವಾಹನಗಳ ಆರ್ಭಟ, ದೈತ್ಯ ಕಟ್ಟಡಗಳು ಇತ್ಯಾದಿಗಳನ್ನು ಕಂಡು ಇಂಥಾ ಮಹಾನಗರಗಳಿಗೆ ನಾನೂ, ನನ್ನ `ಸೆಂಚುರಿ' ಬಿರುದೂ ಒಂದು ವಸ್ತುವೇ ಎಂದೆನಿಸಿ `ಥೂ ನಿನ್ನ ಜನ್ಮಕ್ಕಿಷ್ಟು' ಎಂದು ಮನದಲ್ಲೇ ಹಳಹಳಿಸುವಂತಾಯಿತು. ತನಗೇನಿದ್ದರೂ ಜನಕಾಪುರವೇ ವಾಸಿ ಎಂದು ಅಂದುಕೊಂಡ ಜುಟ್ಲಿಂಗ ಬಸ್ಸಿನ ಆಸನದಲ್ಲೇ ಕುಳಿತು ಕಣ್ಣುಗಳನ್ನು ಮುಚ್ಚಿ ನಿರಾಳನಾಗಲು ಯತ್ನಿಸಿದ. ಶೇಂಗಾ ಮಾರುವ ಹುಡುಗನೊಬ್ಬ ಬಂದು ``ಬೇಕೇನ್ರೀ ಶೇಂಗಾ... ಹತ್ರೂಪಾಯ್'' ಎಂದು ಕೂಗಿದಾಗಲೇ ಅವನಿಗೆ ಎಚ್ಚರವಾಗಿದ್ದು.
ಶೇಂಗಾ ತಿಂದು ಮುಗಿಸಿ ಕಾಗದವನ್ನು ಎಸೆಯಬೇಕು ಅನ್ನುವಷ್ಟರಲ್ಲಿ ಆ ಕಾಗದದಲ್ಲಿ ಪ್ರಕಟವಾಗಿದ್ದ ಸುದ್ದಿಯ ಶೀರ್ಷಿಕೆಯೊಂದು ಅವನ ಕಣ್ಸೆಳೆದಿತ್ತು. ಏನೆಂದು ನೋಡಿದರೆ ``ಸೆಂಚುರಿ ಜುಟ್ಲಿಂಗನ ಜನಕಾಪುರ ಪುರಾಣ'' ಎಂಬ ತಲೆಬರಹದ ವರದಿಯೊಂದು ಅಲ್ಲಿತ್ತು. ``ಅಯ್ಯೋ ಮನೆ ಹಾಳನೇ... ಬೆಂಗಳೂರಿನಲ್ಲೂ ನನ್ನದೇ ಖ್ಯಾತಿಯಾ?'', ಎಂದು ತನಗೆ ತಾನೇ ಕೇಳಿಕೊಂಡ ಜುಟ್ಲಿಂಗ. ಅದು ಪ್ರಖ್ಯಾತಿಯಲ್ಲ, ಕುಖ್ಯಾತಿ ಎಂದು ಅವನಿಗೆ ತಿಳಿಹೇಳುವವರಾದರೂ ಯಾರಿದ್ದರು ಪಾಪ!
ಚಿತ್ರ : ವಿಷ್ಣು ಕುಮಾರ್
ದಕ್ಷಿಣಕನ್ನಡದ ಕಿನ್ನಿಗೋಳಿ ಮೂಲದವರಾದ ಪ್ರಸಾದ್ ನಾಯ್ಕ್ ಲೇಖಕರು ಮತ್ತು ಅಂಕಣಕಾರರು. ಓದು, ಪ್ರವಾಸ ಮತ್ತು ಚಿತ್ರಕಲೆ ಇವರ ಇತರೆ ಹವ್ಯಾಸಗಳು. ಕನ್ನಡದ ಖ್ಯಾತ ಜಾಲತಾಣ 'ಅವಧಿ'ಯಲ್ಲಿ ಇವರು ಬರೆಯುತ್ತಿದ್ದ 'ಹಾಯ್ ಅಂಗೋಲಾ!' ಅಂಕಣವು ಓದುಗರಿಂದ ಅಪಾರ ಮೆಚ್ಚುಗೆಯನ್ನು ಗಳಿಸಿದ್ದು ಈ ಕೃತಿಗೆ 2018ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರವಾಸ ಸಾಹಿತ್ಯ ಪುಸ್ತಕ ಬಹುಮಾನ ಸಂದಿದೆ. ಆಫ್ರಿಕಾ ಪ್ರವಾಸ ಕಥನವಾಗಿರುವ 'ಹಾಯ್ ಅಂಗೋಲಾ!' ಇವರ ಚೊಚ್ಚಲ ಕೃತಿಯೂ ಹೌದು. ಈ ಕೃತಿಯು ಪ್ರವಾಸ ಸಾಹಿತ್ಯ ವಿಭಾಗದಲ್ಲಿ ಶಿವಮೊಗ್ಗ ಕರ್ನಾಟಕ ಸಂಘದ ಪ್ರಶಸ್ತಿಗೆ ಪಾತ್ರವಾಗಿದೆ.
ಕನೆಕ್ಟ್ ಕನ್ನಡ ವೆಬ್ ಪತ್ರಿಕೆಯ 'ಪಟ್ಟಾಂಗ' ಅಂಕಣವೂ ಸೇರಿದಂತೆ ನಾಡಿನ ಹಲವು ಪತ್ರಿಕೆಗಳಲ್ಲಿ, ಪುರವಣಿಗಳಲ್ಲಿ ಇವರ ಕಥೆಗಳು, ಲೇಖನಗಳು, ಸರಣಿಬರಹಗಳು ಮತ್ತು ಅನುವಾದಗಳು ಪ್ರಕಟವಾಗಿವೆ. 2017 ರ ವಿಜಯ ಕರ್ನಾಟಕ ಯುಗಾದಿ ಕಥಾಸ್ಪರ್ಧೆಯಲ್ಲಿ ಇವರ 'ಹುಲ್ಯಾದೈವ' ಕಥೆಯು ಟಾಪ್-25 ಕಥೆಗಳಲ್ಲಿ ಹದಿನೈದನೇ ಸ್ಥಾನವನ್ನು ಗಳಿಸಿಕೊಂಡಿತ್ತು. ಕನ್ನಡೇತರರಿಗೆ ಕನ್ನಡ ಕಲಿಸುವ ಉತ್ಸಾಹಿ ಯುವಸಮೂಹವಾದ 'ಕನ್ನಡ ಗೊತ್ತಿಲ್ಲ' ತಂಡಕ್ಕಾಗಿ ವ್ಯಂಗ್ಯಚಿತ್ರಗಳನ್ನೂ ರಚಿಸಿದ್ದಾರೆ. ಶ್ರೀ ಜಿ. ಎನ್. ಮೋಹನ್ ಸಂಪಾದಕತ್ವದ 'ಈ ಪರಿಯ ಸೊಬಗು', ಶ್ರೀ ಗುರುಪ್ರಸಾದ್ ಕುರ್ತಕೋಟಿ ಸಂಪಾದಕತ್ವದ 'ಎಲ್ಲರಂಥವನಲ್ಲ ನನ್ನಪ್ಪ' ಮತ್ತು 'ಅಪ್ಪರೂಪ', ಶ್ರೀ ಗಣೇಶ್ ಕೊಡೂರು ಸಂಪಾದಕತ್ವದ 'ನಿಮ್ಮ ಮಕ್ಕಳು ಯಾವ ಪುಸ್ತಕಗಳನ್ನು ಓದಬೇಕು?', ಶ್ರೀ ಗುಬ್ಬಚ್ಚಿ ಸತೀಶ್ ಸಂಪಾದಕತ್ವದ 'ಮರೆಯಲಾರದ ಸ್ನೇಹ'... ಇತ್ಯಾದಿ ಸಂಪಾದಿತ ಕೃತಿಗಳಲ್ಲೂ ಇವರ ಲೇಖನಗಳು ಮೂಡಿಬಂದಿವೆ.
More About Author