Story

 ಭಾವದ ಅಂಬಾರಿ

ಲೇಖಕ ಎ.ಎನ್.ರಮೇಶ್ ಗುಬ್ಬಿ ಮೂಲತಃ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರು. ವೃತ್ತಿಯಲ್ಲಿ ಕಾರವಾರ ಬಳಿಯ ಕೈಗಾದಲ್ಲಿರುವ ಭಾರತೀಯ ಅಣುಶಕ್ತಿ ನಿಗಮದ ಉದ್ಯೋಗಿ. ಪ್ರವೃತ್ತಿಯಲ್ಲಿ ಸಾಹಿತಿ. ಕವನ, ಚುಟುಕು, ಕಥೆ, ನಾಟಕ, ಚಿತ್ರಕಥೆ ರಚನೆಗಳಲ್ಲಿ ತೊಡಗಿಸಿಕೊಂಡಿರುವ ಅವರ ‘ಭಾವದ ಅಂಬಾರಿ’ ಕತೆ ನಿಮ್ಮ ಓದಿಗಾಗಿ.....

ಅವನು ಕೃಷ್ಣ,
ಅಂದಿನ ಕವಿಗೋಷ್ಠಿಯಲ್ಲಿ “ಕಾವ್ಯದಲ್ಲಿ ಶೃಂಗಾರ” ವಿಷಯದ ಬಗ್ಗೆ ತನ್ನ ಭಾಷಣ ಮಂಡಿಸುತ್ತಿದ್ದ. ಅದ್ಭುತವಾಗಿ ಹರಿದು ಬರುತ್ತಿದ್ದ ವಾಗ್ಝರಿ, ಮಧ್ಯೆ-ಮಧ್ಯೆ ತೆಳುಹಾಸ್ಯದ ಲಹರಿ ಕೇಳುಗರನ್ನು ಸೂಜಿಗಲ್ಲಿನಂತೆ ಸೆಳೆದು ಮಂತ್ರಮುಗ್ದರನ್ನಾಗಿಸಿತ್ತು. ಭಾಷಣ ಉಪನ್ಯಾಸಗಳೆಂದರೆ ಬಹಳಷ್ಟು ಜನರಿಗೆ ತಮ್ಮ ಪಾಂಡಿತ್ಯ ವಿದ್ವತ್ತಿನ ಪ್ರದರ್ಶನ. ಹಾಗಾಗಿ ಪ್ರೇಕ್ಷಕರಿಗೆ ಬೌನ್ಸರ್ ಎಸೆದು ಬೋರ್ ಹೊಡೆಸುತ್ತಾರೆ. ಕೃಷ್ಣ ಹಾಗಲ್ಲ. ಅವನಿಗೆ ಮಾತಿನ ಕಲೆ ಸಿದ್ದಿಸಿತ್ತು. ಹಾಸ್ಯದ ನುಡಿಗಳಿಂದ ಸಭಿಕರನ್ನು ಆಕರ್ಷಿಸಿ, ನಿಧಾನವಾಗಿ ಅವರ ಮೇಲೆ ತನ್ನ ಪ್ರಭಾವದ ಮುದ್ರೆಯನ್ನೊತ್ತಿ, ನಡು-ನಡುವೆ ನಗೆಯ ಸಿಂಚನ ಸ್ಫುರಿಸಿ, ನೇರವಾಗಿ ಅವರ ಮನಗಳೊಂದಿಗೆ ಮಾತಿಗಿಳಿದಂತೆ ಇರುತ್ತಿತ್ತು ಅವನ ವಿಷಯ ಮಂಡನ ಶೈಲಿ!

ಕೃಷ್ಣ ಸಭಾಂಗಣವನ್ನೆಲ್ಲ ವೀಕ್ಷಿಸುತ್ತಾ, ಮಾತಿನ ಮಧ್ಯೆ-ಮಧ್ಯೆ ಕೇಳುಗರ ಕಣ್ಣುಗಳನ್ನು ನೇರ ದರ್ಶಿಸುತ್ತಾ, ಅವರ ಪ್ರತಿಕ್ರಿಯೆಗಳನ್ನು ಗಮನಿಸುತ್ತಾ ತನ್ನ ಮಾತುಗಳ ಮುತ್ತಿನ ಸರಮಾಲೆ ಕಟ್ಟಿ ಭಾಷಣ ಮುಂದುವರಿಸಿದ್ದ. ಆಗ, ಅವನ ಕಣ್ಣಿಗೆ ಕಂಡಿದ್ದು... ಹೊಳೆಯುವ ಜೋಡಿ ಕಂಗಳು...! ವಿಶಿಷ್ಠ ಚೈತನ್ಯ ಸೂಸುತ್ತಾ... ಕನ್ನಡಕದೊಳಗಿಂದ ಮಿನುಗುತ್ತಿದ್ದ ಮೋಹಕ ನಯನಗಳು...!! ಒಂದು ಕ್ಷಣ ಮನದಲ್ಲೆ “ವಾವ್...! ಯಾರೀ ಸೋಡಾ ಗ್ಲಾಸ್ ಸುಂದರಿ...?!!” ಅಂದುಕೊಂಡ.

ಅವಳು ರಾಧೆ
ಸುಲೋಚನಾಧಾರಿಣಿ ಮಿನುಗುವ ಕಂಗಳ ಹುಡುಗಿ. ಕೃಷ್ಣನ ಮಾತುಗಳನ್ನು ಆಸಕ್ತಿಯಿಂದ ಕೇಳುತ್ತಿದ್ದಳು. ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಗಳಿಸಿ, ಕಾಲೇಜೊಂದರಲ್ಲಿ ಉಪನ್ಯಾಸಕಿಯಾಗಿ ವೃತ್ತಿ ಮಾಡುತ್ತಿದ್ದಾಳೆ. ತನ್ನ ವಯಸ್ಸಿಗೆ ಮೀರಿದ ಪ್ರಬುದ್ಧತೆ, ಗಾಂಭೀರ್ಯತೆ ಅವಳನ್ನು ಬೇರೆಯವರಿಗಿಂತ ವಿಶೇಷ ಅನ್ನುವಂತಾಗಿಸಿತ್ತು. ಸಾಹಿತ್ಯದಲ್ಲಿ ಅವಳಿಗೆ ಅತೀವ ಆಸಕ್ತಿ. ಕೃಷ್ಣನ ಕವನ, ಭಾಷಣಗಳನ್ನು ಆಲಿಸಲೆಂದೇ ಇಂದಿನ ಕಾರ್ಯಕ್ರಮಕ್ಕೆ ಬಂದಿದ್ದಾಳೆ. ಪತ್ರಿಕೆಯಲ್ಲಿ ಪ್ರಕಟವಾಗುವ ಕೃಷ್ಣನ ಕಥೆ-ಕವಿತೆಗಳು ಅವಳನ್ನು ಮೋಡಿ ಮಾಡಿದ್ದವು. ಕೃಷ್ಣನೆಂದರೆ ಏನೋ ಅಭಿಮಾನ...! ಅವನ ಇಂದಿನ ಮಾತಿನ ಪರಿ, ವಾಗ್ಝಂರಿ, ನಗೆಹನಿಗಳ ಝರಿ, ಅವಳಲ್ಲಿ ರೋಮಾಂಚನ ಉಂಟುಮಾಡಿದವು.

ಪ್ರಥಮ ಭೇಟಿ
ಕಾರ್ಯಕ್ರಮ ಮುಗಿಯುತ್ತಿದ್ದಂತೆ, ಬಹಳಷ್ಟು ಜನ ಅಭಿನಂದನೆ ಸುರಿಸುತ್ತಾ ಕೃಷ್ಣನನ್ನು ಸುತ್ತುವರಿದಿದ್ದರು. ಎಲ್ಲರ ಪ್ರತಿಕ್ರಿಯೆ, ಹೊಗಳಿಕೆಗಳಿಗೆ ವಿನೀತನಾಗಿ, ಹಸನ್ಮುಖದಿಂದ ಸ್ಪಂದಿಸುತ್ತಿದ್ದ ಕೃಷ್ಣ. ಆದರೆ ಅವನ ಕಣ್ಣುಗಳು ಕಾತುರದಿಂದ ಯಾರನ್ನೋ ಹುಡುಕುತ್ತಿದ್ದವು...!

ಆಗ.. ಆಗ.. ಅವನ ಕಣ್ಣೆದುರು ಬಂದೇ ನಿಂತಿತು. ಅದೇ ಸೆಳೆವ, ಚೈತನ್ಯ ಸೂಸುವ, ಪ್ರಬುದ್ಧತೆಯ ಚಿಲುಮೆಯಂತಿರುವ, ಆ ಸುಲೋಚನಾಧಾರಿಣಿ ಜೋಡಿ ಕಂಗಳು...!!

“ಹಲೋ... ಐಯಾಮ್ ರಾಧಾ... ತುಮಕೂರಿನ ಕಲಾ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿ. ನಾನು ನಿಮ್ಮ ಅಭಿಮಾನಿ ಸಾರ್...” ಎಂದು ನಮಸ್ಕರಿಸಿದಳು.

ಕೃಷ್ಣ ಸಂಭ್ರಮದಿಂದ ಪ್ರತಿವಂದಿಸುತ್ತಾ... “ಯಪ್ಪಾ... ಉಪನ್ಯಾಸಕರೆಲ್ಲ ನನ್ನ ಅಭಿಮಾನಿಯಾದರೆ, ನಾನು ಸಾಹಿತ್ಯ, ಭಾಷಣ ಎಲ್ಲ ಬಿಟ್ಟು, ಸನ್ಯಾಸ ತೊಗೋಬೇಕಾಗುತ್ತೆ. ಮೇಡಮ್ ನಾನೇನು ಅಷ್ಟು ದೊಡ್ಡ ಸೆಲೆಬ್ರಿಟಿಯಲ್ಲ. ಅಭಿಮಾನ ಗಿಭಿಮಾನ ಏನೂ ಬೇಡ. ಸ್ನೇಹಿತರಾದರೆ ಸಾಕು ರೀ...” ಎಂದು ನಕ್ಕ.

ರಾಧೆ ಉತ್ಸಾಹದಿಂದ... “ನಿಮ್ಮ ಕವನಗಳೆಂದರೆ ನನಗೆ ಬಹಳ ಇಷ್ಟ. ಪತ್ರಿಕೆಗಳಲ್ಲಿ ಪ್ರಕಟವಾಗುವ ನಿಮ್ಮೆಲ್ಲ ಬರೆಹಗಳ ರೆಗ್ಯುಲರ್ ರೀಡರ್ ನಾನು ಸಾರ್...” ಎಂದಳು.

ಕೃಷ್ಣ “ಧನ್ಯವಾದ ನಿಮ್ಮ ಅಕ್ಷರ ಪ್ರೀತಿಗೆ ಮೇಡಮ್... ನಾನು ಸಾಹಿತ್ಯದ ವಿದ್ಯಾರ್ಥಿಯಲ್ಲ. ಬರೆಹ ನನ್ನ ವೃತ್ತಿಯೂ ಅಲ್ಲ. ನಾನು ಬೆಂಗಳೂರಿನ ಕಾರ್ಖಾನೆಯೊಂದರಲ್ಲಿ ಉದ್ಯೋಗಿ. ಬರೆಯುವುದು ನನ್ನ ಹವ್ಯಾಸ ಅಷ್ಟೆ. ನಿಮ್ಮಂತಹ ಸಾಹಿತ್ಯೋಪಾಸಕರು, ಸಾಹಿತ್ಯ ಉಪನ್ಯಾಸಕರು ನನ್ನ ಬರೆಹಗಳನ್ನು ಇಷ್ಟ ಪಡುತ್ತೀರಾ ಅಂದರೆ ನಿಜಕ್ಕೂ ಖುಷಿಯಾಗುತ್ತದೆ...” ಎಂದವನೆ ತನ್ನ ಬ್ಯಾಗಿನಿಂದ ಎರಡು ಪುಸ್ತಕ ತೆಗೆದು ಅವಳ ಕೈಗಿಡುತ್ತಾ “ಮೇಡಮ್... ಇವು ಇದುವರೆಗೆ ಪ್ರಕಟವಾಗಿರುವ ನನ್ನೆರಡು ಕವನ ಸಂಕಲನಗಳು. ಓದಿ ನಿಮ್ಮ ಅಭಿಪ್ರಾಯ ತಿಳಿಸಿ...” ಎಂದ.

ರಾಧೆ ಸಂತಸದಿಂದ ಪುಸ್ತಕ ತೆಗೆದುಕೊಳ್ಳುತ್ತಾ... “ಶೂರ್... ಖಂಡಿತಾ ಓದಿದ ಕೂಡಲೇ... ನನ್ನ ಅನಿಸಿಕೆ ತಿಳಿಸುತ್ತೇನೆ...” ಎಂದಳು.

ಕೃಷ್ಣ ಅವಳನ್ನೇ ನೋಡುತ್ತಾ... “ರೀ ಮೇಡಮ್... ಬರೀ ಅನಿಸಿಕೆಯಲ್ಲ, ಅದರಲ್ಲಿನ ತಪ್ಪು ಒಪ್ಪು ಎಲ್ಲವನ್ನೂ ತಿಳಿಸಬೇಕು. ಓದು ಅಧ್ಯಯನಗಳಿಲ್ಲದೆ ಹಾಗೆ ಹವ್ಯಾಸಕ್ಕೆ ಬರೆವ ನನ್ನಂತಹವರಿಗೆ, ನಿಮ್ಮಂತಹ ಸಾಹಿತ್ಯ ಉಪನ್ಯಾಸಕರ ಸಲಹೆ, ಟೀಕೆ-ಟಿಪ್ಪಣಿ ಬೆಳೆಯಲು ಸಹಕಾರಿ. ಪುಸ್ತಕದಲ್ಲೆ ನನ್ನ ಮೊಬೈಲ್ ನಂಬರ್, ವಿಳಾಸವೆಲ್ಲಾ ಇದೆ. ಓದಿದ ಮೇಲೆ ಮರೆಯದೆ ಕರೆ ಮಾಡಿ...” ಎಂದ.

ರಾಧೆ ಒಂದು ಸಣ್ಣ ಹಾಳೆಯಲ್ಲಿ ತನ್ನ ಮೊಬೈಲ್ ನಂಬರ್ ಬರೆದು, ಆ ಹಾಳೆಯನ್ನು ಅವನ ಕೈಗಿಡುತ್ತಾ... “ಶೂರ್... ಇದು ನನ್ನ ಮೊಬೈಲ್ ನಂಬರ್.. ಇನ್ನು 3-4 ದಿನದಳೊಗೆ ಓದಿ, ಪುಸ್ತಕಗಳ ಬಗ್ಗೆ ತಿಳಿಸುತ್ತೇನೆ... ಬೈ..” ಎಂದು ಹೇಳಿ ಹೊರಟಳು.

ಪ್ರೀತಿ ಪ್ರೇಮ ಆರಾಧನೆಗಳ ಭಾವದ ಅಂಬಾರಿ...

ಸರಿಯಾಗಿ ಮೇಲಿನ ಘಟನೆ ನಡೆದ ಎರಡು ದಿನಕ್ಕೆ ಕೃಷ್ಣನ ಮೊಬೈಲ್ ರಿಂಗಣಿಸಿತು. ಯಾವುದೋ ಅಪರಿಚಿತ ಸಂಖ್ಯೆ...! ಆಗಿನ್ನೂ ಯಂತ್ರಗಳೊಂದಿಗಿನ ಯಾಂತ್ರಿಕ ಕಾಯಕ ಮುಗಿಸಿ ಬಂದಿದ್ದ ಕೃಷ್ಣನಿಗೆ ಕರೆ ಸ್ವೀಕರಿಸುವ ಮನಸ್ಸಾಗಲಿಲ್ಲ. ಇತ್ತೀಚೆಗೆ ಅವನಿಗೆ ಈ ಅನಾಮಿಕ ಕರೆಗಳೆಂದರೆ ಕಿರಿಕಿರಿ. ಅದೇ ಬ್ಯಾಂಕಿಂಗ್ ಬೆಡಗಿಯರ... “ಸಾರ್ ಲೋನ್ ಬೇಕಾ...??” ಎನ್ನುವ ಬೇಡಿಕೆ ಧ್ವನಿ. ಇಲ್ಲಾ, “ಸಾರ್ ಇದು ನಮ್ಮ ಕಂಪೆನಿಯ ಹೊಚ್ಚ ಹೊಸಾ ಪ್ಲಾನ್... ಇದು ನಿಮಗೆ ಬೆಸ್ಟ್ ಸೂಟ್ ಆಗುತ್ತದೆ. ಈಗಲೇ ರೀಚಾರ್ಜ್ ಮಾಡಿಸಿ ಸಾರ್...” ಎನ್ನುವ ಮೊಬೈಲ್ ನೆಟ್ವರ್ಕ್ ಕಂಪೆನಿ ಹುಡುಗಿಯರ ಕಾಡುವ ಧ್ವನಿ. ಹಾಗಾಗಿ ಕೃಷ್ಣ ಈ ಅಪರಿಚಿತ ಕರೆಗಳೆಂದರೆ ಹೆದರಿ ಮಾರು ದೂರ ಹೋಗುತ್ತಿದ್ದ. ಅವುಗಳನ್ನು ಸ್ವೀಕರಿಸುವ ಗೋಜಿಗೇ ಹೋಗುತ್ತಿರಲಿಲ್ಲ.

 

ಮತ್ತೆರಡು ದಿನಗಳ ನಂತರ, ಈಮೇಲ್ ಚೆಕ್ ಮಾಡುತ್ತಿದ್ದಾಗ... “ರಾಧಾ.ಗೋಕುಲ@ಜಿಮೇಲ್.ಕಾಮ್” ಎನ್ನುವ ಮೈಲ್ ಕಣ್ಣಿಗೆ ಬಿತ್ತು. “ಯಾರಿದು...!?” ಎಂದು ಮೇಲ್ ಓಪನ್ ಮಾಡಿ ಓದಿದವನೇ ದಿಗ್ಮೂಢನಾದ. ಜೊತೆಜೊತೆಗೆ ಮನ ಸಂಭ್ರಮದಿಂದ ಬೀಗಿತು.

ಅದೇ ಹುಡುಗಿ... ಅಂದು ಕಾರ್ಯಕ್ರಮದಲ್ಲಿ ಭೇಟಿಯಾಗಿದ್ದ ಸುಲೋಚನಾಧಾರಿಣಿ. ಅವಳ ಮೇಲ್ ಎನ್ನುವುದಕ್ಕಿಂತ, ಆ ಮಿಂಚಾಚೆಯಲ್ಲಿದ್ದ ಪತ್ರ, ಅದರಲ್ಲಿನ ಅಂಶಗಳು ಕೃಷ್ಣನನ್ನು ದಂಗು ಬಡಿಸಿ, ದಿಗ್ಭ್ರಾಂತನನ್ನಾಗಿ ಮಾಡಿದವು...!

ಅವನ ಎರಡೂ ಕೃತಿಗಳನ್ನು ಅದ್ಭುತವಾಗಿ ವಿಮರ್ಶೆ ಮಾಡಿದ್ದಳು ರಾಧಾ. ಅವಳ ಸಾಹಿತ್ಯದ ಅಧ್ಯಯನ ಶಕ್ತಿ, ಆ ಪದಪುಂಜಗಳು, ಸುಂದರ ಸುಲಲಿತ ಸರಳ ಬರಹ, ಅವನಲ್ಲಿ ವಿದ್ಯುತ್ ಸಂಚಾರ ಉಂಟು ಮಾಡಿದವು. “ಅಬ್ಬಾ...! ನನ್ನ ಕೃತಿಯಲ್ಲಿ ಇಷ್ಟೆಲ್ಲಾ ವೈಶಿಷ್ಟ್ಯವಿದೆಯೇ...!? ನನ್ನ ಬರೆಹಗಳಿಗೆ ಇಷ್ಟೆಲ್ಲಾ ಆಯಾಮಗಳಿವೆಯೇ...?” ಎಂದು ಅಚ್ಚರಿ...! ಅವನ ಬಗ್ಗೆ ಅವನಿಗೇ ಹೆಮ್ಮೆಯೆನಿಸಿತು...!

ಅಲ್ಲಿಯವರೆಗೆ ರಾಧಾಳನ್ನು ಎಲ್ಲರಂತೆ ಅಂದುಕೊಂಡಿದ್ದ. ಸಾಹಿತ್ಯ ಸಮಾರಂಭಗಳಲ್ಲಿ ಸಿಕ್ಕಾಗ “ಇಂದ್ರ... ಚಂದ್ರ...” ಅಂತೆಲ್ಲ ಹೊಗಳಿ, “ಅಭಿಮಾನ... ಮಣ್ಣು-ಮಸಿ...” ಎಂದೆಲ್ಲಾ ಬೊಗಳೆ ಬಿಟ್ಟು, ಪುಸ್ತಕ ಪಡೆದು ಹೋದವರು... ಅನಂತರದಲ್ಲಿ ಪುಸ್ತಕವನ್ನು ಓದುವುದಿರಲಿ, ಮೂಸಿಯೂ ನೋಡುವುದಿಲ್ಲ. ಶೇಕಡಾ ತೊಂಬತ್ತುರಷ್ಟು ಜನ, ಗಣ್ಯರಿಂದ ಹಿಡಿದು ಸಾಮಾನ್ಯರವರೆಗೂ ಇದೇ ಕಥೆ. ನೂರು ನೂರೈವತ್ತು ರೂಗಳ ಪುಸ್ತಕ ಉಚಿತ ತೆಗೆದುಕೊಂಡು ಹೋದವರು, ಕನಿಷ್ಠ ಒಂದು ರೂಪಾಯಿ ಖರ್ಚು ಮಾಡಿ ಕರೆ ಮಾಡಿ ಪುಸ್ತಕದ ಬಗ್ಗೆ ತಿಳಿಸುವುದಾಗಲೀ, ಐವತ್ತು ಪೈಸೆಯ ಪೋಸ್ಟ್ ಕಾರ್ಡಿನಲ್ಲಿ ನಾಲ್ಕು ಪ್ರೋತ್ಸಾಹದ ನುಡಿ ಬರೆದು, ಬೆನ್ನು ತಟ್ಟುವುದಾಗಲೀ ಈಗಿನ ಕಾಲದಲ್ಲಿಲ್ಲ. ಆ ಉನ್ನತ ಸಂಸ್ಕೃತಿ-ಸಂಸ್ಕಾರಗಳೆಲ್ಲ ಹಿಂದಿನ ತಲೆಮಾರಿನವರೊಂದಿಗೇ ಮಾಯವಾಗುತ್ತಿದೆ. ಪುಸ್ತಕ ತೆಗೆದುಕೊಂಡು ಹೋದಮೇಲೆ ಎರಡು ಮೂರು ದಿನವಾದರೂ ರಾಧಾಳಿಂದಲೂ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ “ಈ ಸೋಡಾ ಬುಡ್ಡಿಯೂ ಮಾಮೂಲು ಎಂ.ಎ. ಕ್ಯಾಟೆಗರಿ. ಇವರೆಲ್ಲ ಸಾಹಿತ್ಯ-ಶಿಕ್ಷಣ ಕ್ಷೇತ್ರಗಳ ವೃತ್ತಿನಿರತ ಸಾಹಿತಿಗಳನ್ನು ಬಿಟ್ಟು, ನಮ್ಮಂತಹ ಹವ್ಯಾಸಿ ಬರೆಹಗಾರರನ್ನು ಅಲಕ್ಷಿಸುವುದೇ ಹೆಚ್ಚು” ಅಂದುಕೊಂಡಿದ್ದ.

ಆದರೆ ಆ ಪತ್ರ ನೋಡುತ್ತಿದ್ದಂತೆ, ಅವನ ಅನಿಸಿಕೆ, ಭ್ರಮೆ ಈ ವಿಷಯದಲ್ಲಿ ಸಂಪೂರ್ಣ ಹುಸಿಯಾಯಿತು. ರಾಧಾಳ ಪತ್ರ ಅವನಲ್ಲಿ ರೋಮಾಂಚನವುಂಟು ಮಾಡಿತು. ಜೊತೆಗೆ ಅವಳು ಮೇಲ್ ನಲ್ಲಿ ಬರೆದಿದ್ದ ಕಡೆಯ ನಾಲ್ಕು ಸಾಲುಗಳು ಚಾಟಿಯೇಟಿನಂತಿದ್ದವು.

“ಸಾರ್... ನಾನು ನಿಮ್ಮನ್ನು ಸೌಜನ್ಯಯುತ ನಿಗರ್ವಿ ವ್ಯಕ್ತಿಯೆಂದುಕೊಂಡಿದ್ದೆ. ಆದ್ದರಿಂದಲೇ ನಿಮ್ಮ ಕೃತಿಗಳನ್ನು ಓದಿದ ಕೂಡಲೇ, ನಿಮಗೆ ನನ್ನ ಅನಿಸಿಕೆ ತಿಳಿಸಬೇಕೆಂದು, ನಿಮ್ಮೊಡನೆ ನನ್ನ ಭಾವಗಳನ್ನು ಹಂಚಿಕೊಳ್ಳಬೇಕೆಂದು, ನಿಮ್ಮ ಮೊಬೈಲಿಗೆ ಕರೆ ಮಾಡಿದೆ. ಆದರೆ ಎಷ್ಟು ಸಲ ಕರೆ ಮಾಡಿದರೂ, ನೀವು ನನ್ನ ಕರೆ ಸ್ವೀಕರಿಸಲಿಲ್ಲ. ಅದು ಸರಿ ನೀವೆಲ್ಲ ದೊಡ್ಡ ಮನುಷ್ಯರು. ಸೆಲೆಬ್ರಿಟಿಗಳು ಅಲ್ಲವಾ ಸಾರ್...? ನಮ್ಮಂತಹವರ ಕರೆಗೆ ನೀವೆಲ್ಲಿ ಕಿವಿಗೊಡುತ್ತೀರಾ...? ಅಲ್ಲದೆ ನಿತ್ಯ ನಮ್ಮಂತಹವರು ನಿಮಗೆಷ್ಟು ಜನ ಸಿಗುತ್ತಾರೋ...? ಎಲ್ಲರನ್ನೂ ಏಕೆ ನೆನಪಿನಲ್ಲಿಟ್ಟುಕೊಳ್ಳುತ್ತೀರಾ...? ಅಲ್ಲವೇ...? ನನಗೆ ನಿಮ್ಮ ಕೃತಿಗಳನ್ನು ನೀಡಿ, ಓದಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಧನ್ಯವಾದಗಳು. ನಿಮಗೆ ಶುಭವಾಗಲಿ. ನಿಮ್ಮ ಸಾಹಿತ್ಯದ ಪಯಣ-ಸಾಧನೆಗಳು ಯಶಸ್ವಿಯಾಗಲಿ”.

ಇಂತೀ ನಿಮ್ಮ ಗೆಳತಿ... ಕ್ಷಮಿಸಿ...
ನಮ್ಮಂತಹವರ ಗೆಳೆತನ ಮಾಡಲು
ನಿಮಗೆ ಸಮಯವೆಲ್ಲಿದೆ...?
ಇಂತೀ ನಿಮ್ಮ ಅಭಿಮಾನಿ.

- ರಾಧಾ.

ಯಾರೋ ಕಪಾಳಕ್ಕೆ “ಛಾಟೀರ್...” ಎಂದು ಬಾರಿಸಿದಂತಾಯಿತು. ತಕ್ಷಣವೇ ಸಾವರಿಸಿಕೊಂಡವನೇ ಮೊಬೈಲ್ ತೆಗೆದು ಕಾಲ್‌ಲಾಗ್ ಪರೀಕ್ಷಿಸಿದ. ಕಳೆದ ಮೂರ್ನಾಲ್ಕು ದಿನಗಳಲ್ಲಿ ಒಂದೇ ಅಪರಿಚಿತ ಸಂಖ್ಯೆಯಿಂದ ಎಂಟು ಹತ್ತು ಬಾರಿ ಕರೆ ಬಂದಿತ್ತು. ಇದು ಬಹುಶಃ ರಾಧಾಳಾ ಕರೆಯೇ ಇರಬೇಕೆಂದುಕೊಂಡ. ಅಂದು ಕಾರ್ಯಕ್ರಮ ದಿನದಂದು ರಾಧಾ ಮೊಬೈಲ್ ನಂಬರ್ ಬರೆದುಕೊಟ್ಟಿದ್ದ ಚೀಟಿ, ಅಲ್ಲೇ ಅಂದಿನ ಗಡಿಬಿಡಿಯಲ್ಲಿ ಕಳೆದುಹೋಗಿತ್ತು. ಕೂಡಲೇ ಆ ಅಪರಿಚಿತ ಸಂಖ್ಯೆಗೆ ಕರೆ ಮಾಡಿದ. ನಾಲ್ಕೈದು ಬಾರಿ ರಿಂಗ್ ಆಗುತ್ತಿದ್ದಂತೆ, ಅತ್ತ ಕಡೆಯಿಂದ ಕರೆಯನ್ನು ತುಂಡರಿಸಲಾಯಿತು. ಮತ್ತೆ-ಮತ್ತೆ ಕರೆ ಮಾಡಿದರೂ ಯಾರೂ ಕರೆ ಸ್ವೀಕರಿಸಲಿಲ್ಲ. ಕಡೆಗೆ... “ಸ್ವಿಚ್ ಅಫ್” ಎಂದು ಉತ್ತರ ಬಂತು. ಕೃಷ್ಣ ಸತತ ಎರಡು ದಿನಗಳ ಕಾಲ ಪ್ರಯತ್ನಿಸಿದರೂ ಮತ್ತದೇ ಕಥೆ. ಕಡೆಗೆ ಇನ್ನು ಯಾವುದೇ ಕಾರಣಕ್ಕೂ ಈ ಸಂಖ್ಯೆಗೆ ಕರೆ ಮಾಡಬಾರದೆಂದು ನಿರ್ಧರಿಸಿದ.

ಮರುದಿನ ಆಗಿನ್ನೂ ಕೆಲಸದಿಂದ ಮನೆಗೆ ಬಂದು ಕುಳಿತಿದ್ದ. ಅದೇ ಸಮಯಕ್ಕೆ ಮೊಬೈಲ್ ರಿಂಗಣಿಸಿತು. ಅದೇ ಅಪರಿಚಿತ ಸಂಖ್ಯೆ...! ಕೋಪದಿಂದ ಮೊಬೈಲ್ ಕಿವಿಗಾನಿಸಿ... “ಹಲೋ ಕೃಷ್ಣ ಮಾತಾಡೋದು... ಯರ‍್ರೀ ನೀವು...?” ಕಿರುಚಿದ. ಅತ್ತಕಡೆಯಿಂದ ಮಧುರ ವೀಣಾ ನಾದ... “ಹಲೋ ನಾನು ರಾಧಾ...” ಎನ್ನುವುದೇ ತಡ... ಕೃಷ್ಣ ಮತ್ತಷ್ಟು ಸಿಟ್ಟಿನಿಂದ... ರ‍್ರೀ... ಏನ್ರೀ ನೀವು... ಒಂದು ಚೂರಾದ್ರೂ ಮ್ಯಾನರ್ಸ್ ಇದೆಯೇನ್ರಿ ನಿಮಗೆ...? ಎರಡು ದಿನಗಳಿಂದ ಎಷ್ಟು ಸಲ ಕಾಲ್ ಮಾಡಿದ್ದೀನಿ... ಅಟ್‌ಲೀಸ್ಟ್ ಕಾಲ್ ರಿಸೀವ್ ಮಾಡಬೇಕು ಅನ್ನೊ ಅಷ್ಟು ಕಾಮನ್ ಸೆನ್ಸ್ ಬೇಡವೇನ್ರೀ...?” ಅಕ್ಷರಶಃ ಅರುಚಿದ. ಅತ್ತಲಿಂದ ರಾಧಾ ತಣ್ಣಗಿನ ಧ್ವನಿಯಲ್ಲಿ... “ಯಾಕ್ಸಾರ್ ನಾನು ನಿಮ್ಮ ಕಾಲ್ ರಿಸೀವ್ ಮಾಡ್ಬೇಕು...?” ಎಂದು ಪ್ರಶ್ನಿಸಿದಳು. ಕೃಷ್ಣನಿಗೆ ಕೋಪ ಇನ್ನೂ ಇಮ್ಮಡಿಯಾಯಿತು. “ಏನ್ರೀ ಹೀಗೆ ಮಾತಾಡ್ತಾ ಇದ್ದೀರಾ...? ನಿಮ್ಮನ್ನು ನೀವು ಏನೂಂತ ತಿಳ್ಕೊಂಡಿದ್ದೀರಾ...?” ಎಂದ. ರಾಧ ಪ್ರಶಾಂತಳಾಗಿ... “ನೋಡಿ ಸಾರ್... ನೀವು ದೊಡ್ಡವರೇ ಇರಬಹುದು. ನಿಮ್ಮ ಕಣ್ಣಲ್ಲಿ ನಾವು ಸಣ್ಣವರೇ ಇರಬಹುದು. ಆದರೆ... ನಮ್ಮನ್ನು ನಾವು ಸಣ್ಣವರು ಅಂತ ಯಾಕೆ ಅಂದುಕೊಳ್ಳಬೇಕು ಹೇಳಿ ಸಾರ್...? ಓ.ಕೆ. ಅಷ್ಟಕ್ಕೂ ನಿಮ್ಮ ಕಾಲ್ ನಾನು ರಿಸೀವ್ ಮಾಡಲಿಲ್ಲ ಅಂತ ನಿಮಗೆ ಇಷ್ಟು ಸಿಟ್ಟು ಬಂದರೆ, ನಾನು ನಾಲ್ಕು ದಿನಗಳ ಹಿಂದೆ ಎರಡು ದಿನ ಸತತವಾಗಿ ಕರೆ ಮಾಡಿದೆ. ನೀವು ಯಾಕ್ಸಾರ್ ರಿಸೀವ್ ಮಾಡಲಿಲ್ಲ...?” ಎಂದಳು. ಕೃಷ್ಣ ತಬ್ಬಿಬ್ಬಾಗುತ್ತಾ, “ರೀ... ಅದು... ನನಗೆ ಟೈಮ್ ಇರಲಿಲ್ಲ ರೀ...” ಎಂದ. ಆಗ ರಾಧಾ, “ಯೆಸ್ ಸಾರ್... ನನಗೂ ನಿಮ್ಮ ಹಾಗೆ ಟೈಮ್ ಇರಲಿಲ್ಲ. ನಿಮಗೆ ನಿಮ್ಮ ಟೈಮ್ ಎಷ್ಟು ಮುಖ್ಯಾನೋ..., ನಮಗೂ ನಮ್ಮ ಟೈಮ್ ಅಷ್ಟೇ ಮುಖ್ಯ...! ಸಾರ್ ಟೈಮ್ ಅನ್ನೋದು ಎಲ್ಲರಿಗೂ ಒಂದೆ. ಇದು ನಿಮಗೆ ಅರ್ಥ ಆಗಲೀ ಅಂತಾನೇ, ಎರಡು ದಿನಗಳಿಂದ ನಿಮ್ಮ ಕಾಲ್ ರಿಸೀವ್ ಮಾಡಲಿಲ್ಲ” ಎಂದು ಮುಂದುವರಿಯುತ್ತಾ, “ಸರಿ ಕೋಪ ಬಿಡಿ ಜಗಳ ಬೇಡಾ. ಈಗ ಹೇಳಿ ನನ್ನ ಮೈಲ್ ನೋಡಿದಿರಾ...? ಏನ್ರೀ ಸಾರ್ ನೀವು, ಬುಕ್ಸ್ ಓದಿದ ಮೇಲೆ ಫೋನ್ ಮಾಡಿ ತಿಳಿಸಿ ಅಂದವರು ನೀವೆ... ಉತ್ಸಾಹದಿಂದ ಬುಕ್ಸ್ ಬಗ್ಗೆ ಮಾತನಾಡೋಣಾ ಅಂತ ಫೋನ್ ಮಾಡಿದಾಗ, ಕಾಲ್ ರಿಸೀವ್ ಮಾಡದೆ ನನಗೆ ನಿರಾಸೆ ಮಾಡಿದೋರು ನೀವೆ” ಎನ್ನುತ್ತಿದ್ದಂತೆ ನಿಧಾನಕ್ಕೆ ಕೃಷ್ಣನ ಕೋಪ ಕರಗಿ, ಇಬ್ಬರೂ ಸಾವಕಾಶವಾಗಿ ಒಂದು ಗಂಟೆಯ ಕಾಲ ಸಂಭಾಷಿಸಿದರು.

*

ಹೀಗೆ ಆರಂಭವಾದ ಕೃಷ್ಣ ರಾಧೆಯರ ದೂರವಾಣಿ ಸಂಭಾಷಣೆ, ಮೇಲ್ ಸಂಪರ್ಕ ಗಾಢವಾಗುತ್ತಾ ಹೋಯಿತು. ಕೃಷ್ಣ ಸಮಯ ಸಿಕ್ಕಾಗಲೆಲ್ಲ ಅವಳಿಗೆ ಕರೆ ಮಾಡಿ ನಗಿಸುತಿದ್ದ, ರೇಗಿಸುತಿದ್ದ, ಕಾಲೆಳೆಯುತ್ತಿದ್ದ. ಕೃಷ್ಣನೆಂದರೆ ಕೃಷ್ಣನೆ...! ತುಂಟ... ಜೀವನ್ಮುಖಿ... ಜೀವನದ ಕ್ಷಣ-ಕ್ಷಣಗಳನ್ನು, ರಸನಿಮಿಷಗಳನ್ನು ಆಸ್ವಾದಿಸಿ, ಅನುಭವಿಸಿ, ಆನಂದಿಸಿ, ಸಂಭ್ರಮಿಸಬೇಕೆನ್ನುವ ಭಾವಜೀವಿ. ರಾಧೆ... ರಾಧೆಯೆ...! ಅದೇ ಆರಾಧನೆ, ಪ್ರಬುದ್ಧತೆ, ನಿಖರತೆ, ಅಛಲತೆ. ಅವನ ಬರೆಹಗಳನ್ನು ಆನಂದಿಸುತ್ತಾ, ಅಧ್ಯಯನ–ಅಧ್ಯಾಪನಗಳಲ್ಲಿ ಆಹ್ಲಾದಿಸುತ್ತಾ, ಭಾವ ತೀವ್ರತೆಗೊಳಗಾಗದೆ ಎಲ್ಲವನ್ನೂ ವಸ್ತುನಿಷ್ಠವಾಗಿ ನೋಡುವ ವಾಸ್ತವಜೀವಿ.

ರಾತ್ರಿ ಒಂಬತ್ತರ ಸಮಯ... ರಾಧೆಯ ಮೊಬೈಲ್ ರಿಂಗಣಿಸಿತು. ಕೃಷ್ಣನದೇ ಕರೆ... ರಾಧೆ ಫೋನ್ ಕಿವಿಗಿಟ್ಟುಕೊಂಡು, “ಹೇಳಿ ಕೃಷ್ಣ... ಏನು ಮಾಡ್ತಾ ಇದ್ದೀರಾ...?” ಎಂದಳು.

“ಹಲೋ ಮೇಡಮ್ ಈಗ ಸದ್ಯಕ್ಕೆ ನಿಮ್ಮ ಜೊತೆ ಮಾತಾಡ್ತಾ ಇದ್ದೀನಿ... ಹ್ಹ...ಹ್ಹ...ಹ್ಹಾ... ನೀವು ಏನು ಮಾಡ್ತಾ ಇದ್ದೀರಾ...?” ಎಂದು ನಕ್ಕನು.

“ಸಾರ್ ಈಗ ಊಟ ಮಾಡ್ತಾ ಇದ್ದೀನಿ... ಬನ್ನೀ ಸಾರ್ ಊಟ ಮಾಡೋಣಾ...”
“ಓ.ಕೆ. ಮೇಡಮ್... ನೀವು ಊಟ ಮುಗಿಸಿ, ಆಮೇಲೆ ಕರೆ ಮಾಡ್ತೀನಿ...”

ಅರ್ಧ ಗಂಟೆಯ ನಂತರ... ಮತ್ತೆ ರಾಧೆಗೆ ಕೃಷ್ಣನ ಕರೆ...
“ಹಲೋ... ಆಯ್ತೇನ್ರೀ ಊಟ ಮೇಡಮ್... ಏನು ಮಾಡ್ತಾ ಇದ್ದೀರಾ...?”
“ಆಯ್ತು ಸಾರ್ ಊಟ. ಈಗ ಮಲಗೋಕೆ ರೆಡಿ ಆಗ್ತಾ ಇದ್ದೀನಿ...” ಎನ್ನುತ್ತಿದ್ದಂತೆ ರಾಧೆ,

ಅತ್ತ ಕಡೆಯಿಂದ ಕೃಷ್ಣ ಜೋರಾಗಿ ನಗಲು ಆರಂಭಿಸಿದ.

“ಯಾಕೆ ಸಾರ್... ಏನಾಯ್ತು ನಿಮಗೆ...? ಹುಚ್ಚೇನ್ರೀ...!? ಮಲಗ್ತಾ ಇದ್ದೀನಿ ಅಂದ್ರೆ ತಪ್ಪೇನ್ರೀ...!?”

ಕೃಷ್ಣ ನಗುತ್ತಾ, “ರೀ... ಪ್ಲೀಸ್ ನೀವು ಬಯ್ಯೋಲ್ಲ ಅಂದ್ರೆ ನನಗೆ ಅನ್ನಿಸಿದ್ದನ್ನು ಹೇಳ್ತೀನಿ. ಹೇಳಲಾ...?” ಎಂದ.

ರಾಧೆ ಸೀರಿಯಸ್ ಆಗಿ, “ಹೇಳಿ...” ಅಂದಳು.
“ನೋಡ್ರೀ... ನಾನು ಆಗಲೇ ಕರೆ ಮಾಡಿದಾಗ, ಊಟ ಮಾಡ್ತಿದ್ದೀನಿ ಅಂದ್ರಿ. ಮತ್ತೆ ಬನ್ನಿ ಊಟಕ್ಕೆ ಅಂದ್ರಿ. ಅದೇ ರೀತಿ ಯಾರಿಗಾದ್ರೂ ಕಾಲ್ ಮಾಡಿದಾಗ ಕಾಫೀ ಕುಡಿತಾ ಇದ್ರೆ, ಬನ್ನಿ ಕಾಫಿ ಕುಡಿಯೋಣಾ ಅಂತಾರೆ. ಅಕಸ್ಮಾತ್ ತಿಂಡಿ ತಿನ್ನುತ್ತಾ ಇದ್ರೆ ಬನ್ನಿ ತಿಂಡಿ ತಿನ್ನೋಣಾ ಅನ್ನುತ್ತಾರೆ. ಆದ್ರೆ... ಆದ್ರೆ...” ಎಂದು ಮಾತು ನಿಲ್ಲಿಸಿದ ಕೃಷ್ಣ.

ರಾಧೆ ಸಿಟ್ಟಿನಿಂದ, “ಆದ್ರೆ... ಮುಂದೆ ಅದೇನು ಬೇಗ ಹೇಳ್ರಿ...?” ಎಂದಳು.
ಕೃಷ್ಣ, “ಆದ್ರೆ... ಮಲಗೋ ವೇಳೇಲಿ... ಯಾರಿಗೇ ಕಾಲ್ ಮಾಡಿದ್ರೂ... ಮಲಗ್ತಾ ಇದ್ದೀವಿ ಗುಡ್ ನೈಟ್ ಅನ್ನುತ್ತಾರೆ. ಅಥವಾ ರಾತ್ರಿ ವೇಳೆಯಲ್ಲಿ ಯಾರೇ ಸಿಕ್ಕರೂ ಶುಭರಾತ್ರಿ ಅನ್ನುತ್ತಾರೆ ವಿನಾ ಯಾರೂ ಬನ್ನಿ ಸಾರ್ ಮಲಗೋಣ ಅಂತ ಕರೆಯೋಲ್ಲ? ಯಾಕ್ರೀ...?” ಎನ್ನುತ್ತಿದ್ದಂತೆ, ರಾಧೆ ಕೋಪದಿಂದ, “ಸಾರ್... ಇದು ಅತಿಯಾಯ್ತು” ಎಂದು ಕೋಪಗೊಂಡಳು.

“ಮೇಡಮ್... ಒಟ್ಟಿಗೆ ಬಯ್ಯುವಿರಂತೆ. ಇನ್ನೊಂದು ಸ್ವಲ್ಪ ಹೇಳಿಬಿಡ್ತೀನಿ ತಡೆಯಿರಿ. ನೋಡ್ರೀ ನಾನು ಹಾಗೆ ಯಾರಿಗಾದರೂ ರಾತ್ರಿ ಕರೆ ಮಾಡಿದಾಗ, ಅವರು ಗುಡ್‌ನೈಟ್ ಅನ್ನುವುದರ ಬದಲು, ಬನ್ನಿ ಸಾರ್ ಮಲಗೋಣಾ ಅಂದ್ರೆ ಎಂಥಾ ಥ್ರಿಲ್ ರೀ... ಅದೇ ಹಾಗೆ ಕರೆದೋರು ಹೆಂಗಸರಾದರೆ... ಅಬ್ಬಾ...! ಏನೋ ರೋಮಾಂಚನ...! ಆ ಕಲ್ಪನೆಗೆ ಬಣ್ಣ-ಬಣ್ಣದ ಕನಸಿನ ಸುಖನಿದ್ರೆ...! ಅಕಸ್ಮಾತ್ ಹಾಗೆ ಕರೆದವರು ಏನಾದ್ರೂ ಗಂಡಸಾದ್ರೆ. ನಮ್ಮ ಪಾಡು ಬೇಡಾ ರೀ... ಅವನು ಮಂಗಳಮುಖಿಯೋ...? ಅಥವಾ ನನ್ನನ್ನು ಹಾಗೆ ಅಂತ ತಿಳಿದುಕೊಂಡಿದ್ದಾನೋ...? ಅನ್ನುವ ಗಾಬರಿ, ಅನುಮಾನಗಳಲ್ಲಿ ರಾತ್ರಿ ಪೂರ್ತಿ ನಿದ್ದೆ ಬರೋಲ್ಲ... ನಿದ್ದೆ ಬಂದರೂ ಕನಸಲ್ಲೂ ಬೆಚ್ಚಿ-ಬೆಚ್ಚಿ ಬೀಳೋ ಹಾಗೆ ಆಗುತ್ತೆ ರೀ. ಹ್ಹ..ಹ್ಹ..ಹ್ಹಾ..” ಎಂದು ನಗಲಾರಂಭಿಸಿದ.

ರಾಧೆ ಅಸಹನೆಯಿಂದ ಸಿಡಿಯುತ್ತಾ, “ಸಾರ್ ಇಷ್ಟು ಚೀಪ್ ಜೋಕೆಲ್ಲ ನಿಮಗೆ ಭೂಷಣ ಅಲ್ಲ. ಏನ್ ಸಾರ್ ನೀವು...? ನನ್ನ ಹತ್ರ ಯಾರೂ ಇದುವರೆಗೆ ಈ ರೀತಿ ಮಾತಾಡಿಲ್ಲ ಗೊತ್ತಾ...? ಎಲ್ಲರೂ ಮೇಡಮ್ ಅನ್ನುತ್ತಾ... ನಮಸ್ಕರಿಸಿ ಗೌರವ ಕೊಟ್ಟು ಮಾತಾಡುತ್ತಾರೆ. ನೀವೇನ್ ಸಾರ್...?” ಎಂದು ಬೇಸರಿಸಿದಳು.
ಕೃಷ್ಣ.. “ಸಾರಿ ರೀ ಮೇಡಮ್ಮು.. ಈಗ ಹೊಳೆದ ಇನ್‌ಸ್ಟೆಂಟ್ ಜೋಕ್ ರೀ ಯಪ್ಪಾ. ಸರಿ ನಾನು ಈಗ ನಿಮಗೆ ಕಾಲ್ ಮಾಡಿದ್ದು.. ಏಕೆಂದ್ರೆ..” ರಾಗ ಎಳೆದ..

ರಾಧಾ ಆಸಕ್ತಿಯಿಂದ “ಏಕೆ ಸಾರ್..” ಎಂದು ಕೇಳಿದಳು.

ಕೃಷ್ಣ.. “ರೀ.. ಈ ವಾರಾಂತ್ಯ ನನಗೆ ರಜ ಇದೆ. ನಿಮಗೂ ರಜೆ ಇದೆ. ಸೋ..” ಎಂದು ನಿಲ್ಲಿಸಿದ.

ರಾಧ ಕುತೂಹಲದಿಂದ “ಏನು ವಿಷಯ ಹೇಳಿ ಸಾರ್..” ಎಂದಳು.

ಕೃಷ್ಣ ಉತ್ಸಾಹದಿಂದ. “ಸೋ.. ಲಾಲ್‌ಬಾಗ್ ಗೆ ಹೋಗೋಣಾ ಬರ್ತೀರಾ..?” ಎಂದ.

ರಾಧೆ.. “ಓ.. ಯೆಸ್.. ಓ.ಕೆ ಸಾರ್.. ನಿಮ್ಮನ್ನು ಭೇಟಿಯಾಗೋ ಅವಕಾಶ ಅಂದರೆ.. ಬಿಡೋದುಂಟಾ.. ಶೂರ್..” ಅಂದಳು

*
ಭಾನುವಾರ ಬೆಳಿಗ್ಗೆ ಇಬ್ಬರೂ ಲಾಲ್‌ಬಾಗಿನಲ್ಲಿ ಭೇಟಿಯಾದರು. ಕೃಷ್ಣ ಅವಳಿಗಾಗಿ ಬೆಲೆಬಾಳುವ ಚಾಕೊಲೆಟ್ಸ್ ತಂದಿದ್ದ. ಅವಳು ಅವನಿಗಾಗಿ ಸಾಹಿತ್ಯದ ಅಮೂಲ್ಯ ಪುಸ್ತಕಗಳು, ಹೆಸರಾಂತ ಲೇಖಕರ ಶ್ರೇಷ್ಠ ಕೃತಿಗಳನ್ನು ಕಾಣಿಕೆಯಾಗಿ ನೀಡಿದಳು. ಲಾಲ್‌ಬಾಗಿನಲ್ಲಿ ಜೊತೆ ಜೊತೆಯಾಗಿ ಹೆಜ್ಜೆ ಹಾಕುತ್ತಾ ಮನಬಿಚ್ಚಿ ಮಾತನಾಡಿದರು. ಕೃಷ್ಣನ ಕೀಟಲೆ, ತುಂಟ ನುಡಿಗಳು ರಾಧೆಯನ್ನು ಮೋಡಿ ಮಾಡಿದವು. ಲಾಲ್‌ಬಾಗಿನಲ್ಲಿ ವಿಹರಿಸುತ್ತಿದ್ದ ಜೋಡಿಗಳನ್ನು ತೋರಿಸುತ್ತಾ, ಆ ವಿಷಯವಾಗಿ ರಾಧೆಯನ್ನು ರೇಗಿಸುತ್ತಾ... ಹರಟುತ್ತಿದ್ದ ಕೃಷ್ಣ ರಾಧೆಯ ಕಣ್ಣಿಗೆ ಸಪ್ತವರ್ಣದ ಕಾಮನಬಿಲ್ಲಿನಂತೆ ಕಂಡ. ರಾಧೆಯ ಅಕ್ಷರ ಜ್ಞಾನ, ಪ್ರಶಾಂತತೆ, ಸ್ಥಿತಪ್ರಜ್ಞತೆ, ಗಾಂಭೀರ್ಯ, ಮಾತಿನ ಮಾಧುರ್ಯ, ನಿಷ್ಕಲ್ಮಶ ಆಂತರ್ಯ, ಕೃಷ್ಣನನ್ನು ಅವಳೆಡೆಗೆ ಅಭಿಮಾನದಿಂದ ನೋಡುವಂತೆ ಮಾಡಿದವು.

ಕಡೆಗೆ ಲಾಲ್‌ಬಾಗಿನ ಕೆರೆಯ ದಂಡೆಯ ಮೇಲೆ ಕುಳಿತಾಗ, ಕೃಷ್ಣ ತುಂಟತನದಿಂದ... “ರೀ ರಾಧಾ ಮೇಡಮ್ಮು, ಈ ಲಾಲ್‌ಬಾಗಿನಲ್ಲಿ ಇಷ್ಟೆಲ್ಲಾ ಜೋಡಿ ಹಕ್ಕಿಗಳನ್ನು, ಅವರ ಪ್ರೇಮ ಸಲ್ಲಾಪಗಳನ್ನೂ ನೋಡಿದ್ರಲ್ಲಾ... ನಿಮಗೇನು ಅನ್ನಿಸ್ತಾನೇ ಇಲ್ಲವೇನ್ರೀ...?” ಎಂದು ಕೇಳಿದ.

ರಾಧ, “ಹೌದು ಸಾರ್... ಅವರನ್ನು ನೋಡಿ ಅಯ್ಯೋ ಅನ್ನಿಸಿ ಮರುಕ ಆಗ್ತಿದೆ. ಬಹಳಷ್ಟು ಯುವಕ-ಯುವತಿಯರು ಸಾಧಿಸುವ ಅತ್ಯಮೂಲ್ಯ ಸಮಯದಲ್ಲಿ, ಈ ವಯಸ್ಸಿನಲ್ಲಿ ಸಾಧನೆಯ ಮಾರ್ಗ ತೊರೆದು, ಹೀಗೆ ಪ್ರೀತಿ-ಪ್ರೇಮಗಳ ಭರದಲ್ಲಿ, ಬೇಡದ ಕನಸುಗಳ ಬೆನ್ನತ್ತಿ, ಕ್ಷಣಿಕ ಸುಖಗಳ ಭ್ರಮೆಯಲ್ಲಿ ಭವಿಷ್ಯವನ್ನು ಭಸ್ಮವಾಗಿಸಿಕೊಳ್ಳುತ್ತಿದ್ದಾರೆ” ಎಂದಳು.

ಕೃಷ್ಣ ರೇಗಿಸುತ್ತಾ, “ರೀ ಮೇಡಮ್ಮೂ... ಇಲ್ಲೂ ನಿಮ್ಮ ಉಪನ್ಯಾಸಾನ... ಸಾಕು ನಿಲ್ಲಿಸ್ರಿ. ಅವರೆಲ್ಲ ನಿಮ್ಮ ಬಗ್ಗೆ ಮರುಕ, ಅಸೂಯೆಪಟ್ಟುಕೊಳ್ತಾ ಇದ್ದಾರೆ ಗೊತ್ತಾ...?” ಅಂದ.

ರಾಧ ಕುತೂಹಲದಿಂದ, “ಅವರು ಯಾಕ್ರೀ ನನ್ನ ಬಗ್ಗೆ ಅಸೂಯೆಪಡ್ತಾರೆ...? ಅಂತಹುದು ಏನ್ರೀ ಅಗಿದೇ...?” ಎಂದಳು.

ಕೃಷ್ಣ ಕೀಟಲೆ ಧ್ವನಿಯಲ್ಲಿ, “ಅಲ್ಲ ರೀ... ಎಂತಹ ಚೆಲುವಾದ ಹುಡುಗನ ಜೊತೆಯಲ್ಲಿ ಇದ್ದಾಳೆ. ಅಂತ ಅವರಿಗೆಲ್ಲ ಅಸೂಯೆ ಆಗಿರುತ್ತೆ. ಜೊತೆಗೆ ಲವ್ವು-ಗಿವ್ವು ಅನ್ನದೇ, ಇಲ್ಲೂ ಈ ಹುಡುಗಿ ವೇದಾಂತ-ಸಿದ್ದಾಂತಗಳ ಪಿಟೀಲು ಕುಯ್ಯುತ್ತಿದ್ದಾಳೆ ಅಂತ ಮರುಕಪಟ್ಟಿರ್ತಾರೆ” ಅಂದ.

ರಾಧ ಕೋಪದಿಂದ, “ಸಾರ್ ಇದು ಟೂಮಚ್ ಅಲ್ಲ, ತ್ರೀಮಚ್...” ಎಂದಳು.

ಕೃಷ್ಣ ಗಂಭೀರವಾಗಿ, “ರೀ ನಿಜ ಹೇಳ್ರೀ... ನಿಮ್ಮ ಮನಸ್ಸಿನಲ್ಲಿ ನನ್ನ ಮೇಲೆ ಚೂರೂ ಪ್ರೀತಿ-ಪ್ರೇಮ ಅನ್ನುವ ಭಾವನೆಗಳಿಲ್ಲವಾ...?” ಎಂದು ಕೇಳಿದ.

ರಾಧ ಪ್ರಶಾಂತಳಾಗಿ, “ಇದೆ ಸಾರ್... ಚೂರಲ್ಲ... ಬೆಟ್ಟದಷ್ಟು ಪ್ರೀತಿಯಿದೆ, ಆರಾಧನೆಯಿದೆ, ಗೌರವವಿದೆ. ಆದರೆ ಪ್ರೇಮವಿಲ್ಲ” ಎಂದಳು.

ಕೃಷ್ಣ ತುಂಟತನದಿಂದ ಕಾಡಿಸುತ್ತಾ, “ರೀ... ಪ್ರೀತಿಯಿದೆ, ಆರಾಧನೆಯಿದೆ, ಅಂದಮೇಲೆ ಸ್ವಲ್ಪ ಮನಸ್ಸು ಮಾಡ್ರೀ... ಪ್ರೇಮಾನೂ ಹುಟ್ಟೇ ಹುಟ್ಟುತ್ತೆ ರೀ. ಪರವಾಗಿಲ್ಲ ನಾನೂ ಸ್ವಲ್ಪ ಕಾಯ್ತೀನಿ ಬಿಡ್ರೀ...” ಅಂದ.

ರಾಧ ದೃಢವಾದ ಧ್ವನಿಯಲ್ಲಿ, “ಬೇಡ ಸಾರ್... ಆ ಪ್ರೇಮದ ಭಾವ ನನ್ನಲ್ಲಿ ಹುಟ್ಟುವುದೇ ಬೇಡ. ಈ ಪ್ರೀತಿ, ಆರಾಧನೆಗಳಲ್ಲಿ ನನಗೆ ಸಂತೃಪ್ತಿಯಿದೆ. ನಿಮ್ಮ ಆಕರ್ಷಕ ವ್ಯಕ್ತಿತ್ವ. ಜೀವನ್ಮುಖಿ ನಡೆ-ನುಡಿಗಳ ಬಗ್ಗೆ ಪ್ರೀತಿಯಿದೆ. ನಿಮ್ಮ ಅಮೋಘವಾದ ಕಾವ್ಯಶಕ್ತಿ, ಅಗಾಧ ಭಾವಭಂಡಾರ ಇವುಗಳ ಬಗ್ಗೆ ಆರಾಧನೆಯಿದೆ. ಇಷ್ಟು ಸಾಕು ನನಗೆ. ನಮ್ಮ ಈ ಸ್ನೇಹಬಾಂಧವ್ಯ ಕಡೇತನಕ ಹೀಗೇ ಇರಬೇಕು. ನಿಮ್ಮ ಸಾಂಗತ್ಯದಲ್ಲಿ ನಾನು ಬೆಳೆಯಬೇಕು. ನಿಮ್ಮ ಸಾರಥ್ಯದಲ್ಲಿ ನಾನು ಅರಳಬೇಕು. ಇದೇ ನನಗಿಷ್ಟ. ಪ್ರೇಮದ ಭಾವ ಬಂತೆಂದರೆ, ಅದು ಮಿಕ್ಕೆಲ್ಲ ಭಾವಗಳನ್ನು ಆಪೋಷನ ತೆಗೆದುಕೊಂಡು, ಸ್ವಾರ್ಥಿಯನ್ನಾಗಿ ಮಾಡಿಬಿಡುತ್ತದೆ...” ಎಂದಳು.

ಕೃಷ್ಣ ಹಠದಿಂದ, “ಹೌದು... ಪ್ರೇಮ ಅಂದರೆ ಸ್ವಾರ್ಥ ನಿಜ. ಆದರೆ ಪ್ರೇಮಿಸಿದವನೊಂದಿಗೆ ಮದುವೆ, ಮಕ್ಕಳು, ಸಂಸಾರ ಇದರಲ್ಲಿ ಸಾರ್ಥಕತೆಯಿದೆ. ಆ ಸ್ವಾರ್ಥದಲ್ಲೂ... ಸಾಫಲ್ಯ ಇದೆ. ನೀವು ನನ್ನೊಂದಿಗೆ ಪ್ರತಿಹೆಜ್ಜೆಗೂ ಜೊತೆಯಾಗಿ, ನನ್ನನ್ನು ಮುನ್ನಡೆಸುತ್ತಾ, ನೀವೂ ಮುನ್ನಡೆಯುತ್ತಾ ನಿಮ್ಮೆಲ್ಲ ಕನಸುಗಳನ್ನು ಸಾಕಾರಗೊಳಿಸಿಕೊಳ್ಳಬಹುದು” ಅಂದ.

ರಾಧಾ ದಿಟ್ಟವಾಗಿ, “ಇಲ್ಲ ಸಾರ್ ನನಗೆ ಆ ಸ್ವಾರ್ಥದಲ್ಲಿ ಆಸಕ್ತಿಯಿಲ್ಲ. ನೀವು, ನಿಮ್ಮೆಲ್ಲ ಸಾಧನೆಗಳೂ ನನ್ನದು. ಎಲ್ಲದರಲ್ಲೂ ನಾನೇ ಇರಬೇಕು, ನಿಮ್ಮದೆಲ್ಲವೂ ನನ್ನದೇ ಎನ್ನುವ ಮೋಹ ಬಂದರೆ ನಾನೂ ಬೆಳೆಯಲಾರೆ. ನಿಮ್ಮ ಬೆಳವಣಿಗೆಗೂ ಸ್ಫೂರ್ತಿಯಾಗಲಾರೆ. ನಿಮ್ಮನ್ನು ನನ್ನ ಸಂಸಾರ ಪಂಜರದಲ್ಲಿ ಬಂಧಿಸಿ ಆನಂದಿಸಲಾರೆ. ನನ್ನ ಕೃಷ್ಣ ಸ್ವಚ್ಛಂದ ಹಕ್ಕಿಯಾಗಿ ಹಾರಬೇಕು. ತನ್ನ ಕಾವ್ಯಸುಧೆಯನ್ನು ಜಗಕೆಲ್ಲ ಹರಡಬೇಕು, ನಾನು ನಿಮ್ಮ ಸಾಧನೆಗಳನ್ನು ನೋಡಿ ಸಂಭ್ರಮಿಸುತ್ತಾ, ಸ್ವಾರ್ಥ ಮೋಹಗಳಿಲ್ಲದ ಈ ಸುಂದರ ಬಾಂಧವ್ಯವನ್ನು ಕಡೆಯತನಕ ಆನಂದಿಸಬೇಕು. ನನ್ನ ಕೃಷ್ಣನ ವೇಣುನಾದನ ಕೇವಲ ಈ ರಾಧೆಗೆ ಮಾತ್ರವಲ್ಲ... ಈ ಮಾಯಾವಿಯ ಮುರಳೀನಾದವನ್ನು ಜಗವೆಲ್ಲಾ ಆಲಿಸಬೇಕು. ಆಹ್ಲಾದಿಸಬೇಕು. ನಿಮ್ಮ ಭಾವದಿಂಚರ, ಕಾವ್ಯದ ಹೊನಲು ಎಲ್ಲ ಗೋಪಿಕೆಯರೆದೆಯ ತಣಿಸಬೇಕು” ಎಂದಳು.

ಕೃಷ್ಣ ಕೋಪದಿಂದ, “ಹಾಗಾದರೆ ಮುಂದೆ ನಾನು ಬೇರೆ ಯಾರನ್ನು ಮದುವೆಯಾದರೂ, ನಿಮಗೆ ಏನೂ ಅನ್ನಿಸುವುದಿಲ್ಲವೇ...?” ಎಂದು ಕೇಳಿದ.
ರಾಧ ಪ್ರಾಂಜಲ ಮನಸ್ಸಿನಿಂದ, “ಏನೆಂದು ಅನ್ನಿಸಬೇಕು...? ನನಗೇಕೆ ಅನ್ನಿಸಬೇಕು ಸಾರ್...? ಕೃಷ್ಣನೊಂದಿಗೆ ರುಕ್ಮಿಣಿ, ಸುಭದ್ರೆ ಎಲ್ಲರಿದ್ದರೂ... ರಾಧೆಗೆ ಏನೂ ಅನ್ನಿಸುತ್ತಿರಲಿಲ್ಲ ಅಲ್ಲವಾ ಸಾರ್...? ಕೃಷ್ಣನ ಒಲವು, ಸರಸ, ಸಂಸಾರ ರಾಧೆಗೆ ಸಂಬಂಧಿಸಿದ್ದಲ್ಲ. ಕೃಷ್ಣನೆಂದರೆ ರಾಧೆಗೆ ಪ್ರೀತಿ, ಆರಾಧನೆ. ಅವನ ಮುರಳೀ ನಾದದಲ್ಲಿ ಜಗವನ್ನೆ ಮರೆತವಳು ರಾಧೆ. ನಿಮ್ಮ ನಿಷ್ಕಲ್ಮಶ ಸ್ನೇಹ, ಸಾಹಿತ್ಯಿಕ ಚಿಂತನ-ಮಂಥನಗಳ ಸಾಂಗತ್ಯ. ನಿಮ್ಮ ಭಾವ-ಬರೆಹ-ಸಾಧನೆಗಳನ್ನು ನೋಡುತ್ತಾ ಸಂಭ್ರಮಿಸುವ ಸೌಭಾಗ್ಯ. ಇಷ್ಟೆ ಸಾಕು ನನಗೆ”.

ಕೃಷ್ಣ, “ಸೋ... ನೀವು ಎಂದಿಗೂ ನನ್ನನ್ನು ಪ್ರೇಮಿಸುವುದಿಲ್ಲ. ಇದು ನಿಮ್ಮ ಅಂತಿಮ ತೀರ್ಮಾನವಾ...?” ಕೇಳಿದ.

ರಾಧ ನಿರ್ಲಿಪ್ತಳಾಗಿ, “ಯೆಸ್ ಸಾರ್... ಈ ರಾಧೆಗೆ ಕೃಷ್ಣನೆಂದರೆ ಪ್ರೀತಿ, ಅರಾಧನೆ, ಗೌರವ ದಟ್ಸ್ ಆಲ್... ಪ್ರೇಮ ನಾಟ್ ಅಟಾಲ್... ನೋ ಚಾನ್ಸ್ ಅಟಾಲ್...” ಎಂದಳು.
ಕೃಷ್ಣ ಏನೋ ದೃಢ ನಿರ್ಧಾರ ಮಾಡಿದವನೆ, ಜೇಬಿನಿಂದ ಖಾಲಿ ಚೀಟಿಯನ್ನು ತೆಗೆದು ತೋರಿಸುತ್ತಾ, “ನೋಡ್ರೀ ರಾಧಾ... ಇದು ಖಾಲಿ ಚೀಟಿ. ಈಗ ನಿಮಗೆ ಕೊಡ್ತಾ ಇದ್ದೀನಿ. ಸರಿಯಾಗಿ ಇನ್ನು ಆರು ತಿಂಗಳ ನಂತರ ಇಲ್ಲೇ ಮತ್ತೆ ಭೇಟಿಯಾಗೋಣ. ಅವತ್ತು ನೀವು ಬರುವಾಗ, ಈ ಚೀಟಿಯಲ್ಲಿ “ಐ ಲವ್ ಯು. ನಿಮ್ಮನ್ನು ಪ್ರೇಮಿಸುತ್ತಿದ್ದೇನೆ” ಅಂತ ಬರೆದುಕೊಂದು ಬರ್ತೀರಾ. ನೀವು ಹಾಗೆ ಮಾಡೇ ಮಾಡ್ತೀರಾ. ಇನ್ನಾರು ತಿಂಗಳಲ್ಲಿ ನಿಮಗೆ ನಿಮ್ಮ ಪ್ರೇಮದ ಅರಿವಾಗುತ್ತೆ. ನೀವು ಬದಲಾಗೇ ಆಗ್ತೀರಾ... ಇಟ್ಸ್ ಎ ಛಾಲೆಂಜ್... ಓ.ಕೆ.?” ಎಂದು ಸವಾಲು ಹಾಕುತ್ತಾ... ಅವಳ ಕೈಗೆ ಚೀಟಿಯಿತ್ತ.

ರಾಧಳೂ ನಸುನಗುತ್ತಾ, ತನ್ನ ವ್ಯಾನಿಟಿ ಬ್ಯಾಗಿನಿಂದ ಒಂದು ಖಾಲಿ ಚೀಟಿ ತೆಗೆಯುತ್ತಾ, “ನೋಡಿ ಕೃಷ್ಣ ಸಾರ್... ಇನ್ನಾರು ತಿಂಗಳಾದ ಮೇಲೆ ನೀವೇ ಬದಲಾಗಿರ್ತೀರಾ... ರಾಧಾ ಏನೆಂದು ನಿಮಗೆ ಅರ್ಥ ಆಗಿರುತ್ತೆ. ನೀವು ಈ ಚೀಟಿಯಲ್ಲಿ, “ಐ ಅಡೋರ್ ಯು. ನಾನು ನಿಮ್ಮನ್ನು ಗೌರವಿಸ್ತೀನಿ” ಅಂತ ಬರೆದು ತರ್ತೀರಾ. ಇಟ್ಸ್ ಮೈ ಚಾಲೆಂಜ್” ಎಂದು ಕೃಷ್ಣನ ಕೈಗೆ ಚೀಟಿ ಇಟ್ಟಳು.

*

ಎರಡು ದಿನಗಳ ನಂತರ ರಾಧಾಳ ಮೊಬೈಲ್ ರಿಂಗಣಿಸಿತು. ಕೃಷ್ಣನ ಕರೆ... ರಾಧ ಮೊಬೈಲ್ ಕಿವಿಗಾನಿಸಿಕೊಂಡು, “ಹೇಳಿ ಕೃಷ್ಣ ಸಾರ್...” ಎಂದಳು. ಅತ್ತಲಿಂದ ಕೃಷ್ಣ ಉತ್ಸಾಹದಿಂದ “ನೀವು ಕೊಟ್ಟ ಮಂಕುತಿಮ್ಮನ ಕಗ್ಗ ಓದಿ ಮುಗಿಸಿದೆ ರೀ... ಅಬ್ಬಾ...! ಅದ್ಭುತ ಕಗ್ಗ ರಸಧಾರೆ ರಿ...” ಎಂದು ಪುಸ್ತಕ ನೀಡಿದ ಅವರ್ಣೀಯ ಆನಂದವನ್ನು ಹಂಚಿಕೊAಡು, ಮಾತು ಮುಂದುವರೆಸುತ್ತಾ... ಕೀಟಲೆಯ ಧ್ವನಿಯಲ್ಲಿ, “ಏನ್ರೀ... ಇಷ್ಟೊಂದು ಪುಸ್ತಕಗಳನ್ನು ಕೊಟ್ಟಿದ್ದೀರಾ...? ಯಪ್ಪಾ... ಇವುಗಳನ್ನೆಲ್ಲಾ ಹಗಲು-ರಾತ್ರಿ ಓದಿ ಮುಗಿಸೋ ಅಷ್ಟರಲ್ಲಿ... ನನಗೂ ನಿಮ್ಮ ತರ ಸೋಡಾ ಗ್ಲಾಸ್ ಬಂದುಬಿಡುತ್ತೆ ಅಷ್ಟೇ...” ಎಂದು ನಗಲಾರಂಭಿಸಿದ.

ಕೃಷ್ಣನ ಮಾತಿಗೆ ರಾಧೆಯದು ಕಿಲಕಿಲ ನಗೆಯ ಕಲರವ. ಕೃಷ್ಣ ಅತ್ತಕಡೆಯಿಂದ ಕಾಡಿಸುವ ಧ್ವನಿಯಲ್ಲಿ, “ಏನ್ರೀ... ನಗ್ತಾ ಇದ್ದೀರಾ? ನನಗೆ ಸೋಡಾ ಗ್ಲಾಸ್ ಬಂದರೆ ನಿಮಗೆ ಖುಷೀನಾ...? ರೀ.. ಮೇಡಮ್ಮೂ ಸ್ವಲ್ಪ ಸೀರಿಯಸ್ ಆಗಿ ಯೋಚನೆ ಮಾಡ್ರೀ... ನನಗೆ ಸೋಡಾ ಗ್ಲಾಸ್ ಬಂದರೆ ನಿಮಗೇ ಕಷ್ಟ” ಎಂದನು. ರಾಧ ಮುಗುಳ್ನಗುತ್ತಾ, “ಯಾಕ್ರೀ ನಿಮಗೆ ಸೋಡಾ ಗ್ಲಾಸ್ ಬಂದರೆ, ನನಗೇನ್ರೀ ಕಷ್ಟಾ ಅಗುತ್ತೇ?” ಎಂದು ಕುತೂಹಲದಿಂದ ಕೇಳಿದಳು. ಅದಕ್ಕೆ ಕೃಷ್ಣ ಸೀರಿಯಸ್ ಧ್ವನಿಯಲ್ಲಿ, “ನೋಡ್ರೀ... ಇನ್ನಾರು ತಿಂಗಳಿಗೆ ನೀವು ನನ್ನ ಪ್ರೇಮಿಸ್ತೀನಿ ಅಂತ ಒಪ್ಕೋತೀರಾ. ನಮ್ಮ ಮದುವೆ ಮಾತುಕತೆ ಆಗುತ್ತೆ. ಆಗ ಆ ಸಂತಸ ಸಂಭ್ರಮದಲ್ಲಿ ನಾನು ನಿಮಗೆ ಪ್ರಥಮ ಚುಂಬನ ಕೊಡೋಕೆ ಬಂದಾಗ... ನೀವೂ ಸೋಡಾ ಗ್ಲಾಸು, ನಾನು ಸೋಡಾ ಗ್ಲಾಸು ಆಗಿರ್ತೀನಿ. ಆಗ ಎರಡೂ ಗ್ಲಾಸೂ ಕ್ಲಾಶ್ ಆಗಿ, ಮುತ್ತಿನ ಬದಲು ಇಬ್ಬರ ಕಣ್ಣಿಗೂ ಆಪತ್ತು. ಅಲ್ಲವೇನ್ರೀ...?” ಎಂದು ಜೋರಾಗಿ ನಗಲಾರಂಭಿಸಿದ.

ಕೃಷ್ಣನ ಮಾತಿನಿಂದ ರಾಧೆಗೆ ಒಂದೆಡೆ ನಾಚಿಕೆ, ಮತ್ತೊಂದಡೆ ಮುಜುಗರ. ಹುಸಿಕೋಪದಿಂದ, “ಶಟಪ್ ಕೃಷ್ಣ... ನನ್ನ ಬಳಿ ಏನು ಮಾತಾಡ್ಬೇಕು... ಏನು ಮಾತಾಡ್ಬರಾದು ಅನ್ನೋದಾದ್ರು ಗೊತ್ತಾಗಲ್ವೇನ್ರಿ ನಿಮಗೆ...? ಇದು ತುಂಬಾ ಅತಿ ಆಯ್ತು. ರೀ ನೀವು ಕಲ್ಪಿಸಿಕೊಂಡಿರುವ ಸೀನ್ ಏನೂ ನಮ್ಮಿಬ್ಬರ ಜೀವನದಲ್ಲಿ ನಡೆವ ಸಾಧ್ಯತೆ ಇಲ್ಲ. ಅಷ್ಟೆಲ್ಲ ಸಂಭ್ರಮ ಪಡಬೇಡಿ. ಮೊದಲು ನಾನು ಕೊಟ್ಟಿರುವ ಬುಕ್ಸ್ ಎಲ್ಲ ಓದಿ ಮುಗಿಸಿ, ಓದಿ ಮುಗಿಸಲೇಬೇಕು... ಇಟ್ಸ್ ಮೈ ಕಂಡಿಶನ್... ಓ.ಕೆ?” ಎಂದು ಮಾತು ಮುಗಿಸಿದಳು.

ಕೃಷ್ಣ ಅತ್ತ ಕಡೆ ರಾಧ ಕೊಟ್ಟ ಪುಸ್ತಕಗಳಲ್ಲಿ ತಲೆಯಿಟ್ಟು ಅನ್ಯಮನಸ್ಕನಾಗಿ ಮಲಗಿದ. ಇತ್ತ ರಾಧಾ ಏನೋ ಮಧುರ ಭಾವ ಸ್ಪರ್ಶದಲಿ ನಗುತ್ತಾ ಮಲಗಿದಳು.

ನಿತ್ಯ ಕೃಷ್ಣನ ಅದೇ ತುಂಟಾಟ, ರಾಧೆಯ ಅದೇ ಸ್ಥಿತಪ್ರಜ್ಞತೆ. ಅನುದಿನ ನಗೆ ಉಲ್ಲಾಸಗಳ ಸುಮಧುರ ಸಂಭಾಷಣೆ. ಕೆಲಸ ಕಾರ್ಯಗಳ ಒತ್ತಡಗಳ ನಡುವೆಯೂ ಉಭಯ ಕುಶಲೋಪರಿ, ಸಮಯ ಸಿಕ್ಕಾಗಲೆಲ್ಲ ಸಾಹಿತ್ಯಿಕ ವಿಷಯಗಳ ವಾದ-ವಾಗ್ವಾದ, ಆರೋಗ್ಯಪೂರ್ಣ ಚರ್ಚೆಗಳು, ವಾರಾಂತ್ಯಗಳಲ್ಲಿ ಮನೋಲ್ಲಾಸಗೊಳಿಸುವ ಭೇಟಿ, ಒಡನಾಟಗಳು. ಹೀಗೆ ಸಾಗುತ್ತಿತ್ತು ಕೃಷ್ಣ-ರಾಧೆಯರ ಜೀವನಯಾನ. ರಾಧೆಯ ವಯಸ್ಸಿಗೆ ಮೀರಿದ ಗಾಂಭೀರ್ಯ, ಪ್ರಬುದ್ಧತೆ ಕಂಡು, ಅವಳ ನಿರರ್ಗಳ ಮಾತಿನ ಶೈಲಿ ಎಲ್ಲವನ್ನು ನೋಡಿ ಕೃಷ್ಣ ಅವಳನ್ನು “ಬೋರ್‌ವೆಲ್ ಮೇಡಮ್ಮು” ಎಂದು ರೇಗಿಸುತ್ತಿದ್ದ. ಕೃಷ್ಣನ ತುಂಟಾಟ, ಕೀಟಲೆ, ಹುಡುಗಾಟ, ತರಲೆ, ವರ್ತನೆಗಳನ್ನು ಕಂಡು ರಾಧ ಅವನನ್ನು “ಫ್ಲರ್ಟ್ ಮಾಸ್ಟರ್” ಎಂದು ಕಾಡಿಸುತ್ತಿದ್ದಳು. ಕೃಷ್ಣನ ಸಾನಿಧ್ಯ ರಾಧೆಯನ್ನು ಅವಳಿಗರಿವಿಲ್ಲದಂತೆ ಪರಿವರ್ತಿಸುತ್ತಿತ್ತು. ರಾಧಳ ಸಾಂಗತ್ಯ ಕೃಷ್ಣನ ಮೇಲೂ ಅಚ್ಚರಿಯ ಪರಿಣಾಮ ಬೀರಿ, ಅವನಲ್ಲೂ ಅಗಾಧವಾದ ಬದಲಾವಣೆ ಉಂಟು ಮಾಡತೊಡಗಿತ್ತು.

ಪರಿ ಸಮಾಪ್ತಿ...

ಆರು ತಿಂಗಳ ನಂತರ...

ಅಂದು ಮೊದಲೇ ನಿಶ್ಚಿತವಾದ ಸಮಯಕ್ಕೆ ಸರಿಯಾಗಿ, ಕೃಷ್ಣ-ರಾಧಾ ಲಾಲ್‌ಬಾಗಿನ ಆ ಕೆರೆಯದಂಡೆಯ ಮೇಲೆ ಭೇಟಿಯಾದರು. ಕೃಷ್ಣನದು ಅದೇ ತುಂಟತನ, ಕೀಟಲೆ. ಆದರೀಗ ಆ ಹುಡುಗಾಟದ ಹೃದಯದೊಳಗೊಂದಿಷ್ಟು ಗಾಂಭೀರ್ಯ, ಪ್ರಬುದ್ಧತೆ ಅರಳಲಾರಂಭಿಸಿತ್ತು. ರಾಧಾಳದೂ ಅದೇ ಬದಲಾಗದ ಗೌರವದ ವರ್ತನೆ. ಆದರೀಗ ಆ ಗಂಭೀರ ಸ್ವಭಾವದ ಅಂತರಾಳದೊಳಗೊಂದು ಮೌನ ಮಾಧುರ್ಯ ಚಿಗುರೊಡೆಯುತ್ತಿತ್ತು.

ಕೃಷ್ಣ ಮಾಮೂಲಿನಂತೆ ರೇಗಿಸುತ್ತಾ, ರಾಧೆಯನ್ನು ಕೆಣಕುತ್ತಾ, ಮಧ್ಯೆ-ಮಧ್ಯೆ ಬದುಕು-ಸಾಹಿತ್ಯದ ಸಂಕೀರ್ಣ ವಿಷಯಗಳ ಬಗ್ಗೆ ಗಹನ ಚರ್ಚೆ ಹುಟ್ಟುಹಾಕುತ್ತಾ, ಮಾತು ಮುಂದುವರಿಸಿದ್ದ. ರಾಧಾ ಎಷ್ಟು ತಾಳ್ಮೆಯಿಂದ ಕಾದರೂ, ಕೃಷ್ಣ ಚೀಟಿಯ ವಿಷಯಕ್ಕೆ ಬರಲೇ ಇಲ್ಲ. ರಾಧಾ ಎರಡು ಮೂರು ಬಾರಿ ವಿಚಾರ ಪ್ರಸ್ತಾಪಿಸಿದರೂ... ಬೇರೆ ಚರ್ಚೆ ಆರಂಭಿಸಿ ಮಾತು ಮರೆಸುತ್ತಿದ್ದ. ಕಡೆಗೆ ರಾಧ ಹಠದಿಂದ, “ಹಲೋ ಫ್ಲರ್ಟ್ ಮಾಸ್ಟರ್... ಈಗ ಮುಖ್ಯ ವಿಷಯಕ್ಕೆ ಬನ್ನಿ. ಇಂದಿಗೆ ನೀವು ಹೇಳಿದ ಶರತ್ತಿನ ಪ್ರಕಾರ ಆರು ತಿಂಗಳಾಯಿತು. ಏನಾಯ್ತು ನಿಮ್ಮ ಸವಾಲು...? ಎಲ್ಲಿ ನಾನು ಅಂದು ನಿಮಗೆ ಕೊಟ್ಟ ಆ ಚೀಟಿ ಕೊಡಿ. ಏನು ಬರೆದಿದ್ದೀರಾ ನೋಡಬೇಕು...” ಎಂದಳು. ಕೃಷ್ಣ ಮಾತು ಹಾರಿಸುತ್ತಾ, “ಬಿಡ್ರಿ ರೀ... ಬೋರ್‌ವೆಲ್ ಮೇಡಮ್ಮು... ಏನೋ ಹುಡುಗಾಟಕ್ಕೆ ಹೇಳಿದ ಅಂದಿನ ಮಾತನ್ನೇ ಸೀರಿಯಸ್ ಮಾಡಿ, ನನ್ನ ತಲೆಗೆ ಬೋರ್‌ವೆಲ್ ಕೊರೆಯಬೇಡಿ” ಎಂದು ರೇಗಿಸಿದ. ರಾಧಾ ಪಟ್ಟುಬಿಡದವಳಂತೆ, “ನೋ... ನೋ... ಸಾರ್... ಛಾಲೆಂಜ್ ಅಂದಮೇಲೆ ಛಾಲೆಂಜ್... ಎಲ್ಲಿ ನೀವೇನು ಬರೆದಿದ್ದೀರಾ... ಅಂತ ನಾನು ನೋಡಲೇಬೇಕು... ಕೊಡಿ ಚೀಟಿ” ಎಂದು ಒತ್ತಾಯಿಸಿದಳು.

ಕಡೆಗೆ ಕೃಷ್ಣ ನಿರ್ವಾಹವಿಲ್ಲದೆ ಚೀಟಿ ತೆಗೆದು ಅವಳ ಕೈಗಿಡುತ್ತಾ, “ನೋಡ್ರಿ ರೀ... ನಾನು ಅಂದು ಏನು ಹೇಳಿದ್ದೆನೋ... ಅದನ್ನೇ ಬರೆದಿದ್ದೀನಿ... ಹ್ಹ..ಹ್ಹ..ಹ್ಹಾ..” ಎಂದು ನಗತೊಡಗಿದ.

ರಾಧಾ ಥಟ್ಟನೆ ಅವನ ಕೈಯಿಂದ ಆ ಚೀಟಿ ತೆಗೆದುಕೊಂಡು, ಅತೀವ ಆಸಕ್ತಿ ರೋಮಾಂಚನಗಳೊಂದಿಗೆ ಅವಸರದಿಂದ ಆ ಚೀಟಿ ಬಿಡಿಸಿದಳು. ಆ ಚೀಟಿಯಲ್ಲಿ ಬರೆದಿದ್ದನ್ನು ಓದುತ್ತಲೇ... ದಿಗ್ಬ್ರಾತಿಯಿಂದ ಗರಬಡಿದವಳಂತೆ ನಿಂತುಬಿಟ್ಟಳು.

ಕೃಷ್ಣ ಅವಳನ್ನು ನೋಡಿ ವಿಜಯದ ಸಂಭ್ರಮವನ್ನಾಚರಿಸುವಂತೆ, “ಹಲೋ... ಏನ್ರೀ ಬೋರ್‌ವೆಲ್ ಮೇಡಮ್ಮು. ಸ್ಟನ್ ಆಗಿ ಹೋದಿರಾ...? ನನಗೆ ಗೊತ್ತಿತ್ತು ನೀವು ಹೀಗೆ ಸರ್‌ಪ್ರೈಸ್ ಆಗ್ತೀರಾ ಅಂತ...” ಎಂದನು.

ರಾಧಾ ಕಣ್ತುಂಬಿಕೊಂಡು, ಗದ್ಗದಿತಳಾಗಿ, ನಡುಗುವ ಧ್ವನಿಯಲ್ಲಿ, “ಏನ್ರೀ ಸಾರ್ ಇದು... ಐ ಅಡೋರ್ ಯು. ಅಂತ ಬರೆದಿದ್ದೀರಾ...?” ಎಂದಳು.
ಕೃಷ್ಣ ಆಶ್ಚರ್ಯದಿಂದ ರಾಧೆಯ ಕಡೆ ನೋಡುತ್ತಾ, “ಏನ್ರೀ ನೀವು. ಯಪ್ಪಾ... ಇಷ್ಟಕ್ಕೇ ಎಷ್ಟೊಂದು ಭಾವುಕರಾಗಿದ್ದೀರಾ...? ಐ ಲವ್ ಯು ಅಂತ ಹೇಳಿ ಎಲ್ಲಿ ಪ್ರಾಣ ತಿನ್ನುತ್ತಾನೋ ಅಂದುಕೊಂಡಿದ್ದವರು, ಐ ಅಡೋರ್ ಯು. ಅಂತ ನಾನು ಬರೆದಿರುವುದನ್ನು ನೋಡಿ ಇಷ್ಟು ಶಾಕ್ ಆಗಿದ್ದೀರಾ...? ಅದು ನಿಜಾನೋ, ಸುಳ್ಳೋ, ಅನ್ನೊ ಅನುಮಾನನೇನ್ರೀ...? ನಾನು ಬರೆದಿರೋದು ಪ್ರಾಮಿಸ್ ನಿಜಾರೀ. ಅದು ಸುಳ್ಳಲ್ಲ... ನಾನು ನಿಮ್ಮನ್ನು ಆರಾಧಿಸುತ್ತೇನೆ. ಹೌದು ರೀ... ನೀವೇ ಹೇಳಿದ್ದಿರಲ್ಲ ಪ್ರೇಮಕ್ಕಿಂತ ದೊಡ್ಡ ಭಾವ ಆರಾಧನೆ” ಎಂದು ನುಡಿದ.

ರಾಧಾ ನಂಬಲಾರದವಳಂತೆ, “ರಿಯಲೀ...?“ ಎಂದು ಪ್ರಶ್ನಿಸಿದಳು.

ಕೃಷ್ಣ ಪ್ರಶಾಂತವಾಗಿ, ಯಾವುದೇ ಭಾವೋದ್ವೇಗಗಳಿಲ್ಲದೆ, ಅವರ್ಣನೀಯ ಆನಂದದೊಂದಿಗೆ, “ಹೌದು ರೀ, ರಿಯಲೀ ನಾನು ನಿಮ್ಮನ್ನು ಆರಾಧಿಸುತ್ತೇನೆ. ಯೆಸ್ ಮೇಡಮ್... ಐ ಅಡೋರ್ ಯು... ಇಷ್ಟು ದಿನಗಳ ನಿಮ್ಮ ಒಡನಾಟದಲ್ಲಿ ನನಗನ್ನಿಸಿದ್ದು, ನಿಮ್ಮ ಮಾತೇ ಸತ್ಯ...! ನಿಮ್ಮ ನುಡಿಗಳಲ್ಲಿ ಅರ್ಥವಿದೆ...! ಈ ಪ್ರೇಮವೆಂಬುದು ಶಾಶ್ವತ ಭಾವವಲ್ಲ...! ಸ್ವಾರ್ಥವಾಗಿ, ಅಧಿಕಾರವಾಗಿ, ಮೋಹ-ವ್ಯಾಮೋಹಗಳಾಗಿ, ಪೊಸೆಸ್ಸಿವನೆಸ್ಸಾಗಿ ಯಾವಾಗ ಬೇಕಾದರೂ ಬದಲಾಗಬಹುದು! ಪ್ರೇಮದ ಅಂತ್ಯ ವಿವಾಹದಲ್ಲಿ...! ನಾನಿದುವರೆಗೆ ಕಂಡಿರುವ ಈ ಜಗತ್ತಿನಲ್ಲಿ ಪ್ರೇಮಿಸಿ ಮದುವೆಯಾಗಿ, ಆ ಪ್ರೇಮವನ್ನು ಕಡೆಯ ತನಕ ಉಳಿಸಿಕೊಂಡವರು ಅತಿ ವಿರಳಾತಿ ವಿರಳ.

ನೀವು ನಾನು ಪ್ರೇಮಿಸಿ ಮದುವೆಯಾಗಿ, ನಾಳೆ ಈ ಪ್ರೇಮವೇ ಮಾಯವಾದ್ರೆ ನಾವು ಇಬ್ಬರೂ ಸುಖವಾಗಿರುವುದಿಲ್ಲ. ಪ್ರೇಮ ಸ್ವಾರ್ಥವಾಗಿ, ಮದುವೆ ಬಂಧನವಾಗಿ, ನಾಳೆ ನಮ್ಮ ಈ ಸ್ವಾತಂತ್ರ÷್ಯ, ಸಂಭ್ರಮ, ಈ ಸಲುಗೆ ಇಲ್ಲವಾದರೆ... ಇಬ್ಬರೂ ಸಂತಸದಿಂದಿರಲು ಸಾಧ್ಯವಿಲ್ಲ. ನನ್ನ ನಾಳಿನ ಸಾಧನೆ-ಸಂಭ್ರಮಗಳಿಗೆ ನೀವು ನಿಮ್ಮ ಕನಸು-ಆಸೆಗಳನ್ನು ತ್ಯಾಗ ಮಾಡುವುದು ನನಗಿಷ್ಟವಿಲ್ಲ. ನನಗೆ ನಾನಷ್ಟೆ ಅಲ್ಲ, ನೀವು ಬೆಳೆಯಬೇಕು, ಹೊಳೆಯಬೇಕು. ನನಗಿಂತ ಅತಿ ಎತ್ತರಕ್ಕೆ ಏರಬೇಕು.

ನಾನು ಆಗಲೇ ಹೇಳಿದಂತೆ, ಈ ವಿವಾಹಬಂಧನದಲ್ಲಿ ಪ್ರೀತಿ-ಪ್ರೇಮಗಳನ್ನುಳಿಸಿಕೊಂಡು ಬೆಳೆದು, ಗುರಿ ತಲುಪಿ ಸಾಧಿಸಿ ಹೊಳೆದವರು ತುಂಬಾ ತುಂಬಾ ಕಡಿಮೆ. ಹಾಗಾಗಿ ನೀವು ಅಂದು ಹೇಳಿದ ಹಾಗೆ... ಈ ಪ್ರೇಮ, ವಿವಾಹ ಅನ್ನುವ ಪಂಜರಕ್ಕಿಂತ, ಪ್ರೀತಿ ಆರಾಧನೆ ಗೌರವದೊಂದಿಗೆ ಸ್ವಚ್ಛಂದ ಪರಿಸರದಲ್ಲಿ ಮುಕ್ತವಾಗಿ ಇಬ್ಬರೂ ಬೆಳೆಯೋಣ. ಈ ಸ್ವಾತಂತ್ಯ್ರ, ಈ ಸಲುಗೆ, ಈ ಬಾಂಧವ್ಯ ಚಿರವಾಗಿರಲಿ.

ನನ್ನ ಭಾವಾಂಭುದಿಗೆ ಚಿರಸ್ಫೂರ್ತಿ ನೀವು. ಮದುವೆಯಾಗಿ ಮಕ್ಕಳು, ಮರಿ, ಸಂಸಾರ, ತಾಪತ್ರಯ ಇವುಗಳ ಬಗ್ಗೆ ಮಾತನಾಡುತ್ತಾ ನಿಮ್ಮೊಂದಿಗೆ ಜೀವನ ಕಳೆಯುವುದಕ್ಕಿಂತ, ಹೀಗೆ ಮುಕ್ತವಾಗಿ ಯಾವುದೇ ಬಂಧನಗಳಿಲ್ಲದೇ ಕಾವ್ಯ, ಬರೆಹ, ಸಾಹಿತ್ಯ, ಸಾಧನೆ, ಸಂಭ್ರಮಗಳ ಕುರಿತು ನಿಮ್ಮೊಂದಿಗೆ ಸಂವಾದಿಸುತ್ತಾ, ಈ ಮಧುರ ಬಾಂಧವ್ಯದ ಸವಿಯನ್ನು ಸವಿಯುವುದರಲ್ಲಿ ನನಗೆ ಸಂಪೂರ್ಣ ಸಂತೃಪ್ತಿಯಿದೆ.

ಅಳಲೊಂದು ಅಕ್ಕರೆಯ ಹೆಗಲಾಗಿ, ನಿತ್ಯ ಸ್ಫೂರ್ತಿಯಿಟ್ಟು ಕಾಯುವ ಶುಭ್ರ ಪ್ರೀತಿ ಮುಗಿಲಾಗಿ, ನೋವು-ನಲಿವುಗಳೆರಡರಲ್ಲ್ಲೂ ಸದಾ ಬೆಂಗಾವಲಾಗಿ ಒಬ್ಬರಿಗೊಬ್ಬರು ಹೀಗೆ ಬಾಳಿನುದ್ದಕೂ ಇರೋಣ.

ಆ ಪುರಾಣದಲ್ಲೂ ಅಷ್ಟೆ. ಜೀವನ ಪರ್ಯಂತ ಕೃಷ್ಣನನ್ನು ಆರಾಧಿಸಿದ ರಾಧೆ, ಉಸಿರಿರುವತನಕ ರಾಧೆಯನ್ನು ಪ್ರೀತಿಸಿದ ಕೃಷ್ಣ, ವೇಣು ನಾದನದ ಉಸಿರುಸಿರಲ್ಲು ಸಮ್ಮಿಲನವಾದ ರಾಧಾಕೃಷ್ಣರು ಪ್ರಸಿದ್ದವಾದಷ್ಟು, ಜೀವನದಲ್ಲಿ ಸಾರ್ಥಕತೆ ಕಂಡಷ್ಟು, ಜನಮಾನಸದಲ್ಲಿ ಚಿರವಾಗಿ ನೆಲೆಯಾದಷ್ಟು, ಕೃಷ್ಣನ ಪ್ರೇಮಿಸಿ ಕೃಷ್ಣನೊಂದಿಗೆ ಮದುವೆಯಾಗಿ ಸಂಸಾರ ಮಾಡಿದ ರುಕ್ಮಿಣಿ, ಸುಭದ್ರೆಯರು ಯಶಸ್ವಿಯಾಗಲಿಲ್ಲ, ಹೆಸರಾಗಲಿಲ್ಲ.

ಏನಂತೀರಾ ಮೇಡಮ್...? ನನ್ನ ಮಾತುಗಳು - ನಿರ್ಧಾರ ಸರಿ ಅಲ್ಲವೇನ್ರೀ...? ಇದೇ ನಿಮ್ಮ ಮನದ ಅಭೀಷ್ಟನೂ ಅಲ್ಲವೇನ್ರೀ ಬೋರ್‌ವೆಲ್ ಮೇಡಮ್ಮೂ...?” ಎಂದು ನಿರಾಳವಾಗಿ ರಾಧೆಯೆಡೆ ನೋಡಿದ ಕೃಷ್ಣ.
ಕೃಷ್ಣ ಮಾತನಾರಂಭಿಸುವ ಮೊದಲು, ವ್ಯಾನಿಟಿ ಬ್ಯಾಗಿನಿಂದ, ತಾನು ಬರೆದು ತಂದಿದ್ದ ಚೀಟಿ ತೆಗೆದು ಕೈಯೊಳಗಿಟ್ಟುಕೊಂಡಿದ್ದ ರಾಧ, ಅವನ ಮಾತನ್ನು ಕೇಳುತ್ತಾ... ಶಿಲೆಯಂತೆ ನಿಂತುಬಿಟ್ಟಳು. ರಾಧಾಳ ಕಂಗಳು ತುಂಬಿ ಬಂದಿದ್ದವು!

ಕೃಷ್ಣ ನಿರಾಳವಾಗಿ ನಗುತ್ತಾ, “ರೀ... ರಾಧಾ ಮೇಡಮ್ಮೂ... ಏನ್ರೀ ಫುಲ್ ಎಮೋಶನಲ್ ಆಗಿಬಿಟ್ರಾ...? ನೀವು ನನಗೆ ನಿಮ್ಮ ಚೀಟಿ ತೋರಿಸಿ ‘ನೋಡ್ರೀ... ನಾನು ಅಂದು ಹೇಳಿದ ಹಾಗೆ ಇಂದೂ ಬರೆದು ತಂದಿದ್ದೀನಿ. ನಾನೇ ಗೆದ್ದಿದ್ದು... ಟ್ರೀಟ್ ಕೊಡಿಸಿ’ ಅಂತ ಕೇಳ್ಬೇಕು ಅಂದುಕೊಡಿದ್ರೇನೋ... ಹ್ಹ..ಹ್ಹ..ಹ್ಹಾ.. ಈಗ ನನ್ನ ಮಾತು ಕೇಳಿ ಏನು ಹೇಳೋದು ಅಂತ ತಿಳಿಯದೆ ಮೈಮರೆತು ನಿಂತು ಬಿಟ್ರೇನ್ರೀ...? ಏನು ಯೋಚಿಸ್ತಾ ಇದ್ದೀರಾ...? ಕೊಡ್ರೀ ನಿಮ್ಮ ಚೀಟಿ...” ಎಂದು ರಾಧೆಯ ಕೈಯಿಂದ ಅವಳ ಚೀಟಿ ಕಿತ್ತುಕೊಂಡ.

ರಾಧ ಗಾಬರಿಯಲ್ಲಿ ತಡವರಿಸುತ್ತಾ, “ರೀ ಕೃಷ್ಣಾ... ಅದರಲ್ಲಿ...” ಎಂದು ಏನೋ ಹೇಳ ಹೊರಟವಳ ಮಾತುಗಳನ್ನು ಅರ್ಧದಲ್ಲೇ ತಡೆಯುತ್ತಾ ಕೃಷ್ಣ, “ಅಯ್ಯೋ ಗೊತ್ತು ಬಿಡ್ರೀ ಬೋರ್‌ವೆಲ್ ಮೇಡಮ್... ನೀವು ಇನ್ನೇನು ಬರೆದಿರ್ತೀರಾ ಅಂತ. ಇಷ್ಟು ದಿನ ನಿಮ್ಮ ಜೊತೆಗಿದ್ದ ಮೇಲೂ ಗೊತ್ತಾಗಲ್ವಾ ನನಗೆ...? ಈ ಕೃಷ್ಣನನ್ನು ಪರಿವರ್ತಿಸಿದ ರಾಧೆ ನೀವು...! ರಾಧೆಯ ಭಾವ ಅಂದು, ಇಂದು, ಮುಂದು, ಎಂದು, ಎಂದೆಂದು ಒಂದೇ ಆಗಿರುತ್ತೆ...! ಅಷ್ಟೂ ಗೊತ್ತಿರದ ಮೂರ್ಖ ಅಂದುಕೊಂಡ್ರಾ ನೀವು ನನ್ನಾ...? ಈ ಚೀಟಿ ಏಕೆ ಓದಬೇಕು...? ಇದರ ಆವಶ್ಯಕತೆ ಏನಿದೆ...? ನಿಮ್ಮನ್ನು ನೋಡಿದ್ರೆ ಅರ್ಥ ಆಗಲ್ವಾ ನನಗೆ...?” ಎಂದು ಹೇಳಿದವನೆ ನಿರ್ಲಿಪ್ತನಾಗಿ ಚೀಟಿಯನ್ನು ಗಾಳಿಯಲ್ಲಿ ತೂರಿಬಿಟ್ಟು ನಿರಾಳ ಮನಸ್ಸಿನಿಂದ ನೀಲಾಂಬರ ನೋಡುತ್ತಾ ನಿಂತುಬಿಟ್ಟ.

ರಾಧ ಅಯೋಮಯಳಾಗಿ ಗಾಳಿಯಲ್ಲಿ ಹಾರಿ ಹೋಗುತ್ತಿದ್ದ ಆ ಚೀಟಿಯನ್ನು ನೋಡುತ್ತಾ ಸ್ತಬ್ಧಳಾದಳು. ಹಾರುತ್ತಾ ಹೋದ ಆ ಚೀಟಿ ಕೆರೆದಂಡೆಯ ನೀರಿನಂಚಿಗೆ ಹೋಗಿಬಿತ್ತು. ಗಾಳಿಯ ಹೊಡೆತಕ್ಕೆ ಬಿಚ್ಚಿಕೊಂಡ ಆ ಚೀಟಿಯಲ್ಲಿ, “ಐ ಲವ್ ಯು ಕೃಷ್ಣಾ... ನಾನು ನಿಮ್ಮನ್ನು ಪ್ರೇಮಿಸುತ್ತಿದ್ದೇನೆ...” ಎಂದು ಬರೆದಿತ್ತು. ಆಗ ಬೀಸಿದ ಗಾಳಿಯ ರಭಸಕ್ಕೆ ಸಿಡಿದು ಬಂದ ಕೆರೆಯ ನೀರಿನ ಹನಿಗಳು ಆ ಚೀಟಿಯ ಮೇಲೆ ಬಿದ್ದು, ಅಕ್ಷರಗಳು ನೀರಿನೊಂದಿಗೆ ಕದಡಿ ಹೋಗುವುದಕ್ಕೂ... ರಾಧಳ ಕಂಗಳಿಂದ ಜಾರಿದ ಕಂಬನಿ ಮಣ್ಣಿನಲ್ಲಿ ಕಲೆಸಿ ಹೋಗುವುದಕ್ಕೂ ಸರಿ ಹೋಯಿತು.

ಇದ್ಯಾವುದರ ಪರಿವೆಯಿಲ್ಲದೆ ನೀಲಾಂಬರದಲ್ಲಿ ಕಣ್ಣು ನೆಟ್ಟಿದ್ದ ಕೃಷ್ಣ, ಎಚ್ಚೆತ್ತು ನಿಧಾನವಾಗಿ ರಾಧೆಯೆಡೆ ನೋಡುತ್ತಾ, “ಹಲೋ ಬೋರ್‌ವೆಲ್ ಮೇಡಮ್... ಟ್ರೀಟ್ ಕೊಡಿಸ್ತಾರೋ ಇಲ್ವೋ ಅಂತ ಜಾಸ್ತಿ ಕೊರಗಬೇಡ್ರಿ. ನೀವು ಗೆದ್ದರೇನು... ನಾನು ಗೆದ್ದರೇನು... ಬನ್ರೀ ನಾನೆ ಟ್ರೀಟ್ ಕೊಡಿಸ್ತೀನಿ... ನಡೆಯಿರಿ ಹೋಗೋಣಾ...” ಎಂದು ಹುರುಪಿನಿಂದ ಹೆಜ್ಜೆ ಹಾಕಿದ. ರಾಧೆ ಸೋತ ಹೃದಯದಿಂದ ಭಾರವಾಗಿ ಅವನೊಂದಿಗೆ ಹೆಜ್ಜೆ ಹಾಕಿದಳು. ಇಬ್ಬರೂ ಜೊತೆ-ಜೊತೆಯಾಗಿ ಹೆಜ್ಜೆ ಹಾಕುತ್ತ ನಡೆಯುತ್ತಿದ್ದರು...

ಕೃಷ್ಣ ಬದಲಾಗಿದ್ದ..! ಆ..ದ..ರೆ.. ರಾಧೆಗದು ಬೇಕಿರಲಿಲ್ಲ..!! ರಾಧೆಯೂ ಬದಲಾಗಿದ್ದಳು..!!! ಆ..ದ..ರೆ.. ಕೃಷ್ಣನಿಗದು ತಿಳಿಯಲಿಲ್ಲ..!!!!

ಗೆದ್ದಿದ್ದು.. ಕೃಷ್ಣನೋ..?? ಗೆದ್ದಿದ್ದು ರಾಧೆಯೋ..???

ಎ.ಎನ್.ರಮೇಶ್. ಗುಬ್ಬಿ

ಲೇಖಕ ಎ.ಎನ್.ರಮೇಶ್ ಗುಬ್ಬಿ ಅವರು ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನಲ್ಲಿ ಜನಿಸಿದರು. ವೃತ್ತಿಯಲ್ಲಿ ಕಾರವಾರ ಬಳಿಯ ಕೈಗಾದಲ್ಲಿರುವ ಭಾರತೀಯ ಅಣುಶಕ್ತಿ ನಿಗಮದ ಉದ್ಯೋಗಿ. ಪ್ರವೃತ್ತಿಯಲ್ಲಿ ಸಾಹಿತಿ. ಕವನ, ಚುಟುಕು, ಕಥೆ, ನಾಟಕ, ಚಿತ್ರಕಥೆ ರಚನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ‘ಗುಬ್ಬಿಯ ಕಲರವ’, ‘ಚುಟುಕು-ಚಿತ್ತಾರ’, ‘ಎಡನೀರೊಡನೆಯನಿಗೆ ಚುಟುಕು ಪುಷ್ರ್ಪಾಚನೆ’, ‘ಕೇಶವನಾಮ ಚೈತನ್ಯಧಾಮ’ ಎಂಬ ಚುಟುಕು ಸಂಕಲನಗಳು, ‘ಹನಿ-ಹನಿ’ ಎಂಬ ಹನಿಗವನ ಸಂಕಲನ, ‘ಭಾವದಂಬಾರಿ’ ಕಥಾಸಂಕಲನ, ‘ಶಕ್ತಿ ಮತ್ತು ಅಂತ’ ಅವಳಿ ನಾಟಕ ಸಂಕಲನ, ‘ಕಿಸ್ ಮಾತ್ರೆ’ ಎನ್ನುವ ಹಾಸ್ಯಗವನ ಸಂಕಲನ, ‘ಹೂವಾಡಿಗ’, ‘ಕಾಡುವ ಕವಿತೆಗಳು’ ಕವನ ಸಂಕಲನಗಳು ಪ್ರಕಟವಾಗಿದೆ.

ಕಾಸರಗೋಡಿನ ಎಡನೀರಿನಲ್ಲಿ ನಡೆದ ಪ್ರಪ್ರಥಮ ಅಂತರರಾಜ್ಯ ಚುಟುಕು ಸಮ್ಮೇಳನದಲ್ಲಿ ‘ಚುಟುಕು ಭಾರ್ಗವ’ ಎಂಬ ಪ್ರಶಂಸೆ ದೊರೆತಿದ್ದು, ‘ಗುಬ್ಬಿಯ ಕಲರವ’ ಕೃತಿಗೆ ‘ಬಿ.ಕೃಷ್ಣ ಪೈ ಬದಿಯಡ್ಕ ಸ್ಮಾರಕ ಪ್ರಶಸ್ತಿ’, 2012ರಲ್ಲಿ ನಡೆದ ಕೇರಳ ರಾಜ್ಯ 5ನೆಯ ಕನ್ನಡ ಸಮ್ಮೇಳನ ಮತ್ತು ಕೇರಳ-ಕರ್ನಾಟಕ ಉತ್ಸವದಲ್ಲಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದಿಂದ ‘ಕಾವ್ಯ ಪ್ರಶಸ್ತಿ’, ಮಂಡ್ಯದ ‘ಅಡ್ವೈಸರ್’ ಪತ್ರಿಕೆಯ 2012ರ ‘ಅಡ್ವೈಸರ್ ಸಾಹಿತ್ಯ ಪ್ರಶಸ್ತಿ’, ಬೆಂಗಳೂರಿನ ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್ ಹಾಗೂ ಸುರ್ವೆ ಪತ್ರಿಕೆಯಿಂದ ‘ಎಡನೀರೊಡೆಯನಿಗೆ ಚುಟುಕು-ಪುಷ್ಪಾರ್ಚನೆ’ ಕೃತಿಗೆ ರಾಜ್ಯಮಟ್ಟದ ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ ಮತ್ತು ಬೆಳ್ಳಿಪದಕ ಬಹುಮಾನ ಪಡೆದಿದ್ದಾರೆ. ಬಿಜಾಪುರದ ಬಸವಜಯಂತಿ ಶತಮಾನೋತ್ಸವ ಸಂಭ್ರಮ-2013 ಸಮಾರಂಭದಲ್ಲಿ ಪ್ರತಿಷ್ಠಿತ ‘ಬಸವಜ್ಯೋತಿ’ ಪ್ರಶಸ್ತಿ, ಕೆ.ಆರ್.ನಗರದ ಗ್ರಾಮಾಂತರ ಬುದ್ಧಿಜೀವಿಗಳ ಬಳಗದಿಂದ ‘ಕೆ.ಎಸ್.ನ. ರಾಜ್ಯಮಟ್ಟದ ಕಾವ್ಯಪುರಸ್ಕಾರ’, ಅಖಿಲ ಭಾರತ ಅಣುಶಕ್ತಿ ನಿಗಮದ ರಾಷ್ಟ್ರಮಟ್ಟದ 2009, 2013, 2016, 2018ರ ಸಾಂಸ್ಕೃತಿಕ ಸ್ಪರ್ಧಾವಳಿಯಲ್ಲಿ ‘ಸ್ವರಚಿತ ಕವನ ವಾಚನ’ದಲ್ಲಿ ಪ್ರಥಮ ಬಹುಮಾನ, ಹುಣಸೂರಿನ ಚುಟುಕು ಸಾಹಿತ್ಯ ಪರಿಷತ್ತಿನಿಂದ 2014ರ ‘ಚುಟುಕು ಮುಕುಟ’ ರಾಜ್ಯ ಪ್ರಶಸ್ತಿ, ಕೈಗಾದ ಸಹ್ಯಾದ್ರಿ ಕನ್ನಡ ಸಂಘದ ಆಶ್ರಯದಲ್ಲಿ ನಡೆದ ರಾಜ್ಯ ಮಟ್ಟದ ಚುಟುಕು ಸ್ಪರ್ಧೆ-2012 ರಲ್ಲಿ ಬಹುಮಾನ ಮತ್ತು 2013 ರ ‘ಯುವ ಪ್ರತಿಭಾ ಪುರಸ್ಕಾರ’ ಪಡೆದಿದ್ದಾರೆ. ‘ಶಕ್ತಿ ಮತ್ತು ಅಂತ' ನಾಟಕ ಸಂಕಲನಕ್ಕೆ ಸಂತೃಪ್ತಿ ಸಾಹಿತ್ಯ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಟ್ರಸ್ಟ್‌ನಿಂದ 2017 ನೇ ಸಾಲಿನ `ನೃಪ ಸಾಹಿತ್ಯ ಪ್ರಶಸ್ತಿ', 2019 ರಲ್ಲಿ `ಜನ್ನ’ ಕಾವ್ಯ ಪ್ರಶಸ್ತಿ, ಡಿ.ಎಸ್.ಕರ್ಕಿ ಪ್ರತಿಷ್ಟಾನ ನೀಡುವ 2019 ನೇ ಸಾಲಿನ ಪ್ರತಿಷ್ಟಿತ `ಡಿ.ಎಸ್. ಕರ್ಕಿ ಕಾವ್ಯ ಪ್ರಶಸ್ತಿ’ಗಳು ಲಭಿಸಿವೆ.

 

More About Author