Poem

ಬೆವರ ಕಾಲುವೆ

ಮಡಿವಂತರ ಹೊಲಸ ಬಾಚಿದರು
ಎಂಟಾಣೆಗೆ ಕುಣಿ ಹೊಡೆದು
ನಾಕಾಣೆಯ ಸಿಂಧಿ ಕುಡಿದು
ಊರ ಹೊರಗಿಟ್ಟವರ
ಹೆಣ ಭಾರ ಹೊತ್ತು
ಬಿಟ್ಟಿ ದುಡಿಮೆಯ ಬೆವರ ಕಾಲುವೆ ಹರಿಸಿ
ಮನುಷ್ಯರಾಗಲು ತವಕಿಸಿದರು

ಕೈ ರೇಖೆಗಳ ಸವಸಿ
ಬಂಡೆಗಲ್ಲುಗಳ ಸೀಳಿ
ರಕ್ತ, ಮಾಂಸ ಖಂಡಗಳ ಕರಗಿಸಿ
ದಾರಿ ನಿರ್ಮಿಸಿದವರು

ಸೂರ್ಯನನ್ನು ಕರಗಿಸಿ
ದೀಪ ಹಚ್ಚಿದವರು
ಈಗಲೂ ಕತ್ತಲೆಯ
ಕರಾಳಲೋಕದ ಕನಸಿನಲ್ಲಿ
ಬೆಚ್ಚಿ ಬೀಳುವವರು

-ಪಿ ನಂದಕುಮಾರ್

ಪಿ. ನಂದಕುಮಾರ್

ಪಿ. ನಂದಕುಮಾರ್ ಮೂಲತಃ ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಕಕ್ಕೇರಾ ಗ್ರಾಮದವರು. ಸದ್ಯ ಕಲಬುರ್ಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದಾರೆ. ಕಾವ್ಯ, ಕಥೆ, ವಿಮರ್ಶೆ, ಸಂಶೋಧನೆಗಳಲ್ಲಿ ಆಸಕ್ತಿ ಹೊಂದಿರುವ ಅವರ ಲೇಖನ, ವಿಮರ್ಶೆ, ಕವಿತೆಗಳು ಬುಕ್ ಬ್ರಹ್ಮ ಸೇರಿದಂತೆ ಹಲವು ಸಾಹಿತ್ಯಿಕ ವೆಬ್ ಸೈಟ್, ಹಾಗೂ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. 

More About Author