Poem

ಬಾಲನ ಕೋಪ

ಬಾಲ ನಿನಗೆ ಕೋಪ ಯಾಕೋ ಇತ್ತ ನೋಡೆಯಾ
ಮೇಲಕೆದ್ದು ನಿಂತ ಹುಬ್ಬನಿಳಿಸಲಾರೆಯ

ಅಬ್ಬ ಎಷ್ಟು ದೊಡ್ಡ ಕಣ್ಣು ರೆಪ್ಪೆ ಮುಚ್ಚು ಬಾ
ಉಬ್ಬಿನಿಂತ ಕೆನ್ನೆಗೊಂದು ಗುದ್ದು ಕೊಡುವೆ ಬಾ

ಡೈರಿಮಿಲ್ಕ್ ಚಾಕಲೇಟು ನನ್ನ ಬಳಿಯಿದೆ
ಮಾರಿಗೋಲ್ಡ್ ಕ್ರೀಂ ಬಿಸ್ಕೇಟ್ ಸ್ಕೂಟಿಯಲ್ಲಿದೆ

ಜಾಣ ಮಗುವೆ ಜಾಮೂನನ್ನು ತಂದು ಕೊಡುವೆನು
ಚಾನೆಲನ್ನು ಇನ್ನು ಮುಂದೆ ಚೇಂಜ್ ಮಾಡೆನು

ಗಂಜಿಗಿನಿತು ತುಪ್ಪ ಹಾಕಿ ನಾನೇ ಉಣಿಸುವೆ
ಸಂಜೆ ಹೊರಗೆ ಫ್ರೆಶ್ ಚಿಕ್ಕು ಜ್ಯೂಸ್ ಕೊಡಿಸುವೆ

ಅಜ್ಜನಾಡಿದಂಥ ಮಾತಿಗೊಲಿದ ಬಾಲನು
ಮೋಜಿನಿಂದ ನಗೆಯ ಬೀರಿ ಕೋಪ ತೊರೆದನು...

ದಿವೀತ್ ಎಸ್.ಕೆ ಪೆರಾಡಿ

ಯುವ ಬರೆಹಗಾರ, ಬಹುಮುಖ ಪ್ರತಿಭೆ ದೀವಿತ್ ಎಸ್. ಕೋಟ್ಯಾನ್ ಪೆರಾಡಿ ಮೂಲತಃ ಮಂಗಳೂರಿನವರು. ಮಂಗಳೂರು ವಿಶ್ವವಿದ್ಯಾನಿಲಯ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ಪದವಿ ಪರೀಕ್ಷೆಯಲ್ಲಿ ಪ್ರಥಮ ಬ್ಯಾಂಕ್ ಪಡೆದವರು. ಜತೆಗೆ ಎಂ.ಎ. ಕನ್ನಡ ಪದವಿಯನ್ನೂ ಪಡೆದಿದ್ದಾರೆ. ಪ್ರಸ್ತುತ ಸಂತ ಅಲೋಶಿಯಸ್ ಪದವಿ ಪೂರ್ವ ಕಾಲೇಜು ಮಂಗಳೂರು ಇಲ್ಲಿ ಕನ್ನಡ ಉಪನ್ಯಾಸರಾಗಿದ್ದಾರೆ. ಜತೆಗೆ ಮಂಗಳೂರು ವಿವಿಯ ಯಕ್ಷಗಾನ ಅಧ್ಯಯನ ಕೇಂದ್ರದ ಯಕ್ಷಗಾನ ಗುರುವಾಗಿಯೂ ಕೆಲಸ ಮಾಡುತ್ತಿದ್ದಾರೆ. ಭಾರತದ ಇತಿಹಾಸದಲ್ಲಿ ಉಲ್ಲೇಖವಾದ ಪದ್ವಿನಿ ಪ್ರಕರಣಾಧಾರಿತ 'ಪದ್ವಿನಿ ಪದಗ್ನತಿ' ಎಂಬ ಯಕ್ಷಗಾನ ಪ್ರಸಂಗ ರಚಿಸಿದ್ದಾರೆ. ಯಕ್ಷಗಾನ ಏಕವ್ಯಕ್ತಿ ಪ್ರದರ್ಶನಗಳನ್ನೂ ಕೊಡುತ್ತಾರೆ. ‘ಕವಿಯ ಕನಸು', 'ಸ್ನೇಹ ಸಂಪಿಗೆ', 'ಕಾವ್ಯಾಮೃತ', 'ಮಂಟಪ ಪ್ರಭಾಕರ ಉಪಾಧ್ಯಾಯ' ಅವರ ಪ್ರಮುಖ ಕೃತಿಗಳು. 

More About Author