1
ಬದುಕುವುದೆಂದರೆ ಹುಡುಗಾಟಿಕೆಯಲ್ಲ
ಬದುಕನ್ನು ಗಂಭೀರವಾಗಿ ಬದುಕಬೇಕು
ಉದಾಹರಣೆಗೆ ಅಳಿಲಿನ ಹಾಗೆ.
ಬದುಕನ್ನು ಬಿಟ್ಟು ಬೇರೇನನ್ನೂ ಯೋಚಿಸದೆ,
ಬದುಕಿನ ಹಿಂದೆಯೋ ಮುಂದೆಯೋ
ಇನ್ನೇನೋ ಇದೆ ಎಂದು ಭ್ರಮಿಸದೆ,
ಬದುಕುವುದೇ ಬದುಕಿನ ಪೂರ್ಣಾವಧಿ ಕೆಲಸ ಅನ್ನುವ ಹಾಗೆ.
ಬದುಕುವುದೆಂದರೆ ಹುಡುಗಾಟಿಕೆಯಲ್ಲ
ಗಹನ ಗಂಭೀರ ವಿಷಯ
ಎಷ್ಟರ ಮಟ್ಟಿಗಂದರೆ ಬೆನ್ನ ಹಿಂದೆ ಕೈ ಕಟ್ಟಿ ಹಾಕಿ
ಗೋಡೆಗೆ ಆನಿಸಿ ನಿಲ್ಲಿಸಿದ ಕ್ಷಣದಲ್ಲೂ,
ಲ್ಯಾಬರೇಟರಿಯಲ್ಲಿ ಬಿಳಿ ಕೋಟು,
ಮರೆ ಕನ್ನಡಕ ತೊಟ್ಟು ನಿಂತ ಕ್ಷಣದಲ್ಲೂ
ಬದುಕು ಅತ್ಯಂತ ಸತ್ಯ, ಸುಂದರ ಅಂತ ಗೊತ್ತಿದ್ದೂ
ಎಂದೂ ಮುಖವನ್ನೇ ನೋಡದ ಜನರಿಗಾಗಿಯೂ
ಸಾಯುವ ಛಾತಿ ಇರುವಷ್ಟು
ಒಟ್ಟಲ್ಲಿ ನಾನು ಹೇಳುವುದಿಷ್ಟು...
ಬದುಕನ್ನು ಎಷ್ಟು ಗಂಭೀರವಾಗಿ ತಗೊಳ್ಳಬೇಕೆಂದರೆ
ಎಪ್ಪತ್ತು ವರ್ಷ ದಾಟಿದಾಗಲೂ
ನಮ್ಮ ಮಕ್ಕಳಿಗಾಗಿ ಅಲ್ಲ ನಮಗಾಗಿ ಅಂತಲೇ
ತೆಂಗನ್ನು ನೆಡಬೇಕು
ಸಾವಿನ ಬಗ್ಗೆ ಭಯ ಇದ್ದರೂ
ಬದುಕಿನ ತೂಕ ಸಾವಿಗಿಂತ ಹೆಚ್ಚು ಅನ್ನುವ ಕಾರಣಕ್ಕೆ
ಬದುಕನ್ನು ನಂಬಬೇಕು
II
ಯಾವುದೋ ಕೆಟ್ಟ ಕಾಯಿಲೆ ಹಿಡಿದಿದೆ
ಆಪರೇಶನ್ ಆಗಬೇಕಿದೆ ಅಂತಿಟ್ಟುಕೊಳ್ಳಿ
ಬಿಳಿಯ ಟೇಬಲ್ಲಿನಿಂದ ಏಳದೆಯೂ
ಹೋಗಬಹುದು ಅಂತಿಟ್ಟುಕೊಳ್ಳಿ
ಹೀಗೆ ತೀರ ಬೇಗ ತೀರಿ ಹೋಗುವುದರ ಬಗ್ಗೆ
ಬೇಜಾರೇ ಇಲ್ಲದಿರುವುದು ಸಾಧ್ಯವೆ?
ಆದರೂ ಜೋಕು ಕೇಳಿ ನಗುತ್ತೇವೆ
ಮಳೆ ಬರುತ್ತಿದೆಯಾ ಅಂತ ಕಿಟಕಿಯಾಚೆ ನೋಡುತ್ತೇವೆ
ಕಾತುರದಿಂದ ಬಿಸಿ ನ್ಯೂಸಿಗಾಗಿ ಕಾಯುತ್ತೇವೆ.
ಯಾವುದೋ ಘನ ಧ್ಯೇಯಕ್ಕಾಗಿ
ಯುದ್ಧಕ್ಕಿಳಿದಿದ್ದೇವೆ ಅಂತಿಟ್ಟುಕೊಳ್ಳಿ
ಕಾದಾಟ ಶುರುವಾದ ದಿನವೇ
ಮುಖ ಅಡಿಯಾಗಿ ಬಿದ್ದು ಸಾಯಬಹುದು ಅಂತ ಗೊತ್ತಿದ್ದರೂ,
ಆ ಅನುಮಾನ ಮನದಲ್ಲಿ ದುಗುಡ ತುಂಬಿದರೂ
ಮುಗಿಯದ ಯುದ್ಧದ ಪರಿಣಾಮದ ಬಗ್ಗೆ
ಯೋಚಿಸುತ್ತಲೇ ಇರುತ್ತೇವೆ.
ಹತ್ತಿರ ಹತ್ತಿರ ಐವತ್ತು ತುಂಬಿರುವ ನೀವು
ಜೈಲಿನಲ್ಲಿದ್ದೀರಿ ಅಂತಿಟ್ಟುಕೊಳ್ಳಿ
ಕಬ್ಬಿಣದ ಬಾಗಿಲು ತೆರೆಯಲಿಕ್ಕೆ
ಇನ್ನೂ ಧೀರ್ಘ ಹದಿನೆಂಟು ವರ್ಷ ಇದೆ ಅಂತಿಟ್ಟುಕೊಳ್ಳಿ
ಆದರೂ ನೀವು ಬದುಕುವುದು ಆ ಹೊರಜಗತ್ತಿನೊಂದಿಗೇ.
ಊರಿನ ಜನ, ಕಾಡಿನ ಪ್ರಾಣಿ, ಬೀಸುವ ಗಾಳಿ, ಸಂಘರ್ಷ
ತುಂಬಿದ ಗೋಡೆಯಾಚೆಯ ಆ ಹೊರಜಗತ್ತಿನೊಂದಿಗೇ
ಒಟ್ಟಲ್ಲಿ ನಾನು ಹೇಳುವುದಿಷ್ಟು...
ಎಲ್ಲೇ ಇದ್ದರೂ, ಹೇಗೆ ಇದ್ದರೂ
ಸಾಯುವುದೇ ಇಲ್ಲವೇನೋ ಅನ್ನುವ ಹಾಗೆ ಬದುಕಬೇಕು
III
ಈ ಭೂಮಿ ಮುಂದೊಂದು ದಿನ
ಪೂರ್ಣ ತಣ್ಣಗಾಗುವುದು ಖಾತ್ರಿ
ನಕ್ಷತ್ರಗಳಲ್ಲಿ ನಕ್ಷತ್ರದಂತೆ ಥಳಥಳಿಸುವ
ಬಂಗಾರ ಕವಚ ತೊಟ್ಟ
ನೀಲಿ ವೆಲ್ವೆಟ್ಟಿನ ಮೇಲಿಟ್ಟ
ಪುಟ್ಟ ಗುಂಡಿನಂತ ಈ ನಮ್ಮ ಭೂಮಿ
ಮುಂದೊಂದು ದಿನ ಪೂರ್ಣ ತಣ್ಣಗಾಗುವುದು ಖಾತ್ರಿ
ಮಣ್ಜುಗಡ್ಡೆಯಂತಲ್ಲ
ಸತ್ತು ತೇಲುವ ಮೋಡದಂತಲ್ಲ
ಟೊಳ್ಳಾದ ವಾಲ್ನಟ್ಟಿನ ಹಾಗೆ
ಕಡುಗತ್ತಲ ನಿರ್ವಾತದಲ್ಲಿ
ಅಂಡಲೆವ ಉಂಡೆಯ ಹಾಗೆ...
ಆ ನಾಳೆಯ ಬಗ್ಗೆ ಈ ದಿನವೇ ಮರುಗಬೇಕು
ಆ ಗಾಢ ದುಃಖ ಈ ಗಳಿಗೆಯೇ ಅನುಭವಿಸಬೇಕು
ಪ್ರಪಂಚದ ಬಗ್ಗೆ ಅಷ್ಟು ಪ್ರೀತಿ ಇಲ್ಲದಿದ್ದರೆ
"ನಾನು ಬದುಕಿದ್ದೆ" ಅನ್ನುವುದಾದರೂ ಹೇಗೆ?
ನಜೀಮ್ ಹಿಕ್ಮತ್
_____
ನಜೀಮ್ ಹಿಕ್ಮತ್ ಟರ್ಕಿಯ ಒಬ್ಬ ಪ್ರಸಿದ್ಧ ಕಮ್ಯುನಿಸ್ಟ್ ಭಾವದ ಕವಿ.
ನೆರೂಡ, ಪೈಜ್ ಅಹ್ಮದ್ ಪೈಜ್ ಹಾಗು ಹಿಕ್ಮತ್ ರು ಸಮಕಾಲೀನರು ಹಾಗು ಪರಸ್ಪರ ಪ್ರಭಾವಕ್ಕೂ ಒಳಗಾಗಿದ್ದವರು. ಈ ಕವಿತೆಯನ್ನು ಅವರು ಹಲವಾರು ವರ್ಷಗಳ ಕಾಲ ಏಕಾಂತ ಸೆರೆವಾಸದ ಶಿಕ್ಷೆಗೆ ಒಳಗಾಗಿದ್ದಾಗ ಬರೆದದ್ದು....!)
- ಶಿವಸುಂದರ್
ವಿಡಿಯೋ
ವಿಡಿಯೋ
ಶಿವಸುಂದರ್
ಚಿಂತಕ, ಬರಹಗಾರ ಶಿವಸುಂದರ್ ಅವರು ಮೂಲತಃ ಚಿತ್ರದುರ್ಗ ಜಿಲ್ಲೆಯವರು. ಹುಟ್ಟಿದ್ದು 1967 ಜನವರಿ 4ರಂದು. ಗೌರಿ ಲಂಕೇಶ್ ವಾರಪತ್ರಿಕೆಯಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸಿರುವ ಇವರು ಸಾಮಾಜಿಕ ಚಳವಳಿಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದಾರೆ. ಚಾರ್ವಕ, ಖೈರ್ಲಾಂಜಿ ಮುಂತಾದ ಕೃತಿಗಳನ್ನು ರಚಿಸಿದ್ದಾರೆ.