ಅವಳು ಬದಲಾಗದವಳು
ಅವಳು ಅವಳೆ
ಅವಳೊಳಗಿನ ಅವಳಿಗೆ
ಅವಳೆ ಸದಾ ಕೂಸು
ತಾಯಿ ತಂದೆ ಬಂಧುಬಳಗ
ಎಲ್ಲ ಅವಳದೆ ರೂಪ
ಕನ್ನಡಿ ನಕ್ಕರೂ ಬಿಂಬದ
ಭಾವವೆಲ್ಲ ತನ್ನದೆಂದೇ ಬೀಗುವ
ಅವಳಿಗೆ ಅವಳೇ ಗೆಳತಿ.
ಮನದೊಳಗಿನ ಭಾವಗಳಿಗೆ
ಅವಳದೆ ರೂಪ ಲಯ
ಸ್ವರ ತಂತಿಯ ಬೀಗುಮಾನ
ಸ್ವರಮಾಲೆ ಲೇಪನ
ಮನದ ದನಿಗೆ ಇಂಪಾಗಿ
ಕಂಪಾಗಿ ಕೆಂಪಾಗುವ
ಅವಳು ಸುಗ್ಗಿಯ ಹಾಡು.
ಅವಳೆಂದರೆ ಕಾರ್ಮೋಡದಲೂ
ಕಣ್ಣಿಗೆ ಕಾಮನಬಿಲ್ಲು ಕಟ್ಟಿ
ಬಣ್ಣದೋಕುಳಿ ಚೆಲ್ಲಿ
ಚಿತ್ತಾರ ಬರೆದು
ರಂಗವಲ್ಲಿಯೊಳಗೆ ಕುಣಿದು
ತನ್ನನ್ನೆ ತಾ ಮರೆಯುವ
ಸ್ಪೂರ್ತಿದಾತೆ.
ನೊಂದ ದನಿಗೆ ಉಸಿರಾಗಿ
ಹೊಸಬಾಳಿಗೆ ಹೆಸರಿಟ್ಟು
ಕವಿತೆಯ ಸಾಲಿಗೆ
ರಂಗು ರಂಗಿನ ಬಣ್ಣ ಬಳಿದು
ಚಂದಿರನಂಗಳಕೆ ಕರೆಸಿ
ಬೆಳದಿಂಗಳ ಮಜ್ಜನ
ಸಜ್ಜಿಗೆಯ ಊಟ
ತಂಗಳ ಮನಸಿಗೆ ತಂಪು
ಮಜ್ಜಿಗೆ ನೀಡಿ ಬೊಗಸೆ ತುಂಬ
ಪ್ರೀತಿ ಹಂಚುವ ಕುಶಲಗಾತಿ.
ಪ್ರೇಮದರಮನೆ ಕಟ್ಟಿ
ನಲ್ಮೆ ಕಾರಂಜಿ ಚಿಮ್ಮಿ
ಒಲವ ಬುಗ್ಗೆಯಲಿ ಮಿಂದು
ನೋವಿನಲಿ ನಲಿವು ಹಂಚಿ
ಬೆಂಚಿನ ಮೇಲೊಂದು
ಕುಂಚ ಕಟ್ಟಿ ಕಣ್ಣ ಕಾಡಿಗೆಗೆ
ಎಣ್ಣೆ ಬಡಿಸಿ ತಿದ್ದಿ ತೀಡಿ
ಹುಬ್ಬಳತೆಯೊಳಗೊಂದು
ತುಂಟ ನೋಟ ಬೀರಿ
ಮೆಲುದನಿಗೆ ಸುಂಕಕಟ್ಟದೆ
ಬಿಂಕತೋರದ ಸಜ್ಜನಿಕೆ
ಹೃದಯ ಹೆಜ್ಜೇನಿನಂತ ಸವಿಗಾತಿ.
ಕಾಡಿಸಿ ಪಿಡಿಸಿ ಬಡಿದವರ
ಬಾಡಿಗೆ ಮನೆಯ ಗೋಳಾಟ
ಕಂಡು ಮರುಗಿ ಕಂದೀಲು
ಹಿಡಿದು ನೋವಿಗೆ ಬೀದಿಯಲಿ
ಮುಲಾಮು ಹಿಡಿದು
ನೊಂದು ಬೆಂದವರ
ಮನದ ಗಾಯಕೆ ಲೇಪನ
ಲೋಬಾನ ಹಾಕಿ
ಶಾಂತಿಮಂತ್ರ ಬೀರಿ
ಸಾವಿಗೂ ಮದಿರೆ ಕೂಡಿಸಿ
ಮಧುಬಟ್ಟಲಿಗೆ ಅಣತಿ ನೀಡಿ
ಸರದಿ ನಾಳೆಯದೆಂದು
ತಾಕೀತು ಹಾಕುತ್ತಲೇ,,,
ಸಾವಿರ ತಾರೆ ಹೊಳಪು
ಹೊತ್ತ ಗಟ್ಟಿಗಿತ್ತಿಯವಳು...
ವಾಣಿ ಭಂಡಾರಿ
ವಾಣಿ ಭಂಡಾರಿ ಅವರು ಮೂಲತಃ ಮಲೆನಾಡಿನ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ ಪೇಟೆಯ ಭೈರಾಪುರದವರು. ಕುವೆಂಪು ವಿಶ್ವವಿದ್ಯಾಲಯದಿಂದ ಎಂ.ಎ (ಕನ್ನಡ) ಪದವೀಧರರು. ವೃತ್ತಿಯಿಂದ ಉಪನ್ಯಾಸಕರು. ಆಯುರ್ವೇದಿಕ್ ಉತ್ಪನ್ನಗಳ ಡೀಲರ್ ಆಗಿಯೂ, ಭಾವಗೀತೆ, ಕವನ,ಕಥೆ, ನ್ಯಾನೋಕಥೆ, ಕಾದಂಬರಿ,ಚುಟುಕು,ಹನಿಗವನ,ಲೇಖನ, ಅಂಕಣ, ಶಾಯರಿ, ಗಜಲ್ ಆಧುನಿಕ ವಚನಗಳು, ತುಣುಕುಗಳು ಬರೆಯುವ ಹವ್ಯಾಸ. ನಾಡಿನ ಹಲವಾರು ಪತ್ರಿಕೆಯಲ್ಲಿ ವಿಮರ್ಶಾ ಅಂಕಣ, ಸತ್ಯವಾಣಿ ಕಟೋಕ್ತಿ, ವ್ಯಕ್ತಿತ್ವ ವಿಕಸನ ಅಂಕಣಗಳು ಪ್ರಕಟಗೊಂಡಿವೆ.
ಕೃತಿಗಳು : ಅಂತರ್ ದೃಷ್ಟಿ- ವಿಮರ್ಶಾ ಸಂಕಲನ, ತುಂಗೆ ತಪ್ಪಲಿನ ತಂಬೆಲರು ಭಾಗ:1+2 (ಸಂಶೋಧಾನ್ಮತಕ ಕೃತಿ), ಸಂತನೊಳಗಿನ ಧ್ಯಾನ
More About Author