Poem

ಬಾ... ಭವಿಷ್ಯದ ನಕ್ಷತ್ರಗಳಾಗೋಣ

 

ಕಾವು ಆರದ ಮಗ್ಗುಲುಗಳು
ಎಡಬಿಡದೆ ಕಾಡಿಸುತ್ತಿವೆ ನಿನ್ನನ್ನೇ
ಹಸಿ ಮಾಸದ ಅಧರಗಳು ಮಧುರಸದ
ಮತ್ತೇರಿದ್ದ ಕಾಮನಬಿಲ್ಲು
ನೆನೆದು ದುಃಖಿಸುತ್ತಿವೆ ಇಲ್ಲಿ
ಒಲವಿನ ದಿಂಬಿಲ್ಲ, ಬಿಸಿಯುಸಿರ ಆಲಿಸಿ
ಸಂತೈಸುವ ಎದೆಯ ಮಡಿಲಿಲ್ಲ,
ಪಿಸುಗುಟ್ಟುವ ಮೌನವೂ ಇಲ್ಲಿಲ್ಲ

ಅರೆ ಏನಂತೆ...?
ನೀನು ಕೊಟ್ಟ ಪರಿಶುದ್ಧ ಪ್ರೀತಿ
ತೋರಿದ ಬೆಟ್ಟದಷ್ಟು ಕಾಳಜಿ
ನನ್ನ ಸುತ್ತ ಸುರಕ್ಷೆಯ ಕೋಟೆ
ನಿರ್ಮಿಸಿ ಏಕಾಂತದ ಸಂಗಾತಿಗಳಾಗಿವೆ
ಬಾ...
ಏಕಾಂತದಲ್ಲೊಮ್ಮೆ ಭವಿಷ್ಯದ
ನಕ್ಷತ್ರಗಳಾಗುವ ಕುರಿತು ಮಾತಾಡೋಣ...

ದುಃಖಸಾಗರದಲಿ ಮೇಲೇಳಲು
ಆಸರೆ ಸಿಗದೆ ಎದ್ದೆದ್ದು ಮುಳುಗುತ್ತಿದ್ದೆ ನಾನು
ಅವನಿಯೂ ಅಂಜಿ ಕಣ್ಣೀರಿಡುತ್ತಿದ್ದಳು
ಕರುಳಕುಡಿಯ ರಕ್ಷಿಸಲಾರದೆ
ಅಸಹಾಯಕ ಸ್ಥಿತಿಯಲಿ...

ಗಗನದೆತ್ತರದಿಂದ ಬಂದ ಮೇಘದೂತ ನೀನು!
ಅಚಾನಕ್ಕಾಗಿ ಆಕಾಶಬುಟ್ಟಿಯಿಂದ ಧರೆಗಿಳಿದು
ಅಸುನೀಗುತ್ತಿದ್ದವಳ ಕೈಹಿಡಿದು
ಹೊತ್ತೊಯ್ದೆ ...ದೇವಕುಸುಮವಾಗಿಸಲು
ಇಬ್ಬನಿಯ ಸದ್ದಿನಲಿ ಆಸರೆ ಹಿಡಿದು

ನೀ ಬಂದಂತೆ ಸ್ವರ್ಗವಾಯಿತು ವನವೆಲ್ಲ ಸಖ
ನನ್ನ ನಯನಗಳಿಗೀಗ ಎಷ್ಟೊಂದು ನವಕಾಂತಿ..
ಒಣಗಿದ ಪರ್ಣಗಳಿಗೆ ಹಸಿರ ಬಸಿರು
ತುಂಬುವ ಕನಸುಗಳು ಗೂಡುಕಟ್ಟುತ್ತಿವೆ
ನನಗಾಗಿ ಹೊಸದೊಂದು ಪ್ರಪಂಚವನ್ನೇ ಸೃಷ್ಟಿಸಿದೆ
ಆ ಇಡೀ ಪ್ರಪಂಚದಲ್ಲಿನ ಬೆಳಕು ನೋಡಿ
ಗತಭೂತವು ಸ್ತಬ್ಧವಾಯಿತು
ಕತ್ತಲೆಯೂ ನಾಚಿ ತಲೆತಗ್ಗಿಸುವಂತೆ

ನಾನಿಂದು ತಲೆಯೆತ್ತಿ ನಿಂತಿರುವೆ
ವರ್ತಮಾನದ ಸಿಹಿಗಾಳಿಯಲಿ
ಮತ್ತೆಂದೂ ನೆಲಕಚ್ಚದಂತೆ..
ಕಣ್ಣ ಮುಂದಿನ ನೂರಾರು ಕನಸುಗಳು
ಪೈಪೋಟಿಯಿಂದ ಕೈಮಾಡಿ ಆಹ್ವಾನಿಸುತ್ತಿವೆ
ಈಗ ದೇವಧೂತ....
ನನಗೂ ನಿನ್ನ ಭರವಸೆಯ ರೆಕ್ಕೆಯೊಂದಿಗೆ
ಪತಂಗವಾಗಿ ಹಾರಾಡುವ ಬಯಕೆಯಾಗಿದೆ
ಅಂತರ್ಗತವಾಗಿ....
ಅಂತರ್ಮುಖಿಯಾಗಿ...
ಕಲೆ: ಎಸ್. ವಿ. ಹೂಗಾರ

ತೇಜಾವತಿ ಹೆಚ್.ಡಿ.

ಕವಯತ್ರಿ, ಕಥೆಗಾರ್ತಿ ತೇಜಾವತಿ ಹೆಚ್. ಡಿ. ಅವರು ವೃತ್ತಿಯಿಂದ ಕನ್ನಡ ಶಿಕ್ಷಕಿ. ಮೂಲತಃ ತುಮಕೂರಿನವರು. ಕಾವ್ಯ,ಕತೆ,ಲೇಖನ, ಕಾದಂಬರಿ ಮತ್ತು ಪ್ರಬಂಧ ಕ್ಷೇತ್ರ ಅವರ ಆಸಕ್ತಿಯ ಕ್ಷೇತ್ರಗಳು. ಕಾಲಚಕ್ರ - ಹೊನ್ನುಡಿ ಸಂಕಲನ ಹಾಗೂ ಮಿನುಗುವ ತಾರೆ - ಕವನ ಸಂಕಲನ ಪ್ರಕಟಣೆ ಕಂಡಿದೆ. ಅವರ ಹಲವಾರು ಬರಹಗಳು ಕನ್ನಡ ದಿನಪತ್ರಿಕೆಯಲ್ಲಿ ಪ್ರಕಟವಾಗಿವೆ. ‘ಉತ್ತಮ ಶಿಕ್ಷಕ ಪ್ರಶಸ್ತಿ, ಸಾವಿತ್ರಿಬಾಯಿ ಫುಲೆ ಪ್ರಶಸ್ತಿ, ಕರುನಾಡ ಚೇತನ ಪ್ರಶಸ್ತಿ’ದೊರೆತಿವೆ.

More About Author