ಗೂಳಿ ಗಾಳಿಗೆ
ಮಲೆತ ಮರ
ಪೂರ ಬೆತ್ತಲಾದಂತೆ
ತುಂಬು ಗರ್ಭಿಣಿಗೆ
ಧುತ್ತೆಂದು
ಮೈಯಿಳಿದಂತೆ
ಮಟಮಟ ಮಧ್ಯಾಹ್ನ
ಗುದ್ದಿನಿಂದೆದ್ದ
ಬೇತಾಳ
ಕಾಮಕೇಳಿಗೆ ಸೆಳೆದಂತೆ
ಅಮಾವಾಸ್ಯೆಯ
ಕಾರ್ಗತ್ತಲು
ಹುಣ್ಣಿಮೆಯ
ಬೆಳದಿಂಗಳ
ನುಂಗಿ ನೆಗೆದಂತೆ
ಮುಗಿಲು ಹರಿದಂತೆ
ನೆಲ ಬಿರಿದಂತೆ
ತಿರೆಗೆ ಜ್ವರ ಬಂದು
ನೆರೆ ಬಂದು
ದಿಗಂತಕ್ಕೆ ಚಿಮ್ಮಿದಂತೆ
ವಸ್ತ್ರವಿದ್ದೂ
ವಿವಸ್ತ್ರನಾದಂತೆ
ವಿವಸ್ತ್ರನಾಗಿ
ಮೈಲಿಗೆಗಂಜಿ
ನಡುಗಿದಂತೆ
ಮಾತು ಮೌನದ
ಮೊರೆ ಹೋದಂತೆ
ಮೌನದ ಮಾತು
ರಿಂಗಣಿಸಿದಂತೆ
ಸನಿಹದ ದನಿ
ಕೇಳಿಸದಂತೆ
ದೂರದ ಮಾತ
ಆಲಿಸಿದಂತೆ
ದೇಹಕ್ಕೆ ಜೀವ
ಹೊರೆಯಾದಂತೆ
ಜೀವಕ್ಕೆ ಜೀವ
ಎರವಾದಂತೆ
ಆತ್ಮಕ್ಕೆ ಪರಮಾತ್ಮನ
ನೆನಹು
ಹೆಚ್ಚಾದಂತೆ
ಆತ್ಮನಿಂ ಪರಮಾತ್ಮ
ದೂರದೂರ ಸರಿದಂತೆ
- ರೇವಣಸಿದ್ದಪ್ಪ ಜಿ.ಆರ್.
ರೇವಣಸಿದ್ದಪ್ಪ ಜಿ.ಆರ್.
ರೇವಣಸಿದ್ದಪ್ಪ ಜಿ.ಆರ್. ಅವರು ಮೂಲತಃ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ತಿಮ್ಲಾಪುರ ಗ್ರಾಮದವರು. ಎಂ.ಎ(ಇಂಗ್ಲಿಷ್). ಹಾಗೂ ಬಿ.ಇಡಿ. ವಿದ್ಯಾರ್ಹತೆಯನ್ನು ಹೊಂದಿರುವ ಅವರಿಗೆ ಕಾವ್ಯ ಕೃಷಿ, ಕಲೆ, ಸಾಹಿತ್ಯ, ಸಂಸ್ಕೃತಿ, ಚರ್ಚೆ, ಭಾಷಣ ಇತ್ಯಾದಿಗಳಲ್ಲಿ ಒಲವು. ಪ್ರಸ್ತುತ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೇಬೆನ್ನೂರು ಹೋಬಳಿ ಕೇಂದ್ರದಲ್ಲಿರುವ ಎಸ್ಜೆವಿಪಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಂಗ್ಲ ಭಾಷಾ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
More About Author