ಕಾದಂಬರಿಗಾರ್ತಿ, ಕತೆಗಾರ್ತಿ ಆಶಾ ರಘು ಅವರು ಮೂಲತಃ ಬೆಂಗಳೂರಿನವರು. ಇವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ಸ್ನಾತಕೋತ್ತರ ಪದವಿ ಪಡೆದಿರುತ್ತಾರೆ. 'ಆವರ್ತ', 'ಗತ', 'ಮಾಯೆ', 'ಆರನೇ ಬೆರಳು', 'ಬೊಗಸೆಯಲ್ಲಿ ಕಥೆಗಳು', 'ಅಪರೂಪದ ಪುರಾಣ ಕಥೆಗಳು', 'ಚೂಡಾಮಣಿ' ಹೀಗೆ ಅನೇಕ ಸಾಹಿತ್ಯ ಕೃಷಿಯನ್ನು ಮಾಡಿರುವ ಅವರ ‘ಆವರ್ತ’ ಸಂಕಲದಿಂದ ಆಯ್ದ ಕತೆ ನಿಮ್ಮ ಓದಿಗಾಗಿ...
ಆರ್ತವಾಗಿ ತನ್ನನ್ನೇ ನೋಡುತ್ತಾ ತೋಳುಗಳ ಚಾಚಿ ಕರೆಯುತ್ತಿದ್ದ ಅವಳ ಬಿಂಬ ನೀರಿನಲ್ಲಿ ಕಂಡು, ಅರೆಕ್ಷಣವೂ ಯೋಚಿಸದೆ, ಹರಿಯುವ ನೀರಿಗೆ ಧುಮುಕಿ, ಮೈಬಲವನ್ನೆಲ್ಲ ಕ್ರೋಢೀಕರಿಸಿ ನೀರನ್ನು ಇಬ್ಬಾಗವಾಗಿ ಸೀಳಿ, ದಾರಿ ಮಾಡಿಕೊಂಡು, ಹರಿವಿಗೆ ವಿರುದ್ಧವಾಗಿ ಚಲಿಸುತ್ತಾ, ಅವಳಿಗಾಗಿ ಇನ್ನಿಲ್ಲದ ಹಾಗೆ ಹುಡುಕುತ್ತಾ, ಎಲ್ಲಿ ಮರೆಯಾದಳೆಂದು ಕ್ಷಣ ವಿಚಲಿತನಾಗಿ, ಕೈ ಬಡಿತ ನಿಂತುಹೋಗಿ, ಆಯತಪ್ಪಿ ಭೋರ್ಗರೆಯುವ ನೀರಿನ ರಭಸಕ್ಕೆ ಕೊಚ್ಚಿಕೊಂಡು, ತನ್ನ ತೋಳಬಲವಲ್ಲ ನಿತ್ರಾಣವಾಗಿ, ಜಲದ ವಶವಾಗಿ, ತಾನೂ ಹರಿದು ಸುಳಿಗೆ ಸಿಕ್ಕು, ಗಿರಗಿರನೆ ತಿರುಗುತ್ತಿರುವಂತೆ, ಕಣ್ಣಿಗೆ ಕತ್ತಲೆ ತುಂಬಿಕೊಂಡದ್ದಷ್ಟೇ ಅವನಿಗೆ ನೆನಪು.. ದಟ್ಟ ಕಾನನದ, ಒಣ ಎಲೆಬಳ್ಳಿ ಮುಳ್ಳು ಕಲ್ಲುಗಳ ಇಳುವಿನಲ್ಲಿ ಬಿದ್ದಿದ್ದಾನೆ ಪ್ರತೀಪ ಮಹಾರಾಜ..!
ಇಲ್ಲಿಗೆ ಹೇಗೆ ಬಂದ ? ನೀರಿನೊಂದಿಗೆ ಕೊಚ್ಚಿಕೊಂಡು ಬಂದವನು ದಡವೊಂದರಲ್ಲೂ ನೀರಿನ ನಡುವೆಯೇ ಇದ್ದಿರಬಹುದಾದ ಸಣ್ಣಪುಟ್ಟ ಬಂಡೆಗಳ ಮೇಲೋ, ತೇಲುತ್ತಿರುವ ಮರದ ರೆಂಬೆಯೊಂದಕ್ಕೆ ನೇತುಹಾಕಿಕೊಂಡೋ ಬಿದ್ದಿರಬೇಕಿತ್ತು ಎಂಬ ತರ್ಕವು ಮೂಡಿ.. ತತ್‌ಕ್ಷಣವೇ ಮರೆತುಹೋಗಿದ್ದ ನೆನಪಿನ ಎಳೆ ಜ್ಞಾಪಕಕ್ಕೆ ಬಂದು ನಿಟ್ಟುಸಿರುಬಿಟ್ಟ. ದಡವೊಂದರ ಸಮೀಪವೇ ತೇಲುತ್ತಿದ್ದ ಮರದ ದಿಂಡೊಂದಕ್ಕೆ ಆತುಕೊಂಡು ಬಿದ್ದಿದ್ದ.. ಮುಚ್ಚಿದ್ದ ಕಣ್ಣಿನೊಳಗೆ ಕೆಂಪು ಕೆಂಪು ಬೆಳಕು.. ಮುಖದ ಒಂದು ಪಾರ್ಶ್ವ, ಕತ್ತು, ಕೈಗಳಿಗೆ ಸಣ್ಣಗೆ ಬಿಸಿಲಿನ ಶಾಖ ತಗುಲಿದ ಹಾಗಾಗಿ ನಿಧಾನವಾಗಿ ಕಣ್ಣು ತೆರೆದ. ಕುಕ್ಕುತ್ತಿದ್ದ ಸೂರನ ಪ್ರಭೆಗೆ ಪುನಃ ಮುಚ್ಚಿಕೊಂಡ ಕಣ್ಣುಗಳನ್ನು, ಕುತ್ತಿಗೆಯನ್ನು ಕೆಳಗೆ ಬಗ್ಗಿಸಿಕೊಂಡು ಮತ್ತೆ ಮೆಲ್ಲನೆ ತೆರೆದೆ.. ಎಡಭುಜವನ್ನು ಒರಗಿಸಿಕೊಂಡಿದ್ದ ಮರದ ದಿಂಡಿನ ಬದಿಯಲ್ಲಿ ಸಾಲಾಗಿ ಇರುವೆಗಳು ಹರಿಯುತ್ತಿದ್ದುದು ಕಾಣಿಸಿತು.. ಅವಲ್ಲಿಗೆ ಹೊರಟಿವೆಯೆಂದು ತಿಳಿಯುವ ಯಾವ ಕುತೂಹಲವಿಲ್ಲದಿದ್ದರೂ ಕಣ್ಣುಗಳು ತಾವಾಗಿಯೇ ಅವುಗಳು ಹೊರಟ ದಿಕ್ಕಿಗೇ ಹಾಯತೊಡಗಿ ಜೇನಿನಂತಹ ಸಣ್ಣ ಹುಳುವೊಂದು ಸತ್ತುಬಿದ್ದಿದ್ದು, ಅದರ ದೇಹದ ರಸ ಹೀರಲು ಅವು ದಂಡುದಂಡಾಗಿ ಹೋಗುತ್ತಿವೆಯೆಂಬ ಅಂಶವು ಕಾಣಿಸಿ.. ಸೃಷ್ಟಿಕರ್ತನು ತಾನು ಸೃಷ್ಟಿಸಿದ ಪ್ರತಿಯೊಂದು ಜೀವಿಗೂ ಅನ್ನ ನೀರು ಒದಗಿಸಿಯೇ ತೀರುತ್ತಾನೆ.. ಎಂಬ ಸುಮೇರುವಿನ ಮಾತಿನ ನೆನಪಾಗಿ.. ತಾನೂ ಹಿಂದಿನ ದಿನದಿಂದ ಏನೂ ತಿಂದಿಲ್ಲವೆಂಬ ಅಂಶ ಅರಿವಿಗೆ ಬಂದು, ತುರ್ತಾಗಿ ಏನನ್ನಾದರೂ ತಿನ್ನದಿದ್ದರೆ ತಾನು ಉಳಿಯುವುದೇ ಇಲ್ಲವೆನ್ನುವಷ್ಟು ಹಸಿವು ಬಾಧಿಸತೊಡಗಿತು
-ಆಶಾ ರಘು
ಆಶಾ ರಘು
ಆಶಾ ರಘು ಅವರು ಕನ್ನಡದ ಪ್ರಮುಖ ಕಾದಂಬರಿಗಾರ್ತಿಯರಲ್ಲಿ ಒಬ್ಬರು. ಇವರು ಕೇಶವ ಅಯ್ಯಂಗಾರ್ ಹಾಗೂ ಸುಲೋಚನ ದಂಪತಿಗಳ ಹಿರಿಯ ಮಗಳಾಗಿ 1979ರ ಜೂನ್ 18 ನೇ ತಾರೀಖಿನಂದು ಬೆಂಗಳೂರಿನಲ್ಲಿ ಹುಟ್ಟಿದರು. ಇವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಉಪನ್ಯಾಸಕರಾಗಿ ಕೆಲಕಾಲ ಕಾರ್ಯ ನಿರ್ವಹಿಸಿರುವ ಇವರು, ರಂಗಭೂಮಿ, ಕಿರುತೆರೆ, ಬೆಳ್ಳಿತೆರೆಗಳಲ್ಲಿಯೂ ಕಲಾವಿದೆಯಾಗಿ, ಸಂಭಾಷಣೆಕಾರರಾಗಿ, ಸಹಾಯಕ ನಿರ್ದೇಶಕರಾಗಿ ಕೂಡ ಕಾರ್ಯ ನಿರ್ವಹಿಸಿದ್ದಾರೆ.
'ಆವರ್ತ', 'ಗತ', 'ಮಾಯೆ', 'ಚಿತ್ತರಂಗ' ಮೊದಲಾದ ಕಾದಂಬರಿಗಳನ್ನೂ, 'ಆರನೇ ಬೆರಳು', 'ಬೊಗಸೆಯಲ್ಲಿ ಕಥೆಗಳು', 'ಅಪರೂಪದ ಪುರಾಣ ಕಥೆಗಳು' ಮೊದಲಾದ ಕಥಾಸಂಕಲನಗಳನ್ನೂ, 'ಚೂಡಾಮಣಿ', 'ಕ್ಷಮಾದಾನ', 'ಬಂಗಾರದ ಪಂಜರ ಮತ್ತು ಇತರ ಮಕ್ಕಳ ನಾಟಕಗಳು' 'ಪೂತನಿ ಮತ್ತಿತರ ನಾಟಕಗಳು' ಮೊದಲಾದ ನಾಟಕ ಕೃತಿಗಳನ್ನು ರಚಿಸಿದ್ದಾರೆ. ಇವರ 'ಆವರ್ತ' ಕಾದಂಬರಿಯ ಕುರಿತ ಕೃತಿ 'ಆವರ್ತ-ಮಂಥನ' ಕೂಡಾ ಪ್ರಕಟಗೊಂಡಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (2014), ಸೂರ್ಯನಾರಾಯಣ ಚಡಗ ಪ್ರಶಸ್ತಿ (2014), ಕನ್ನಡ ಸಾಹಿತ್ಯ ಪರಿಷತ್ತಿನ ಪಳಕಳ ಸೀತಾರಾಮಭಟ್ಟ ಪ್ರಶಸ್ತಿ (2019), ರಾಯಚೂರು ಕನ್ನಡ ಸಾಹಿತ್ಯ ಪರಿಷತ್ತಿನ ರಾಜಲಕ್ಷ್ಮಿ ಬರಗೂರು ರಾಮಚಂದ್ರಪ್ಪ ಪ್ರಶಸ್ತಿ (2020), ಸೇಡಂನ ಅಮ್ಮ (2021), ಕರ್ನಾಟಕ ಲೇಖಕಿಯರ ಸಂಘದ ತ್ರಿವೇಣಿ ದತ್ತಿನಿಧಿ ಪ್ರಶಸ್ತಿ (2023)ಗಳನ್ನು ಪಡೆದಿದ್ದಾರೆ. ಮಂಡ್ಯಾ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು 2023 ರಲ್ಲಿ ಇವರಿಗೆ 'ಸಾಹಿತ್ಯಾಮೃತ ಸರಸ್ವತಿ' ಎಂಬ ಬಿರುದು ನೀಡಿ ಗೌರವಿಸಿದೆ.
More About Author