Poem

ಅವನ ಬಗ್ಗೆ ಒಂದಿಷ್ಟು..

ಅವನ ಕಣ್ಣ ಗುಡ್ಡೆಗಳ ಮೇಲೆ
ನನ್ನ ಬಿಂಬ ಅಲೆದಾಡಿದಾಗೆಲ್ಲ
ದಿಂಬಿನ ಚೀಲದೊಳಗೆ ನುಸುಳಿ ಹೋದ
ಕನಸುಗಳು ಗುಟ್ಟಾಗಿ ಬಂದು
ಭೇಟಿ ಮಾಡುತ್ತವೆ.
ನನ್ನದೇ ಕಾಲೊಡಕಿನ ಸದ್ದಿಗೋ,
ಕನಸುಗಳ ಗೌಜಿಗೋ,
ಮುನಿಸಿಕೊಂಡು ರೆಪ್ಪೆಗಳು
ದೂರ ಸರಿಯುತ್ತವೆ.
*
ನನ್ನ ದೊರಗು ಮೌನದ ಮೇಲೆ
ಅವನು ಬೆರಳಾಡಿಸಿದರೆ ಸಾಕು
ಲಕ್ಷಗಟ್ಟಲೆ ಪಿಯಾನೊಗಳು
ಒಟ್ಟಿಗೇ ಮಿಡಿವ ಸದ್ದು.
ಅವನು ಸರಿಯಾಗಿ ಕನ್ನಡಿ
ನೋಡಿಕೊಂಡಿಲ್ಲ
ಅವನ ಕಿವಿಗಳ ಮೇಲೆ
ನಾನಾಡದ ಉಲಿಗಳ
ತಿಳಿ ತಿಳೀ ಕಲೆ.
*
ಹೀಗೆ ಯಾರದೋ ಬಟ್ಟೆಗಳ
ಹೊಲಿಯುತ್ತ ಕೂತಾಗಲೆಲ್ಲ
ನೆನಪಾಗುತ್ತದೆ,
ಕಿತ್ತ ಅವನ ಅಂಗಿ ಗುಂಡಿ.
ಇನ್ನೆಂದೂ ಕೀಳದಂತೆ
ಹಚ್ಚಬೇಕೆಂದುಕೊಂಡಾಗಲೆಲ್ಲ
ಹಾಳು ನೂಲು ಸೂಜಿಯೊಳಗೆ
ಹೊಕ್ಕದೇ
ಕವಲೊಡೆದು ಕಾಡುತ್ತದೆ.
*
ಕಾಯುತ್ತೇನೆ
ದಿನಾ ನನ್ನ ತುಟಿಗಳ ಮೇಲೆ
ಜಮೆಯಾಗುವ ಅವನ ನೀರವಗಳೆಲ್ಲ
ನಗೆಯ ನಗದಾಗುವ ಹೊತ್ತಿಗೆ.
ಬೆಳಿಗ್ಗೆ ಏಳುವಾಗ ಟಿಕಲಿ ಉದುರಿತ್ತಲ್ಲ!
ಅವನೇನಾದರೂ
ನಿವೇದಿಸಿಕೊಂಡನೆ
ಕಣ್ತುಂಬಿಕೊಂಡು..?
*
ಇಂಥ ಎಷ್ಟೋ ನಿತಾಂತ ರಾತ್ರಿಗಳಲ್ಲಿ
ಅವನು- ಉಸಿರುಗಳನ್ನಾದರೂ
ಹೆರುತ್ತ ಮಗ್ಗಲು ತುಂಬಲು ಶಕ್ತ.
ನಾನು- ಅವುಗಳನ್ನೂ
ಒಳಗೆಳೆದುಕೊಂಡು
ತಟ್ಟಿ ಮಲಗಿಸುವ
ಬಂಜೆ...


- ಚೈತ್ರಿಕಾ ಹೆಗಡೆ

ಚೈತ್ರಿಕಾ ಹೆಗಡೆ

ಲೇಖಕಿ ಚೈತ್ರಿಕಾ ಹೆಗಡೆ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕಂಚೀಮನೆಯವರು.ಶ್ರೀಧರ್ ಹೆಗಡೆ ಕಂಚೀಮನೆ ಹಾಗೂ ಅಂಬಿಕಾ ಹೆಗಡೆ ಮಗಳಾಗಿ 1994ರ ಮೇ 8 ರಂದು ಜನಿಸಿದರು. ಓದಿದ್ದು ಬಿಕಾಂ. ಮೊದಲಿನಿಂದಲೂ ಹಾಡು, ಕವಿತೆ ಬರೆಯುವುದರಲ್ಲಿ ಆಸಕ್ತಿಯಿಂದಾಗಿ ಕಥಾ ಬರವಣಿಗೆಯೂ ಶುರುವಾಯಿತು. ವಿದ್ಯಾಭ್ಯಾಸ ಮುಗಿಯುತ್ತಿದ್ದಂತೆ ಧಾರಾವಾಹಿಗೆ ಸಂಭಾಷಣೆಗೆ ಅವಕಾಶ ಲಭ್ಯವಾಯಿತು. ಸದ್ಯ ಕಲರ್ಸ್ ಕನ್ನಡದ ಗೀತಾ ಧಾರಾವಾಹಿಗೆ ಸಂಭಾಷಣೆ ಬರೆಯುತ್ತಿದ್ದಾರೆ.

ಛಂದ ಪುಸ್ತಕ ಕಥಾ ಸ್ಪರ್ಧೆ ಸೇರಿದಂತೆ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ‘ನೀಲಿ ಬಣ್ಣದ ಸ್ಕಾರ್ಫು’ ಇವರ ಮೊದಲ ಕಥಾಸಂಕಲ.

More About Author