ಅವಳು – ಕವಿತೆ
ಹಿಂಸಿಸುತ್ತಿದೆ..
ದುಃಖಿಸುತ್ತಿದೆ..
ಉಸಿರ ಕಟ್ಟಿಸುತ್ತಿದೆ
ಕವಿತೆ...
ಹೊರಬರಲು
ನಾ ಬರಲೇ ..... ಹೊರಗೆ?
ಅವಳು ಚಿಂತಿಸು..
ತ್ತಲೇ ಇದ್ದಾಳೆ,
ಕವಿತೆ ಹೊರತರಲು...
ಮಗು ಜೋರಾಗಿ
ಅಳುತ್ತಿದೆ
ಓಡುತ್ತಾಳೆ
ಹಾಲೂಡಿಸಲು,
ಕವಿತೆ ಮರೆಯುತ್ತಾಳೆ......
ಮತ್ತೆ ಕವಿತೆ ....
ತಲ್ಲಣಿಸುತ್ತಿದೆ
ಹೊರಬರಲು,
ಬರಬೇಕು ನೀನು....
ಭಾವಗಳ ಹೊತ್ತು,
ಅವಳು ಹೇಳುತ್ತಾಳೆ
ಸ್ವಲ್ಪ ತಡಿ,
ಸೋತು ಬಂದ ಇನಿಯನಾ
ಆರೈಕೆ, ಅಯ್ಯೋ....
ಮರೆಯುತ್ತಾಳೆ.
ಕವಿತೆಯಾ
ಮತ್ತೆ ಕೇಳುತ್ತದೆ,
ಭಾವದುಂಬಿ
ಭಾರವಾದ ಕವಿತೆ,
ಹೊರಬರಲು,
ಇಲ್ಲದ ಚಡಪಡಿಕೆ....
ಹೊರತರಲೇ ಬೇಕು
ಕವಿತೆಯನ್ನು
ಹಿರಿಯ ಜೀವಗಳು....
ಕೆಮ್ಮಿದಾ ಸದ್ದು,
ಕವಿತೆ ಮರೆಯುತ್ತಾಳೆ
ಸದ್ದಿಲ್ಲದೇ
ಕಳೆಯುತ್ತವೆ...
ದಿನಗಳು ಆಗಾಢತೆ ....
ಯೊಂದಿಗೆ,
ಮರೆತೇ ಬಿಡುತ್ತಾಳೆ
ಕವಿತೆಯ ಕೂಗು
ಕವಿತೆ ಚೀರಾಡು.... ತ್ತಿದೆ,
ನಾ ಬರಲೇ ಬೇಕು
ಇಂದೇ ನಿರ್ಧರಿಸು.. ತ್ತಾಳೆ,
ಕವಿತೆಯ
ಹೊರತರಲು
ಮೊಗದಲ್ಲು ತುಸು....
ನಗುವರಳುತ್ತದೆ..
ಪತಿಯಾ ಪ್ರೇಮ..
ದಾಲಿಂಗನದಲ್ಲಿ
ಸೋಲುತ್ತಾಳೆ,,
ಮತ್ತೆ ಮರೆಯುತ್ತಾಳೆ....
ಕವಿತೆಯ,
ಬದುಕಿನ ಬಂಡಿ
ಚಲಿಸುತ್ತಲೇ....
ಇದೆ..
ಮನೆಯ ಮುಂದಿದ್ದ
ಗಿಡ ವ್ಯಕ್ತವಾಗಿದೆ...
ಸ್ವಲ್ಪ ನಿರಾಳ..
ವೆನಿಸುತ್ತದೆ,
ಗಿಡ ಬೆಳೆದು...
ಮರವಾಗಿದ್ದು,
ತಿಳಿಯುವುದೇ..
ಇಲ್ಲ.
ಕವಿತೆಯ ಬಗ್ಗೆ
ಚಿಂತಿಸುತ್ತಾಳೆ,
ಹೌದು ಪ್ರೀತಿಯಿಂದ
ನನ್ನವೇ ಕವಿತೆ
ಹೊರತಬೇಕೆಂದು...
ಕಣ್ಣ ತುಂಬುತ್ತಾಳೆ,
ಕನ್ನಡಿಯಲ್ಲಿ..
ನೋಡುತ್ತಾಳೆ
ಹಾರಾಡುತ್ತಿದ್ದ ದಟ್ಟ..
ಕಪ್ಪು ಕೂದಲು..
ಮಂಕಾಗಿದೆ,
ಕಣ್ಣ ದೃಷ್ಠಿಯಾ?
ಕೂದಲಾ?
ನಳ ನಳಿಸುತ್ತಿದ್ದ ..
ಚೆಲುವು
ಬಾಡಿದಂತಿದೆ.
ಆದರೂ.....
ಕವಿತೆಯ ಹೊರತರಲು
ಚಿಂತಿಸುತ್ತಾಳೆ,
ಕವಿತೆಯ ಮನದುಂಬಿ
ಕರೆಯುತ್ತಾಳೆ,
ಕವಿತೇ ಸೋತಿದೆ....
ಧ್ವನಿಯಡಗಿದೆ,
ನೀರಸವಾಗಿದೆ,
ಕವಿತೆ ನೀನು ಬರಲೇ
ಬೇಕು ರೋದಿಸು....
ತ್ತಾಳೆ..
ನಿನ್ನ ಸೊರಗಿಸಿದ್ದು
ನಾನೇ,
ನಳಿಸುತ್ತಿದ್ದೆ,
ನಿನ್ನ ಹಣ್ಣೆಲೆ....
ಮಾಡಿದ್ದು ನಾನೇ,
ಆದರೂ ನೀನು
ಬರಲೇ ಬೇಕು
ಹೊರಗೇ...
ಕ....ವಿ...ತೇ....
ಮತ್ತೆ ಕವಿತೆ
ನಿದ್ರೆಯಲ್ಲೂ ಎಚ್ಚರಿಸುತ್ತದೆ,
ಕೇಳುತ್ತದೆ.
ಬರಲೇ ಹೊರಗೇ....
ಹೂಂ, ದುಃಖಿಸುತ್ತಾಳೆ,
ಕನವರಿಸುತ್ತಾಳೆ,
ಕವಿತೆಯನ್ನೇ...
ತಬ್ಬುತ್ತಾಳೆ..
ಹೊರತರಬೇಕು....
ಎಂದು ಆಯಾಸವಾಗಿ
ಯಾರೋ ನಕ್ಕಂತಾಗುತ್ತದೆ,
ಈಗ ಕವಿತೆ ಹೊರತರಲು
ಹೆಣಗಾಡುತ್ತಿದ್ದಾಳೆ.
ಶಾಂತಾ ಜಯಾನಂದ್
ಕವಯತ್ರಿ ಶಾಂತಾ ಜಯಾನಂದ್ ಅವರು ಮೂಲತಃ ಚಿಕ್ಕಮಗಳೂರು . ಜಿಲ್ಲೆಯ ತರೀಕೆರೆಯವರು. ಶಿವಮೊಗ್ಗದಲ್ಲಿಯೇ ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜು ಶಿಕ್ಷಣ ಪೂರೈಸಿದರು. ಬಾಲ್ಯದಿಂದಲೇ ಸಾಹಿತ್ಯ, ಕ್ರೀಡೆ, ನಾಟಕ ಮತ್ತು ಗಾಯನದಲ್ಲಿ ಆಸಕ್ತಿ. ಕಾಲೇಜು ದಿನಗಳಲ್ಲಿಯೇ ಸಾಹಿತ್ಯ ರಚನೆಯಲ್ಲಿ ತೊಡಗಿಕೊಂಡಿದ್ದ ಶಾಂತಾ ಜಯಾನಂದ್ ಅವರು ಸಾಹಿತ್ಯಿಕ ಚರ್ಚೆ, ಸಂಗೀತ, ಕಾವ್ಯರಚನೆ ಮುಂತಾದ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರು. ಸಮಾಜಶಾಸ್ತ್ರ ಮತ್ತು ಕನ್ನಡ ಸಾಹಿತ್ಯದಲ್ಲಿ ಎಂ. ಎ ಪದವೀಧರರು. ಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಎಂ. ಫಿಲ್ ಪದವಿ ಪೂರೈಸಿದ್ದಾರೆ. ದೂರದರ್ಶನದ ಚಂದನವಾಹಿನಿಯಲ್ಲಿ ನಿರೂಪಕಿಯಾಗಿ ಹಾಗೂ ಡಾಕ್ಯುಮೆಂಟರಿ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಎಂ.ಎಸ್ ರಾಮಯ್ಯ ಕಾನೂನು ಮತ್ತು ಮ್ಯಾನೇಜ್ ಮೆಂಟ್ ಕಾಲೇಜು ಹಾಗೂ ಇಂಡಿಯನ್ ಅಕಾಡೆಮಿ ಕಾಲೇಜುಗಳಲ್ಲಿ ಅಧ್ಯಾಪಕರಾಗಿದ್ದಾರೆ.
ಕೃತಿಗಳು: ಹುದುಗಿಟ್ಟ ಭಾವಗಳ ಮತ್ತೆ ನುಡಿಸಿ (ಕವನ ಸಂಕಲನ)
More About Author