Poem

ಅವಳೆಂದರೆ ಈ ನೆಲದಲಿ

ಯಾ ದೇವೀ ಸರ್ವ ಭೂತೇಷು ಶಾಂತಿ ರೂಪೇಣ ಸಂಸ್ಥಿತಾ..
ಮಾತೆ ಅನ್ನುತ್ತಾರೆ ಅವರು
ಭಗ ಭಗ ಭಗ
ಭಗಿನಿ ಅನ್ನುತ್ತಾರೆ ಅವರು
ಭೇಟಿ ಅನ್ನುತ್ತಾರೆ
ಭಾಗ್ಯಲಕ್ಷ್ಮಿ ಅನ್ನುತ್ತಾರೆ ಅವರು
ಸೌಜನ್ಯ ಸಜ್ಜನಿಕೆಯ ಪಾಠ ಹೇಳುತ್ತಾರೆ
ಕ್ಷಮಯಾಧರಿತ್ರಿ ಅನ್ನುತ್ತಾರೆ ಅವರು
ಮತ್ತದಕೇ..
ಸೆರಗು ಸೆಳೆಯುತ್ತಾರೆ ಅವರು
ಅವಳುಡುಗೆ ಕಳಚುತ್ತಾರೆ ಅವರು
ಅಮುಕಿ ಹಿಡಿದು ಮೆರವಣಿಗೆ ಹೊರಡುತ್ತಾರೆ
ಕೆಡವಿ ತಡವಿ ಹಾರ್ಯಾಡಿ ಮೇಲೆರಗುತ್ತಾರೆ
ಮಾಂಸ ಮಜ್ಜೆ ಕಚ್ಚಿ ರಕುತ ನೆಕ್ಕುತ್ತಾರೆ
ಮುಚ್ಚೇ ಹೆಮ್ಮಾರಿ ಎಂದೇ ಮೂತಿಗಿಕ್ಕುತ್ತಾರೆ
ತಾವು ಈ ನೆಲಕೆ ಬಂದ ರಂದ್ರಕೆ ಮಣ್ಣು ಗಿಡಿಯುತ್ತಾರೆ ಅವರು
ಮೈ ಕೊಡವಿ ನಡೆಯುತ್ತಾರೆ
ಗುಡಿಯ ಕಟ್ಟುತ್ತಾರೆ ಅವರು
ಸಿಂಧೂರ ಹಚ್ಚುತ್ತಾರೆ ಅವರು
ದೇವೀ..ದೇವೀ..ದೇವೀ..ಉಘೇ..ಉಘೇ..ಜೈ ಮಾತಾಜಿ.. ಅನ್ನುತ್ತಾರೆ
ಸೆರಗು ಹೊದೆಸುತಾರೆ ಅವರು
ಅವಳ ಕಾಯುತ್ತಾರೆ
ತೇರನೆಳೆಯುತಾರೆ..
ಯಾ ದೇವೀ ಸರ್ವ ಭೂತೇಷು ಶಾಂತಿ ರೂಪೇಣ ಸಂಸ್ಥಿತಾ..

ಅನುಪಮಾ ಪ್ರಸಾದ್

ಅನುಪಮಾ ಪ್ರಸಾದ್

ಅನುಪಮಾ ಪ್ರಸಾದ್ ಅವರು ಅಕ್ಟೋಬರ್ 7-1971 ರಲ್ಲಿ ಉತ್ತರಕನ್ನಡ ಜಿಲ್ಲೆಯ ಸಿರ್ಸಿ ತಾಲೂಕಿನಲ್ಲಿ ಜನಿಸಿದರು. ತಂದೆ ರಾಮಚಂದ್ರ ಹೆಗಡೆ, ತಾಯಿ ಶ್ರೀಲಕ್ಷ್ಮೀ ಹೆಗಡೆ. ಕಾಸರಗೋಡು ತಾಲೂಕಿನ ಬದಿಯಡ್ಕ ಸಮೀಪದ ನೀರ್ಚಾಲಿನ ಡಾ. ರಾಮಕೃಷ್ಣ ಪ್ರಸಾದ್ ಜೊತೆ ಇವರ ವಿವಾಹವಾಯಿತು. ತಮ್ಮ ವಿದ್ಯಾಭ್ಯಾಸವನ್ನುಉಜಿರೆಯಲ್ಲಿ ಪಡೆದುಕೊಂಡರು. ಕನ್ನಡದಲ್ಲಿ ಎಮ್.ಎ. ಪದವಿಯನ್ನು ಪಡೆದಿರುವ ಅನುಪಮಾ ಪ್ರಸಾದ್ ಅವರು ಕನ್ನಡದ ಗಮನಾರ್ಹ ಬರಹಗಾರ್ತಿ. ಇವರು ಕಥಾಸಂಕಲನ, ನಾಟಕ ಹಾಗೂ ಜೀವನ ಕಥಾನಕಗಳನ್ನು ಬರೆದಿದ್ದಾರೆ.

ಅವರ ಕಥಾಸಂಕಲನಗಳು ಚೇತನ, ಕರವೀರದ ಗಿಡ, ದೂರತೀರ, ಜೋಗತಿ ಜೋಳಿಗೆ. ಅರ್ಧ ಕಥಾನಕ-ಕಾಸರಗೋಡಿನ ಖ್ಯಾತ ಕಥೆಗಾರ ಎಮ್. ವ್ಯಾಸರ ಕುರಿತು ಅವರ ಮಗ ತೇಜಸ್ವಿ ವ್ಯಾಸರ ನುಡಿಗಳ ಕಥನ ನಿರೂಪಣೆ, ಜೊತೆಗೆ ಕೆನ್ನೀರು ಎಂಬ ಹೆಸರಿನ ರೇಡಿಯೋ ನಾಟಕ ಮತ್ತು ಮನಸ್ಸು ಮಾಯೆಯ ಹಿಂದೆ ಎಂಬ ನಾಟಕಗಳನ್ನು ರಚಿಸಿದ್ದಾರೆ. ಇವರ ‘ಕರವೀರದ ಗಿಡ’ ಕಥಾಸಂಕಲನದ ಹಸ್ತಪ್ರತಿಗೆ 2009ನೇ ಸಾಲಿನ (ರಂಗಕರ್ಮಿ ಸದಾನಂದ ಸುವರ್ಣ) ಮುಂಬೆಳಕು ಸಾಹಿತ್ಯ ಪ್ರಶಸ್ತಿ, 2011 ರಲ್ಲಿ ಬೇಂದ್ರೆ ಪುಸ್ತಕ ಬಹುಮಾನ, ಹಾಗೂ ಇದೇ ಕೃತಿಗೆ ಅತ್ತಿಮಬ್ಬೆ ಪ್ರಶಸ್ತಿ ಲಭಿಸಿದೆ. ದೂರತೀರ ಕಥಾಸಂಕಲನಕ್ಕೆ ಕರ್ನಾಟಕ ಲೇಖಕಿಯರ ಸಂಘ ಬೆಂಗಳೂರು ತ್ರಿವೇಣಿ ಕಥಾ ಪ್ರಶಸ್ತಿ ನೀಡಿ ಗೌರವಿಸಿದೆ, ಜೊತೆಗೆ  ಇದೇ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ,"ವಸುದೇವ ಭೂಪಾಲಂ" ದತ್ತಿ ಕಥಾ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ದೊರೆತಿವೆ. ಅನುಪಮಾ ಅವರ ಬರಹಗಳು ದಮನಿಸಲ್ಪಟ್ಟ ಮನಸುಗಳ ಆಕ್ರಂದನಕ್ಕೆ, ಶೋಷಿತರ ಒಳ ಬಂಡಾಯಕ್ಕೆ ದನಿಯಾಗಿವೆ.

More About Author