Poem

ಆಸ್ಪತ್ರೆಯ ಬೆಡ್

ಎಷ್ಟೋ ಜೀವಗಳು ನನ್ನ ಮೇಲೆ ಒರಗಿ ನಿರಾಳವಾಗಿ ಉಸಿರು ಬಿಟ್ಟಿವೆ;
ಅಷ್ಟೇ ಪ್ರಮಾಣದಲ್ಲಿ ಝರ್ಜರಿತವಾಗಿದ್ದ ದೇಹಗಳು ಉಸಿರು ಪಡೆದು ನನ್ನೆಡೆಗೆ ಕಿಂಚಿತ್ತು ಒಲವ ತೋರದೆ ಸರಿದು ಹೋಗಿವೆ

ಮಧು ಚಂದ್ರದ ನವ ಜೋಡಿಗಳ ಮಿಲನ ಮಹೋತ್ಸವದಲ್ಲಿ ಅವರ ತುಂಟಾಟಗಳಿಗೆ ನಾನು ಸಾಕ್ಷಿಯಾಗಿದ್ದರೆ ಎಷ್ಟು ಚೆಂದವಿರುತ್ತಿತ್ತು;
ಆದರೆ ಅನುಗಾಲವು ಸೂತಕದ ಛಾಯೆ ಆವರಿಸಿರುವ ಈ ಕೋಣೆಯಲ್ಲಿ ಕಾಷ್ಠ ಮೌನ ಮತ್ತು ಬಿಕ್ಕುವ ಸದ್ದು ಕೇಳುತ್ತಾ ಸವೆದು ಹೋಗಿದ್ದೇನೆ

ಅದೆಷ್ಟು ಮಲ,ಮೂತ್ರಗಳ
ವಿಸರ್ಜನೆ ನನ್ನ ಮೇಲೆ ಅನಾಯಾಸವಾಗಿ;
ಲೆಕ್ಕವಿಲ್ಲದಷ್ಟು ರಕ್ತದೋಕುಳಿ ಹರಿದಿದೆ ನಿರಂತರವಾಗಿ
ಕೀರಲು ದನಿಯೊಂದಿಗೆ ನನ್ನ ಅಳಲ ತೋಡಿಕೊಂಡರು ಕೇಳಲಿಲ್ಲ ಯಾರಿಗೂ;
ಒಬ್ಬಂಟಿಯಾಗಿ ಉಸಿರಾಡಲು ಬಿಡುತ್ತಿಲ್ಲ ಇವರು ಇಂದಿಗೂ

ನನ್ನವರೊಂದಿಗೆ ಹರಟೋಣವೆಂದರು ಅವರಿಗೂ ಇದೇ ಸ್ಥಿತಿ ಮತ್ತು ಬಿಡುವಿಲ್ಲದ ಕೆಲಸ;
ಪ್ರೀತಿಯಂತಹ ಹುದುಲಿಗೆ ಬಿದ್ದರೂ ನನ್ನಲ್ಲಿ ಭಾವನೆಗಳೇ ಸತ್ತು ಹೋಗಿವೆ

ಆಗೊಮ್ಮೆ ಈಗೊಮ್ಮೆ ಧೂಳು ಕೊಡವುವರು
ನನ್ನಾಯುಷ್ಯ ಮುಗಿದಿದ್ದರೆ ನಿರ್ದಾಯವಾಗಿ ಎಸೆವರು;
ಬದುಕಿನ ಕಡೆ ಕ್ಷಣದವರೆಗೂ ಇತರರಿಗೆ ನೆರವಾಗಿದ್ದೇನೆ ಎಂಬ ತೃಪ್ತ ಭಾವವಿದೆ
ಮರು ಜನ್ಮವಿದ್ದರೆ ಮತ್ತೆ ಇಲ್ಲಿ ಹುಟ್ಟಲೋ? ಬೇಡವೋ? ಎಂಬ ಗೊಂದಲವಿದೆ

-ದೀಕ್ಷಿತ್ ನಾಯರ್

ದೀಕ್ಷಿತ್ ನಾಯರ್

ಲೇಖಕ ದೀಕ್ಷಿತ್ ನಾಯರ್ ಅವರು ಮೂಲತಃ ಮಂಡ್ಯ ಜಿಲ್ಲೆಯವರು. ತಾಯಿ ರಾಧಾಮಣಿ ಮತ್ತು ತಂದೆ ಕೇಶವ ಮುರಳಿ. ಜನವರಿ 12 2001 ಜನನ. ಮಂಡ್ಯದ ಪಿ.ಇ.ಎಸ್ ಕಾಲೇಜಿನಲ್ಲಿ ಆಂಗ್ಲ ಸಾಹಿತ್ಯದಲ್ಲಿ ಬಿ.ಎ ಪದವಿ ಪಡೆದ ಇವರು ಇದೀಗ ಮೈಸೂರು ಮಾನಸ ಗಂಗೋತ್ರಿ ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಓದುತ್ತಿದ್ದಾರೆ. ಬಾಲ್ಯದಿಂದಲೂ ಭಾಷಣ, ಚರ್ಚೆ, ನಿರೂಪಣೆ ಮತ್ತು ಉಪನ್ಯಾಸಗಳಲ್ಲಿ ಆಸಕ್ತಿಯನ್ನು ಹೊಂದಿರುವ ದೀಕ್ಷಿತ್ ನಾಯರ್ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳ ನೂರಾರು ವೇದಿಕೆ ಕಾರ್ಯಕ್ರಮಗಳಲ್ಲಿ ಮಾತನಾಡಿ ಸನ್ಮಾನಕ್ಕೆ ಪಾತ್ರರಾಗಿದ್ದಾರೆ.

ಸಾಹಿತ್ಯದಲ್ಲೂ ಅಪಾರ ಆಸಕ್ತಿಯನ್ನು ಹೊಂದಿರುವ ಇವರು ನಿರಂತರ ಅಧ್ಯಯನಶೀಲರು. ಕವಿತೆ,ಕಥೆ, ಕಾದಂಬರಿ,ಲೇಖನ ಪ್ರಬಂಧಗಳನ್ನು ಬರೆದಿದ್ದಾರೆ. ನಾಡಿನ ಪ್ರಸಿದ್ಧ ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ. ಇತ್ತೀಚಿಗಷ್ಟೇ ತಮ್ಮ ಚೊಚ್ಚಲ ಕೃತಿಯಾದ 'ಯಶೋ ದೀಕ್ಷೆ' (ಲೇಖನ ಸಂಕಲನ) ಹೊರ ತಂದಿದ್ದಾರೆ. ಇನ್ನೆರಡು ಕೃತಿಗಳು ಮುದ್ರಣದ ಹೊಸ್ತಿಲಿನಲ್ಲಿವೆ. ಅತೀ ಚಿಕ್ಕ ವಯಸ್ಸಿನ ಇವರ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿನ ಸಾಧನೆಗೆ ಹತ್ತು ಹಲವಾರು ಪ್ರಶಸ್ತಿಗಳು ಲಭಿಸಿವೆ. ಯುವ ವಾಗ್ಮಿಗಳ ಬಳಗ ಎಂಬ ತಮ್ಮದೇ ಸಂಸ್ಥೆಯ ಮೂಲಕ ಸಾಹಿತ್ಯ ಮತ್ತು ಸಾಂಸ್ಕೃತಿಕ ಸ್ಪರ್ಧೆ ಹಾಗೂ ಕಾರ್ಯಕ್ರಮಗಳನ್ನು ಕಳೆದ ಮೂರು ವರ್ಷಗಳಿಂದ ಆಯೋಜಿಸುತ್ತಾ ಬರುತ್ತಿದ್ದಾರೆ.

More About Author