ಕತೆಗಾರ್ತಿ ಜಿ.ಎಸ್. ಸುಶೀಲಾದೇವಿ ಆರ್.ರಾವ್ ಅವರು 1952 ರ ಜುಲೈ 5 ರಂದು ಚಿತ್ರದುರ್ಗದ ಹೊಳಲ್ಕೆರೆ ತಾಲೂಕಿನ ಗುಂಜಿಗನೂರುನಲ್ಲಿ ಜನಿಸಿದರು. ಸಾಹಿತ್ಯ ಕ್ಷೇತ್ರದಲ್ಲಿ ಕ್ರಿಯಾಶೀಲರಾಗಿರುವ ಜಿ.ಎಸ್. ಸುಶೀಲಾದೇವಿ ಆರ್.ರಾವ್ ಅವರ ‘ಆಸರೆ’ ಕತೆ ನಿಮ್ಮ ಓದಿಗಾಗಿ...
ತರಕಾರಿ ಬ್ಯಾಗ್ ಹೊತ್ತುಕೊಂಡು ಬರುತ್ತಿದ್ದ ಆಕೆಗೆ ರೂಮಿನಲ್ಲಿ ಬೀಗಿತ್ತಿ ಯಾರೊಡನೆಯೋ ತನ್ನ ಬಗ್ಗೆ ಮಾತಾಡುವುದು ಕೇಳಿಸಿ ರೂಮಿನ ಕಿಟಿಕಿಯ ಬಳಿ ಸರಿದು ನಿಂತಳು.
"ಅಲ್ಲಾ ನಿಮ್ಮ ಅಳಿಯನ ತಾಯಿ ನಿಮ್ಮನೇಲೇ ಇದಾರಾ? ಅಲ್ರೀ ಇದು ನಿಮ್ಮನೆ. ಮಗಳು,ಅಳಿಯ ನಿಮ್ಮಲ್ಲಿರೋದು ಸರಿ.ಈಕೆ ಇಲ್ಯಾಕೆ ಅಂತ?"
"ಅದು ಆಕೆಗೆ ತಿಳೀಬೇಕು ನೋಡ್ರಿ. ಪ್ರಿಯಾಗೂ ಇಷ್ಟ ಇಲ್ರೀ. ಶುದ್ಧ ಹಳ್ಳೀಜನ.ಹಳ್ಳೀಭಾಷೇಲೇ ಮಾತಾಡೋದು.ಅತ್ತೆ ಅಂತ ಹೇಳ್ಕೊಳ್ಳೋಕೆ ನಾಚಿಕೆ ಅಂತಾಳೆ. ಆದ್ರೆ ನಾವೇ ಸುಮ್ನಿದೀವಿ. ಸರಿಯಾದ ಅಡಿಗೆಯೋರು ಸಿಗ್ತಾ ಇಲ್ಲ. ಈಕೆ ತನ್ನದೇ ಮನೆ ಅಂತ ತಿಳ್ಕೊಂಡು ಎಲ್ಲಾ ಕೆಲ್ಸ ಮಾಡ್ತಿದಾಳೆ. ನನ್ಕೈಲಾಗಲ್ಲ.ಇರ್ಲಿಬಿಡಿ. ಅಡಿಗೆಯಾಕೆ ಅಂತ ತಿಳ್ಕೊಂಡ್ರಾಯ್ತು."
ಆಕೆಯ ಮೈ ಉರಿಯಿತು. ಹೆಬ್ಬಾಗಿಲಿಂದ ಒಳಗೆ ಬಂದು ಅಡಿಗೆಮನೆಗೆ ಧಾವಿಸಿದಳು.ಬೀಗಿತ್ತಿ ಹೇಳಿದಂತೆ ಇಬ್ಬರಿಗೂ ಕಾಫಿ ಮಾಡಿಕೊಟ್ಟಳು.
ಮನೆ ಕಟ್ಟುವ ಕಂಟ್ರಾಕ್ಟರ್ ಬಳಿ ಕೆಲಸ ಮಾಡುತ್ತಿದ್ದ ಗಂಡ ಹಠಾತ್ತನೆ ಸತ್ತಾಗ ಮಗಳಿಗೆ ಮದುವೆಯ ವಯಸ್ಸು. ಮಗ ಸಾಫ್ಟ್‌ವೇರ್ ಇಂಜಿನಿಯರಿಂಗ್ ಎರಡನೇ ವರ್ಷದಲ್ಲಿ ಓದುತ್ತಿದ್ದ. ಕಂಟ್ರಾಕ್ಟರ್ ಸ್ವಲ್ಪ ಹಣ ಕೊಟ್ಟಿದ್ದರು. ನಾವು ಬೀದಿಗೆ ಬಿದ್ದಿದ್ದೆವು. ಸ್ವಂತ ಮನೆಯೂ ಇಲ್ಲ. ಮಗಳನ್ನು ಪರಿಚಯದ ರೈತರಿಗೇ ಕೊಟ್ಟು ಲಗ್ನ ಮಾಡಿದೆ. ಗಂಡ ಉಳಿಸಿದ್ದ ಸ್ವಲ್ಪ ಹಣ, ಅಳಿಯನ ಸಹಾಯ, ತಾನು ಮನೆ ಮನೆ ತಿರುಗಿ ಬಾಣಂತನದ ಕೆಲಸ, ಮನೆಗೆಲಸ ಮಾಡಿ ದುಡಿದ ಹಣ ಎಲ್ಲಾ ಸೇರಿ ಮಗ ದಡ ಹತ್ತಿದ. ಬಾಳ ಜಾಣನಂತೆ. ಕೆಲಸಕ್ಕೆ ಸೇರಿದ ಕಂಪನಿಯ ಮಾಲೀಕರ ಒಬ್ಬಳೇ ಮಗಳನ್ನು ಲಗ್ನವಾದ. ಅವಳೂ ಇವನ ಹಂಗೆ ಇಂಜಿನಿಯರ್ ಅಂತೆ..ಮಾವನ ಮನೆಅಳಿಯನಾದ. ಅವನೇ ನನ್ನನ್ನು ಇಲ್ಲಿಗೆ ಕರೆತಂದ. ನನ್ನದೇ ಮನೆ ಅಂತ ಬೆವರು ಹರಿಸಿ ದುಡಿದೆ. ಆದರೆ ಬೆಲೆಯೇ ಇಲ್ಲ.
ಮಗಳು "ಅವ್ವಾ, ನಾವು ಬಡವರಾದ್ರೆ ಏನು ಹೊಟ್ಟೆ ಬಟ್ಟೆಗೆ ಐತೆ. ನೀನು ನಂಗೆ ಭಾರ ಅಲ್ಲ.ಬಾರವ್ವಾ " ಅಂತ ಫೋನಿನಲ್ಲಿ ಹೇಳಿದಾಗ ಆಕೆಗೆ ನಿರಾಳ. ತಟ್ಟನೆ ಬಟ್ಟೆಗಳನ್ನೆಲ್ಲಾ ಪ್ಯಾಕ್ ಮಾಡಿಟ್ಟಳು.
" ನಿಮ್ಮಕ್ಕಗೆ ಹುಷಾರಿಲ್ಲಂತೆ ಮಗಾ, ಬಾ ಅಂತ ಕರೆದಾಳೆ.ನಾಳೆ ಹಳ್ಳಿಗೆ ಹೊಂಟೀನಪಾ. ಬೇಗ ಬರ್ತೀನಿ" ಅಂತ ಮಗನಿಗೆ ಹೇಳಲು ಅವನ ಬರವಿಗಾಗಿ ಕಾದು ಕುಂತಳು.
- ಜಿ.ಎಸ್.ಸುಶೀಲಾದೇವಿ ಆರ್. ರಾವ್
ಜಿ.ಎಸ್. ಸುಶೀಲಾದೇವಿ ಆರ್.ರಾವ್
ಕತೆಗಾರ್ತಿ ಜಿ.ಎಸ್. ಸುಶೀಲಾದೇವಿ ಆರ್.ರಾವ್ ಅವರು 1952 ರ ಜುಲೈ 5 ರಂದು ಚಿತ್ರದುರ್ಗದ ಹೊಳಲ್ಕೆರೆ ತಾಲೂಕಿನ ಗುಂಜಿಗನೂರುನಲ್ಲಿ ಜನಿಸಿದರು. ತಂದೆ ಜಿ. ಶ್ರೀನಿವಾಸಯ್ಯ, ತಾಯಿ ಜಾನಕಮ್ಮ.’ಸ್ವಾಭಿಮಾನಿ, ಮನ ಮಂದಿರ, ಬೆಂಕಿಯ ಒಡಲಲ್ಲಿ, ಸಂಬಂಧದ ಸಂಕೋಲೆಗಳು, ಸೇಡು, ನಿನ್ನ ದಾರಿಯಲ್ಲೀಗ ನನ್ನ ಹೆಜ್ಜೆ’ ಅವರ ಕಾದಂಬರಿಗಳು. ’ಷೋಕೇಸಿನ ಗೊಂಬೆ, ಬದುಕ ಮನ್ನಿಸು ಪ್ರಭುವೆ, ಅಪರಿಮಿತ’ ಕಥಾಸಂಕಲನ ರಚಿಸಿದ್ದಾರೆ. ’ಕಂಪ್ಲಿ ರಾಜ್ಯೋತ್ಸವ ಪ್ರಶಸ್ತಿ, ಮಾಸ್ತಿ ಸ್ಮಾರಕ ಪ್ರಶಸ್ತಿ, ದಾವಣಗೆರೆ ಜಿಲ್ಲಾ 'ವನಿತಾ ಸಾಹಿತ್ಯಶ್ರೀ' ಪ್ರಶಸ್ತಿ’ ಲಭಿಸಿವೆ.
More About Author