ಉರಿವ ಸೂರ್ಯ
ಶಕ್ತಿ ಮೂಲವೆಂದು ಎಲ್ಲ ಹೇಳುತ್ತಾರೆ
ಸೂರ್ಯನಿಂದಲೇ ಬೆಳಕು ಬಿಸಿಲು ಸುಗ್ಗಿ
ಸೂರ್ಯನಿಂದಲೇ ಎಲ್ಲ ಎಲ್ಲ
ಭುವಿಯ ತಾವರೆಯನರಳಿಸುವ
ನೀಲಲೋಹಿತ ಜಾಲ
ಎಲ್ಲ ಸೂರ್ಯನದೇ ದೇಣಿಗೆ
ಇದೆಲ್ಲ ಸತ್ಯವೇ ಸರಿ
ಆದರೆ
ಸೂರ್ಯತೇಜದಸಾಧ್ಯ ಪ್ರೀತಿ
ತಾಳಲಾರದೆ ಓಡಿಹೋದಳು ಮಡದಿ
ನೆರಳ ನಿಲಿಸಿ
ಗೊತ್ತೆ ನಿಮಗೆ
ಈ ಅನಂತ ವಿಶ್ವದಲ್ಲಿ
ಸೂರ್ಯನೊಬ್ಬನೇ ಏನು?
ಅನಂತ ಸೂರ್ಯರಿದ್ದಾರೆ
ಆದರೆ ಭೂಮಿ
ಇರುವುದೊಂದೇ
ಸೂರ್ಯನುಳುಗುವ ವಿಷದ
ತನ್ನ ಗಾಳಿಸೆರಗಿನಲಿ ಸೋಸಿ
ಜೀವಸಂಕಲುಕೆ ಹಾಲೆರೆವ
ಬಣ್ಣವಿಲ್ಲದ ಸೂರ್ಯನ ಬೆಳಕಿಗೆ
ಕಾಮನಬಿಲ್ಲಿ ನೇಳು ಬಣ್ಣ ತರುವ
ಗಂಧವತೀ ಜೀವಪಾಲಿನಿ
ಗಾಳಿನೀರಿನಮೃತ ವರ್ಷಿಣಿ
ಇಳಾ ಒಬ್ಬಳೇ
ಒಬ್ಬಳೇ
ನೀನೊಬ್ಬಳೇ
ಈ ಅನಂತ ವಿಶ್ವದಲ್ಲಿ
ಸೂರ್ಯನೊಬ್ಬನೇ ಏನು?
ಅನಂತ ಸೂರ್ಯರಿದ್ದಾರೆ
ಆದರೆ ಭೂಮಿ
ಇರುವುದೊಂದೇ
ಸೂರ್ಯನುಗುಳುವ ವಿಷವ
ತನ್ನ ಗಾಳಿಸೆರಗಿನಲಿ ಸೋಸಿ
ಜೀವಸಂಕುಲಕೆ ಹಾಲೆರೆವ
ಬಣ್ಣವಿಲ್ಲದ ಸೂರ್ಯನ ಬೆಳಕಿಗೆ
ಕಾಮನಬಿಲ್ಲಿನೇಳು ಬಣ್ಣ ತರುವ
ಗಂಧವತೀ ಜೀವಪಾಲಿನಿ
ಗಾಳಿನೀರಿನಮೃತ ವರ್ಷಿಣಿ
- ಸ. ಉಷಾ
ಸ. ಉಷಾ
ಮೈಸೂರಿನಲ್ಲಿ 1954 ಏಪ್ರಿಲ್ 05ರಂದು ಜನಿಸಿದ ಇವರು ಎಂ.ಎ ಪದವಿಧರರಾಗಿದ್ದು ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಇವರು ಪ್ರಾಧ್ಯಾಪಕವೃತ್ತಿಯಿಂದ ನಿವೃತ್ತರಾಗಿದ್ದು, ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಸದಸ್ಯತ್ವರಾಗಿದ್ದರು. ತೊಗಲುಗೊಂಬೆಯ ಆತ್ಮಕತೆ, ಈ ನೆಲದ ಹಾಡು, ಹವಳ ದಾರಿ ಹೊತ್ತು ಇವರ ಕವನ ಸಂಕಲನವಾಗಿದೆ. ‘ಈ ನೆಲದ ಹಾಡು’ ಕೃತಿಗೆ ‘ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ’, ತೊಗಲುಗೊಂಬೆಯ ಆತ್ಮಕತೆಗೆ ವರ್ಧಮಾನ ಉದಯೋನ್ಮುಖ ಲೇಖಕರ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಮುಂತಾದ ಪ್ರಶಸ್ತಿಗಳು ಲಭಿಸಿವೆ.
More About Author