ಗರ್ಭದಿ ಚಿಗುರಿದ
ಕರುಳಬಳ್ಳಿಯ ಕನಸೊಂದು
ಮಡಿಲೇರಿದಾಗ ತಾಯ್ತನವು
ಆಗುವುದು ನನಸು!
ಅಮ್ಮ ಅಂದರೆ
ಕೇವಲ ರಕ್ತಸಂಬಂಧವಲ್ಲ
ಅದನ್ನೂ ಮೀರಿದ
ಬಂಧ ಬಂಧು ಎಲ್ಲ!
ಮಗು ಅತ್ತಾಗ
ತಾಳ್ಮೆಯಿಂದ ಸಮಾಧಾನಿಸುವಳು
ಮಗು ನಕ್ಕಾಗ
ಉತ್ಸಾಹದಿಂದ ನಗುವಳು!
ದುಗುಡದ್ದಲ್ಲಿದ್ದಾಗ ಕೈ ಚಾಚಿ
ಬಿಗಿದಪ್ಪುವ ಅವಳ ತೋಳ್ಬಲ
ಅದುವೇ ಜಗವನ್ನೆದುರಿಸಲು
ನೀಡುತ್ತೆ ಮನೋಬಲ!
ಹಲವೊಮ್ಮೆ ಅರ್ಥವಾಗುವ
ಕೆಲವೊಮ್ಮೆ ಮೌನಕ್ಕೆ ಶರಣಾಗುವ
ಅರ್ಥೈಸಿಕೊಂಡಷ್ಟೂ ಅರ್ಥವಾಗದು
ಅವಳ ಆ ಮನೋಭಾವ!
ಕಷ್ಟಗಳಿಗೆಲ್ಲಾ ತಡೆಗೋಡೆಯಂತೆ
ಇಷ್ಟಗಳಿಗೆಲ್ಲಾ ನೀರೆರೆದು ಪೋಷಿಸುವಂತೆ
ಮಕ್ಕಳೇ ಅವಳ ಕಂಗಳಾಗಿರುವಾಗ
ಅವರಿಗೆಲ್ಲಿದೆ ಸೋಲುವ ಸಂಭವ!
ಜಗವು ನಿಂತಿಹುದು
ಪ್ರೀತಿಯ ಆಸರೆಯಲ್ಲಿ
ಸರಿಸಾಟಿಯುಂಟೇ ಅಮ್ಮನ
ನಿಷ್ಕಲ್ಮಶ ಪ್ರೀತಿಗೆ?
- ಸುಪ್ರೀತಾ ವೆಂಕಟ್
ಸುಪ್ರೀತಾ ವೆಂಕಟ್
ಕವಿ ಸುಪ್ರೀತಾ ವೆಂಕಟ್ ಮೂಲತಃ ಮಂಗಳೂರಿನವರು. ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿದ್ದಾರೆ. ಕಳೆದ 8 ವರ್ಷಗಳಿಂದ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕನ್ನಡ ಪುಸ್ತಕಗಳನ್ನು ಓದುವುದು - ಕಥೆ, ಕಾದಂಬರಿಗಳು - ಸಾಮಾಜಿಕ, ವೈಜ್ಞಾನಿಕ ವಿಚಾರಗಳ ಕುರಿತು ಬರೆಯುವುದು, ಅಡಿಗೆಯಲ್ಲಿ ಹೊಸ ರುಚಿಗಳನ್ನು ಪ್ರಯತ್ನಿಸುವುದು, ಟೇಬಲ್ ಟೆನ್ನಿಸ್, ಬ್ಯಾಡ್ಮಿಂಟನ್ ಆಡುವುದು ಅವರ ಹವ್ಯಾಸ. ಕನ್ನಡ ಪತ್ರಿಕೆಗಳ ಪುರವಣಿಗಳಿಗೆ ಲೇಖನ, ಕವಿತೆ, ಬ್ಲಾಗ್'ಗಳನ್ನು ಬರೆಯುತ್ತಾರೆ.
More About Author